ಪಶ್ಚಿಮ ಬಂಗಾಲದಲ್ಲಿ ಮತ್ತೆ ಚಿಗುರುತ್ತಿರುವ ಬ್ರಾಹ್ಮಣ್ಯವಾದಿ ಶಕ್ತಿಗಳು

ಪಶ್ಚಿಮ ಬಂಗಾಳದಲ್ಲಿ ಮತ್ತೆ ಚಿರುಗುತ್ತಿರುವ ಬ್ರಾಹ್ಮಣವಾದಿ ಪ್ರತಿಗಾಮಿ ಶಕ್ತಿಗಳು

~ ಡಾ. ಜೆ ಎಸ್ ಪಾಟೀಲ.


(ಡಾ. ಅಮಿತಾಬ್ ಚರ್ಕವರ್ತಿಯವರ ಫೆಬ್ರವರಿˌ 4, 2021 ರ ಗೌರಿಲಂಕೇಶ್ ಇಂಗ್ಲೀಷ್ ವೆಬ್ ನ್ಯೂಜ್ ಅಂಕಣ ಆಧಾರಿತ ಬರಹ)

ಅವಿಭಜಿತ ಬಂಗಾಳವು ಪೂರ್ವದಿಂದಲೂ ಪ್ರತಿಗಾಮಿ ಪುರೋಹಿತಶಾಹಿಗಳ ನೆಲ. ಸ್ವಾತಂತ್ರಪೂರ್ವದಲ್ಲೇ ದೇಶದ ಕೋಮು ಸಾಮರಸ್ಯ ಹಾನಿಗೆ ಬಂಗಾಳದ ನೆಲ ಸಾಕ್ಷಿಯಾಗಿದೆ. ಈಗ ಅಲ್ಲಿ ಮತ್ತೆ ಕೋಮುವಾದಿಗಳು ತಲೆ ಎತ್ತುತ್ತಿವೆ. ಫ್ಯಾಸಿಸಂ ವಿರುದ್ಧ ಹೋರಾಡಲು ಸಂಸದೀಯ ಮಾರ್ಗೋಪಾಯಗಳು ಸಾಕಾಗಲಾರವು. ಫ್ಯಾಸಿಸ್ಟ್ ವಿರೋಧಿಗಳು ಪ್ಯಾಸಿಜಂ ಸೋಲಿಸುವ ವಿಭಿನ್ನ ಮಾರ್ಗಗಳ ನಿಯಂತ್ರಣವನ್ನು ಸಾಧಿಸಬೇಕಿದೆ.

ಪಶ್ಚಿಮ ಬಂಗಾಳದೊಳಗಿನ ಇತ್ತೀಚಿನ ಘಟನಾವಳಿಗಳನ್ನು ಅವಲೋಕಿಸಿದಾಗ ಅಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯು ಸಂಘ ಪರಿವಾರ ಮತ್ತು ಅದರ ರಾಜಕೀಯ ಘಟಕವಾಗಿರುವ ಬಿಜೆಪಿ ಪಾಳೆಯದಲ್ಲಿ ಉಲ್ಲಾಸ ಹುಟ್ಟು ಹಾಕಿದೆ. ಬಿಜೆಪಿ ಮತ್ತು ಸಂಘ ಪರಿವಾರ ಅಲ್ಲಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ದೇಶದಲ್ಲಿ ನಡೆಯುತ್ತಿರುವ ಮಹತ್ವದ ರೈತ ಚಳುವಳಿ ಮೋದಿ ಸರ್ಕಾರದ ‘ಅಭಿವೃದ್ಧಿ’ ಮಾದರಿಯ ಅಸಲಿ ಮುಖವನ್ನು ಜನರೆದುರಿಗೆ ತೆರೆದಿಟ್ಟಿದೆ. ಕಳೆದ ಸಂಸತ್ ಚುನಾವಣೆಯ ನಂತರ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಗಣನೀಯವಾಗಿ ಚಿಗುರಿದೆ. ಸಂಘ ಹುಟ್ಟಿದಾಗಿನಿಂದ ಇಂತದ್ದೊಂದು ಆಶಾದಾಯಕ ಕನಸು ಕಂಡಿರಲಿಲ್ಲ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಲು ನಾಗಪುರದ ಪುರೋಹಿತರು ಹೆಚ್ಚಿನ ಒತ್ತನ್ನು ಕೊಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಗದ್ದುಗೆ ಏರುವ ಮೂಲಕ ಸಂಘವು ಈಶಾನ್ಯ ಭಾರತದ ಮೇಲೆ ತನ್ನ ನಿಯಂತ್ರಣ ಸ್ಥಾಪಿಸಲು ಹವಣಿಸುತ್ತಿದೆ. ಆ ಮೂಲಕ ಅದು ಈಶಾನ್ಯ ಭಾರತದ ಬೌದ್ದಿಕ ಕೋಟೆಯಾಗಿರುವ ಕಲ್ಕತ್ತಾ ನಗರವನ್ನು ವಶಪಡಿಸಿಕೊಳ್ಳುವುದಲ್ಲದೆ ಅಲ್ಲಿ ಭದ್ರವಾಗಿ ನೆಲೆ ನಿಂತ ಎಡಪಂಥಿಯ ವಿಚಾರಧಾರೆಯನ್ನು ಹುಡಿಗೊಳಿಸುವ ತನ್ನ ಶತಮಾನಗಳ ಕನಸು ಈಡೇರಿಸಿಕೊಳ್ಳಲು ತುದಿಗಾಲ ಮೇಲೆ ನಿಂತಂತಿದೆ.

