ಶಶಿಧರ ನಿಮ್ಮನ್ನು ಉಳಿಸಿಕೊಳ್ಳಲಾಗಲಿಲ್ಲ !

“ನಿಮ್ಮನ್ನು ಉಳಿಸಿಕೊಳ್ಳಲಾಗಲಿಲ್ಲ, ಕ್ಷಮಿಸಿ’
ಎಂದಲ್ಲದೆ ಅಗಲಿಹೋದ ಕಿರಿಯ ಗೆಳೆಯ ಟಿ.ಶಶಿಧರ್ ಗೆ ಬೇರೇನೂ ಹೇಳಲಾರೆ.

ಶನಿವಾರ ನಾನು ಬೆಳಗಾವಿಯಿಂದ ಘಟಪ್ರಭಾಕ್ಕೆ ಹೋಗುವ ಹಾದಿಯಲ್ಲಿದ್ದಾಗ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಪೋನ್ ಮಾಡಿ Shashidhar is out of danger,ಕೋವಿಡ್ ರಿಪೋರ್ಟ್ ನೆಗೆಟಿವ್ ಬಂದಿದೆ, ಆಕ್ಷಿಜನ್ ಸ್ಯಾಚುರೇಷನ್ 92 ಇದೆ, ಅವನಿಗೆ ಮೊದಲೇ ಶ್ವಾಸಕೋಶದ ಸಮಸ್ಯೆ ಇತ್ತು, ಚೆಕ್ ಮಾಡಿಸಿಲ್ಲ. ಈಗ ಹಾನಿಯಾಗಿದೆ, ಚೇತರಿಸಿಕೊಳ್ಳುತ್ತಿದ್ದಾನೆ’ ಎಂದಿದ್ದರು ನಾನು ನಿರಾಳವಾದೆ.


ಅದರ ಸ್ವಲ್ಪ ಹೊತ್ತಿನ ನಂತರ ಪ್ರಿಯಾಂಕ ಖರ್ಗೆ ‘ಶಶಿಧರ್ ಪರಿಸ್ಥಿತಿ ಗಂಭೀರವಾಗಿದೆ. “He is HFNC 60L of oxygen, Condition is explained to his wife ಎಂದು ಡಾಕ್ಟರ್ ಅವರಿಗೆ ಹಾಕಿರುವ ಮೆಸೆಜನ್ನು ನನಗೆ ಫಾರ್ವರ್ಡ್ ಮಾಡಿದ್ದರು. ನಾನು ಅದನ್ನು ಲೇಟಾಗಿ ನೋಡಿದ್ದೆ.
ಆದರೆ ಭಾನುವಾರ ಸಂಜೆ ಬೆಳಗಾವಿಯಿಂದ ವಾಪಸು ಬರುವಾಗ ಅಭಿಷೇಕ್ ಶಿವಣ್ಣ ಪೋನ್ ಮಾಡಿ ‘ಶಶಿಧರ್ ಹೋಗ್ಬಿಟ್ಟರು ಸಾರ್’ ಎಂದರು. ಒಂದು ಕ್ಷಣ ಕಣ್ಣುಗಳಿಗೆ ಕತ್ತಲು ಕವಿದಂತಾಯಿತು. ಯಾರಿಗೂ ತಿಳಿಸಬೇಕೆಂದೂ ಅನಿಸಲಿಲ್ಲ. ಕೊರೊನಾ ಸೀಸನ್ ನಲ್ಲಿ ನಾನು ವೈಯಕ್ತಿಕವಾಗಿ ಕಳೆದುಕೊಂಡ ನನಗೆ ಆತ್ಮೀಯವಾಗಿದ್ದ ಜೀವ ಬಂಧು ಟಿ.ಶಶಿಧರ್.

