ಶರಣರ ಬೆಳಕಿನ ಮಾರ್ಗದಲ್ಲಿ ನಡೆಯೋಣ

ಮನುಷ್ಯ ಸಂಘ ಜೀವಿ .ಯಾವುದಾದರು ಸಂಗ ಸಹವಾಸದಲ್ಲಿ ಇರಬಯಸುತ್ತಾನೆ.ಒಂಟಿಯಾಗಿ ಇರಲಿಕ್ಕೆ ಆತನಿಗೆ ಸಾಧ್ಯವಿಲ್ಲ.ಒಬ್ಬನೆ ಬಂದ ಮನುಷ್ಯ ಹೆಂಡತಿಯನ್ನು ತಂದು ಗಂಡನಾಗುತ್ತಾನೆ.ಮಕ್ಕಳನ್ನು ಹುಟ್ಟಿಸಿ ತಂದೆಯಾಗುತ್ತಾನೆ .ಮುಂದೆ ಇದು ಹನುಮನ ಬಾಲದಂತೆ ಹಾಗೆ ಬೆಳೆಯುತ್ತಲೆ ಹೋಗುತ್ತದೆ. ಸಂಸಾರಸ್ಥನಾದ ಮನುಷ್ಯ ತನ್ನದೆ ಆದ ಸಮಾಜ ಕಟ್ಟಿಕೊಳ್ಳ ಬಯಸುತ್ತಾನೆ. ತನ್ನ ಮೂಲಕ ಸಮಾಜದ ಅಭ್ಯುದಯವನ್ನು ಕಾಣುತ್ತಾನೆ.

ಬಸವಾದಿ ಶರಣರು ಸಂಗದ ಬಗ್ಗೆ ಹೇಳುತ್ತಾರೆ.

ಸಾರ ಸಜ್ಜನರ ಸಂಗವ‌ಮಾಡುವುದು,
ದೂರ ದುರ್ಜನರ ಸಂಗ ಬೇಡವಯ್ಯಾ. ಆವ ಹಾವಾದರೇನು ವಿಷನೋಂದೆ. ಅಂತವರ ಸಂಗ ಬೇಡವಯ್ಯಾ ಅಂತರಂಗ ಶುದ್ದವಿಲ್ಲದವರ ಸಂಗ ಸಿಂಗಿ ,ಕಾಳ ಕೂಟ ವಿಷವೋ ಕೂಡಲ ಸಂಗಮದೇವಯ್ಯ.

ನಾವು ನಡೆಯುವ ದಾರಿ ಸರಿ ಇದ್ದಾಗ ಮಾತ್ರ ನಮ್ಮ ಗುರಿ ಮುಟ್ಟಲು ಸಾದ್ಯ,ಇಲ್ಲದಿದ್ದರೆ ದಾರಿ ತಪ್ಪಿ ಅಸಫಲರಾಗ ಬೇಕಾಗುತ್ತದೆ. ಅದಕ್ಕಾಗಿ ನಾವು ಸರಿಯಾದ ಮಾರ್ಗವಿಡಿದವರ ಸಂಗ ಮಾಡಬೇಕಾಗುತ್ತದೆ.
ಅದಕ್ಕೆ ಚನ್ನ ಬಸವಣ್ಣನವರು ತಮ್ಮದೊಂದು ವಚನದಲ್ಲಿ ಹೀಗೆ ಹೇಳುತ್ತಾರೆ.

ಬೆಲ್ಲದ ನೀರೆರೆದಡೆನು ಬೇವು ಸಿಹಿಯಪ್ಪುದೆ,
ಕಸ್ತೂರಿಯ ಲೇಪವಿದ್ದಡೇನು ನೀರುಳ್ಳೆಯ ದುರ್ಗಂದ ದೂರಪ್ಪುದೆ? ಕಸುಗಾಯ ಹಿಸುಕಿದಡೇ, ಹಣ್ಣಿಗೆ ಹವಣಪ್ಪುದೆ? ಕಿರಿಯ ಮನದ ಮಾನವಂಗೆ ಬಹಿರಂಗದ ಬರೀಯ ಸಂಸ್ಕಾರವಾದಡೇನು ಭವಿಯಾಗಿಪ್ಪನಲ್ಲದೆ ಭಕ್ತನಪ್ಪನೆ ಕೂಡಲಚನ್ನ ಸಂಗಮದೇವ ಪೂರ್ವಗುಣವಳಿದು ಪುನರ್ಜಾತನಾಗದನ್ನಕ್ಕ?

