ಆರೋಗ್ಯದ ಭದ್ರತೆಯಿಲ್ಲದೆ ದುಡಿಯುವ ಪೌರ ಕಾರ್ಮಿಕರು !

ಮಂಜುಶ್ರೀ ಕಡಕೋಳ

‘ಕೊರೊನಾ ಬರಬಾರದು ಅಂದ್ರೆ ಪ್ರತಿ ಅರ್ಧಗಂಟೆಗೊಮ್ಮೆ ಕೈ ತೊಳಿಯಬೇಕಂತೆ. ಅರ್ಧದಿನ ಕಸ ಗುಡಿಸಿ, ಅದನ್ನು ಎತ್ತಿಹಾಕುವ ಕೆಲಸದಲ್ಲಿ ಮುಳುಗಿ ಹೋಗಿರುವ ನಮಗೆ, ಕೈ ತೊಳೆಯೋದಿರಲಿ ಕುಡಿಯೋಕೆ ನೀರು ಸಿಕ್ರೆ ಸಾಕು’
–ಹಾಗೆಂದು ಪೌರ ಕಾರ್ಮಿಕ ಮಹಿಳೆ ಲಕ್ಷ್ಮಮ್ಮ ನಿಟ್ಟುಸಿರುಬಿಡುತ್ತಾರೆ.

‘ಕೊರೊನಾ ಬಂದ್ಮೇಲೆ ನಾವೂ ದೂರ ದೂರ ಇದ್ದೀವಿ. ನಮ್ಮಲ್ಲೇ ಮೂರ್ನಾಲ್ಕು ಜನ ಕೊರೊನಾದಿಂದ ಸತ್ತಮೇಲೆ ನಮಗೂ ಭಯ ಶುರುವಾಗಿದೆ. ಹೊಲಸು ಬಳಿಯುವ ಈ ಕೈಗಳಿಂದಲೇ ಮನೆಗೆ ಹೋಗಿ ಅಡುಗೆ ಮಾಡ್ತೀವಿ. ನಮಗೂ, ನಮ್ಮ ಮನೆಯವರಿಗೂ ಕೊರೊನಾ ಬಂದರೆ ಏನು ಗತಿ? ಆದರೆ, ಹೊಟ್ಟೆಪಾಡು, ಈ ಕೆಲಸ ಬಿಟ್ಟರೆ ಬೇರೆ ಗೊತ್ತಿಲ್ಲ’ ಅಂತ ತಮ್ಮ ಸ್ಥಿತಿ ಬಿಚ್ಚಿಡುತ್ತಾರೆ ಅವರು.

ವೈದ್ಯರು, ದಾದಿಯರು, ಪೊಲೀಸರಂತೆಯೇ ಕೊರೊನಾ ಸೇನಾನಿಗಳಾಗಿ ದುಡಿಯುತ್ತಿರುವ ರಾಜ್ಯದ ಪೌರ ಕಾರ್ಮಿಕರಲ್ಲಿ ಶೇ ೮೦ರಷ್ಟು ಮಂದಿ ಮಹಿಳೆಯರೇ ಇದ್ದಾರೆ. ನಿತ್ಯವೂ ನಗರದ ಬೀದಿಗಳನ್ನು ಗುಡಿಸಿ ಸ್ವಚ್ಛಗೊಳಿಸುವ ಇವರಿಗೆ ಎನ್‌–೯೫ ಮಾಸ್ಕ್‌, ಗ್ಲೌಸ್, ಶೂ, ಪಿಪಿಇ ಕಿಟ್ ಯಾವುದೂ ಇಲ್ಲ. ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ ಈ ಕಾರ್ಮಿಕರನ್ನು ಥರ್ಮಲ್ ಸ್ಕ್ಯಾನಿಂಗ್‌ಗೂ ಒಳಪಡಿಸುತ್ತಿಲ್ಲ. ಸ್ವಸಹಾಯ ಸಂಘಗಳ ಬಟ್ಟೆಯ ಮಾಸ್ಕ್ ಕಟ್ಟಿಕೊಂಡು, ಅಲ್ಲಲ್ಲಿ ಹರಿದಿರುವ ಗ್ಲೌಸ್‌ಗಳನ್ನು ಧರಿಸಿಯೇ (ಕೆಲವೆಡೆ ಬರಿಗೈಯಲ್ಲಿ) ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಈ ಮಹಿಳೆಯರು, ನಿತ್ಯವೂ ‘ಸೋಂಕಿ’ನೊಂದಿಗೆ ಮುಖಾಮುಖಿ ಆಗುತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲೂ ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿರುವ ಈ ಸ್ವಚ್ಛತಾ ಸೇನಾನಿಗಳಿಗೆ ಕನಿಷ್ಠ ಆರೋಗ್ಯ ವಿಮೆಯೂ ಇಲ್ಲ!

