ಶರಣ ಪ್ರೇಮಿ ಡಾ.ಶಾಂತವೀರ ಸುಂಕದರನ್ನು ಹುಡುಕುವುದೆಲ್ಲಿ ?

ಗಿನ್ನಿಸ್ ದಾಖಲೆಯ ‘ವಿಭೂತಿ ಡಾಕ್ಟರ್’ರನ್ನ ಇನ್ನೆಲ್ಲಿಂತ ಹುಡುಕೋದ್ರಿ?

ಕಲಬುರಗಿಯ ಗೋದುತಾಯಿ ಕಾಲೋನಿಯ ಅಂಚಿನಲ್ಲಿರುವ ಮನೆ ‘ಢವಳಗಿರಿ’ ಅಂಗಳದಲ್ಲೆಲ್ಲಾ ಆ ಹೊತ್ತಲ್ಲಿ ಕತ್ತಲು ಕವಿದಿದ್ದರೂ ಆ ಮನೆಯ ಮೂಲೆಯಲ್ಲಿದ್ದ ಔಟ್ ಹೌಸ್‍ನಲ್ಲಿ ಇನ್ನೂ ದೀಪ ಬೆಳಗುತ್ತಿತ್ತು. ಆಗ ಸಮಯ ಬರೋಬ್ಬರಿ ಮಧ್ಯರಾತ್ರಿ 12 ಗಂಟೆಯಾಗಿತ್ತು, ಮನದಲ್ಲೇನೋ ಅಳುಕ ಇದ್ದರೂ ತೋರಗೊಡದೆ ನಾನು ನನ್ನ ಬಂಧು ಒಬ್ಬರನ್ನು ಜೊತೆಗೇ ಕರೆದುಕೊಡು ಹೋಗಿದ್ದೆ, ಹಾಗೆಯೇ ಆ ಮನೆಯ ಗೇಟ್ ತೆರೆದಾಗ ಕಿರ್ರ್… ಎಂದು ಸದ್ದು ಮಾಡುತ್ತ ಅದು ತೆರೆದುಕೊಂಡಿತ್ತು.

ಕತ್ತಲು ತಾನೆ, ಮನೆಯಂಗಳದಲ್ಲೆಲ್ಲಾ ಮರ ಗಿಡಗಳು ಬೇರೆ. ಮಧ್ಯರಾತ್ರಿಯಾಗಿತ್ತು. ಮನೆಯಲ್ಲಿ ನಾಯಿ ಇದ್ರೆ ಫಜೀತಿ, ವಾಚಮನ್ ಇದ್ದರೆ ಇನ್ನೂ ಫಜೀತಿ ಎಂದು ಮನ ಒಳಗೇ ಹೊಡೆದುಕೊಳ್ಳುತ್ತಿತ್ತು. ಹಾಗೇ ಹೆಜ್ಜೆ ಹಾಕುತ್ತ ಹೂವಿನ ಗಿಡಗಳ ಸಾಲಿನಿಂದ ನಿಧಾನಕ್ಕೆ ಸಾಗುತ್ತ ವಿದ್ಯುದೀಪ ಬೆಳಗುತ್ತಿದ್ದ ಔಟ್ ಹೌಸ್ ಕೋಣೆಯಲ್ಲಿ ಇಣುಕಿ ನೋಡಿದೆ, ನನಗಂತೂ ಸಖೇದಾಶಚರ್ಯವಾಯ್ತು..!

‘ಬರ್ರೀ, ಅವಧಾನಿಯವರ… ಈಗ 5 ನಿಮಿಷದ ಹಿಂದಷ್ಟೇ ನಾಲ್ಕಾರು ಮಂದಿ ತೋರಿಸ್ಕೊಂಡು ಹೋದ್ರು, ನಿಮಗ ಟೈ ಕೊಟ್ಟಿದ್ನಲ್ಲ, ಹಂಗೇ ಪುಸ್ತಕ ಓದಕೊಂತ ಕುಂತೀನಿ, ಬರ್ರಿ, ಎಲ್ಲಿ ನಿಮ್ಮ ರಿಲೇಟೀವ್?’ ಎಂದು ನಸುನಗುತ್ತಲೇ ನನ್ನನ್ನು ಬರಮಾಡಿಕೊಂಡವರು ಹೆಸರಾಂತ ತಜ್ಞ ವೈದ್ಯ ಡಾ. ಶಾಂತವೀರ ಸುಂಕದ. ಅವರ ಮೊಗದಲ್ಲಿನ ಲವಲವಿಕೆ, ಮಧ್ಯರಾತ್ರಿಯಾದರೂ ಯಾವುದೇ ದಣಿವು ಇಲ್ಲದ, ಮೊಗದಲ್ಲಿ ಬೇಸರವಂತೂ ಲವಲೇಶವೂ ಇಲ್ಲದ, ಮನಸ್ಸಿಗೆ ಮುದ ನೀಡುವಂತಹ ಅವರ ಮಾತುಗಳನ್ನಾಲಿಸಿ ಅವಾಕ್ಕಾದೆ.

