ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ ?!

ಸಾಂಕೇತಿಕ ಚಿತ್ರ

ಇಂದು ನಾವು ಯಾವುದೆ ಚಾನಲ್‍ಗಳನ್ನು ನೋಡಿದರೂ, ಪತ್ರಿಕೆಗಳನ್ನು ಓದಿದರೂ ನಿಮ್ಮ ಕಣ್ಣಿಗೆ ರಾಚುವಂತೆ ಜೋತಿಷ್ಯ- ಭವಿಷ್ಯ ಹೇಳುವವರ ಹಿಂಡು ಕಾಣುತ್ತದೆ. ದೃಶ್ಯ ಮಾಧ್ಯಮಗಳಲ್ಲಂತೂ ಮೈತುಂಬಾ ಜರತಾರಿ ಬಟ್ಟೆಗಳನ್ನುಟ್ಟುಕೊಂಡ ,ಹಣೆಗೆ ಢಾಳವಾಗಿ ವಿಭೂತಿ ಬಡಿದುಕೊಂಡು ಕೈಗಳ ತುಂಬೆಲ್ಲ ರುದ್ರಾಕ್ಷಿಗಳನ್ನು ಕಟ್ಟಿ ಕೊಂಡಿರುವ ಜೋತಿಷ್ಯಿಗಳು ಆವರಿಸಿಕೊಂಡಿರುತ್ತಾರೆ. ಕೆಲವು ಸಲ ನಮ್ಮ ಮನೆಗಳ ಟಿ.ವಿ.ಯ ಪರದೆ ಆಚೆಗೂ ಅವರ ಮೈ ಕೈ ಇವೆಯೇನೋ ಎಂಬಂತೆ ಭಾತುಕೊಂಡಿರುವ ದೃಶ್ಯವಳಿ ನೋಡಿದಾಗ ನಿಜಕ್ಕೂ ನನಗೆ ಅತ್ಯಂತ ನೋವಾಗುತ್ತದೆ. ಹಸಿ ಸುಳ್ಳನ್ನು ಸತ್ಯದ ತಲೆಯ ಮೇಲೆ ಹೊಡೆÀದಷ್ಟು ಸ್ಪಷ್ಟವಾಗಿ, ವಿಚಿತ್ರ ಮಾನರಿಸಂಗಳ ಮೂಲಕ ಜನರನ್ನು ಮೋಸಗೊಳಿಸುತ್ತಿರುವ ತಂತ್ರಗಾರಿಕೆಗೆ ಬೆರಗಾಗಿದ್ದೇನೆ.

‘ಎಲ್ಲಾ ಮೂಢನಂಬಿಕೆಗಳನ್ನು ಧ್ವಂಸಮಾಡಿ. ಗುರುವಾಗಲಿ, ಧರ್ಮ ಗ್ರಂಥಗಳಾಗಲಿ, ದೇವರಾಗಲಿ ಇಲ್ಲ. ಈ ಎಲ್ಲವೂ ನೆಲೆಯಿಲ್ಲದವು. ಅವತಾರ ಪುರುಷರನ್ನು ಪ್ರವಾದಿ ಗಳನ್ನು ಧ್ವಂಸ ಮಾಡಿ. ನಾನೇ ಪರಮ ಪುರುಷೋತ್ತಮ, ತತ್ವಜ್ಞಾನಿಗಳೆ ಎದ್ದು ನಿಲ್ಲಿ ಭಯಬೇಡ. ದೇವರನ್ನು ಕುರಿತು ಮೂಢನಂಬಿಕೆಗಳನ್ನು ಕುರಿತು ಮಾತು ಬೇಡ ! ಸತ್ಯಕ್ಕೇ ಜಯ ಇದು ನಿಜ, ನಾನು ಅನಂತ. ಎಲ್ಲಾ ಮೂಢನಂಬಿಕೆಗಳು ಹುರುಳಿಲ್ಲದ ಕಲ್ಪನೆಗಳು’

ಆದರೆ ಇವರ ತಂತ್ರಗಾರಿಕೆ , ಮೋಸಗಳು ಗೊತ್ತಿಲ್ಲದ ಜನಸಾಮಾನ್ಯರು ಮಾತ್ರ ನಿತ್ಯವೂ ಲೈವ್ ಪ್ರೋಗ್ರಾಮ್‍ಗಳಲ್ಲಿ ವಿಚಿತ್ರವಾದ ಪ್ರಶ್ನೆಗಳಿಂದ ಭವಿಷ್ಯವಾದಿಗಳಿಗೆ ಕೇಳುತ್ತಿರು
ವುದನ್ನು ನೋಡಿದಾಗಲೆಲ್ಲ ಸಂಕಟ ಪಟ್ಟಿದ್ದೇನೆ. ಬೌದ್ಧಿಕ ದಾರಿದ್ರ್ಯದಿಂದ ನರಳುತ್ತಿರುವ ನಮ್ಮ ದೇಶವನ್ನು ಸಶಕ್ತವಾಗಿ ಕಟ್ಟುವ ಶಕ್ತಿ ಇರುವ ಮಾಧ್ಯಮಗಳು ಮೌಢ್ಯವನ್ನೆ ಆಧುನಿಕ ವಿಜ್ಞಾನ ಎನ್ನುವಂತೆ ತೋರಿಸುತ್ತ ನಡೆದಿವೆಯಲ್ಲ ಎಂದು ಖೇದವಾಗುತ್ತದೆ.

ಬರವಣಿಗೆಯ ಮಾಧ್ಯಮವಾದ ಪತ್ರಿಕೆಗಳು, ದೃಶ್ಯ ಮಾಧ್ಯಮವಾದ ಚಾಲನ್‍ಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತ ಸ್ಪಷ್ಟವಾಗಿ ಈ ದೇಶಕ್ಕೆ ಮತ್ತದೆ ಸನಾತನವಾದದ ವಿಚಾರಗಳನ್ನು ಚಾಲಾಕಿತನದಿಂದ ಹೇಳುತ್ತಿರುವಂತೆ ಕಂಡುಬರುತ್ತದೆ. ಏಕೆಂದರೆ ಬೆಳಂಬೆಳಗ್ಗೆ ಚಾನಲ್‍ಗಳ ಕಿವಿ ಹಿಂಡುತ್ತಿರುವಂತೆ ದುತ್ತನೆ ಎದುರಾಗುವುದೆ ಅಸಂಖ್ಯಾತ ದೇವರುಗಳು. ಆ ದೇವರುಗಳನ್ನು ಹಾಲಿನಿಂದ ,ಮೊಸರಿನಿಂದ, ತುಪ್ಪದಿಂದ, ಜೇನುತುಪ್ಪ ಹಾಗೂ ಶ್ರೀಗಂಧ ಎಂಬ ಪಂಚಗವ್ಯಗಳ ಮೂಲಕ ಮೈ ತೊಳೆಯುವುದನ್ನೆ ದೊಡ್ಡ ಕಸರತ್ತು ಎಂಬಂತೆ ತೋರಿಸಲಾಗುತ್ತದೆ. ಇದರ ಜೊತೆ ಜೊತೆಗೆ ಅರ್ಥವೆ ಆಗದಿರುವ ಮಂತ್ರಗಳು ಮುಗ್ಧ ಜನರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ‘ತಿಳಿಯದವರು ತಿಳಿಯದವರಿಗೆ ತಿಳಿಯದಂತೆ ಹೇಳುವುದೇ ಜ್ಞಾನ’ ಎಂದು ಲಿಂ.ವೀರನಗೌಡ ನೀರಮಾನ್ವಿ ಅವರ ಮಾತು ಅಕ್ಷರಶಃ ಸತ್ಯ.

ದೇಹಕ್ಕೆ ವಿಪರೀತವಾಗುವಷ್ಟು ಬೊಜ್ಜು ಬರಿಸಿಕೊಂಡಿರುವ ಟೊಣ್ಯಾನಂತಹ ಪುರೋಹಿತ ಮಾತಾಡದ , ಕಿವಿಯ ಮೂಲಕ ಕೇಳಿಸಿಕೊಳ್ಳದ ದೇವರಿಗೆ ‘ಎದ್ದೇಳು ಮಂಜುನಾಥ ಏಳು ಬೆಳಗಾಯಿತು’, ‘ಕಾಪಾಡು ಶ್ರೀಸತ್ಯ ನಾರಾಯಣ’ ,’ ವಾರ ಬಂತಮ್ಮ ಗುರುವಾರ ಬಂತಮ್ಮ’, ‘ಸ್ವಾಮಿಯೆ ಶರಣಂ ಅಯ್ಯಪ್ಪ…’, ‘ಭಾಗ್ಯದ ಲಕ್ಷ್ಮೀಬಾರಮ್ಮ ನಮ್ಮಮ್ಮ ನೀ ಸೌಭ್ಯಾಗ್ಯದ ಲಕ್ಷ್ಮಿಬಾರಮ್ಮ…’ ಮುಂತಾಗಿ ಹಾಡಿ ಎಚ್ಚರಿಸಿದರೂ ದೇವರುಗಳು ಎದ್ದು ಕೂಡುವುದಿಲ್ಲ. ಅದು ನಮ್ಮೆಡೆಗೆ ಬರುವುದಂತೂ ದೂರದ ಮಾತು. ಹೂವಿನ ರಾಸಿಗಳಲ್ಲಿ ಮುಳುಗಿಸಿ, ಗಂಧದ ಪರಿಮಳ ಅವುಗಳ ಮೈಮೆಲೆಲ್ಲ ಚೆಲ್ಲಿದರು ಅವು ಮಿಸುಗಾಡುವುದಿಲ್ಲ. ‘ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು’ ಎಂಬ ಕವಿ ಕುವೆಂಪು ಅವರ ಮಾತು ಅಕ್ಷರಶಃ ನಾವೆಲ್ಲ ಮರೆತುಹೋಗಿದ್ಧೇವೇನೋ ಎಂದು ಭಾಸವಾಗುತ್ತದೆ.

