ಕೋಣಂದೂರು ಲಿಂಗಪ್ಪ ಎಂಬ ಅಸಮಾನ್ಯ ವ್ಯಕ್ತಿ

ಸಾಮಾನ್ಯರ ತರಹ ಕಾಣುವ ಅಸಮಾನ್ಯ ಕೋಣಂದೂರು ಲಿಂಗಪ್ಪ

ಸುಳ್ಳುಗಳ ಸರಮಾಲೆ, ದುರಾಶೆ, ವಂಚನೆ , ಸ್ವಜನ ಪಕ್ಷಪಾತದ ನಿರ್ದಯಿ ರಾಜಕಾರಣ ನೋಡುತ್ತಿರುವ ಕರ್ನಾಟಕದಲ್ಲಿ ಒಮ್ಮೆ ಸಮಾಜವಾದ ನಂಬಿದ ರಾಜಕಾರಣಿಗಳು ಇದ್ದರು ಎಂದು ನಂಬದಂತಹ ಸ್ಥಿತಿ ಈಗ ಇದೆ. ಕೆಲವು ಸಮಾಜವಾದಿಗಳು ಸುಲುಭಕ್ಕೆ ಆಮಿಶಗಳಿಗೆ ತುತ್ತಾಗಿ ಭ್ರಷ್ಟರಾಗಿದ್ದು ಕಣ್ಣಮುಂದೆ ಇದೆ. ಕೋಣಂದೂರು ಲಿಂಗಪ್ಪನವರು ಮಾತ್ರ ಮೇಲೆ ಹೇಳಿದ ಯಾವುದೇ ಅಪವಾದಗಳಿಗೆ ಒಳಗಾಗದೆ ಸರಳ ಸಜ್ಜನರಾಗಿ ಉಳಿದ ಮನುಷ್ಯ . ಅವರನ್ನು ಹಲವು ದಶಕಗಳಿಂದ ಬಲ್ಲ ನನಗೆ ಅವರ ಕೆಲವು ನೇರ ಸರಳ ನಡೆಗಳಿಂದ ವಿಚಲಿತನಾಗಿದ್ದೇನೆ. ಮತ್ತೆ ಮತ್ತೆ ಅವರ ಜೊತೆ ಕಳೆದ ಕೆಲವು ದಿನಗಳು ನೆನಪಿಗೆ ಬರುತ್ತವೆ. ಒಬ್ಬ ವ್ಯಕ್ತಿ ಇಷ್ಟೊಂದು ಸಹಜ-ಸರಳವಾಗಿ ಇರಲು ಸಾಧ್ಯವೆ? ನನಗೆ ನಮ್ಮ ಅತ್ತ್ಯುತ್ತಮ ಸಾಂಸ್ಕೃತಿಕ, ಮತ್ತು ರಾಜಕೀಯ ಒಡನಾಟ ಇತ್ತು. ಇದರಲ್ಲಿ ಮತ್ತೆ ಮತ್ತೆ ನನಗೆ ಕೋಣಂದೂರರ ಜೊತೆ ಘಟನೆಗಳು ನೆನಪಾಗುತ್ತವೆ. ಒಬ್ಬ ವ್ಯಕ್ತಿ ಅವರ ತರಹ ಇರಲು ಮಹಾನ್‌ ಗುಂಡಿಗೆಯ ಧೈರ್ಯ ಬೇಕಿರುತ್ತದೆ ಅಂದುಕೊಂಡಿದ್ದೇನೆ

