ನೊರೆವಾಲನುಣ್ಣದ ಕೆಚ್ಚಲ ಉಣ್ಣೆಗಳು

ಇತ್ತೀಚೆಗೆ ನಮ್ಮ ಗುಲಬರ್ಗಕ್ಕೂ ರವಿಶಂಕರ್ ಗುರೂಜಿಯವರು ಬಂದು ಹೋದರು. ಮೂರು ದಿನಗಳ ಕಾಲ ಮುಕ್ಕಾಂ ಮಾಡಿದ್ದ ಅವರು ಇಲ್ಲಿನ ಜನಕ್ಕೆ ಯೋಗ, ಧ್ಯಾನ, ಪ್ರಾಣಾಯಾಮಗಳೇ ಮುಂತಾದ ಹಲವು ಹತ್ತು ವಿಧದ ಶಾರೀರಿಕ, ಮಾನಸಿಕ ರೋಗರುಜಿನಗಳಿಗೆ ಪರಿಹಾರಾತ್ಮಕವಾದ ವಿಧಾನಗಳನ್ನು ಹೇಳಿಕೊಟ್ಟರು, ಮಾತ್ರವಲ್ಲ; ಸಾಧ್ಯವಾದರೆ ತಾವು ನಕ್ಸಲೈಟ್‍ಗಳಂಥ ಭಯೋತ್ಪಾದಕ ತಂಡಗಳವರನ್ನೂ ಸಹ ತಮ್ಮ ಈ ವಿಧಾನದಿಂದ ರಾಷ್ಟ್ರದ ಮುಖ್ಯವಾಹಿನಿಗೆ ತರಬಲ್ಲೆವು ಎಂಬ ಮಾತುಗಳನ್ನು ಆಡಿದರು. ಇದು ಅವರಿಂದ ಎಷ್ಟು ಮಟ್ಟಿಗೆ ಕಾರ್ಯಸಾಧ್ಯವೋ ಅಲ್ಲವೋ? ಆ ಮಾತು ಬೇರೆ!


ಇಷ್ಟು ಮಾತ್ರ ನಿಜ! ಅವರು ಹೇಳಿಕೊಟ್ಟ ಉಸಿರಾಟದ ಗತಿ ವಿಧಾನ ಅಥವಾ ಪ್ರಾಣಾಯಾಮದಿಂದ ಮಾನಸಿಕ ನೆಮ್ಮದಿ ಉಂಟಾಗಿ ಆರೋಗ್ಯ ವರ್ಧನಗೊಳ್ಳುವುದರಲ್ಲಿ ಒಂದಷ್ಟು ತಥ್ಯವಿದ್ದೀತು. ಆದರೆ ಗುಲಬರ್ಗಾದಲ್ಲಿ ಅವರ ಈ ಕಾರ್ಯಕ್ರಮವನ್ನು ಏರ್ಪಡಿಸಿದವರು ಹಾಗೂ ಅದರಲ್ಲಿ ವಿಶೇಷವಾಗಿ ಭಾಗವಹಿಸಿದವರು ಲಿಂಗಾಯತರೇ ಆಗಿದ್ದುದು ಮಾತ್ರ ವಿಚಿತ್ರದ ಸಂಗತಿಯಾಗಿತ್ತು ಹಾಗೆಂದ ಮಾತ್ರಕ್ಕೆ ಲಿಂಗಾಯತರು ರವಿಶಂಕರ್ ಗುರೂಜಿಯವರು ತಿಳಿಸಿಕೊಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಅರ್ಥಮಾಡಬಾರದು. ಏಕೆಂದರೆ ಈ ವಿಷಯವಾಗಿ ಲಿಂಗಾಯತರು ಎಷ್ಟೊಂದು ಅಮಾಯಕರಾಗಿದ್ದಾರಲ್ಲ! ಅಂತ ಬೇಸರವಾಗುತ್ತದೆ, ಅಷ್ಟೆ!

