ಗಂಡಸರನ್ನು ಸ್ಪಷ್ಟವಾಗಿ ತಿರಸ್ಕರಿಸುವ ಅಗತ್ಯ ಇಂದಿದೆ

ಹೆಣ್ಣೆಂದರೆ, ಬರಹಗಾರ್ತಿಯಾಗುವುದೆಂದರೆ ….

ಬಹಳ ವರ್ಷಗಳ ಹಿಂದಿನ ಮಾತು. ನಾನೊಂದು ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದೆ. ಅಲ್ಲಿ ನನಗೆ ಆತ್ಮೀಯ ಎನ್ನುವ ಸಹೋದ್ಯೋಗಿ ಮಿತ್ರರು ಇದ್ದರು. ಅವರ ಅಂತಃಕರಣದ ಗೆಳೆತನದಲ್ಲಿ ಕಪಟ, ಕುಟಿಲತೆ, ಹೆಣ್ಣನ್ನು ಕೀಳಾಗಿ ಕಾಣುವ ಯಾವ ಮನೋಧರ್ಮವೂ ಇರಲಿಲ್ಲ. ಕಾಲೇಜಿಗೆ ಕಾಲಿಟ್ಟ ತಕ್ಷಣ ಸಂಭ್ರಮಗೊಳ್ಳುತ್ತಿದ್ದ ಗೆಳೆಯ ಗೆಳತಿಯರ ಗುಂಪು ಅದು. ಒಮ್ಮೆ ನಾನು ಯಾವುದೋ ಕವಿತೆಯನ್ನು ತರಗತಿಯಲ್ಲಿ ವಿವರಿಸುತ್ತಿದ್ದೆ. ಪಾಠ ಮಾಡಲು ನಿಂತಾಗ ನನಗೆ ಹೊರಗಿನ ಪರಿವೆ ಇರುತ್ತಿರಲಿಲ್ಲ. ಅತ್ತಿಂದಿತ್ತ ಇತ್ತಿಂದಿತ್ತ ಓಡಾಡುತ್ತ ಪಾಠ ಮಾಡಿದರೆ ವಿದ್ಯಾರ್ಥಿಗಳ ಗಮನ ಆಚೀಚೆ ಹೋಗುತ್ತದೆ ಎನ್ನುವುದನ್ನು ಅನುಭವದಿಂದ ಕಂಡುಕೊಂಡಿದ್ದೆ. ಆದರೆ ಹಿಂದಿನ ಸಾಲಿನ ವಿದ್ಯಾರ್ಥಿಯೊಬ್ಬ ವಿಚಿತ್ರವಾಗಿ ಮಿಸುಕಾಡುತ್ತ ಹೊರಗೆ ನೋಡುತ್ತಿದ್ದ. ಹಾಗಾಗಿ ಏನು ತೊಂದರೆಯಾಗಿದೆಯೋ ಎಂದು ಗಮನಿಸಲು ಹೋದೆ. ಆ ಹುಡುಗನನ್ನು ಪ್ರಶ್ನಿಸಿದಾಗ ಹುಡುಗ ಕೊಟ್ಟ ಉತ್ತರ ಅಚ್ಚರಿ ಹುಟ್ಟಿಸಿತು. `ಮೇಡಂ, ಇಬ್ಬರು ಮೇಷ್ಟ್ರುಗಳು ಹೀಗೆ ಮೂರು-ನಾಲ್ಕು ದಿನಗಳಿಂದ ಕಿಟಕಿಗೆ ಹತ್ತಿರವಾಗಿ ನಿಂತು ನಿಮ್ಮ ಪಾಠವನ್ನು ಕೇಳುತ್ತಿರುತ್ತಾರೆ. ನೋಡುತ್ತಿದ್ದೆ’ ಎಂದ. ಯಾರೆಂದು ನೋಡಿದರೆ ಅದೇ ನನ್ನ ಗೆಳೆಯರ ಗುಂಪಿನವರು! ನನ್ನನ್ನು ನೋಡಿದ ತಕ್ಷಣ ಹೊರಟು ಹೋದರು.

