ಕಳೆದುಕೊಂಡದ್ದು ಕಾಲು ಮಾತ್ರ !

ಮುಸಾಫಿರ್ ೨ (ಅಕ್ಟೋಬರ್ ೧೭, ೨೦೨೦)

Andolana Ravi Koti Kundur Umesha Bhatta Mamatha Giriyappa Nanda Kumari

ಕಳೆದುಕೊಂಡದ್ದು ಕಾಲನ್ನು ಮಾತ್ರ, ಪಡೆದುಕೊಂಡದ್ದು…

೨೦೧೧ರ ಡಿಸೆಂಬರ್ ೨. ಶುಕ್ರವಾರ ಬೆಳಿಗ್ಗೆ ಹತ್ತೂವರೆಯ ಹೊತ್ತು. ಮುಂಬೈನ ರಸ್ತೆಗಳು ಅದಾಗಲೇ ತುಂಬಿ ತುಳುಕಲಾರಂಭಿಸಿಯಾಗಿತ್ತು.
ವಾರದ ಕೊನೆಯ ಕೆಲಸದ ದಿನ. ವೀಕೆಂಡ್‌ನ ಗಿಡಿಬಿಡಿ. ಆದಷ್ಟು ಬೇಗ ಕಚೇರಿಗೆ ಹೋಗಿ ಅಳಿದುಳಿದ ಕೆಲಸಗಳನ್ನು ಮುಗಿಸಿ ವೀಕೆಂಡ್‌ನ ಬಿಡುವಿಗೆ ಸಿದ್ಧವಾಗೋಣ ಎನ್ನುವ ಲಕ್ಷಾಂತರ ಯುವ ಹೃದಯಗಳ ಪೈಕಿ ಒಂದು ಹೃದಯ. ಆಗ ತಾನೇ ಎಂಜಿನಿಯರಿಂಗ್ ಮುಗಿಸಿ ಮುಂಬೈನ ಅಟೊಸ್ ಸಂಸ್ಥೆಯಲ್ಲಿ ಸಾಫ್ಟ್ವೇರ್ ಏಂಜಿನಿಯರ್ ಆಗಿದ್ದ ಇಪ್ಪತ್ತೆರಡರ ಹರೆಯದ ಆ ಯುವತಿಯ ಎದೆಯಾಳದಲ್ಲಿ ಕೂಡ ಎಲ್ಲರಂತೆಯೇ ನೂರೊಂದು ಕನಸುಗಳು.

ಮೊದಲ ಕೆಲಸ! ಮನಸ್ಸಲ್ಲಿ ಚಿಟ್ಟೆಗಳ ಹಾರಾಟ!

ವೃತ್ತಿ ಜೀವನದಲ್ಲಿ ಮಿಂಚಿನ ಓಟ. ತನ್ನದೇ ಆದ ದುಬಾರಿ ಕಾರು, ಬೆಲೆ ಬಾಳುವ ಮನೆ, ಕುಟುಂಬ, ಬದುಕು…

ಈ ಶತಮಾನದ ಆರಂಭದ ದಿನಗಳು. ಮಧ್ಯಮ ಅಥವಾ ಮೇಲ್ಮಧ್ಯಮ ವರ್ಗದ ಮನೆಗಳಲ್ಲಿ ಜನಿಸಿದ ಪ್ರತಿಯೊಂದು ಮಗುವಿನ ಮನಸ್ಸಲ್ಲೂ ಒಂದೋ ಡಾಕ್ಟರ್ ಆಗಬೇಕು, ಇಲ್ಲಾ ಎಂಜಿನಿಯರ್ ಆಗಬೇಕು ಎಂಬ ಕನಸು ಇದ್ದೇ ಇರುತ್ತಿತ್ತು. ಆ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎನ್ನುವ ತವಕ. ತಂದೆ- ತಾಯಿ ಕೂಡ ಅದಕ್ಕೆ ಹೊರತಾಗಿರುತ್ತಿರಲಿಲ್ಲ. ಅಂತಹುದೇ ಕುಟುಂಬದಲ್ಲಿ ಜನಿಸಿದ ಈ ಯುವತಿಯ ತಂದೆ ಗಿರೀಶ್ ಚಂದ್ರ ಜೋಶಿ ಮುಂಬೈನ ಬಾಬಾ ಅಟೊಮಿಕ್ ರಿಸರ್ಚ್ ಸೆಂಟರ್‌ನಲ್ಲಿ ವಿಜ್ಞಾನಿಯಾಗಿದ್ದರು. ಅದು ತಂದೆ-ತಾಯಿ-ಸಹೋದರ-ಸಹೋದರಿಯರಿದ್ದ ಈ ಯುವತಿಯ ತುಂಬು ಕುಟುಂಬ. ಒಂದರ್ಥದಲ್ಲಿ ಸಂತೋಷದ ನೆಲೆಯಾಗಿದ್ದ ನಂದನವನ ಆ ಮನೆ.