ಈ ಬೆಳವಣಿಗೆಗೆ ಮೋದಿ ಸರಕಾರ ಮಾತ್ರ ಕಾರಣವಾಗಿದೆ ಎಂಬ ತಪ್ಪು ಕಲ್ಪನೆ ಬಹಳಷ್ಟು ಜನರಲ್ಲಿದೆ. ಇದಕ್ಕೆ ಮಮತಾ ಬ್ಯಾನರ್ಜಿ ನೇತ್ರತ್ವದ ತೃಣಮೂಲ ಕಾಂಗ್ರೆಸ್ ಆಡಳಿತವೇ ರಾಜಕಾರಣವೆಂದು ಎಡಪಂಥೀಯರು ವಾದಿಸುತ್ತಿದ್ದಾರೆ. ಆದರೆ ಬಂಗಾಳದಲ್ಲಿನ ಬಿಜೆಪಿ ಬೆಳವಣಿಗೆ ಅರ್ಥೈಸಬೇಕಾದರೆ ನಾವು ಬಂಗಾಳದ ಬ್ರಾಹ್ಮಣ ಫ್ಯಾಸಿಸ್ಟ್‌ಗಳ ಆಳವಾದ ಸೈದ್ಧಾಂತಿಕ ಮತ್ತು ಸಾಮಾಜೊ-ರಾಜಕೀಯ ಬೇರುಗಳನ್ನು ಗುರುತಿಸಲು ಪ್ರಯತ್ನಿಸಬೇಕು. ಪಶ್ಚಿಮ ಬಂಗಾಳದ ಸಾಮಾಜೊ-ಆರ್ಥಿಕ ಸ್ಥಿತಿಗತಿಗಳಲ್ಲಿ ಕಂಡುಬಂದ ಇತ್ತೀಚಿನ ಬದಲಾವಣೆಗಳ ಒಳನೋಟ ಮತ್ತು ವಿಶ್ಲೇಷಣೆಯು ಬಲಪಂಥೀಯ ಫ್ಯಾಸಿಸ್ಟ್‌ರ ದಾಳಿಯನ್ನು ಎದುರಿಸಲು ನಮಗೆ ಸಹಾಯ ಹಸಕಾರಿಯಾಗಬಲ್ಲದು.

ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಬ್ರಾಹ್ಮಣವಾದದ ಸೈದ್ಧಾಂತಿಕ ತಳಹದಿ

ನಮಗೆಲ್ಲ ತಿಳಿದಂತೆ ಹಿಂದೂ ಒಂದು ಧರ್ಮ ಸೂಚಕ ಪದವಾಗಿರದೆ ಅದೊಂದು ಪ್ರಾದೇಶಿಕ ಗುರುತಿಸುವಿಕೆ ಮತ್ತು ಜೀವನ ಮಾರ್ಗವನ್ನು ಪ್ರತಿನಿಧಿಸುವ ಪದವಾಗಿದೆ. ಪ್ರಾಚೀನ ಅಥವಾ ಮಧ್ಯಕಾಲೀನ ಭಾರತದಲ್ಲಿ ಹಿಂದೂ ಎಂಬ ಪದವು ಯಾವುದೇ ಧಾರ್ಮಿಕ ಪಂಥವನ್ನು ಸೂಚಿಸುತ್ತಿರಲಿಲ್ಲ. ಕ್ರಿಶ್ಚಿಯನ್ ಮಿಷನರಿಗಳು ಆರಂಭದಲ್ಲಿ ಈ ಪದವನ್ನು ಭಾರತದಲ್ಲಿ ವಾಸಿಸುವ ಮುಸ್ಲಿಮೇತರರ ಧಾರ್ಮಿಕ ನಂಬಿಕೆಗಳು, ಇಲ್ಲಿನ ಜನರ ಆಚರಣೆಗಳನ್ನು ವಿವರಿಸಲು ಮತ್ತು ವಿರೋಧಿಸಲು ಬಳಸಿದ ಪದವೆ ಹಿಂದು. ವಿದ್ಯಾವಂತ ಬ್ರಾಹ್ಮಣರು ಸ್ಥಳೀಯ ಧಾರ್ಮಿಕ ಆಚರಣೆಯ ಬಗ್ಗೆ ಮಿಷನರಿಗಳಿಗೆ ತಿಳುವಳಿಕೆಯನ್ನು ನೀಡಿದ್ದರು. ಈ ಎಲ್ಲ ಆಚರಣೆಗಳು ಮೂಲಭೂತವಾಗಿ ಬ್ರಾಹ್ಮಣ ಸ್ವರೂಪದ್ದಾಗಿದ್ದವು. ಆದ್ದರಿಂದ, ಯುರೋಪಿಯನ್ನರು ಈ ಕ್ರಮಾನುಗತ ಬ್ರಾಹ್ಮಣ ನಂಬಿಕೆ ವ್ಯವಸ್ಥೆಯನ್ನು ಹಿಂದೂ ಧರ್ಮಕ್ಕೆ ಸಮೀಕರಿಸಿ ಮಾತನಾಡಿದರು. 1816 ರಲ್ಲಿ ರಾಜಾ ರಾಮಮೋಹನ್ ರಾಯ್ ಈ ಪದವನ್ನು ಮೊದಲು ಧಾರ್ಮಿಕ ದೃಷ್ಟಿಕೋನದಲ್ಲಿ ಬಳಸುತ್ತ ಬ್ರಾಹ್ಮಣರ ಮೂರ್ತಿ ಪೂಜೆಯನ್ನು ಖಂಡಿಸಿದ್ದರು.