ಶಶಿಧರ್ ರಾಜಕೀಯವನ್ನು ಸಮಾಜಸೇವೆಯ ವಿಸ್ತರಣೆ ಎಂದು ತಿಳಿದುಕೊಂಡಿದ್ದ ಸಾಮಾಜಿಕ ಬದ್ಧತೆಯ, ಅತ್ಯುಗ್ರ ಸ್ವಾಭಿಮಾನಿಯಾಗಿದ್ದ, ಅಷ್ಟೇ ಅಮಾಯಕನಾಗಿದ್ದ, ರಾಜಕೀಯದ ಕಪಟವನ್ನರಿಯದ ಅಪ್ಪಟ ಮನುಷ್ಯನಾಗಿದ್ದರು. ಸಿದ್ದರಾಮಯ್ಯನವರ ಅಖಂಡ ಅಭಿಮಾನಿ, ಡಾ.ಎಚ್.ಸಿ.ಮಹದೇವಪ್ಪ ಅವರ ಶಿಷ್ಯ, ನನಗೆ ಕಿರಿಯ ಸ್ನೇಹಿತ. ಆದರೆ ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ ಎಂದೂ ಅವರ ಮನೆ ಬಾಗಿಲು ಕಾದವರಲ್ಲ. ನಾಲ್ಕೈದು ಬಾರಿ ಬಂದಿದ್ದರೂ ಅದರಲ್ಲಿ ಒಂದೆರಡು ಬಾರಿ ನನ್ನನ್ನು ಭೇಟಿ ಮಾಡಲು ಬಂದಿದ್ದರು.


ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗಿರುವ ಬಗ್ಗೆ ಪೋಸ್ಟ್ ಹಾಕಿದ್ದಾಗ ಪೋನ್ ಮಾಡಿ ಜಾಗ್ರತೆಯಿಂದ ಇರುವಂತೆ ಹೇಳಿದ್ದೆ. ಅಲ್ಲಿ ಚೇತರಿಕೆ ಕಾಣದಿದ್ದಾಗ ವೈದ್ಯರ ಸಲಹೆಯಂತೆ ಯಾದಗಿರಿ ಆಸ್ಪತ್ರೆಯಿಂದ ಕಲ್ಬುರ್ಗಿಯ ಇಎಸ್ ಐ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಸುದ್ದಿಯನ್ನು ನನಗೆ Manju Suvarna ತಿಳಿಸಿದ್ದರು, ಅದರ ನಂತರ ಶಶಿಧರ್ ಜೊತೆ ಮಾತಾಡಿದ್ದೆ.


ಅದಾದ ವಾರದ ನಂತರ ಒಂದು ಮುಂಜಾನೆ ಅವರ ಮಗ ಪೋನ್ ಮಾಡಿ ಅಪ್ಪನ ಸ್ಥಿತಿ ಗಂಭೀರವಾಗಿದೆ, ಡಾಕ್ಟರ್ ಗಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಹೇಳಿ ಒಂದೇ ಸಮನೆ ಅಳತೊಡಗಿದ್ದ. ನಾನು ಸಮಾಧಾನ ಹೇಳಿ ಡಾ.ಮಹದೇವಪ್ಪ ಮತ್ತು ಪ್ರಿಯಾಂಕ ಖರ್ಗೆ ಅವರಿಗೆ ಪೋನ್ ಮಾಡಿ ಅಲ್ಲಿನ ವೈದ್ಯರ ಜೊತೆ ಮಾತನಾಡುವಂತೆ ತಿಳಿಸಿದ್ದೆ. ಇಬ್ಬರೂ ಪೋನ್ ಮಾಡಿ ವಿಶೇಷ ನಿಗಾ ವಹಿಸುವಂತೆ ವೈದ್ಯರಿಗೆ ತಿಳಿಸಿದ್ದರು.