‘ಕಣ್ಣೊಳಗೆ ಕಣ್ಣಿದ್ದು ಕಾಣಲರಿಯರಯ್ಯ
ಕಿವಿಯೊಳಗೆ ಕಿವಿಯಿದ್ದು ಕೇಳಲರಿಯರಯ್ಯ,
ಘ್ರಾಣದೊಳಗೆ ಘ್ರಾಣವಿದ್ದು ಘ್ರಾಣಿಸಲರಿಯರಯ್ಯ’

ಎಂಬ ಅಲ್ಲಮಪ್ರಭುಗಳ ಮಾತು ಅರ್ಥವಾಗುವುದು ಇನ್ನೂ ಯಾವಾಗ ?

‘ಭವ್ಯ ಬ್ರಮ್ಮಾಂq’À ಎಂಬ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಪುರೋಹಿತನಂತೂ ತಮ್ಮ ದಿವ್ಯ ಅಜ್ಞಾನವನ್ನು ಹೊರಗೆಡಹುತ್ತಿರುತ್ತಾನೆ. ಆದರೆ ಅದನ್ನು ಪರಾಂಭರಿಸಿ ನೋಡುವಾಗ- ವಿವೇಚಿಸುವ ಮನಸ್ಸುಗಳ ಕೊರತೆಯಿಂದ ಅವರು ಹೇಳಿದ್ದೆ ದೊಡ್ಡ ಸತ್ಯ ಎಂದು ಜನ ತಿಳಿಯುತ್ತಾರೆ. ಮತ್ತೊಂದು ಸಂಗತಿಯನ್ನು ಇಲ್ಲಿ ಹೇಳುವ ಅವಶ್ಯಕತೆ ಇದೆ. ಪತ್ರಿಕೆ ಹಾಗೂ ದೃಶ್ಯ ಮಾಧ್ಯಗಳಲ್ಲಿ ಬರುವ ಸಂಗತಿಗಳೆಲ್ಲ ಪರಮಗಂತವ್ಯ ಎಂದು ನಂಬಿರುವ ಸಾಕಷ್ಟು ಜನರು ನಮ್ಮ ದೇಶದಲ್ಲಿದ್ದಾರೆ. ಇದನ್ನು ಚೆನ್ನಾಗಿಯೆ ಮನಗಂಡಿರುವ ಪುರೋಹಿತಶಾಹಿ ಮಾತ್ರ ಹಿಂದೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಎಂಬ ಕತೆಗಳ ಮೂಲಕ ಮೌಢ್ಯ ಹಂಚಿ ದೇಶವನ್ನು ಬೌದ್ಧಿಕ ಅಥಃಪತನಕ್ಕೆ ತಳ್ಳಿಬಿಟ್ಟಿದ್ದರು. ‘ಯದಾ ಯದಾಯಿ ಧರ್ಮಸ್ಯ ಗ್ಲಾನಿರ್‍ಭವತಿ ಭಾರತ’ ಎಂಬಂತಹ ನುಣ್ಣನೆಯ ಮಾತುಗಳನ್ನು ಹೇಳಿ ನಮ್ಮನ್ನೆಲ್ಲ ನಂಬಿಸಿಬಿಟ್ಟಿದ್ದಾರೆ. ಭಾರತ ಹಾಳಾಗುವವರೆಗೆ ಶ್ರೀಕೃಷ್ಣ ಯಾಕೆ ಕಾಯಬೇಕು. ಅದು ಅವನತಿಯ ದಾರಿ ಹಿಡಿಯುತ್ತಿದೆ ಎಂದು ಗೊತ್ತಾಗುತ್ತಿರುವಂತೆಯೆ ಪ್ರತ್ಯಕ್ಷರಾಗಿ ಅದನ್ನು ಸರಿಪಡಿಸಬೇಕು ಎಂಬ ಚಿಕ್ಕಜ್ಞಾನವೂ ಆತನಿಗೆ ಇಲ್ಲವೆ ? ಎಂದು ಎಂದಾದರೂ ನಾವುಗಳು ಆಲೋಚಿಸಿದ್ದೇವೆಯೆ ?

ಪ್ರಪಂಚದ ಎಲ್ಲಾ ರಾಷ್ಟ್ರಗಳು ತಮ್ಮ ವೈಜ್ಞಾನಿಕ ಕೌಶಲ್ಯವನ್ನು ಮೆರೆದು ಖಗೋಳಶಾಸ್ತ್ರಗಳ ಬೆನ್ನುಹತ್ತಿಹೋಗುತ್ತಿದ್ದರೆ ಭಾರತ ಮಾತ್ರ ಜ್ಯೋತಿಷ್ಯದ ಕೊಳಕಿನಲ್ಲಿ ಕೊಳೆಯುತ್ತಿದೆ. ರಷ್ಯಾ,ಅಮೇರಿಕಾದವರು ಕ್ಷಿಪಣಿ, ರಾಕೇಟ್‍ಗಳನ್ನು ಕಂಡು ಹಿಡಿಯಲು ಗ್ರಹತಾರೆಗಳ ಗುಣಿಸಿ ಲೆಕ್ಕಹಾಕುತ್ತಿದ್ದರೆ ಭಾರತ ಮಾತ್ರ ಜ್ಯೋತಿಷ್ಯವನ್ನು ಹಿಡಿದು ಹುಟ್ಟುವ ಮಗು ಹೆಣ್ಣೋ- ಗಂಡೋ ? ಕಂಕಣಬಲ ಕೂಡಿಬರುತ್ತದೋ ಇಲ್ಲವೊ ? ಎಂಬ ಲೆಕ್ಕಾಚಾರ ಹಾಕುತ್ತಿದೆ ಎಂಬ ಲೋಹಿಯಾ ಅವರು ಅರವತ್ತು ವರ್ಷಗಳ ಹಿಂದೆ ಹೇಳಿದ ಮಾತಿಗೆ ಈಗಿನ ಪರಿಸ್ಥಿತಿಗೂ ಏನೂ ಬದಲಾವಣೆ ಆಗಿಲ್ಲವೆನಿಸುತ್ತದೆ.


ವಿವೇಚನೆ ಹಾಗೂ ವೈಜ್ಞಾನಿಕ ಮನೋಭಾವವನ್ನು ನಾವು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ (ಕೆಲವನ್ನು ಹೊರತುಪಡಿಸಿ) ಹುಡುಕುವುದೆ ತಪ್ಪಾಗಬಹುದೇನೊ ಎಂದನಿಸುತ್ತದೆ. ಏಕೆಂದರೆ ಈ ಎರಡು ಮಾಧ್ಯಮಗಳಲ್ಲಿ ತೊಡಗಿಕೊಂಡಿರುವವರು ಮತ್ತದೆ ಬ್ರಾಹ್ಮಣಿಕೆಯ ಪಳಿಯುಳಿಕೆಗಳು. ನೂಲು ಎಂಥದೋ ಅಂಥ ಸೀರೆ ಎಂದು ಹೇಳುವಂತೆ, ಎಂಥ ಬೀಜವೋ ಅಂಥದೆ ವೃಕ್ಷ ಸಹಜವಾಗಿ ಪ್ರಕಟಗೊಳ್ಳುತ್ತದೆ. ‘ಹೀಗೂ ಉಂಟೆ ?’ , ‘ಜನ್ಮಾಂತರ’, ‘ಭವಿಷ್ಯ ಹೇಳುವುದು’, ‘ವಾಮಾಚಾರದ ಸಂಗತಿ’ಗಳನ್ನು ಪದೆ ಪದೇ ಹೇಳುವುದು ತೋರಿಸುವುದು ಮಾಡುವುದರಿಂದ ಸಹಜವಾಗಿಯೆ ಓದು ಬರಹ ಹಾಗೂ ವಿವೇಚನೆಯನ್ನು ಮಾಡದೆ ಇರುವ ಮನುಷ್ಯ ನಂಬಿಬಿಡುವುದೆ ಹೆಚ್ಚು.
ಸಿನೆಮಾಗಳಲ್ಲಿ ತೋರಿಸುವ ಮೋಹಿನಿಯರ ರೂಪವನ್ನು ಗಮನಿಸಿ ಗಮನಿಸಿ. ನಮಗೆ ಗೊತ್ತಿಲ್ಲದೆ ಮೋಹಿನಿಗೆ ಕಾಲುಗಳು ಇರುವುದಿಲ್ಲ. ಮುಖ ಕಾಣುವುದಿಲ್ಲ. ಆಕೆ ನಡೆದಾಡುವಾಗ ಪ್ರಕಾಶಮಾನವಾದ ಬೆಳಕು ಆಕೆಯ ಸುತ್ತಲೆ ಸುತ್ತುತ್ತಿರುತ್ತದೆ. ಬೆನ್ನು ಮಾತ್ರ ಕಾಣುತ್ತದೆ. ಆಕೆ ಪ್ರತ್ಯಕ್ಷ್ಯಳಾಗುವುದು ಮದ್ಯರಾತ್ರಿಯ ನಂತರ ಎಂಬಂತಹ ಅನಿಸಿಕೆಗಳು ನಮ್ಮಲ್ಲಿ ಈಗಾಗಲೆ ಬೇರೂರಿ ಬಿಟ್ಟಿವೆ. ಆಕಸ್ಮಿಕವಾಗಿ ಗವ್ವೆನ್ನುವ ಕತ್ತಲಲ್ಲಿ ಯಾರಾದರೂ ಬಿಳಿಸಿರಿ ಉಟ್ಟು ಅವರು ನಡೆದಾಡಿದಂತೆಲ್ಲ ಗೆಜ್ಜೆ ಸಪ್ಪಳವಾದರೆ ಸಾಕು ನಮ್ಮ ಎದೆಗಳಲ್ಲೆಲ್ಲ ಭಯದ ತಾಂಡವ ನೃತ್ಯ ಶುರುವಾಗಿರುತ್ತದೆ. ಮಸಂಟಿಗೆಗಳಲ್ಲಿ ಆಗ ಕುಣಿದು ಕುಪ್ಪಳಿಸುತ್ತ ಗ್ರಾಮಕ್ಕೆ ಗ್ರಾಮವನ್ನೆ ಭಯದ ನೆರಳಿನಲ್ಲಿ ಇಡುತ್ತಿದ್ದ ಕೊಳ್ಳಿ ದೆವ್ವಗಳು ಈಗ ಎಲ್ಲಿ ಮಾಯವಾಗಿವೆಯೊ ? ಆದರೆ ಇಂದಿಗೂ ಕೆಲವು ಸಿನೆಮಾಗಳಲ್ಲಿ ಮತ್ತು ಧಾರವಾಹಿಗಳಲ್ಲಿ ಅವು ಹಾಗೆ ವಿಜೃಂಭಿಸುತ್ತಿವೆ.

