ಬಸವ ತತ್ವ ನಿಷ್ಠ ಹುಲಸೂರು ಶ್ರೀಗಳು

೦ ಬರಹ : ಮಹಾಂತೇಶ್ ಕುಂಬಾರ

ಕಲಬುರ್ಗಿಯ ಬಸವಕೇಂದ್ರದ ನಡಕಟ್ಟಿ ಶರಣರು ಹುಲಸೂರು ಶಿವಾನಂದ ಶ್ರೀಗಳು ಬಸವತತ್ವ ವಿರೋಧಿಗಳೆಂದು ಹೇಳುತ್ತಿರುವುದು ಅವರನ್ನು ನೋಡಿದ ಅಥವಾ ಅವರ ಸುತ್ತಲಿನ ಗ್ರಾಮದವರು ಮತ್ತು ಸ್ಥಳೀಯ ಬಸವಕಲ್ಯಾಣದ ಯಾರು ಇದನ್ನು ಒಪ್ಪುವುದಿಲ್ಲ. ಅವರು ವಿರಕ್ತಮಠದ ಮಠಾಧೀಶರಾಗಿ ಅತ್ಯಂತ ವೈಚಾರಿಕತೆಯಿಂದ ಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅವರು ಯಾವುದೇ ಊರಿಗೆ ಹೋಗಲಿ ಬಸವಣ್ಣನ ತತ್ವವನ್ನು ಪ್ರಚಾರ ಮಾಡುತ್ತಲೇ ಇದ್ದಾರೆ. ಒಂದೇ ಒಂದು ದಿನವೂ ಕೂಡ ಪಂಚಾಚಾರ್ಯರ ಯಾವುದೇ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿಲ್ಲ. ಅವರು ದಲಿತರ ಕಾರ್ಯಕ್ರಮಗಳಿಗೆ ಹಿಂದುಳಿದ ವರ್ಗದ ಕುರುಬ ಕಬ್ಬಲಿಗ ಎಲ್ಲ ಜಾತಿ ಜನಾಂಗದವರ ಕಾರ್ಯಕ್ರಮಗಳಿಗೆ ಹೋಗುತ್ತಾರೆ. ಅಲ್ಲಿಯೂ ಸಹ ಅವರು ಹೇಳುವುದು ಬಸವತತ್ವ ವಿನಹ ಬೇರೆ ಯಾವುದೂ ಅಲ್ಲ.

ಹುಲಸೂರು ಶ್ರೀಗಳು

2 ವರ್ಷಗಳ ಹಿಂದೆ ಬಸವಕಲ್ಯಾಣದ ಶಾಮರಾವ್ ಎಂಬ ದಲಿತರ ಮನೆಯ ಗುರು ಪ್ರವೇಶಕ್ಕೆ ಒಪ್ಪಿಕೊಂಡರು. ಅದು ಹಾಗೆ ಒಪ್ಪಿಕೊಳ್ಳಲಿಲ್ಲ. ಅವರ ಮನೆಯವರೇ ಅಡುಗೆ ಮಾಡಬೇಕು. ಪ್ರಸಾದವನ್ನು ಬಡಿಸಬೇಕು. ಅದು ಬಿಟ್ಟು ಲಿಂಗಾಯತರಿಂದ ಅಡುಗೆ ಮಾಡಿಸಬಾರದು ಎಂದು ಹೇಳಿ ಅವರ ಮನೆಗೆ ಆಗಮಿಸಿ ಸ್ನಾನವನ್ನು ಮಾಡಿ ಇಷ್ಟಲಿಂಗ ಪೂಜೆಯನ್ನು ಮುಗಿಸಿ ಅಲ್ಲಿ ನೆರೆದ ಎಲ್ಲಾ ಸಭಿಕರಿಗೂ ಬಸವ ತತ್ವವನ್ನು ಉಪದೇಶಿಸಿ ಅವರ ಮನೆಯವರೇ ಮಾಡಿ ಬಡಿಸಿದ ಪ್ರಸಾದವನ್ನು ಸೇವಿಸಿದ ಗುರುಗಳು ಇಂದು ಬಸವ ವಿರೋಧಿಗಳಾಗಿ ಕೆಲವರಿಗೆ ಕಾಣುತ್ತಿರುವುದು ವಿಪರ್ಯಾಸವೇ ಆಗಿದೆ.

