ದಿಲ್ಲಿಯಲ್ಲಿ ಸುರುಳಿ ಬಿಚ್ಚಿದವೇ ಗುಜರಾತ್ ಗಲಭೆ ?

೦ : ಡಿ.ಉಮಾಪತಿ

ಬಡಿಗೆಗಳು, ಖಡ್ಗಗಳು, ಪೆಟ್ರೋಲ್ ಬಾಂಬ್ ಹಿಡಿದ ಪುಂಡು ಹುಡುಗರ ಗುಂಪುಗಳು ಬೀದಿ ಬೀದಿಗಳಲ್ಲಿ ಠಳಾಯಿಸಿವೆ

ನೈಋತ್ಯ ದೆಹಲಿ ಮೂರು ದಿನಗಳಿಂದ ಹೊತ್ತಿ ಉರಿಯತೊಡಗಿದೆ. ವಿಶೇಷವಾಗಿ ಅಲ್ಪಸಂಖ್ಯಾತರು ಭಯಭೀತರಾಗಿದ್ದಾರೆ. ಸುರಕ್ಷತೆ ಅರಸಿ ಪಲಾಯನ ಮಾಡತೊಡಗಿದ್ದಾರೆ. ೧೯೮೪ರ ದೆಹಲಿಯ ಸಿಖ್ ವಿರೋಧಿ ನರಮೇಧ ಮತ್ತು ೨೦೦೨ರ ಗುಜರಾತ್ ನರಮೇಧಗಳು ರಾಜಧಾನಿಯಲ್ಲಿ ಸುರುಳಿ ಬಿಚ್ಚತೊಡಗಿವೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ ಗಲಭೆಗೆ ಬಲಿಯಾಗಿರುವ ಜೀವಗಳು ಇಪ್ಪತ್ತು. ಖಚಿತಪಡಿಸಲಾಗದ ವರದಿಗಳು ಈ ಸಂಖ್ಯೆ ಇನ್ನೂ ಹೆಚ್ಚು ಎಂದಿವೆ.

ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ರತನ್ ಲಾಲ್, ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿ ಅಂಕಿತ್ ಶರ್ಮ ಗುಂಡೇಟು ಮತ್ತು ಕಲ್ಲೇಟುಗಳಿಗೆ ಬಲಿಯಾಗಿದ್ದಾರೆ. ಇಪ್ಪತ್ತೆರಡು ಅರೆಸೇನಾ ಪಡೆಗಳ ಕಂಪನಿಗಳೂ ಸೇರಿದಂತೆ ಒಟ್ಟು ೪೦೦೦ದಷ್ಟು ಭಾರೀ ಸಂಖ್ಯೆಯ ಪೊಲೀಸ್ ಬಲ ಗಲಭೆಗಳನ್ನು ನಿಯಂತ್ರಿಸಲು ವಿಫಲವಾಗಿದೆ.
ಬಡಿಗೆಗಳು, ಕಬ್ಬಿಣದ ಸರಳುಗಳು, ಲೋಹದ ಕೊಳವೆಗಳು, ಖಡ್ಗಗಳು, ಡೀಸೆಲ್ -ಪೆಟ್ರೋಲ್ ತುಂಬಿದ ಬಾಟಲಿಗಳನ್ನು ಹಿಡಿದ ಪುಂಡು ಹುಡುಗರ ಗುಂಪುಗಳು ಬೀದಿ ಬೀದಿಗಳಲ್ಲಿ ಠಳಾಯಿಸಿವೆ. ಮುಸುಕುಧಾರಿ ಪುಂಡರ ಗುಂಪುಗಳು ಕಂಡ ಕಂಡ ಮುಸ್ಲಿಮ್ ಮನೆಗಳು, ಅಂಗಡಿಗಳಿಗೆ ಬೆಂಕಿ ಇಟ್ಟಿವೆ. ಪೆಟ್ರೋಲ್ ಬಾಂಬುಗಳನ್ನು ಕಬೀರ ನಗರದ ಮುಸ್ಲಿಮ್ ಮನೆಗಳೊಳಕ್ಕೆ ಬೀಸಿ ಎಸೆದಿವೆ. ಈ ಕೃತ್ಯಗಳಿಗೆ ಪೊಲೀಸರು ಕುಮ್ಮಕ್ಕು ನೀಡಿರುವ ಘಟನೆಗಳಿವೆ. ಗಲಭೆಕೋರರು ಮತ್ತು ಪೊಲೀಸರು ಇಬ್ಬರೂ ಕೂಡಿಯೇ ದಾಳಿ ನಡೆಸಿರುವ ನಿದರ್ಶನಗಳೂ ಉಂಟು. ಪೊಲೀಸರೇ ಮುಂದೆ ನಿಂತು ಕಲ್ಲುಗಳು ಮತ್ತು ಇಟ್ಟಿಗೆಗಳನ್ನು ಕೂಡಿ ಹಾಕಿಸಿದ್ದಾರೆ. ಹಲ್ಲೆಯಲ್ಲಿ ಗಾಯಗೊಂಡು ನೆಲಕ್ಕೆ ಬಿದ್ದ ರಕ್ತಸಿಕ್ತ ಬಟ್ಟೆಗಳ ಮುಸ್ಲಿಮ್ ಯುವಕರನ್ನು ಪುನಃ ಲಾಠಿಗಳಿಂದ ತಿವಿದು, ಬಾರಿಸಿ ಆಜಾದೀ ಬೇಕೇ ಎಂದು ಕೇಳಿದ ಪೊಲೀಸರು ರಾಷ್ಟ್ರಗೀತೆಯನ್ನು ಈ ಯುವಕರಿಂದ ಹಾಡಿಸಿ ಫೋನಿನಲ್ಲಿ ಚಿತ್ರೀಕರಿಸಿದ್ದಾರೆ. ದಿಲ್ಲಿ ಪೊಲೀಸ್ ಜಿಂದಾಬಾದ್, ಮುಸಲ್ಮಾನೋಂ ಕೋ ದಂಡಾ ಮಾರೋ, ಹಮ್ ತುಮ್ಹಾರೇ ಸಾಥ್ ಹೈ ಎಂಬ ಘೋಷಣೆಗಳನ್ನು ಗಲಭೆಕೋರರು ಕೂಗಿದ್ದಾರೆ. ಕೇಂದ್ರ ಹಣಕಾಸು ರಾಜ್ಯಮಂತ್ರಿ ಅನುರಾಗ್ ಠಾಕೂರ್ ಅವರು ಚುನಾವಣಾ ಪ್ರಚಾರ ಸಭೆಯಲ್ಲಿ ಜನರಿಂದ ಕೂಗಿಸಿದ್ದ ಗೋಲೀ ಮಾರೋ ಸಾಲೋಂ ಕೋ, ದೇಶ್ ಕೇ ಗದ್ದಾರೋಂ ಕೋ ಘೋಷಣೆ ಈ ಗಲಭೆಗಳಲ್ಲಿ ಪುನಃ ಅನುರಣಿಸಿದೆ. ಅಶೋಕನಗರದ ಮಸೀದಿಯೊಂದಕ್ಕೆ ಬೆಂಕಿ ಇಟ್ಟು ಅದರ ಮೇಲೆ ಹನುಮಾನ್ ಬಾವುಟ ಹಾರಿಸಲಾಗಿದೆ. ಹಲವೆಡೆಗಳಲ್ಲಿ ಪೊಲೀಸರ ಸುಳಿವೇ ಇರಲಿಲ್ಲ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.
ಈ ಮಸೀದಿಯ ಹೊರಗೆ ಬೀದಿಯಲ್ಲಿ ಚೆಲ್ಲಿದ ಕುರಾನಿನ ಹಾಳೆಗಳನ್ನು ಹಿಂದೂ ಮತ್ತು ಮುಸಲ್ಮಾನರಿಬ್ಬರೂ ಕೂಡಿ ಹೆಕ್ಕುವ, ಭಯಭೀತ ಮುಸಲ್ಮಾನರಿಗೆ ಗುರುದ್ವಾರದ ಬಾಗಿಲುಗಳನ್ನು ತೆರೆದಿರುವ, ಮುಸಲ್ಮಾನ ಕುಟುಂಬಗಳನ್ನು ತಮ್ಮ ಮನೆಗಳಲ್ಲಿಟ್ಟು ರಕ್ಷಿಸಿದ ಹಿಂದೂಗಳ ಸಹಬಾಳ್ವೆಯ ನಿದರ್ಶನಗಳೂ ಈ ವಿಕೃತಿಯ ನಡುವೆ ವರದಿಯಾಗಿವೆ.