ಕೊಳೆಗೇರಿಗಳಲ್ಲಿ ಒತ್ತೊತ್ತಾಗಿರುವ ಬೆಂಕಿ ಪೊಟ್ಟಣದಂತಹ ಮನೆಗಳಲ್ಲಿ ಬಹುತೇಕ ಪೌರಕಾರ್ಮಿಕರು ವಾಸಿಸುತ್ತಾರೆ. ಪುರುಷರು ಮನೆ ಹೊರಗೆ ಹೇಗೋ ಕಾಲ ಕಳೆಯುತ್ತಾರೆ. ಆದರೆ, ಮಹಿಳಾ ಪೌರಕಾರ್ಮಿಕರಿಗೆ ಇರುವ ಪುಟ್ಟ ಗೂಡಿನಲ್ಲೇ ಅಡುಗೆ, ಮಕ್ಕಳು, ಕುಟುಂಬದ ಹಿರಿಯರ ದೇಖರೇಖಿಯ ಜವಾಬ್ದಾರಿ. ‌ಬಹಳಷ್ಟು ಕುಟುಂಬಗಳಿಗೆ ಈ ಮಹಿಳೆಯರ ಸಂಬಳವೇ ಜೀವನಾಧಾರ. ಸಣ್ಣ ಮನೆ‌, ಕಡಿಮೆ ಆದಾಯ, ದುಶ್ಚಟಗಳಿರುವ ಗಂಡನ ಅನಾರೋಗ್ಯಕ್ಕೆ ಚಿಕಿತ್ಸೆ ಇತ್ಯಾದಿಗಳಿಂದ ಮಾನಸಿಕವಾಗಿ ಬಸವಳಿದಿರುವ ಪೌರಕಾರ್ಮಿಕ ಮಹಿಳೆಯರಿಗೆ ತಮ್ಮ ವೈಯಕ್ತಿಕ ಸ್ವಚ್ಛತೆ, ಆರೋಗ್ಯಕ್ಕೆ ಗಮನ ಕೊಡಲು ಪುರುಸೊತ್ತಿಲ್ಲ. ಮೊದಲೇ ನೌಕರಿಯ ಅಭದ್ರತೆ ಇದ್ದ ಈ ಮಹಿಳೆಯರಿಗೆ ಈಗ ಆರೋಗ್ಯದ ಅಭದ್ರತೆಯೂ ಕಾಡುತ್ತಿದೆ.

ಸಾಲುತ್ತಿಲ್ಲ ಸ್ಯಾನಿಟೈಸರ್

‘ಕೊರೊನಾ ಬಂದ್ಮೇಲೆ ಪಾಲಿಕೆ ತಿಂಗಳಿಗೊಂದು ಸ್ಯಾನಿಟೈಸರ್ ಬಾಟಲಿ ಕೊಡುತ್ತಿದೆ. ಆದರೆ, ಅದು ತಿಂಗಳಿಡೀ ಸಾಕಾಗದು. ಮತ್ತೆ ನಾವೇ ದುಡ್ಡು ಕೊಟ್ಟು ಕೊಂಡು ಕೊಳ್ಳಬೇಕು. ಮಾರುಕಟ್ಟೆಯಲ್ಲಿ ಗುಣಮಟ್ಟದ ಸ್ಯಾನಿಟೈಸರ್‌ ಬಾಟಲಿಯೊಂದಕ್ಕೆ ಕನಿಷ್ಠ ₹೩೫೦ ದರವಿದೆ. ಪೊರಕೆಯನ್ನೂ ನಾವೇ ಖರೀದಿಸಬೇಕು. ಅದರ ಜತೆಗೆ ಇದೊಂದು ಹೊರೆ’ ಎನ್ನುತ್ತಾರೆ ಮಹಿಳಾ ಪೌರಕಾರ್ಮಿಕರು.

