ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು

ಕೋಪವೆಂಬುದು ಪಾಪದ ಮೂಲ
ಆಚಾರವರಿಯದೆ, ವಿಭವವಳಿಯದೆ,
ಕೋಪವಡಗದೆ, ತಾಪ ಮುರಿಯದೆ,
ಬರಿದೆ ಭಕ್ತರಾದೆವೆಂದು ಬೆಬ್ಬನೆ ಬೆರೆಯುವ ಕೇಡಿಂಗೆ
ನಾನು ಮರುಗುವೆ ಕಾಣಾ ಗುಹೇಶ್ವರಾ.

ಭಕ್ತನ ಗುಣಲಕ್ಷಣಗಳನ್ನು ತುಂಬಾ ಸರಳವಾಗಿ ನಿರೂಪಿಸಿದ್ದಾರೆ ಪ್ರಭುದೇವರು. ಭಕ್ತನ ಮೊದಲ ಲಕ್ಷಣವೇ ಸದಾಚಾರ. ಸದಾಚಾರಕ್ಕೆ ವಿರುದ್ಧವಾದುದು ದುರಾಚಾರ. ವ್ಯಕ್ತಿ ದುರಾಚಾರಿಯಾಗಿದ್ದರೆ ಆತ ಭವಿ. ಭಕ್ತನ ಎರಡನೆಯ ಲಕ್ಷಣ ಆತ ಸಂಪತ್ತಿನ ಮೋಹಕ್ಕೆ ಒಳಗಾಗಬಾರದು. ಸಂಪತ್ತಿನ ಮದದಲ್ಲಿ ಮುಳುಗಿದ್ದರೆ ಭಕ್ತನಾಗಲು ಅರ್ಹನಾಗುವುದಿಲ್ಲ. ಮೂರನೆಯ ಲಕ್ಷಣ ಕೋಪವನ್ನು ಶಮನಗೊಳಿಸಿಕೊಳ್ಳುವುದು. ಕೋಪವೇ ಎಲ್ಲ ಪಾಪದ ಮೂಲ. ಕೋಪ ಅಡಗದಿದ್ದರೆ ಆತ ಭಕ್ತನಾಗಲು ಸಾಧ್ಯವಿಲ್ಲ. ಮುಂದಿನದು ಸಂಕಷ್ಟಗಳಿಗೆ ಬಾಗದಿರುವುದು. ಬದುಕಿನಲ್ಲಿ ಸಂಕಷ್ಟಗಳು ಇದ್ದದ್ದೇ. ಅವುಗಳಿಗೆ ತಲೆತಗ್ಗಿಸಿದರೆ ಆತ ಭಕ್ತನಾಗಲು ಸಾಧ್ಯವಿಲ್ಲ. ಈ ನೆಲೆಯಲ್ಲಿ ಒಬ್ಬ ಭಕ್ತನಾಗಲು ಸದಾಚಾರಿಯಾಗಿರಬೇಕು. ಸಂಪತ್ತಿನ ಮೋಹವನ್ನು ನಾಶ ಮಾಡಿಕೊಳ್ಳಬೇಕು. ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು. ಇದನ್ನು ಬಿಟ್ಟು ನಾನು ಭಕ್ತ ಎಂದು ಬೀಗುತ್ತಿದ್ದರೆ ಅದೇ ಕೇಡಿಗೆ ಬೀಜ ಬಿತ್ತಿದಂತೆ. ಒಂದೊAದೇ ಅವಗುಣಗಳು ಮನುಷ್ಯನಲ್ಲಿ ಮನೆಮಾಡಿಕೊಂಡಿದ್ದರೂ ಆತ ನರಕದ ದಾರಿ ಹಿಡಿಯುವಲ್ಲಿ ಅನುಮಾನವಿಲ್ಲ. ಇನ್ನು ಅನಾಚಾರ, ಸಂಪತ್ತಿನ ಗರ್ವ, ಕೋಪ, ಸಂಕಷ್ಟಗಳೆಲ್ಲ ಸೇರಿದರೆ ಆತ ಸನ್ಮಾರ್ಗದಲ್ಲಿ ಸಾಗಲು ಸಾಧ್ಯವಿಲ್ಲ. ಕೋಪ ಒಂದನ್ನೇ ತೆಗೆದುಕೊಳ್ಳಿ. ಸಿದ್ಧರಾಮೇಶ್ವರರು `ಯೋಗಿಗೆ ಕೋಪವೆ ಮಾಯೆ’ ಎಂದಿದ್ದಾರೆ. ಮಹಾದೇವಿಯಕ್ಕ `ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು’ ಎಂದಿದ್ದಾಳೆ.