ನೈಋತ್ಯ ದೆಹಲಿಯ ಆಸ್ಪತ್ರೆಗಳಲ್ಲಿ ಹರಿದ ದುಃಖದ ಕಡಲಿಗೆ ಹಿಂದೂ ಮುಸ್ಲಿಂ ಭೇದ ಭಾವವಿಲ್ಲ. ದಿನಸಿ ತರಲು ಮನೆಯಿಂದ ಹೊರಬಿದ್ದಿದ್ದ ೨೬ ವರ್ಷದ ರಾಹುಲ್ ಸೋಲಂಕಿಯ ಕುತ್ತಿಗೆಯನ್ನು ತೂರಿದ ಗುಂಡು ಆತನ ಉಸಿರನ್ನೇ ಕಸಿದಿದೆ. ಆತನ ಬಂಧುಗಳು ಪ್ರಚೋದಕ ಭಾಷಣ ಮಾಡಿದ್ದ ಬಿಜೆಪಿಯ ಮುಖಂಡ ಕಪಿಲ್ ಮಿಶ್ರಾನನ್ನು ದೂರಿದ್ದಾರೆ.

ಇಡೀ ಈಶಾನ್ಯ ದೆಹಲಿಯನ್ನು ಕಬಳಿಸಿರುವ ದೆಹಲಿ ಗಲಭೆಗಳ ಕಂಪನ ಕೇಂದ್ರ ಮೌಜ್ಪುರ್-ಜಾಫ್ರಾಬಾದ್ ರಸ್ತೆ. ಹಿಂದು- ಮುಸ್ಲಿಂ ಜನಸಂಖ್ಯೆಯನ್ನು ಭೌಗೋಳಿಕವಾಗಿ ವಿಭಾಗಿಸುವ ಗಡಿ ಶಹಾದರಾದ ಭಾರೀ ಚರಂಡಿ. ಈ ಚರಂಡಿಯ ಆಚೆಗೆ ಮುಸ್ಲಿಮರ ಒತ್ತೊತ್ತಾದ ಇಕ್ಕಟ್ಟಿನ ಗಲ್ಲಿಗಳು ಓಣಿಗಳ ಜನವಸತಿ. ಇತ್ತಣಿಂದ ಆರಂಭವಾದ ಕಲ್ಲು, ಇಟ್ಟಿಗೆ, ಆಸಿಡ್ ದಾಳಿಗೆ ಅತ್ತಣಿಂದಲೂ ಜವಾಬು ಬರತೊಡಗಿ ಉಭಯತ್ರರ ನಡುವೆ ತಾಸುಗಟ್ಟಲೆ ಕಾಳಗವೇ ಜರುಗಿತ್ತು. ಕಡೆಗೆ ಇತ್ತ ಕಡೆಯವರು ಗಡಿ ದಾಟಿದರು. ಹಿಂಸೆಯ ಜ್ವಾಲೆಗಳು ಒಳಭಾಗದ ಗಲ್ಲಿಗಳು, ಓಣಿಗಳನ್ನು ವ್ಯಾಪಿಸಿದವು. ಬಾಗಿಲುಗಳ ಒಡೆದು ಮನೆ ನುಗ್ಗತೊಡಗಿದವರು ಮತ್ತು ಅಂಗಡಿ ಮುಂಗಟ್ಟುಗಳಿಗೆ ವಾಹನಗಳಿಗೆ ಬೆಂಕಿ ಇಡತೊಡಗಿದವರಿಂದ ಬಚಾವಾಗಲು ಅತ್ತ ಕಡೆಯವರು ಮನೆಯ ಚಾವಣಿಗಳಿಂದ ಕುದಿನೀರು ಸುರಿದರು, ಕಲ್ಲು ಇಟ್ಟಿಗೆ ಎಸೆದರು. ಗುಂಡುಗಳೂ ಸಿಡಿದವು. ಇತ್ತ ಕಡೆಯವರ ಗುಂಡುಗಳಿಗೆ ಅತ್ತ ಕಡೆಯವರೂ ಗುಂಡಿನ ಉತ್ತರ ನೀಡಿದ್ದುಂಟು. ಇತ್ತ ಕಡೆಯವರು ಪೆಟ್ರೋಲ್ ಬಾಂಬುಗಳನ್ನು ಮತ್ತು ಕವಣೆಕಲ್ಲುಗಳನ್ನು ಚಾವಣಿಗಳತ್ತ ತೂರಿದರು. ಮುಸಲ್ಮಾನರ ಅಂಗಡಿಗಳನ್ನು ಗುರುತಿಸಿ ಬೆಂಕಿ ಇರಿಸಲಾಯಿತು. ರಸ್ತೆಗಳು ಸುಟ್ಟ ಸಾಮಾನು ಸಂರಜಾಮುಗಳ ಕಪ್ಪು ಬೂದಿಯ ಹಾಸಿಗೆಯಾದವು. ಟೈರ್ ಅಂಗಡಿಗಳಿಗೆ ಇಟ್ಟ ಬೆಂಕಿಯ ಕಡುಗಪ್ಪು ಧೂಮ ಆಗಸದೆತ್ತರಕ್ಕೆ ಕವಿಯಿತು. ವಿನಾಶವನ್ನು ದಾಖಲಿಸುವ ಸಿ.ಸಿ.ಟೀವಿ ಕ್ಯಾಮೆರಾ ಗಳನ್ನು ಹುಡುಕಿ ಚಚ್ಚಿ ಹಾಕಲಾಯಿತು. ಅಂಗಡಿಯೊಂದರ ಹಿಂದೂ ಒಡೆಯ ನಾನೂ ನಿಮ್ಮವನು ಎಂದು ಹೇಳುವ ಜೊತೆಗೆ ಹೆಂಡತಿ ಮಕ್ಕಳಿಂದಲೂ ಜೈ ಶ್ರೀರಾಮ್ ಘೋಷಣೆ ಕೂಗಿ ತನ್ನ ಅಗ್ನಿಸ್ಪರ್ಶದಿಂದ ತನ್ನ ಅಂಗಡಿ ಉಳಿಸಿಕೊಂಡ.

