ಬೆಳಕು ಹೊರಗಿದ್ದರೆ ಸಾಕೆ ?

ಮಹಾನವಮಿ ಬಂದರೆ ಸಾಕು ಜನ ದೇವರಿಗೆ ದೀಪ ಹಾಕುವ ಸಡಗರ ನೊಡಬೇಕು, ಎರಡು ಕಣ್ಣುಗಳು ಸಾಲುವುದಿಲ್ಲ. ಸಸಿಯ ಹಾಕಿ ಅವುಗಳನ್ನು ಒಂಬತ್ತು ದಿವಸ ಸಾಕಿ ಹತ್ತನೆ ದಿನಕ್ಕೆ ಒಯ್ದು ನೀರಲ್ಲಿ ಹಾಕಿಬರುವ ಸಂಭ್ರಮ ಹೇಳತೀರದು.
ದೇವರಿಗೆ ನಾವು ಏನಾದರು ಕೊಡಲು ಸಾಧ್ಯವೇ? ಅವುಗಳನ್ನು ಮಾಡಿದವನು ಅವನೆ ಅಲ್ಲವೇ?ಅವನ ವಸ್ತುಗಳನ್ನ ಅವನಿಗೆ ಕೊಡಲು ನಾವಾರು?ಈ ಪ್ರಶ್ನೆಗಳನ್ನು ನಾವು ಹಾಕಿಕೊಂಡೇ ಇಲ್ಲ.ಆದರೆ ಶರಣರು ಈ ಪ್ರಶ್ನೆಗಳನ್ನು ಹಾಕಿಕೊಂಡಿದ್ದಾರೆ.

ಶರಣ ಸಿದ್ದರಾಮೇಶ್ವರರು ತಮ್ಮ ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ.

ಕೆರೆಯ ನೀರು,ಮರದ ಪುಷ್ಪಧರಿಸಿದಡೆನು ಅಯ್ಯ,
ಆಗುವುದೆ ಆಗುವುದೆ ಲಿಂಗಾರ್ಚನೆ?
ನೀರನೆರೆಯಲಿಕಾತನೇನು ಬಿಸಿಲಿನಿಂದ ಬಳಲಿದನೆ?
ಪುಷ್ಪದಿಂದ ಧರಿಸಲಿಕ್ಕಾತನೇನು ವಿಟರಾಜನೆ?
ನಿನ್ನಮನವೆಂಬ ನೀರಿನಿಂದ,ಜ್ಞಾನವೆಂಬಪುಷ್ಪದಿಂದ ಪೂಜಿಸಬಲ್ಲಡೆ ಭಕ್ತನೆಂಬೆ ,ಮಹೇಶ್ವರನೆಂಬೆ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನ.

ಎಂದಿದ್ದಾರೆ.
ಮನವೆಂಬನೀರಿನಿಂದ ಜ್ಞಾನವೆಂಬ ಪುಷ್ಪದಿಂದಾ ಪೂಜಿಸಬೇಕು ಆಗ ಅದು ಪೂಜೆಯಾಗುತ್ತದೆ ಎಂದಿದ್ದಾರೆ.

ಬರೀಹೊರಗೆ ದೀಪಾಹಚ್ಚಿ ಒಳಗೆ ಕತ್ತಲೆ ತುಂಬಿಕೊಂಡರೆ ಅದು ಬೆಳಕಾಗುವುದೆ ಇದು ಸಿದ್ಧರಾಮೇಶ್ವರರ ಪ್ರಶ್ನೆ.ದೇವನನ್ನು ನಾವು ಬರಿ ಹೊರಗೆ ಹುಡುಕುತ್ತಿದ್ದೇವೆ. ಆದರೆ ಆ ದೇವನು ಹೊರಗು ಇದ್ದಾನೆ, ಒಳಗೂ ಇದ್ದಾನೆ ಎಂಬ ಮಾತನ್ನು ಶರಣ ಅಂಬಿಗರ ಚೌಡಯ್ಯ ಹೇಳುತ್ತಾರೆ.


ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ,
ಮಡುವಿನೊಳಗರಸುವಡೆ ಮತ್ಸ್ಯ ಮಂಡೂಕನಲ್ಲ.
ತಪಂಬಡುವಡೆ ವೇಷಕ್ಕೆ ವೇಳೆಯಲ್ಲ.
ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ.
ಅಷ್ಟ ತನುವಿನೊಳಗೆ ಹುದುಗಿದ್ದ ಲಿಂಗವ ನಿಲುಕಿ ಕಂಡನಂಬಿಗ ಚೌಡಯ್ಯ.

ದೇವನು ಅಡವಿಯ ಗಿಡಗಂಟಿಗಳಲ್ಲಿ ಇಲ್ಲ. ಮಡುವಿನೊಳಗೆ ಹುಡುಕಲು ಆತ ಕಪ್ಪೆ ಮೀನಲ್ಲ.ತಪವ ಮಾಡಿದರೂ ಇಲ್ಲ. ಇನ್ನು ಉಪವಾಸ ಮಾಡಿ ಒಡಲು ದಂಡಿಸಲಿಕ್ಕೆ ಆತ ಕೊಡುವ ಸಾಲಗಾರನಲ್ಲ. ನಮ್ಮ ಅಂತರಾಳದಲ್ಲಿರುವ ವಿಚಾರದಿಂದಲೆ ಆತನನ್ನು ಕಾಣಬೇಕು .

ಆದರೆ ನಾವು ಒಳಗಿರುವ ನಮ್ಮ ಅಂತರಾಳವನ್ನು ಪ್ರಶ್ನೆ ಮಾಡಿಕೊಳ್ಳದೆ ಬರೀ ಹೊರಗೆ ಪೂಜಿಸಿದರೆ ಹೇಗೆ ?

ದೀಪದ ಬೆಳಕು ಕತ್ತಲೆ ಇದ್ದಾಗ ಮಾತ್ರ ಬೆಳಕು ನಿಡುತ್ತದೆ. ಆದರೆ ನಮ್ಮೊಳಗೆ ಇರುವ ಜ್ಞಾನದ ಬೆಳಕು ಹಗಲೂ ಇರುತ್ತದೆ ರಾತ್ರಿಯು ಇರುತ್ತದೆ. ನಾವಿರುವವರೆಗೆ ನಮ್ಮಲ್ಲಿ ಇರುತ್ತದೆ. ಅದಕ್ಕೆ ಬಸವಣ್ಣನವರು.

ಜ್ಞಾನದ ಬಲದಿಂದ ಅಜ್ಞಾನದ ಕೇಡುನೋಡಯ್ಯ
ಜ್ಯೋತಿಯ ಬಲದಿಂದ ತಮಂಧ ಕೇಡು ನೋಡಯ್ಯ,ಸತ್ಯದ ಬಲದಿಂದ ಅಸತ್ಯದ ಕೇಡು ನೊಡಯ್ಯ ಪರುಷ ಬಲದಿಂದ ಅವಲೋಹದ ಕೇಡು ನೊಡಯ್ಯ ಕೂಡಲಸಂಗನ ಶರಣರ ಅನುಭಾವ ದಿಂದ ಎನ್ನಭವದ ಕೇಡು ನೋಡಯ್ಯ

ಅಜ್ಞಾನವನ್ನು, ಅಸತ್ಯವನ್ನು ದೂರ ದೂರ ಸರಿಸಿ ಶರಣರ ಅನುಭಾವದ ಸತ್ಯದಕಡೆ ಹೋಗುವ ಮಾರ್ಗವನ್ನು ನಾವು ಹಿಡಿಯಬೇಕಾಗಿದೆ. ಬರೀಕಲ್ಲು ಮಣ್ಣು ಪೂಜಿಸಿ ಕಲಿಯುಗದ ಕತ್ತೆಗಳಾಗದೆ ಶರಣ ವಿಚಾರವನ್ನು ಒಪ್ಪಿ ಅಪ್ಪಿಕೊಂಡರೆ ನಮ್ಮ ಬದುಕು ಬಂಗಾರವಾಗದೆ ಇರದು .ಆ ದಿಸೆಯಲ್ಲಿ ನಾವು ನೀವೆಲ್ಲ ನಡೆಯೊಣ ಅಲ್ಲವೇ?

೦ ಶಿವಣ್ಣ ಇಜೇರಿ ಶಹಾಪುರ

Leave a Reply

Your email address will not be published. Required fields are marked *

error: Content is protected !!