ದೇಶದಲ್ಲಿ ಮಧ್ಯ ನಿಷೇಧ ಏಕೆ ಮಾಡಬೇಕು?


0 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಮದ್ಯಪಾನವ ಮಾಡಿ, ಇದ್ದುದೆಲ್ಲವ ನೀಡಿ,
ಬಿದ್ದುಬರುವವನ ಸದ್ದಡಗಿ ಸಂತಾನ
ವೆದ್ದು ಹೋಗುವುದು ಸರ್ವಜ್ಞ.

ಮದ್ಯಪಾನದಿಂದಾಗುವ ಅನರ್ಥಗಳನ್ನು ಸರ್ವಜ್ಞನಂತೆ 12ನೆಯ ಶತಮಾನದ ಶಿವಶರಣರೂ ಹೇಳಿದ್ದಾರೆ. ಹುಸಿ ಗಿಡವಾಗಿತ್ತು ಮದ್ಯಪಾನಿಯಲ್ಲಿ'-ಚೆನ್ನಬಸವಣ್ಣ.ಮದ್ಯಪಾನವನುಂಡು ಮದವೆದ್ದ ಜೋಗಿಯಂತೆ ನುಡಿವರು’-ಪ್ರಭುದೇವರು. ಸುರಾಪಾನಿಯ ಸಂಗ ಪಾಪ'-ಮಡಿವಾಳ ಮಾಚಿದೇವರು.ಬಡವರ ಭೋಜನ ಅಮೃತ ಸೇವನೆ; ಕಡವರನಮೃತ ಸುರಾಪಾನ’-ಶಿವಯೋಗಿ ಸಿದ್ಧರಾಮೇಶ್ವರರು. ಗಂಡ ಕೊಂಬುದು ಪಾದೋದಕ ಪ್ರಸಾದ, ಹೆಂಡತಿ ಕೊಂಬುದು ಸುರೆಮಾಂಸ'-ಬಸವಣ್ಣನವರು.ಅಡಗ ತಿಂಬರು ಕಣಿಕದ ಅಡಿಗೆಯಿರಲಿಕೆ, ಕುಡಿವರು ಸುರೆಯ ಹಾಲಿರಲಿಕೆ’-ದಾಸಿಮಯ್ಯನವರು. 12ನೆಯ ಶತಮಾನ ಹೋಗಿ 21ನೆಯ ಶತಮಾನದಲ್ಲಿದ್ದರೂ ಮದ್ಯದ ಹಾವಳಿ ನಿಂತಿಲ್ಲ. ಈಗ ಕೆಲವು ಕುಟುಂಬಗಳಲ್ಲಿ ಗಂಡ-ಹೆಂಡತಿ-ಮಕ್ಕಳಿಗೆ ಸುರೆ-ಮಾಂಸ'ವೇ ಪಾದೋದಕ-ಪ್ರಸಾದವಾಗಿದೆ. ಅಮೃತವೆನ್ನುವ ಹಾಲನ್ನೇ ಮಾರಿ ಆಲ್ಕೋಹಾಲ್ ಸೇವಿಸುವವರಿದ್ದಾರೆ. ಕುಡಿತಕೊರೊನಾ’ ಹೆಮ್ಮಾರಿಗಿಂತ ಭೀಕರವಾಗಿ ಬಡವ-ಶ್ರೀಮಂತರೆನÀ್ನದೆ ಎಲ್ಲರ ಬದುಕನ್ನು ಕಿತ್ತುಕೊಳ್ಳುತ್ತಿದೆ. ಗಾಂಧೀಜಿ ಹೇಳಿದ್ದು: ನಾನು ಈ ದೇಶದ ಸರ್ವಾಧಿಕಾರಿಯಾಗಿದ್ದರೆ ಮೊದಲು ಮದ್ಯ ನಿಷೇಧ ಮಾಡುತ್ತಿದ್ದೆ ಎಂದು. ಪಂಚಮಹಾಪಾತಕಗಳಲ್ಲಿ ಮದ್ಯಪಾನವೂ ಒಂದು. ಭ್ರಷ್ಟತೆ, ಕೊಲೆ, ಸುಲಿಗೆ, ವ್ಯಭಿಚಾರ, ಜೂಜು-ಮೋಜುಗಳಿಗೆಲ್ಲ ಮದ್ಯಪಾನವೇ ಆಶ್ರಯತಾಣ.