ನಾನು ಪಾಠ ಮುಗಿಸಿ, ಉಪನ್ಯಾಸಕರ ಕೊಠಡಿಗೆ ಬಂದು ಅವರಿಬ್ಬರ ಮುಖವನ್ನು ನೋಡುತ್ತಾ, `ನನ್ನ ಪಾಠವನ್ನು ವಿದ್ಯಾರ್ಥಿಗಳು ಮಾತ್ರ ಕೇಳುತ್ತಾರೆಂದುಕೊಂಡಿದ್ದೆ. ಮೇಷ್ಟ್ರುಗಳು ಸಹ ಕೇಳುತ್ತಾರೆ ಎಂದು ಖುಷಿಯಾಯಿತು’ ಎಂದು ವ್ಯಂಗ್ಯವಾಗಿ ಹೇಳಿದೆ.. ಅದರಲ್ಲೊಬ್ಬರು `ಬಾರಮ್ಮ, ಕಾಫಿಗೆ ಹೋಗೋಣ, ನಿನ್ನ ಪಾಠವನ್ನು ಯಾಕೆ ಕೇಳ್ತಿದ್ದೆವು ಅಂತ ಹೇಳ್ತೀವಿ’ ಎಂದು ಕರೆದೊಯ್ದರು. ಗೂಡಂಗಡಿಗೆ ಹೋಗುವಾಗ ನನ್ನ ಕುತೂಹಲ ಮತ್ತಷ್ಟು ಇಮ್ಮಡಿಸಿತ್ತು. ಮತ್ತೊಮ್ಮೆ ಪ್ರಶ್ನಿಸಿದಾಗ ಬಂದ ಉತ್ತರಕ್ಕೆ ದಂಗು ಬಡಿದಿದ್ದೆ. `ನೋಡಮ್ಮ, ಇಷ್ಟು ದಿನ ನೀನು ಬರೀ ಅಲಂಕಾರ ಮಾಡಿಕೊಂಡು, ಚಂದದ ಸೀರೆ ಉಟ್ಕೊಂಡು, ಹಣೆಗೆ ಚಿತ್ತಾರಗಳನ್ನು ಬರೆದುಕೊಂಡು ಓಡಾಡ್ತೀಯ ಅಂದುಕೊಂಡಿದ್ದೆವು ಅದಕ್ಕೆ ವಿದ್ಯಾರ್ಥಿಗಳು ನಿನ್ನನ್ನು ಇಷ್ಟ ಪಡ್ತಾರೆ ಎಂದು ಭಾವಿಸಿದ್ದೆವು. ನಿನಗೆ ಪಾಠ ಮಾಡೋದಕ್ಕೆ ಬರುತ್ತೆ ಅಂತ ಮಾತ್ರ ಗೊತ್ತಿರಲಿಲ್ಲ. ಅದಕ್ಕೆ ಮೂರು ದಿನಗಳ ಕಾಲ ನಿನ್ನ ಪಾಠ ಕೇಳಿದೆವು. ನಿಜವಾಗಲೂ ಆಶ್ಚರ್ಯ ಆಯ್ತು. ನೀನು ಇಷ್ಟು ಚೆನ್ನಾಗಿ ಪಾಠ ಮಾಡಬಹುದು ಅನ್ನುವ ಕಲ್ಪನೆಯೇ ಇರಲಿಲ್ಲ’ ಅಂದರು. ಉಗಿದು ಉಪ್ಪು ಹಾಕಬೇಕು ಅನ್ನಿಸಿದರೂ, ಮಾತಿನ ಪ್ರಾಮಾಣಿಕತೆ, ಒಳಗಿನ ಮುಗ್ಧತೆಯ ಅರಿವಿದ್ದ ನಾನು ಸುಮ್ಮನಾದೆ.