19 ನೇ ಶತಮಾನದ ಮಧ್ಯಭಾಗದಲ್ಲಿ ಬಂಗಾಳದಲ್ಲಿ ನಾವು ಗಮನಿಸಿದ ಹಿಂದೂ ಚಳುವಳಿ ಒಂದು ವಸಾಹತುಶಾಹಿ ವ್ಯವಸ್ಥೆಯನ್ನು ಹುಟ್ಟುಹಾಕಿತು. ರಾಜನಾರಾಯಣ್ ಬಸು ಈ ಹಿಂದೂ ಕ್ರಾಂತಿಯ ಹರಿಕಾರ. ಬಸು ಮತ್ತು ಕೋಲ್ಕತ್ತಾದ ನಬಗೋಪಾಲ್ ಮಿತ್ರ ಅವರು 1867 ರಲ್ಲಿ ಹಿಂದೂ ಮೇಳ ಎಂಬ ಸಮಾವೇಷವನ್ನು ಆರಂಭಿಸುವ ಮೂಲಕ ಹಿಂದೂ ದಂಗೆಯ ಕಲ್ಪನೆಯನ್ನು ಹರಡಿದರು. ಸಂಬಂಧದಲ್ಲಿ ಅರಬಿಂದೊ ಅವರಿಗೆ ತಾತನಾಗುತ್ತಿದ್ದ ರಾಜನಾರಾಯಣ್ ಬಸು 1867 ರಲ್ಲಿ “ಬಂಗಾಳದ ಸ್ಥಳಿಯ ವಿದ್ಯಾವಂತ ಜನರಲ್ಲಿ ರಾಷ್ಟ್ರೀಯತೆಯ ಭಾವನೆ ಮೂಡಿಸುವ ಸಮಾಜದ ಕುರಿತು ಮಾಹಿತಿ ಪುಸ್ತಕ” ವನ್ನು ಬರೆದಿದ್ದರು. ಬಸು ಮತ್ತು ಮಿತ್ರ ಅವರು ಸೇರಿಕೊಂಡು ‘ನ್ಯಾಷನಲ್ ಸ್ಕೂಲ್’ ಆಯೋಜಿಸಿ, ಅದರಡಿಯಲ್ಲಿ ‘ನ್ಯಾಷನಲ್ ಜಿಮ್ನಾಷಿಯಂ’ ಮತ್ತು ‘ನ್ಯಾಷನಲ್ ಸೊಸೈಟಿ’ ಸ್ಥಾಪಿಸಿದ್ದರು. ಅಮರ್ ದತ್ತಾ 2007 ರಲ್ಲಿ ಬಂಗಾಲಿ ವಿದ್ಯಾವಂತ ಬ್ರಾಹ್ಮಣರು ಸ್ಥಾಪಿಸಿದ ಸಮಾಜವನ್ನು ನಿಜ ಅರ್ಥದಲ್ಲಿ ರಾಷ್ಟ್ರೀಯ ಸಮಾಜ ಎಂದು ಗುರುತಿಸಬೇಕು ಎಂದು ವಾದಿಸಿದ್ದರು.

ರಾಜನಾರಾಯಣ್ ಅವರು ತಮ್ಮ, ‘ಪ್ರಾಚೀನ ಹಿಂದೂಗಳ ಭರವಸೆ’ ಎಂಬ ಪುಸ್ತಕದಲ್ಲಿ, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರನ್ನು ಹೊರತುಪಡಿಸಿ, ಸಿಖ್, ಬೌದ್ಧ, ಜೈನ ಮತ್ತು ಬ್ರಾಹ್ಮಣ ಧರ್ಮದಂತಹ ಎಲ್ಲಾ ಇತರ ಧರ್ಮಗಳು ಹಿಂದೂ ಧರ್ಮಕ್ಕೆ ಸೇರಿವೆ ಎಂದು ಬರೆದಿದ್ದರು. ಅವರು ‘ಮಹಾ ಹಿಂದೂ ಸಮಿತಿ’ ಸ್ಥಾಪಿಸಲು ಸಲಹೆ ನೀಡಿದರು ಮತ್ತು ಹಿಂದೂ ಮಹಾಸಭೆಯ ಮುಂಚೂಣಿಯಲ್ಲಿ ‘ಭಾರತ್ ಧರ್ಮ ಮಹಾಮಂಡಲ್’ ಅನ್ನು ಸ್ಥಾಪಿಸಿದ್ದರು. ಈ ಸಂಘಟನೆಯು ಇಡೀ ಭಾರತ ಮತ್ತು ವಿಶ್ವದ ಮೇಲೆ ಪ್ರಾಬಲ್ಯ ಸಾಧಿಸುವ ಸಲುವಾಗಿ ಪ್ರಬಲ ಹಿಂದೂ ರಾಷ್ಟ್ರವನ್ನು ನಿರ್ಮಿಸಲಿದೆ ಎಂದು ರಾಜನಾರಾಯಣ್ ನಂಬಿದ್ದರು. ರಾಜನಾರಾಯಣ್ ತಮ್ಮ ಪುಸ್ತಕದಲ್ಲಿ ವರ್ಣ ವ್ಯವಸ್ಥೆಯನ್ನು ಶ್ಲಾಘಿಸಿˌ ಬ್ರಾಹ್ಮಣರು ‘ಭೂಮಿಯ ಮೇಲಿನ ದೇವರು’ ಎಂದು ಅಭಿಪ್ರಾಯ ಪಟ್ಚಿದ್ದರು.