ತೂಕಡಿಸುತ್ತಿದ್ದವನಿಗೆ ಹಾಸಿಗೆ ಹಾಸಿದಂತೆ:

ಮದ್ಯಪಾನ ಹಣವನ್ನು ಕಸಿಯುವುದಲ್ಲದೆ ದೇಹವನ್ನೇ ಸುಡುವುದು. ಗೌರವ ಕಳೆಯುವುದು. ತಾಳಿಭಾಗ್ಯ ಕಿತ್ತುಕೊಳ್ಳುವುದು. ಮಕ್ಕಳನ್ನು ಅನಾಥರನ್ನಾಗಿಸುವುದು. ಮಗಳು, ತಾಯಿ, ಹೆಂಡತಿ ಎನ್ನುವ ಅಂತರ ತಿಳಿಯದೆ ಅವರ ಮೇಲೆ ಬಲಾತ್ಕಾರವೆಸಗುವ ರಾಕ್ಷಸೀ ಪ್ರವೃತ್ತಿ ಹೆಚ್ಚುವುದು. ಪತ್ನಿ, ಗೆಳೆಯ, ತಂದೆ ಮತ್ತಿತರರ ಕೊಲೆಗೂ ಕಾರಣವಾಗಿ ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ತಂದೊಡ್ಡುವುದು. ನಮ್ಮಲ್ಲಿ ಆಹಾರವಿಲ್ಲದೆ ಸತ್ತವರಿಗಿಂತ ಮದ್ಯಪಾನದಿಂದ ಸತ್ತವರೇ ಹೆಚ್ಚು. ಒಂದು ಮನೆತನ ನಾಶಮಾಡಲು ಆ ಮನೆಯ ಒಬ್ಬಿಬ್ಬರಿಗೆ ಮದ್ಯದ ಚಟ ಕಲಿಸಿದರೆ ಸಾಕು. ಕೊರೊನಾ ಕಾರಣದಿಂದ 40 ದಿನಗಳ ಕಾಲ ಮದ್ಯಪಾನ ನಿಷೇಧಿಸಿದ್ದರಿಂದ ಬಹುತೇಕ ಕುಡುಕರು ಅದರಿಂದ ಮುಕ್ತವಾಗುವ ಮನಸ್ಸು ಮಾಡಿದ್ದರು. ಆದರೆ ಮತ್ತೆ ಸರ್ಕಾರ ಕುಡಿತಕ್ಕೆ ಮುಕ್ತ ಅವಕಾಶ ನೀಡಿದ್ದು ತೂಕಡಿಸುತ್ತಿದ್ದವನಿಗೆ ಹಾಸಿಗೆ ಹಾಸಿ ನಿದ್ರೆಯ ಮಾತ್ರೆ ಕೊಟ್ಟಂತಾಗಿದೆ.
ಗಾಂಧಿ ನಾಡಲ್ಲಿ ಮದ್ಯವೇ ಆದಾಯ!