ಜಾಫ್ರಾಬಾದ್, ಬಾಬರಪುರ್, ಬ್ರಹ್ಮಪುರಿ, ಗೋರಖ್ ಪಾರ್ಕ್, ಕಬೀರ್ ನಗರ್, ಮೌಜ್ಪುರ, ಭಜನಪುರ, ಚಾಂದ್ ಬಾಗ್, ಗೋಕುಲ್ ಪುರಿ, ಕರಾವಲ ನಗರ, ಖಜೌರಿ ಖಾಸ್, ಕರದಾಂಪುರಿ ಮುಂತಾದೆಡೆಯಿಂದ ಕಲ್ಲೆಸೆತ, ಅಗ್ನಿಸ್ಪರ್ಶದ ವ್ಯಾಪಕ ಪ್ರಕರಣಗಳು ವರದಿಯಾಗಿವೆ. ಬಹುತೇಕ ಗಲಭೆಕೋರರು, ಮುಸ್ಲಿಂ ಅಂಗಡಿಗಳ ಲೂಟಿಕೋರರು ಮತ್ತು ಬೆಂಕಿ ಇಟ್ಟವರು ಸ್ಥಳೀಯರಲ್ಲ. ಹೊರಗಿನಿಂದ ಟ್ರಕ್ಕುಗಳಲ್ಲಿ ಕರೆತಂದವರು. ಚಾಂದ್ ಬಾಗ್ ಭಜನಪುರದ ಮೂರು ದೇವಾಲಯಗಳಿಗೆ ಬೆಂಕಿ ಇಕ್ಕುವ ಪ್ರಯತ್ನವನ್ನು ಮತ್ತು ಹಿಂದೂಗಳ ಮೇಲೆ ಹಲ್ಲೆಯನ್ನು ಸ್ಥಳೀಯ ಮುಸ್ಲಿಮರೇ ಮುಂದೆ ನಿಂತು ತಡೆದಿದ್ದಾರೆ. ಈ ಮಾತನ್ನು ಸ್ಥಳೀಯ ಹಿಂದೂ ಹಿರಿಯರೇ ಹೇಳಿದ್ದಾರೆ. ಸೋದರ ಭಾವದ ತಮ್ಮ ಸಹಬಾಳ್ವೆಗೆ ಈಗಲೂ ಚ್ಯುತಿ ಬಂದಿಲ್ಲ. ಹೊರಗಿನಿಂದ ಬಂದವರು ಈ ಕೃತ್ಯಗಳನ್ನು ಎಸಗಿದ್ದಾರೆಂಬುದು ಅವರ ದೂರು.