ಕೊರೊನಾಕ್ಕೂ ಮುನ್ನ ನಗರ ರಸ್ತೆಸಾರಿಗೆಗಳಲ್ಲಿ ಓಡಾಡುತ್ತಿದ್ದ ಮಹಿಳಾ ಪೌರಕಾರ್ಮಿಕರಿಗೆ ಇತರರ ಮೇಲೆ ಅವಲಂಬಿಸುವ ಸ್ಥಿತಿ ಇರಲಿಲ್ಲ. ಆದರೆ, ದಿಗ್ಬಂಧನದಿಂದ ಸಾರಿಗೆ ಸಮಸ್ಯೆ ಉಂಟಾದ್ದರಿಂದ ಬಹುತೇಕ ಮಹಿಳೆಯರು ತಮ್ಮ ಮನೆಗಳಿಂದ ಕೆಲಸದ ಸ್ಥಳಗಳಿಗೆ ತಲುಪಲು ಕಷ್ಟಪಡುವಂತಾಗಿದೆ.

‘ಕೆಲವರು ಕುಟುಂಬ ಸದಸ್ಯರ ಬೈಕ್, ಸ್ಕೂಟರ್ ಮೂಲಕ ಕೆಲಸ ಸ್ಥಳಗಳಿಗೆ ಡ್ರಾಪ್ ತೆಗೆದುಕೊಂಡರೆ, ಬಹುತೇಕರು ಒಂದು ಆಟೊ ಬಾಡಿಗೆ ಮಾಡಿಕೊಂಡು ಕೆಲಸದ ಸ್ಥಳಗಳಿಗೆ ಬರುತ್ತಾರೆ. ಇಲ್ಲಿ ಅಂತರ ಕಾಪಾಡುವುದು ಕಷ್ಟ. ನಾವು ಐದಾರು ಮಂದಿ ಒಂದೇ ಆಟೊದಲ್ಲಿ ಸೀಟ್ ಲೆಕ್ಕದಲ್ಲಿ ದಿನಕ್ಕೆ ೧೫ರಂತೆ ಪಾವತಿಸುತ್ತಿದ್ದೆವು. ಈಗ ದಿನಕ್ಕೆ ₹೩೦ ಬಾಡಿಗೆ ನಿಗದಿ ಮಾಡಿದ್ದಾರೆ’ ಎನ್ನುತ್ತಾರೆ ಪೌರ ಕಾರ್ಮಿಕ ಮಹಿಳೆ ಸುಮತಿ.

ಪೊಲೀಸರು, ವೈದ್ಯರು, ದಾದಿಯರು ತಮ್ಮ ಕೆಲಸ ಮುಗಿಸಿ ಪ್ರತ್ಯೇಕ ಕೊಠಡಿಯಲ್ಲಿ ಕ್ವಾರಂಟೈನ್ ಆಗುತ್ತಾರೆ. ಆದರೆ, ಸಣ್ಣ ಮನೆಗಳಲ್ಲಿ ವಾಸವಿರುವ ಪೌರಕಾರ್ಮಿಕ ಮಹಿಳೆಯರಿಗೆ ಅಂಥ ಯಾವ ಸೌಕರ್ಯವೂ ಇಲ್ಲ. ಕೆಲಸ ಮುಗಿಸಿ ಮನೆಗೆ ಹೋಗಿ ತಮ್ಮ ಕುಟುಂಬದೊಂದಿಗೆ ನೇರ ಸಂಪರ್ಕದಲ್ಲಿರುವ ಇವರಿಗೆ ಒಂದು ವೇಳೆ ಸೋಂಕು ತಗುಲಿದರೆ ಇಡೀ ಕುಟುಂಬಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