91-92 ರ ಸಮಯ. ಹೆಗ್ಗಡೆ- ಬೊಮ್ಮಾಯಿ ಸರ್ಕಾರ ಹೋಗಿ ಕಾಂಗ್ರೇಸ್‌ ಬಂದು ವಿರೇಂದ್ರ ಪಾಟೀಲ್‌ರು ಹೋಗಿ ಬಂಗಾರಪ್ಪ ಬಂದಿದ್ದರು. ಕೋಣಂದೂರು ಆಗ ಎಂಎಲ್‌ಸಿ ಆಗಿದ್ದರು. ಅವರು ಶಾಸನ ಸಭೆಗಳಲ್ಲಿ ಮಾತನಾಡುತ್ತಿದ್ದುದನ್ನು ಬೇರೊಂದು ಸಂಪುಟದಲ್ಲಿ ತರಬಹದು.ಏಕೆಂದರೆ ಅವರುಗಳು ಕೇಳುತ್ತಿದ್ದ ಪ್ರಶ್ನೆಗಳು ಮತ್ತು ಚರ್ಚೆಗಳು ನಮ್ಮ ರಾಜ್ಯದ ಸ್ಥಿತಿ-ಗತಿ ಜೊತೆಗೆ ನಮ್ಮ ಶಾಸನ ಸಭೆ ನಡೆಯುತ್ತಿದ್ದ ಬಗೆಯನ್ನು ಏಕ ಕಾಲಕ್ಕೆ ನಾವು ಅವುಗಳಿಂದ ನೋಡಬಹುದು. ಕೋಣಂದೂರರ ಬದ್ಧತೆಯನ್ನು ಇವುಗಳಿಂದ ನಾವು ಪಡೆದುಕೊಳ್ಳಬಹದು.

ಒಂದು ಸಂಜೆ ನನಗೆ ಅವರು ಫೋನ್‌ ಮಾಡಿ ಬೆಳಿಗ್ಗೆ ಬೇಗ ಬಾ ಪಟೇಲರನ್ನು ನೋಡಬೇಕು – ಅಂತ ಹೇಳಿದರು. ಅದರಂತೆ ಬೆಳಿಗ್ಗೆಯೇ ಅವರ ರೂಂಗೆ ಹೋದೆ. ಹಳೆಯ ಶಾಸಕರ ಭವನದ ಕಟ್ಟಡದ ಮೊದಲನೇ ಮಹಡಿಯಲ್ಲಿ ಅವರ ರೂಂ ಇತ್ತು. ಹಿಂದಿನ ದಿನ ಶಿವಮೊಗ್ಗದಿಂದ ಬಂದವರು ಮಲಗಿರಬಹದು ಎಂದುಕೊಂಡಿದ್ದ ನನಗೆ ಸ್ನಾನ ಮಾಡಿ ಕುಳಿತುಕೊಂಡ ಅವರನ್ನು ಕಂಡು ಆಶ್ಚರ್ಯವಾಯ್ತು. ‌ʼಸಾರ್ ಕಾಫಿ ತರಿಸಲಾ…ʼ ʼ ಛೇ ಛೇ ತರಿಸೋದು ಏನು ಅಲ್ಲಿಗೆ ಹೋಗೋಣವಂತೆ ಅದಕ್ಕೂ ಮೊದಲು ಜುಬ್ಬ ಇಸ್ತ್ರಿ ಆಗಬೇಕು..ʼ ಅಂದು ಹೇಳಿ ಒಂದು ಹಳೆಯ ಜುಬ್ಬ ಏರಿಸಿಕೊಂಡರು. ನಾನು ಇವರೇ ಹೋಗುವುದು ಸರಿಯಲ್ಲ ಅನ್ನಿಸಿ ʼಇಲ್ಲೊಬ್ಬ ಜವಾನ ಓಡಾಡ್ತಿರ್ತಾನಲ್ಲ ಅವನ್ನ ಕರೀತೇನೆ.. ಅವನು ಮಾಡಿಸಿಕೊಂಡು ಬರ್ತಾನೆ…ʼ ಎಂದೆ. ʼನನಗೇನಾಗಿದೆ ಧಾಡಿ… ಅವನು ಯಾರದ್ದೋ ಕೆಲಸ ಮಾಡ್ತಿರಬೇಕು..ʼ ʼ ಸರಿ ಬಿಡಿ ನೀವು ಇಲ್ಲೇ ಇರಿ ಸಾರ್‌ ನಾನು ಮಾಡಿಸಿಕೊಂಡು ಬರ್ತೇನೆ.ʼ ಅಂದೆ. ʼ ʼ ನೋಡು ಕೃಷ್ಣ ನಮ್ಮ ಕೈಯಲ್ಲಾಗುವ ನಮ್ಮ ಕೆಲಸಕ್ಕೆ ಆಳುಗಳನ್ನು ಉಪಯೋಗಿಸೋದು ಒಂಥರಾ ವಂಚನೆ.. ನಡಿ ನಡಿ..ʼ ಎಂದು ಹೊರಟರು.