ಜ್ಯೋತಿ ಬಸು

ಬಸು ಅವರ ಈ ಹಿಂದೂ ಕ್ರಾಂತಿ ಮತ್ತು ಬ್ರಾಹ್ಮಣ ಕೋಮುವಾದ ಸಮಕಾಲೀನ ಬಂಗಾಳಿ ಸಾಹಿತ್ಯದಲ್ಲಿಯೂ ವ್ಯಕ್ತವಾಗಿತ್ತು. ರಂಗಲಾಲ್ ಬಂಡೋಪಾಧ್ಯಾಯ, ನಬಿನ್ ಚಂದ್ರ ಸೇನ್ ಮುಂತಾದ ಕವಿಗಳು ತಮ್ಮ ಸಾಹಿತ್ಯ ಕೃತಿಗಳಲ್ಲಿ ಈ ಸಿದ್ಧಾಂತವನ್ನು ಪ್ರಚಾರ ಮಾಡಿದ್ದರು. ಶಾಸಧರ್ ತರ್ಕಚುರಾಮೋನಿ ಅವರು ‘ಆರ್ಯ ಧರ್ಮ ಪ್ರಚಾರೋನಿ ಸಭೆ’ ಮತ್ತು ‘ಹರಿಸಭೆ’ ರಚಿಸಿದ್ದರು. ಅರಬಿಂದೋ ಅವರನ್ನು ‘ಪ್ರೇರಕ ಮತ್ತು ರಾಜಕೀಯ ಗುರು’ ಎಂದು ಚಿತ್ರಿಸಿದ ಈ ಹಿಂದೂ ಕ್ರಾಂತಿಯಲ್ಲಿ ಬಂಕಿಂಚಂದ್ರ ಚಟ್ಟೋಪಾಧ್ಯಾಯ ಪ್ರಮುಖ ವ್ಯಕ್ತಿ. ಬಂಕಿಮ್ ಅವರ ಹೆಚ್ಚಿನ ಕಾದಂಬರಿಗಳಲ್ಲಿ, ಅವರು ಹಿಂದೂಗಳನ್ನು ‘ನಮ್ಮವರು’ ಮತ್ತು ಮುಸ್ಲಿಮರನ್ನು ‘ಪರರರು’ ಎಂದು ವ್ಯಾಖ್ಯಾನಿಸಿದ್ದಾರೆ. ಅವರ ಪ್ರಸಿದ್ಧ ಕಾದಂಬರಿ ಆನಂದ ಮಠದಲ್ಲಿ, ಭಾರತದ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಎಂದು ಹೇಳಲಾಗಿದೆ. ಅವರು 1 ನೇ ಆವೃತ್ತಿಯಲ್ಲಿ ಉಲ್ಲೇಖಿಸಿರುವ ‘ಕಿಲ್ ಬ್ರಿಟಿಷ್’ ಎಂಬ ವಾಕ್ಯವನ್ನು ನಂತರದ ಆವೃತ್ತಿಗಳಲ್ಲಿ ‘ಕಿಲ್ ನೆರೆ’ (ಮುಸ್ಲಿಂ) ಎಂದು ಬದಲಾಯಿಸಿದ್ದರು.

ನೀವು ಬಂಗಾಳದ ನೈಜ ಇತಿಹಾಸವನ್ನು ನೋಡಿದರೆ ಅದು ಮರಾಠರ ಆಕ್ರಮಣಕ್ಕೆ ತುತ್ತಾಗಿದ್ದೆ ಹೆಚ್ಚು. ಮರಾಠರು ಬಂಗಾಳವನ್ನು ಅತಿ ಹೆಚ್ಚು ದರೋಡೆ ಹಾಗು ಲೂಟಿ ಮಾಡಿದ್ದರು. ಆದರೆ ಬಂಕಿಮ್‌ ಅವರ ಹಿಂದೂ ಪಕ್ಷಪಾತವು ಈ ನೈಜ ಇತಿಹಾಸವನ್ನು ಕಡೆಗಣಿಸಿತ್ತು. ಬಂಕಿಮ್ ಅವರ ನಂತರ ಸ್ವಾಮಿ ವಿವೇಕಾನಂದರು ಭಾರತದ ರಾಷ್ಟ್ರೀಯತೆಯನ್ನು ಹಿಂದೂ ಅಡಿಪಾಯದ ಮೇಲೆ ನೋಡುವಂತೆ ಮಾಡಿದರು. 1898 ರ ಸಂದರ್ಶನವೊಂದರಲ್ಲಿ, ವಿವೇಕಾನಂದರು ಭಾರತದಲ್ಲಿ ತಮ್ಮ ಚಳುವಳಿಯ ಉದ್ದೇಶ “ಹಿಂದೂ ಧರ್ಮದ ಸಾಮಾನ್ಯ ಆಧಾರವನ್ನು ಗುರುತಿಸುವುದು ಮತ್ತು ಹಿಂದೂಗಳಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸುವುದು” ಎಂದು ಹೇಳಿದ್ದರು. ವಿವೇಕಾನಂದರ ಕೆಲವು ಉದಾರವಾದಿ ಮತ್ತು ಪ್ರಗತಿಪರ ಬರಹಗಳು ಅವರ ಹಿಂದುತ್ವ ಮೂಲದ ರಾಷ್ಟ್ರೀಯತಾವಾದಿ ನಿಲುವನ್ನು ನಿರಾಕರಿಸುವುದಿಲ್ಲ.