ಪ್ರಿಯಾಂಕ ಖರ್ಗೆ ತಮ್ಮ ಪಿ ಎಯನ್ನು ಅಲ್ಲಿಗೆ ಕಳಿಸಿ ವಿಚಾರಿಸಿಕೊಂಡಿದ್ದರು, ಅಲ್ಲಿನ ಡೀನ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಸಿದ್ದರಾಮಯ್ಯನವರೂ ಆಸ್ಪತ್ರೆಗೆ ಪೋನ್ ಮಾಡಿ ಮಾತನಾಡಿದ್ದರು. ನಾನೂ ವೈದ್ಯರ ಜೊತೆ ಮಾತನಾಡಿದ್ದೆ. ಈ ನಡುವೆ ಶಶಿಧರ್ ಅವರ ಅಳಿಯ ಇಲ್ಲವೇ ಮಗ ಪೋನ್ ಮಾಡಿ ‘ವೈದ್ಯರು ನೋಡಿಕೊಳ್ಳುತ್ತಿಲ್ಲ ‘ ಎಂದು ಮತ್ತೆ ಮತ್ತೆ ಅಳುತ್ತಿದ್ದರು. ಕೊನೆಗೆ ನಾನು ಕಲ್ಬುರ್ಗಿಯ ಹಿಂದೂ ಪತ್ರಿಕೆಯ ವರದಿಗಾರ ಗೆಳೆಯ ಕುಮಾರ ಬುರಡಿಕಟ್ಟಿಯವರಿಗೆ ಪೋನ್ ಮಾಡಿ ಅಲ್ಲಿನ ಜಿಲ್ಲಾಧಿಕಾರಿಯವರ ಜೊತೆ ಮಾತನಾಡುವಂತೆ ತಿಳಿಸಿ ಶಶಿಧರ್ ವಿವರ ಕಳಿಸಿದ್ದೆ. ಅವರು ಅಲ್ಲಿನ ಜಿಲ್ಲಾ ಪಂಚಾಯತ್ ಸಿಇಒ (ಅವರೇ ಕೊರೊನಾ ನಿಯಂತ್ರಣದ ಉಸ್ತುವಾರಿ) ಜೊತೆ ಮಾತನಾಡಿದ್ದರು.


ನಾಲ್ಕೈದು ದಿನಗಳ ಹಿಂದೆ ನಾನು ಶಶಿಧರ್ ಅಳಿಯನಿಗೆಂದು ಪೋನ್ ಮಾಡಿದಾಗ ಶಶಿಧರ್ ಎತ್ತಿಕೊಂಡಿದ್ದರು. ಒಂದೇ ಸಮನೆ ಏದುಸಿರು ಬಿಡುತ್ತಿದ್ದರು. ಬಹಳ ಗಾಬರಿಯಾಗಿದ್ದರು. ನಾನು ಸಮಾಧಾನ ಮಾಡಿ ಧೈರ್ಯದಿಂದ ಇರುವಂತೆ ಹೇಳಿದ್ದೆ. ಅವರು ಖಾಸಗಿ ಆಸ್ಪತ್ರೆಗೆ ಹೋಗುವ ಆಲೋಚನೆಯಲ್ಲಿದ್ದರು. ಇದನ್ನು ನಾನು ಮಹದೇವಪ್ಪ ಮತ್ತು ಪ್ರಿಯಾಂಕ ಖರ್ಗೆಯವರ ಜೊತೆಯಲ್ಲಿಯೂ ಮಾತನಾಡಿದ್ದೆ. ಖಾಸಗಿ ಆಸ್ಪತ್ರೆಯಲ್ಲಿಯೂ ಇದಕ್ಕಿಂತ ಬೇರೆಯಾದ ಚಿಕಿತ್ಸೆ ನೀಡುವುದು ಅಸಾಧ್ಯವಾದ ಕಾರಣ ವೈದ್ಯರೇ ಬೇಡ ಎಂದಿದ್ದರಂತೆ. ನಾನು ತಿಳಿದುಕೊಂಡ ಹಾಗೆ ಕಲ್ಬುರ್ಗಿಯ ಇಎಸ್ ಐ ಆಸ್ಪತ್ರೆ ಸುಸಜ್ಜಿತವಾಗಿ ಚೆನ್ನಾಗಿದೆ. ಸರ್ಕಾರಿ ವೈದ್ಯರಿಗಾದರೂ ಪ್ರಭಾವ ಬಳಸಿ ನಾವು ಕನಿಷ್ಠ ಮಾತನಾಡಬಹುದು, ಖಾಸಗಿ ಆಸ್ಪತ್ರೆಯಾದರೆ ಅದಕ್ಕೂ ಅವಕಾಶ ಇಲ್ಲ ಎಂದು ನಾವು ಮಾತಾಡಿಕೊಂಡೆವು.