ನಾಗರ ಹಾವು ತನಗೆ ಕಚ್ಚುತ್ತದೆ ಎಂದರಿತ ಹೀರೋ ಒಬ್ಬ ಸಿನೆಮಾದಲ್ಲಿ ಆಕಸ್ಮಿಕವಾಗಿ ಸಾಯಿಸಿ ಬಿಟ್ಟರೆ ಆ ಹಾವು ಮಾತ್ರ ಪದೆ ಪದೆ ಬಂದು ಆತನಿಗೆ ಕಾಟ ಕೊಡುತ್ತಲೆ ಇರುತ್ತದೆ. ಆ ಹೀರೋನನ್ನು ನರಳಿಸಿ, ನರಳಿಸಿ ಸಾಯುವಂತೆ ಮಾಡುವವರೆಗೆ ಆ ಸಿನೆಮಾ ನಿರ್ದೇಶಕನಿಗೆ ಸಮಾಧಾನವೆ ಇರುವುದಿಲ್ಲ. ಈ ನಡುವೆ ಆ ಸಿನೆಮಾ ಹೀರೋಯಿನ್ ದೈವಭಕ್ತೆಯಾಗಿ ನಾಗದೇವತೆಗೆ ಪೂಜೆ ಮಾಡಿದರೆ, ಆ ನಾಗದೇವತೆ ಪ್ರತ್ಯಕ್ಷಳಾಗಿ ವರವನ್ನು ಕರುಣಿಸಿದರೆ ಗಂಡ ಮಕ್ಕಳು ಬಚಾವಾಗೊದು ತುಸು ಕಷ್ಟವೆಂದೆ ಹೇಳಬೇಕು.
ಮೈನೆರೆದು ದೊಡ್ಡವಳಾದ ಯುವತಿಗೆ ಸರಿಯಾದ ವರ ದೊರಕಬೇಕೆಂದರೆ ಹಳೆ ಸಿನೆಮಾಗಳಲ್ಲಿ ಸತ್ಯನಾರಾಯಣ ವ್ರತವನ್ನು ಆಚರಿಸಲೆ ಬೇಕಿತ್ತು. ಯಾರಿಗೋ ಸಂಬಂಧಿಸಿದ ಕತೆಯನ್ನು ಓದುವುದರಿಂದ ,ನೆನೆಯುವುದರಿಂದ ನಾವು ಅವರಂತೆ ಆಗುತ್ತೇವೆ ಎಂದು ಹೇಳುವುದು ಎಷ್ಟು ಮೂರ್ಖತನ ?

ಮಂತ್ರಾಯಲಯ ಮಹಾತ್ಮೆಯಲ್ಲಿ ಇನ್ನೂ ಅಸ್ಪೃಶ್ಯತೆ !

ಕರಿಕ ಕೆಂಚನ ನೆನೆದರೆ ಕೆಂಚನಾಗಬಲ್ಲನೆ
ಕೆಂಚ ಕರಿಕನ ನೆನೆದರೆ ಕರಿಕನಾಗಬಲ್ಲನೆ
ದರಿದ್ರ ಸಿರಿವಂತನ ನೆನೆದರೆ ಸಿರಿವಂತನಾಗಬಲ್ಲನೆ
ಸಿರಿವಂತೆ ದರಿದ್ರನೆ ನೆನೆದರೆ ದರಿದ್ರನಾಗಬಲ್ಲನೆ
ಮುನ್ನಿನ ಪುರಾತನರ ನೆನೆದು ಧನ್ಯನಾದೆಹೆವೆಂಬ
ಮಾತಿನ ರಂಜನಕರನೇನೆಂಬೆ ಕೂಡಲಸಂಗಮದೇವಾ

ಬೇಕಂತಲೆ ಒಂದು ಸಲ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ರಾಶಿ- ಫಲ ನಕ್ಷತ್ರಗಳ ಕುರಿತು ಹೇಳುತ್ತಿದ್ದ ಜ್ಯೋತಿಷ್ಯಿಯ ಅಟಾಟೋಪವನ್ನು ಗಮನಿಸಿದೆ. ಅವನ ವಾಕ್‍ಚಾತುರ್ಯ, ಸುಳ್ಳನ್ನು ನಯವಾಗಿ, ನವಿರಾಗಿ ಹೇಳುವ ಫಟಿಂಗತನ ಅವನಿಂದ ಮಾತ್ರ ಕಲಿಯಲು ಸಾಧ್ಯ ಎನ್ನುವಂತೆ ಇತ್ತು . ಯಾವುದೆ ದೇವಸ್ಥಾನವನ್ನು ಬಲಗಡೆಯಿಂದಲೇ ಸುತ್ತಬೇಕಂತೆ. ಬಲಗೈಯಲ್ಲಿ ಅಗ್ನಿ ಇದೆಯಂತೆ. ಅದು ಶಾಂತವಾಗಿ ಇರಬೇಕೆಂದರೆ, ನಾವು ಬಯಸಿದ್ದೆಲ್ಲ ನಮಗೆ ಸಿಗಬೇಕಾದರೆ ಹಾಗೆ ಸುತ್ತಿದಾಗಲೆ ನಮಗೆ ಒಳ್ಳೆಯದಾ ಗುತ್ತದಂತೆ. ಮತ್ತೆ ನಾವು ಯಾವುದೆ ಮೌಲ್ಯವುಳ್ಳ ವಸ್ತುಗಳನ್ನು ಪಡೆಯಬೇಕೆಂದರೂ ಅದು ಬಲಗೈಯಲ್ಲಿಯೆ ತೆಗೆದುಕೊಳ್ಳಬೇಕಂತೆ. ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಬರುವ ಹೆಣ್ಣು ಆಕೆ ಬಲಗಾಲನ್ನು ಮಾತ್ರವೆ ಇಟ್ಟು ಬರಬೇಕೆಂಬುದನ್ನು ರೂಢಿಯೆ ಮಾಡಿಬಿಟ್ಟಿದ್ದಾರೆ. ಆಕಸ್ಮಿಕವಾಗಿ ಆಕೆ ಎಡಗಾಲು ಇಟ್ಟು ಒಳಬಂದರೆ ಆ ಮನೆಯಲ್ಲಿ ಏನೇನೋ ಅವಘಡಗಳು ಘಟಿಸಿಬಿಡುತ್ತವೆ ಎಂದು ಭಯದ ಬೀಜ ಬಿತ್ತುತ್ತಾರೆ. ಆದರೆ ಎಡಗೈ ಬಾಲಿಂಗ್ ಹಾಗೂ ಬ್ಯಾಟ್ ಮಾಡುವುದಕ್ಕೆ ಹೆಸರುವಾಸಿಯಾಗಿರುವ ಕ್ರಿಕೆಟಿಗರ ಸಾಧನೆಯನ್ನು ಮುದ್ದಾಂ ಮರೆಯಿಸಿಬಿಡುತ್ತಾರೆ. ನಮ್ಮದೆ ದೇಹದ ಅಂಗಾಗಳಲ್ಲಿಯೂ ಶ್ರೇಷ್ಠ- ಕನಿಷ್ಠ ಎಂಬ ತರತಮಭಾವನೆ ಉಂಟುಮಾಡಿರುವ ರೋಗಿಷ್ಟ ಮನಸ್ಸುಗಳ ಕುರಿತು ಏನು ಹೇಳುವುದು ?