ಶುಕ್ರವಾರ ಬೆಳಿಗ್ಗೆ ಮನೆಯಿಂದ ಏಳು ಕಿಲೋ ಮೀಟರ್ ದೂರದ ಅಟೊಸ್ ಸಂಸ್ಥೆಯ ಕಚೇರಿಯತ್ತ ಹೊರಡಲು ಮೋಟರ್ ಬೈಕ್ ಏರಿದ ಯುವತಿಯ ಬದುಕು ಕೂಡ ಸೊಗಸಾಗಿಯೇ ಇತ್ತು.

ಎಂದಿನಂತೆಯೇ ಮುಂಬೈನ ರಸ್ತೆಯಲ್ಲಿ ತುಂಬಿಕೊಂಡಿದ್ದ ವಾಹನಗಳ ನಡುವೆ ಬೈಕ್ ಓಡಿಸಿಕೊಂಡು ಹೊರಟ ಯುವತಿ ಫ್ಲೈ ಓವರ್ ಒಂದರ ಕೆಳಗೆ ಯು-ಟರ್ನ್ ತೆಗೆದುಕೊಳ್ಳಲು ಹೊರಟ ಸಂದರ್ಭ… ಹಿಂದಿನಿಂದ ರಾಂಗ್ ಸೈಡ್‌ನಲ್ಲಿ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದು, ಕೆಳಗೆ ಬಿದ್ದ ಯುವತಿಯ ಎಡಗಾಲನ್ನು ಅಪ್ಪಚ್ಚಿ ಮಾಡಿ ಮುಂದೋಡಿತು.
ಆ ಕ್ಷಣ ಮಾನಸಿ ಹರೀಶ್ಚಂದ್ರ ಜೋಶಿ ಎಂಬ ಆ ಯುವತಿಯ ಬದುಕು…
“ಆ ದಿನ, ಆ ಕ್ಷಣ ಈಗಲೂ ನೆನಪಿದೆ. ರಸ್ತೆಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ನನಗೆ ಜ್ಞಾನ ತಪ್ಪಿರಲಿಲ್ಲ. ಹೇಗೋ ಎದ್ದು ಕೂತು, ತಲೆಯ ಮೇಲಿದ್ದ ಹೆಲ್ಮೆಟ್ ತೆಗೆದು ಪಕ್ಕಕ್ಕಿಟ್ಟೆ. ಅಪ್ಪಚ್ಚಿಯಾಗಿದ್ದ ಎಡಗಾಲಿನಿಂದ ರಕ್ತ ಚಿಮ್ಮುತ್ತಿತ್ತು. ಬಲಗೈಗೂ ಸಾಕಷ್ಟು ಪೆಟ್ಟು ಬಿದ್ದಿತ್ತು” ಎಂದು ಈಗ ಕೂಡ ಆ ದೃಶ್ಯವನ್ನು ಎಳೆ-ಎಳೆಯಾಗಿ ವಿವರಿಸುವ ಮಾನಸಿ, “ಸಹಜವಾಗಿಯೇ ನನ್ನ ಸುತ್ತ ಜನ ಬಂದು ಸೇರಿದರು. ಆದರೆ ಅಲ್ಲಿದ್ದ ಯಾರಿಗೂ ಅಪಘಾತಕ್ಕೆ ಒಳಗಾದ ಒಬ್ಬ ವ್ಯಕ್ತಿಯನ್ನು ಹೇಗೆ ನಿರ್ವಹಣೆ ಮಾಡಬೇಕು ಮತ್ತು ಹೇಗೆ ಆಸ್ಪತ್ರೆಗೆ ತೆಗೆದುಕೊಂಡು ಸೇರಿಸಬೇಕು ಎನ್ನುವ ತಿಳವಳಿಕೆ ಇರಲಿಲ್ಲ.
ಹತ್ತಿರದಲ್ಲಿಯೇ ಇದ್ದ ಪೊಲೀಸರು ಬಂದು ನೆರವಿಗೆ ನಿಂತರು” ಎಂಬ ವಿವರ ನೀಡುತ್ತಾರೆ.

