ಕೊರೊನಾ ಅನುಭವ

ಒಂದು ಅನುಭವ

ಅಕ್ಯಾಡೆಮಿಕ್ ಆದ ಮತ್ತು ಸಾಮುದಾಯಿಕ ಕೊರೊನಾ ನಿರ್ವಹಣೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಮುಂಚೆ ನಿಮ್ಮ ಅನುಭವ ಬರೆಯಿರಿ ಎಂದು ಕೆಲವು ಗೆಳೆಯರು ಹೇಳಿದ್ದರಿಂದ ‘ಅನುಭವಕ್ಕೆ ಬಂದ’ ಈ ಕೆಳಗಿನ ಸಂಗತಿಗಳನ್ನು ಮೊದಲು ಬರೆಯುತ್ತಿದ್ದೇನೆ.

  1. ಮೊದಲನೆಯದಾಗಿ ‘ಕೊರೊನಾ ಲಕ್ಷಣಗಳು ಬಂದವರೆಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಬೇಕು, ಘೋಷಿತ ಕೊರೊನಾ ರೋಗಿಯ ಸಂಪರ್ಕಕ್ಕೆ ಬಂದವರೆಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂಬುದು ನನ್ನ ಅಭಿಪ್ರಾಯವಾಗಿರಲಿಲ್ಲ. ಏಕೆಂದರೆ ಪಾಸಿಟಿವ್ ಅಂತ ಗೊತ್ತಾದರೂ, ಗೊತ್ತಾಗದಿದ್ದರೂ ತೀವ್ರವಾದ ಲಕ್ಷಣಗಳು ಕಾಣಿಸಿಕೊಳ್ಳದೇ ಇದ್ದಲ್ಲಿ ಮುನ್ನೆಚ್ಚರಿಕೆ ಕ್ರಮಗಳಲ್ಲಾಗಲೀ ಅಥವಾ ಚಿಕಿತ್ಸೆಯಲ್ಲಾಗಲೀ ಯಾವುದೇ ಬದಲಾವಣೆ ಇರುವುದಿಲ್ಲ. ಹಾಗಾಗಿ ವಿಪರೀತ ಟೆಸ್ಟ್‍ಗಳು ಒಂದು ರೀತಿಯ ಹೊರೆ. ಹೀಗಿದ್ದೂ ನಾನು ಪರೀಕ್ಷೆ ಮಾಡಿಸಿಕೊಳ್ಳಲು ಕಾರಣವಿತ್ತು. ಒಂದು, ಪಾಸಿಟಿವ್ ಎಂದು ಗೊತ್ತಾದರೆ ತೆಗೆದುಕೊಳ್ಳುವಷ್ಟು ಮುನ್ನೆಚ್ಚರಿಕೆಗಳನ್ನು ಇಲ್ಲದಿದ್ದರೆ ತೆಗೆದುಕೊಳ್ಳುತ್ತಿರಲಿಲ್ಲ. ಎರಡು, ಸರ್ಕಾರ ಈಗ ಏನು ಹೇಳುತ್ತಿದೆಯೋ ಅದನ್ನು ಶಿರಸಾವಹಿಸಿ ಪಾಲಿಸದೇ ಇದ್ದಲ್ಲಿ, ಅದನ್ನೇ ನೆಪ ಮಾಡಿಕೊಂಡು ನಾವು ಕೇಳಬೇಕಾದ ಪ್ರಶ್ನೆಗಳನ್ನು ಕೇಳಲು ಬಿಡದಂತೆ ಬಲಿಪಶು ಮಾಡುವ ಸಾಧ್ಯತೆಯಿರುತ್ತದೆ. ಈ ಸರ್ಕಾರ ಹಾಗೂ ಮಾಧ್ಯಮಗಳು ವಿಪರೀತ ತಪ್ಪುಗಳನ್ನು ಮಾಡಿರುವುದನ್ನು ಮುಂದಿನ ದಿನಗಳಲ್ಲಿ ನಮ್ಮ ತಂಡವು ವಿಮರ್ಶೆಗೆ ಒಳಪಡಿಸುವುದರಲ್ಲಿ ಸಂದೇಹವೇ ಇಲ್ಲ. ಹಾಗಾಗಿ ಏನೇ ಅಭಿಪ್ರಾಯಗಳಿದ್ದರೂ ಸರ್ಕಾರದ ಪ್ರೊಟೋಕಾಲ್‍ಅನ್ನು ಚಾಚೂತಪ್ಪದೇ ಪಾಲಿಸಬೇಕು ಎಂದು ತೀರ್ಮಾನಿಸಿ ಅದನ್ನು ಪಾಲಿಸಿದೆ.