ಮದ್ಯ ಮಾರಾಟದಂದು ಹೆಣ್ಣು-ಗಂಡೆನ್ನದೆ ನಿರ್ಲಜ್ಜರಾಗಿ ಸರದಿಯಲ್ಲಿ ನಿಂತದ್ದೇನು? ಹಾರ ಹಾಕಿದ್ದೇನು? ನೈವೇದ್ಯ ಮಾಡಿದ್ದೇನು? ಪಟಾಕಿ ಹಾರಿಸಿದ್ದೇನು? ಕುಣಿದದ್ದೇನು? ನಾಲ್ಕಾರು ದಿನಗಳಲ್ಲೇ ಎಷ್ಟೊಂದು ಕೊಲೆ, ಸುಲಿಗೆ, ಕಳವು, ಅತ್ಯಾಚಾರ ನಡೆದವು! ಮದ್ಯಪಾನ ದೇಶಕ್ಕೆ ಶಾಪವೆಂದ ಗಾಂಧಿ ನಾಡಿನಲ್ಲೇ ಅದನ್ನು ವರ ಮಾಡಿಕೊಳ್ಳಲು ರಾಷ್ಟ್ರ, ರಾಜ್ಯ ನಾಯಕರು ಮುಂದಾಗಿರುವುದು ನಾಚಿಗೆಗೇಡಿನ ಸಂಗತಿ. ಇದರಿಂದ ಯಾತನೆ ಅನುಭವಿಸುತ್ತಿರುವವರು ಬಡ ಮತ್ತು ಹಿಂದುಳಿದ ಕಾಯಕಜೀವಿ ಕುಟುಂಬಗಳು. ಕುಡುಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕನಸಿನ ಮಾತು. ಅವರಿಗೇನಾದರೂ ಕೊರೊನಾ ಅಂಟಿದರೆ ಇನ್ನೆಷ್ಟು ಜನರಿಗೆ ಅದನ್ನು ಉಡುಗೊರೆಯಾಗಿ ಕೊಡಬಹುದು? ಆಗ ಸರ್ಕಾರಕ್ಕೆ ಆಗುವ ನಷ್ಟದ ಲೆಕ್ಕವಿಡಲು ಸಾಧ್ಯವೇ? ಕಾಯಕ ಜೀವಿಗಳೇ ಕುಡಿದು ಮಲಗಿದರೆ, ಮಣ್ಣಾದರೆ ದೇಶವನ್ನು ಸಂರಕ್ಷಿಸುವವರು ಯಾರು?
ಕಿವುಡರಾದ ಜನಪ್ರತಿನಿಧಿಗಳು

ಈಗಿನ ಸ್ಥಿತಿಯೇ ಮುಂದುವರಿದರೆ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ'ವಾಗದೆ ಕುಡುಕರ, ಕರೋನಾ ಪೀಡಿತರ ಬೀಡಾಗುವುದರಲ್ಲಿ ಅನುಮಾನವಿಲ್ಲ. ಮದ್ಯಪಾನ ನಿಷೇಧಕ್ಕಾಗಿ ನಾಡಿನ ಮಠಾಧೀಶರು, ಮಹಿಳಾ ಸಂಘಟನೆಗಳು, ರೈತಸಂಘದವರು ಹೀಗೆ ಹಲವರು ಹೋರಾಟ ಮಾಡುತ್ತ ಬಂದಿದ್ದರೂ ಅವರ ಕೂಗು ಕೇಳದಷ್ಟು ಕಿವುಡರಾಗಿದ್ದಾರೆ ಜನಪ್ರತಿನಿಧಿಗಳು. ವಾಸ್ತವವಾಗಿ ಕೊರೊನಾ ನೆಪದಲ್ಲೇ ಸಂಪೂರ್ಣ ಮದ್ಯನಿಷೇಧ ಮಾಡಲು ಸರ್ಕಾರಕ್ಕೆ ಸುವರ್ಣಾವಕಾಶವಿತ್ತು, ಈಗಲೂ ಇದೆ. ಆದರೆ ಅವರಿಗೆ ಅದರಿಂದ ಬರುವ ಆದಾಯವೇ ಮುಖ್ಯವಾಗಿರುವುದು ಅಮಾನವೀಯ. ಸರ್ಕಾರಕ್ಕೆ ಯಾವ ಮೂಲದಿಂದ ಆದಾಯ ಬರಬೇಕು ಎನ್ನುವ ದೂರದೃಷ್ಟಿ ಇರಬೇಕು. ಆರಾಧನಾ ಕ್ಷೇತ್ರಗಳಾಗಿದ್ದ ದೇವಾಲಯ, ಚರ್ಚ್, ಮಸೀದಿ, ಪ್ರಾರ್ಥನಾ ಮಂದಿರ ಮತ್ತು ಶಿಕ್ಷಣ ಸಂಸ್ಥೆಗಳ ಬಾಗಿಲುಗಳನ್ನು ಮುಚ್ಚಲಾಗಿದೆ. ಪರೀಕ್ಷೆಗಳನ್ನೇ ಮುಂದೂಡಲಾಗಿದೆ. ಧಾರ್ಮಿಕ ಸಮ್ಮೇಳನಗಳನ್ನು ನಿಲ್ಲಿಸಲಾಗಿದೆ. ಇಂತಿರುವಾಗ ಮದ್ಯದಂಗಡಿಗಳನ್ನು ತೆರೆಯಲು ಅನುಮತಿಸಿದ್ದು ಅಧರ್ಮ, ಅನ್ಯಾಯ. ಮದ್ಯದ ದೊರೆಗಳು ಶ್ರೀಮಂತರು ಮತ್ತು ರಾಜಕೀಯ ಪ್ರಮುಖರು. ಅವರು ಮದ್ಯದ ವಿರುದ್ಧ ಧ್ವನಿ ಎತ್ತಲು ಸಾಧ್ಯವಿಲ್ಲ. ಜನರು ಕುಡಿದು ಸತ್ತರೇನು? ಕುಟುಂಬಗಳು ಉಪವಾಸವಿದ್ದರೇನು? ನೆಮ್ಮದಿ ನೆಲಕಚ್ಚಿದರೇನು? ಇವರ ಸಂಪತ್ತಿಗೆ ಕೊರತೆಯಾಗಬಾರದು. ಈ ಶ್ರೀಮಂತರು, ಧೀಮಂತರುಕೊರೊನಾ’ದಿಂದ ಸತ್ತರೆ ಸಂಪತ್ತನ್ನು ಜೊತೆಯಲ್ಲಿ ಒಯ್ಯುವರೇನು? ಒಯ್ಯುವುದಿರಲಿ; ಅವರ ಹೆಣದ ಹತ್ತಿರ ಬಂಧು ಬಾಂಧವರೂ ಹೋಗುವುದಿಲ್ಲ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು.

ಗ್ರಾಮೀಣ ಭಾಗದಿಂದ 17% ಟ್ಯಾಕ್ಸ್ಅ ರಸೀಕೆರೆ ಶಾಸಕ ಶಿವಲಿಂಗೇಗೌಡರು ಹಿಂದೆ ವಿಧಾನಸಭೆಯಲ್ಲಿ ಆಡಿದ ಮಾತುಗಳು ಸರ್ಕಾರದ ಕಣ್ಣು ತೆರೆಸುವಂತಿದ್ದವು. ಗ್ರಾಮೀಣ ಜನರಿಗೆ ನಾವು ಕೊಡುವ ಹಣ 2 ಸಾವಿರ ಕೋಟಿ. ಎಣ್ಣೆ ಕುಡಿಯುವುದರಿಂದ ಬರುವ ಟ್ಯಾಕ್ಸ್ 22 ಸಾವಿರ ಕೋಟಿ. ಗ್ರಾಮೀಣ ಭಾಗದಿಂದಲೇ 17 ಪರ್ಸೆಂಟ್ ಟ್ಯಾಕ್ಸ್ ಸರ್ಕಾರಕ್ಕೆ ಬರುತ್ತೆ. ಇಷ್ಟು ಹಣ ತಗೊಂಡು ಅವರಿಗೆ ಅಕ್ಕಿ ಕೊಡ್ತೇವೆ ಅಂತ ಹೇಳ್ತೇವಲ್ಲಾ! ಅವರಿಗೆ ಕೊಡೊದೇ ಎರಡು ಸಾವಿರ ಕೋಟಿ. ಒಂದು ಚೀಪರ್ ಮಾರಿದರೆ 45 ರಿಂದ 50 ರೂಪಾಯಿ ಸರ್ಕಾರಕ್ಕೆ ಲಾಭ. ನೀವು ಕೊಡುವ ಐದು ಕೇಜಿ ಅಕ್ಕಿಗೆ 15 ರೂಪಾಯಿ. ಒಂದು ಕ್ವಾರ್ಟರ್ ಕುಡಿದರೆ ಖಲಾಸ್. ಅವರನ್ನು ಉದ್ಧಾರ ಮಾಡಿದ್ವಿ ಅಂತೀರಿ. ಎಲ್ಲಿ ಸಾಧ್ಯ? ಅವರ ಟ್ಯಾಕ್ಷ್ ಹಣವನ್ನು