ಯಮುನಾ ವಿಹಾರದ ಮುಖ್ಯರಸ್ತೆಯಲ್ಲಿ ಟ್ರಕ್ಕುಗಳು ಇಟ್ಟಿಗೆ ಮತ್ತು ಕಲ್ಲುಗಳನ್ನು ತಂದು ಸುರಿದದ್ದನ್ನು ಸ್ಥಳೀಯರು ನೋಡಿದ್ದಾರೆ. ಇಲ್ಲಿನ ಸರ್ವೀಸ್ ರಸ್ತೆಗಳಲ್ಲಿ ಹತ್ತು ಟ್ರಕ್ಕುಗಳನ್ನು ನಿಲ್ಲಿಸಲಾಗಿತ್ತು. ಬೆನ್ನಿಗೆ ಚೀಲಗಳನ್ನು ತಗುಲಿ ಹಾಕಿಕೊಂಡಿದ್ದ ಹುಡುಗರನ್ನು ಈ ಟ್ರಕ್ಕುಗಳು ಇಳಿಸಿದ್ದವು. ಬ್ಯಾಕ್ ಪ್ಯಾಕ್‌ಗಳಲ್ಲಿ ಏನಿತ್ತೋ ಬಲ್ಲವರಾರು ಎನ್ನುತ್ತಾರೆ ಭಜನಪುರದ ವ್ಯಾಪಾರಿ ಓಮ್ ವೀರ್.
ಗಲಭೆಗಳ ಕುದಿಯಿಂದ ಗ್ರಸ್ತವಾಗಿರುವ ಭಜನಪುರ, ಗೌತಮನಗರಿ ಹಾಗೂ ಮೌಜ್ಪುರದ ಕೆಲವು ಭಾಗಗಳ ಅಂಗಡಿಗಳು ಮತ್ತು ಮನೆಗಳ ಮೇಲೆ, ಕಿಟಕಿಗಳು, ಬಾಲ್ಕನಿಗಳಲ್ಲಿ ಹಿಂದೂಗಳೆಂದು ಗುರುತಿಸಿಕೊಳ್ಳುವ ಕೇಸರಿ ಬಾವುಟಗಳನ್ನು ಹಾರಿಸಲಾಗಿದೆ. ಗಲಭೆಕೋರರು ಈ ಬಾವುಟಗಳಿದ್ದ ಮನೆಗಳ ತಂಟೆಗೆ ಹೋಗುವುದಿಲ್ಲ. ಗಲಭೆ ಆರಂಭಕ್ಕೆ ಒಂದು ದಿನ ಮೊದಲೇ (ಶನಿವಾರ) ಈ ಬಾವುಟಗಳನ್ನು ಹಾರಿಸಲಾಗಿತ್ತು. ಈ ಎಲ್ಲ ಬಾವುಟಗಳ ರೂಪರೇಖೆ, ವಿನ್ಯಾಸ, ಅಳತೆ ಗಾತ್ರ ಒಂದೇ.
ಜೆ.ಕೆ.೨೪ ಬೈ ಸೆವೆನ್ ಎಂಬ ಟಿವಿ ವಾಹಿನಿಯ ಪತ್ರಕರ್ತ ಆಕಾಶ್ ನಾಪ ಎಂಬಾತ ಗುಂಡು ತಗುಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾನೆ. ಆತನ ಸ್ಥಿತಿ ಈಗಲೂ ಚಿಂತಾಜನಕ. ಎನ್.ಡಿ.ಟಿವಿಯ ಮೂವರು ವರದಿಗಾರರನ್ನು ಗುಂಪುಗಳು ಥಳಿಸಿವೆ. ಒಬ್ಬ ವರದಿಗಾರನ ಮೂರು ಹಲ್ಲುಗಳು ಮುರಿದಿವೆ. ಟೈಮ್ಸ್ ನೌ ವಾಹಿನಿಯ ವರದಿಗಾರನನ್ನು ಬಡಿಗೆಗಳು ಮತ್ತು ಇಟ್ಟಿಗೆಗಳನ್ನು ಹಿಡಿದಿದ್ದ ಗುಂಪೊಂದು ಸುತ್ತುವರಿದು ಬೆದರಿಸಿದೆ.

