ಶಂಕರಗೌಡ ಎಂಬ ಅಪರೂಪದ ವೈದ್ಯ !

ಮನೆಯ ಕಾರ್‌ಶೆಡ್‌ನಲ್ಲೇ ಐದು ರೂಪಾಯಿ ವೈದ್ಯರ ಚಿಕಿತ್ಸೆ!

ಐದು ರೂಪಾಯಿ ವೈದ್ಯ’ ಎಂದೇ ಖ್ಯಾತಿ ಪಡೆದಿರುವ ಚರ್ಮರೋಗ ತಜ್ಞ ಡಾ.ಎಸ್‌.ಸಿ.ಶಂಕರೇಗೌಡ ಅವರು, ಮಂಡ್ಯದ ಆರ್‌.ಪಿ.ರಸ್ತೆಯಲ್ಲಿದ್ದ ಕ್ಲಿನಿಕ್‌ ಬಂದ್‌ ಮಾಡಿದ್ದಾರೆ. ಆದರೆ, ಅವರು ಚಿಕಿತ್ಸೆ ಸ್ಥಗಿತಗೊಳಿಸಿಲ್ಲ; ತಮ್ಮ ಮನೆಯ ಕಾರ್‌ ಶೆಡ್‌ನಲ್ಲೇ ಬೆಳಿಗ್ಗೆಯಿಂದ ರಾತ್ರಿಯವರೆಗೂ ರೋಗಿಗಳ ತಪಾಸಣೆ ನಡೆಸುತ್ತಿದ್ದಾರೆ.

ಬಂದೀಗೌಡ ಬಡಾವಣೆ, 3ನೇ ಕ್ರಾಸ್‌ನಲ್ಲಿರುವ ತಮ್ಮ ಮನೆಯಲ್ಲೇ 6 ತಿಂಗಳಿಂದ ಚಿಕಿತ್ಸೆ ನೀಡುತ್ತಿದ್ದಾರೆ. ಮನೆಯ ಕಾಂಪೌಂಡ್‌ ದಾಟಿ ರಸ್ತೆಯುದ್ದಕ್ಕೂ ಮಹಿಳೆಯರು, ಪುರುಷರು ಚಿಕಿತ್ಸೆಗಾಗಿ ಪ್ರತ್ಯೇಕ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಪ್ರತಿನಿತ್ಯ ಬೆಂಗಳೂರು, ಮೈಸೂರು, ರಾಮನಗರ, ಹಾಸನ ಮುಂತಾದ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಜನರು ಬರುತ್ತಿದ್ದು, ಶಂಕರೇಗೌಡರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಮೊದಲೇ ಕಾಯ್ದಿರಿಸಬೇಕಾಗಿಲ್ಲ, ಟೋಕನ್‌ ಪಡೆಯುವ ಅವಶ್ಯಕತೆಯೂ ಇಲ್ಲ. ಬಂದವರೆಲ್ಲರೂ ಸರತಿಯಲ್ಲಿ ನಿಂತು, ಅಂತರ ಕಾಯ್ದುಕೊಂಡು ಚಿಕಿತ್ಸೆ ಪಡೆಯುತ್ತಾರೆ. ಕೆಲವೊಮ್ಮೆ ತಮ್ಮ ಮನೆಯ ಬಾಗಿಲಲ್ಲೂ ಕುಳಿತು ರೋಗಿಗಳ ತಪಾಸಣೆ ಮಾಡುತ್ತಿದ್ದಾರೆ. ಮೊದಲು ಆರ್‌.ಪಿ ರಸ್ತೆಯ ಕ್ಲಿನಿಕ್‌ನಲ್ಲಿ ಮಧ್ಯಾಹ್ನದಿಂದ ರಾತ್ರಿಯವರೆಗೂ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಬೆಳಿಗ್ಗೆಯಿಂದ ರಾತ್ರಿವರೆಗೂ ಮನೆಯಲ್ಲೇ ರೋಗಿಗಳ ತಪಾಸಣೆ ಮಾಡುತ್ತಿದ್ದಾರೆ.