ನಮ್ಮ ಇಂದಿನ ಬದುಕಿಗೆ ಸುಖ- ಸಂತೋಷ, ಒಳ್ಳೆಯದು ಕೆಟ್ಟದ್ದಕ್ಕೆ , ಸ್ನೇಹ- ವೈರತ್ವಕ್ಕೆ, ಹಣಗಳಿಸುವುದಕ್ಕೆ – ಬಿಕಾರಿಯಾಗುವುದಕ್ಕೆ ಕಾರಣ ನಾವಲ್ಲವೆ ಅಲ್ಲವಂತೆ. ಅದೆಲ್ಲ ಮೊದಲೆ ನಮ್ಮ ಹುಟ್ಟಿದ ನಕ್ಷತ್ರ, ರಾಶಿ- ಫಲಗಳನ್ನು ಅವಲಂಬಿಸಿದೆಯಂತೆ. ತೀರಾ ಇತ್ತೀಚೆಗೆ ಈ ರಾಶಿ- ನಕ್ಷತ್ರಗಳನ್ನು ಎಷ್ಟು ಸೀಳಿ ಸೀಳಿ ಇಟ್ಟಿದ್ದಾರೆಂದರೆ ಇನ್ಮುಂದೆ ಸೀಳುವುದಕ್ಕೆ ಸಾಧ್ಯವೆ ಇಲ್ಲವೆನ್ನುವಷ್ಟು ಸೂಕ್ಷ್ಮವಾಗಿ ಸೀಳಿ ಬಿಟ್ಟಿದ್ದಾರೆ. ನಮ್ಮ ವ್ಯಾಪಾರ ವಹಿವಾಟಿಗೂ, ಗಂಡ – ಹೆಂಡತಿಯ ಸಂಬಂಧಕ್ಕೆ, ನಮ್ಮ ಉಡುಗೆ ತೊಡುಗೆಗಳ ಬಣ್ಣಕ್ಕೆ, ಚಂದ್ರ ಗ್ರಹಕ್ಕೆ ರಾಹು ಪ್ರವೇಶಿಸುವು, ಪ್ರವೇಶಿಸದೆ ಇರುವುದರಿಂದಲೆ ಸುಖ-ದುಃಖಗಳು ಉಂಟಾಗುತ್ತವಂತೆ.

ಕರ್ಕ ಲಗ್ನ ರಾಶಿಯನ್ನು ಹೊಂದಿದವರಂತೂ ಬಹಳ ಸೆನ್ಸಿಟಿವ್ ಆಗಿ ಇರುತ್ತಾರಂತೆ. ಏಕೆಂದರೆ ಇವರ ರಾಶಿಯಲ್ಲಿ ಚಂದ್ರ ದುರ್ಬಲನಂತೆ. ಇದೆಲ್ಲ ಹೀಗೇಕೆ ? ಎಂದು ನೀವು ಯಾರಾದರೂ ಪ್ರಶ್ನೆ ಕೇಳಿದರೆ ಮತ್ತೆ ಸುಳ್ಳಿನ ಮಾತಿಗೆ ಮತ್ತಷ್ಟು ಸುಳ್ಳು ಪೋಣಿಸಿ ಸುಳ್ಳಿನ ಸರಮಾಲೆಯನ್ನೆ ನಿಮ್ಮ ಕೊರಳಿಗೆ ಹಾಕಿಬಿಡುತ್ತಾರೆ. ‘ಜಟ್ಟಿ ಕೆಳಗೆ ಬಿದ್ದರೂ ಮೀಸೆಗೆ ಮಣ್ಣು ಹತ್ತಿಲ್ಲ’ ಎಂದು ವಾದಿಸುವ ಧೂರ್ತತನ ಇವರಲ್ಲಿ ತುಂಬಿ ತುಳುಕ್ಯಾಡುತ್ತಿದೆ. ಕಪೋಲ ಕಲ್ಪಿತ ಕಟ್ಟು ಕತೆಗಳೆ ಇವರಿಗೆ ಆಧಾರ. ತಮ್ಮ ಇಂಥ ಪೊಳ್ಳು ಮಾತಿಗೆ ಆಧಾರವಾಗಿ ಕೆಲವು ದಾಸರು ಬರೆದ ‘ನಂಬಿಕೆಟ್ಟವರಿಲ್ಲವೋ ಓ ಮನುಜ ನಂಬಿ ಕೆಟ್ಟವರಿಲ್ಲವೊ’ , ಎಂದು ಹೇಳಿ ಬುದ್ದಿಯನ್ನು ಕ್ಷೀಣಿಸುವಂತೆ ಆಲೋಚಿಸದಂತೆ ಮಾಡುತ್ತಾರೆ.

ಭೂಮಿಯೇ ಸೂರ್ಯನ ಸುತ್ತ ತಿರುಗುತ್ತದೆ ಎಂದ ಮಹಾನ್ ವಿಜ್ಞಾನಿ ಗೆಲಿಲಿಯೋ

ಭೂಮಿಯೆ ವಿಶ್ವದ ಕೇಂದ್ರ. ಅದು ಚಪ್ಪಟೆಯಾಗಿದೆ. ಭೂಮಿಯ ಸುತ್ತಲೆ ಎಲ್ಲಾ ಗ್ರಹಗಳು , ನಕ್ಷತ್ರಗಳು ತಿರುಗುತ್ತವೆ ಎಂದು ಜ್ಯೋತಿಷ್ಯ ಹೇಳುವವರು ನಂಬಿದ್ದರು. ಆದರೆ ಗೆಲಿಲಿಯೋ ಮಾತ್ರ ಭೂಮಿ ಗುಂಡಗಿದೆ. ಅದು ಸೂರ್ಯನ ಸುತ್ತ ತಿರುಗುತ್ತದೆ ಎಂದು ಸತ್ಯವನ್ನು ,ವೈಜ್ಞಾನಿಕ ಆಧಾರಗಳ ಮೇಲೆ ಹೇಳಿದ. ಆದರೆ ಗೆಲಿಲಿಯೋನ ಪರಿಸ್ಥಿತಿ ಏನಾಯಿತು ? ಆದ್ದರಿಂದ ಭವಿಷ್ಯವಾದಿಗಳಿಗೆ ನಂಬಿಕೆಯೆ ಆಧಾರವೆ ಹೊರತು ಸತ್ಯವಲ್ಲ. ಈಗಲೂ ಈ ಮೂರ್ಖರು ನವಗ್ರಹಗಳಿವೆ ಎಂದು ಹೇಳುತ್ತಾರೆ. ವಾಸ್ತವವಾಗಿ ಗ್ರಹಗಳಿ ರುವುದು ಐದು ಮಾತ್ರ. 1 ನಕ್ಷತ್ರ, ಇನ್ನೊಂದು ಉಪಗ್ರಹ ,ಎರಡಂತೂ ಇಲ್ಲವೆ ಇಲ್ಲ. ಇಂಥ ಇಲ್ಲಸಲ್ಲದ ಗ್ರಹಗಳ ಮೇಲೆ ರಚಿತವಾದ ಭವಿಷ್ಯ ರಾಶಿ-ಫಲ- ಜ್ಯೋತಿಷ್ಯ ಅದು ಹೇಗೆ ಖರೆಯಾದೀತು ? ರಾಹು, ಕೇತು ಆಸ್ತಿತ್ವದಲ್ಲಿಯೇ ಇಲ್ಲದಿರುವಾಗ ರಾಹುಕಾಲ, ಗುಳಿಕಾಲಗಳಿಗೆ ಸಹಜವಾಗಿಯೇ ಯಾವ ಅರ್ಥವೂ ಇಲ್ಲ. ಜ್ಯೋತಿಷ್ಯದ ಪ್ರಕಾರ ರಾಹುಕಾಲದಲ್ಲಿ ಪ್ರಯಾಣ, ಮದುವೆ, ಧಾರ್ಮಿಕ ಕಾರ್ಯ ಈ ಬಗೆಯ ಶುಭ ಕಾರ್ಯಗಳನ್ನು ನಡೆಸ ಬಾರದು. ಈ ನಂಬಿಕೆ ನಿಜವಾದ ಪಕ್ಷದಲ್ಲಿ ರಾಹುಕಾಲದಲ್ಲಿ ಹೊರಟ ವಿಮಾನಗಳು, ರೈಲುಗಳು, ಬಸ್ಸುಗಳು ಅಪಘಾತಕ್ಕೆ ಒಳಗಾಗಬೇಕು. ಅಪಘಾತಗಳ ಸ್ವರೂಪವನ್ನು ಸ್ಥೂಲವಾಗಿ ಪರೀಕ್ಷಿಸಿ ನೋಡಿದರೂ ಕೂಡ, ಅಪಘಾತಗಳಿಗೂ ವಾಹನಗಳು ಹೊರಟಕಾಲಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸಂಶಯವಿಲ್ಲದೆ ಗೊತ್ತಾಗುತ್ತದೆ. ಮನುಷ್ಯನ ಎಲ್ಲಾ ಗುಣಗಳನ್ನು ಗ್ರಹಗಳೆ ನಿಯಂತ್ರಿಸುತ್ತವೆ ಎಂಬುದು ಯಾವ ವಿಜ್ಞಾನಿಯೂ ಖಚಿತಪಡಿಸಿಲ್ಲ.