ನೆರೆದಿದ್ದ ಜನರ ಸಹಾಯ ಪಡೆದು, ಸಿಕ್ಕಿದ ಯಾವುದೋ ವಾಹನದೊಳಕ್ಕೆ ತುರುಕಿ, ಪೊಲೀಸರು ಮಾನಸಿಯನ್ನು ಹತ್ತಿರದಲ್ಲಿಯೇ ಇದ್ದ ಆಸ್ಪತ್ರೆಗೆ ತೆಗೆದುಕೊಂಡು ಹೋದರೆ, ಅಲ್ಲಿ ಅವರ ಚಿಕಿತ್ಸೆಗೆ ಅಗತ್ಯವಾದ ಯಾವ ಸೌಲಭ್ಯಗಳು ಇರಲಿಲ್ಲ. ಸರ್ಜನ್ ಕೂಡ ಇಲ್ಲ. ಮತ್ತೆ ಆಂಬ್ಯುಲೆನ್ಸ್ಗಾಗಿ ಹುಡುಕಾಟ. ದೊಡ್ಡಾಸ್ಪತ್ರೆಗೆ ಕರೆದುಕೊಂಡು ಹೋಗುವ ಯತ್ನಗಳು. ಗಂಟೆಗಟ್ಟಲೇ ಕಾದ ಮೇಲೆ ಬಂದ ಆಬ್ಯುಲೆನ್ಸ್ ಎಂಬ ವಾಹನದ ಪಳೆಯುಳಿಕೆಯೊಳಗೆ ಗಾಯಗೊಂಡು ನರಳಿ-ನರಳಿ ಸುಸ್ತಾಗಿದ್ದ ಯುವತಿಯನ್ನು ತುಂಬಿಕೊಂಡು ಸುಮಾರು ಹದಿನೈದು ಕಿಲೋ ಮೀಟರ್ ದೂರದ ದೊಡ್ಡಾಸ್ಪತ್ರೆಗೆ ರವಾನೆ. ಅಲ್ಲಿ ಹೋಗಿ ಎಲ್ಲವೂ ಸುಸೂತ್ರವಾಗಿ ಶಸ್ತ್ರಚಿಕಿತ್ಸೆ ಶುರುವಾದಾಗ ಸಂಜೆ ಐದೂವರೆ ಗಂಟೆ. ಅಪಘಾತವಾಗಿ ಒಂಬತ್ತು ಗಂಟೆಗಳು ಕಳೆದು ಹೋಗಿದ್ದವು! ಜೀವವಿನ್ನೂ ಗಟ್ಟಿಯಾಗಿತ್ತು.

ನಂತರದ ಸುಮಾರು ಐವ್ವತ್ತು ದಿನಗಳ ಕಾಲ ದೊಡ್ಡ ವೈದ್ಯಕೀಯ ಹೋರಾಟ. ಹೇಗಾದರೂ ಮಾಡಿ ಮಾನಸಿ ಎಡಗಾಲನ್ನು ಉಳಿಸಬೇಕೆಂದು ವೈದ್ಯರು ಶತಪ್ರಯತ್ನ ಮಾಡಿದರು. ಆದರೆ, ಗ್ಯಾಂಗ್ರೀನ್ ವೈದ್ಯರ ಹೋರಾಟದೆದುರು ಗೆದ್ದು ನಿಂತಿತು. ಕೊನೆಗೆ ಬೇರೆ ಯಾವುದೇ ದಾರಿಯಿಲ್ಲದೇ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಎಡಗಾಲಿನ ತುಂಡನ್ನು ತೆಗೆದು ಬಿಟ್ಟರು. ತೊಡೆಯ ಕೆಳಗೆ ಎಡಗಾಲು ಇಲ್ಲ. ಸದಾ ಜೀವನೋತ್ಸಾಹದಿಂದ ಚಿಮ್ಮುತ್ತಿದ್ದ, ಬದುಕಲ್ಲಿ ಅರಳಿ ನಿಂತು ಬಹಳಷ್ಟು ಸಾಧಿಸಬೇಕು ಎಂದುಕೊಂಡಿದ್ದ ಮಾನಸಿ ಎಡಗಾಲನ್ನು ಕಳೆದುಕೊಂಡು ಆಸ್ಪತ್ರೆಯ ಮಂಚದ ಮೇಲೆ ಮಲಗಿದ್ದಾಗ‘ಎಲ್ಲವೂ ಮುಗಿದೇ ಹೋಯಿತು’ ಎಂಬ ಭಾವನೆಗಳ ಚಕ್ರಕ್ಕೆ ಸಿಕ್ಕು ಬದುಕು ಕಳೆದುಕೊಳ್ಳಲಿಲ್ಲ.

