ಪಂಚತತ್ವದಲ್ಲಿದ್ದು ಪರ ತತ್ವವ ಅರಿಯಬೇಕು

#ಅಳಗುಂಡಿ ಅಂದಾನಯ್ಯ

ಅಪ್ಪ ಬಸವಾದಿ ಶರಣರ ವಚನ ವಾಂಙ್ಮಯವು ಅದೊಂದು ವಿಶಿಷ್ಟವಾದ ಅನುಭಾವಿಕ ನೆಲೆಯ ಸಾಹಿತ್ಯ ಪ್ರಕಾರವಾಗಿದೆ. ಹಾಗಾಗಿ, ವಚನಗಳನ್ನು ಓದುವ ಮೊದಲು ಇದನ್ನು ಸರಿಯಾಗಿ ಗಮನಿಸಿ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ, ಇಲ್ಲಿನ ಪ್ರತಿಯೊಂದು ವಚನದ ಒಟ್ಟಂದದ ಭಾವಕ್ಕೆ; ಹಾಗೂ ಅಲ್ಲಿ ಬಳಸಿದ ಭಾಷೆಯ ಪದ ಪದಕ್ಕೂ ತನ್ನದೇ ಆದಂತಹ ಅನನ್ಯತೆಯ ಸಂಸ್ಕಾರ ಇದೆ, ಮತ್ತು ಸೊಗಸಾದ ಸೊಗಡಿದೆ. ಇದನ್ನು ನಿಜಕ್ಕೂ ತಿಳಿದರೆ ಇತರ ಸಾಹಿತ್ಯಕ್ಕೂ ಶರಣ ಸಾಹಿತ್ಯಕ್ಕೂ ಇದ್ದಿರಬಹುದಾದ ವ್ಯತ್ಯಾಸ ಅರಿವಿಗೆ ಬರುತ್ತದೆ. ಆಗ ಮಾತ್ರವೇ ವಚನಗಳ ಆಳಕ್ಕಿಳಿದು ಅಲ್ಲಿನ ಅನುಭಾವವನ್ನು ಅನುಸಂಧಾನದ ಮೂಲಕ ಅನುಭೂತಿಯನ್ನು ಹೊಂದಲು ಸಾಧ್ಯವಾದೀತು.

            #ವಚನ 

ಪಂಚತತ್ವದಲ್ಲಿದ್ದು ಪರತತ್ವವನರಿಬೇಕು.
ಅದಕ್ಕೆ ದೃಷ್ಟ; ಪಶುವಿನ ಹೊಟ್ಟೆಯಲ್ಲಿ ಕರುವಿದ್ದಡೆ ಕರೆವುದಕ್ಕೆ ಮನೋಹರವುಂಟೆ?
ಅದು ಭಿನ್ನಭಾವವಾಗಿ,ಇದಿರಿಟ್ಟು ಉಂಡಲ್ಲದೆ ಮೊಲೆ ತೊರೆಯವು. ಆ ತೆರನನರಿದಲ್ಲಿ; ಅರಿವುದಕ್ಕೊಂದು ಕುರುಹು ಬೇಕು.

ಬಲ್ಲಿದ ವೀರನೆಂದಡೂ ಅಲಗಿನ ಮೊನೆಯಿಲ್ಲದೆ ಗೆಲಬಹುದೆ ? ಆ ಅರಿವ ಚಿತ್ತ ಕುರುಹಿನ ಘಟದಲ್ಲಿದ್ದು ಅರಿವುತಿದ್ದಿಹಿತಾದ ಕಾರಣ.
ಇದನರಿತು ಆತ್ಮವಾದವೆಂದು ಎನಲಿಲ್ಲ.
ಸದಾಶಿವಮೂರ್ತಿಲಿಂಗವನರಿವುದಕ್ಕೆ
ಇದಿರಿಟ್ಟು ಕ[ಳೆ]ದುಳಿಯಬೇಕು.
**

#ಅರಿವಿನ #ಮಾರಿತಂದೆ.