ಅರಬಿಂದೋ ಅವರು “ರಾಷ್ಟ್ರೀಯ ಪುನರುತ್ಥಾನಕ್ಕಾಗಿ ನಮ್ಮ ಚಳುವಳಿ ರಾಜಕೀಯೇತರವಾಗಿದ್ದು, ಅದು ಆಧ್ಯಾತ್ಮಿಕ ಮತ್ತು ಧಾರ್ಮಿಕ ತಳಹದಿಯನ್ನು ಹೊಂದಿದೆ. ನಾನು ಬಹಿರಂಗವಾಗಿ ಪುನರುಚ್ಚರಿಸುತ್ತೇನೆ: ಸನಾತನ ಧರ್ಮ ನಮ್ಮ ರಾಷ್ಟ್ರ.” ಎಂದು ಬರೆದುಕೊಂಡಿದ್ದರು. 20 ನೇ ಶತಮಾನದ ಆರಂಭದಲ್ಲಿ ಕೊಲ್ಕತ್ತಾದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಡಾ.ಕೆ.ಬಿ.ಹೆಡ್ಗೆವಾರ್ ಅವರು ಅರಬಿಂದೋ ಅವರ ಈ ಮಾತುಗಳಿಂದ ಪ್ರಭಾವಿತರಾಗಿ ಮುಂದೆ ಆರ್‌ಎಸ್‌ಎಸ್‌ನ ಸೈದ್ಧಾಂತಿಕ ತಂದೆಯಾದದ್ದು ಆಶ್ಚರ್ಯದ ಸಂಗತಿಯಲ್ಲ. ವಸಾಹತುಶಾಹಿ ‘ರಾಷ್ಟ್ರೀಯವಾದಿಗಳು’ ಎಂದು ಕರೆಯಲ್ಪಡುವವರ ಸಿದ್ಧಾಂತ ಮತ್ತು ಸಾಂಸ್ಥಿಕ ಚಟುವಟಿಕೆಗಳನ್ನು ಗಮನಿಸಿದರೆ, ಆರ್‌ಎಸ್‌ಎಸ್ ಮತ್ತು ರಾಜನಾರಾಯಣ್, ನಬಗೋಪಾಲ್, ಬಂಕಿಮ್ ಮುಂತಾದವರ ನಡುವಿನ ಆಶ್ಚರ್ಯಕರ ಹೋಲಿಕೆಗಳನ್ನು ನಾವು ಗಮನಿಸಬಹುದು.
ಬಂಗಾಳದ ಬೌದ್ಧಿಕ ಜಗತ್ತು ಜಾತ್ಯತೀತ, ಪ್ರಜಾಪ್ರಭುತ್ವ, ಆಮೂಲಾಗ್ರ ಸಂಪ್ರದಾಯಗಳು ಮತ್ತು ಕೋಮುವಾದಿ ಹಿಂದುತ್ವ ಈ ಉಭಯ ಪರಂಪರೆಗಳನ್ನು ಹೊಂದಿದೆ ಎನ್ನುವುದು ನಾವು ವಿಶೇಷವಾಗಿ ಗಮನಿಸಬೇಕಾಗಿದೆ.

ಪಶ್ಚಿಮ ಬಂಗಾಳದಲ್ಲಿ ಬ್ರಾಹ್ಮಣ ಬೌದ್ಧಿಕ ಪರಂಪರೆಯು ಆಳವಾದ ಮೂಲ ನೆಲೆಯನ್ನು ಹೊಂದಿದೆ. ಬಂಗಾಳವು ಸಹಿಷ್ಣುತೆ, ಜಾತ್ಯತೀತತೆ ಮತ್ತು ತರ್ಕಬದ್ಧ ತಿಳುವಳಿಕೆಯ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಆದರೆ ಇದರ ಒಟ್ಟಿಗೆ ಬಲವಾದ ಬ್ರಾಹ್ಮಣ ಬೌದ್ಧಿಕ ಸಂಪ್ರದಾಯವೂ ಇದೆ. ನಾವು ಈ ಉಭಯ ವಿಷಯಗಳನ್ನು ಅಲಕ್ಷಿಸಿದರೆˌ ಬಂಗಾಳದಲ್ಲಿ ಈ ಬ್ರಾಹ್ಮಣ ಫ್ಯಾಸಿಸ್ಟ್ ಶಕ್ತಿಯ ಹೊರಹೊಮ್ಮುವಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಕಾಗುತ್ತದೆ.

ಪಶ್ಚಿಮ ಬಂಗಾಳದಲ್ಲಿ ಬ್ರಾಹ್ಮಣವಾದದ ಸಾಮಾಜಿಕˌ ಆರ್ಥಿಕ ಮತ್ತು ರಾಜಕೀಯ ದೃಷ್ಟಿಕೋನ

ಕ್ರಿ.ಶ. 11 ಮತ್ತು 12 ನೇ ಶತಮಾನದ ಸೇನ್ ರಾಜ ಮನೆತನದಿಂದ ಆರಂಭಗೊಂಡು ಬಂಗಾಳದ ಇಂದಿನ ಊಳಿಗಮಾನ್ಯ ಭೂಮಾಲೀಕರು ಹೆಚ್ಚಾಗಿ ಬ್ರಾಹ್ಮಣರು. ಸುಲ್ತಾನರ ಆಡಳಿತದಲ್ಲೂ ಈ ಸ್ಥಿತಿ ಬದಾಲಾಗಲಿಲ್ಲ. ಈ ಸೆನ್ ಗಳು ಕನ್ನಡ ಮೂಲದ ಬ್ರಾಹ್ಮಣರಾಗಿದ್ದು ಅವರು ಬಂಗಾಳದ ಬ್ರಾಹ್ಮಣರಿಗೆ ಗರಿಷ್ಠ ಪ್ರಮಾಣದಲ್ಲಿ ಭೂಮಿಯನ್ನು ಹಂಚಿದ್ದರು. ಹಾಗಾಗಿˌ ಬಂಗಾಳದಲ್ಲಿ ಹೆಚ್ಚಿನ ಪ್ರಮಾಣದ ಭೂ ಮಾಲಿಕರು ಕೆಲವು ಅಪವಾದಗಳ ಹೊರತಾಗಿ ಮೇಲ್ಜಾತಿಯವರು ಮತ್ತು ಹೆಚ್ಚಾಗಿ ಬ್ರಾಹ್ಮಣರು. ಬಂಗಾಳದ ಜಾತಿ ವ್ಯವಸ್ಥೆಯು ಉತ್ತರ ಭಾರತಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಬಂಗಾಳದಲ್ಲಿ ಶೂದ್ರರನ್ನು ಅಸ್ಪೃಶ್ಯರು, ಬುಡಕಟ್ಟು ಜನಾಂಗದವರು ಮತ್ತು ಮುಸ್ಲಿಮರೆಂದು ಗುರುತಿಸಲಾಗುತ್ತದೆ. ಅವಿಭಜಿತ ಬಂಗಾಳ ಮತ್ತು ಇಂದಿನ ಪಶ್ಚಿಮ ಬಂಗಾಳ ಎರಡೂ ಗಮನಾರ್ಹ ಸಂಖ್ಯೆಯ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿವೆ. ಬಂಗಾಳಿ ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಬಹುಸಂಖ್ಯಾತ ಮುಸ್ಲಿಮರು ರಾಷ್ಟ್ರೀಯವಾದಿಗಳು ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಬಂಗಾಲಿ ದಲಿತರು ಮತ್ತು ಮುಸ್ಲಿಮರು ಹೆಚ್ಚಾಗಿ ಬಡವರು ಮತ್ತು ಭೂಹೀನ ರೈತರು. ಬಂಗಾಳದ ಕೆಲವು ನಿರ್ದಿಷ್ಟ ಜಿಲ್ಲೆಗಳ ಹೊರತಾಗಿ, ಇದು ಭೂಮಿ ಮತ್ತು ಆಸ್ತಿ ಹಂಚಿಕೆಯ ಸಾಮಾನ್ಯ ನಕ್ಷೆ. ಕೈಗಾರಿಕೀಕರಣ ಮತ್ತು ಭಾಗಶಃ ಭೂ ಸುಧಾರಣೆಯು ಈ ಸನ್ನಿವೇಶವನ್ನು ಬದಲಾಯಿಸುವಲ್ಲಿ ವಿಫಲವಾಗಿದೆ.