ಬದಲಾಗಿ ಅದು ಹೊಸ ಬದುಕಿನ ಆರಂಭವಾಯಿತು…

ಒಂದು, ಯಾವುದೇ ಕಾರಣಕ್ಕೆ ಮಾನಸಿ ಕುಸಿಯಲಿಲ್ಲ.
ಎರಡು, ಅವರ ಕುಸಿಯದಂತೆ ನೋಡಿಕೊಳ್ಳಲು ಕುಟುಂಬದವರು ಮತ್ತು ಸ್ನೇಹಿತರ ದಂಡೇ ಹಗಲಿರುಳು ಕಷ್ಟ ಪಟ್ಟಿತು. ಮಾನಸಿ ಆಸ್ಪತ್ರೆಯಿಂದ ಮನೆಗೆ ಬಂದರು. ಎಡ ತೊಡೆಯ ಕೆಳಗೆ ಕೃತಕ ಕಾಲು ಬಂದು ಸೇರಿತು. ಸುಮಾರು ಒಂದು ವರ್ಷಗಳ ಕಾಲ ಊರುಗೋಲು ಹಿಡಿದುಕೊಂಡು ನಡೆಯುವ ಯತ್ನ ಮಾಡಿದ ಮಾನಸಿ, ಕ್ರಮೇಣ ಕೃತಕ ಕಾಲಿನ ನೆರವಿನಿಂದ ನಡೆಯಲಾರಂಭಿಸಿದರು ಮತ್ತು ಮರಳಿ ಕೆಲಸಕ್ಕೆ ಹೋಗಲಾರಂಭಿಸಿದರು. ಬದುಕು ಒಂದಿಷ್ಟು ಮಾಮೂಲಿಗೆ ಮರಳಿತು. ಆದರೆ, ಮೊದಲಿನಂತೆಯೇ ಎಲ್ಲವೂ ಸರಾಗವಾಗಿರಲಿಲ್ಲ.

“ನನ್ನ ಮಾತನ್ನು ನೀವು ನಂಬುತ್ತಿರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನಂಬಿ. ಆ ಘಟನೆ ನಡೆದ ನಂತರ ಯಾವುದೇ ಕ್ಷಣದಲ್ಲಿ ಕೂಡ ನಾನು ಬದುಕಲ್ಲಿ ಆಗಬಾರದ್ದು ಆಗಿ ಹೋಯಿತು, ಎಲ್ಲವೂ ಮುಗಿದೇ ಹೋಯಿತು ಎಂದು ಕೊರಗಲಿಲ್ಲ. ಆಸ್ಪತ್ರೆಯಿಂದ ಮನೆಗೆ ಬಂದ ಮೇಲೆ ಕನ್ನಡಿಯ ಮುಂದೆ ಹೋಗಿ ನಿಂತೆ. ನೋಡೋಕೆ ಅಷ್ಟೇನೂ ಚೆನ್ನಾಗಿ ಕಾಣಿಸುತ್ತಿಲ್ಲ ಎಂದು ಮೊದಲು ಅನಿಸಿತು. ಆಮೇಲೆ ಸ್ವಲ್ಪ ದಿನಗಳ ನಂತರ, ಏನೀಗ ಕಳೆದುಕೊಂಡಿದ್ದು ಒಂದು ಕಾಲನ್ನು ಮಾತ್ರ. ಪೂರ್ತಿ ಬದುಕೇ ಮುಂದಿದೆಯಲ್ಲ ಎಂಬ ಆಶಾಭಾವನೆ ಮೂಡಿತು” ಎಂಬ ಮಾತುಗಳು ಮಾನಸಿ ಅವರ ಗಟ್ಟಿಯಾದ ಮನಸ್ಥಿತಿಯ ಪ್ರತೀಕ.