ಈ ರವಿಶಂಕರ್ ಗುರೂಜಿ ಹೇಳಿಕೊಟ್ಟ ಉಸಿರಾಟದ ಗತಿ ವಿಧಾನ ಬೇರೆ ಅಲ್ಲ. ಲಿಂಗಾರ್ಚನೆ ಮಾಡುವಾಗ ಲಿಂಗಾಯತರು ಅನುಸರಿಸುವ ಪ್ರಾಣಾಯಾಮ ವಿಧಾನ ಬೇರೆ ಅಲ್ಲ. ಯಾವುದೇ ಸಾಧಕ (ಆತ ಹುಟ್ಟಿನಿಂದ ಲಿಂಗಾಯತನೇ ಆಗಿರಬೇಕೆಂಬ ನಿಯಮವೇನೂ ಇಲ್ಲ) ತನ್ನ ಎಡಗೈಯ್ಯೊಳಗೆ ಇಷ್ಟ ಲಿಂಗವನ್ನು ಇಟ್ಟುಕೊಂಡು ಪದ್ಮಾಸನಾಭಂಗಿ ಇಲ್ಲವೇ ಯಾವುದಾದರೊಂದು ಸರಳವಾದ ಆಸನದಲ್ಲಿ ಕುಳಿತುಕೊಂಡು. ಭ್ರೂಮಧ್ಯದ ಮೂಲಕ ಅಂದರೆ ಎರಡೂ ಕಣ್ಣುಗಳ ಮಧ್ಯದ ಹಣೆಯ ಬಿಂದುವಿನ ಮೂಲಕ ತದೇಕ ಚಿತ್ತನಾಗಿ ಆನಿಮಿಷ ದೃಷ್ಟಿಯಿಂದ ವೀಕ್ಷಿಸಿದರೆ ಸಾಕು! ಒಂದರೆ ನಿಮಿಷದಲ್ಲಿಯೇ ಉಸಿರಾಟದ ಏರು ಇಳುವಿನ ವಿಧಾನ ತನಗೆ ತಾನೆ ತಮಣಿಗೊಂಡು ಬಿಡುತ್ತದೆ. ಮನಸ್ಸು ಶಾಂತವಾಗುತ್ತದೆ. ಪ್ರಾಣಾಯಾಮ ಸಹಜವಾಗಿಯೇ ಶುರುವಾಗುತ್ತದೆ. ಆಗ ಆ ವ್ಯಕ್ತಿ ತನ್ನ ಕೈಯ್ಯೊಳಗಿರುವ ಲಿಂಗವು ಅಥವಾ ತನ್ನಂಗದಲ್ಲಿ ವ್ಯಾಪಕವಾಗಿರುವ ಚುಳುಕು ಚೈತನ್ಯವು ನಮ್ಮ ಬಾಹ್ಯ ಚಕ್ಷುಗಳಿಗೆ ಗೋಚರವಾಗುವ ಸಮಸ್ತ ವಿಶ್ವ ಹಾಗೂ ಅದರಾಚೆಗೆ ಇರಬಹುದಾದ ಸೌರ ಮಂಡಲ ಮತ್ತು ಅದನ್ನೂ ಮೀರಿ ಉಳಿಯುವ ಬಯಲು ಅಥವಾ ಮಹಾಬಯಲಿನ ಒಳಗೆ ಹೊರಗೆ ತುಂಬಿ ತುಳುಕಾಡುತ್ತಿರುವ ಮಹಾಚೈತನ್ಯದ ಅಣು' ಮಾತ್ರ ಎಂದಷ್ಟು ಪರಿಭಾವಿಸಿದರೆ ಸಾಕು! ಆಗ ಆತನಿಗೆ ಅದೆಂಥದೋ ಅನಿರ್ವಚನೀಯ ಆನಂದ ಉಂಟಾಗುತ್ತದೆ.