ಜ್ಯೋತಿಷ್ಯನ ಒಂದು ಹಳೆಯ ಕಥೆ ಇದೆ. ಅವನು ಒಬ್ಬ ರಾಜನ ಬಳಿ ಬಂದು ‘ನೀನು ಇನ್ನು ಆರು ತಿಂಗಳಲ್ಲಿ ಸಾಯುವೆ’ಎಂದ.ರಾಜ ಭಯದಿಂದ ಕಂಪಿಸ ತೊಡಗಿದ.ಅಂಜಿಕೆಯಿಂದ ಅವನು ಆಗಲೇ ಸಾಯುವ ಸ್ಥಿತಿಯಲ್ಲಿದ್ದ. ಆದರೆ ಮಂತ್ರಿ ಬಹಳ ಬುದ್ದಿವಂತ.ರಾಜನಿಗೆ, ಈ ಜ್ಯೋತಿಷ್ಯವನ್ನೆಲ್ಲಾ ನಂಬಬೇಡಿ, ಇವರೆಲ್ಲಾ ಮೂರ್ಖರು ಎಂದು ಬುದ್ದಿ ಹೇಳಿದ. ರಾಜ ಇದನ್ನು ನಂಬಲಿಲ್ಲ. ಮಂತ್ರಿ ಜ್ಯೋತಿಷ್ಯ ಮೂರ್ಖ ಎಂಬುದನ್ನು ತೋರಿಸುವುದಕ್ಕೆ ಜ್ಯೋತಿಷ್ಯನನ್ನು ಪುನಃ ಅರಮನೆಗೆ ಬರಮಾಡಿಕೊಂಡ. ಮಂತ್ರಿ ಅವನಿಗೆ ನಿನ್ನ ಲೆಕ್ಕಾಚಾರವೆಲ್ಲ ಸರಿಯಾಗಿದೆಯೇ ? ನೋಡು ಎಂದ. ಜ್ಯೋತಿಷ್ಯನಿಗೆ ಲವಲೇಶವೂ ಸಂದೇಹವಿರಲಿಲ್ಲ. ಆದರೆ ಮಂತ್ರಿಯ ತೃಪ್ತಿಗಾಗಿ ಪುನಃ ಲೆಕ್ಕಾಚಾರಹಾಕಿ ಎಲ್ಲ ಸರಿಯಾಗಿದೆ ಎಂದ. ಭಯದಿಂದ ರಾಜನ ಮುಖ ಸಪ್ಪೆಯಾಯಿತು. ಮಂತ್ರಿ ಜ್ಯೋತಿಷ್ಯನನ್ನು ನೀನು ಇನ್ನೆಷ್ಟು ದಿನಗಳವರೆಗೆ ಬದುಕಿರುವೆ ಎಂದ. ಜ್ಯೋತಿಷ್ಯ ತನ್ನ ಜಾತಕದ ಪ್ರಕಾರ ಹನ್ನೆರಡು ವರ್ಷ ಎಂದ. ಮಂತ್ರಿ ತಕ್ಷಣ ತನ್ನ ಸೊಂಟದ ಕತ್ತಿಯಿಂದ ಜ್ಯೋತಿಷ್ಯನ ತಲೆಯನ್ನು ಛೇದಿಸಿ ರಾಜನಿಗೆ ಈ ಸುಳ್ಳುಗಾರನ ಗತಿ ಏನಾಯಿತು ಗೊತ್ತಿಲ್ಲವೆ ? ಹನ್ನೆರಡು ವರುಷ ಬದುಕಿರುತ್ತೇನೆ ಎಂದವನು ಈ ಕ್ಷಣ ಸತ್ತು ಹೋದನು ಎಂದು ಹೇಳಿದ.*

ಬಹುತೇಕ ಜೋತಿಷ್ಯಿಗಳು ಮಗು ಹುಟ್ಟುವ ಜನನ ಸಮಯದಿಂದ ಜಾತಕ ಬರೆದಿಡುವ ಪದ್ಧತಿ ನಮ್ಮ ಸಮಾಜದಲ್ಲಿ ಇಂದಿಗೂ ಇದೆ. ಆದರೆ ಮಗು ಹುಟ್ಟುವ ಸಮಯ ಅಂದರೆ ಯಾವುದು ? ಆ ಮಗು ನೆಲಕ್ಕೆ ಬಿದ್ದು ಅತ್ತಾಗಲೋ, ಅಥವಾ ಗಂಡಿನ ವೀರ್ಯ ಹೆಣ್ಣಿನ ಅಂಡಾಶಯದೊಂದಿಗೆ ಫಲಿತವಾಗಿ ಭ್ರೂಣವಾಗಿ ಬೆಳೆಯುತ್ತಿರುವಾಗಲೋ ? ಇವರಿಗೆ ಖಚಿತವಾಗಿ ಅದು ಹೇಗೆ ಗೊತ್ತಾಗುತ್ತದೆ ?

ಆದ್ದರಿಂದಲೆ ಮಹಾತ್ಮ ಬುದ್ಧ ‘ಜ್ಯೋತಿಷ್ಯವನ್ನು ಹೇಳಿ ಉದರ ಪೋಷಣೆ ಮಾಡುವವ ಜೊತೆ ಸಂಬಂಧ ಇಟ್ಟುಕೊಳ್ಳಬೇಡಿ’ ಎಂದು ಸ್ಪಷ್ಟವಾಗಿ ಹೇಳಿದ್ದಾನೆ. ‘ಜ್ಯೋತಿಷ್ಯ ಮಂತ್ರವಾದಿಗಳ ಕೈಗೆ ಸಿಕ್ಕುಬಿದ್ದು ಒದ್ದಾಡುವುದಕ್ಕಿಂತ ಯಾವುದನ್ನೂ ನಂಬದೆ ಸಾಯುವುದು ಲೇಸು’- ‘ಜ್ಯೋತಿಷ್ಯ- ಭವಿಷ್ಯ ಮುಂತಾದ ರಹಸ್ಯಗಳನ್ನೆಲ್ಲ ನೆಚ್ಚುವುದು ದೌರ್ಬಲ್ಯದ ಚಿಹ್ನೆ’ ಎಂಬುದು ವಿವೇಕಾನಂದರ ಅಭಿಪ್ರಾಯ.

ದೇವಸ್ಥಾನಕ್ಕೆ ಕೊಟ್ಟೂ ಕೊಟ್ಟು ಭಕ್ತ ಬಡವನಾಗಿದ್ದಾನೆ. ಪೂಜಾರಿ ಶ್ರೀಮಂತನಾಗಿದ್ದಾನೆ !

ಗುಡಿ ಗುಂಡಾರ, ಮಸೀದಿ- ಇಗರ್ಜಿಗಳನ್ನು ಒಂದು ರೌಂಡು ಸುತ್ತಿಬಂದರಂತೂ ಎಲ್ಲಾ ಫಲಾಫಲಗಳು ಉದುರಿಬೀಳುತ್ತವೆ ಎಂದು ಚಿತ್ರಿಸಿತೋರಿಸಲಾಗುತ್ತದೆ. ಗಂಗಾ – ಯಮುನಾ- ಬ್ರಹ್ಮಪುತ್ರ ನದಿಗಳ ನೀರು ಅತ್ಯಂತ ಪವಿತ್ರ ಎಂದು ಹೇಳಾಗುತ್ತದೆ. ಹರಿದ್ವಾರ-ಋಷಿಕೇಷ- ಕೇದಾರ- ಬದರಿ- ವೈಷ್ಣವಿದೇವಿ ದೇವರ ದರ್ಶನಭಾಗ್ಯ ದೊರಕಿದರೆ ಏನೆಲ್ಲವೂ ಸಾಧ್ಯ ಎಂದು ನಂಬಿಸಲಾಗುತ್ತದೆ. ಆದರೆ ವಾಸ್ತವವಾಗಿ ಇದೆಲ್ಲ ಸಾಧ್ಯವೆ ? ಎಂದು ಯಾರೂ ಆಲೋಚಿಸಿ ನೋಡುವುದಿಲ್ಲ.

ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ
ತುಟ್ಟ ತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ
ನಿತ್ಯ ನೇಮದಿಂದ ತನುವ ಮುಟ್ಟಿಕೊಂಡಡಿಲ್ಲ
…………………………………………………………….
ಅತ್ತಲಿತ್ತ ಹರಿವ ಮನವ ಚಿತ್ತದಲ್ಲಿ ನಿಲಿಸಬಲ್ಲಡೆ
ಬಚ್ಚ ಬರಿಯ ಬೆಳಗು ಗುಹೇಶ್ವರ ಲಿಂಗವು

ಎಂಬ ಅರಿವಿನ ಮಾತುಗಳಿಗೆ ನಾವು ಕಿವಿಕೊಡುವುದು ಯಾವಾಗ ?


ತಮ್ಮ ಚಾನಲ್‍ಗಳ ಟಿ.ಆರ್.ಪಿ. ಹೆಚ್ಚಿಸುವುದಕ್ಕೆ ಏನನ್ನಾದರೂ ಕೊಡಲು ರೆಡಿಯಾಗಿರುವ, ಯಾವುದೆ ಬದ್ಧತೆಗಳನ್ನು ಇಟ್ಟುಕೊಳ್ಳದಿರುವ ಸಮೂಹ ಮಾಧ್ಯಮಗಳು ಜನ್ಮಜನ್ಮಾಂತರ ಎಪಿಸೋಡುಗಳನ್ನು ಮಾಡುತ್ತಲೆ ಜನರನ್ನು ಕತ್ತಲೆಯ ಕೂಪಕ್ಕೆ ತಳ್ಳುತ್ತ ನಡೆದಿವೆ. ಜನರ ನಂಬಿಕೆಯನ್ನು ಬಂಡವಾಳ ಮಾಡಿಕೊಂಡ ಈ ಐನಾತಿ ಆಸಾಮಿಗಳು ಅವರ ಮೌಢ್ಯದ ಮೇಲೆ ತಮ್ಮ ಉಪ್ಪರಿಗೆ ಕಟ್ಟಿಕೊಂಡು ಆರಾಮವಾಗಿರುತ್ತಾರೆ. ಇಂಥ ಫಟಿಂಗರನ್ನು ನೋಡಿಯೆ ಕುವೆಂಪು

ಬೆಂಕಿಯನಾರಿಸಿ ಬೂದಿಯ ಮಾಡಿ
ಆ ಬೂದಿಯ ಮಹಿಮೆಯ ಕೊಂಡಾಡಿ
ಪೂಜಾರಿಯೆ ಮಿಂಚುವನು

ಎಂದು ಅತ್ಯಂತ ಸ್ಪಷ್ಟವಾಗಿ ಪುರೋಹಿತರ ಚಾಲಬಾಜಿತನದ ಕುರಿತು ಹೇಳಿದರೂ ನಾವು ಎಷ್ಟು ಮಂದಿ ಆ ಮಾತುಗಳನ್ನು ಕೇಳಿಸಿಕೊಂಡಿದ್ದೇವೆ?