  2. ಪರೀಕ್ಷೆ ಮಾಡಿಸಿಕೊಂಡ ಹಿಂದುಮುಂದಿನಲಿ ವಿಪರೀತವೆಂದರೆ ವಿಪರೀತ ಜ್ವರವಿತ್ತು; ಸ್ವಲ್ಪ ಕೆಮ್ಮೂ ಸಹಾ ಇತ್ತು. ನಿಜವಾಗಲೂ ತುಂಬಾ ಸುಸ್ತೂ ಸಹಾ ಇತ್ತು. ಹೀಗಾಗಿ ಕ್ವಾರಂಟೈನ್ ಆದ ಕೂಡಲೇ ಪ್ಯಾರಾಸಿಟಮಾಲ್ ಮಾತ್ರೆಯನ್ನು ತೆಗೆದುಕೊಳ್ಳಲು ಆರಂಭಿಸಿದೆ. ಮೂರು ದಿನಗಳ ಕಾಲ (ಜನರಲ್ ಆದ ವಿಟಮಿನ್ ಮಾತ್ರೆ ಮತ್ತು ಆಸ್ಪಿರಿನ್‍ಗಳನ್ನು ಹೊರತುಪಡಿಸಿದರೆ) ನಾನು ತೆಗೆದುಕೊಂಡ ಏಕೈಕ ಮಾತ್ರೆ ಪ್ಯಾರಸಿಟಮಾಲ್. ಈ ಮಧ್ಯೆ ಕೊರೊನಾ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ಗೆಳೆಯರು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಆ್ಯಂಟಿ ವೈರಲ್ ಮಾತ್ರೆಗಳನ್ನೂ ಕಳಿಸಿಕೊಟ್ಟರು. ಆದರೆ ಅವನ್ನು ತೆಗೆದುಕೊಳ್ಳಲಿಲ್ಲ. ಪ್ರತ್ಯೇಕವಾಗಿದ್ದು ವಿಶ್ರಾಂತಿ, ಓದು, ಸಿನೆಮಾ, ಇದ್ದುದರಲ್ಲಿ ಒಳ್ಳೆಯ ಆಹಾರ – ಇಷ್ಟೇ ಟ್ರೀಟ್‍ಮೆಂಟ್.
  3. 3ನೇ ದಿನದಿಂದ ಜ್ವರ ಇಳಿಯಿತು, ನಾಲ್ಕೈದು ದಿನಗಳಲ್ಲಿ ಸುಸ್ತೂ ಕಡಿಮೆಯಾಯಿತು. ಕೆಮ್ಮಂತೂ 2ನೇ ದಿನದಿಂದಲೇ ಇರಲಿಲ್ಲ. ಆದರೆ ವಾಸನೆ ಗೊತ್ತಾಗ್ತಿಲ್ಲ, ರುಚಿ ತಿಳೀತಿಲ್ವಲ್ಲಾ‌ ಅನಿಸೋಕೆ ಶುರುವಾಯಿತು. ‌ಅದೂ ನಂತರದ ಎರಡು ದಿನಗಳಲ್ಲಿ ಸರಿ ಹೋಯಿತು. ಥರ್ಮಾಮೀಟರ್ ಇತ್ತಾದರೂ ಎರಡು ಸಾರಿಯಷ್ಟೇ ನೋಡಿಕೊಂಡಿದ್ದು. ಆದರೆ ಜ್ವರ, ಸುಸ್ತಿರುವಾಗ ಪಲ್ಸ್ ಆಕ್ಸಿಮೀಟರ್‍ನಿಂದ ಆಗಾಗ್ಗೆ ಆಕ್ಸಿಜನ್ ಸ್ಯಾಚುರೇಷನ್ ಪ್ರಮಾಣವನ್ನು ನೋಡಿಕೊಳ್ಳುತ್ತಿದ್ದೆವು. ಯಾವಾಗಲೂ ಅದು ಶೇ.93ಕ್ಕಿಂತ ಕಡಿಮೆ ಆಗಲಿಲ್ಲ. 17ನೇ ದಿನ ಕ್ವಾರಂಟೈನ್‍ನಿಂದ ಹೊರ ಹೋಗುವುದಿದೆ.
    ಈಗ? ಕೊರೊನಾ ಜ್ವರ ಬಂದಾಗ ಇದ್ದುದಕ್ಕಿಂತ ಆರೋಗ್ಯದಿಂದ ಇದ್ದೇನೆ. ಸಂಪೂರ್ಣ ಗುಣಮುಖನಾಗಿದ್ದೇನೆ.