ಹಗಲು ಪೂರಾ ಕಲಬುರಗಿ/ ಸೇಡಂನಲ್ಲಿ ಆರೋಗ್ಯ ಇಲಾಖೆಯ ಸರ್ವ ಜವಾಬ್ದಾರಿಯುತ, ಹೊಣೆಗಾರಿಕೆಯ ಕೆಲಸ ಮಾಡಿ ಬಂದವರು, ಅಷ್ಟಿದ್ದರೂ ಮಧ್ಯರಾತ್ರಿಯಾದರೂ ದಣಿಯದ ದೇಹ, ಕಲಬುರಗಿಯಲ್ಲಿರೋ ಮನೆಯಲ್ಲಿ ಹಾಗೇ ರೋಗಿಗಳನ್ನು ನೋಡುವ ಮನಸ್ಸು. ನಸುನಗುತ್ತ ಮಾತನಾಡಿಸುವ ಸನ್ನಡತೆ- ಸಾತ್ವಿಕತೆ, ವೈದ್ಯೋ ನಾರಾಯಣೋ ಹರೀಃ ಅಂತ ಇತಂಹವರನ್ನೇ ನೋಡಿ ಹೇಳಿರಬೇಕು ಅಂದುಕೊಂಡೆ. ರಾತ್ರಿ ಭಾಳಾಗ್ಯಾದ ಅಂದ್ಕೊಂಡ್ರೇನು, ಇದು ನನಗ ಮಾಮೂಲು. ಜನ ಕೆಲವರು ನನ್ನ ಕೈಯಲ್ಲೇ ಚಿಕಿತ್ಸೆ ಅಂತ ಬಸಿ ಬರ್ತಾರ, ನಾನು ತ್ತ ನನ್ನ ನೌಕರಿಗೂ ಅನ್ಯಾಯ ಮಾಡೋನಲ್ಲ, ಇತ್ತ ಜನರಿಗೂ ಬಿಡೋನಲ್ಲ, ಅದ್ಕ ಈ ಟೈಮಿನ್ಯಾಗ ಎಲ್ಲಾನ ಮಾಡೋದು, ಜನರ ರೋಗ ರುಜಿನ ಗುಣಮಾಡೋ ಶಕ್ತಿ ನನ್ನಲ್ಲಿ ಭಗತಂ ಕೊಟ್ಟಾನಂದ್ರ ಅದನ್ನ ಸದ್ವಿನಿಯೋಗ ಮಾಡೋಣಲ್ಲ ಅನ್ನೋದೆ ನನ್ನ ಮನದಾಶೆ ಅಂತ ಡಾ. ಸುಂಕದ ಏಹಳಿದ ಮಾತಲ್ಲಿ ವರ ಇಡೀ ವೈದ್ಯ ಬಕುದಿನ ನಿಲುವೇ ಅಡಗಿತ್ತು.

ಜನ ಗುಣಮುಖರಾಗೋದು ನಿಶ್ಚಿತ:

2000 ನೇ ಇಸ್ವಿಯ ಸಮಯವದು, ಡಾ. ಸುಂಕದ ಸೇಡಂ ಹಾಗೂ ಕಲಬುರಗಿಯಲ್ಲಿ ಆರೋಗ್ಯ ಇಲಾಖೆ ಮಹತ್ವದ ಹುದ್ದೆಯಲ್ಲಿದ್ದಾಗ ನನಗೂ ಅವರಿಗೂ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿತ್ತಲ್ಲದೆ ಅವಕಾಶ ಸಿಕ್ಕಾಗೆಲ್ಲಾ ಅವರ ಕಲಬುರಗಿ ಮನೆಗೆ ಹೋಗಿ ಮಾತುಕತೆ ನಡೆಸುತ್ತಿದ್ದೆ. ಇವರು ಆರೋಗ್ಯ ಇಲಾಖೆಯಲ್ಲಿ ಆಡಳಿತಗಾರರಷ್ಟೇ ಅಲ್ಲ, ಅತ್ಯುತ್ತಮ ವೈದ್ಯರು ಎಂಬುದು ಗೊತ್ತಾದಾಗಗಲೇ ನಾನು ಬಂಧು ಒಬ್ಬರು ಇವರನ್ನೇ ಕಾಣಬೇಕೆಂದು ಹೇಳಿದಾಗ ಅವರೊಂದಿಗೆ ರಾತ್ರಿ ಮನೆಗೆ ಹೋಗಿದ್ದು.