ಜುಬ್ಬ ಮತ್ತು ಪೈಜಾಮವನ್ನು ಶಿವಮೊಗ್ಗದಿಂದ ಬಂದವರೇ ರಾತ್ರಿ ತೊಳೆದು ಫ್ಯಾನ್‌ ಗಾಳಿಗೆ ಹಾಕಿದ್ದರಂತೆ. ಎರಡನ್ನೂ ಪತ್ರಿಕೆಯಲ್ಲಿ ಸುತ್ತಿ ಕ್ಯೆಯಲ್ಲಿ ಹಿಡಿದುಕೊಂಡರು. ಇದನ್ನು ಕಂಡು ನನಗೆ ಕಸಿವಿಸಿ ಅನ್ನಿಸಿ ಅವರ ಕೈಯಿಂದ ಕವರ್‌ ಅನ್ನು ಇಸಿದುಕೊಳ್ಳಲು ಹೋದೆ. ʼ ಇಷ್ಟೊತ್ತು ನಿನ್ನ ಹತ್ತಿರ ಏನು ಹೇಳಿದೆ. ಅದಾ ಮತ್ತೆ ನೀನು ಅದನ್ನೇ ಮಾಡ್ತಾ ಇದ್ದೀಯಾ?ʼ ಎಂದು ಸಣ್ಣದಾಗಿ ಗದರಿದರು. ನಾನು ಸುಮ್ಮನೆ ಅವರನ್ನು ಹಿಂಬಾಲಿಸಿದೆ. ರೆಸ್ಟೋರೆಂಟ್‌ ಪಕ್ಕದಲ್ಲಿಯೇ ಲಾಂಡ್ರಿ ಇದ್ದು ಅವನು ಇವರನ್ನು ಕಂಡ ಕೂಡಲೇ ಸ್ವಂತದವರಂತೆ ನಕ್ಕು ʼ ಒಂದು ಮಾತು ಹೇಳಿದ್ರೆ ನಾನೇ ಬರ್ತಾ ಇದ್ದೆನಲ್ಲಾ ಸಾರ್…‌ ಅರೇ..ಇನ್ನೂ ಹಸಿ ಇದೆ ನೀವೇ ತೊಳಕಂಡ ಹಾಗೆ ಇದೆ…ʼ ಎಂದು ಲೊಚಗುಟ್ಟಿದ. ʼ ಹೌದು .. ಮಾರಾಯ ಈ ಬಸ್ಸುಗಳಲ್ಲಿ ಈ ಬಿಳಿ ಖಾದಿ ಬಟ್ಟೆಗಳು ಬಲು ಬೇಗ ಕೊಳೆಯಾಗಿ ಬಿಡ್ತವೆ ನೋಡು.. ನಮ್ಮ ಜೊತೆ ತಿಂಡಿ ತಿನ್ನಕೆ ಬರ್ತಿಯಾ?ʼ ಎಂದು ಕೇಳುತ್ತಾ… ಇಲ್ಲ ಎಂದ ಅವನಿಗೆ ಸಣ್ಣ ತಮಾಶೆ ಮಾಡಿ ನನ್ನ ಜೊತೆ ನಡೆದರು.