ಒಬ್ಬಳು ಹೆಣ್ಣುಮಗಳು ಚೆನ್ನಾಗಿ ಪಾಠ ಮಾಡಬಹುದು ಎನ್ನುವುದನ್ನು ಕಲ್ಪಿಸಿಕೊಳ್ಳಲೇ ಅನೇಕ ಗಂಡಸರು ಒದ್ದಾಡುತ್ತಾರೆ. ಚಂದವಾಗಿ ಅಲಂಕಾರ ಮಾಡಿಕೊಂಡು, ಸಂಭ್ರಮದಿಂದ ಓಡಾಡುವ ಹೆಣ್ಣುಮಕ್ಕಳಂತೂ ಇದಕ್ಕೆ ಮಾತ್ರ ಲಾಯಕ್ಕು ಎಂದು ನಿರ್ಧರಿಸಿರುತ್ತಾರೆ. ಒಮ್ಮೆಯಂತೂ ಒಬ್ಬ ಮೇಷ್ಟ್ರು, `ನಿನ್ನ ಪಾಠ ಯಾರೂ ಕೇಳಲ್ಲ, ನಿನ್ನ ಪಾಠ ನೋಡ್ತಾರೆ’ ಎಂದು ಹೇಳಿ ಉಗಿಸಿಕೊಂಡಿದ್ದರು. ಕೊನೆಗೊಮ್ಮೆ ಸಿಟ್ಟು ಬಂದು ವಿದ್ಯಾರ್ಥಿಗಳನ್ನು `ನೀಟಾಗಿ ಬರುವ, ಚೆನ್ನಾಗಿ ಪಾಠ ಮಾಡುವ ಮೇಷ್ಟ್ರು/ ಮೇಡಂ ಗಳ ಪಾಠವನ್ನು ಕೇಳ್ತೀರೋ, ನೋಡ್ತೀರೋ?’ ಎಂದು ಪ್ರಶ್ನಿಸಿದ್ದೆ. ತೊಂಬತ್ತು ಭಾಗ ವಿದ್ಯಾರ್ಥಿಗಳು `ಕೇಳುತ್ತೇವೆ’ ಎಂದು ಪ್ರಾಮಾಣಿಕವಾಗಿಯೇ ಹೇಳಿದರು. ಅಲ್ಲಿದ್ದ ತುಂಟರ ಗುಂಪು ಮಾತ್ರ, `ನಿಮ್ಮನ್ನು ನೋಡುತ್ತಾ ಪಾಠ ಕೇಳುತ್ತೇವೆ!’ ಎಂದಿತು! ಅದು ವಯೋಸಹಜ ಎಂದು ನಕ್ಕು ಸುಮ್ಮನಾದೆ.