ಒಮ್ಮೆ ಕೃತಕ ಎಡಗಾಲು ಬಂದು, ‘ರಿಹ್ಯಾಬಿಲಿಟೇಷನ್’ನಡೆಯುವ ಯತ್ನ ಆರಂಭವಾದ ಮೇಲೆ ಬಾಲ್ಯದಲ್ಲಿ ಆಡುತ್ತಿದ್ದ ಬ್ಯಾಡ್ಮಿಂಟನ್ ಅವರ ನೆರವಿಗೆ ಬಂತು. ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಂಡು ಮಾನಸಿಕ ಸ್ಥೈರ್ಯ ಪಡೆಯಲು ಬ್ಯಾಡ್ಮಿಂಟನ್ ರ‍್ಯಾಕೇಟ್ ಹಿಡಿದ ಮಾನಸಿ, ಮುಂದೊಂದು ದಿನ ಪ್ಯಾರಾ ಬ್ಯಾಡ್ಮಿಂಟನ್ ಲೋಕದಲ್ಲಿ ಚಾಂಪಿಯನ್ ಆಗುವ ಕನಸಂತೂ ಕಂಡಿರಲಿಲ್ಲ. ವಿಶ್ವ ಶ್ರೇಷ್ಠ ಅಥ್ಲೀಟ್ ಆಗುವ ಬಯಕೆಯಂತೂ ಇರಲೇ ಇಲ್ಲ. ಏನಿದ್ದರೂ ದೇಹ-ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು. ಮರಳಿ ಕೆಲಸಕ್ಕೆ ಹೋಗಬೇಕು ಎಂಬ ಛಲ ಮಾತ್ರ ಇತ್ತು. ಆ ಹಂತದಲ್ಲಿ ಅವರಿಗೆ ಸ್ಪೂರ್ತಿಯಾಗಿದ್ದು ಅಂತರ್ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ನೀರಜ್ ಜಾರ್ಜ್.

೨೦೧೨ರ ಆಗಸ್ಟ್. ಕಾರ್ಪೊರೇಟ್ ಬ್ಯಾಡ್ಮಿಂಟನ್ ಟೂರ್ನಿಯೊಂದರಲ್ಲಿ ತನ್ನ ಸಂಸ್ಥೆಯನ್ನು ಪ್ರತಿನಿಧಿಸಿದ್ದ ಮಾನಸಿ, ದೈಹಿಕವಾಗಿ ನೂರಕ್ಕೆ ನೂರರಷ್ಟು ಸಮರ್ಥರಾಗಿದ್ದ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರರ ವಿರುದ್ಧ ಆಡಿದ್ದರು. ಒಬ್ಬ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರ್ತಿ ಎದುರು ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿ! ಈ ದೃಶ್ಯವನ್ನು ಕಂಡ ನೀರಜ್, ಬ್ಯಾಡ್ಮಿಂಟನ್ ಅನ್ನೇ ಗಂಭೀರವಾಗಿ ಸ್ವೀಕರಿಸಿ, ಭಾರತದ ಪ್ಯಾರಾ ಬ್ಯಾಡ್ಮಿಂಟನ್ ತಂಡ ಸೇರುವ ಯತ್ನ ಮಾಡುವಂತೆ ಮಾನಸಿಯನ್ನು ಹುರಿದುಂಬಿಸಿದರು. ಮಾನಸಿ ಒಂದೊಂದೆ ಹೆಜ್ಜೆ ಮುಂದಿಟ್ಟರು. ಪರಿಣಾಮ ಸ್ಪೇನ್‌ನಲ್ಲಿ ನಡೆದ ಟೂರ್ನಿಯೊಂದರಲ್ಲಿ ಆಡಿದ ಭಾರತ ತಂಡದಲ್ಲಿ ಅವರಿಗೆ ಅವಕಾಶ ಸಿಕ್ಕಿತು. ಅಲ್ಲಿ ಅವರು ಗೆಲ್ಲಲಿಲ್ಲ. ಆದರೆ, ಬದುಕಿನ ರೋಮಾಂಚಕ ಅಧ್ಯಾಯದ ಆರಂಭಕ್ಕೆ ಆ ಟೂರ್ನಿ ಮುನ್ನುಡಿ ಬರೆಯಿತು. ಅಲ್ಲಿಯವರೆಗೆ ಮಸುಕು ಮಸುಕಾಗಿದ್ದ ಗುರಿ ಸ್ಪಷ್ಟವಾಯಿತು.