‘ಕೋವಿಡ್‌ನಿಂದಾಗಿ ಈಚೆಗಷ್ಟೇ ಮೃತಪಟ್ಟ ಪೌರಕಾರ್ಮಿಕ ಮಹಿಳೆ ಶಿಲ್ಪಾ ಅವರಿಗೆ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರೆಯಲಿಲ್ಲ. ಸ್ವಚ್ಛತಾ ಕೆಲಸ ಮಾಡಲು ನಾವು ಬೇಕು. ಆದರೆ, ನಮ್ಮ ಜೀವದ ಬಗ್ಗೆ ಮಾತ್ರ ವ್ಯವಸ್ಥೆಗೆ ಏಕೆ ನಿರ್ಲಕ್ಷ್ಯ’ ಎಂದು ಕೇಳುತ್ತಾರೆ ಹೆಸರು ಹೇಳಲಿಚ್ಛಿಸದ ಪೌರಕಾರ್ಮಿಕ ಮಹಿಳೆಯೊಬ್ಬರು.

‘ರಾಜ್ಯದಲ್ಲಿ ‍ಪೌರ ಕಾರ್ಮಿಕರ ಸಂಖ್ಯೆ ಎಷ್ಟಿದೆ ಎಂಬ ಬಗ್ಗೆ ಯಾವ ಇಲಾಖೆಯ ಬಳಿಯೂ ನಿಖರ ಅಂಕಿಸಂಖ್ಯೆಗಳಿಲ್ಲ. ಮನೆಮನೆಗೆ ಹೋಗಿ ಕಸ ಸಂಗ್ರಹಿಸುವ ಮಹಿಳಾ ಪೌರಕಾರ್ಮಿಕರು ಕೆಲವೆಡೆ ಹಸಿ–ಒಣಕಸವನ್ನು ತಾವೇ ಕೈಯಾರೆ ವಿಂಗಡಿಸುತ್ತಾರೆ. ಇವರ ಕೆಲಸಕ್ಕೆ ಅನುವಾಗುವ ಕನಿಷ್ಠ ರಕ್ಷಣಾ ಸಲಕರಣೆಯನ್ನೂ ನೀಡಲಾಗದ ವ್ಯವಸ್ಥೆ ನಮ್ಮದು’ ಎನ್ನುತ್ತಾರೆ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ತಳಸಮುದಾಯಗಳ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಆರ್.ವಿ. ಚಂದ್ರಶೇಖರ್.

‘ಎಲ್ಲಾ ಪೌರಕಾರ್ಮಿಕರು (ಕಾಯಂ, ನೇರ ಮತ್ತು ಗುತ್ತಿಗೆ ನೌಕರರು) ಮತ್ತು ಅವರ ಕುಟುಂಬಕ್ಕೆ ₹೫೦ಲಕ್ಷ ಆರೋಗ್ಯ ವಿಮೆ ನೀಡಬೇಕು, ಕೋವಿಡ್‌ ಸೇವೆಗಳಲ್ಲಿ ತೊಡಗಿರುವ ಪೌರಕಾರ್ಮಿಕರಿಗೆ ಪ್ರತಿತಿಂಗಳು ₹೫ ಸಾವಿರ ಪ್ರೋತ್ಸಾಹಧನ ನೀಡಬೇಕು’ ಎಂದು ರಾಷ್ಟ್ರೀಯ ಕಾನೂನು ಶಾಲೆಯ ತಳ ಸಮುದಾಯಗಳ ಅಧ್ಯಯನ ಕೇಂದ್ರ, ಆಡಳಿತ ತರಬೇತಿ ಸಂಸ್ಥೆಯ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರ ಹಾಗೂ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.

ಹೈಕೋರ್ಟ್‌ ನಿರ್ದೇಶನ

ಈ ಮಧ್ಯೆ ‘ಬಿಬಿಎಂಪಿ ವ್ಯಾಪ್ತಿಯ ‌ಪೌರ ಕಾರ್ಮಿಕರಿಗೆ ಕೂಡಲೇ ಪಿಪಿಇ ಕಿಟ್ ನೀಡಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕೋರ್ಟ್‌ ಆದೇಶಕ್ಕೂ ಮುನ್ನ ಸಮಾಜ ಕಲ್ಯಾಣ ಇಲಾಖೆಯೂ ‍‍ಪಿ‍ಪಿಇ ಕಿಟ್ ಬಗ್ಗೆ ಸುತ್ತೋಲೆ ಹೊರಡಿಸಿದರೂ ಬಿಬಿಎಂಪಿ ಅದನ್ನು ಪಾಲನೆಮಾಡಿಲ್ಲ.

