ಮಿನುಗಿ ಮರೆಯಾದ ಮುದ್ದೇಬಿಹಾಳದ ಶೃಂಗಾರಗೌಡ್ರು

ಲಿಂಗಾಯತ ತತ್ವ ಅಪ್ಪಿಕೊಂಡಿದ್ದ ಗಟ್ಟಿ ಬೀಜ

ಶ್ರೀ ಎಸ್.ಜಿ.ಪಾಟೀಲ್…;ಅವರೊಂದು ವ್ಯಕ್ತಿಯಲ್ಲ ಅದೊಂದು ಶಕ್ತಿ ! ಮುದ್ದೇಬಿಹಾಳ ತಾಲೂಕಿನ ಕಳಶ!! ಎಸ್.ಜಿ.ಪಾಟೀಲರೆಂದರೆ ಬಹುಜನರಿಗೆ ಗೊತ್ತಾಗುವುದಿಲ್ಲ.ಅವರು ಶೃಂಗಾರಗೌಡರೆಂದೇ ಪಸಿದ್ಧಿ !!!! ಶೃಂಗಾರಗೌಡರನ್ನು ಬಹಜನರು ಗುರುತಿಸುವುದು ಅವರೊಬ್ಬ ಮುತ್ಸದ್ಧಿ ರಾಜಕಾರಣಿ ಎಂದು ! ಆದರೆ ಜನರಿಗೆ ಗೊತ್ತಿಲ್ಲ ಅವರ ಹೃದಯದಲ್ಲೊಬ್ಬ ಕವಿ ಅಡಗಿದ್ದ ಎಂಬುದು.ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ,ಪ್ರೀತಿ, ಪ್ರೇಮ, ವಾತ್ಸಲ್ಯದ ಸಂದೇಶ ಸಾರುವ ಅದೆಷ್ಟೋ ಕವನಗಳು,ಅವರ ಹೃದಯದಿಂದ ಪುಟಿದೆದ್ದು ಬಂದು ಕಾವ್ಯ ಗಂಗೆಯಾಗಿ ಪ್ರವಹರಿಸಿವೆ !


ಶೃಂಗಾರ ಗೌಡರು ಕನ್ನಡದ ಕಟ್ಟಾಳು ! ಅವರು ಮುದ್ದೇಬಿಹಾಳ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದನ್ನು ಯಾರು ತಾನೆ ಮರೆತಾರು !? ಮುದ್ದೇಬಿಹಾಳ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಅದು ನಿರ್ಜೀವವಾಗಿತ್ತು. ನಿರ್ಜೀವವಾಗಿದ್ದ ಆ ಪರಿಷತ್ತಿಗೆ ಮರಳಿ ಜೀವ ತುಂಬಿ ಉಸಿರಾಡುವಂತೆ ಮಾಡಿ ,ತಾಲೂಕಿನಲ್ಲಿ ಸಾಹಿತ್ಯದ ಸುಳಿಗಾಳಿ ಸೂಸುವಂತೆ ಮಾಡಿದವರೇ ನಮ್ಮ ಶೃಂಗಾರ ಗೌಡರು !
ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ,ಮುದ್ದೇಬಿಹಾಳದಲ್ಲಿ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿ ,ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜ ಶ್ರೇಷ್ಠ ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪನವರನ್ನು ಆಮಂತ್ರಸಿ ,ಅವರ ಅಮೃತ ಹಸ್ತದಿಂದ ಸಮೇಳನವನ್ನು ಉದ್ಘಾಟಿಸಿ,ಸಾಹಿತ್ಯದ ರಸಗಂಗೆಯನ್ನೇ ಹರಿಸಿದವರು ಅವರು.ಸಮ್ಮೇಳನಕ್ಕೆ ಬಂದ ಎಲ್ಲರಿಗೂ ಬೂರಿಭೋಜನ ಮಾಡಿಸಿ ಸಂತೃಪ್ತಿ ಪಟ್ಟವರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಮ್ಮೇಳನ ಮಾಡಲು ಯಾವುದೇ ಅನುದಾನ ಬರದ ಕಾಲವದು ! ಅಂತಹ ಸಮಯದಲ್ಲಿ ಯಾರ ಹತ್ತಿರವೂ ಒಂದು ಪೃಸೆ ಕೇಳದೇ ,ಅಂದಿನ ಕಾಲದಲ್ಲಿಯೇ ಲಕ್ಷಾಂತರ ರೂಪಾಯಿಗಳ ತಮ್ಮ ಸ್ವಂತ ಹಣವನ್ನೇ ಖರ್ಚು ಮಾಡಿ ,ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೇನೋ ಎನ್ನವಷ್ಟರ ಮಟ್ಟಿಗೆ ಸಮ್ಮೇಳನವನ್ನು ಆಯೋಜಿಸಿ ತೋರಿಸಿದ್ದು ಒಂದು ಅಳಿಸಲಾಗದ ದಾಖಲೆಯೇ ಸೈ ! ಸ್ವತಹ ಕನ್ನಡದ ದಿಗ್ಗಜ,ಶ್ರೇಷ್ಠ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪನವರೇ ತಮ್ಮ ಭಾಷಣದಲ್ಲಿ ಇದು ಅಖಿಲ ಭಾರತ ಸಮ್ಮೇಳನವನ್ನು ಮೀರಿಸಿದೆ ಎಂದು ಉದ್ಘಾರ ತೆಗೆದದ್ದು ಇನ್ನೂ ಹಸಿರಾಗಿಯೇ ಇದೆ! ಉತ್ತಮ ಸಂಘಟಕರಾಗಿದ್ದ ಅವರ ಕೈಯಲ್ಲಿ ,ಅವರ ಅಧ್ಯಕ್ಷಾವಧಿಯಲ್ಲಿ ನಾನು,ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಬಹಳಷ್ಟು ಅವರಿಂದ ಕಲಿತೆ ,ಹಾಗೂ ಪಳಗಿದೆ.ಅದು ಮುಂದೆ ಅನೇಕ ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲು ನನಗೆ ಪ್ರೇರಕ ಶಕ್ತಿಯಾಯಿತು !


ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ನಿರಂತರ ತಾಲೂಕಿನಲ್ಲಿ ಜರುಗಲು ,ಅವರು ದಾನಿಗಳಿಂದ ಸುಮಾರು ೨೦ಕ್ಕೂ ಹೆಚ್ಚು ದತ್ತಿಗಳನ್ನು ಸಂಗ್ರಹಿಸಿ (ದತ್ತಿನಿಧಿ ಎಂದರೇನೆಂದು ಬಹು ಜನರಿಗೆ ಗೊತ್ತಿರದ ಕಾಲವದು)ದಾಖಲೆ ಬರೆದರು.ಆ ವರ್ಷ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ,ರಾಜ್ಯದಲ್ಲಿಯೇ ಅತಿಹೆಚ್ಚು ದತ್ತಿಗಳನ್ನು ಸಂಗ್ರಹಿದ ತಾಲೂಕು ಮುದ್ದೇಬಿಹಾಳ ಎಂದು ಘೋಷಿಸುವಂತಾಯ್ತು.ಹಾಗೂ ಅವರಿಗೆ ಅಲ್ಲಿಯೇ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಶೃಂಗಾರ ಗೌಡರನ್ನು ಮುದ್ದೇಬಿಹಾಳ ತಾಲೂಕಿನ ಸಾಂಸ್ಕೃತಿಕ ರಾಯಭಾರಿ ಎಂದು ಪ್ರೀಯಿಂದ ಜನ ಕರೆಯುತ್ತಾರೆ. ಕಾರಣ ಇಷ್ಟೇ, ಯಾವುದೇ ಚಿಕ್ಕ ಕಾರ್ಯಕ್ರಮವಿರಲಿ ಅಥವಾ ದೊಡ್ಡ ಕಾರ್ಯಕ್ರಮವೇ ಇರಲಿ ,ಜಾತ್ರೆಕೇತ್ರೆಗಳೇ ಇರಲಿ , ಸಭೆ ಸಮಾರಂಭಗಳೇ ಇರಲಿ ,ಅವೆಲ್ಲ ಶ್ರೀ ಶೃಂಗಾರ ಗೌಡರ ನೇತೃತ್ವದಲ್ಲಿಯೇ ನಡೆಯುತ್ತ ಬಂದಿವೆ ! ಗೌಡರಿದ್ದರೆ ಮುಗಿಯಿತು ,ಕಾರ್ಯಕ್ರಮಗಳು ಸುಸೂತ್ರವಾಗಿ ನಡೆದೇ ಹೋಗುತ್ತವೆ ಎಂಬ ಅದಮ್ಯ ವಿಶ್ವಾಸ ಜನರದಾಗಿತ್ತು !


ಪುರಸಭೆಯ ಅಧ್ಯಕ್ಷರಾಗಿ, ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾಗಿ , ಶ್ರೀ ಹೇಮರಡ್ಡಿ ಸೇವಾ ಸಂಸ್ಥೆಯ ಅಧ್ಯಕ್ಷರಾಗಿ ,ಪಟ್ಟಣದ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕಿನ ಅಭಿವೃದ್ಧಿಯ ಹರಿಕಾರರಾಗಿ ಹಾಗೂ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರಾಗಿ, ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿ ಹೆಸರು ಮಾಡಿದ ಸಮಾಜ ಸೇವಕರಾಗಿ , ಮತ್ತು ಹಿರಿಯ ರಾಜಕೀಯ ಧುರಿಣರಾಗಿ ಅವರು ಮಾಡಿದ ಅನನ್ಯ ಕಾರ್ಯಗಳನ್ನು ಸಮಾಜ ಹೇಗೆ ಮರೆತೀತು !? ಅವರು ಜನಮಾನಸದಲ್ಲಿ ಬೆರೆತುಹೋಗಿದ್ದಾರೆ !!
ವಯಸ್ಸು ೭೦ರ ಗಡಿ ದಾಟಿದ್ದರೂ ಇಪ್ಪತ್ತರ ನವ ತರುಣನಂತೆ ,ಚೈತನ್ಯದ ಚಿಲುಮೆಯಾಗಿ ,ಕ್ರಿಯಾಶೀಲರಾಗಿ ,ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದ ಶ್ರೀ ಶೃಂಗಾರಗೌಡರು ಧ್ರುವ ತಾರೆಯಂತೆ ಈ ನಾಡಿನಲ್ಲಿ ಮಿಂಚಿ ,ಇಷ್ಟು ಬೇಗ ಮರೆಯಾಗುತ್ತಾರೇ ಎಂದು ಯಾರೂ ಭಾವಿಸಿರಲಿಲ್ಲ ! ಅವರಿನ್ನು ನೆನಪು ಮಾತ್ರ!
ಅವರ ಆದರ್ಶ ಗುಣಗಳು ನಮಗೆಲ್ಲ ಪ್ರೇರಕ !!
ಭಗವಂತ ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನೀಯಲಿ!!

O  ಶ್ರೀ ಅಶೋಕ ಪಿ .ಮಣಿ ಮಾಜಿ ಗೌರವಕಾರ್ಯದರ್ಶಿಗಳು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು,  ಮುದ್ದೇಬಿಹಾಳ.

Leave a Reply

Your email address will not be published. Required fields are marked *

error: Content is protected !!