ಹಣದ ಹಪಾಹಪಿ ಹೀಗೆ ಮಾಡ್ಸತದರಿ, ರಾತ್ರಿಯಾದರೂ ನೋಡ್ತಾರಂದ್ರ ದುಡ್ಡಿಗಲ್ಲದೆ ಮತ್ಯಾಕೆ..? ಅಂತ ನೀವೇನಾದರೂ ಅಂದುಕೊಂಡ್ರೆ ಅದು ಶುದ್ಧ ತಪ್ಪು, ಯಾಕಂದ್ರೆ ಡಾ. ಸುಂಕದ ತಮ್ಮ ಬಳಿ ಅನಾರೋಗ್ಯವೆಂದು ಬಂದವರಿಂದ ದುಡ್ಡು ಪಡೆದz್ದÉೀ ಅಪರೂಪ! ನೀವು ಪೇಪರದೋರು, ಹೀಂಗ ಹೇಳ್ತೀರಿ ಅಂದ್ರ, ನಾನಿದ್ದಾಗಲೇ ಅವರ ಬಳಿ ಬಂದು ಹೋಗುವ ಹತ್ತಾರು ಪೇಷಂಟ್‍ಗಳಿಂದಲೂ ಅವರು ಹಣ ಪಡೆದದ್ದು ಕಂಡವನಲ್ಲ, ಉಭಯಕುಶಲೋಪರಿ ವಿಚಾರಿಸುತ್ತಲೇ ಚಿಕಿತ್ಸೆ ನೀಡುತ್ತ ವೈದ್ಯ ಸೇವೆ ಅವರಿಗೆ ನೀಡಿ ಅದಕ್ಕೆ ಪ್ರತಿಯಾಗಿ ನಸುನಗುತ್ತಲೇ ಅವರನ್ನು ಬೀಳ್ಕೊಡುವ, ಬೇಗ ಗುಣಮುಖರಾಗಿರೆಂದು ಹಾರೈಸುವ ಎತ್ತರದ ವ್ಯಕ್ತಿತ್ವ ಅವರದಾಗಿತ್ತು.

ಒಳಗೆ ಮೆಡಿಕಲ್, ಎಕ್ಸರೇ, ಸ್ಕ್ಯಾನಿಂಗ್, ಬ್ಲಡ್ ಶುಗರ್, ಪಾಥಲಜಿ, ಇನ್ನಿನ್ನೇನೋ ಎಲ್ಲ ಲ್ಯಾಬ್‍ಗಳನ್ನೆಲ್ಲ ಒಳಗೊಳಗೆ ಹೊಂದಿರುವ ಕ್ಲಿನಿಕ್, ದಾಮ್ ದುಪ್ಪಟ್ಟು ಶುಲ್ಕ… ನಾಲ್ಕಾರು ಗಂಟೆ ಕಾಯಿಸಿದರೂ ಕೊನೆಗೂ ರೋಗಿಯ ಮೈ- ಕೈ ಮುಟ್ಟದೆ, ಎದೆಗೆ ಸ್ಟೆತೋಸ್ಕೋಪ್ ಹಚ್ಚದೆ, ನಾಡಿ ಮಿಡಿತ ಅರಿಯದೆ… ಅದು, ಇದು ಎಂದು ಹತ್ತಾರು ಪರೀಕ್ಷೆಗಳನ್ನ ಮಾಡಿಸಿ ಆ ವರದಿ ಬಂದ ನಂತರವಷ್ಟೇ ಪ್ರಿಸ್ಕ್ರಿಪಶನ್ ಗೀಚಿ ಸಾಗಹಾಕುವ ಈಗಿನ ಪೀಳಿಗೆಯ ವೈದ್ಯರಂತಿರಲಿಲ್ಲ ಡಾ. ಸುಂಕದ. ಅವರೇ ಭಿನ್ನ, ಅವರ ಶೈಲಿಯೇ ಭಿನ್ನವಾಗಿತ್ತು, ರೋಗಿಗಳನ್ನು ನೋಡುವ, ಅವರನ್ನು ಪರಿಗಣಿಸುವ ಅವರ ದೃಷ್ಟಿಕೋನವೇ ಭಿನ್ನವಾಗಿತ್ತು. ಅದಕ್ಕೇ ಇರಬೇಕು, ಡಾ. ಸುಂಕದ ಅವರಿಂದಲೇ ಚಿಕಿತ್ಸೆ ಪಡೆಯುವ, ಆಪರೇಷನ್ ಮಾಡಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚಿತ್ತು.

ವಿಭೂತಿ ಡಾಕ್ಟರ್:

ಹೆಚ್ಚಿನ ಅವಧಿ ಶುಭ್ರ ವಸ್ತ್ರಧಾರಿಯಾಗಿರುತ್ತಿದ್ದ ಡಾ. ಸುಂದಕ ಮನಸ್ಸು ಅವರು ಧರಿಸುವ ಬಟ್ಟೆಯಷ್ಟೇ ಶುಭ್ರವಾಗಿರುತ್ತಿತ್ತು. ಹಣೆಯ ಮೇಲೆ ಢಾಳ ವಿಭೂತಿ ಬೇರೆ. ಕನ್ನಡಪ್ರಭ ಪತ್ರಿಕೆಯ ರಾಜ್ಯ ಮಟ್ಟದ ಪುರವಣಿಗೆ ನಾನು ಇವರ ಬಗ್ಗೆ ಬರೆಯಲು ಹೋದಾಗ ನಮ್ಮಿಬ್ಬರ ನಡುವೆ ಸಮಯ ಕಳೆದದ್ದೆ ಗೊತ್ತಾಗಲಿಲ್ಲ. ತಮ್ಮ ಹಣೆಯ ವಿಭೂತಿ ಬಗೆಗಿದ್ದ ಬಲು ಸ್ವಾರಸ್ಯಕರ ಸಂಗತಿಯೊಂದನ್ನ ಡಾ. ಸುಂಕದ ಹೇಳಿದ್ದರು.