ಮುಂಜಾನೆ ನಾಲ್ಕು ಗಂಟೆಗೆ ಎದ್ದು ಎರಡು ಗಂಟೆ ಬ್ಯಾಡ್ಮಿಂಟನ್ ಅಭ್ಯಾಸ. ನಂತರ ಕೆಲಸ. ವಾರದ ರಜಾ ದಿನಗಳಲ್ಲಿ ಪ್ರತಿ ದಿನ ಕನಿಷ್ಠ ನಾಲ್ಕರಿಂದ ಆರು ಗಂಟೆ ಬ್ಯಾಡ್ಮಿಂಟನ್‌ಗೆ ಮೀಸಲು. ಮಾನಸಿ ಬ್ಯಾಡ್ಮಿಂಟನ್ ಲೋಕದಲ್ಲಿ ಬದುಕು ಕಟ್ಟಿಕೊಳ್ಳಲು ಬೆವರು ಹರಿಸಲಾರಂಭಿಸಿದರು.

ಆ ಮುನ್ನುಡಿ, ಪೂರ್ಣ ಪ್ರಮಾಣದ ಪುಸ್ತಕವಾಗಲು ಕಾರಣವಾಗಿದ್ದು ಬ್ಯಾಡ್ಮಿಂಟನ್ ದಂತಕಥೆ ಪುಲ್ಲೇಲ ಗೋಪಿಚಂದ್. ಅಷ್ಟರಲ್ಲಿ ಮಾನಸಿ ಮುಂಬೈ ಬಿಟ್ಟು ಅಹಮದಾಬಾದ್ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಬ್ಯಾಡ್ಮಿಂಟನ್ ಲೋಕದ ಧ್ರುವತಾರೆಗಳಾದ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್ ಇಬ್ಬರಿಗೂ ಗುರುವಾಗಿ ವಿದ್ಯೆಯನ್ನು ಧಾರೆ ಎರೆದಿದ್ದ ಗೋಪಿ ಎದುರು ನಿಂತ ಮಾನಸಿ “ನನ್ನನ್ನು ನಿಮ್ಮ ಮಡಿಲಿಗೆ ಹಾಕಿಕೊಳ್ಳಿ”ಎಂದು ನೇರವಾಗಿ ಹೇಳಿದರು.

ಒಂದು ಕ್ಷಣ ಮಾನಸಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಗೋಪಿ, “ಖಂಡಿತ ಪ್ರಯತ್ನ ಮಾಡೋಣ” ಎಂದರು. ಮಾತ್ರವಲ್ಲ ಮಾನಸಿಗಾಗಿ ಪ್ರತ್ಯೇಕ ತರಬೇತಿ ಪಠ್ಯವನ್ನೇ ಸಿದ್ಧಗೊಳಿಸಿದ ಗೋಪಿ, ಈ ವಿಶೇಷ ಆಟಗಾರ್ತಿಯನ್ನು ತಮ್ಮ ಮಡಿಲಿಗೆ ಹಾಕಿಕೊಂಡರು. ಅಹಮದಾಬಾದ್‌ನಿಂದ ಬದುಕು ಹೈದರಾಬಾದ್‌ನ ಗೋಪಿಚಂದ್ ಅಕಾಡೆಮಿಗೆ ಮಗ್ಗುಲಿಸಿತು. ಎಲ್ಲಿಯವರೆಗೆಂದರೆ ಮಾನಸಿಗೆ ತರಬೇತಿ ನೀಡಬೇಕು ಎಂಬ ನಿರ್ಧಾರಕ್ಕೆ ಬಂದ ಮೇಲೆ ಸ್ವತಃ ಗೋಪಿಚಂದ್ ಒಂಟಿ ಕಾಲಿನಲ್ಲಿ ಬ್ಯಾಡ್ಮಿಂಟನ್ ಆಡಿ, ತಾವೇ ವಿಶೇಷ ತರಬೇತಿಗೆ ಒಳಗಾದರು. ಶಿಷ್ಯೆಗಾಗಿ ಗುರುವೇ ಒಂದು ಕಾಲಿನಲ್ಲಿ ಬ್ಯಾಡ್ಮಿಂಟನ್ ತರಬೇತಿ ಪಡೆದ ಅದ್ಭುತ ಕಥೆಯಿದು. ಗೋಪಿ ನೆರಳಲ್ಲಿ ಮಾನಸಿ ಅರಳಿ ನಿಂತರು.