ಆಸ್ಪತ್ರೆಗಳಲ್ಲಿ ಬೇರೆ ರೋಗಿಗಳನ್ನು ನೋಡಿಕೊಂಡ ಹಾಗೆ ಕೊರೊನಾ ಸೋಂಕಿತರನ್ನು ವೈದ್ಯರು, ದಾದಿಯರು ಆಗಾಗ ಬಂದು ವಿಚಾರಿಸಿಕೊಳ್ಳುವುದಿಲ್ಲ, ರೋಗಿ ಕರೆದಾಗೆಲ್ಲ ಅವರು ಓಡೋಡಿ ಬರುವುದಿಲ್ಲ ಯಾಕೆಂದರೆ ಅವರು ಪ್ರತಿಬಾರಿ ಪಿಪಿಇ ಹಾಕಿಕೊಂಡು ಸೋಂಕಿತರ ಬಳಿ ಹೋಗಬೇಕಾಗುತ್ತದೆ. ಇದರಿಂದ ಸಾಮಾನ್ಯ ಸೋಂಕಿತರು ಮತ್ತು ಕುಟುಂಬದ ಸದಸ್ಯರು ಕೂಡಾ ಬಹಳಷ್ಟು ಗಾಬರಿಯಾಗುತ್ತಾರೆ. ಇವೆಲ್ಲದರ ನಡುವೆ ಚೇತರಿಸಿಕೊಳ್ಳುತ್ತಿದ್ದ ಶಶಿಧರ್ ಬದುಕುವ ಭರವಸೆ ನಮ್ಮಲ್ಲಿ ಹುಟ್ಟಿಸಿ ಕೊನೆಗೆ ಮಿಂಚಿ ಮರೆಯಾಗಿಬಿಟ್ಟರು.
ಉತ್ತರ ಕರ್ನಾಟಕ ಭಾಗದ ರಾಜಕೀಯ ಇತಿಹಾಸ-ವರ್ತಮಾನದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದ ಶಶಿಧರ್ ಅವರ ರಾಜಕೀಯ ಒಳನೋಟಗಳು ನಮ್ಮ ಹಿರಿಯ ಪತ್ರಕರ್ತರಲ್ಲಿಯೂ ನನಗೆ ಕಂಡಿಲ್ಲ. ನಾನು ಅವರಲ್ಲಿ ಭವಿಷ್ಯದ ಶಾಸಕನನ್ನು ಕಂಡಿದ್ದೆ. ಅವರಿಗೆ ಕಾಂಗ್ರೆಸ್ ಪಕ್ಷದ ವಕ್ತಾರನಾಗುವ ಆಸೆ ಇತ್ತು. ಶಶಿಧರ್ ಹೆಸರನ್ನು ಪಕ್ಷದ ಕಾರ್ಯದರ್ಶಿಗಳ ಪಟ್ಟಿಯಲ್ಲಿ ಸೇರಿಸಿದ್ದೇನೆ ಎಂದು ಶನಿವಾರ ಮಹದೇವಪ್ಪ ನನಗೆ ತಿಳಿಸಿದ್ದರು.