70 ರ ದಶಕದಲ್ಲಿ ಕುಟುಂಬ ಯೋಜನೆ ಶಸ್ತ್ರ ಚಿಕಿತ್ಸೆಯೇ ಅಪರೂಪದ್ದಾಗಿತ್ತು. ದರಲ್ಲೂ ಲೆಪೆÇ್ರೀಸ್ಕೋಪಿಕ್ ಶಸ್ತ್ರಚಿಕಿತ್ಸೆ ಇನ್ನೂ ವಿರಳವಾಗಿತ್ತು. ಇವೆರಡರಲ್ಲೂ ಎತ್ತಿದ ಕೈಯಾಗಿದ್ದವರು ಡಾ. ಸುಂಕದ. ಒಂದೇ ದಿನ ಶಹಾಪುರದ ಸರಕಾರಿ ಆಸ್ಪತ್ರೆಯಲ್ಲಿ ಸತತ 8 ತಾಸಿನಲ್ಲಿ 201 ಶಸ್ತ್ರಚಿಕಿತ್ಸೆ ಮಾಡಿ ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸನಲ್ಲಿ ದಾಖಲೆ ಬರೆದವರು ಸುಂಕದ. ಈ ಶಿಬಿರದಲ್ಲಿ ಇವರು ಆಪರೇಷನ್ ದಿರಿಸು ತೊಟ್ಟು ಒಳಗೆ ಹೋದರೆ ಅಲ್ಲಿದ್ದ ಮಹಿಳೆಯರೆಲ್ಲರ ಮೊಗದಲ್ಲಿ ದುಗುಡ ಕಂಡು ಡಾ. ಸುಂಕದ ಗಾಬರಿಯಾದರಂತೆ. ಯಾಕೆ ಹೀಗೆ? ಎಂದು ಕೇಳಿದಾಗ ಆಪರೇಷನ್‍ಗೆಂದು ಬಂದು ಸೇರಿದ್ದ ನೂರಾರು ಮಹಿಳೆಯರು ಏನೆಂದು ಹೇಳಿದರು ಗೊತ್ತೆ? ಹಣಿ ಮ್ಯಾಗ ವಿಭೂತಿ ಹಚ್ಕೊಂಡೋರು ಡಾಗ್ದರ್ ಇದ್ರಷ್ಟೇ ನಾವು ಆಪರೇಷನ್ ಮಾಡ್ಸಕೋಂತೀವಿ, ಇಲ್ಲಾಂದ ನಾವು ಮನಿಗೆ ಹೋಗ್ತೀವಿ ಅಂತ ಗುಡುಗಿದಾಗ, ಮುಖಕ್ಕೆ ಮಾಸ್ಕ್ ಧರಿಸಿ, ಕೈಗೆಲ್ಲಾ ಕೈಗವಸು ತೊಟ್ಟು ಆಪರೇಷನ್ ದಿರಿಸಲ್ಲಿದ್ದ ಡಾ. ಸುಂಕದ ತಮ್ಮ ಮುಖದ ಮಾಸ್ಕ್ ತೆರೆದು ನೋರ್ಡಲ್ಲಿ ನಾನೇ ಇದ್ದಿನ್ರವ್ವಾ… ಎಂದು ಹಣೆಯ ಮೇಲಿನ ವಿಭೂತಿ ತೋರಿಸಿಸಬೇಕಾಯ್ತಂತೆ! ಇಷ್ಟೊಂದು ಜನಪ್ರೀಯತೆ ಆ ವಿಭೂತಿ ಇವರಿಗೆ ತಂದುಕೊಟ್ಟಿತ್ತು. ಸದಾ ವಿಭೂತಿ ಧರಿಸಿಕೊಂಡೇ ಇರುತ್ತಿದ್ದ ಡಾ. ಸುಂಕದ ಅವರಿಗೆ ಹಳ್ಳಿಗಾಡಲ್ಲಿನ ಜನರಂತೂ ವಿಭೂತಿ ಡಾಕ್ಟರ್ ಅಂತಲೇ ಕರೆಯುತ್ತಿದ್ದರಂತೆ!