ಕೋಣಂದೂರು ಜೊತೆ ನನಗೆ ಬಹಳ ಒಡನಾಟ. ಅವರು ನನ್ನ  ನಂಬಿಕೆಗಳುʼ ಸಿನಿಮಾದಲ್ಲಿ ನಟಿಸಿದರು. ಅನಂತ್‌ನಾಗ್‌, ತಾರಾ, ಬಿ.ಜಯಶ್ರಿ, ಏಣಗಿ ನಟರಾಜ್‌ ಅವರೆಲ್ಲಾಇವರ ಜೊತೆ ನಟಿಸಿದ್ದರು. ಅಲ್ಲದೆ ನನ್ನ ಹಲವು ಧಾರವಾಹಿಗಳಲ್ಲಿ ನಟಿಸಿದ್ದರು. ಈಚೆಗೆ ಘಟಿಸಿದ ಒಂದು ಭೇಟಿಯನ್ನು ನೆನಸಿಕೊಳ್ಳುತ್ತೇನೆ. ಕೊರೋನಾ ಕಡೆಯಿಂದ ನಾನು ನನ್ನಮಾಸಡಿ ತೋಟದಲ್ಲಿ ಕಳೆಯುವಂತೆ ಆಗಿತ್ತು. ಓಡಾಡಲು ಅನುಮತಿ ಬಂದ ನಂತರ ವಿನೋಭನಗರದಲ್ಲಿರುವ ಅವರ ಮನೆಗೆ ನನ್ನ ಸ್ನೇಹಿತನ ಜೊತೆ ಹೋಗಿದ್ದೆ. ಅಂದೇನೋ ಹಬ್ಬವೆಂದು ಅವರ ಮನೆಯರೆಲ್ಲಾ ಬೇರೆಡೆ ಹೋಗಿದ್ದರು. ನೆಂಟರ ಮನೆಗೆ ಹೋಗಲು ತಯಾರಾಗುತ್ತಿದ್ದರು. ನಾನು ಬಂದಿದ್ದು ಕಂಡು ಒಂದೆರಡು ಗಂಟೆ ಹರಟೆ ಹೊಡೆದು ಮನೆಗೆ ಬೀಗ ಹಾಕಿ ಒಂದು ಹಳೆಯ ಮೊಪೆಡ್‌ ಲೂನಾ ಅನ್ನಿಸುತ್ತೆ ಹೊರತೆಗೆದರು. ನಾನು ನನ್ನ ಕಾರಿನಲ್ಲಿ ಬಿಡುತ್ತೇನೆ ಬನ್ನಿ ಎಂದರೂ ಕೇಳದೆ ಟರ್‌ಟರ್‌.. ಶಬ್ಧ ಮಾಡುತ್ತಾ ಹೊರಟರು.

ನನ್ನೊಂದಿಗೆ ಬಂದ ನನ್ನ ಸ್ನೇಹಿತನಿಗೆ ಅವರನ್ನು ಮತ್ತು ಅವರ ಮನೆಯನ್ನು ನೋಡಿ ಮೂರ್ಚೆ ಹೋಗುವಷ್ಟು ಆಶ್ಚರ್ಯ. ಒಂದೇ ಸಮನೆ ʼʼ ಏನ್‌ ಮರಾಯ ಇದು … ಅಂತಹ ದೊಡ್ಡ ಮನುಷ್ಯರ ಮನೆಯಾ ಇದು.. ಯಕಶ್ಚಿತ್‌ ಪಂಚಾಯಿತಿ ಮೆಂಬರ್‌ ಹೋಗಲಿ ಗುಮಾಸ್ತನ ಮನೆಯಲ್ಲೂ ಫಾರಿನ್‌ ಸೋಫಾ ಸೆಟ್‌ಗಳು, ಆಡಂಭರದ ಐಷರಾಮಿ ವಸ್ತುಗಳು ಇರ್ತಾವೆ. ಇವರ ಮನೆಯಲ್ಲಿ ಈ ತರಹ. ಅದು ಸರಿ ಅವರು ಎಂಥಾ ಗಾಡಿ ಇಟ್ಟಕೊಂಡಿದಾರೆ.. ದೇವರೇ.. ನನ್ನ ಕಣ್ಣ ನಾನೇ ನಂಬಲಿಕ್ಕೆ ಆಗ್ತಯಿಲ್ಲಾ…ʼ ಎಂದು ಹೇಳುತ್ತಲೇ ಹೋದ. ಅವನು ಅವರ ಬಗ್ಗೆ ಹೇಳಿದ ಯಾವುವು ನನಗೆ ವಿಶೇಷ ಅನ್ನಿಸಲಿಲ್ಲ. ಏಕೆಂದರೆ ಅವರನ್ನು ಮೊದಲಿನಿಂದಲೂ ನೋಡಿಕೊಂಡು ಬಂದವನಾಗಿದ್ದೆ. ʼ ಸಾರ್‌.. ಈ ಮೊಪೆಡ್‌, ಬೇಡ ಒಂದು ಆಟೋ ಮಾಡ್ಕಂಡು ಓಡಾಡಿ.ʼ ಎಂದರೆ ʼ ಕೃಷ್ಣ…ನಾನಿನ್ನು ಆರೋಗ್ಯದಿಂದ ಇದ್ದೇನೆ…ʼ ಎನ್ನುತ್ತಾ ಕಣ್ಣು ಮಿಟಿಕಿಸಿದರು.