ಐದು ರೂಪಾಯಿ ವೈದ್ಯ ತಮ್ಮ ಮನೆಯ ಕಾರ್‌ ಶೆಡ್‌ನಲ್ಲಿಯೇ ಚಿಕಿತ್ಸೆ ನೀಡುತ್ತಿರುವುದು

ಕೃಷಿಕರೂ ಆಗಿರುವ ಶಂಕರೇಗೌಡರು ನಿತ್ಯ ನಸುಕಿನಲ್ಲೇ ತಮ್ಮ ಹುಟ್ಟೂರು, ತಾಲ್ಲೂಕಿನ ಶಿವಳ್ಳಿಯ ಹೊಲಕ್ಕೆ ತೆರಳುತ್ತಾರೆ. ಕೆಲವು ಸಂದರ್ಭಗಳಲ್ಲಿ ರೋಗಿಗಳು ಜಮೀನಿನ ಬಳಿಗೂ ತೆರಳಿ ತಪಾಸಣೆ ಮಾಡಿಸಿಕೊಳ್ಳುತ್ತಾರೆ. ನಂತರ ಬೆಳಿಗ್ಗೆ 8.30ರವರೆಗೂ ಶಿವಳ್ಳಿಯಲ್ಲಿ ತಪಾಸಣೆ ಮಾಡುತ್ತಾರೆ. ಗ್ರಾಮದ ಬೇಕರಿಯೊಂದರ ಕಟ್ಟೆಯ ಮೇಲೆ ಕುಳಿತು ರೋಗಿಗಳನ್ನು ನೋಡುತ್ತಾರೆ. ಅಲ್ಲಿ ತಪಾಸಣೆ ಸಂಪೂರ್ಣ ಉಚಿತ.

ನಂತರ ಮನೆಗೆ ಬಂದು ಬೆಳಿಗ್ಗೆ 9.30ರಿಂದ ರಾತ್ರಿ ತಪಾಸಣೆ ಮುಗಿಯುವವರೆಗೂ ಚಿಕಿತ್ಸೆ ನೀಡುತ್ತಾರೆ. ಒಮ್ಮೆಮ್ಮೆ ದೂರದ ಊರುಗಳಿಂದ ಬಂದ ರೋಗಿಗಳ ಚಿಕಿತ್ಸೆ ಮುಗಿಯುವ ಹೊತ್ತಿಗೆ ಮಧ್ಯರಾತ್ರಿಯಾದ ಉದಾಹರಣೆಗಳೂ ಇವೆ.
ಮೊದಲು ಆರ್‌.ಪಿ.ರಸ್ತೆಯಲ್ಲಿರುವ ಕ್ಲಿನಿಕ್‌ನಲ್ಲಿದ್ದ ಚಿಕ್ಕ ಕೊಠಡಿಯು ಸದಾ ರೋಗಿಗಳಿಂದ ತುಂಬಿ ತುಳುಕುತ್ತಿತ್ತು. ಕೋವಿಡ್‌ ಅವಧಿಯಲ್ಲಿ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಮೊದಲ ಮಹಡಿಯ ಕ್ಲಿನಿಕ್‌ನಲ್ಲಿ ಅಂತರ ಸಾಧ್ಯವಾಗದ ಕಾರಣ ಈಗ ಅವರು ತಮ್ಮ ಮನೆಯ ಕಾರ್‌ ಶೆಡ್‌ಗೆ ಕ್ಲಿನಿಕ್‌ ರೂಪ ಕೊಟ್ಟು ಚಿಕಿತ್ಸೆ ಮುಂದುವರಿಸುತ್ತಿದ್ದಾರೆ.

‘ಕಳೆದ ವರ್ಷ ಡಿಸೆಂಬರ್‌ನಲ್ಲಿ ಸ್ಕೂಟರ್‌ನಿಂದ ಬಿದ್ದು, ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ವಿಶ್ರಾಂತಿಯಲ್ಲಿದ್ದಾಗಲೂ ರೋಗಿಗಳು ಮನೆಗೇ ಬರುತ್ತಿದ್ದರು. ವಿಶ್ರಾಂತಿ ನಂತರ ಕ್ಲಿನಿಕ್‌ ಆರಂಭಿಸಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್‌ ಘೋಷಣೆಯಾಯಿತು. ಇಕ್ಕಟ್ಟಾಗಿರುವ ಜಾಗದಲ್ಲಿ ಕೊರೊನಾ ಸೋಂಕು ಹರಡುವ ಅಪಾಯ ಹೆಚ್ಚಿರುತ್ತದೆ. ಹೀಗಾಗಿ ಮನೆಯಲ್ಲೇ ಚಿಕಿತ್ಸೆ ಮುಂದುವರಿಸುತ್ತಿದ್ದೇನೆ’ ಎಂದು ಡಾ.ಶಂಕರೇಗೌಡ ಹೇಳಿದರು.

