ಬುದ್ದ ಬಸವ ಅಂಬೇಡ್ಕರ್ ವಾದಿಗಳಿಗೆ ಬಸವಮಾರ್ಗ ಪ್ರತಿಷ್ಠಾನದಿಂದ ಗೌರವದ ಶರಣುಗಳು

ಬುದ್ದ ಬಸವ ಅಂಬೇಡ್ಕರವಾದಿಗಳಿಗೆ ಬಸವಮಾರ್ಗ ಪ್ರತಿಷ್ಠಾನದಿಂದ ಗೌರವದ ಶರಣುಗಳು

ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭೆಯ ಮಹಾಸಭೆಯ ರಾಜ್ಯ ಕಾರ್ಯದರ್ಶಿ ಯಾಗಿರುವ ಪತ್ರಕರ್ತ, ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆಯವರ ಅಭಿವ್ಯಕ್ತಿಯ ಪರವಾದ ಅಲೆ ಕಂಡು ಮೂಕ ವಿಸ್ಮಯನಾಗಿರುವೆವು.

ಕೇವಲ ಕೆಲವೇ ವರ್ಷಗಳಲ್ಲಿ ಬುದ್ದ ಬಸವ ಅಂಬೇಡ್ಕರ ಪುಲೆ ಸ್ವಾಮಿ ವಿವೇಕಾನಂದ , ನಾರಾಯಣ ಗುರು ಹಾಗೂ ಪೆರಿಯಾರ ಮುಂತಾದವರ ವಿಚಾರಗಳನ್ನು ದಿಟ್ಟವಾಗಿ ತಿಳಿಸುತ್ತ, ಬರಹಗಳ ಮೂಲಕ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲೆ ನಾಡಿನ ಮೂಲೆ ಮೂಲೆಯಿಂದ ಹರಿದು ಬಂದ ಪ್ರೀತಿಯನ್ನು ಕಂಡು ಮೌನವಾಗಿದ್ದೇವೆ.

ನಾವು ನೀವೆಲ್ಲ ಬಲ್ಲಂತೆ ಸತ್ಯಂಪೇಟೆಯವರು ವಸ್ತು ನಿಷ್ಢವಾಗಿ ಮಾತನಾಡುವವರು, ಬರೆಯುವವರು. ಅವರ ಮಾತು ಅಧರಕ್ಕೆ ಕಹಿ ಹೃದಯಕ್ಕೆ ಸಿಹಿ. ಆದರೆ ಅವರ ಒಳಗಿನ ಕಾಳಜಿ ಮಾತ್ರ ಪ್ರಶ್ನಾತೀತ. ಇದನ್ನು ಸರಿಯಾಗಿ ಗ್ರಹಿಸಿದ ಮೂಲಭೂತವಾದಿಗಳು ಪೊಲೀಸ್ ಕೇಸ್ ದಾಖಲಿಸುವ ಮೂಲಕ ಅಭಿವ್ಯಕ್ತಿಯನ್ನು ಹತ್ತಿಕ್ಕಲು ಬಯಸಿದ್ದರು. ಇದಕ್ಕೆ ನಾಡಿನ ತುಂಬೆಲ್ಲ ಬುದ್ದ ಬಸವ ಅಂಬೇಡ್ಕರ್ ಹಾಗೂ ಕಮ್ಯುನಿಸ್ಟ್ ಪಕ್ಷ ಹಾಗೂ ಎಸ್.ಡಿ.ಪಿ.ಐ ಪ್ರತಿಭಟಿಸಿದರು.

ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ ಎಂಬ ಗಾದೆ ಮತ್ತೊಮ್ಮೆ ಸತ್ಯವೆಂದು ಸಾ ಬಿತಾಯಿತು.

ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸುವಂತೆ, ಉರಿಯ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡಿಸುವಂತೆ, ಹುಲಿಯ ಮೀಸೆಯ ಹಿಡಿದುಕೊಂಡು ಒಲಿದುಯ್ಯಲನಾಡುವಂತೆ, ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದಡೆ ಸುಣ್ಣಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ.

ಎಂಬ ಬಸವಣ್ಣನವರ ವಚನದ ಆಶಯದಂತೆ ಬಸವಾದಿ ಶರಣರ ವಿಚಾರ ಪ್ರಚುರ ಪಡಿಸುವ ವಿಶ್ವಾರಾಧ್ಯರ ತೆಕ್ಕೆಗೆ ಬೀಳುವುದೆಂದರೆ ಸುಣ್ಣದ ಕಲ್ಲು ಕಟ್ಟಿಕೊಂಡು ಮಡುವು ಬಿದ್ದಂತೆ, ಹುಲಿಯ ಮೀಸೆಯ ಹಿಡಿದುಯ್ಯಾಲೆ ಆಡಿದಂತೆ ಎಂಬುದು ಖಚಿತವಾಯಿತು.