ಆರೋಗ್ಯ ಇಲಾಖೆಯ ರಾಜ್ಯ ಮಟ್ಟದ ಹುದ್ದೆಯವರೆಗೂ ತಲುಪಿ ನಿವೃತ್ತರಾದ ಡಾ. ಸುಂಕದ ತಮ್ಮಲ್ಲಿನ ವೈದ್ಯ ಎಂದು ಕೆಲಸವಿಲ್ಲದೆ ಸೋಮಾರಿಯಾಗಿ ಕುಳಿತುಕೊಳ್ಳುವಂತೆ ಮಾಡಿದವರಲ್ಲ. ನಿವೃತ್ತರಾದರೂ ಇಲ್ಲಿನ ಬಸವೇಶ್ವರ ಆಸ್ಪತ್ರೆಯಲ್ಲಿ ಬಂದು ಫ್ಯಾಮಿಲಿ ಪ್ಯಾನಿಂಗ್ ಆಪರೇಷನ್‍ಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅನೇಕ ಸಿಬಿರಗಳಲ್ಲಿ ಸ್ವಯಂ ಆಸಕ್ತಿಯಿಂದ ಬಂದು ಕೆಲಸ ಮಾಡುತ್ತಿದ್ದರು. ಅಲ್ಲಲ್ಲಿ ಕಂಡಾಗ ನಗುತ್ತಲೇ ನಮಗೆಲ್ಲ ಶುಭ ಕೋರುವವರು.

‘ಕನ್ನಡಪ್ರಭ’ದಲ್ಲಿ ಕಲಬುರಗಿಯ ವಿಭೂತಿ ವೈದ್ಯ ಶಿರೋನಾಮೆಯಡಿಯಲ್ಲೇ ತಮ್ಮ ಕುರಿತಾಗಿ ಜುಲೈ 1 ರ ವೈದ್ಯರ ದಿನದಂದು ಮೂಡಿಬಂದ ಲೇಖನ ಓದಿದ ನಂತರ ತಕ್ಷಣ ಕರೆ ಮಾಡಿ ನನಗೆ ‘ಏನ್ರಿ ಅವಧಾನಿ ನನಗೆ ವಿಭೂತಿ ಡಾಕ್ಟರ್ ಮಾಡಿಬಿಟ್ರಿ, ರಾಜ್ಯಾದ್ಯಂತ ನನ್ನ ಅಭಿಮಾನಿಗಳು, ಶಿಷ್ಟರು, ಸಹೋದ್ಯೋಗಿಗಲೆಲ್ಲ ಕರೆ ಮಾಡಿ ಶುಭ ಕೋರಿದ್ರು, ನಿಮ್ಮ ಅಭಿಮಾನಕ್ಕ ಧನ್ಯವಾದಗಳು’ ಸುಂಕದ ಸರ್ ವಿನೀತರಾಗಿ ಹೇಳಿದ್ದನ್ನ ಮರೆಯಲಾಗದು.

——
ಬಿಗ್ ಬಿ ಅಮೀತಾಬ್ ಬಚ್ಚನ್ ಕರೆ ಮಾಡಿದ್ದರಂತೆ!

ಡಾ. ಸುಂಕದ ಅಮೀತಾಬ್ ಬಚ್ಚನ್ ಅಭಿಮಾನಿಯಾಗಿದ್ದರು. ತಮ್ಮ ಕುಟುಂಬ ಕಲ್ಯಾಣ ಶಸ್ತ್ರಕ್ರಿಯೆಗಳ ದಾಖಲೆ ಕಂಡು ಅಮೀತಾಬ್ ಬಚ್ಚನ್ ಅವರೇ ಕರೆ ಮಾಡಿ ಮೆಚ್ಚುಗೆ ಸೂಚಿಸಿದ್ದ ಕ್ಷಣವನ್ನ ಡಾ. ಸುಂಕದ ಸದಾ ಸ್ಮರಿಸುತ್ತಿದ್ದರು.

ತಮ್ಮ ಹುಟ್ಟು ಹಬ್ಬದ ದಿನ ಸಮಾಜಕ್ಕೆ ಒಳಿತಾಗೋದನ್ನ ಮಾಡುತ್ತಿರೋರರಿಗೆ ತಾವೇ ನೇರವಾಗಿ ಕರೆ ಮಾಡಿ ಅಭಿನಂದಿಸೋದು ಅಮೀತಾಬ್ ಬಚ್ಚನ್ ಹೊಂದಿದ್ದ ಸತ್ಸಂಪ್ರದಾಯವಾಗಿತ್ತು. ಆ ಸಂಪ್ರದಾಯದಲ್ಲಿ ಸುಂಕದ ಸಾಧನೆ ಅಮೀತಾಬ್ ಗಮನ ಸೆಳೆದಿತ್ತು.

ಇವರ ಅದೃಷ್ಟ ನೋಡಿ, ಯಾರನ್ನ ಇವರು ಅಭಿಮಾನದಿಂದ, ರೋಲ್ ಮಾಡೆಲ್ ಎಂದು ಕಾಣುತ್ತಿದ್ದರೋ, ಯಾರನ್ನ ತುಂಬ ಮೆಚ್ಚಿಕೊಂಡು ಬೀಗುತ್ತಿದ್ದರೋ ಅವರೇ ಇವರಿಗೆ ಕರೆ ಮಾಡಿ ಶುಭ ಕೋರಿದ್ದಲ್ಲದೆ ಈ ಜನ್ಮದಲ್ಲಿ ನನಗಂತೂ ಹಳ್ಳಿಗಾಡು ಸುತ್ತಿ ಅಲ್ಲೆಲ್ಲಾ ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ ಮಾಡೋ ಯೋಗಾಯೋಗವಂತೂ ಇಲ್ಲ, ನಿಮ್ಮ ಕೆಲಸಕ್ಕೆ ನನ್ನದೊಂದು ಬಿಗ್ ಸೆಲ್ಯೂಟ್ ಎಂದು ಅಮಿತಾಬ್ ಬಚ್ಚನ್ ಹೇಳಿದ್ದರೆಂದು ಸುಂಕದ ಪುಲಕಿತಗೊಂಡು ಹೇಳುತ್ತಿದ್ದರು. ಇದು ನಿಜಕ್ಕೂ ನೃಪತುಂಗನ ನೆಲ ಕಲಬುರಗಿಯ ಹೆಮ್ಮೆಯಲ್ಲದೆ ಮತ್ತೇನು?
——
ಹಡೆದವ್ವನ ಹಂಬಲದಂತೆ ವೈದ್ಯನಾದವರು