1905 ರಲ್ಲಿ ಬಂಗಾಳದ ವಿಭಜನೆಯ ಕೂಗು ಮೊದಲ ಬಾರಿ ಕೇಳಿಸಿದ್ದನ್ನು ನಾವು ನೋಡಿದಾಗ, ಈ ಸಾಮಾಜಿಕ ಆರ್ಥಿಕ ವಿರೋಧಾಭಾಸದ ಬಲವಾದ ಒಳಹರಿವು ನಮಗೆ ಗೋಚರಿಸದೆ ಇರದು. ಬ್ರಿಟಿಷ್ ವಸಾಹತುಶಾಹಿಗಳು ಕೋಮುವಾದ ಮತ್ತು ಧಾರ್ಮಿಕತೆಯಲ್ಲಿ ಬಿರುಕು ಸೃಷ್ಟಿಸಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸಿದರು. 1904 ರಲ್ಲಿ ಬಂಗಾಳದ ವಿಭಜನೆಯನ್ನು ಘೋಷಿಸುವ ಮೊದಲು ಲಾರ್ಡ್ ಕರ್ಜನ್ ಇದಕ್ಕೆ ಪೂರಕ ವಾತಾವರಣವನ್ನು ನಿರ್ಮಿಸಿದ. ಈ ಉದ್ದೇಶದಿಂದ ಬ್ರಿಟಿಷರು ಬಂಗಾಳವನ್ನು ಕೋಮುವಾದದ ಆಧಾರದಲ್ಲಿ ವಿಭಜಿಸಲು ಪ್ರಯತ್ನಿಸಿದರು. ಅದರ ಫಲಶ್ರುತಿ ಎನ್ನುವಂತೆ 1906 ರಲ್ಲಿ ಅಖಿಲ ಭಾರತ ಮುಸ್ಲಿಂ ಲೀಗ್ ಹುಟ್ಟಿಕೊಂಡು ಬಂಗಾಳ ವಿಭಜನೆಯನ್ನು ಬಲವಾಗಿ ಪ್ರತಿಪಾದಿಸಿತು. ಆ ಕಾಲದಲ್ಲಿ ಬಂಗಾಳಿ ಮುಸ್ಲಿಮರು ಆರ್ಥಿಕˌ ಶೈಕ್ಷಣಿಕˌ ಉದ್ಯೋಗ ಕ್ಷೇತ್ರಗಳಲ್ಲಿ ಕರುಣಾಜನಕ ಸ್ಥಿತಿ ಎದುರಿಸುತ್ತಿದ್ದರು. ಆ ಕಾರಣದಿಂದಲೇ ಅಂದಿನ ಬಂಗಾಳದ ಜನಪ್ರಿಯ ನಾಯಕ ಚಿತ್ತರಂಜನ್ ದಾಸ್ ಅವರು ಬಂಗಾಳದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಮರ ಜನಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯವನ್ನು ಪ್ರತಿಪಾಧಿಸಿದ್ದರು. ಅರಬಿಂದೋ ಘೋಸ್ ಮತ್ತು ಇತರರ ನೇತೃತ್ವದ ಸ್ವದೇಶಿ ಚಳುವಳಿಯಲ್ಲಿ ಹಿಂದೂ ಧಾರ್ಮಿಕ ಕೋಮು ವಾಸನೆ ಕ್ರಮೇಣ ಮುಸ್ಲಿಮರನ್ನು ಸ್ವದೇಶಿ ಚಳವಳಿಂದ ದೂರ ಉಳಿಯುವಂತೆ ಮಾಡಿತು.