ದಾವಣಗೆರೆಯ ರಾಮಪುರ ಮಠದ ಶ್ರೀ ವಿಶ್ವೇಶ್ವರಯ್ಯ ಸ್ವಾಮಿಗಳ ಪೂಜೆ ಸೈದ್ಧ್ಯಾಂತಿಕವಾಗಿ ಯಾರೂ ಒಪ್ಪಲು ಸಾಧ್ಯವಿಲ್ಲ. ಮುಳ್ಳು ಹಾವಿಗೆಯ ಮೇಲೆ ಕುಣಿದು ಕುಪ್ಪಳಿಸುದು ಸಂಪ್ರದಾಯ ಎಂದಿದ್ದರೂ ಅದು ಮೌಢ್ಯ ಎಂಬ ಮಾತನ್ನು ನಾವು ಗಮನಿಸಬೇಕು. ತಮ್ಮ ಮೇಲಿನ ಅತೀವ ವಿಶ್ವಾಸ ದಿಂದಲೇ ಸದರಿಯವರು ಕೊರೋನಾಗೆ ಬಲಿಯಾಗಿದ್ದು ವಿಷಾದನೀಯವಲ್ಲವೆ ?

ಈ ಕುರಿತು ನಿಜ ಧಾರ್ಮಿಕ ನಿಲುವುಗಳ ಕುರಿತು ಬರೆದರೆ ಅದು ಹೇಗೆ ನಿಂದೆ ಆಗುತ್ತದೆ ? ಅರಿತವರು ತಿಳಿಸಿ ಹೇಳಬೇಕು. ಯಾರದೋ ಒತ್ತಡಕ್ಕೆ ಒಳಗಾಗಿ ಸರಕಾರ ಮುಂದಾಲೋಚಿಸದೆ ಕ್ರಮಕೈಗೊಳ್ಳಲು ಮುಂದಾಗಬಾರದು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ಧ್ವನಿಗಳೆ ಜೀವಾಳ. ಸಕಾರಾತ್ಮಕ ಟೀಕೆ ಟಿಪ್ಪಣಿ ಸಮಾಜದ ಬೆಳವಣಿಗೆಗೆ ನಾಂದಿ. ಪತ್ರಕರ್ತನಾದ,ಶರಣ ಸಾಹಿತಿಯಾದ ವಿಶ್ವಾರಾಧ್ಯರ ಸಕಾರಣ ಟೀಕೆಗೆ ಏನೇನೋ ಅರ್ಥ ಕಲ್ಪಿಸಿ ಹಣಿಯಬೇಕೆಂಬ ಹುನ್ನಾರ ಎದ್ದು ಕಾಣುತ್ತದೆ.

ಆದ್ದರಿಂದಲೇ ನಾಡಿನ ತುಂಬೆಲ್ಲ ಪ್ರಜ್ಞಾವಂತ ಜನ ಅವರ ಪರ ಬೀದಿಗೆ ಇಳಿದಿದ್ದಾರೆ. ಇದು ನಮ್ಮ ಪ್ರತಿಷ್ಠಾನದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.

ನಿಮ್ಮ ಮುಡಿಗೆ ಹೂವ ತರುವೆವಲ್ಲದೆ, ಹುಲ್ಲತಾರೆವು. ತಮ್ಮ ಸಂಘಟನೆಯ ಶಕ್ತಿಗೆ ಸರಕಾರ ಬೆದರಿದೆ. ಇದಕ್ಕಿಂತ ಬಲ ಇನ್ನೊಂದು ಬೇಕೆ ?

ನಿಮಗೆಲ್ಲ ಮತ್ತೊಮ್ಮೆ ಗೌರವದ ವಂದನೆಗಳು.

೦ ಶಿವಣ್ಣ ಇಜೇರಿ,
ಕಾರ್ಯರ್ಶಿಗಳು ಬಸವಮಾರ್ಗ ಪ್ರತಿಷ್ಠಾನ, ಸತ್ಯಂಪೇಟೆ ಶಹಾಪುರ

Leave a Reply

Your email address will not be published. Required fields are marked *

error: Content is protected !!