ಶಶಿಧರ್ ಮಾನವೀಯ ಅಂತ:ಕರಣದ ಭಾವುಕ ವ್ಯಕ್ತಿ. ಅವರ ಬಗ್ಗೆ ಹೇಳುವುದು ಬಹಳಷ್ಟು ಇದೆ. ಒಂದೆರಡು ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ.
ಹಾವೇರಿಯಲ್ಲಿ ಮೌನೇಶ್ ಪೋತರಾಜ್ ಎಂಬ ಪತ್ರಕರ್ತ ಬೈಕ್ ಅಪಘಾತದಲ್ಲಿ ಸಾವಿಗೀಡಾದ ನಂತರ ಪೊಲೀಸರು ಅವರ ಶವವನ್ನು ಕಸವಿಲೇವಾರಿ ವ್ಯಾನ್ ನಲ್ಲಿ ಸಾಗಿಸಿದ್ದು ವಿವಾದವಾಯಿತು. ನಮ್ಮಲ್ಲೊಬ್ಬ ಕಿಡಿಗೇಡಿ ಪತ್ರಕರ್ತ ‘ಮಾಧ್ಯಮ ಸಲಹೆಗಾರರು ಎಲ್ಲಿದ್ದಾರೆ? ಎಂದು ಹ್ಯಾಷ್ ಟ್ಯಾಗ್ ಹಾಕಿ ಅಭಿಯಾನ ಶುರುಮಾಡಿದ್ದು ಬಿಟ್ಟರೆ ನೆರವೇನೂ ಆಗಲಿಲ್ಲ. ಮೌನೇಶ್ ಕುಟುಂಬಕ್ಕೆ ನೆರವು ಕೋರಿ ಮಂಜು ಸುವರ್ಣ ಫೇಸ್ ಬುಕ್ ನಲ್ಲಿ ಅಭಿಯಾನ ಪ್ರಾರಂಭಿಸಿದ್ದ. ಈ ಶಶಿಧರ್, ಪತ್ರಕರ್ತನ ಕುಟುಂಬಕ್ಕೆ ಐದು ಸಾವಿರ ಕಳಿಸಿ ತನ್ನ ಹೆಸರು ಬಹಿರಂಗ ಪಡಿಸದಂತೆ ತಿಳಿಸಿದ್ದರು.

ಗೌರಿ ಹತ್ಯೆಯ ವಿರುದ್ಧ ಸಮಾವೇಶ ನಡೆದಾಗ ಕವಿತಾ ಲಂಕೇಶ್ ಗೌರಿ ನೆನಪಲ್ಲಿ ಪೆನ್ ಮಾಡಿ ಹಣ ಸಂಗ್ರಹಕ್ಕೆ ನೆರವಾಗಿದ್ದರು. ಆ ಸಮಾವೇಶಕ್ಕೆ ಬಂದಿದ್ದ ಶಶಿಧರ್ ಐದು ಸಾವಿರ ರೂಪಾಯಿಗಳ ಪೆನ್ ಖರೀದಿಸಿದ್ದರು.

ಶಶಿಧರ್ ಸಿವಿಲ್ ಎಂಜನಿಯರಿಂಗ್ ಪದವೀಧರ, ಸಣ್ಣ ಪುಟ್ಟ ಗುತ್ತಿಗೆ ಮಾಡುತ್ತಿದ್ದ ಹಾಗಿತ್ತು. ಆದರೆ ಹಣಕಾಸಿನ ಪರಿಸ್ಥಿತಿ ಅಷ್ಟೇನು ಚೆನ್ನಾಗಿರಲಿಲ್ಲ. ಬಹಳ ಉದಾರಿಯಾಗಿದ್ದರು. ಮೂವರು ಹೆಣ್ಣುಮಕ್ಕಳು, ಒಬ್ಬ ಗಂಡು ಮಗ ಓದುತ್ತಿದ್ದಾರೆ, ಕಿರಿಯ ಪ್ರಾಯದ ಹೆಂಡತಿ. ನೆನೆಸಿಕೊಂಡರೆ ಮನಸ್ಸು ಕಲಕುತ್ತದೆ.