ಬಂಗಾಳದಲ್ಲಿ ಅಸ್ಥಿತ್ವದಲ್ಲಿದ್ದ ಅಂದಿನ ಸ್ವರಾಜ್ಯ ಪಕ್ಷ, ಸುಭಾಸ್ ಚಂದ್ರ ಬೋಸ್ ಅವರ ರಾಜಕೀಯ ಪ್ರಭಾವ, ಕಮ್ಯುನಿಸ್ಟ್ ಮತ್ತು ಎಡ ಪಂಥಿಯ ಚಳುವಳಿಗಳ ಬೆಳವಣಿಗೆ ಮತ್ತು ಸೋವಿಯತ್ ಪ್ರಭಾವˌ ಇವುಗಳೊಂದಿಗೆ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಪರಿಕಲ್ಪನೆಯ ತತ್ವಗಳು ಬಂಗಾಳದ ವಿದ್ಯಾರ್ಥಿಗಳುˌ ಯುವಕರು ಮತ್ತು ಬುದ್ಧಿಜೀವಿಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿದವು. ಕಾರ್ಮಿಕರು ಮತ್ತು ರೈತರು ಕೂಡ ಹೆಚ್ಚಾಗಿ ಈ ಪ್ರಭಾವಕ್ಕೆ ಸಿಲುಕಿದ್ದರು. ಬಂಗಾಳದಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಚಳುವಳಿ ಕೂಡ ಈ ಜಾತ್ಯತೀತ ಶಕ್ತಿಗಳ ಪ್ರಭಾವದಲ್ಲಿತ್ತು. ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಕೂಡ ತಮ್ಮ ಪ್ರಭಾವದ ಪಾಕೆಟ್‌ಗಳನ್ನು ಹೊಂದಿದ್ದವು. ಹಿಂದೂ ಮಹಾಸಭಾದ ಕೋಮುವಾದಿಗಳು ಅನೇಕ ಕಾಂಗ್ರೆಸ್ ಮುಖಂಡರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದರು ಮತ್ತು ಕೆಲವು ಪ್ರಸಂಗಗಳಲ್ಲಿ ಅವರನ್ನು ಬೆಂಬಲಿಸುತ್ತಿದ್ದರು. ಪೂರ್ವ ಬಂಗಾಳದ ಬಡ ಮುಸ್ಲಿಂ ರೈತರು ಮತ್ತು ವಿದ್ಯಾವಂತ ಬುದ್ಧಿಜೀವಿಗಳು ಮುಸ್ಲಿಂ ಲೀಗ್ ನಾಯಕತ್ವವನ್ನು ಖಂಡಿಸುತ್ತಿದ್ದರು ಮತ್ತು ಫಜಲುಲ್ ಹಕ್ ಅವರ ಪ್ರಜಾ ಕ್ರಿಸಾಕ್ ಪಕ್ಷವು ಮುಸ್ಲಿಮ್ ಸಮುದಾಯದ ಮೇಲೆ ಅತಿಯಾದ ನಿಯಂತ್ರಣ ಹೊಂದಿತ್ತು. ಈ ಅವಧಿಯಲ್ಲಿ ಕೋಮುವಾದಿ ಶಕ್ತಿಗಳು ಹಿಂದೂ ಮಹಾಸಭಾ ಮತ್ತು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಮುಸ್ಲಿಂ ಮತ್ತು ಕೆಳಜಾತಿಯ ಬಡ ಹಿಂದೂಳಿಗೆ ಹಾಗು ಭೂಹೀನ ರೈತರಿಗೆ ದ್ರೋಹ ಬಗೆದಿವೆ.

ಆಗಿನ ಬಂಗಾಳದ ಪ್ರಾಂತೀಯ ಸರ್ಕಾರ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಮುನ್ನೆಡೆಸುತ್ತಿದ್ದವು. ಬಂಗಾಳದಲ್ಲಿ ನಲವತ್ತರ ದಶಕವು ಪೂರ್ತಿ ವಿರೋಧಾಭಾಸಗಳಿಂದ ಕೂಡಿತ್ತು. ಇದು ಬಂಗಾಳದಲ್ಲಿ ಭೀಕರ ಬರಗಾಲದ ಪರಿಸ್ಥಿತಿ, ಆಜಾದ್ ಹಿಂದ್ ಫೌಜ್ ಬೆಂಬಲಿಸುವ ಮಹಾನ್ ಸಾಮ್ರಾಜ್ಯಶಾಹಿ ವಿರೋಧಿ ಚಳುವಳಿಗಳು, ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿ ಕಾರ್ಮಿಕ-ರೈತ-ವಿದ್ಯಾರ್ಥಿ ಚಳುವಳಿಗಳು ಹೊರಹೊಮ್ಮಿದವು. ಇದು ಮುಂದೆ ಕಲ್ಕತ್ತಾ ಗಲಭೆˌ ಬಂಗಾಳ ರಾಜಕೀಯದ ಕೋಮುವಾದೀಕರಣ ಮತ್ತು ಕಾಂಗ್ರೆಸ್ ಪಕ್ಷದ ದ್ರೋಹ ಎಲ್ಲದಕ್ಕೂ ಸಾಕ್ಷಿಯಾಯಿತು. ಕಲ್ಕತ್ತಾ, ಬಿಹಾರ ಮತ್ತು ನೊಖಾಲಿ ಗಲಭೆಗಳು ಕೋಮು ಸೌಹಾರ್ದತೆಯ ವಾತಾವರಣವನ್ನು ಹುಟ್ಟುಹಾಕಿದವು. ಈ ಅವಧಿಯಲ್ಲಿಯೂ, ವಿಧಾನಸಭಾ ಚುನಾವಣೆಗಳಲ್ಲಿ, ಹಿಂದೂ ಮಹಾಸಭಾ ಹೀನಾಯವಾಗಿ ಸೋಲಬೇಕಾಯಿತು. ಹಿಂದೂಗಳ ಮುಖಂಡ ಶ್ಯಾಮಪ್ರಸಾದ್ ಮುಖರ್ಜಿ ಸ್ವತಃ ತಮ್ಮ ಕ್ಷೇತ್ರದಲ್ಲಿ ಅಷ್ಟೇನು ಜನಪ್ರೀಯವಲ್ಲದ ಅಭ್ಯರ್ಥಿ ಎದುರಿಗೆ ಸೋತಿದ್ದರು. ಕೊನೆಗೆˌ ವಿಶ್ವವಿದ್ಯಾಲಯದ ಕೋಟಾದಡಿಯಲ್ಲಿ ಕಾಂಗ್ರೆಸ್ ಪಕ್ಷದ ಸಹಾಯದಿಂದ ವಿಧಾನಸಭೆಯಲ್ಲಿ ಮುಖರ್ಜಿಯವರು ಸ್ಥಾನ ಪಡೆದರು.

