ನ್ಯಾಯಾಂಗ ನಿಂದನೆ ಪ್ರಶ್ನಿಸಿ, ಸುಪ್ರೀಂಕೋರ್ಟ್ ಮೆಟ್ಟಿಲು

ಹಿರಿಯ ಪತ್ರಕರ್ತ ಎನ್ ರಾಮ್, ವಕೀಲ ಪ್ರಶಾಂತ್ ಭೂಷಣ್ ಮತ್ತು ಮಾಜಿ ಕೇಂದ್ರ ಸಚಿವ ಅರುಣ್ ಶೌರಿಯವರು ನ್ಯಾಯಾಂಗ ನಿಂದನೆ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದು ಸಂವಿಧಾನವು ಖಾತರಿಪಡಿಸಿದ “ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ” ಎಂದು ಆರೋಪಿಸಿದ್ದಾರೆ.

1971ರ ನ್ಯಾಯಾಂಗ ನಿಂದನೆ ಕಾಯ್ದೆಯನ್ನು “ಅಸಂವಿಧಾನಿಕ ಮತ್ತು ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿದೆ” ಎಂದು ವಿವರಿಸಿರುವ ಅರ್ಜಿದಾರರು ಕೆಲವು ನಿಬಂಧನೆಗಳನ್ನು ರದ್ದುಗೊಳಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

“ಆಪಾದಿತ ಉಪ-ವಿಭಾಗವು ಅಸಂವಿಧಾನಿಕವಾಗಿದೆ. ಸಂವಿಧಾನದ ಮುನ್ನಡಿಯ ಮೌಲ್ಯಗಳಿಗೆ ವಿರುದ್ಧವಾಗಿದೆ ಮತ್ತು ಸಂವಿಧಾನದ ಮೂಲ ಲಕ್ಷಣಗಳಿಗೆ ಹೊಂದಿಕೆಯಾಗುವುದಿಲ್ಲ. ಅದು ಅಸಂವಿಧಾನಿಕ, ಅಸಮರ್ಥ, ಅಸ್ಪಷ್ಟ ಮತ್ತು ಅನಿಯಂತ್ರಿತವಾಗಿದೆ” ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ನ್ಯಾಯಾಲಯದ ಟೀಕೆಯನ್ನು ಅಪರಾಧೀಕರಿಸುವ ಮೂಲಕ ಸಾರ್ವಜನಿಕ ಮತ್ತು ರಾಜಕೀಯ ಟೀಕೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಆರೋಪಿಸಲಾಗಿದೆ.

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆಯ ಸ್ವಯಂ ಪ್ರಕರಣ ದಾಖಲಿಸಿಕೊಂಡ ಕೆಲವೇ ದಿನಗಳಲ್ಲಿ ಆ ಕಾಯ್ದೆಯನ್ನೇ ಪ್ರಶ್ನಿಸಲಾಗಿದೆ.

Prashant bhooshan

ಪ್ರಶಾಂತ್‌ ಭೂಷಣ್‌ರವರು ಪ್ರಜಾಪ್ರಭುತ್ವಕ್ಕೆ ಹಾನಿಯನ್ನುಂಟುಮಾಡುವಲ್ಲಿ ನ್ಯಾಯಾಂಗದ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದರು.

“ಪ್ರಶಾಂತ್ ಭೂಷಣ್ ಅವರ ಟ್ವೀಟ್‌ಗಳು ಸಾರ್ವಜನಿಕರ ದೃಷ್ಟಿಯಲ್ಲಿ ಸುಪ್ರೀಂ ಕೋರ್ಟ್‌ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯ ಘನತೆ ಮತ್ತು ಸ್ವಾಯುತ್ತ ಅಧಿಕಾರವನ್ನು ಹಾಳುಮಾಡುತ್ತವೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಈ ಕುರಿತು ಸುಪ್ರೀಂ ಕೋರ್ಟ್‌ ಸೇರಿದಂತೆ ಹಲವು ನ್ಯಾಯಾಲಯಗಳ ಮಾಜಿ ನ್ಯಾಯಾಧೀಶರು, ಲೇಖಕರು, ಮಾಜಿ ಸರ್ಕಾರಿ ಅಧಿಕಾರಿಗಳು ಮತ್ತು ಪತ್ರಕರ್ತರು ಸೇರಿದಂತೆ 131 ವ್ಯಕ್ತಿಗಳು ನ್ಯಾಯಾಲಯದ ಕ್ರಮವನ್ನು ವಿರೋಧಿಸಿ, ಪ್ರಶಾಂತ್ ಭೂಷಣ್ ವಿರುದ್ಧದ ವಿಚಾರಣೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.

“ನ್ಯಾಯಾಲಯದ ಒಳಗೆ ಅಥವಾ ಹೊರಗೆ ನ್ಯಾಯಾಧೀಶರ ನಡವಳಿಕೆಯ ಬಗ್ಗೆ ಟೀಕೆಗಳ ಮಾತುಗಳಿಗೆ ಶಿಕ್ಷೆ ವಿಧಿಸುವ ನ್ಯಾಯಾಲಯದ ಅನಿಯಂತ್ರಿತ ಅಧಿಕಾರದ ಭಯದಲ್ಲಿ ನಾಗರಿಕರು ವಾಸಿಸುವ ಪರಿಸ್ಥಿತಿಯನ್ನು ನಾವು ಎದುರಿಸಲು ಸಾಧ್ಯವಿಲ್ಲ” ಎಂದು ನೂರಾರು ಪ್ರಗತಿಪರರು ಘೋಷಿಸಿದ್ದಾರೆ.

ಎನ್ ರಾಮ್ ಮತ್ತು ಅರುಣ್ ಶೌರಿಯವರ ಮೇಲೆ ಸಹ ಈ ಇಂದೆ ನ್ಯಾಯಾಂಗ ನಿಂದನೆ ವಿಚಾರಣೆ ನಡೆದಿತ್ತು. ಕೊಲ್ಲಂ ಮದ್ಯ ದುರಂತ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಯನ್ನು ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ಎನ್‌ ರಾಮ್‌ರವರು ಕೇರಳ ಹೈಕೋರ್ಟ್‌ನಿಂದ ನ್ಯಾಯಾಂಗ ನಿಂದನೆ ವಿಚಾರಣೆ ಎದುರಿಸಿದ್ದರು.  ನ್ಯಾಯಮೂರ್ತಿ ಕುಲದೀಪ್ ಸಿಂಗ್ ಆಯೋಗದ ಕುರಿತ ಲೇಖನವೊಂದರ ಬಗ್ಗೆ ಅರುಣ್ ಶೌರಿ ಮೇಲೆ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯವು ಅಂತಿಮವಾಗಿ ಲೇಖನವು ನ್ಯಾಯಾಂಗ ನಿಂದನೆಗೆ ಸಮನಾಗಿಲ್ಲ ಎಂದು ತೀರ್ಪು ನೀಡಿತ್ತು.

Leave a Reply

Your email address will not be published. Required fields are marked *

error: Content is protected !!