ಪುತ್ರಿ, ಪತ್ನಿಯ ಜೊತೆ ಡಾ.ಶಂಕರೇಗೌಡ

‘ಕೋವಿಡ್‌ ನಿಯಂತ್ರಣಕ್ಕೆ ಅಂತರವೇ ಮದ್ದು. ಎ.ಸಿ.ಕೊಠಡಿಗಳಲ್ಲಿ, ಗಾಳಿ–ಬೆಳಕು ಇಲ್ಲದ ಜಾಗದಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಜನರು ಆದಷ್ಟು ಪರಸ್ಪರ ದೂರವಿದ್ದು ಬೆಳಕು ಇರುವ ಜಾಗದಲ್ಲಿ ವಾಸ ಮಾಡಬೇಕು. ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು’ ಎಂದು ಅವರು ತಿಳಿಸಿದರು.

ಶಂಕರೇಗೌಡರು ಮನೆಯಲ್ಲೇ ಚಿಕಿತ್ಸೆ ನೀಡುತ್ತಿರುವ ಕಾರಣ ಅವರ ಪತ್ನಿ ಹಾಗೂ ಮಗಳಿಗೂ ಸಂತೋಷವಾಗಿದೆ. ‘ಈ ಮೊದಲು, ಪ್ರತಿದಿನ ರಾತ್ರಿ ನಾನು ಮತ್ತು ಮಗಳು ಅವರ ದಾರಿಯನ್ನೇ ಕಾಯುತ್ತಿದ್ದೆವು. ಆದರೆ ಈಗ ಮನೆಯಲ್ಲೇ ಇರುವುದರಿಂದ ನಮಗೂ ಖುಷಿಯಾಗಿದೆ’ ಎಂದು ಶಂಕರೇಗೌಡರ ಪತ್ನಿ ರುಕ್ಮಿಣಿ ತಿಳಿಸಿದರು.

38 ವರ್ಷಗಳ ಸಾರ್ಥಕ ಸೇವೆ: 1982ರಿಂದ ಶಂಕರೇಗೌಡರು ಕೇವಲ ₹ 5ಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ. 38 ವರ್ಷಗಳಿಂದ ಸಾರ್ಥಕ ಸೇವೆ ಸಲ್ಲಿಸಿರುವ ಡಾ.ಶಂಕರೇಗೌಡರು ಬಡಜನರಿಗೆ ಚಿಕಿತ್ಸೆ ನೀಡುವಲ್ಲಿ ತನ್ನ ವೃತ್ತಿ ಜೀವನವನ್ನು ಮೀಸಲಿಟ್ಟಿದ್ದಾರೆ. ಆರ್‌.ಪಿ.ರಸ್ತೆಯಲ್ಲಿದ್ದ ಕ್ಲಿನಿಕ್‌ ಆದಿಚುಂಚನಗಿರಿ ಮಠಕ್ಕೆ ಸೇರಿದ್ದು, ಇವರ ಸೇವೆಗೆ ಮನಸೋತ ಮಠ ಬಾಡಿಗೆ ಪಡೆಯುತ್ತಿರಲಿಲ್ಲ.

38 ವರ್ಷಗಳಿಂದ ಅವರು ಒಮ್ಮೆಯೂ ತಪಾಸಣಾ ದರವನ್ನು ಹೆಚ್ಚಳ ಮಾಡಿಲ್ಲ. ಚರ್ಮರೋಗ ತಜ್ಞರಿಗೆ ಅಪಾರ ಬೇಡಿಕೆ ಇದ್ದು ಅವರಿಂದ ಚಿಕಿತ್ಸೆ ಪಡೆಯಲು ಸಾವಿರಾರು ರೂಪಾಯಿ ವೆಚ್ಚ ಮಾಡಬೇಕು. ಆದರೆ ಶಂಕರೇಗೌಡರು ಕೇವಲ ₹ 5ಕ್ಕೆ ತಪಾಸಣೆ ನಡೆಸುವುದು ಬಡಜನರಿಗೆ ಒಂದು ರೀತಿಯ ಸಂಜೀವಿನಿಯಂತಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜನರು ಅವರ ಕೈಗುಣ ನಂಬುತ್ತಾರೆ.

‘ಚರ್ಮದ ಅಲರ್ಜಿ ಸಮಸ್ಯೆಗೆ ಕಳೆದ 20 ವರ್ಷಗಳಿಂದ ಶಂಕರೇಗೌಡರಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಇದಕ್ಕೂ ಮೊದಲು ಸಾವಿರಾರು ರೂಪಾಯಿ ಖರ್ಚು ಮಾಡಿದ್ದೆ, ಯಾವುದೇ ಗುಣ ಕಂಡಿರಲಿಲ್ಲ. ಆದರೆ ಶಂಕರೇಗೌಡರಿಂದ ಚಿಕಿತ್ಸೆ ಆರಂಭಿಸಿದ ನಂತರ ಅಲರ್ಜಿ ಸಮಸ್ಯೆ ಗುಣ ಕಂಡಿದೆ’ ಎಂದು ಬೆಂಗಳೂರಿನಿಂದ ಬಂದು ಚಿಕಿತ್ಸೆ ಪಡೆಯಲು ಬಂದಿದ್ದ ಪುಟ್ಟಪ್ಪ ಹೇಳಿದರು.