ಅವರ ಸ್ನೇಹದಲ್ಲಿ ಪ್ರೀತಿ ಮತ್ತು ಕಾಳಜಿ ಸದಾ ಜಿನುಗುತ್ತಿತ್ತು. ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ ನನಗೆ ಪೋನ್ ಮಾಡಿ ಎಲ್ಲಿದ್ದೀರಿ? ಎಂದು ಕೇಳಿದ್ದರು. ನಾನು ಕಿದ್ವಾಯಿ ಆಸ್ಪತ್ರೆಯಲ್ಲಿ ನನಗೆ ಬೇಕಾದವರಿಗೆ ಚಿಕಿತ್ಸೆ ಕೊಡಿಸಲು ಹೋಗಿದ್ದ ಕಾರಣ ನಾನು ಕಿದ್ವಾಯಿಯಲ್ಲಿದ್ದೇನೆ ಎಂದೆ. ಆರಾಮಾಗಿದ್ದೀರಾ ಎಂದು ಕೇಳಿದರು. ಹೌದು ಎಂದೆ. ಸುಳ್ಳು ಹೇಳಬೇಡಿ ಸಾರ್, ನನಗೆ ನಿಮ್ಮನ್ನು ಕಾಣಬೇಕು ಎಂದರು. ಬನ್ನಿ ಅಂದೆ. ಬಂದು ನೋಡಿ ನಾನು ಸುಳ್ಳು ಹೇಳಿಲ್ಲ ಎಂದು ಖಾತರಿ ಮಾಡಿಕೊಂಡು ಮಾತನಾಡಿ ಹೋದರು. ಅವರು ಯಾಕೆ ಬಂದಿದ್ದರೆಂದು ನನಗೆ ಗೊತ್ತಿತ್ತು.


‘ ಕ್ಷಮಿಸಿ ಶಶಿಧರ್ ನಿಮ್ಮನ್ನು ಉಳಿಸಿಕೊಳ್ಳಲು ಆಗಿಲ್ಲ”
ಇದನ್ನು ನಿನ್ನೆ ಸಂಜೆಯಿಂದ ನೂರು ಬಾರಿ ನನಗೆ ನಾನು ಹೇಳಿಕೊಂಡಿದ್ದೇನೆ, ಬಹುಷ: ಹೇಳುತ್ತಲೇ ಇರುತ್ತೇನೆ.

೦ ದಿನೇಶ್ ಅಮೀನಮಟ್ಟು

One thought on “ಶಶಿಧರ ನಿಮ್ಮನ್ನು ಉಳಿಸಿಕೊಳ್ಳಲಾಗಲಿಲ್ಲ !

  1. ಒಳ್ಳೆಯಮಾತುಗಾರಬುದ್ದ,ಬಸವ,ಅಂಬೇಡ್ಕರ ಅವರನ್ನು ಚನ್ನಾಗಿ ಓದಿಕೊಂಡಿದ್ದಂತವರು ಶಶಿಧರ .ಜನರ ವಿಚಾರದಮಟ್ಟ ಹೆಚ್ಚಾಗಲೆಂದು ವೈಚಾರಿಕ ಪುಸ್ತಕಾಲಯ ಸ್ಥಾಪಿಸಿದಚಿಂತಕನಾಗಿದ್ದ. ಮಾತಿನಲ್ಲಿ ಬಿರುಸಿತ್ತು ಆದರೆ ಕಪಟತೆ ಇರಲಿಲ್ಲ. ಭವಿಷ್ಯದ ರಾಜಕಾರಣದಲ್ಲಿ ಮಿಂಚುವ ಕನಸಿತ್ತು ಆದರೆ ಆಕನಸು ಸಾವಿನ ಮೂಲಕ ಮಾಯವಾಯ್ತು . ಇರಲಿ ಸಾವು ಯಾರನ್ನು ಬಿಟ್ಟಿಲ್ಲ ಹಿಂದೆ ಮುಂದೆ ಆಗಬಹುದಷ್ಟೆ ಅಲ್ಲವೆ?ಶರಣಾಂಜಲಿಗಳು

Leave a Reply

Your email address will not be published. Required fields are marked *

error: Content is protected !!