         #ಅನುಸಂಧಾನ   

ಮೇಲೆ ಪ್ರಾಸ್ತಾವಿಕವಾಗಿ ನುಡಿದ ನುಡಿ ಗಳಲ್ಲಿನ ಬೆಳಕಿನಲ್ಲಿ ಇರುವಾ ಎಚ್ಚರದ ಹಿನ್ನಲೆಯಲ್ಲಿ ಇಲ್ಲಿ ವಚನಕಾರ ಶರಣ ಅರಿವಿನ ಮಾರಿತಂದೆಯ ಪ್ರಸ್ತುತ ಈ ವಚನವನ್ನು ಇಲ್ಲಿ ಈಗ ಅನುಸಂಧಾನ ಮಾಡುವ ಪ್ರಯತ್ನ ಮಾಡಿ ನೋಡೋಣ.

ಪಂಚತತ್ವದಲ್ಲಿದ್ದು ಪರತತ್ವವನರಿಬೇಕು.

ಅದಕ್ಕೆ ದೃಷ್ಟ; ಪಶುವಿನ ಹೊಟ್ಟೆಯಲ್ಲಿ ಕರುವಿದ್ದಡೆ ಕರೆವುದಕ್ಕೆ ಮನೋಹರವುಂಟೆ?
ಅದು ಭಿನ್ನಭಾವವಾಗಿ,ಇದಿರಿಟ್ಟು ಉಂಡಲ್ಲದೆ ಮೊಲೆ ತೊರೆಯವು. ಆ ತೆರನನರಿದಲ್ಲಿ; ಅರಿವುದಕ್ಕೊಂದು ಕುರುಹು #ಬೇಕು.

ಶರಣಮಾರ್ಗ ಅನುಸರಿಸುವ ಭಕ್ತನಿಗೆ ಉದ್ದೇಶಿಶಿಯೇ ಹೇಳುತ್ತಿವೆ ವಚನದೀ ಸಾಲುಗಳು. ಇಲ್ಲಿ ‘ಪಂಚತತ್ವದಲ್ಲಿದ್ದು ಪರತತ್ವವನರಿಬೇಕು’ ಎನ್ನುವಲ್ಲಿ; ಈ ಪಂಚ ತತ್ವಗಳೆಂದರೆ; ಭೂಮಿ, ನೀರು, ಗಾಳಿ, ಬೆಳಕು,ಮತ್ತು ಆಕಾಶ. ಇವುಗಳ ಸಂಯುಕ್ತ ಘಟಕವೇ ಮನುಷ್ಯನ ಅಂಗ ವಾಗಿದೆ. ಇಹದ ಈ ಅಂಗದಲ್ಲಿದ್ದು ಕೊಂಡೇ ಪರತತ್ವವನ್ನು ತಿಳಿಯಬೇಕೆಂಬು ದು ಈ ವಚನದ ಮುಖ್ಯವಾದ ಆಶಯವಾಗಿದ್ದು, ಇದನ್ನು #ಅಂಡರ್ #ಲೈನ್ ಮಾಡುವಂತಿದೆ ವಚನದ ಈ ಪ್ರಾರಂಭಿಕ ಸಾಲು.
ಈ ವಚನಾಶಯವನ್ನು ಕೆಲವು ದೃಷ್ಟಾಂತ ಬಳಸಿ ಇನ್ನೂ ಹೆಚ್ಚಿನ ಬೆಳಕಿಗೆ ಓದುಗನ್ನ ವಚನಕಾರ ಕರೆದೊಯ್ಯುವರು. ಮೊದಲಿನ ದೃಷ್ಟಾಂತದಲ್ಲಿ; ಪಶುವಿನ ಹೊಟ್ಟೆಯಲ್ಲಿ ಕರುಯಿರುವಾಗಲೇ ಆ ಪಶು ಹಾಲನ್ನು ಕೊಡಲಾರದು. ಅದೇ ಕರುವನ್ನು ಮುಂದಿಟ್ಟರೆ ಅದನ್ನು ನೋಡುತ್ತಲೇ ತ್ವರೆದ ಪಶು ಹಾಲನ್ನು ಕೊಡಲು ಹಾತೊರೆಯುತ್ತ ದೆ. ಆ ತೆರನಾಗಿ ಪರತತ್ವವನ್ನು ಕಾಣಲು ಎದುರಲ್ಲಿ ಒಂದು ಕುರುಹು ಬೇಕೆನ್ನುವರು. ಮುಂದುವರಿದು ಇನ್ನೂ ಒಂದು ಸುಂದರ ದೃಷ್ಟಾಂತ ಬಳಸಿ ಇನ್ನಷ್ಟು ಅತ್ತ ಬೆಳಕನ್ನು ಚೆಲ್ಲುವರು.