1947 ರಲ್ಲಿ ಬ್ರಿಟೀಷರು ಅಧಿಕಾರ ಹಸ್ತಾಂತರಿಸುವಾಗ ಬಂಗಾಳ ವಿಭಜನೆಯೊಂದಿಗೆ ಇದು ಪರ್ಯಾವಸಗೊಂಡಿತು. ಬಂಗಾಳದ ಈ ಕೋಮು ಧಾರ್ಮಿಕ ವಿಭಜನೆಯು ಅಲ್ಲಿನ ಜನರ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಶಾಶ್ವತವಾಗಿ ಅಚ್ಚಳಿಯದ ಪರಿಣಾಮವನ್ನು ಬೀರಿತು. ಆ ಜನರು ತಮ್ಮ ಪೂರ್ವಜರ ಸ್ಥಳಗಳಿಂದ ಹೊರಹೋಗಬೇಕಾದ ಅಥವಾ ಹೊರಹಾಲ್ಪಡುವ ಪರಿಸ್ಥಿತಿಯನ್ನ ಎದುರಿಸಿದರು. ಪಶ್ಚಿಮ ಬಂಗಾಳದಲ್ಲಿ ಬಂಗಾಳಿ ಹಿಂದೂ ನಿರಾಶ್ರಿತರು ಪುನರ್ವಸತಿ ಹೊಂದಿದ್ದರೂ ತಮ್ಮ ಕಹಿ ಅನುಭವ ಮರೆಯಲಿಲ್ಲ. ಪುನರ್ವಸತಿ ಪಡೆದ ಬಂಗಾಲಿ ಹಿಂದೂಗಳಿಗೆ ಸರಿಯಾಗಿ ಆಶ್ರಯˌ ಆಹಾರˌ ಉದ್ಯೋಗˌ ಭೂಮಿ ಸಿಗಲಿಲ್ಲವಷ್ಟೆ ಅಲ್ಲದೆ ಅಲ್ಲಿನ ಆಡಳಿತಗಾರರಿಂದ ಸಹಾನುಭೂತಿಯೂ ಸಿಗಲಿಲ್ಲ. ಕಮ್ಯುನಿಸ್ಟ ಮತ್ತು ಎಡ ಶಕ್ತಿಗಳು ಮಾತ್ರ ತಮ್ಮ ಹಕ್ಕುಗಳಿಗಾಗಿ ಹೋರಾಡಿದವು. ಈ ಕಾರಣಕ್ಕಾಗಿಯೇ ಐವತ್ತರ ಮತ್ತು ಅರವತ್ತರ ದಶಕದಲ್ಲಿ ಬಂಗಾಳದಲ್ಲಿ ನಡೆದ ಸಾಮಾಜೊ-ರಾಜಕೀಯ ಘಟನೆಗಳು ಪ್ರಜಾಪ್ರಭುತ್ವ ವರ್ಗದ ಆಕಾಂಕ್ಷೆಗಯ ಪ್ರಕಾರ ನಡೆದವು. ಶ್ರಮಿಕ ವರ್ಗದ ಜನಸಾಮಾನ್ಯರು, ವಿದ್ಯಾರ್ಥಿಗಳು, ಯುವಕರು, ನಿರುದ್ಯೋಗಿಗಳು ಮತ್ತು ಬಂಗಾಳದ ಮಧ್ಯಮ ವರ್ಗದವರ ಬೇಡಿಕೆಗಳನ್ನು ಕೈಗೆತ್ತಿಕೊಂಡು ಹೋರಾಡಿದ ಕಮ್ಯುನಿಸ್ಟರಿಗೆ ಈ ಶ್ರೇಯ ಸಲ್ಲುತ್ತದೆ.

ಆದರೆˌ ಉಪಖಂಡದ ಕೋಮುವಾದಿ ರಾಜಕಾರಣವು ಬಂಗಾಳ ವಿಭಜನೆಯ ಘಟನೆಯ ಸುತ್ತ ಸುತ್ತುತ್ತಿದ್ದು, ಬಂಗಾಳದ ಜನರ ಸಾಮಾಜೊ-ರಾಜಕೀಯ ಜ್ಞಾನದಲ್ಲಿ ಬಲವಾದ ಒಳಹರಿವು ಹೊಂದಿದೆ. ಎಪ್ಪತ್ತರ ದಶಕದವರೆಗೆ ಸಾಮಾಜೊ-ರಾಜಕೀಯ ಚಳುವಳಿಗಳು ಹೆಚ್ಚಾಗಿ ಪ್ರಜಾಪ್ರಭುತ್ವ ಮತ್ತು ಕ್ರಾಂತಿಕಾರಿಯಾರಿತ್ತಿದ್ದವು. ಇಂಡೋ-ಚೀನಾ ಯುದ್ಧ, ಇಂಡೋ-ಪಾಕ್ ಯುದ್ಧ ಅಥವಾ ಬಾಂಗ್ಲಾದೇಶ ಯುದ್ಧದ ಸಮಯದಲ್ಲಿ ಮಾತ್ರ ಕೋಮುವಾದಿ ರಾಷ್ಟ್ರೀಯತಾವಾದಿ ವಾತಾವರಣವು ಮುಂಚೂಣಿಗೆ ಬಂದು ನಿಲ್ಲುತ್ತಿತ್ತು.

Leave a Reply

Your email address will not be published. Required fields are marked *

error: Content is protected !!