ಆದರೆ ಇಂತಹ ಬುದ್ಧಿವಂತ, ಸಹೃದಯ ಮೇಷ್ಟ್ರುಗಳ ತಲೆಯಲ್ಲಿ ಇಂತಹ ವಿಚಾರಗಳನ್ನು ತುಂಬಿದ, ಬೆಳೆದ, ಬೆಳೆಸಿದ ಪರಿಸರವೆಂಥದ್ದು? ಒಬ್ಬಳು ಚೆಂದವಾಗಿ ಕಾಣಿಸಿದ ತಕ್ಷಣ ಅವಳನ್ನು ಬುದ್ಧಿಹೀನೆಯೆಂದು ಭಾವಿಸುವ ಮನಃಸ್ಥಿತಿ ಯಾವುದು? ಹೊರ ರೂಪಿನಲ್ಲಿ ಎಲ್ಲವನ್ನು ಅಳೆಯುವುದನ್ನು ಕಲಿತಿದ್ದು ಹೇಗೆ? ಎಷ್ಟೊಂದು ಕ್ಲೀಷೆಗಳಲ್ಲಿ ಬದುಕು ನಡೆಯುತ್ತಿದೆ. ಯಾವುದೇ ದೇಶದ , ಯಾವುದೇ ಭಾಷೆಯ ಸಾಹಿತ್ಯವೂ ಇದಕ್ಕೆ ಹೊರತಲ್ಲ. ಸಾಹಿತಿಗಳೂ! ಯಾರೋ ಒಬ್ಬ ಸಾಹಿತಿ, `ಕವಿಗೋಷ್ಠಿಯಲ್ಲಿ ನಿಮ್ಮನ್ನು ನೋಡಲು ಬರುತ್ತೇವೆ, ಕವಿತೆಯನ್ನು ಕೇಳಲು ಅಲ್ಲ’ ಎಂದು ನೇರವಾಗಿ ಹೇಳಿದ್ದ. ಅಲ್ಲಿಂದ ಮುಂದೆ ನಾನು ಕವಿತೆ ಓದಲು ಹೋಗುವುದಕ್ಕೆ ಅಷ್ಟಾಗಿ ಇಷ್ಟ ಪಡುತ್ತಿರಲಿಲ್ಲ. ಒಂದು ಕವಿತೆ ಓದಲು ಸಾವಿರಾರು ಮೈಲಿ ಪ್ರಯಾಣಿಸುವುದು ಕೂಡ ಬಹಳ ವಿಚಿತ್ರ ಎನ್ನಿಸಿತು. ಆ ಸಮಯದಲ್ಲಿ ನನಗೆ ಮಾಡಲು ಸಾವಿರ ಕೆಲಸಗಳಿದ್ದಾಗ ಅಲ್ಲಿ ಹೋಗಿ `ನೋಡುವ ವಸ್ತು’ವಾಗುವುದು ಇನ್ನೂ ಅಸಹ್ಯವೆನಿಸಿದ್ದೂ ಹೌದು. ಇವರೆಲ್ಲರದ್ದು ಪುರಾತನ ಗ್ರಹಿಕೆಗಳೇ, ಪೂರ್ವಗ್ರಹಗಳಿಂದ ಕೂಡಿದ್ದೇ! ನನ್ನ ಕವಿತೆಗಳನ್ನು ಕೊಂಡಾಡಿ ಅದ್ಭುತ ಕವಿ ಎಂದು ನನ್ನನ್ನು ಇವರು ನೋಡುತ್ತಾ ಹೇಳುವ ಕಲ್ಪನೆಯೇ ಅಸಹ್ಯಕರವಾದದ್ದು ಹೆಣ್ಣನ್ನು `ಪ್ರದರ್ಶನದ ವಸ್ತು’ವೆಂದು ಭಾವಿಸುವವರಿಗೆ ಕವಿತೆಯ ಸೂಕ್ಷ್ಮ ಅರ್ಥವಾದರೆಷ್ಟು ಬಿಟ್ಟರೆಷ್ಟು ಅನ್ನಿಸಿತು.