ಹಿಂದೊಂದು ಸಂದರ್ಭದಲ್ಲಿ ತರಂಗ ಪತ್ರಿಕೆಯ ಸಂಪಾದಕನೋರ್ವ ತನ್ನ ಪತ್ರಿಕೆ ಪ್ರಳಯದ ಅಂಚಿಗೆ ತಲುಪಿದಾಗ ಪ್ರಳಯವಾಗುತ್ತದೆ ಎಂದು ಲೇಖನಗಳನ್ನು ಬರೆಬರೆದು, ತನ್ನ ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಂಡ. ಆ ಪತ್ರಿಕೆಯಲ್ಲಿ ಬರೆದ ಜ್ಯೋತಿಷ್ಯಿಗಳಿಗೆ ವಿಜ್ಞಾನ ಜ್ಯೋತಿಷ್ಯಿಗಳೆಂದು ಕರೆದು ತನ್ನ ಎಬಡತನವನ್ನು ತಾನೆ ಹೇಳಿಕೊಂಡ. ಡಿವೈನ್ ಪಾರ್ಕನ ಮತ್ತೊಬ್ಬ ಫಟಿಂಗ ಡಾ. ಉಡುಪ ಎಂಬ ತಿರುಬೋಕಿಯೊಬ್ಬ ತಾನೇ ವಿವೇಕಾನಂದರ ಅಪರವತಾರ ಎಂದು ಹೇಳಿದ್ದನ್ನು , ವಿವೇಕಾನಂದರೆ ತನ್ನ ಮೈಯೊಳಗೆ ಪ್ರವೇಶಿಸಿ ಏನನ್ನೋ ಉಪದೇಶಿಸುತ್ತಾರೆ ಎಂದು ನಂಬಿಸಿ ಜನರನ್ನು ದಿಶಾಬೂಲ್‍ಗೊಳಿಸುತ್ತಿರುವುದನ್ನು ಬಹುದೊಡ್ಡ ವಿಸ್ಮಯ ಎಂಬಂತೆ ಪ್ರಕಟಿಸಿಬಿಟ್ಟ.

ದಕ್ಷಿಣ ಕನ್ನಡದ ಆ ಸಾಲಿಗ್ರಾಮದ ಒಂದು ತುದಿಗೆ ಶಿವರಾಮ್ ಕಾರಂತ ಎಂಬ ಅಪ್ಪಟ ವೈಚಾರಿಕ ಪ್ರಜ್ಞೆಯ ಮನುಷ್ಯನಿದ್ದರೆ ಇನ್ನೊಂದು ಕಡೆ ಚಂದ್ರಶೇಖರ ಉಡುಪ ಎಂಬ ಅವಿಯೋಕಿಯೊಬ್ಬ ಮೆಲ್ಲಗೆ ಬೆಳೆದು ವಿವೇಕಸಂಪದ ಎಂಬ ಧಾರ್ಮಿಕ ಲೇಬಲ್‍ನ ಅವಿವೇಕತನವನ್ನು- ಅಜ್ಞಾನವನ್ನು ವಿವೇಕ ಎಂಬಂತೆ ಮಾರುತ್ತಿರುವುದು, ಇಂದಿನ ವಿಸ್ಮಯಗಳಲ್ಲಿ ಒಂದು.

ಸ್ವಾಮಿ ವಿವೇಕಾನಂದರು

‘ಎಲ್ಲಾ ಮೂಢನಂಬಿಕೆಗಳನ್ನು ಧ್ವಂಸಮಾಡಿ. ಗುರುವಾಗಲಿ, ಧರ್ಮ ಗ್ರಂಥಗಳಾಗಲಿ, ದೇವರಾಗಲಿ ಇಲ್ಲ. ಈ ಎಲ್ಲವೂ ನೆಲೆಯಿಲ್ಲದವು. ಅವತಾರ ಪುರುಷರನ್ನು ಪ್ರವಾದಿ ಗಳನ್ನು ಧ್ವಂಸ ಮಾಡಿ. ನಾನೇ ಪರಮ ಪುರುಷೋತ್ತಮ, ತತ್ವಜ್ಞಾನಿಗಳೆ ಎದ್ದು ನಿಲ್ಲಿ ಭಯಬೇಡ. ದೇವರನ್ನು ಕುರಿತು ಮೂಢನಂಬಿಕೆಗಳನ್ನು ಕುರಿತು ಮಾತು ಬೇಡ ! ಸತ್ಯಕ್ಕೇ ಜಯ ಇದು ನಿಜ, ನಾನು ಅನಂತ. ಎಲ್ಲಾ ಮೂಢನಂಬಿಕೆಗಳು ಹುರುಳಿಲ್ಲದ ಕಲ್ಪನೆಗಳು’ – ಎಂದು ಅತ್ಯಂತ ನಿಖರವಾಗಿ , ಅಷ್ಟೆ ಸತ್ವಶಾಲಿಯಾಗಿ ಹೇಳಿದ ವಿವೇಕಾನಂದರÀ ಮಾತುಗಳಿಗೆ ಉಡುಪ ಎಂಬ ಉಪದ್ವ್ಯಾಪಿ ಏನು ಹೇಳುತ್ತಾನೊ ?


ಚದ್ಮವೇಷಧಾರಿಯಾಗಿರುವ , ಬ್ರಾಹ್ಮಣಿಕೆಯ ಪಳಿಯುಳಿಕೆಗಳನ್ನು ಕಂಡರೆ ಪೆರಿಯಾರ ರಾಮಸ್ವಾಮಿ ಅಯ್ಯಂಗಾರ ಅವರಿಗೆ ಕೆಂಡದಂತಹ ಕೋಪ. ಆದ್ದರಿಂದಲೆ ಅವರು ‘ದಾರಿಯಲ್ಲಿ ಪತ್ರ್ಯಕ್ಷವಾದರೆ ಹಾವಿಗಿಂತ ಹಾರುವನನ್ನು ಕೊಲ್ಲುವುದು ಲೇಸು’ ಎಂದು ಹೇಳುತ್ತಾರೆ. ಇಪ್ಪತ್ತೊಂದನೆಯ ಶತಮಾನದ ಇಂದಿನ ಕಂಪ್ಯೂಟರ ಯುಗದ ಈ ದಿನಗಳಲ್ಲಿಯೂ ಇವರ ಹಾವಳಿ ವಿಪರೀತವಾಗಿದೆ. ಅನಂತಪದ್ಮನಾಭ ದೇವಾಲಯದ ಒಳಗಡೆಯ ಕೋಣೆಯ ಬಾಗಿಲುಗಳ ಬೀಗ ತೆಗೆದರೆ ಎಂಥೆಂಥವೋ ಅನಾಹುತಗಳು ಸಂಭವಿಸುತ್ತವೆ ಎಂದು ಕೋರ್ಟಿನ ಮುಂದೆಯೂ ರೀಲು ಬಿಡುತ್ತಾರೆ. ಆ ರೀಲಿನಲ್ಲಿ ಸುತ್ತಿಕೊಳ್ಳದವರು ಯಾರಿದ್ದಾರೆ ? ಕೋರ್ಟಿನ ಜಡ್ಜುಗಳೆಲ್ಲರೂ ನಮ್ಮ ನಿಮ್ಮಂತೆ ಅಲ್ಲವೆ ? ಹೀಗಾಗಿಯೆ ಅನಂತ ಪದ್ಮನಾಭನ ದೇವಾಲಯದ ಒಂದು ಕೋಣೆಯ ಬೀಗ ತೆಗೆಯಲಾಗಲಿಲ್ಲ.

ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಬಹುದೊಡ್ಡ ಕಿರೀಟವನ್ನು ನೀಡಿದರೂ ಬಳ್ಳಾರಿಯ ರೆಡ್ಡಿಗಳಿಗೆ ಜೇಲುವಾಸ ತಪ್ಪಲಿಲ್ಲ ಎಂದು ಯಾರಾದರೂ ಪುರೋಹಿತರನ್ನು ಕೆಣಕಿದರೆ ರೀ ದೇವರಿಗೆ ಕೊಟ್ಟ ಆ ಕಿರೀಟದ ಮೇಲೆ ತಮ್ಮ ಹೆಸರನ್ನು ಬರೆಯಿಸಿದ್ದರಿಂದಲೆ ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಯಿತು ಎಂಬ ಮತ್ತೊಂದು ಸುಳ್ಳನ್ನು ಉರುಳಿಸಿ ಬಿಡುತ್ತಾರೆ. ಕುಕ್ಕೆ ಸುಬ್ರಮಣ್ಯಕ್ಕೆ ಬಂದು ಸಚಿನ್ ತೆಂಡೋಲ್ಕರ ದರ್ಶನ ಮಾಡಿದ್ದರಿಂದ ಕ್ರಿಕೆಟ್ ಕ್ಷೇತ್ರದಲ್ಲಿ ಹೊಸ ಮನ್ವಂತರ ಬರೆಯಲು ಸಾಧ್ಯವಾಯಿತಂತೆ. ಹಾಗಾದರೆ ಸಚಿನ್‍ನ ಸಾಧನೆಗಿಂತಲೂ ಸುಮ್ಮನೆ ಕುಳಿತಲ್ಲಿಯೆ ಕುಳಿತು ಆರ್ಶೀವದಿಸುವ ಸುಬ್ರಮಣ್ಯನೆ ಸರ್ವಶ್ರೇಷ್ಠನೆ ? ಎಂಥ ಬಾಲಿಶವಾದ ಮಾತು ?