ಕೆಲವೊಂದು ಹಳ್ಳಿಯಲ್ಲಿ ಜನ ಮೌಢ್ಯತೆಯಲ್ಲಿ ಇದ್ದಾರೆ. ಬಹುದೇವೋಪಾಸನೆ ಅಂದ ಶ್ರದ್ಧೆ ಮೂಢ ಆಚರಣೆಗಳಲ್ಲಿ ಮುಳುಗಿದ್ದಾರೆ. ಅಂತಹ ಜನರು ಕಾರ್ಯಕ್ರಮಕ್ಕೆ ಕರೆದಾಗ ಹೋಗಬೇಕಾಗುವುದು ಅನಿವಾರ್ಯವಾಗುತ್ತದೆ. ಆದರೆ ಜನರ ಆಮಂತ್ರಣವನ್ನು ನಿರಾಕರಿಸಿ ಒಪ್ಪದಿದ್ದರೆ ಜಾತಿ ವಿರೋಧಿ ಸ್ವಾಮಿಯೆಂದು ಪಟ್ಟ ಕಟ್ಟುತ್ತಾರೆ. ಈಗ ಹೇಳಿ ಹುಲಸೂರು ಸ್ವಾಮಿಗಳು ಬಸವತತ್ವ ವಿರೋಧಿ ಹೇಗೆ ಆಗುತ್ತಾರೆ?

ಎಲ್ಲಿ ಬಸವತತ್ವ ಇಲ್ಲವೋ, ಎಲ್ಲಿ ಬಹುದೇವೋಪಾಸನೆ ನಡೆಯುತ್ತದೆಯೋ, ಎಲ್ಲಿ ಜನ ಅಂದಶ್ರದ್ದಯಲ್ಲಿ ಮುಳುಗಿದ್ದಾರೋ ಅವರಲ್ಲಿ ಸ್ವಾಮಿಗಳು ಹೋಗಬೇಕಾಗುತ್ತೆ. ವಚನ ತತ್ವದ ಬೀಜವನ್ನು ಬಿತ್ತ ಬೇಕಾಗುತ್ತೆ. ಅಲ್ಲಿಗೆ ಹೋಗದಿದ್ದರೆ ಮುಂದೆ ಆಗುವ ನಷ್ಟ ಬಸವತತ್ವಕ್ಕೆ ಹೊರತು ಗುರುಸ್ವಾಮಿಗಳಿಗಲ್ಲ.


ಬೀದರ್ ಜಿಲ್ಲೆಯಲ್ಲಿ ಶಿವಾಚಾರ್ಯರ ಸಂಘ ಬಲಿಷ್ಠವಾಗಿದ್ದರೆ ಅವರಿಗೆ ಸೊಪ್ಪು ಹಾಕದೆ ಸಂಪೂರ್ಣ ಬಸವ ತತ್ವದ ಆಧಾರದ ಮೇಲೆ ಹುಲಸೂರ ಶ್ರೀಗಳು ಮಠದ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಮಹಿಳೆಯರಿಂದಲೇ ವಚನ ರಥವನ್ನು ಎಳೆಸುತ್ತಾರೆ. ಮಠದ ಜಾತ್ರೆಯನ್ನು ಶರಣ ಸಂಸ್ಕೃತಿ ಉತ್ಸವವೆಂದು ಆಚರಿಸುತ್ತಾರೆ. ಗ್ರಾಮೀಣ ರೈತರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಆಮಂತ್ರಿಸಿದ ಎಲ್ಲ ಜಾತಿ ಜನಾಂಗದ ಕಾರ್ಯಕ್ರಮಗಳಿಗೂ ಹೋಗುತ್ತಾರೆ. ಅಂದಮೇಲೆ ಅವರು ಹೇಗೆ ಬಸವ ವಿರೋಧಿಗಳಿಗುತ್ತಾರೆ?
ಅವರದಲ್ಲದ ಮಠದಲ್ಲಿ ಆ ಮಠದ ಶಿಷ್ಯರು ಇವರ ಭಾವಚಿತ್ರ ಬಳಸಿಕೊಂಡು ನೆನಪಿನ ಕಾಣಿಕೆಯನ್ನು ಸಿದ್ಧಪಡಿಸಿದ್ದೆ ಮುಂದಿಟ್ಟುಕೊಂಡು ಹಲಸೂರಿನ ಪೂಜ್ಯ ಶಿವಾನಂದ ಸ್ವಾಮಿಗಳು ಬಸವ ವಿರೋಧಿ ಎಂದು ಬಿಂಬಿಸುವುದು ಬಸವ ತತ್ವಕ್ಕೆ ವಿರೋಧವಾಗಿದೆ.