ಡಾ. ಸುಂಕದ ಹುಟ್ಟಿದ್ದು 01.01.1944, ಚಿಂಚೋಳಿಯಲ್ಲಿ. ತಂದೆ ಬಸವಣಪ್ಪ, ತಾಯಿ ಶಾಂತಾಬಾಯಿ. 75 ವರ್ಷದ ಇಳಿವಯಸ್ಸಿನವರೆಗೂ ಅವಿರತ ವೈದ್ಯಕೀಯ ಸೇವೆ ಮಾಡಿದವರು. ಇವರ ನಿರಂತರ ಸೇವಾ ಕೈಂಕರ್ಯದ ಹಿಂದಿತ್ತು ಇವರ ಹಡೆದವ್ವನ ಪ್ರೇರಣೆ. ಚಿಂಚೋಳ್ಯಾಗ ನಮ್ಮವ್ವ ಅನಾರೋಗ್ಯ ಕಾಡಿದಾಗ ದೂರದ ಝಹೀರಾಬಾದ್ ದವಾಖಾನಿಗೆ ಕರೆದೋಯ್ದಿದ್ರು ನಮ್ಮಪ್ಪ. ಅಲ್ಲಿನ ಡಾಕ್ಟರ್ ನಮ್ಮವ್ವನ ಯೋಗಕ್ಷೇಮ ವಿಚಾರಿಸಿ ಆಡಿದ ಮಾತುಗಳು, ನೀಡಿದ ಸಲಹೆಗಳೇ ನಮ್ಮವ್ವಗ ತನ್ನ ಮಗನನ್ನ ಡಾಕ್ಟರ್ ಮಾಡಬೇಕು ಅನ್ನೋವ್ಹಂಗ ಆಯ್ತು. ಯಾವ ಜಾಗದಾಗ ಯಾರೊಬ್ಬರೂ ಡಾಕ್ಟರ್ ಇಲ್ಲವೋ ಅಂಥಲ್ಲಿ ನೀ ಡಾಕ್ಟರ್ ಆಗಿ ಕೆಲ್ಸ್ ಮಾಡು, ಅದ್ಕೇ ನೀ ಡಾಕ್ಟರ್ ಕೋರ್ಸ್ ಕಲಿಯಪ್ಪ ಎಂದ ಅವ್ವನ ಮಾತಿನಂತೆಯೇ ಸುಂಕದ ನಿಷ್ಠೆಯಿಂದ ಓದಿದವರು. ನಮ್ಮಪ್ಪ ನನಗ ಕುಟುಂಬದ ಬಿಸಿನೆಸ್ ಬಟ್ಟಿ ದುಕಾನದಾಗ್ ಕೂಡಸ್ಲಿಕ್ಕಿ ಸಿದ್ಧನಾಗಿದ್ದರೂ ಅವ್ವ ತನ್ನ ಹಠ ಬಿಡಲಿಲ್ಲ. ನನಗ ಕಲಬುರಗಿಯಾಗ ಇಟ್ಟು ರಾಂಪೂರೆ ಕಾಲೇಜಿನಾಗ ಎಬಿಬಿಎಸ್ ಮುಗಿಸಿದೆ. ವೈದ್ಯನಾಗಿ ಸೇವೆ ಮಾಡುತ್ತಲೇ ಹುಬ್ಬಳ್ಳಿ ಕಿಮ್ಸ್‍ನಾಗ ಸ್ತ್ರೀರೋಗ ತಜ್ಞ ಸ್ನಾತಕೋತ್ತರ ಪದವಿಧರನಾದೆ. ಸರಕಾರಿ ಸೇವೆಯಲ್ಲಿದ್ದರೂ ನನ್ನಲ್ಲಿನ ವೈದ್ಯ ಸದಾ ಜಾಗೃತನಾಗಿರುವಂತೆ ನೋಡಿಕೊಂಡೆ ಎಂದು ಮಾತಿಗೆ ಕುಂತಾಗೆಲ್ಲಾ ಡಾ. ಸುಂಕದ ಧನ್ಯತೆಯ ಭಾವದಿಂದ ಈ ಮಾತುಗಳನ್ನ ಮೆಲಕು ಹಾಕುತ್ತಿದ್ದರು. ತಾಯಿ ಹಂಬಲದಂತೆಯೇ ವೈದ್ಯನಾಗಿ ಹಳ್ಳಿ ಗಾಡಲ್ಲೇ ಜನರ ಸೇವೆ ಮಾಡಿರೋದು ಡಾ. ಸುಂಕದ ಅವರ ಜೀವಮಾನದ ಅತ್ಯಂತ ಶ್ರೇಷ್ಠ ಸಾಧನೆ ಎನ್ನಬಹುದು.
—–
ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕೆಲಸವಾಗಲೇ ಇಲ್ಲ