ಅಯ್ಯಪ್ಪ ಸ್ವಾಮಿ

ಅಯ್ಯಯ್ಯಪ್ಪ ಸ್ವಾಮಿಯ ಹುಟ್ಟಿನ ಕತೆಯಂತೂ ಅತ್ಯಂತ ಹೇಸಿಗೆಯಿಂದ ಕೂಡಿದ್ದು. ಆದರೆ ಆ ಹಿನ್ನೆಲೆಯನ್ನು ಮಾಧ್ಯಮಗಳು ಎಲ್ಲೂ ತೋರಿಸದೆ ಅಯ್ಯಪ್ಪ ಸ್ವಾಮಿಯ ಜ್ಯೋತಿಯನ್ನು ಲೈವ್ ತೋರಿಸುತ್ತೇವೆ ಎಂದು ಕೋಟ್ಯಂತರ ಜನರನ್ನು ಮೌಢ್ಯದ ಹೊಂಡಕ್ಕೆ ತಳ್ಳುತ್ತಾರಲ್ಲ ?! ಈ ಅಧಿಕಾರವನ್ನು ಇವರಿಗೆ ಯಾರು ಕೊಟ್ಟರು ? ಸುಮಾರು 50 ವರ್ಷಗಳ ಹಿಂದೆಯೆ ಕೇರಳದ ವಿಚಾರವಾದಿಗಳು ಹಾಗೂ ದೇಶದ ಹಲವಾರು ಜನ ಪ್ರಾಜ್ಞರು ಅಯ್ಯಪ್ಪಸ್ವಾಮಿಯ ಪೊನ್ನಾಂಬುಲ ಮೇಡು ಬೆಟ್ಟದಲ್ಲಿ ಕಾಣಿಸುವ ಜ್ಯೋತಿ ಕೃತಕವಾದ ಜ್ಯೋತಿ ಎಂದು ಸಾರಿಕೊಂಡು ಬಂದರು. ಆ ಮಾತುಗಳಿಗೆ ಹೆಚ್ಚು ಪ್ರಚಾರವನ್ನು ಈ ಮಾಧ್ಯಮಗಳು ನೀಡಲಿಲ್ಲವೇಕೆ ? ಮೌಢ್ಯವನ್ನು ಹೇಳುವುದು, ಪುರಸ್ಕರಿಸುವುದು ಕಾನೂನು ವಿರೋಧಿ ಕೃತ್ಯವೆಂದು ನಮ್ಮ ಸಂವಿಧಾನ ಹೇಳುತ್ತಿದ್ದರೂ ಯಾರೊಬ್ಬರೂ ಮಾಧ್ಯಮಗಳ ಅವಿವೇಕತನವನ್ನು ಪ್ರಶ್ನಿಸಲಿಲ್ಲ ?

ಸಂಘಪರಿವಾರಿಗಳು ದೇಶದ ಚುಕ್ಕಾಣಿ ಎಂದು ಹಿಡಿದರೋ ಅಂದಿನಿಂದ ಪುರೋಹಿತರು ನೇರವಾಗಿ ಯಾವ ನಾಚಿಕೆ- ಹೆದರಿಕೆಗಳಿಲ್ಲದೆ ಧೂರ್ತರಂತೆ ಮುನ್ನುಗ್ಗಿ ಹೊರಟಿದ್ದಾರೆ. ಮೇಲ್ಪಂಕ್ತಿಯಲ್ಲಿದ್ದಾರೆ. ರವಿಶಂಕರ ಗುರೂಜಿ, ಪೇಜಾವರ ಮಠದ ಸ್ವಾಮಿಗಳ ಅಟಾ ಟೋಪಗಳು ಮೇರೆ ಮೀರಿವೆ. ಪ್ರತಿಯೊಂದು ಸಂಗತಿ, ಸಂದರ್ಭದಲ್ಲೂ ತಮ್ಮೊಂದಿಷ್ಟು ಇರಲಿ ಎಂದು ಮೂಗು ತೂರಿಸಿ ಇಡೀ ರಾಷ್ಟ್ರವನ್ನೆ ತಾವು ಹೊತ್ತುಕೊಂಡವರಂತೆ ಪ್ರತಿಕ್ರಿಯಿಸುತ್ತ ನಡೆದಿದ್ದಾರೆ. ನಮ್ಮ ಆಹಾರ ವಿಹಾರಗಳು ಕೂಡ ಇಂತಿಂಥವೆ ಇರಬೇಕು ಎಂದು ಫರ್ಮಾನು ಹೊರಡಿಸಿದರೆ ಅದನ್ನು ಯಾವ ನಾಚಿಕೆಯಿಲ್ಲದೆ ಬಿತ್ತರಿಸುವ ಮಾಧ್ಯಮಗಳಿಂದ ನಮಗೇನು ಲಾಭ ?

ನಮ್ಮ ದೇಶದ ಇಂದಿನ ರಾಜಕೀಯ , ಕಾರ್ಯಾಂಗ ಮತ್ತು ನ್ಯಾಯಾಂಗಗಳು ಅವರ ಅಡಿದಾವರೆಗಳಿಗೆ ಅಡ್ಡಬಿದ್ದಿವೆಯೇನೋ ? ಎಂಬಂತೆ ಕಾಣಿಸುತ್ತಿರುವುದು ಸುಳ್ಳೆ ? ಇದರ ಕುರಿತು ಯಾವ ಮಾಧ್ಯಮಗಳು ಯಾಕೆ ಚಕಾರ ಎತ್ತುವುದಿಲ್ಲ ? ರಾಮಚಂದ್ರಾಪುರ ಮಠದ ರಾಘವೇಶಭಾರತಿ ಎಂಬ ಸ್ವಾಮಿ ಸುಖಾಸುಮ್ಮನೆ ಗೋಕರ್ಣ ದೇವರ ದೇವಸ್ಥಾನಕ್ಕೆ ಅಮರಿಕೊಂಡಾಗ , ಉಡುಪಿಯ ಮಠ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ಪೇಜಾವರರು ಹೊಡಕೊಂಡಾಗಲೂ ಮಾಧ್ಯಮಗಳು ಸುದ್ದಿಗಳನ್ನು ಮಾಡಲಿಲ್ಲವೇಕೆ ? ಬಿಡದಿ ಆಶ್ರಮದ ನಿತ್ಯಾನಂದನ ಲೀಲೆಗಳನ್ನು ಪುಂಖಾನು ಪುಂಖವಾಗಿ ಸಾರುವ ದೃಶ್ಯ ಮಾಧ್ಯಮಗಳು ನಿತ್ಯಾನಂದನನ್ನು ಮೀರಿಸುವ ಸ್ವಾಮಿ- ಸನ್ಯಾಸಿಗಳಿದ್ದರೂ ಅವಕೆ ಏಕೆ ರಿಯಾಯತಿ ನೀಡಿದ್ದಾರೆ ? ಮಂತ್ರಾಯಲದ ರಾಘವೇಂದ್ರನನ್ನು ವಾರ ಬಂತು, ಸ್ಮರಣೆ ಮಾಡು ಎಂಬ ಹಾಡುಗಳನ್ನು ಹಾಡಿ ಹಾಡಿ ಡಾ.ರಾಜ್ ಆತನನ್ನು ಪಾಪುಲರ್ ಮಾಡಿದರು. ಆದರೆ ಅದೆ ರಾಜ್‍ರನ್ನು ಮಂತ್ರಾಲಯದ ಗುಡಿಯ ಪಟಾಲಂ ಗರ್ಭಗುಡಿಯ ಒಳಗೆ ಬಿಟ್ಟುಕೊಳ್ಳಲಿಲ್ಲವೇಕೆ ? ಎಂದು ಒಮ್ಮೆಯಾದರೂ ಯಾವುದಾದರೂ ಮಾಧ್ಯಮ ಕೂಗಿ ಹೇಳಿದೆಯೆ ?

ವಾಸ್ತುವಿನ ವಿನ್ಯಾಸವಂತೆ

ವಾಸ್ತುವಿನ ವಿಷಯವಾಗಿಯಂತೂ ವಿವರಿಸದ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳೆ ಇಲ್ಲವೆಂದರು ನಡೆಯುತ್ತದೆ. ಈ ಹಿಂದೆ ಅಷ್ಟಾಗಿ ಗಮನಿಸದೆ ತಮ್ಮ ವಾಸ್ತವ ಸ್ಥಿತಿಗೆ ಅನುಗುಣವಾಗಿ ಮನೆಗಳನ್ನು- ಅಂಗಡಿಗಳನ್ನು ಕಟ್ಟಿಕೊಳ್ಳುತ್ತಿದ್ದವರು, ಇದೀಗ ಪ್ರತಿಯೊಂದಕ್ಕೂ ವಾಸ್ತುವಿಗೆ ತಗಲುಬಿದ್ದುಬಿಟ್ಟಿದ್ದಾರೆ. ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ, ಪಾತಾಳದಿಂದ ಅತ್ತತ್ತ ಬ್ರಹ್ಮಾಂಡದಿಂದ ಅತ್ತತ್ತ ಆವರಿಸಿಕೊಂಡಿರುವ ಶಿವ ಇರುವಿಕೆ ಯಾವುದೋ ಒಂದು ಮೂಲೆಯಲ್ಲಿ ಇಲ್ಲ ಎಂದು ಯಾವನೋ ಒಬ್ಬ ಫಟಿಂಗ ಹೇಳುತ್ತಾನೆಂದರೆ ನಾವು ಕೇಳುತ್ತ ಅದನ್ನು ಅನುಸರಿಸುತ್ತಿದ್ದೇವೆಂದರೆ ನಮ್ಮನ್ನು ಕುರಿಗಳು ಎನ್ನದೆ ಮತ್ತೆ ಯಾವ ಹೆಸರಿನಿಂದ ಕರೆಯಬೇಕು ?