ವ್ಯಕ್ತಿ ಪಾಪದ ಕಾರ್ಯಗಳನ್ನು ಮಾಡುತ್ತಾನೆ ಎಂದರೆ ಅದಕ್ಕೆ ಕಾರಣ ಅವನ ಕೋಪಾಗ್ನಿಯೂ ಒಂದು. ಅದಕ್ಕಾಗಿ `ತನಗೆ ಮುನಿವವಗೆ ತಾ ಮುನಿಯಲೇಕಯ್ಯಾ’ ಎನ್ನುವರು ಬಸವಣ್ಣನವರು. ನಿಮ್ಮ ಮೇಲೆ ಒಬ್ಬ ಕೋಪಿಸಿಕೊಂಡನೆAದು ನೀವೂ ಅವನ ಮೇಲೆ ಕೋಪಿಸಿಕೊಳ್ಳುವ ಅಗತ್ಯವಿಲ್ಲ. ಅಲ್ಲಿ ಬೇಕಾದ್ದು ತಾಳ್ಮೆ, ಸಹನೆ ಮತ್ತು ಪ್ರೀತಿ. ಅದಕ್ಕಾಗಿಯೇ `ತಾಳಿದವ ಬಾಳುವನು’ ಎನ್ನುವುದು. ಕೋಪ ತನಗೇ ವೈರಿ. ಅಂಥ ವೈರಿಯ ದಮನ ಮಾಡಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ. ಕೋಪದಿಂದ ಯಾವ ಘನ ಕಾರ್ಯಗಳನ್ನೂ ಮಾಡಲು ಸಾಧ್ಯವಿಲ್ಲ. ಹೀಗೆ ಹೇಳುತ್ತಲೇ ಕೋಪದ ದಳ್ಳುರಿಯಲ್ಲಿ ಬೇಯುವುದು ಮನುಷ್ಯನ ಸಹಜ ಸ್ವಭಾವವಾಗಿಬಿಟ್ಟಿದೆ. `ಯಾರಾದರೂ ನಿಮ್ಮ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರಿಸು’ ಎಂದು ಗಾಂಧೀಜಿ ಹೇಳಿದ್ದು ಕೋಪ ಶಮನದ ಹಿನ್ನೆಲೆಯಲ್ಲೇ. `ಸಿಟ್ಟು ಬಂದಾಗ ಹತ್ತು ಎಣಿಸು’, `ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಡಬೇಡ’, `ಕೋಪದಲ್ಲಿ ಕೊಯ್ದ ಮೂಗನ್ನು ಮತ್ತೆ ಅಂಟಿಸಲು ಬರುವುದಿಲ್ಲ’ ಎನ್ನುವುದು ಇದೇ ಉದ್ದೇಶದಿಂದ. ಕೋಪಕ್ಕೆ ಸೂಕ್ತ ಮದ್ದು ಪ್ರೀತಿ, ಶಾಂತಿ, ಸಮಾಧಾನ, ಮೌನ. ಭಯ ಮತ್ತು ದೌರ್ಬಲ್ಯ ಮನುಷ್ಯನ ಕೋಪಕ್ಕೆ ಕಾರಣ. ಹಾಗಂತ ಕೋಪ ಇರಲೇಬಾರದು ಎಂದಲ್ಲ. ಮಾನವನ ಅನೇಕ ದೌರ್ಬಲ್ಯಗಳಲ್ಲಿ ಕೋಪವೂ ಒಂದು. ಕೋಪದ ಮರೆಯಲ್ಲಿ ವಿವೇಕ ಇದ್ದರೆ ಅದು ಅಪಾಯಕಾರಿ ಅಲ್ಲ. ಅವಿವೇಕಿಗಳಾಗಿ ಕೋಪದ ದಳ್ಳುರಿಗೆ ಸಿಕ್ಕರೆ ಮೊದಲಿಗೆ ತೊಂದರೆ ಅನುಭವಿಸಬೇಕಾದವರು ಕೋಪಿಷ್ಟರೇ. ಇದಕ್ಕೆ ಸಾಕ್ಷಿ ನುಡಿಯವಂತಿವೆ `ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು’ ಎನ್ನುವ ಬಸವಣ್ಣನವರ ವಚನದ ಸಾಲುಗಳು.