ಕಲಬುರಗಿ ಭಾಗದಲ್ಲಿರುವ ಸಾಧಕರ ಮಟ್ಟಿಗೆ ಇದನ್ನ ದುರಂತ ಎಂದೇ ಹೇಳಬೇಕು. ಇಲ್ಲಿ ಮಹಾನ್ ಸಾಧಕರಿಗೆ ಕೊರತೆ ಇಲ್ಲ, ಆದರೆ ಅಂತಹ ಸಾಧಕರಿಗೆ ಗುರುತಿಸಿ ಗೌರವಿಸುವ ಮನಸ್ಸುಗಳಇಗೆ ಕೊರತೆ ತುಂಬಾ ಇದೆ. ಕುಟುಂಬ ಕಲ್ಯಾಣ ರಂಗದಲ್ಲಿನ ಅಪ್ರತಿಮ ಸಾಧನೆ ಡಾ. ಸುಂಕದ ಮಾಡಿದ್ದರೂ ಇವರಿಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗೌರವಿಸುವ ಕೆಲಸವಾಗಲೇ ಇಲ್ಲ. ಈ ಕೊರಗು ಅವರಲ್ಲೂ ಇತ್ತು ಎಂಬುದು ಕೊನೆಗೆ ಅವರನ್ನು ಕಂಡಾಗ ಅವರ ಮಾತಲ್ಲಿ ಕಂಡು ಬಂತು. ಸಾಧಕನೊಬ್ಬನಿಗೆ ಅಂತಹ ಆಶೆ, ಅಭಿಲಾಷೆ ಇರಲೇಬೇಕು, ಹಾಗಂತ ಅವರೇ ಅದನ್ನ ಬಾಯಿಬಿಟ್ಟು ಹೇಳುವಂತಾಗಬಾರದು, ಹಾಗೇ ಯಾರು ಬಯಸಲೂಬಾರದು. ಇವರ ಸೇವೆ ಗೊತ್ತಿದ್ದರೂ ಗೊತ್ತಿಲ್ಲದವರಂತೆ ಜಾಣ ಕುರುಡಾಗುವ, ಸರಕಾರದ ಹಂತದಲ್ಲಿದ್ದರೂ ಇಂತಹವರ ಸೇವೆಗೆ ಪುರಸ್ಕಾರ ನೀಡುವ ತಾಕತ್ತಿದ್ದರೂ ಅದನ್ನು ನಮ್ಮ ಸಾಧಕರಿಗಾಗಿ ಬಳಸದ ನಮ್ಮವರ ದರ್ಪದ ಧೋರಣೆಗೆ ಏನೆನ್ನಬೇಕೋ ಗೊತ್ತಾಗುತ್ತಿಲ್ಲ. ಪುರಸ್ಕಾರಗಳಿಗಾಗಿ ಯಾರೂ ಸಾಧನೆ ಮಾಡೋದಿಲ್ಲವೆಂಬುದು ನಿಜವಾದರೂ ಸಾಧಕನಿಗೆ ಪುರಸ್ಕಾರಗಳು ತಾನೇ ಅರಸಿ ಬಂದಾಗ ಆತನಿಗಾಗುವ ಸಂತೋಷಕ್ಕೆ ಪಾರವೇ ಇರೋದಿಲ್ಲ. ಒಳ್ಳೆಯ ಮಾತುಗಳು, ಬೆನ್ನು ತಟ್ಟುವುದು, ಗೌರವ- ಪುರಸ್ಕಾರ ನೀಡೋದು ಬಿಟ್ಟರೆ ಸಾಧನೆಗೆ ಪ್ರತಿಯಾಗಿ ಸಾಧಕರಿಗೆ ಸಮಾಜ, ಸರಕಾರ, ನಾವೆಲ್ಲರೂ ಇನ್ನೇನು ಕೊಡಲು ಸಾಧ್ಯ ಹೇಳಿ ನೋಡೋ?