ನೈಋತ್ಯ ದೆಹಲಿಯ ಗುರು ತೇಗ್ ಬಹದ್ದೂರ್ ಆಸ್ಪತ್ರೆಯಲ್ಲಿನ ೨೦೦ಕ್ಕೂ ಹೆಚ್ಚು ಗಾಯಾಳುಗಳ ಪೈಕಿ, ಗುಂಡು ಸಿಡಿತಕ್ಕೆ ಸಿಕ್ಕವರು, ಇರಿತಕ್ಕೆ ಒಳಗಾದವರು ಹಾಗೂ ದಾಳಿಕೋರರಿಂದ ಪಾರಾಗಲು ಚಾವಣಿಗಳಿಂದ ಧುಮುಕಿದವರ ಸಂಖ್ಯೆಯೇ ಹೆಚ್ಚು.
ಪ್ರಚೋದನಕಾರಿ ಭಾಷಣ ಮಾಡಿದ ಬಿಜೆಪಿ ಮುಖಂಡ ಕಪಿಲ್ ಮಿಶ್ರ ಅವರ ಮೇಲೆ ಕ್ರಮ ಜರುಗಿಸುವಂತೆ ದೆಹಲಿಯ ಬಿಜೆಪಿ ಸಂಸದ ಮತ್ತು ಕ್ರಿಕೆಟಿಗ ಗೌತಮ್ ಗಂಭೀರ್ ಆಗ್ರಹಿಸಿದ್ದಾರೆ. ಮಿಶ್ರಾ ಭಾಷಣದ ವಿಡಿಯೋವನ್ನು ನೋಡಿಲ್ಲ ಎಂದ ದೆಹಲಿ ಪೊಲೀಸರನ್ನು ಬುಧವಾರ ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯದಲ್ಲೇ ವಿಡಿಯೋವನ್ನು ಹಾಕಿಸಿ ನೋಡಿಸಿದೆ.

ಹೊತ್ತಿ ಉರಿಯುತ್ತಿದ್ದ ಮುಸ್ಲಿಂ ಬೇಕರಿಯೊಂದರ ಫೋನ್ ನಂಬರ್ ಬರೆದು ಕೊಳ್ಳತೊಡಗಿದ್ದ ದೆಹಲಿಯ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರ ಶಿವನಾರಾಯಣ ರಾಜಪುರೋಹಿತ್ ಅವರನ್ನು ಪಶ್ಚಿಮ ಕರಾವಲ್ ನಗರದಲ್ಲಿ ಗಲಭೆಕೋರರ ಗುಂಪೊಂದು ಹಿಡಿದು ಹಲ್ಲೆ ಮಾಡಿದೆ. ಅವರು ಮಾಡಿಕೊಂಡ ಟಿಪ್ಪಣಿಗಳ ಪುಸ್ತಕವನ್ನು ಉರಿಯುತ್ತಿದ್ದ ಬೇಕರಿಯ ಬೆಂಕಿಗೆ ಎಸೆದಿದೆ. ಅವರ ಮೊಬೈಲ್ ಫೋನ್ ಕಿತ್ತುಕೊಂಡು ಗಲಭೆಯ ಫೋಟೋ ವಿಡಿಯೋಗಳಿಗಾಗಿ ಹುಡುಕಿ ನೋಡಿದೆ. ಏನೂ ಕಂಡು ಬರದಿದ್ದರೂ ಬೆದರಿಸಿದೆ. ನೀನು ಜೆ.ಎನ್.ಯು.ಗೆ ಸೇರಿದವನಾ ಎಂದು ಪ್ರಶ್ನಿಸಿದೆ. ಫೋನ್ ವಾಪಸು ಪಡೆದು ತನ್ನ ಬೈಕಿನತ್ತ ಧಾವಿಸಿದ ಈ ವರದಿಗಾರನನ್ನು ಲಾಠಿ, ಸೈಕಲ್ ಚೈನ್, ಕಬ್ಬಿಣದ ಸರಳುಗಳನ್ನು ಹಿಡಿದಿದ್ದ ಮತ್ತೊಂದು ಗುಂಪು ಸುತ್ತುವರೆದಿದೆ. ತೊಡೆಗಳ ಮೇಲೆ ಸರಳಿನಿಂದ ಬಾರಿಸಿ ಫೋನು ಕಿತ್ತುಕೊಂಡಿದೆ. ಮತ್ತೊಂದು ಗುಂಪಿನ ಮಧ್ಯ ವಯಸ್ಕನೊಬ್ಬ ವರದಿಗಾರನ ಕನ್ನಡಕವನ್ನು ಕಿತ್ತು ಕಾಲಡಿ ಹಾಕಿ ತುಳಿದಿದ್ದಾನೆ. ಕಪಾಳಕ್ಕೆ ಬಾರಿಸಿದ್ದಾನೆ. ಪ್ರೆಸ್ ಕಾರ್ಡ್ ನೋಡಿ ಹಿಂದೂ ಧರ್ಮದವನಾ… ಬದುಕಿದೆ ಓಡು ಎಂದಿದ್ದಾನೆ. ಹಿಂದೂವೇ ಎಂದು ಖಚಿತ ಮಾಡಿಕೊಳ್ಳಲು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿಸಿದ್ದಾನೆ.

