ಕರೆಯದೆ ಬಂದುದ, ಹೇಳದೆ ಹೋದುದನಾರೂ ಅರಿಯರಲ್ಲಾ


ವಚನ ಸಾರ

ಕರೆಯದೆ ಬಂದುದ, ಹೇಳದೆ ಹೋದುದನಾರೂ ಅರಿಯರಲ್ಲಾ.
ಅಂದಂದಿಂಗೆ ಬಂದ ಪ್ರಾಣಿಗಳು, ಆರೂ ಅರಿಯರಲ್ಲಾ.
ಗುಹೇಶ್ವರನೆಂಬ ಲಿಂಗವು ಉಣ್ಣದೆ ಹೋದುದನಾರೂ ಅರಿಯರಲ್ಲಾ!

ಅಲ್ಲಮಪ್ರಭುದೇವರು

‘ಕರೀದೆ ಬಂದೆ’, ‘ಹೇಳದೇ ಹೋದೆ’ ಎಂಬ ಸಾಮಾನ್ಯ ನುಡಿಗಟ್ಟುಗಳನ್ನು ಬಳಸಿಕೊಂಡು ಅಲ್ಲಮಪ್ರಭುದೇವರು ಹುಟ್ಟುಸಾವಿನ ಕುರಿತಾದ ಮತ್ತು ಹುಟ್ಟು ಸಾವುಗಳಿಗೆ ಕಾರಣನಾದ ಗುಹೇಶ್ವರನ ಕುರಿತಾದ ನಮ್ಮ ಅಜ್ಞಾನವನ್ನು ತಿಳಿಸುತ್ತಿದ್ದಾರೆ. ಕರೆಯದೇ ಬರುವುದು ಹುಟ್ಚು: ನಾವಾರೂ ಆಹ್ವಾನ ಪತ್ರಿಕೆ ಪಡೆದು ಹುಟ್ಟಿ ಬಂದಿಲ್ಲ! ಹೇಳದೇ ಹೋಗುವುದು ಸಾವು: ನಾವಾರೂ ಇಂಥದ್ದೇ ಸಮಯಕ್ಕೆ ಸಾಯುತ್ತೇವೆ ಎಂದು ಹೇಳಲಾರೆವು! ನಾವಷ್ಟೇ ಅಲ್ಲ ಈ ಸಂಗತಿ ಭೂಮಿಯಮೇಲೆ ಕಾಲ ಕಾಲಕ್ಕೆ ಹುಟ್ಟಿಬಂದ ಯಾವ ಜೀವಿಗಳೂ ಹೇಳಲಾರವು. ಇದರ ಅರಿವಿಲ್ಲದ ನಮ್ಮ ವರ್ತನೆಗಳು ನಾನು ಹುಟ್ಟಿದ್ದೇ ಬಹು ದೊಡ್ಡದೆಂಬಂತೆ ಮತ್ತು ಇಲ್ಲಿ ನಾನು ಶಾಶ್ವತವಾಗಿರುತ್ತೇನೆ ಎಂಬಂತಿರುತ್ತವೆ. ಅದು ಸರಿಯಲ್ಲ. ಇಷ್ಟು ಸಮಸ್ತದ ಸೃಷ್ಠಿ, ಸ್ಥಿತಿ, ಲಯಗಳಿಗೆ ಕಾರಣನಾದ ಗುಹೇಶ್ವರನು ತಾನು ಯಾವುದಕ್ಕೂ ಒಳಗಾಗದೇ ನಿರ್ಲಿಪ್ತನಾಗಿ, ನಿರ್ಲೇಪನಾಗಿ, ಯಾವುದನ್ನೂ ಉಣ್ಣದೆ ಇರುವುದನ್ನು ಅರಿಯಬೇಕು. ಅದನ್ನು ಅರಿತರೆ ನಾವು ಗುಹೇಶ್ವರರೇ ಆಗಬಹುದು!

ಡಾ.ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ , ಬಸವಕೇಂದ್ರ, ಶಿವಮೊಗ್ಗ.
ಬಸವ ಮಂದಿರ, ಚಿಕ್ಕಮಗಳೂರು.

Leave a Reply

Your email address will not be published. Required fields are marked *

error: Content is protected !!