ಈ ದೇಶದ ಸೌಭಾಗ್ಯಕ್ಕೆ ಉಪಯೋಗಿಸ್ತೇವೆ. ಅವರ ಹಣದಲ್ಲಿ ರಾಜ್ಯ ಆಳ್ತಾ ಇದ್ದೇವೆ'. ಟಿಪ್ಪು ಸುಲ್ತಾನ್ ಮಾದರಿ ಟಿಪ್ಪು ಸುಲ್ತಾನ ಮಾದರಿ ನಮ್ಮ ನೇತಾರರಿಗೆ ಬೆಳಕು ನೀಡಬೇಕಾಗಿತ್ತು. ಆತ ಆರೋಗ್ಯಕ್ಕಿಂತ ಆದಾಯ ಮುಖ್ಯವಲ್ಲ ಎಂದು ಸಂಪೂರ್ಣ ಮದ್ಯನಿಷೇಧ ಮಾಡಿದ್ದು ಸ್ಮರಣಾರ್ಹ. ಗಾಂಧಿ ನಾಡಿನಿಂದ ಬಂದ ಪ್ರಧಾನಿ ಮೋದಿಯವರು ಈ ದಿಶೆಯಲ್ಲಿ ದಿಟ್ಟ ನಿಲವನ್ನು ತೆಗೆದುಕೊಳ್ಳುವರೆಂಬ ವಿಶ್ವಾಸವಿತ್ತು. ಅವರೇ ಮದ್ಯಮಾರಾಟಕ್ಕೆ ಹಸಿರು ನಿಶಾನಿ ತೋರಿಸಿದ್ದು ಈ ನಾಡಿನ ದೌರ್ಭಾಗ್ಯ. ಕೋಟಿ ಕೋಟಿ ಕುಟುಂಬಗಳ ಶಾಂತಿಯನ್ನು ಕದಡುವ ಕಾರ್ಯವನ್ನು ಮೋದಿಯಂಥವರು ಮಾಡುತ್ತಾರೆಂದು ನಾವಂತೂ ನಂಬಿರಲಿಲ್ಲ. ಉಣ್ಣಲು ಆಹಾರವಿಲ್ಲದೆ, ಖರ್ಚಿಗೆ ಹಣವಿಲ್ಲದೆ ಒದ್ದಾಡುತ್ತಿದ್ದ ಬಡಕುಟುಂಬಗಳ ಬಯಕೆಯನ್ನು ಈಡೇರಿಸುತ್ತೇವೆ ಎನ್ನುವ ಆಸೆ ತೋರಿಸಿ ಮದ್ಯದಂಗಡಿ ತೆರೆದು ಕುಡುಕರಿಂದ ಬರುವ ಆದಾಯದಲ್ಲಿ ಸರ್ಕಾರ ನಡೆಸುವ ಅಗತ್ಯವಿದೆಯೇ? ಹಸಿವು ಹಿಂಗಿಸಲು ಸರ್ಕಾರ ಕೊಡುವ ಅಕ್ಕಿ, ಮತ್ತಿತರ ಪದಾರ್ಥಗಳನ್ನೇ ಮಾರಿ ಹೆಂಡ ಕುಡಿಯುವರು. ಅವು ಮುಗಿಯುತ್ತಲೇ ಮನೆಯ ವಸ್ತು, ವಡವೆಗಳನ್ನು ದೋಚುವರು. ಆಗ ಮನೆಯಲ್ಲಿ ನಿತ್ಯ ರಾಮಾಯಣ. ಇದನ್ನರಿಯದೆಬೆಂದ ಮನೆಯಲ್ಲಿ ಗಳ ಹಿರಿದವನೇ ಜಾಣ’ ಎನ್ನುವ ಸರ್ಕಾರದ ನೀತಿಗೆ ಏನೆನ್ನಬೇಕು? ಮದ್ಯದ ದಾಸರಾಗಿ ಬೆಂಗಳೂರಲ್ಲಿ ಎರಡು ಜನ ವಿದ್ಯಾವಂತ ಮಹಿಳೆಯರು ಪೊಲೀಸರ ಜೊತೆ ವರ್ತಿಸಿದ್ದನ್ನು ನೋಡಿರಬಹುದು. ಮದ್ಯದಿಂದ ಸರ್ಕಾರÀಕ್ಕೆ ಬರುವ ಆದಾಯಕ್ಕಿಂತ ಅಬಕಾರಿ ನೌಕರರಿಗೆ ವೇತನ, ಕುಡುಕರ ಆರೋಗ್ಯ ಮತ್ತು ಅವರ ಕುಟುಂಬಗಳ ನಿರ್ವಹಣೆ, ಅಪರಾಧಗಳ ಪರಿಶೀಲನೆ ಇತ್ಯಾದಿಗಳಿಗೆ ಆಗುವ ವೆಚ್ಚ ಎರಡು ಪಟ್ಟು ಜಾಸ್ತಿ ಎನ್ನುವ ಅರಿವಾದರೂ ನೇತಾರರಿಗೆ ಇದೆಯೇ?