ಪ್ಯಾಲೆಸ್ತೇನಿ ಬರಹಗಾರ್ತಿ ಮಾಯಾ ಅಬು ಅಲಹೆಯತ್ ಮಾತುಗಳು ನನಗಿಲ್ಲಿ ನೆನಪಿಗೆ ಬರುತ್ತದೆ.`ಪ್ಯಾಲೆಸ್ತೀನಿನಲ್ಲಿ ಬರಹಗಾರ್ತಿಯಾಗುವುದು ಎಂದರೆ ವಿಶಿಷ್ಟವಾದ ನಿಯಮಗಳನ್ನು ಅನುಸರಿಸುವುದು, ಸಾಂಸ್ಕೃತಿಕ ಜಗತ್ತನ್ನು ನಿಯಂತ್ರಿಸುವ ಪುರುಷರಿಗೆ ಬಾಗುವುದು! ಅದರಲ್ಲೂ ನೀವು ನೋಡುವುದಕ್ಕೆ ಸ್ವಲ್ಪ ಸುಂದರವಾಗಿದ್ದರಂತೂ ಮುಗಿದೇ ಹೋಯ್ತು.’ ಎನ್ನುತ್ತಾರೆ. (ಬರಿಯ ನೆನಪೆಲ್ಲ) ಪುರುಷ ಸಹೋದ್ಯೋಗಿಗಳು ಮಾಯಾರನ್ನು ಮೊದಲಿಗೆ ಗಂಭೀರವಾಗಿ ಪರಿಗಣಿಸಿರಲಿಲ್ಲ. ನಂತರ ಅವರೇ ಮಾಯಾ ಅವರ ಪ್ರತಿಭೆಯನ್ನು `ಗುರುತಿಸಿದ’ ಲಾಭ ಪಡೆಯಲು ಬಯಸಿದ್ದರು. `ಹೆಚ್ಚಿನ ಗಂಡಸರು ಹೆಣ್ಣುಮಕ್ಕಳು ಅವರಿಗೆ ಚಪ್ಪಾಳೆ ತಟ್ಟಬೇಕೆಂದು ಬಯಸುತ್ತಾರೆ. ನಾನು ರಮಲ್ಲಾದಲ್ಲಿ ಸರ್ವತಂತ್ರ ಸ್ವತಂತ್ರಳು. ಆಪ್ತರು, ಪ್ರೀತಿ-ಪಾತ್ರರೊಂದಿಗೆ ನಾನಿಲ್ಲಿರಬಹುದು’ ಎಂದು ಮಾಯಾ ಹೇಳುತ್ತಾರೆ. ನನಗೂ ಕೂಡ ಬರೆಯಲು ಪ್ರಾರಂಭ ಮಾಡಿದ ನಾಲ್ಕೈದು ವರ್ಷಗಳಲ್ಲಿಯೇ ಇದು ಅರ್ಥವಾಗಿ ಹೋಯಿತು. ಅಲ್ಲಿಂದ ಮುಂದೆ ಪ್ರೀತಿ ಪಾತ್ರರು, ಬೆರಳೆಣಿಕೆಯ ಗೆಳೆಯರ ನಡುವೆ ಸ್ವತಂತ್ರವಾಗಿರುವ ಸಂತೋಷವನ್ನು ಅನುಭವಿಸುತ್ತಿದ್ದೇನೆ.

`ಗುಂಡಿಗೆಯ ಬಿಸಿ ರಕ್ತ’ (ಕೇಶವ ಮಳಗಿ) ನಾನು ಬಹಳ ಇಷ್ಟಪಟ್ಟು ಓದುವ ಕೃತಿ. ನವಲ್ ಎಲ್ ಸಾದವಿ ಅವರ ವಿಚಾರಗಳನ್ನು ಈಗ ಓದುವಾಗ, ಅನುಭವಗಳಿಂದ ರೂಪುಗೊಂಡಿದ್ದ ನನ್ನ ಆಲೋಚನೆಗಳಿಗೆ ಒಂದು ಸ್ಪಷ್ಟತೆ ದೊರೆಯಿತು. `ನಾನು ಈವರೆಗೆ ಓದಿರುವ ಅರಬ್‌ ಮತ್ತು ಪಾಶ್ಚಾತ್ಯ ದೇಶಗಳ ಪುರುಷ ಸಾಹಿತಿಗಳ ಕೃತಿಗಳು, ಅವರು ಯಾವುದೇ ಭಾಷೆಯಲ್ಲಿ ಬರೆದಿರಲಿ, ಯಾವುದೇ ಪ್ರಾಂತ್ಯದವರೇ ಆಗಿರಲಿ, ಮಹಿಳೆಯ ಕುರಿತು ಬರೆದಾಗ ತಲಾಂತರಗಳಿಂದ ಹಸ್ತಾಂತರಗೊಳ್ಳುತ್ತ ಬಂದ ಪಾರಂಪರಿಕ ದೃಷ್ಟಿಕೋನದಿಂದ ಭಿನ್ನರಾಗಿರುವುದನ್ನು ಕಂಡಿಲ್ಲ. ಅವರೆಷ್ಟೇ ಪ್ರಸಿದ್ಧರಿರಲಿ, ನಾಗರಿಕ ಹಕ್ಕು, ಮಾನವೀಯ ಮೌಲ್ಯ, ನ್ಯಾಯವಿವೇಚನೆ ಗಳನ್ನು ಪ್ರಬಲವಾಗಿ ಪ್ರತಿಪಾದಿಸುವವರೇ ಆಗಿರಲಿ, ಅಥವ ದಬ್ಬಾಳಿಕೆ ಯನ್ನು ಕಟುಮಾತುಗಳಲ್ಲಿ ಖಂಡಿಸುವವರೆ ಆಗಿರಲಿ, ಹೆಣ್ಣಿನ ಕುರಿತ ಅವರ ಚಿಂತನೆಗಳು ಮಾತ್ರ ಪುರಾತನ ಕಾಲದ್ದು’ (ನವಲ್ ಎಲ್- ಸಾದವಿ)