ಈ ನಡುವೆ ೨೧೦೫ರ ಪ್ಯಾರಾ ಬ್ಯಾಡ್ಮಿಂಟನ್ ವರ್ಲ್ಡ್ ಚಾಂಪಿಯನ್‌ಷಿಪ್‌ನಲ್ಲಿ ಮಿಕ್ಸೆಡ್ ಡಬಲ್ಸ್ನಲ್ಲಿ ಗೆದ್ದ ಕಂಚಿನ ಪದಕ, ಮಾನಸಿ ಗುರಿಯನ್ನು ಮತ್ತಷ್ಟು ಸ್ಪಷ್ಟವಾಗಿಸಿತು. ೨೦೧೬ ಪ್ಯಾರಾ ಬ್ಯಾಡ್ಮಿಂಟನ್ ಏಷಿಯನ್ ಚಾಂಪಿಯನ್‌ಷಿಪ್‌ನಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲಿಯೂ ಕಂಚಿನ ಪದಕ; ೨೦೧೭ರ ಪ್ಯಾರಾ ಬ್ಯಾಡ್ಮಿಂಟನ್ ವರ್ಲ್ಡ್ ಚಾಂಪಿಯನ್‌ಷಿಪ್ ಸಿಂಗಲ್ಸ್ನಲ್ಲಿ ಕಂಚು; ೨೦೧೮ರ ಏಷ್ಯನ್ ಗೇಮ್ಸ್ ಮಹಿಳಾ ಸಿಂಗಲ್ಸ್ನಲ್ಲಿ ಕಂಚು… ಹೀಗೆ ಮಾನಸಿ ಅವರ ಸಾಹಸಗಾಥೆ ಮುಂದುವರಿಯುತ್ತಲೇ ಹೋಯಿತು.

ಅವೆಲ್ಲಕ್ಕೆ ಕಲಶವಿಟ್ಟಂತೆ ಸ್ವಿಜರ್‌ಲೆಂಡನ್ ಬಾಸೆಲ್‌ನಲ್ಲಿ ಹೋದ ವರ್ಷ ನಡೆದ ಪ್ಯಾರಾ ಬ್ಯಾಡ್ಮಿಂಟನ್ ವರ್ಲ್ಡ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್ನಲ್ಲಿ ಚಿನ್ನ ಗೆದ್ದ ಮಾನಸಿ ತಾನೊಬ್ಬ ಪೂರ್ಣ ಪ್ರಮಾಣದ ಚಾಂಪಿಯನ್ ಎನ್ನುವುದನ್ನು ಜಗತ್ತಿಗೆ ಸಾರಿ ಹೇಳಿದ್ದಾರೆ. ಎಂಟು ವರ್ಷಗಳ ಹಿಂದೆ ಇದೇ ಯುವತಿ ಮುಂಬೈನ ರಸ್ತೆಯೊಂದರ ಮೇಲೆ ಹರಿವ ರಕ್ತದ ಹೊಳೆಯ ನಡುವೆ ಒಂಟಿಯಾಗಿ ಬಿದ್ದಿದ್ದರು ಎನ್ನುವುದೇ ಈಗ ಮಿಥ್ಯ. ಮಾನಸಿ ಜೋಶಿ ಎಂಬ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಮಾತ್ರ ಈಗ ಸತ್ಯ!

“ಬದುಕಲ್ಲಿ ಯಾವುದೂ ಕಷ್ಟವಿಲ್ಲ. ಎಲ್ಲವೂ ಸುಲಭ, ಯಾವಾಗೆಂದರೆ ಸ್ಪಷ್ಟ ಗುರಿಯಿದ್ದಾಗ. ನಮ್ಮ ಗುರಿ ಸ್ಪಷ್ಟವಾಗಿದೆ ಎಂದಾದಾಗ ಅದಕ್ಕೆ ಬೆಂಬಲ ನೀಡಲು ಹತ್ತಾರು ಕೈಗಳು-ಮನಸ್ಸುಗಳು ಮುಂದಾಗುತ್ತವೆ. ಆ ಬೆಂಬಲದೊಂದಿಗೆ ನಾವು ಒಂದರ ಮೇಲೆ ಮತ್ತೊಂದು ಹೆಜ್ಜೆಯಿಡುತ್ತಾ ಗುರಿಯತ್ತ ಸಾಗಬೇಕು. ಯಾವುದೇ ಕಾರಣಕ್ಕೆ ಬದುಕಿನ ಯಾವುದೇ ಹಂತದಲ್ಲಿ, ಎಂತಹ ಸನ್ನಿವೇಶದಲ್ಲೂ ಎದೆಗುಂದಬಾರದು. ಗುರಿ ಸ್ಪಷ್ಟವಾಗಿದ್ದರೆ ಎಲ್ಲವೂ ಸರಳವಾಗಿ ಕೈಗೆಟುಕುತ್ತದೆ” ಎನ್ನುವ ಮಾನಸಿ ಮಾತುಗಳಲ್ಲಿ ನಿತ್ಯಸತ್ಯವಡಗಿದೆ.