ಕಬೀರನಗರದ ಚಜ್ಜುಪುರ ರಸ್ತೆಯ ಸನಾತನ ಧರ್ಮ ಮಂದಿರದ ಹೊರಗೆ ಹೆಲ್ಮೆಟ್ ಧರಿಸಿ ಮುಖ ಮರೆಸಿಕೊಂಡು, ಕೈಗಳಲ್ಲಿ ಬಡಿಗೆಗಳು, ಸರಳುಗಳ ಹಿಡಿದು ಜೈ ಶ್ರೀರಾಮ್ ಘೋಷಣೆ ಕೂಗುತ್ತ ನೆರೆಯುತ್ತಾರೆ ನೂರಕ್ಕೂ ಹೆಚ್ಚು ಮಂದಿ ಯುವಕರು. ಅವರತ್ತ ಶೂನ್ಯ ನೋಟ ಬೀರಿ ನಿಂತ ಪೊಲೀಸರು ಆರೇ ಮಂದಿ. ಯುವಕರ ಪೈಕಿ ಒಬ್ಬ ದನಿ ಏರಿಸುತ್ತಾನೆ- ಮೂರು ದಿನಗಳ ಕಾಲ ಮುಸಲ್ಮಾನರು ನಮ್ಮತ್ತ ಕಲ್ತೆಸೆದಿದ್ದಾರೆ. ನಮ್ಮ ವಾಹನಗಳನ್ನು ಸುಟ್ಟು ಹಾಕಿದ್ದಾರೆ. ನಮ್ಮ ಸ್ಮಶಾನದಲ್ಲಿದ್ದ ಶಿವನ ಮೂರ್ತಿಗೆ ಬೆಂಕಿ ಇಟ್ಟಿದ್ದಾರೆ ಎನ್ನಲಾಗಿದೆ. ನಾವು ಎಷ್ಟು ದಿನಗಳ ಕಾಲ ಕೈಕಟ್ಟಿ ಕುಳಿತುಕೊಳ್ಳಲು ಬರುತ್ತದೆ?
ಮಂಗಳವಾರದ ಪತ್ರಿಕೆಗಳಲ್ಲಿ ರಾಯಿಟರ್ಸ್ ಛಾಯಾಚಿತ್ರಗ್ರಾಹಕ ತೆಗೆದ ಚಿತ್ರವೊಂದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಬೆಳಕು ಕಂಡಿತು. ಹೆಲ್ಮೆಟ್ ಧರಿಸಿದ ರಕ್ತಪಿಪಾಸು ಗಲಭೆಕೋರರ ಗುಂಪೊಂದು ಬಡಿಗೆಗಳು, ಕಬ್ಬಿಣದ ಸರಳುಗಳನ್ನು ಹಿಡಿದು ನಡು ರಸ್ತೆಯಲ್ಲಿ ಮುಖವನ್ನು ನೆಲಕ್ಕೆ ಆನಿಸಿ ಎರಡೂ ಕೈಗಳಿಂದ ತಲೆ ಬುರುಡೆ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಮುಸ್ಲಿಮ್ ವ್ಯಕ್ತಿಯೊಬ್ಬನನ್ನು ಜಜ್ಜುತ್ತಿರುವ ಈ ಚಿತ್ರ ಕೋಮುವಾದಿ ಕರಾಳತೆಗೆ ಹಿಡಿದ ಕನ್ನಡಿಯಾಗಿತ್ತು. ಈ ಚಿತ್ರದಲ್ಲಿದ್ದ ವ್ಯಕ್ತಿಯ ವಿವರಗಳು ಬುಧವಾರ ಹೊರಬಿದ್ದಿವೆ. ಬದುಕಿ ಉಳಿದಿರುವ ಈ ವ್ಯಕ್ತಿಯ ಹೆಸರು ಮೊಹಮ್ಮದ್ ಜುಬೇರ್. ದುವಾ ಕೀ ನಮಾಜ್ ಮುಗಿಸಿ ಚಾಂದ್ ಬಾಗ್ ನಲ್ಲಿದ್ದ ಮನೆಗೆ ಮರಳುತ್ತಿದ್ದ ಈತ ತನ್ನ ಮೂವರು ಪುಟ್ಟ ಮಕ್ಕಳಿಗೆ ಪ್ರಿಯವಾದ ಮಿಠಾಯಿ ಕಟ್ಟಿಸಿಕೊಂಡಿದ್ದ. ಮೇಲೆ ಎರಗಿದ ಗುಂಪು ಕೊಲ್ಲಲೆಂದೇ ಚಚ್ಚಿತು. ದಯೆ ತೋರಿ ಎಂದು ಕೇಳಿದರೆ ಇನ್ನಷ್ಟು ಬಡಿತಗಳು. ಮೂಳೆ ಮುರಿದರೂ, ರಕ್ತ ಹರಿದರೂ ಏಟುಗಳು ನಿಲ್ಲಲಿಲ್ಲ. ಜೊತೆಗೆ ಬೈಗಳು. ನೋವಿನಿಂದ ಪ್ರಜ್ಞೆ ತಪ್ಪಿದ ಜುಬೇರ್ ಮತ್ತೆ ಎಚ್ಚರಾದದ್ದು ಜಿ.ಟಿ.ಬಿ. ಆಸ್ಪತ್ರೆಯ ಹಾಸಿಗೆಯಲ್ಲಿ. ಜುಬೇರನ ತಮ್ಮ ಪೊಲೀಸ್ ದೂರು ನೀಡಲು ಒಲ್ಲ. ನಾವು ಸಣ್ಣವರು…ಪ್ರತಿಭಟನೆಗಳಿಗೂ ನಮಗೂ ಸಂಬಂಧವಿಲ್ಲ. ಬದುಕಿ ಉಳಿದರೆ ಸಾಕು ಎನ್ನುತ್ತಾನೆ. ತನಗೆ ಹಿಂದೂ ಗೆಳೆಯರೇ ದೊಡ್ಡ ಸಂಖ್ಯೆಯಲ್ಲಿದ್ದಾರೆ ಎನ್ನುವ ಜುಬೇರ ನಡುರಸ್ತೆಯಲ್ಲಿ ಗುಂಪು ಜಜ್ಜುತ್ತಿರುವ ತನ್ನ ಚಿತ್ರವನ್ನು ನೋಡಿದರೆ ಈಗಲೂ ಥರ ಥರ ನಡುಗುತ್ತಾನೆ. ಈ ಛಾಯಾಚಿತ್ರವನ್ನು ನೋಡಲಾರ ಆತ.