ಇದು ಸ್ವಲ್ಪವೂ ರೋಗಲಕ್ಷಣಗಳಿರದಿದ್ದ ಕೊರೊನಾ ಸೋಂಕಿತನ ಕಥೆ ಅಲ್ಲ. ಮಧ್ಯಮ ಪ್ರಮಾಣದ ರೋಗಲಕ್ಷಣಗಳಿದ್ದ ರೋಗಿಯ ಸ್ವಂತ ಕಥೆ. ಅಂದರೆ ಬಹುತೇಕ ಸೋಂಕಿತರು (ಶೇ.80ರಿಂದ ಶೇ.90) ಈ ಲಕ್ಷಣಗಳನ್ನೂ ಹೊಂದಿರುವುದಿಲ್ಲ. ಟೆಸ್ಟ್ ಮಾಡಿಸಿದರೆ ಮಾತ್ರ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಗೊತ್ತಾಗುತ್ತದೆ. ರೋಗ ಲಕ್ಷಣಗಳೂ ಕಾಣಿಸಿಕೊಳ್ಳುವ ಶೇ.10ರಲ್ಲಿ ಬರುವ ಕೇಸು ನನ್ನದು.

ಅಂದ ಹಾಗೆ ಇನ್ನೊಂದು ಮಾತು ಹೇಳಬೇಕು. ಜ್ವರ ಬರುವ ಮುಂಚೆ ತೀರಾ ವಿಪರೀತ ಎನ್ನುವಷ್ಟು ಮುನ್ನೆಚ್ಚರಿಕೆಗಳನ್ನೇನೂ ತೆಗೆದುಕೊಂಡಿರಲಿಲ್ಲ. ಹೀಗಿದ್ದರೂ, ನಮ್ಮ ಸುತ್ತಲಿನ ಯಾರೊಬ್ಬರಿಗೂ ಕೊರೊನಾ ಲಕ್ಷಣಗಳು ಬಂದಿಲ್ಲ. ಜೊತೆಯಲ್ಲೇ ಇದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಆದರೆ, ಆತಂಕದ ಕಾರಣಕ್ಕೂ ಗಂಟಲಲ್ಲಿ ಕೆರೆತ ಕೆಮ್ಮು ಗಾಬರಿ ಹುಟ್ಟಿಸುತ್ತದಾದ್ದರಿಂದ ತೀರಾ ಸನಿಹದಲ್ಲಿದ್ದ ಮೂವರು ಟೆಸ್ಟ್ ಮಾಡಿಸಿಕೊಂಡರು. ಮೂವರದ್ದೂ ನೆಗೆಟಿವ್. ನಾವ್ಯಾರಿಗೂ ಸೋಂಕು ಹರಡಲಿಲ್ಲ ಎಂದು ಖುಷಿ ಪಡಬೇಕೋ ಅಥವಾ ಜೊತೆಗಿದ್ದವರಲ್ಲಿ ಹೆಚ್ಚಿನವರು 30-40 ವಯಸ್ಸಿನೊಳಗಿನವರಾದ್ದರಿಂದ ಸೋಂಕು ಬಂದಿದ್ದರೆ ಅವರಿಗೂ ಒಂದಷ್ಟು ಕೊರೊನಾ ನಿರೋಧಕ ಶಕ್ತಿ ಬರುವುದು ತಪ್ಪಿ ಹೋಯಿತು ಎಂದು ಬೇಸರ ಪಟ್ಟುಕೊಳ್ಳಬೇಕೋ ಗೊತಗೊತ್ತಾಗುತ್ತಿಲ್ಲ. ಏನೇ ಇರಲಿ, ಕೊರೊನಾ ಬಂತು ಮತ್ತು ಹೋಯಿತು.

(ವಿ.ಸೂ: ಎಲ್ಲರಿಗೂ ಹೀಗೇ ಆಗುತ್ತದೆ ಎಂದೇನಲ್ಲ. ಆದರೆ ಶೇ.5ರಷ್ಟು ಕೇಸುಗಳು ಹೀಗೆಯೇ. ಶೇ.90ರಷ್ಟಕ್ಕೆ ಇಷ್ಟೂ ಕಾಣುವುದಿಲ್ಲ. ಹಾಗಾಗಿ ಎಚ್ಚರಿಕೆ ಇರಲಿ, ಭಯ ಬೇಡ ಅಂತ ಪುಸ್ತಕ ಓದಿ ಹೇಳುತ್ತಿದ್ದವನು ಈಗ ಸ್ವಂತ ಅನುಭವದಿಂದ ಹೇಳುತ್ತಿದ್ದೇನೆ. ಇನ್ನು ಕ್ವಾರಂಟೈನ್ ಸಂದರ್ಭದ ಅಧ್ಯಯನದಿಂದ ಕಲಿತುಕೊಂಡ ಅಷ್ಟಿಷ್ಟು ಕೊರೊನಾ ಸಂಗತಿಗಳನ್ನು ನಾನುಗೌರಿ.ಕಾಂ ನಾಳೆಯಿಂದ ಪ್ರಕಟಿಸಲಿದೆ. ಅದನ್ನು ಇಲ್ಲಿ ಷೇರ್ ಮಾಡುತ್ತೇನೆ.)

೦ ಎಚ್.ವಿ.ವಾಸು

Leave a Reply

Your email address will not be published. Required fields are marked *

error: Content is protected !!