ಈ ಪುರಾತನ ಆಲೋಚನೆಗಳ ಗಂಡಸರನ್ನು ಎದುರಿಸುವ ಜೊತೆಗೆ ಆ ಆಲೋಚನೆಗಳನ್ನು ತಮ್ಮದೇ ಎನ್ನುವಂತೆ ಭಾವಿಸಿಕೊಂಡು ಬದುಕುತ್ತಿರುವ ಹೆಣ್ಣುಮಕ್ಕಳನ್ನು ನಾವೀಗ ಎದುರಿಸಬೇಕಿದೆ. ಹಾಗಾಗಿಯೇ ಪ್ರತಿ ಬಾರಿ ಹೆಣ್ಣುಮಗಳೊಬ್ಬಳ ಮೇಲೆ ನಡೆದ ಅತ್ಯಾಚಾರ ಎದೆಯನ್ನು ನಡುಗಿಸದೆ, ತಮ್ಮ ಮನೆಯ ಹೆಣ್ಣುಮಕ್ಕಳನ್ನು ಆ ಜಾಗದಲ್ಲಿ ಯೋಚಿಸದೆ `ಯಾಕೆ ಹೋದಳು, ಎಷ್ಟು ಹೊತ್ತಿನಲ್ಲಿ ಹೋದಳು, ಯಾವ ಬಟ್ಟೆಯನ್ನು ತೊಟ್ಟಿದ್ದಳು’ ಇತ್ಯಾದಿ ವಿಚಾರಗಳ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತಾರೆ. ಜೊತೆಗೆ ಇಂತಹ ವಿಷಯದಲ್ಲಿ ಗಟ್ಟಿ ದನಿಯಲ್ಲಿ ಮಾತನಾಡುವ ಹೆಣ್ಣುಮಕ್ಕಳನ್ನು ತಿರಸ್ಕಾರದಿಂದ ನೋಡುವ ಪ್ರವೃತ್ತಿಯೂ ಹೆಚ್ಚಿದೆ. `ಅತ್ಯಂತ ತಿರಸ್ಕಾರಕ್ಕೊಳಗಾಗುವವಳು ಎಂದರೆ ಶಿಕ್ಷಿತಳೂ, ಸ್ವತಂತ್ರ ಮನೋಭಾವದವಳೂ ಆದ ಹೆಣ್ಣು.’ ಎನ್ನುವ ನವಲ್ ಸಾದವಿಯ ಮಾತು ನೆನೆಯುತ್ತ ನಾವೇ ಇಂತಹ ಮನೋಭಾವದ ಗಂಡಸರನ್ನು ಸ್ಪಷ್ಟವಾಗಿ ತಿರಸ್ಕರಿಸುವ ಅಗತ್ಯ ಇಂದಿದೆ.

ಎಂ.ಆರ್.ಕಮಲ

Leave a Reply

Your email address will not be published. Required fields are marked *

error: Content is protected !!