‘ಬೆಳಿಗ್ಗೆ ೬.೩೦ರಿಂದ ೧೦.೩೦ರ ತನಕ ಮಾತ್ರ ಪೌರ ಕಾರ್ಮಿಕರಿಂದ ಕೆಲಸ ಮಾಡಿಸಬೇಕು ಎಂದು ಆದೇಶಿಸಲಾಗಿತ್ತು. ಈಗ ಮಧ್ಯಾಹ್ನ 2 ಗಂಟೆವರೆಗೆ ಕೆಲಸ ಮಾಡಿಸುತ್ತಿದ್ದಾರೆ. ನಿರಂತರ ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿರುವವರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು’ ಎನ್ನುತ್ತಾರೆ ಎಂ.ಎಸ್‌.ಕಾಯ್ದೆ ೨೦೧೩ರ ರಾಜ್ಯ ಮೇಲ್ವಿಚಾರಣಾ ಸಮಿತಿ ಸದಸ್ಯೆ ಎಂ. ಪದ್ಮ ಕೋಲಾರ.

ಪೌರ ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಸವಲತ್ತುಗಳನ್ನು ಒದಗಿಸುವ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್‌ ನಾಯಕ ಅವರು ಜುಲೈ ೪ರಂದು ಮಾರ್ಗಸೂಚಿ ಮತ್ತು ಸುತ್ತೋಲೆಗಳನ್ನು ಹೊರಡಿಸಿದ್ದಾರೆ. ಆದರೆ, ಈ ಮಾರ್ಗಸೂಚಿ ಪಾಲನೆಯಾಗುತ್ತಿಲ್ಲ ಎಂದು ದೂರುತ್ತಾರೆ ಪೌರಕಾರ್ಮಿಕ ಮುಖಂಡರು. ಎಲ್ಲಾ ಆದೇಶ, ನಿರ್ದೇಶನ, ಸುತ್ತೋಲೆಗಳ ಮಧ್ಯೆ ರಕ್ಷಣಾ ಸಾಧನಗಳಿಲ್ಲದೆ ಪೊರಕೆ ಹಿಡಿದು ಬೀದಿಗಿಳಿಯುವ ಪೌರಕಾರ್ಮಿಕರು ಯಥಾಪ್ರಕಾರ ಸೋಂಕಿಗೆ ಮುಖಾಮುಖಿಯಾಗುತ್ತಿದ್ದಾರೆ.

ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ‌ಮಾರ್ಗಸೂಚಿ

  • ಆಯಾ ಸ್ಥಳೀಯ ಸಂಸ್ಥೆ, ವಾರ್ಡ್ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ಬೆಳಿಗ್ಗೆ ಕೆಲಸಕ್ಕೆ ಬಂದು, ಹಾಜರಾತಿ ಪಡೆಯುವಾಗ ಕಾರ್ಮಿಕರಿಗೆ ಸ್ಯಾನಿಟೈಸರ್ ಸಿಂಪಡಿಸಿ, ಥರ್ಮಲ್ ಸ್ಕ್ಯಾನಿಂಗ್ ಮೂಲಕ ದೇಹದ ತಾಪಮಾನ ಪರೀಕ್ಷಿಸಬೇಕು. ಕೆಲಸ ಮುಗಿಸಿ ಹೊರಡುವಾಗ ಹ್ಯಾಂಡ್‌ವಾಷ್ ಮಾಡಿಸಿ ಮನೆಗೆ ಕಳುಹಿಸಬೇಕು
  • ಪೌರಕಾರ್ಮಿಕರಿಗೆ ಬಟ್ಟೆ ಬದಲಾಯಿಸಲು ವಿಶ್ರಾಂತಿಗೃಹ, ಸ್ನಾನ ಮತ್ತು ಶೌಚಗೃಹಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು
  • ಎಲ್ಲಾ ಪೌರಕಾರ್ಮಿಕರಿಗೆ ಪಿಪಿಇ ಕಿಟ್‌ಗಳನ್ನು ವಿತರಿಸಬೇಕು. ನಿಯಮಿತ ಆರೋಗ್ಯ ತಪಾಸಣೆ ಮಾಡಬೇಕು, ರೋಗನಿರೋಧಕ ಶಕ್ತಿ ವೃದ್ಧಿಸಲು ಅಗತ್ಯ ಔಷಧಿಗಳನ್ನು ಉಚಿತವಾಗಿ ನೀಡಬೇಕು
  • ಕೋವಿಡ್‌ ಸೋಂಕಿಗೊಳಗಾದ ಪೌರಕಾರ್ಮಿಕರಿಗೆ ನಿಗದಿತ ಕೋವಿಡ್‌ ಆಸ್ಪತ್ರೆಗಳಲ್ಲಿ ಉಚಿತವಾಗಿ ಅಗತ್ಯ ಚಿಕಿತ್ಸೆಗೆ ಕ್ರಮ ವಹಿಸಬೇಕು. ಕೋವಿಡ್‌ ಸೋಂಕಿಗೊಳಗಾಗದ ರೀತಿಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಬೇಕು

ಈ ಕಾರ್ಮಿಕರ ಜೀವಕ್ಕಿಲ್ಲವೇ ಬೆಲೆ?

ಮೊದಲೇ ಸಮಾಜದ ಅಲಕ್ಷಿತರಾಗಿರುವ ಪೌರಕಾರ್ಮಿಕರು ಕೋವಿಡ್‌–೧೯ ಕಾರಣಕ್ಕಾಗಿ ಮತ್ತಷ್ಟು ಅಲಕ್ಷ್ಯಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಮಹಿಳಾ ಪೌರಕಾರ್ಮಿಕರ ಸ್ಥಿತಿ ಹೀನಾಯವಾಗಿದೆ. ಮನುಷ್ಯನ ಮಲದಿಂದಲೂ ಕೋವಿಡ್ ಹರಡಬಹುದೆಂದು ಸಂಶೋಧನೆಯೊಂದು ಹೇಳಿದೆ. ಇಂಥ ಸ್ಥಿತಿಯಲ್ಲಿ ಈ ಮಹಿಳೆಯರು ಯಾವ ಕೈಗಳಿಂದ ಸ್ವಚ್ಛತಾ ಕೆಲಸವನ್ನು ಮಾಡುತ್ತಾರೋ ಮನೆಗೆ ಹಿಂತಿರುಗಿದ ಬಳಿಕ ಅದೇ ಕೈಗಳಿಂದಲೇ ಅಡುಗೆಯನ್ನೂ ಮಾಡುತ್ತಾರೆ. ಮಹಿಳಾ ಪೌರಕಾರ್ಮಿಕರಿಗೆ ಮನೆ ಹೊರಗಷ್ಟೇ ಅಲ್ಲ, ಒಳಗೂ ಆತಂಕವಿದೆ. ಇವರ ಜೀವಕ್ಕೆ ಬೆಲೆಯಿಲ್ಲವೇ?

  • ಬೆಜವಾಡ ವಿಲ್ಸನ್, ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ, ಮಾನವ ಹಕ್ಕುಗಳ ಕಾರ್ಯಕರ್ತ

ಸೋಂಕಿನ ಅಪಾಯ ಹೆಚ್ಚು

ಸರಿಯಾಗಿ ಕೈತೊಳೆಯದೇ ಆಹಾರ ಸೇವಿಸಿದರೆ ಕಾಲರಾ, ಟೈಫಾಯಿಡ್, ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳು ಬರುತ್ತವೆ. ಆರ್ಥಿಕವಾಗಿ ದುಃಸ್ಥಿತಿಯಲ್ಲಿರುವ ಇವರಿಗೆ ಪೌಷ್ಟಿಕ ಆಹಾರವೂ ದೊರೆಯದು. ರೋಗನಿರೋಧಕ ಶಕ್ತಿ ಕಮ್ಮಿ ಇರುವುದರಿಂದ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಪದೇಪದೇ ಕೈತೊಳೆಯುವ ಅಭ್ಯಾಸ ಮಹಿಳಾ ಪೌರಕಾರ್ಮಿಕರಿಗೆ ಇರುವುದಿಲ್ಲ. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯವಿಲ್ಲದ ಕಾರಣ, ಗಂಟೆಗಟ್ಟಲೇ ನೀರು ಕುಡಿಯುವುದಿಲ್ಲ. ಇದರಿಂದ ಕಿಡ್ನಿಯಲ್ಲಿ ಕಲ್ಲುಗಳಾಗುವ ಸಾಧ್ಯತೆ ಹೆಚ್ಚು.