ಡಾ. ಶಾಂತವೀರ ಸುಂಕದ ಅಂದರೆ….
1) ಹುಟ್ಟಿದ್ದು 01.01.1944, ಚಿಂಚೋಳಿಯಲ್ಲಿ. ತಂದೆ ಬಸವಣಪ್ಪ, ತಾಯಿ ಶಾಂತಾಬಾಯಿ.
2) ದಾಖಲೆಯ 2, 18, 778 ಉದರ ದರ್ಶಕ ಶಸ್ತ್ರ ಚಿಕಿತ್ಸೆ ಮಾಡಿದವರು
3) ಒಂದೇ ದಿನ ಶಹಾಪುರದ ಸರಕಾರಿ ಆಸ್ಪತ್ರೆಯಲ್ಲಿ ಸತತ 8 ತಾಸಿನಲ್ಲಿ 201 ಶಸ್ತ್ರಚಿಕಿತ್ಸೆ: ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸನಲ್ಲಿ ದಾಖಲೆ
4) ಕನ್ನಡ ಸಾಹಿತ್ಯ ಪ್ರೇಮಿ, ಬೀಚೀ ಸಾಹಿತ್ಯಕ್ಕೆ ಮಾರುಹೋದ ವೈದ್ಯ
5) ಉಪನ್ಯಾಸಕನಾಗಬೇಕಾಗಿದ್ದವರು ವೈದ್ಯಸೇವೆಗಳಲ್ಲಿ ತೊಡಗಿಸಿಕೊಂqವÀರು.
6) ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡು ಜನಮನ ಸೆಳೆದವರು
7) ಒಂದೇ ದಿನದಲ್ಲಿ ವಿವಿಧ ಆರು ಆಸ್ಪತ್ರೆಗಳಲ್ಲಿ ಏರ್ಪಡಿಸಿದ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ 76 ಶಸ್ತ್ರಚಿಕಿತ್ಸೆ
8) 27.12.1977 ರಲ್ಲಿ ಬೀದರ ಜಿಲ್ಲೆಯ ಭಾಲ್ಕಿಯಲ್ಲಿ ಇವರನ್ನೊಳಗೊಂಡ 40 ವೈದ್ಯರ ತಂಡ ಒಂದೇ ದಿನದಲ್ಲಿ 1001 ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿದ್ದು ಆಗ ಬಿಬಿಸಿ ಲಂಡನ್‍ನಲ್ಲಿ ಪ್ರಸಾರ
9) ಅಮ್ಮ ಪ್ರಶಸ್ತಿ, ವೈದ್ಯಶ್ರೀ, ವೈದ್ಯವಿಭೂಷಣ ಪ್ರಶಸ್ತಿ ವಿಜೇತ, ಚಿಂಚೋಳಿ ಶರಣ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪಟ್ಟ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನ
10) ಉಪಶಸ್ತ್ರ ತಜÐ, ಜಿಲ್ಲಾ ವೈದ್ಯಾಧಿಕಾರಿ, ರಾಜ್ಯ ಆರೋಗ್ಯ ಸಹ ನಿರ್ದೇಶಕ ಹುದ್ದೆ ಅಲಂಕೃತರು
11) 75 ವರ್ಷದ ಇಳಿವಯಸ್ಸಿನವರೆಗೂ ಅವಿರತ ವೈದ್ಯಕೀಯ ಸೇವೆ
12) ಗ್ರಾಮೀಣ ಮಟ್ಟದ ಮಹಿಳೆಯರಲ್ಲಿ ಆರೋಗ್ಯ ಸಂಬಂಧಿತ, ಅದರಲ್ಲೂ ಕುಟುಂಬ ಶಸ್ತ್ರಕ್ರಿಯೆ ಸಂಬಂಧಿತವಾಗಿ ಜಾಗೃತಿಯಲ್ಲಿ ಮುಂಚೂಣಿಯಲ್ಲಿದ್ದವರು
13) 1/1/2016 ವರೆಗೆ ಗ್ರಾಮೀಣ ಮಟ್ಟದಲ್ಲಿ ಒಟ್ಟು 5002 ಶಿಬಿರಗಳಲ್ಲಿ ಪಾಲ್ಗೊಂಡು ದಾಖಲೆಯ 218778 ಉದರ ದರ್ಶಕ ಶಸ್ತ್ರಚಿಕಿತ್ಸೆ ಮಾಡಿದ ಸಾಧನೆ
14) ಕೊನೆಯುಸಿರು ಇರುವವರೆಗೂ ಶಾಂತಾದೇವಿ ಬಸವಣ್ಣಪ್ಪ ಸ್ಮಾರಕ, ಅಶ್ವಿನಿ ಹೆರಿಗೆ, ಬಂಜೆತನ ನಿವಾರಣೆ,ಕುಟುಂಬ ಕಲ್ಯಾಣ ಹಾಗು ಉದರ ದರ್ಶಕ ಶಸ್ತ್ರ ಚಿಕಿತ್ಸಾ ಕೇಂದ್ರ್ರ ಸೇಡಂನಲ್ಲಿ ಜನಸೇವೆ.

೦. ಶೇಷಮೂರ್ತಿ ಅವಧಾನಿ, ಕಲಬುರ್ಗಿ

 

One thought on “ಶರಣ ಪ್ರೇಮಿ ಡಾ.ಶಾಂತವೀರ ಸುಂಕದರನ್ನು ಹುಡುಕುವುದೆಲ್ಲಿ ?

  1. Great personality.
    Our heartfelt appreciations.
    Because of such great personalities
    our country is looked upon great.
    Our heartfelt salutations for the great soul.

Leave a Reply

Your email address will not be published. Required fields are marked *

error: Content is protected !!