ಊರ ತುಂಬೆಲ್ಲ ಇವರ ಮುಸುಡಿಗಳು!

ಜಗದ್ಗುರುಗಳು ಅನ್ನೋರು ಅವರು ಪಂಚಾಚಾರ್ಯ ಪಂಗಡದವರೇ ಆಗಿರಲಿ, ವಿರಕ್ತ ಪಂಗಡದವರೇ ಆಗಿರಲಿ, ಇವರು ತಮ್ಮ ಮಠಗಳಲ್ಲಿ ಹಾಯಾಗಿ ಹೊರಗೆಲ್ಲಿಯೂ ತಲೆಹಾಕದೆ ಇದ್ದು ಬಿಡಲಿ. ಆ ಬಗ್ಗೆ ಯಾರದೂ ತಕರಾರು ಇರಲಾರದು. ಯಾವ ನೆಪಮಾಡಿಯಾದರೂ ಮಠದಿಂದ ಇವರು ಹೊರವೊಂಟರೆ ಸಾಕು, ಭಕ್ತಾಧಿಗಳಿಗೆ ಫಜೀತಿ ಶುರು!

ಯಾಕೆ ಅಂತೀರಾ? ಅವರು ಮಠದಿಂದ ಸುಮ್ಮನೆ ಹೊರಡುವವರೇ ಅಲ್ಲ. ಆ ನಗರದಲ್ಲಿ ಅಡ್ಡ ಪಲ್ಲಕ್ಕಿಯುತ್ಸವ, ಈ ನಗರದಲ್ಲಿ ಧರ್ಮಸಭೆ. ಒಂದು ಊರಲ್ಲಿ ಸಮ್ಮೇಳನ; ಇನ್ನೊಂದು ಊರಲ್ಲಿ ಸಮಾವೇಶ. ಇವೆಲ್ಲ ದುಡ್ಡು ದುಗ್ಗಾಣಿಯಲ್ಲಿ ಆಗುತ್ತವೆಯೆ? ಲಕ್ಷ ಲಕ್ಷ ಸುರಿಯಬೇಕು. ಇಷ್ಟಾಗಿಯೂ ಇವರಿಂದ ಆಗೋ, ಕಮಾಯಿ ಏನು? ಭಾಷಣ ಬಿಗಿದದ್ದೇ ಬಂತು, ಮೆರವಣಿಗೆ ಮಾಡಿದ್ದೇ ಬಂತು. ಅವರ ಭಾಷಣಗಳನ್ನು ಕೇಳಿ ಕೇಳಿ ಕಿವಿ ತೂತು ಬಿದ್ದು ಹೋಗಿವೆ. ಇವರನ್ನು ಹೊತ್ತುಮೆರಿಸಿ ಡುಬ್ಬ ಲಾಳಿಗಟ್ಟಿಹೋಗಿದೆ. ಹಗ್ಗ ಹರಿದಿಲ್ಲ, ಕೋಲುಮುರಿದಿಲ್ಲ.

ಇತ್ತೀಚೆಗೆ ಇವರ ನಡುವೆ ನಡೆದಿರುವ ಇನ್ನೊಂದು ತಮಾಷೆಯ ಪೈಪೋಟಿಯೇನೆಂದರೆ ಹೆಜ್ಜೆ ಹೆಜ್ಜೆಗೂ ರಾಚುವ ಆಯಾ ನಗರ ಗ್ರಾಮ ಮಟ್ಟದ ಗೋಡೆ ಗೋಡೆಗಳ ಮೇಲೆ ಇವರ ಮುಖಾರವಿಂದಗಳ ಪೋಸ್ಟರ್‍ಗಳು! ಒಂದೇ ಸಮ ರಾರಾಜಿಸುತ್ತಿವೆ. ಸಿನೆಮಾದವರು ಹೇಗೆ ಎಲ್ಲಾ ಊರು ನಗರಗಳ ಗೋಡೆಗೋಡೆಗಳನ್ನು ಚರಂಡಿ ಪಾಯಖಾನೆಗಳ ಅಂಗೈಯಗಲದ ಸ್ಥಳವನ್ನು ಸಹ ಖಾಲಿ ಬಿಡದೆ ಗುತ್ತಿಗೆ ಹಿಡಿದು ಅಂಟಿಸಿರುತ್ತಾರೋ ಹಾಗೆ ಅವರ ಪೋಸ್ಟರ್, ಬ್ಯಾನರ್, ಹೋಲ್ಡಿಂಗ್, ಪ್ಲೆಕ್ಸ್‍ಗಳ ಮಗ್ಗಲು ಮಗ್ಗಲುಗಳಲ್ಲಿಯೇ ಇವರು ಸಹ ತಮ್ಮ ಮುಖಾರವಿಂದಗಳನ್ನು ಅಂಟಿಸಿ ಬಿಟ್ಟು, ಎಷ್ಟು ವಾಕರಿಕೆ ಹಿಡಿಸಿ
ಬಿಟ್ಟಿರುತ್ತಾರೆಂದರೆ ಇವರಿಗೇನು ಬಂತಪ್ಪ ಈ ಪರಿಯ ಪ್ರಚಾರದ ವ್ಯಾಮೋಹ?