ಕೈಗಳಷ್ಟೇ ಅಲ್ಲ ಪಾದಗಳೂ ಸ್ವಚ್ಛವಾಗಿರಬೇಕು. ಮಹಿಳೆಯರ ಲಂಗದ ಅಂಚಿನಲ್ಲಿ ಸಾವಿರಾರು ರೋಗಾಣುಗಳು ಶೇಖರಣೆಯಾಗಿರುತ್ತವೆ. ಈ ಮಹಿಳೆಯರು ಮನೆಗೆ ಬಂದತಕ್ಷಣ ಪಾದದಿಂದ ಮೊಣಕಾಲಿನ ತನಕ ಸೋಪು ಹಚ್ಚಿ ತೊಳೆದುಕೊಳ್ಳಬೇಕು.

  • ಡಾ.ಎಚ್. ಗಿರಿಜಮ್ಮ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ

ಕಡ್ಡಾಯವಾಗಿ ಪರೀಕ್ಷೆ ಮಾಡಿಸಿ

ಬೆಂಗಳೂರಿನ ವಾರ್ಡ್‌ವೊಂದರಲ್ಲಿ ೯೯ ಪೌರಕಾರ್ಮಿಕರಿಗೆ ಕೋವಿಡ್‌ ಪರೀಕ್ಷೆ ಮಾಡಿದಾಗ ಅದರಲ್ಲಿ ೨೩ ಮಂದಿಯ ಫಲಿತಾಂಶ ಪಾಸಿಟಿವ್ ಬಂದಿದೆ. ಅದರಲ್ಲಿ ೧೮ ಮಹಿಳಾ ಪೌರಕಾರ್ಮಿಕರಿದ್ದಾರೆ. ಬೆಂಗಳೂರಿನಲ್ಲೇ ಐವರು ಪೌರಕಾರ್ಮಿಕರು (ಮೂವರು ಮಹಿಳೆಯರು) ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದಾರೆ. ರಾಜ್ಯದ ಎಲ್ಲಾ ಪೌರಕಾರ್ಮಿಕರಿಗೆ ಕೋವಿಡ್ ಪರೀಕ್ಷೆ ಮಾಡಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸೋಂಕಿತರು ವಾಸಿಸುವ ಬೀದಿಗಳನ್ನು ಗುಡಿಸುವ ಈ ಮಹಿಳೆಯರಿಗೆ ಸೋಂಕು ತಗುಲಿದರೆ ಯಾರು ಹೊಣೆ?

  • ನಾರಾಯಣ, ಪೌರಕಾರ್ಮಿಕರ ಮಹಾಸಂಘದ ಅಧ್ಯಕ್ಷ

ಪೌರಕಾರ್ಮಿಕರ ಆರೋಗ್ಯ ರಕ್ಷಣೆಗೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ, ಸೋಂಕು ಪತ್ತೆ ಪರೀಕ್ಷೆಗಳನ್ನೂ ವ್ಯಾಪಕವಾಗಿ ನಡೆಸಲಾಗುವುದು. ಆರೋಗ್ಯ ಸಮಸ್ಯೆ ಕಾಣಿಸಿಕೊಂಡಲ್ಲಿ ಚಿಕಿತ್ಸೆಗೆ ತಕ್ಷಣವೇ ವ್ಯವಸ್ಥೆ ಮಾಡುವಂತೆಯೂ ಆದೇಶಿಸಿದ್ದೇನೆ.

  • ಎನ್. ಮಂಜುನಾಥ ಪ್ರಸಾದ್, ಆಯುಕ್ತರು, ಬಿಬಿಎಂಪಿ
    ಸೌಜ‌ನ್ಯ : ಪ್ರಜಾವಾಣಿ ೨೩.೭.೨೦೨೦
ಬರಹ : ಮಂಜುಶ್ರೀ ಕಡಕೋಳ

Leave a Reply

Your email address will not be published. Required fields are marked *

error: Content is protected !!