ರಾಜಕೀಯ ಹೆಜ್ಜೆಗಳು: ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರೂ ಆಗಿದ್ದ ಶಂಕರೇಗೌಡರು ಮಂಡ್ಯ ಜಿಲ್ಲೆಯಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉತ್ತಮ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಅತ್ಯಾವಶ್ಯ ಎಂದು ಅವರು ಪದೇಪದೇ ಹೇಳುತ್ತಿದ್ದರು. ಈಗ ಜಿಲ್ಲೆಯಾದ್ಯಂತ ಸಾವಿರಕ್ಕೂ ಹಚ್ಚು ಶುದ್ಧ ನೀರಿನ ಘಟಕಗಳಿದ್ದು ಇದರ ಹಿಂದೆ ಶಂಕರೇಗೌಡರ ಶ್ರಮವಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಅವರು ಜೆಡಿಎಸ್‌ ಟಿಕೆಟ್‌ ನಿರೀಕ್ಷೆ ಮಾಡಿದ್ದರು, ಆದರೆ ಜೆಡಿಎಸ್‌ ಟಿಕೆಟ್‌ ನಿರಾಕರಿಸಿದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ‘ಶಂಕರೇಗೌಡರು ಮಂಡ್ಯದ ಹೆಮ್ಮೆ. ಅವರು ಶಾಸಕ, ಸಚಿವ ಸ್ಥಾನವನ್ನು ಮೀರಿದ ಸಮಾಜ ಸೇವಕರಾಗಿದ್ದಾರೆ’ ಎಂದು ಶಿಕ್ಷಕ ಶಿವಾನಂದ ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆಯಲ್ಲಿ ಐದು ರೂಪಾಯಿ ನಾಣ್ಯಗಳ ಪ್ರದರ್ಶನ

ಮೊಬೈಲ್‌ ಇಲ್ಲ, ಜಾಲತಾಣ ಗೊತ್ತಿಲ್ಲ: ಮಣಿಪಾಲ್‌ನ ಕಸ್ತೂರ ಬಾ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌, ಚರ್ಮರೋಗ ಸ್ನಾತಕೋತ್ತರ ಡಿಪ್ಲೊಮಾ (ಡಿವಿಡಿ) ಪಡೆದಿರುವ ಶಂಕರೇಗೌಡರು ಇಲ್ಲಿಯವರೆಗೂ ಮೊಬೈಲ್‌ ಫೋನ್ ಬಳಕೆ ಮಾಡಿಲ್ಲ. ಅವರ ಜೊತೆ ಮಾತನಾಡಲು ಲ್ಯಾಂಡ್‌ಲೈನ್‌ಗೆ ಕರೆ ಮಾಡಬೇಕು. ಅವರಿಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟರ್‌ ಮಾಹಿತಿ ಇಲ್ಲ. ಕೃಷಿಯಲ್ಲಿ ಹಾಗೂ ರೋಗಿಗಳ ತಪಾಸಣೆಯಲ್ಲೇ ಅವರು ನೆಮ್ಮದಿ ಕಂಡುಕೊಂಡಿದ್ದಾರೆ.

ವೈದ್ಯಕೀಯ, ರಾಜಕೀಯ ಹಾಗೂ ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಎಸ್‌.ಸಿ.ಶಂಕರೇಗೌಡ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಭಿನಂದನಾ ಗ್ರಂಥ ಹೊರ ತರುತ್ತಿದೆ. ಡಿಸೆಂಬರ್‌ಗೆ ಕೃತಿ ಬಿಡುಗಡೆಯಾಗಲಿದೆ.

ಕೃಪೆ : ಪಿ.ವಿ.ವೆಬ್

One thought on “ಶಂಕರಗೌಡ ಎಂಬ ಅಪರೂಪದ ವೈದ್ಯ !

  1. ಅಪರೂಪದ ವೈದ್ಯ ಡಾ.ಶಂಕರಗೌಡರ ಸೇವೆ ಶ್ಲಾಘನಿಯವಾದದ್ದು .ರಾಜಕೀಯದಲ್ಲಿ ಇದ್ದರೂ ಅಲ್ಲಿಯೂ ಸೇವಾಭಾವಮರೆದಿದ್ದಾರೆ. ಆಭಾಗದ ಜನ ಪುಣ್ಯವಂತರು .

Leave a Reply

Your email address will not be published. Required fields are marked *

error: Content is protected !!