ಈ ನಡುವೆ ಜಾಫ್ರಾಬಾದ್ ಮಹಿಳೆಯರು ತಮ್ಮ ಸಿಎಎ ವಿರೋಧಿ ಧರಣಿಯನ್ನು ಸೀಲಂಪುರಕ್ಕೆ ವರ್ಗಾಯಿಸಿದ್ದಾರೆ. ಶಾಹೀನ್ ಬಾಗ್ ನ ಮಹಿಳೆಯರು ತಮ್ಮ ಸುತ್ತಮುತ್ತ ಹಿಂಸೆ-ದ್ವೇಷಗಳ ಕೆನ್ನಾಲಿಗೆಗಳು ಚಾಚಿರುವುದನ್ನು ಕಂಡು ಅಧೀರರಾದರೂ, ಧರಣಿ ಮುಂದುವರಿಸಿದ್ದಾರೆ.
ಸಿಎಎ ಪರ-ವಿರೋಧವು ಹಿಂದು-ಮುಸ್ಲಿಂ ಕೋಮು ಗಲಭೆಯ ಅಪಾಯಕಾರಿ ರೂಪ ಧರಿಸಿದೆ. ದ್ವೇಷ- ಹಿಂಸೆಯ ಒಕ್ಕಲುತನ ಮಾಡಿ ದೈವೀಕರಣದ ಫಸಲು ಕಟಾವು ಮಾಡಬಯಸಿದವರ ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುವ ಗಂಡಾಂತರ ಸಮೀಪಿಸಿದೆ. ಈ ವಿನಾಶವು ದೇಶದ ಉದ್ದಗಲಕ್ಕೆ ಹಬ್ಬಿ ಹರಡದಂತೆ ತಡೆಯದಿದ್ದರೆ ಬಾಪೂ ಕನಸಿನ ಭಾರತ ಉಳಿಯದು.

೦ : ಡಿ.ಉಮಾಪತಿ

Leave a Reply

Your email address will not be published. Required fields are marked *

error: Content is protected !!