ಸಮಾಜದಲ್ಲಿ ರಾಜಕಾರಣಿಗಳನ್ನು ನಾವು ಬಹುದೊಡ್ಡವರು ಎಂದು ತಿಳಿದುಕೊಂಡಿರುವುದೆ ಮೊದಲ ತಪ್ಪು. ರಾಜಕೀಯದ ಚದುರಂಗದಲ್ಲಿ ಪಳಗಿರುವ ಪುಢಾರಿಗಳು ಬೌದ್ಧಿಕವಾಗಿ ಬೆಳೆದಿರುವುದಿಲ್ಲ. ಅತಿ ಕಡಿಮೆ ಅವಧಿಯಲ್ಲಿ ಮೋಸ, ದಗಲ್ಬಾಜಿತನ ಮಾಡಿ ದುಡ್ಡು ಗಳಿಸಿದಾಗ ಸಹಜವಾಗಿ ಇವರಲ್ಲಿ ಭಯ ಹುಟ್ಟಿಕೊಳ್ಳುತ್ತದೆ. ಈ ಭಯ ನಿವಾರಣೆ ಮಾಡಿ ದೇವರ ಕರುಣೆ ಒದಗಿಸುವುದಾಗಿ ಪೂಜಾರಿ ಪುರೋಹಿತರು ಹೇಳಿದಾಕ್ಷಣ ಇವರು ಅವರ ಬುಟ್ಟಿಗೆ ಬಿದ್ದು ಮಾಡಬಾರದ ಏನೆಲ್ಲವನ್ನು ಯಾವ ನಾಚಿಕೆ ಇಲ್ಲದೆ ಮಾಡತೊಡಗಿದ್ದಾರೆ. ಆಂದ್ರದ, ಕೇರಳದ, ಜಮ್ಮು- ಕಾಶ್ಮೀರದ ದೇವರುಗಳಿಗೆ ಇವರೆಲ್ಲ ಎಡತಾಕುವುದು ಪೂಜಾರಿಯ ಅಪ್ಪಣೆಯ ಮೇರೆಗೆ. ಅವರಿಂದ ಸಂಕಲ್ಪ ಪೂಜೆ ಹೋಮ ಹವನಗಳನ್ನು ಮಾಡಿಸಿ ಬಿಟ್ಟರೆ ಎಲ್ಲವೂ ಪರಿಹಾರವಾಗುತ್ತದೆ ಎಂದು ನಂಬಿಕೊಂಡು ಓಡಾಡುತ್ತಾರೆ. ಇಂಥ ಅವಿವೇಕಿಗಳ ಬಾಲಿಶ ನಡಾವಳಿಕೆಗಳನ್ನು ಪತ್ರಿಕೆಗಳು ಪ್ರಕಟಿಸುತ್ತವೆ. ದೃಶ್ಯ ಮಾಧ್ಯಮಗಳು ಬಿತ್ತರಿಸುತ್ತವೆ. ‘ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ ?’ ಎಂಬಂತೆ ನಾವೆಲ್ಲ ಅವನ್ನು ಅನುಸರಿಸುತ್ತೇವೆ.

ರಾಮ ಮನೋಹರ ಲೋಹಿಯಾ

‘ ಬ್ರಾಹ್ಮಣ ಬನಿಯಾಗಳಿಬ್ಬರ ನೃಪರ ಕೌಲುಕೂಟವು ಇಂಡಿಯಾದ ಇತಿಹಾಸದ ಮುಖ್ಯ ಬೋಧನೆಗಳಲ್ಲಿ ಒಂದಾಗಿದೆ. ಬನಿಯಾ ಹೊಟ್ಟೆಯನ್ನು ಆಳುತ್ತಾನೆ. ಬ್ರಾಹ್ಮಣ ದೇಶದ ಮನಸ್ಸನ್ನು ಆಳುತ್ತಾನೆ. ಈ ರಾಷ್ಟ್ರ ತನ್ನನ್ನು ಬಲಪಡಿಸಿಕೊಳ್ಳಬೇಕಿದ್ದರೆ ಅದು ಬ್ರಾಹ್ಮಣ ಬನಿಯಾ ಗುತ್ತೇದಾರಿಕೆಯನ್ನು ನಾಶ ಮಾಡುವ ಮೂಲಕವೆ ಆಗಬೇಕು’ ಎಂಬ ಡಾ.ರಾಮಮನೋಹರ ಲೋಹಿಯಾರ ನಿಷ್ಠುರವಾದ ಮಾತುಗಳ ಹಿಂದಿನ ಆಂತರ್ಯವನ್ನು ಅರಿತವರಿಗೆ ಮಾತ್ರ ಸತ್ಯ ಗೋಚರವಾಗುತ್ತದೆ.

ಯಾವುದೇ ಒಂದು ಗ್ರಂಥವಾಗಲಿ, ಇಲ್ಲಾ ವ್ಯಕ್ತಿಯಾಗಲೀ ಪರಮ ಪೂಜ್ಯ ಎಂದು ನಂಬುವುದು ಸಹಜತೆ ವಿರೋಧವಾದುದು. ಅದು ಅಂಧ ಆಚರಣೆಗೆ ಅವಕಾಶ ಮಾಡಿಕೊಡುತ್ತದೆ. ಮೌಢ್ಯಕ್ಕೆ ಮೂಲವಾಗುತ್ತದೆ. ಮೂಢನಂಬಿಕೆ ಮಾನವನ ದೊಡ್ಡ ಶತ್ರು. ಎಂದು ಅರಿತುಕೊಂಡರೆ ಮಾತ್ರ ಮಾಧ್ಯಮಗಳ ಮುಖವಾಡಗಳು ಬಿಚ್ಚಿಕೊಳ್ಳುತ್ತವೆ.

0 ವಿಶ್ವಾರಾಧ್ಯ ಸತ್ಯಂಪೇಟೆ

4 thoughts on “ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ ?!

 1. ಶರಣ ವಿಶ್ವರಾದ್ಯ ಅವರಿಗೆ ಶರಣು ಶರಣಾರ್ಥಿಗಳು.
  ತಮ್ಮ ಲೇಖನದ ಪ್ರತಿ ಶಬ್ದವೂ ಸತ್ಯದಿಂದ ಕೂಡಿದೆ.
  ದೇಶದ ದುರ್ದೈವ ನಾವು ಸ್ವಾರ್ಥಿಗಳಾಗಿ ಮೂಢನಂಬಿಕೆಯನ್ನು ಬೆಂಬಲಿಸಿ ಗುಲಾಮರಾಗುತ್ತಿದ್ದೇವೆ. ನಮಗೆ ಯಾವಾಗ ಬುದ್ಧಿ ಬರುವುದೋ?

 2. ಕುತೂಹಲವೇ ದೇವರು ಅಗೋಚರ ಅನುಭವವೇ ದೇವರು ಭಯವೇ ದೇವರು
  ಭಯ ಎಲ್ಲಿ ಇರುತ್ತದೆಯೋ ಅಲ್ಲಿ ದೇವರಿರುತ್ತಾನೆ
  ಭಯವೇ ಭಕ್ತಿ ಗೆ ಮೂಲ
  ಭಯದಿಂದ ಅತ್ಯಾಚಾರ ಅನಾಚಾರ ಸ್ವಲವಾದರು ಕಡಿಮ ಆಗಿದೆ

 3. ಅರಿವು ಇಲ್ಲದವನು ಅಜ್ಞಾನಿ ಅರಿವಿನಸ್ಥಾನದಲ್ಲಿ ಅರಿವೆ(ಬಟ್ಟೆ)ಉಟ್ಟಗುರು ಆಕ್ರಮಿಸಿರುವುದರಿಂದ ವಾಸ್ತವದ ಜ್ಞಾನಕ್ಕೆ ಬದಲಾಗಿ ವಾಸ್ತುವಿನ ಜ್ಞಾನ ಬಂದು ಕುಳಿತಿದೆ.ಇದು ನಮ್ಮ ದುರಂತವೇ ಸರಿ.ಬುದ್ದ,ಬಸವಣ್ಣ,ಪೇರಿಯಾರ,ಲೋಹಿಯಾ,ಸ್ವಾಮಿ ವಿವೇಕಾನಂದ,ಕುವೆಂಪು ಆದಿಯಾಗಿ ಎಲ್ಲರೂಹಳಿದ್ದು ಅರಿವಿನಕುರಿತು.ಆದರೆಅದು ಇನ್ನುನಮ್ಮಜನತೆಯ ತಲೆಯಲ್ಲಿ ನಾಟತಾಇಲ್ಲ.ಏಕೆಂದ್ರೆ ಅರಿವಿನಕಡೆ ಹೆಳುವವರು ೧೦ಮಂದಿಇದ್ದರೆ ಆಕಡೆಹೆಳುವವರ್ರು ೯೦ಜನ ಇದ್ದಾರೆ ಇರಲಿ ಕಸ ಎಷ್ಟಿದ್ದರೆನಂತೆ ಅದನ್ನ ಕೀಳಲೇಬೆಕಲ್ಲ, ಆಗಫಲವತ್ತಾದ ಬೆಳೆ ಬೆಳೆಯಲು ಸಾದ್ಯವಾಗುತ್ತದೆ.ಇ ಲೇಖನ ಆದಿಸೆಯಲ್ಲಿ ಸಮಗ್ರವಾಗಿ ಬಂದಿದೆ ಅದನ್ನುಓದಿ ಅರ್ಥೈಸಿಕೊಳ್ಳೊಣ ಶರಣಾರ್ಥಿ.

 4. What a classic article my dear friend. Amazing articulation of the subject. Each and every aspect of supersticious mentality. The worst part of it is now a days they are relating it to science.

  Amazingly designed pages & paras.

  Thanks for giving such a great article.

  🙏🙏🙏🙏🙏

  Vijaykumar Kammar Dharwad

Leave a Reply

Your email address will not be published. Required fields are marked *

error: Content is protected !!