ತಾತ್ಕಾಲಿಕವಾಗಿಯಾದರೂ ನಿಷೇಧಿಸಿ

ಕುಡುಕರಿಗೆ ಮದ್ಯ ಪೂರೈಸುವುದು ಪುಣ್ಯದ ಕಾರ್ಯವಲ್ಲ; ರಾಷ್ಟ್ರಕ್ಕೆ ಮಾಡುವ ದ್ರೋಹ. ನೇತಾರರಿಗೆ ದಡ್ಡತನ ಇದ್ದರೂ ಸಹಿಸಬಹುದು. ಸಣ್ಣತನವಿದ್ದರೆ ಸಹಿಸುವುದೆಂತು? ಮೊನ್ನೆ ವಿದ್ಯಾವಂತ ಮಹಿಳೆ ತನ್ನ ತಂದೆಯ ಜೊತೆಯಲ್ಲೇ ಕುಡಿಯುವುದಾಗಿ ಗರ್ವದಿಂದ ಮಾಧ್ಯಮದೆದುರು ಹೇಳಿದ್ದನ್ನು ನೋಡಿ ನಮ್ಮ ಸಂಸ್ಕøತಿ, ಪರಂಪರೆ, ಧರ್ಮ, ನೀತಿ ಎಲ್ಲಿ ಹೋದವು ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿತ್ತು. ಸಂವಿಧಾನದಲ್ಲೇ ಮದ್ಯಪಾನ ಒಂದು ಹಕ್ಕಲ್ಲ; ಸರ್ಕಾರಗಳು ಮದ್ಯಮಾರಾಟ ನೀತಿಯನ್ನು ನಿರೂಪಿಸಿಕೊಂಡು ಅದನ್ನು ನಿಷೇಧಿಸಬಹುದು'' ಎಂದು ಹೇಳಲಾಗಿದೆ. ಸಂವಿಧಾನ ರಾಜ್ಯಗಳಿಗೆ ನೀಡುವ ಮೂಲಭೂತ ಸೂಚನೆಗಳಲ್ಲಿ ಎಲ್ಲಾ ರಾಜ್ಯಗಳನ್ನೂ ಪಾನಮುಕ್ತ ಮಾಡಬೇಕೆಂದು ಅದಕ್ಕಾಗಿ ರಾಜ್ಯ ಸರ್ಕಾರವು ಸಕಲ ಏರ್ಪಾಟುಗಳನ್ನೂ, ಪ್ರಯತ್ನಗಳನ್ನೂ ಮಾಡಬೇಕೆಂದು ಅನುಚ್ಛೇದ 47ರಲ್ಲಿ ಸೂಚಿಸಲಾಗಿದೆ. ಪಾನಮತ್ತತೆ ಒಂದು ವ್ಯಸನಕಾರಿ ಮತ್ತು ಆರೋಗ್ಯದ ದೃಷ್ಟಿಯಿಂದ ಅಹಿತಕಾರಿ ಬೆಳವಣಿಗೆ ಎಂದು ಸಂವಿಧಾನದಲ್ಲೇ ಹೇಳಲಾಗಿದೆ. ಇಂತಹ ಅಹಿತಕಾರಿ ಬೆಳವಣಿಗೆಯನ್ನು ಹೋಗಲಾಡಿಸುವುದು ಅಥವಾ ತಡೆಗಟ್ಟುವುದು ದೇಶದ ಪ್ರಜೆಗಳ ಆರೋಗ್ಯದ ದೃಷ್ಟಿಯಿಂದ ಅವಶ್ಯಕ ಮತ್ತು ರಾಜ್ಯ ಸರ್ಕಾರಗಳು ಪಾನಮತ್ತತೆಯನ್ನು ಸಂಪೂರ್ಣ ನಿಷೇಧಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಲಾಗಿದೆ”. ಈ ವಿಚಾರಗಳನ್ನಾದರೂ ನೇತಾರರು ಅರಿಯಬೇಕು.