ಮಾನಸಿ ಈಗ ಕೇವಲ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಮಾತ್ರವಲ್ಲ. ಭಾರತದಲ್ಲಿರುವ ಸುಮಾರು ೨.೬ ಕೋಟಿ ಅಂಗವಿಕಲರ ಹಕ್ಕುಗಳ ದನಿಯಾಗಿ ಮಾನಸಿ ಜೋಶಿ ಹೊರಹೊಮ್ಮಿದ್ದಾರೆ. “ಅಂಗವಿಕಲರನ್ನೂ ಕೂಡ ಮುಖ್ಯವಾಹಿನಿಯ ಭಾಗ ಎಂದು ಎಲ್ಲರೂ ಸಹಜವಾಗಿಯೇ ಪರಿಗಣಿಸಬೇಕು. ಅದನ್ನು ಬಿಟ್ಟು ನನ್ನಂತಹವರ ಬಗ್ಗೆ ಯಾವುದೇ ಕರುಣೆ ತೋರಿಸುವ ಅಗತ್ಯವಿಲ್ಲ. ಈ ದೇಶದಲ್ಲಿ ಅಂಗವಿಕಲರಿಗೆ ಸಿಗಬೇಕಾದ ಒಂದಷ್ಟು ಮೂಲ ಭೂತ ಸೌಲಭ್ಯಗಳು ಸಿಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಮುಖ್ಯವಾಗಿ ಮೂಲ ಸೌಲಭ್ಯಗಳನ್ನು ನಿರ್ಮಾಣ ಮಾಡುವಾಗ ರ‍್ಯಾಂಪ್‌ನಂತಹ ಸೌಕರ್ಯಗಳನ್ನು ಮರೆಯದೇ ನಿರ್ಮಿಸಬೇಕು” ಎನ್ನುವುದು ಮಾನಸಿ ವಾದ.

೨೦೧೪ ರಿಂದ ನಡೆದು ಬಂದ ಸಂಪ್ರದಾಯದಂತೆ‘ಟೈಮ್’ನಿಯತಕಾಲಿಕ ೨೦೨೦ರ ‘ಮುಂದಿನ ಜನಾಂಗದ ನಾಯಕರು’ಎಂಬ ಪ್ರತಿಷ್ಠಿತ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಆ ಹತ್ತು ನಾಯಕರ ಪೈಕಿ ಭಾರತದ, ನಮ್ಮ ಮಾನಸಿ ಜೋಶಿಗೆ ಒಂದು ಸ್ಥಾನ ದೊರಕಿದೆ. ಒಂಬತ್ತು ವರ್ಷಗಳು… ಈ ಯುವತಿಯ ಬಾಳಲ್ಲಿ ಏನೆಲ್ಲಾ ಆಗಿ ಹೋಯಿತು. ಆದರೆ, ಮಾನಸಿ ಹೇಳಿದಂತೆ ‘ಗುರಿ ಸ್ಪಷ್ಟವಾಗಿದ್ದರೆ ಎಲ್ಲವೂ ಸುಲಭ’. ಬದುಕಿನ ಗುರಿ ಸ್ಪಷ್ಟವಾಗಿರಲಿ.

ಕೃಪೆ: ಆಂದೋಲನ

One thought on “ಕಳೆದುಕೊಂಡದ್ದು ಕಾಲು ಮಾತ್ರ !

  1. ಸ್ಪೂರ್ತಿಯನ್ನು ಹುಟ್ಟುಹಾಕುವ ಲೇಖನ ,ಗುರಿ ಮತ್ತುಗುರುವಿನ ಸಹಾಯದಿಂದ ವಿಶ್ವ ಮಟ್ಟದ ಚಾಂಪಿಯನ್ನ ಆದ ಸಾಹಸಗಾರ್ತಿ.ಜೊತೆಗೆ ಅಂಗವಿಕಲರ ಚಿಂತನದ ಚಿಲುಮೆಯಾದ ಮಾನಸಿ ಜೋ ಷಿಯವರಿಗೆ ಸಾವಿರ ಸಾವಿರ ಶರಣುಗಳು.

Leave a Reply

Your email address will not be published. Required fields are marked *

error: Content is protected !!