ಇವರೇನು ಮುಂದೆ ಎಂದಾದರೂ ಚುನಾವಣೆಗೆ ನಿಲ್ಲುವವರಿದ್ದಾರೋ ಅಥವಾ ಎಂತಾದರೊಂದು ಸಿನಿಮಾದಲ್ಲಿ ನಟಿಸುವವರಿದ್ದಾರೋ? ಎಂದೆನಿಸಿಬಿಡುತ್ತದೆ.
ಬಹಳ ದಿನಗಳ ಹಿಂದೇನೂ ಅಲ್ಲ. ಮುವ್ವತ್ತು ನಲವತ್ತು ವರ್ಷಗಳ ಹಿಂದೆಯೂ ಸ್ವಾಮಿಗಳು ಮಠಪೀಠಾಧೀಶರು ಅನ್ನೋರು ಇದ್ದರು. ಅವರು ಒಂದು ದಿನವೂ ತಮ್ಮ ಭಾವ ಚಿತ್ರವನ್ನು ಗೋಡೆ ಗೋಡೋನ್‍ಗಳಿಗೆ ಅಂಟಿಸುವುದಕ್ಕೆ ಅನುಮತಿ ಕೊಟ್ಟವರಲ್ಲ. ಅಷ್ಟೇಕೆ? ಅವರು ತಮ್ಮ ಭಾವಚಿತ್ರವನ್ನು ತೆಗೆಯುವುದಕ್ಕೇ ಅವಕಾಶ ಮಾಡಿಕೊಟ್ಟವರಲ್ಲ. ಎಲ್ಲಾದರೂ ಅವರೆದುರು ಕ್ಯಾಮರಾಮನ್ ಬಂದುದು ಕಾಣಿಸಿದರೆ ಭೂತ ಕಂಡವರಂತೆ ಬೆಚ್ಚಿಬೀಳುತ್ತಿದ್ದರು. ತಮ್ಮ ಪೋಟೋ ತೆಗೆಯಕೂಡದು ಎಂದು ಕಟ್ಟಪ್ಪಣೆ ಮಾಡುತ್ತಿದ್ದರು. ಅಕಸ್ಮಾತ್ ಯಾರಾದರೂ ಒತ್ತಾಯದಿಂದ ತಮ್ಮ ಪೋಟೋ ತೆಗದದ್ದು ಅವರಿಗೆ ತಿಳಿದು ಬಂದರೆ ಆ ಪೋಟೋಗ್ರಾಫರ್‍ನನ್ನು ಕರೆಯಿಸಿ ಹಿಡಿಶಾಪ ಹಾಕುತ್ತಿದ್ದರು!

ಹುನಗುಂದ ತಾಲೂಕಿನ ಸಜ್ಜಲಗುಡ್ಡ – ಕಂಬಳಿ ಹಾಳದಲ್ಲಿ ಶರಣಮ್ಮ ತಾಯಿ ಎಂಬೋರ್ಚ ಮಹನೀಯಳು ಇದ್ದಳು. ನನ್ನ ತಂದೆ ತಾಯಿಗಳೊಂದಿಗೆ ಒಂದು ಸಲ ನಾನು ಅವರ ದರ್ಶನಕ್ಕೆ ಹೋಗಿದ್ದರ ನೆನಪು. ಆಗ ನಾನು ಬಹಳವಾದರೆ ಹತ್ತು ವರ್ಷದವಳಾಗಿರಬೇಕು. ಅವರ ದರ್ಶನಕ್ಕೆ ಹೋಗಿ ಮರಳುವಾಗ ನೆನಪಿಗೆ ಇರಲಿ, ಅಂತ ಅವರ ಪೋಟೋ ಎಲ್ಲಿಯಾದರೂ ಇದೆಯೇ? ಅಂತ ಕೇಳಿದರೆ – ಅವರು ಪೋಟೋ ತೆಗೆಯಿಸಿಕೊಳ್ಳುವುದೇ ಇಲ್ಲ. ಎಂದು ತಿಳಿದು ಬಂತು. ಅಷ್ಟಕ್ಕೂ ಯಾರೋ ಒಬ್ಬರು ಅವರಿಗೆ ಗೊತ್ತಾಗದಂತೆ ಪೋಟೋ ತೆಗೆದಿದ್ದಾರೆಂತಲೂ, ತೆಗೆದಿದ್ದರೂ ಅದನ್ನು ಪ್ರಿಂಟ್‍ಹಾಕದಿರುವಂತೆ ತಾಯಿ ಶರಣಮ್ಮನವರು ಆ ಪೋಟೋಗ್ರಾಫರನಿಗೆ ತಾಕೀತು ಮಾಡಿದ್ದಾರೆಂತಲೂ ಗೊತ್ತಾಯಿತು! ಇದು ಎಂಥ ನಿರ್ಮೋಹತ್ವ! ಎಂಥ ಸರಳ ಸಹಜ ಶರಣ ಜಿವನ!

ಆದರೆ ಇವರದು ನೋಡಿ, ಅಡಿ ಇಟ್ಟ ರಸ್ತೆ ಬದಿಗೆಲ್ಲ ಪೋಸ್ಟರ್ ಬ್ಯಾನರ್! ಸರ್ಕಲ್ ಸರ್ಕಲ್‍ಗಳ ಸುತ್ತೆಲ್ಲ ಹೋರ್ಡಿಂಗ್, ರಾಡಿರಾಡಿ! ಊರು ನಗರಗಳ ತುಂಬೆಲ್ಲ ಮುಖಕ್ಕ ಹೊಡೆವಂಥ ಇವರ ಮುಸುಡಿಗಳು, ಇವನ್ನೆಲ್ಲ ನೋಡಬೇಕಾಗಿ ಬಂದಿರೋದು ಯಾವ ಜನ್ಮದ ಕರ್ಮಫಲವೊ?

o Linganna Satyampet

ಆಗಸ್ಟ್-2009

Leave a Reply

Your email address will not be published. Required fields are marked *

error: Content is protected !!