ಕೊರೊನಾ ದಿನದಿಂದ ದಿನಕ್ಕೆ ರಕ್ತಬೀಜಾಸುರನ ರೂಪ ತಳೆಯುತ್ತಲಿದೆ. ಈ ನೆಲೆಯಲ್ಲಿ ಆದಾಯವನ್ನೇ ಪ್ರಧಾನ ಮಾಡಿಕೊಳ್ಳದೆ ಜನರ ಆರೋಗ್ಯದ ಕಡೆ ಗಮನ ಹರಿಸಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ತಾತ್ಕಾಲಿಕವಾಗಿಯಾದರೂ ಪಾನನಿಷೇಧ ತರುವ ಇಚ್ಛಾಶಕ್ತಿಯನ್ನು ಸರ್ಕಾರ ತೋರಬೇಕು. ಮದ್ಯ ಕುಡಿದು ವಾಹನ ಚಲಾಯಿಸುವುದು ಅಪರಾಧವಾದರೆ ಮದ್ಯ ಕುಡಿಸಿ ದೇಶವನ್ನು ನಡೆಸುವುದು ಘೋರ ಅಪರಾಧವಲ್ಲವೇ' ಎಂದು ವಾಟ್ಸಪ್‍ನಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ನೇತಾರರು ಗಮನಿಸಬೇಕು. ಆದಾಯಕ್ಕಿಂತ ಆರೋಗ್ಯ ಮುಖ್ಯ ಮದ್ಯದಂಗಡಿ ಮುಚ್ಚುವಂತೆ ಪ್ರತಿಭಟನೆಗಳು ನಡೆಯುತ್ತಿವೆ.ಆದಾಯಕ್ಕಾಗಿ ಹಾತೊರೆಯುತ್ತಿರುವ ಸರಕಾರದ ಖಜಾನೆಗೆ ನಾವು ಹಣ ತುಂಬುತ್ತೇವೆ. ಮದ್ಯನಿಷೇಧಿಸಿ ನಮಗೆ ಬದುಕಲು ಅವಕಾಶ ಮಾಡಿಕೊಡಿ’ ಎಂದು ಮಹಿಳೆಯರು ಮುಖ್ಯಮಂತ್ರಿಗಳಿಗೆ 5, 10, 20 ರೂಪಾಯಿಗಳ ಮನಿಯಾರ್ಡರ್ ಮಾಡುತ್ತಲಿದ್ದಾರೆ. ಪ್ರತಿಭಟನೆಗಳು ಹೆಚ್ಚುತ್ತಿದ್ದು ತಾಯಂದಿರು, ಮಕ್ಕಳು ಸರ್ಕಾರದ ನೀತಿಗೆ ಶಾಪ ಹಾಕುತ್ತಿದ್ದಾರೆ. ಸಾರ್ವಜನಿಕರು ತಿರುಗಿಬಿದ್ದರೆ ಸರ್ಕಾರ ಏನು ಮಾಡಲು ಸಾಧ್ಯ? ಇಂಥ ಪ್ರತಿಭಟನೆಯನ್ನಾದರೂ ಗಮನಿಸಿ ಸರ್ಕಾರ ಮದ್ಯನಿಷೇಧಧಕ್ಕೆ ಮುಂದಾದರೆ ಕ್ಷೇಮ. ನಿಜವಾದ ಮುಖಂಡ ಜನರು ಬಯಸಿದ್ದನ್ನು ಕೊಡದೆ ಅವರಿಗೆ ಏನು ಬೇಕೆಂದು ಚಿಂತನೆ ಮಾಡುವನು. ಜನರಿಗೆ ತುರ್ತಾಗಿ ಬೇಕಾಗಿರುವುದು ಆಶ್ರಯ, ಉದ್ಯೋಗ, ಶಿಕ್ಷಣ, ಅನ್ನ. ಇದರ ಬಗ್ಗೆ ಹೆಚ್ಚು ಗಮನ ಹರಿಸದೆ ಮದ್ಯ ಮಾರಾಟಕ್ಕೆ ಅನುಮತಿಸಿರುವುದು ಮೈಮೇಲೆ ಕೆಂಪು ಇರುವೆ ಬಿಡಿಸಿಕೊಂಡಂತೆ.