ಬಲ್ಲಿದ #ವೀರನೆಂದಡೂ ಅಲಗಿನ ಮೊನೆಯಿಲ್ಲದೆ ಗೆಲಬಹುದೆ ? ಆ ಅರಿವ ಚಿತ್ತ ಕುರುಹಿನ ಘಟದಲ್ಲಿದ್ದು ಅರಿವುತಿದ್ದಿಹಿತಾದ ಕಾರಣ. ಇದನರಿತು ಆತ್ಮವಾದವೆಂದು ಎನಲಿಲ್ಲ.

ಸದಾಶಿವಮೂರ್ತಿಲಿಂಗವನರಿವುದಕ್ಕೆ
ಇದಿರಿಟ್ಟು #ಕ[#ಳೆ]#ದುಳಿಯಬೇಕು.

ಎಂಥಾ ಶೂರನಿದ್ದರೂ ಆತ ಜಯಶಾಲಿಯಾಗ ಬೇಕಾದರೆ ಆತನ ಕೈಯಲ್ಲಿ ಆಯುಧ (ಅಲಗು)
ಬೇಕು.ಹಾಗೆಯೇ ಇಲ್ಲಿ ಕೈಯಲ್ಲಿ ಇಷ್ಟಲಿಂಗವನ್ನು ಧರಿಸಿಯೇ ತನ್ಮೂಲಕ ಪರತತ್ವವನ್ನು ತಿಳಿದುಕೊ ಳ್ಳಬೇಕೆನ್ನುವರು ಈ ವಚನಕಾರರಾದ ಅರಿವಿನ ಮಾರಿತಂದೆಯವರು. ಹಾಗಾಗಿ, ಇಲ್ಲಿ ಘಟದಲ್ಲಿ ಅಂದರೆ ತನುವಿನಲ್ಲಿ ಆತ್ಮವು ಅಂತರ್ಗತವಾಗಿದೆ ಎಂದ ಮಾತ್ರಕ್ಕೆ ಪರಮಾತ್ಮನ ಕೂಡಿದೆವೆಂದು ಅನ್ನಬಹುದೆ? ಎಂದು ಪ್ರಶ್ನೆ ಕೇಳಿ, ಅದಕ್ಕವರೇ ‘ #ಹಾಗೆನ್ನಲಾಗದು ‘ ಎಂದು ಉತ್ತರ ಹೇಳುವರು.
ಹಾಗಾಗಿ, ಪರತತ್ವ(ಚಿನ್ಮಯ)ವನ್ನು ಅರಿಯುವ ಚಿತ್ತವು ಭಕ್ತನ ಶರೀರದಲ್ಲಿದ್ದರೂ ಎದುರಿನಲ್ಲಿ (ಅಂಗೈಯಲ್ಲಿ) ಇಷ್ಟಲಿಂಗವನ್ನು ಇಟ್ಟು ಕಾಣುವ ಮೂಲಕ ಚಿನ್ಮಯನನ್ನು ಕೂಡಲು ಸಾಧ್ಯವಿದೆ. ಅದ್ದರಿಂದ ಎದುರಿನಲ್ಲಿ ಪರತತ್ವದ ಕುರುಹು ಆಗಿರುವ ಇಷ್ಟಲಿಂಗವನ್ನು ಇಟ್ಟುಕೊಂಡೇ ಕೂಡಿ ಕಳೆದುಳಿದು ಬೆಳಗಬೇಕೆಂಬುದು ಲಿಂಗಾಯತದ #ಜೀವದ #ಜೀವಾಳ ಎಂಬುದನ್ನು ಶರಣರಾದ ಅರಿವಿನ ಮಾರಿತಂದೆಯವರು ಈ ವಚನದಲ್ಲಿ ಅತ್ಯಂತ ಸುಂದರ ದೃಷ್ಟಾಂತಗಳ ಮೂಲಕ ದೃಢೀಕರಣ ಮಾಡಿ ತಿಳಿಸಿ ಹೇಳಿದ್ದಾರೆಂದು ದೃಢವಾಗಿ ಹೇಳಬಹುದು.
**
#ಅಳಗುಂಡಿ #ಅಂದಾನಯ್ಯ

Leave a Reply

Your email address will not be published. Required fields are marked *

error: Content is protected !!