೧೯೮೮-೮೯ ರಲ್ಲಿ ನಾನು ನಿಜಲಿಂಗಪ್ಪನವರ ಬಗ್ಗೆ ಸಾಕ್ಷ್ಯಚಿತ್ರ ಮಾಡಿದೆ. ಅವರ ಜೊತೆ ಮೂರು ತಿಂಗಳು ಎಡತಾಗುತ್ತಿದ್ದೆ. ಒಮ್ಮೆ ಅವರು ಉಳಿದ ಕುಮಾರ ಕೃಪದ ರೂಂನ ಬಾಗಿಲು ಹಾಕದೆ ಬಂದು ಬಿಟ್ಟರು. ʼ ಸಾರ್‌..ಬಾಗಿಲು ಹಾಕಿಲ್ಲವಂತೆ .. ನಾನು ಹಾಕಿ ಬರುತ್ತೇನೆ..ʼ ಅಂದೆ. ಅದಕ್ಕೆ ನಿಜಲಿಂಗಪ್ಪನವರು ʼ ಅಲ್ಲಿ ತೆಗೆದುಕೊಂಡು ಹೋಗುವಂತಹದ್ದು ಏನೂ ಇಲ್ಲ. ಒಂದೆರಡು ಬಟ್ಟೆಗಳನ್ನು ಬಿಟ್ಟರೆ. ಅಕಸ್ಮಾತ್‌ ಒಯ್ದರು ಅಂತಿಟ್ಟುಕೊಳ್ಳಿ ಹಾಗಾದರೂ ಖಾದಿ ತೊಡಲಿ ಬಿಡಿ..ʼ ಎಂದು ನಿಜಲಿಂಗಪ್ಪ ಹೇಳಿದ್ದು ಮತ್ತೆ ಮತ್ತೆ ನೆನಪಾಗುತ್ತದೆ. ನಂಬಿದ ಸಿದ್ಧಾಂತದ ಬದುಕಿನೊಳಗೆ ಸರಳತೆಯನ್ನು ರೂಡಿಸಿಕೊಳ್ಳಲು ಕೆಲವರಿಗಷ್ಟೇ ಆಗುತ್ತದೆ. ಎಲ್ಲಾ ಮಾನವೀಯ ಗುಣಗಳನ್ನು ಇಟ್ಟುಕೊಂಡು ಸರಳ-ಸಹಜ ಆಗಲಿಕ್ಕೆ ಅವರಿಗೆ ಬುದ್ಧನ ಬದ್ದತೆ ಬೇಕಾಗುತ್ತದೆ ಎಂದು ನನಗೆ ಅನ್ನಿಸಿದ್ದಿದೆ. ನನಗೆ ಗೊತ್ತಿರುವ ಕೋಣಂದೂರು ಲಿಂಗಪ್ಪ ಮೇಲಿನ ಬದ್ದತೆ ಉಳ್ಳವರು ಎಂಬುದು ನನ್ನ ನಂಬಿಕೆ.

– ಕೃಷ್ಣ ಮಾಸಡಿ

One thought on “ಕೋಣಂದೂರು ಲಿಂಗಪ್ಪ ಎಂಬ ಅಸಮಾನ್ಯ ವ್ಯಕ್ತಿ

  1. Sir your writing on k.Lingappa a vetern Leader is timely. When we look at present day politics and politicians we get nervous and angry. Yesterday what i read in paper i.e Karnataka is no 1 Corrupt state in India made me unhappy. Ideal Leaders are becoming Extinct . When we see the background of present day Leaders we are Shocked. Barring few in every party Politics has become abode for Criminals and mafia dons. We need people like k.Lingappa more and more. Where are doyens like P.Lankesh and Nanjundaswamy who were acting as opposition party. Now it is time to raise our voice against dirty politics. Thank you Krishna M Sir.

Leave a Reply

Your email address will not be published. Required fields are marked *

error: Content is protected !!