ಸತ್ಯಾಗ್ರಹವೇ ಮುಂದಿನ ದಾರಿ

ಜನರ ಆರೋಗ್ಯಕ್ಕಿಂತ ಆದಾಯ ಮುಖ್ಯವಾಗಬಾರದು. ಸರ್ಕಾರ ಆರ್ಥಿಕ ತಜ್ಞರ ಜೊತೆ ಸಮಾಲೋಚಿಸಿ ಆದಾಯದ ಪರ್ಯಾಯ ಮೂಲವನ್ನು ಕಂಡುಕೊಳ್ಳಬೇಕು. ಭ್ರಷ್ಟಾಚಾರ ತಡೆಗಟ್ಟಿದರೆ, ಬೃಹತ್ ಉದ್ದಿಮೆದಾರರು ಪ್ರಾಮಾಣಿಕವಾಗಿ ತೆರಿಗೆಯನ್ನು ಕಟ್ಟುವಂತೆ ಮಾಡಿದರೆ, ಚುನಾವಣೆ ಭ್ರಷ್ಟಾಚಾರ ಮತ್ತು ಮದ್ಯಮುಕ್ತವಾದರೆ ಆದಾಯಕ್ಕೆ ಕೊರತೆಯಾಗದು. ಈಗ ಬಡಕುಟುಂಬಗಳಿಗೆ ಹೊಟ್ಟೆಗಿದ್ದರೆ ಬಟ್ಟೆಗಿಲ್ಲ. ಮಕ್ಕಳನ್ನು ಓದಿಸಲಾಗುತ್ತಿಲ್ಲ. ಕೊರೊನಾದಿಂದ ದಿನಗೂಲಿಯೂ ಸಿಗದಂತಾಗಿದೆ. ಇಂತಿರುವಾಗ ಕುಡಿತಕ್ಕೆ ಬಲಿಯಾದರೆ ಕೌಟುಂಬಿಕ ನೆಮ್ಮದಿ ಉಳಿದೀತೇ?

ಕೊರೊನಾ ಕಣ್ಮರೆಯಾಗುವವರೆಗಾದರೂ ಮದ್ಯನಿಷೇಧಿಸಿ ನಂತರ ಅದರ ಸಾಧಕ ಬಾಧಕಗಳ ಬಗ್ಗೆ ಸರ್ವೆ ಮಾಡಿಸಿ ನಿರ್ಣಯಿಸಬಹುದು. ಸರ್ಕಾರ ಈಗಲೂ ಜಾಣ ಕರುಡು-ಕಿವುಡು ತೋರಿದರೆ ಸಾರ್ವಜನಿಕರೇ ಮದ್ಯದಂಗಡಿಗಳನ್ನು ಮುಚ್ಚಿಸುವ ಸತ್ಯಾಗ್ರಹ ಮಾಡಬೇಕು. ಗಾಂಧಿ ನಾಡಿನಲ್ಲಿ ಇನ್ನೂ ಸತ್ಯಾಗ್ರಹ ಮೌಲ್ಯವನ್ನು ಕಳೆದುಕೊಂಡಿಲ್ಲ ಎನ್ನುವ ಸತ್ಯವನ್ನು ಸರ್ಕಾರಕ್ಕೆ ಮನಗಾಣಿಸಬೇಕು.0 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೇಹಳ್ಳಿ-577515
ಹೊಸದುರ್ಗ-ತಾ
ಚಿತ್ರದುರ್ಗ-ಜಿ
ಸೆಲ್: 9448395594

Leave a Reply

Your email address will not be published. Required fields are marked *

error: Content is protected !!