ಇಳಿವಯಸ್ಸಿನಲ್ಲಿ 12ನೇ ಶತಮಾನದ ಚರ ಜಂಗಮ ರಂತೆ ದೇಶದ ಉದ್ದಗಲಕ್ಕೂ ಕಲ್ಯಾಣದಿಂದ ಕಾಶ್ಮೀರದವರೆಗೂ ಅಲ್ಲದೆ ನೇಪಾಳಕ್ಕೂ ಹೋಗಿ ಬಸವ ತತ್ವವನ್ನು ಪ್ರಚಾರ ಮಾಡಿದ್ದಾರೆ. ಅನುಭವವನ್ನು ಬಸವ ಭಾರತ ಎಂಬ ಪ್ರವಾಸ ಕಥನವನ್ನು ಬರೆದಿದ್ದಾರೆ. ಬಸವಣ್ಣನವರನ್ನು ವಿವಿಧ ಭಾಷೆಯ ಜನರಿಗೆ ಪರಿಚಯಿಸಿದ್ದಾರೆ. ಬಸವ ಸಮಿತಿಯ ಸಹಯೋಗದಲ್ಲಿ ಸಾವಿರಾರು ಪುಸ್ತಕಗಳನ್ನು ಪಡೆದುಕೊಂಡು ಭಕ್ತರ ಕಾಣಿಕೆಯನ್ನು ಸಂಗ್ರಹಿಸಿ ಹಿಂದಿ ಭಾಷೆಯಲ್ಲಿ ವಚನ ಪುಸ್ತಕಗಳನ್ನು ಮುದ್ರಿಸಿ ಬಸವಣ್ಣನವರ ಕುರಿತಾದ ಹಿಂದಿ ಆಡಿಯೋ ಕ್ಯಾಸೆಟ್ಟುಗಳನ್ನು ಮಾಡಿ ದೇಶದ ತುಂಬಾ ಹಂಚಿದ್ದಾರಲ್ಲಾ ! ಈಗ ಹೇಳಿ ಅವರು ಬಸವ ವಿರೋಧಿಗಳೇ? ಆಕಸ್ಮಿಕವೂ ಅನಿವಾರ್ಯವಾಗಿ ಘಟಿಸುವ ಕೆಲವು ಘಟನೆಗಳನ್ನು ಕಂಡಾಕ್ಷಣ ಅವರು ಬಸವ ವಿರೋಧಿ ಎಂದು ಆತುರದ ಪಟ್ಟವನ್ನು ಕಟ್ಟುವುದು ಸರಿಯಲ್ಲ.

ಬಸವಕಲ್ಯಾಣದಲ್ಲಿ ಪಂಚಾಚಾರ್ಯರ ಹಾವಳಿಯ ನಡುವೆ ಅಲ್ಪಸ್ವಲ್ಪ ಬಸವತತ್ವ ಉಳಿಸಿ ಬೆಳೆಸಿದವರು ಶಿವಾನಂದ ಸ್ವಾಮಿಗಳು ಎಂಬುದು ಆರೋಪ ಮಾಡುವವರು ಅರಿಯಬೇಕಿದೆ. ಹುಲಸೂರಿನ ಹೊರಗಡೆ ಹಳೆ ಮಠದ ಜಾಗದಲ್ಲಿ ಅವಕಟ್ಟಿದ ಅನುಭವಮಂಟಪವನ್ನು ಒಮ್ಮೆ ನೋಡಿಬನ್ನಿ. ಅವರ ಬಸವತತ್ವ ನಿಮಗೆ ಗೊತ್ತಾಗುತ್ತೆ. ಏನು ನಿಮಗೆ ಹೆದರಿ ಬಸವ ತತ್ವದಲ್ಲಿ ಇರುವವರು ಎಂಬ ಭ್ರಮೆ ಬೇಡ. ಅವರು ಮನಸ್ಸು ಮಾಡಿದರೆ ಪಂಚಾಚಾರ್ಯರ ಕಡೆ ಹೋಗಬಹುದಿತ್ತು. ಬೀದರ್ ಜಿಲ್ಲೆಯಲ್ಲಿ ಶಿವಾಚಾರ್ಯರ ಪ್ರಭಾವ ಜಾಸ್ತಿ ಇರುವುದರಿಂದ ಅವರಿಗೆ ಲಾಭವಾಗುತ್ತಿತ್ತು. ಆದರೆ ಲಾಭವನ್ನು ಅವರು ಕೊಡುವ ಗೌರವವನ್ನು ಹುಲಸೂರ ಶ್ರೀಗಳು ಬಯಸಿದವರಲ್ಲ. ಅವರು ಇಂದಿಗೂ ನಿಮ್ಮ ಬಸವ ಕೇಂದ್ರದ ಕೇಂದ್ರಬಿಂದುವಾದ ಮುರುಘಾಮಠದಿಂದಲೇ ಮುರುಘಾ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈಗ ಅವರನ್ನು ವಿರೋಧಿಸುವುದು ಎಷ್ಟು ಸರಿ?

ಅವರು ಸದಾ ಚಿತ್ರದುರ್ಗದ ಮುರುಘಾ ಶರಣರ ಮಾರ್ಗದರ್ಶನದಲ್ಲಿ ಬಸವತತ್ವದ ದಾರಿಯಲ್ಲಿ ನಡೆದಿದ್ದಾರೆ. ಹುಲಸೂರು ಶ್ರೀಗಳು ಅತ್ಯಂತ ಸರಳರು, ಮುಗ್ಧರು ಇದ್ದಾರೆ. ಯಾರ ಮನೆಗೆ ಹೋಗಲಿ ಯಾರ ಮದುವೆಗೆ ಹೋಗಲಿ ಯಾರದೋ ಮನೆಯ ಗುರು ಪ್ರವೇಶಕ್ಕೆ ಹೋಗಲಿ ಎಂದು ದಕ್ಷಿಣೆಯನ್ನು ಕೇಳಿದವರಲ್ಲ. ಭಕ್ತರನ್ನು ಜಾತ್ರೆಯ ಹೆಸರ ಮೇಲೆ ಸುಲಿಗೆ ಮಾಡಿದವರಲ್ಲ. ಎಂದೋ ಪ್ರಸಿದ್ಧವಾಗಿದ್ದ ಜಗದ್ಗುರು ಬಸವ ಕುಮಾರೇಶ್ವರ ಪ್ರೌಢಶಾಲೆಯ ಬಸವಕಲ್ಯಾಣ ದೊಡ್ಡದಾಗಿ ಬೆಳೆಸಬಹುದಿತ್ತು. ಆದರೆ ಅವರು ಆ ದಿಕ್ಕಿನತ್ತ ಪಯಣಿಸಿದೆ ಒಬ್ಬ ಒಳ್ಳೆಯ ವಿರಕ್ತಮಠದ ಸ್ವಾಮೀಜಿಯಾಗಿ ಅವರು ಕಲ್ಯಾಣದ ಸುತ್ತಮುತ್ತಲು ಸಾಧ್ಯವಾದಷ್ಟು ಬಸವತತ್ವದ ಪ್ರಸಾರ ಮಾಡುತ್ತಿದ್ದಾರೆ. ಅಂಥವರನ್ನು ಹಿಡಿದೆಳೆದು ಮನಸ್ಸು ನೋಯಿಸಿ ಕಾಲು ಹಿಡಿದು ಎಳೆಯುವುದರಿಂದ ಬಸವತತ್ವ ಬೆಳೆಯುತ್ತದೆ ಎಂಬುದು ನಿಮ್ಮ ಅಭಿಪ್ರಾಯವಾದರೆ ಅದು ಸುಳ್ಳು . ಗುರು ಮತ್ತು ಭಕ್ತರು ಕೂಡಿಕೊಂಡೆ ಬಸವತತ್ವದ ರಥವನ್ನು ಬೆಳೆಯಬೇಕಿದೆ. ತತ್ವದ ಬೆಳೆ ಬೆಳೆಯಬೇಕಿದೆ. ಒಳಗೆ ಇದ್ದವರನ್ನು ಹೊರಗೆ ದಬ್ಬಿದರೆ ಬಸವತತ್ವ ಬೆಳೆಸುವುದು ಹೇಗೆ? ಅವರು ಸಾವಿರಾರು ಹಳಿಗೆ ಬಸವಣ್ಣನವರನ್ನು ಪರಿಚಯಿಸಿದ್ದಾರೆ. ನಾವು ಎಷ್ಟು ಹಳ್ಳಿಗಳಿಗೆ ಹೋಗಿ ಎಷ್ಟು ಜನರಿಗೆ ಪರಿಚಯಿಸಿದ್ದೇವೆ ? ಎಂಬುದು ಅಂತರಂಗದ ವಿಶ್ಲೇಷಣೆ ಮಾಡಿಕೊಂಡರೆ ಸಾಕು ಬಸವ ವಿರೋಧಿಗಳು ಹುಲಸೂರ ಶ್ರೀಗಳು ಅಥವಾ ನಾವು ಎಂಬುದು ಅರಿವಾಗುತ್ತೆ.

ನಡಕಟ್ಟಿ ಅವರು ಮಾಡಿದ ಆರೋಪ ಹುಲಸೂರು ಶ್ರೀಗಳನ್ನು ಮತ್ತಷ್ಟು ಎಚ್ಚರಗೊಳಿಸಿತು. ಎಲ್ಲಾ ಹಿರಿಯರ ಕಿರಿಯರ ಅಭಿಪ್ರಾಯವನ್ನು ಒಪ್ಪುವ ಸರಳ ಸ್ವಾಮೀಜಿಗಳಾಗಿದ್ದಾರೆ. ಹದಿನೈದು ವರ್ಷಗಳಲ್ಲಿ ಅವರನ್ನು ದೂರದಿಂದ ಅತ್ಯಂತ ಸಮೀಪದಿಂದ ತತ್ವ ಆಚರಣೆಗಳಿಂದ ನೋಡಿದ್ದೇನೆ. ಶಿವಾನಂದ ಸ್ವಾಮಿಗಳು ಬಸವತತ್ವ ನಿಷ್ಠರು ಬಸವ ಪ್ರೇಮಿಗಳು ಶರಣ ಧರ್ಮ ಪ್ರಸಾರಕರು ಇದು ಸುಳ್ಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ.

ಮಹಾಂತೇಶ್ ಕುಂಬಾರ ಹೂವಿನಹಳ್ಳಿ

2 thoughts on “ಬಸವ ತತ್ವ ನಿಷ್ಠ ಹುಲಸೂರು ಶ್ರೀಗಳು

  1. ಮಹಾಂತೇಶ.ಕುಂಬಾರವರು ಬರೆದ ಲೇಖನ ಓದಿ ತುಂಬಾ ಸಂತೋಷವಾಯಿತು.
    ಪೂಜ್ಶ ಶಿವಾನಂದ ಅಪ್ಪೋರು ಅತ್ಶಂತ ಸರಳ ಸಜ್ಜನಿಕೆಯ ಮಗುಮನಸ್ಸಿನ ಸ್ವಾಮಿಗಳು.
    ಏಳೆಂಟು ವರ್ಷಗಳ ಹಿಂದೆ ಹುಲಸೂರಿನ ಮಠಕ್ಕೆ ಹೋಗಿ 5 6 ದಿನ ಪ್ರವಚನ ಸೇವೆಯನ್ನು ಮಾಡಿ ಬಂದಿದ್ದೇನೆ.ಬಹಳ ವರ್ಷಗಳಿಂದ ಪರಿಚಿತ ಬಂಧುಗಳುಅವರು.ದಾಸೋಹ ಸಮಾನತೆಯ ತತ್ವ ಪ್ರಸಾರದಲಿ ಬಾಳು ಸವೆಸಿದ ಬಸವ ನಿಷ್ಠರು.
    ಕೇವಲ ಒಂದು ನೆನಪಿನ ಫಲಕ ನೋಡಿ ಸಂದೇಹ ಪಡುವುದು ಸರಿಯಲ್ಲ ಎಂದುದು ನನ್ನ ಅನಿಸಿಕೆ.
    ನಾನು ಕಲಬುರಗಿಯ ಬಸವ ಕೇಂದ್ರದ ಎಲ್ಲ ಬಂಧುಗಳೊಡನೆ ಬಾಳಿದವಳು.ನಮ್ಮ ಮನೆಯ ಎಲ್ಲಾ ಸಮಾರಂಭಗಳನ್ನು ಅವರೇ ಮುಂದು ನಿಂತು ಮಾಡಿದವರು.ನಡಕಟ್ಟಿ ಅಣ್ಣೋರು ಮಲ್ಲಣ್ಣ ನಾಗರಾಳವರು ವಿಶ್ವನಾಥವರು ಜೇವರ್ಗಿಯ ಕಲ್ಲಾಶರಣರು ಇವರೆಲ್ಲ ನಮ್ಮ ಬಸವ ಬಂಧುಗಳು ಹಿತೈಷಿಗಳುˌಮಾರ್ಗದರ್ಶಕರು.ನಡಕಟ್ಟಿ ಅನಸೂಯಕ್ಕನವರು ನನ್ನ ಹಿರಿಯ ಅಕ್ಕ ನಂತೆ ಅಕ್ಕರೆ ತೋರುವ ಮಾತೆ.

Leave a Reply

Your email address will not be published. Required fields are marked *

error: Content is protected !!