ಇದೊಂದು ವೈಜ್ಞಾನಿಕ ಪ್ರಯೋಗ. ಇದು ಎಲ್ಲರ ಅನುಭವಕ್ಕೂ ಬರುವಂಥದು. ಬೇಕಿದ್ದರೆ ಯಾರಾದರೂ ಇದನ್ನು ಇಂದೇ ಪ್ರಯೋಗ ಮಾಡಿ ನೋಡಬಹುದು. ನಿಜವಾಗಿಯೂ ಪ್ರತಿನಿತ್ಯ ಈ ಪ್ರಯೋಗ ಮಾಡುವವರಿಗೆ ಖಂಡಿತ ಮಾನಸಿಕ ನೆಮ್ಮದಿ ಕದಡದು! ಇಂಥದೊಂದು ಆಯಾಚಿತ, ಅಪೂರ್ವ ಅವಕಾಶ ಲಿಂಗಾಯತರಿಗೆ ಜನ್ಮದಾರಭ್ಯ ದಕ್ಕಿಬಿಟ್ಟಿದೆ. ಆದರೆ ಈ ಲಿಂಗಾಯತರುಉಣ್ಣೆ ಕೆಚ್ಚಲೊಳಿದ್ದು ಉಣ್ಣದದು ನೊರೆವಾಲ!’ ಎಂಬಂತೆ ಆಗಿದ್ದಾರೆ. ತುಂಬಿ ಹರಿಯುವ ಹೊಳೆಯಲ್ಲೇ ನಿಂತಿದ್ದಾರೆ. ನೀರಿನ ಕೊರತೆಯಿಂದ ನರಳುತ್ತಿದ್ದಾರೆ, ಊರ ಮುಂದೆ ಹಾಲ ಹಳ್ಳ ಹರಿಯುತ್ತಿದೆ. ಒದೆಯುವ ಆಕಳ ಬೆನ್ನು ಹತ್ತಿ ಹೊರಟಿದ್ದಾರೆ. ಇವರಿಗೆ ತಮ್ಮ ಅಂಗೈಯಲ್ಲೇ `ಇಷ್ಟಲಿಂಗ’ ಎಂಬ ಅಮೃತದ ಕುಂಭ ಇದೆಯೆಂಬುದು ಗೊತ್ತಿಲ್ಲ. ಕಂಡ ಕಂಡ ದೇವರುದಿಂಡರುಗಳನ್ನು ಹುಡುಕಿಕೊಂಡು ಹೊರಟಿದ್ದಾರೆ. ಕಾಮಧೇನು ಕರದಲ್ಲಿದ್ದು ಬಿಡಿಕಾಸಿಗೆ ಗತಿ ಇಲ್ಲದವರಾಗಿದ್ದಾರೆ. ಹಾಗೆ ನೋಡಿದರೆ ಇವರು ಯಾರ ಹಿಂದೆ ತಾನೆ ಹೋಗುತ್ತಿಲ್ಲ?

ಈಗ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರ ಕುಮಾರಿಯರಾಗಿರುವವರೆಲ್ಲ ಇವರೇ, ಅಯ್ಯಪ್ಪಸ್ವಾಮಿಯ ಭಕ್ತರೂ ಇವರೇ! ಘತ್ತರಗಿ ಭಾಗಮ್ಮನ ಸಿಡಿ ಆಡೋರೂ ಇವರೇ! ಅಲಾಯಿ ಪೀರರೂ ಇವರೇ ಹಾಗಾದರೆ ಇವರು ಇಂದು ಯಾರ ಬೆನ್ನು ಹತ್ತಿತಾನೆ ಹೋಗುತ್ತಿಲ್ಲ? ಇವರಿಗೆ ಇಂದಿನ ರವಿಶಂಕರ ಹೇಳಿಕೊಡುವುದೆಲ್ಲ ತಮ್ಮೊಳಗೇ ಇದೆಯೆಂಬ ತಿಳಿವು ಇವರಿಗೆ ಯಾವಾಗ ಬಂದೀತು?

0 LINGANNA SATYAMPET


ಜನೇವರಿ -2008

Leave a Reply

Your email address will not be published. Required fields are marked *

error: Content is protected !!