ಎಂಬ ವಚನದಲ್ಲಿ ಬೇವು ಕಹಿತನ ಬಿಡಲಾಗದು. ನೀರುಳ್ಳಿ ತನ್ನ ಮೂಲ ವಾಸನೆಯಿಂದ ದೂರಾಗದು. ಎಷ್ಟೇ ಹಿಸುಕಿದರೂ ಕೂಡಾ ಕಾಯಿ ಹಣ್ಣಾಗುವುದಿಲ್ಲ. ಅದೆ ರೀತಿ ಮನುಷ್ಷತನ್ನ ಪೂರ್ವಗುಣವಳಿದಾಗ ಮಾತ್ರ ಭಕ್ತನಾಗಲು ಸಾಧ್ಯ ಎಂಬ ವಾಸ್ತವದ ಮಾತನ್ನು ಶರಣರು ಹೇಳುತ್ತಾರೆ. ಅವರ ದಾರಿಯಲ್ಲಿ ನಾವು ನಡೆಯ ಬೇಕಾದರೆ ನಮಗೆ ಗಟ್ಟಿತನ ಬೇಕಾಗುತ್ತದೆ. ನಮಗೆ ಮಾರ್ಗದರ್ಶಮಾಡಿದ ಗುರುವಾಗಲಿ ಬೇರೆ ಯಾರೇ ಆಗಲಿ ವಿಚಾರ ಹೇಳಬಹುದು. ಆಚರಣೆಗೆ ತರಬೇಕಾದವರು ನಾವೆ ಅಲ್ಲವೆ.

ಏರಿಯ ಕಟ್ಟಬಹುದಲ್ಲದೆ ನೀರ ತುಂಬ ಬಹುದೆ?
ಕೈದುವ ಕೊಡಬಹುದಲ್ಲದೆ ಕಲಿತನವ ಕೊಡ ಬಹುದೇ?ವಿವಾಹವ ಮಾಡ ಬಹುದಲ್ಲದೆ ಪುರುಷತನವ ಹರಸಬಹುದೇ? ಘನವ ತೋರಬಹುದಲ್ಲದೆ ನೆನಹು ನಿಲ್ಲಿಸ ಬಹುದೇ?
“ಓದು ಒಕ್ಕಾಲು ಬುದ್ದಿ ಮುಕ್ಕಾಲು” ಎಂಬ ಲೋಕದ ಗಾದೆಮಾತಿನಂತೆ ಸದ್ಗುರು ಕಾರುಣ್ಯವಾದರೂ ಸಾಧಿಸಿದವನಿಲ್ಲ ಸಕಳೇಶ್ವರಾ.

ಎಂದಿದ್ದಾರೆ ಸಕಳೇಶ ಮಾದರಸರು.
ಸ್ವ ಪ್ರಯತ್ನ ಮಾಡದಿದ್ದರೆ ಯಾವ ಕಾರ್ಯವೂ ಆಗುವುದಿಲ್ಲಾ. ಕತ್ತಿಹಿಡಿಯುವ ಕಲಿತನ, ನಮ್ಮಲ್ಲಿಯ ಪುರುಷತನವನ್ನು ನಾವು ಸಾಧಿಸ ಬೇಕಾಗುತ್ತದೆ. ಗುರು ದಾರಿ ತೋರಬಹುದು. ಆದರೆ ನಡೆಯ ಬೇಕಾದ ನಾವು ನಡೆಯದಿದ್ದರೆ ಅದು ಹೇಳಿದವರ ತಪ್ಪಲ್ಲ. ನಮ್ಮ ತಪ್ಪು.ಆಗುತ್ತದೆ. ಆ ತಪ್ಪು ಆಗದಂತೆ ನಮ್ಮಬದುಕಿನ ಸರಿ ದಾರಿಗೆ ನಡೆಯೋಣ. ಒಳ್ಳೆಯವರ ಸಂಗವನ್ನು ಮಾಡುವ ಮೂಲಕ ಬಸವ ಬೆಳಕಿನ ಮಾರ್ಗದ ಕಡೆ ನಡೆಯೋಣ ಅಲ್ಲವೇ.

೦ ಶಿವಣ್ಣ ಇಜೇರಿ ಶಹಾಪುರ

Leave a Reply

Your email address will not be published. Required fields are marked *

error: Content is protected !!