ಮನುಷ್ಯ ವಿವೇಕಿಯಾಗಿದ್ದರೆ ಪಾಪವನ್ನು ಕಳೆಯಲು, ಕ್ರಿಯಾಶೀಲನಾಗಲು, ಸನ್ಮಾರ್ಗದಲ್ಲಿ ಸಾಗಲು, ಪ್ರಗತಿಯ ಮೆಟ್ಟಿಲೇರಲು ಕೋಪ ಸಹಕಾರಿಯಾಗುವುದು. ಶಾಲಾಶಿಕ್ಷಕ ವಿದ್ಯಾರ್ಥಿಗಳ ಮೇಲೆ, ತಂದೆ-ತಾಯಿಗಳು ಮಕ್ಕಳ ಮೇಲೆ ಕೋಪ ಮಾಡಿಕೊಳ್ಳುವುದು ಅವರನ್ನು ಒಳ್ಳೆಯ ಮನುಷ್ಯರನ್ನಾಗಿ ಮಾಡಲು. ಅವರ ತಪ್ಪುಗಳನ್ನು ತೋರಿಸಿ ಮುಂದೆ ತಪ್ಪುಗಳಾಗದಂತೆ ಎಚ್ಚರಿಸಲು. ಅಲ್ಲಿ ದ್ವೇಷ, ಅಸೂಯೆ, ಮತ್ಸರ ಇರುವುದಿಲ್ಲ. ಹಣವನ್ನೇ ತೆಗೆದುಕೊಳ್ಳಿ. ಅದು ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಅದನ್ನು ವಿವೇಕದಿಂದ ಸದ್ಬಳಕೆ ಮಾಡಿಕೊಂಡಾಗ ಒಳಿತಾಗುವುದು. ಅವಿವೇಕದಿಂದ ದುರ್ಬಳಕೆ ಮಾಡಿಕೊಂಡರೆ ಕೆಡುಕಾಗುವುದು. ವಿವೇಕಿ ಹಣವನ್ನು ಸತ್ಕಾರ್ಯಗಳಿಗೆ ವಿನಿಯೋಗಿಸಿದರೆ ಅವಿವೇಕಿ ಜೂಜಾಟ, ಭೋಗಜೀವನ, ಸೇಡು ಇತ್ಯಾದಿಗಳಿಗೆ ವ್ಯಯಿಸಿ ತಾನೇ ಹಾಳಾಗುವನು. ಈ ನಿಟ್ಟಿನಲ್ಲಿ ಕೋಪವೂ ಹಣ ಇದ್ದಂತೆ. ಮನುಷ್ಯ ಕೋಪದ ವಶನಾಗದೆ ಅದನ್ನು ತನ್ನ ವಶವಾಗಿಟ್ಟುಕೊಂಡರೆ ಕೋಪವನ್ನೇ ಒಳಿತಿನ ಕಾರ್ಯಗಳಿಗೂ ಬಳಕೆ ಮಾಡಲು ಸಾಧ್ಯ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ತುಂಬಾ ಕೋಪಿಷ್ಟರೆನ್ನುತ್ತಿದ್ದರು. ನಾವು ಕಂಡAತೆ ಅವರದು ಹುಸಿಕೋಪವಾಗಿರುತ್ತಿತ್ತು. ಅದು ವ್ಯಕ್ತಿಯ ಮತ್ತು ಸಾಮಾಜದ ಒಳಿತಿಗಾಗಿ ಬಳಕೆ ಆಗುತ್ತಿತ್ತು. ಅವರು ಕೋಪಿಸಿಗೊಂಡಾಗಲೆಲ್ಲ ಅನೇಕ ಸತ್ಕಾರ್ಯಗಳು ನಡೆದದ್ದನ್ನು ಗಮನಿಸಿದ್ದೇವೆ. ಹಾಗಂತ ಅವರು ಕೋಪವನ್ನೇ ಅಸ್ತç ಮಾಡಿಕೊಂಡಿದ್ದರೆAದಲ್ಲ. ಕೋಪದ ಹಿಂದೆ ಪ್ರೀತಿ, ತಾಯ್ತನ ಇರುತ್ತಿತ್ತು. ಕೋಪ ದ್ವೇಷಕ್ಕೆ ಕಾರಣವಾಗಿದ್ದನ್ನು ನಾವು ಕಂಡಿಲ್ಲ.

ಮೊದಲೇ ಹೇಳಿದಂತೆ ಕೋಪದ ಮೂಲ ಭಯ. ಒಬ್ಬ ಯಾವಾಗಲೂ ಕೋಪೋದ್ರಿಕ್ತನಾಗಿರುತ್ತಾನೆ ಎಂದರೆ ಅವನಲ್ಲಿ ಏನೋ ಅವ್ಯಕ್ತ ಭಯ ಕಾಡುತ್ತಿದೆ ಎಂದೇ ಅರ್ಥ. ಕೆಲವರಿಗೆ ಕೋಪಿಸಿಕೊಳ್ಳುವುದೇ ಒಂದು ಪ್ರವೃತ್ತಿಯಾಗಿರುತ್ತದೆ. ಅವರಿಗೆ ಸಹಜ ಪ್ರೀತಿ, ತಾಳ್ಮೆ ತುಂಬಾ ಕಡಿಮೆ. ಕೋಪಿಸಿಕೊಳ್ಳುವುದರಿಂದಲೇ ಎಲ್ಲರೂ ತಮಗೆ ಗೌರವ ಕೊಡುವರು ಎನ್ನುವ ಭ್ರಮೆ ಅವರಿಗೆ. ಕೋಪವನ್ನು ದ್ವೇಷಕ್ಕಾಗಿ ದುರ್ಬಳಕೆ ಮಾಡಿಕೊಂಡರೆ ಮನುಷ್ಯತ್ವವನ್ನೇ ಮಾರಿಕೊಂಡAತೆ. ಒಬ್ಬನ ಸತ್ಕಾರ್ಯಗಳನ್ನು ಸಹಿಸಿಕೊಳ್ಳುವ ಹೃದಯ ವೈಶಾಲ್ಯತೆ ಇಲ್ಲದಿದ್ದಾಗಲೂ ಕೋಪ ಹೆಡೆಯಾಡಬಹುದು. ಆದರೆ `ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ’ ಎನ್ನುವಂತೆ ವಿವೇಕಿಯಾದವ ಕೋಪದ ಮೇಲೆ ತಾನೇ ನಿಯಂತ್ರಣ ಸಾಧಿಸಿ ಅದನ್ನು ಒಳಿತಿನ ಕಾರ್ಯಗಳಿಗೂ ಬಳಸುವನು. ಹಾವು ವಿಷಜಂತುವಾದರೂ ಹಾವಾಡಿಗ ಅದೇ ಹಾವಿನ ಹಲ್ಲು ಮುರಿದು ಅದನ್ನೇ ಆಟ ಆಡಿಸುತ್ತ ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಸಾಧನ ಮಾಡಿಕೊಳ್ಳುವುದನ್ನು ಗಮನಿಸಬೇಕು. ಸದುದ್ದೇಶದಿಂದ ಕೋಪಿಷ್ಟರಾದರೆ ಸ್ವಾಗತಾರ್ಹವೇ. ಕೆಲವರು ಕುಡಿತದ ದಾಸರಾಗಿರುವಂತೆ ಕೋಪಕ್ಕೂ ದಾಸರಾಗಿ ತಮ್ಮ ತಲೆಯ ಮೇಲೆ ತಾವೇ ಚಪ್ಪಡಿ ಎಳೆದುಕೊಳ್ಳುವರು. ಹಾಗಾಗಿ ಮನುಷ್ಯ ಎಂದೂ ಕೋಪಕ್ಕೆ ದಾಸನಾಗಬಾರದು. ಕೋಪದಲ್ಲಿ ಮೈಮರೆತರೆ ಆಗುವ ಅನರ್ಥ ಅಗಣಿತ. ಅದಕ್ಕಾಗಿಯೇ ಸರ್ವಜ್ಞ `ಕೋಪವೆಂಬುದು ತಾನು ಪಾಪದ ನೆಲೆಗಟ್ಟು’ ಎಂದಿದ್ದಾರೆ. ಕೋಪ ನಮ್ಮ ಮೇಲೆ ಸವಾರಿ ಮಾಡಲು ಬಿಡಬಾರದು ಎನ್ನುವ ವಿವೇಕ ಮತ್ತು ಎಚ್ಚರ ಇರಬೇಕು.

`ಎಡದ ಕೈಯಲು ಹಾಲ ಬಟ್ಟಲು, ಬಲದ ಕೈಯಲು ಓಜುಗಟ್ಟಿಗೆ, ಆವಾಗ ಬಂದಾನೆಮ್ಮಯ್ಯ, ಬಡಿದು ಹಾಲ ಕುಡಿಸುವ ತಂದೆ’ ಎನ್ನುವರು ಬಸವಣ್ಣನವರು. ಇಲ್ಲಿ ಹೊಡೆಯುವುದಕ್ಕಿಂತ ಹಾಲು ಕುಡಿಸುವುದು ಮುಖ್ಯ. ಹಾಲು ಕುಡಿಯಲು ಹಠ ಮಾಡುವ ಮಗುವಿಗೆ ತಾಯಿ ಹೆದರಿಸಿ, ಸಿಟ್ಟು ಮಾಡಿ, ಹೊಡೆದಂತೆ ನಟಿಸುವಳು. ಹೀಗೆ ಮಾಡುವ ಉದ್ದೇಶ ಮಗುವಿಗೆ ಹಾಲು ಕುಡಿಸಬೇಕು ಎನ್ನುವ ಮಾತೃವಾತ್ಸಲ್ಯ. ಹಾಗಾಗಿ ಕೋಪವನ್ನು ಅಭಿವ್ಯಕ್ತಿಗೊಳಿಸುವ ಮಾರ್ಗಗಳು ಬೇರೆ ಬೇರೆ ಇರುತ್ತವೆ. ಅದು ವಿನಾಶಕ್ಕೆ ಕಾರಣ ಆಗಬಾರದು ಎನ್ನುವ ವಿವೇಕ ಸದಾ ಜಾಗೃತವಾಗಿರಬೇಕು. ಕೆಲವರ ನಡೆ, ನುಡಿ ಎಲ್ಲವೂ ಕೋಪದಿಂದಲೇ ಕೂಡಿರುತ್ತವೆ. ಅವರು ತಾವೂ ಉದ್ಧಾರ ಆಗದೆ ಇತರರ ಪ್ರಗತಿಗೂ ಕಲ್ಲು ಹಾಕುವರು. ಕೋಪ ವ್ಯಕ್ತಿತ್ವದ ಅವಿಭಾಜ್ಯ ಅಂಗವಾಗಬಾರದು. ತಾಯಿ ಹಾಲು ಕುಡಿಸಲು ಕೋಪವನ್ನು ಬಳಸಿಕೊಂಡAತಿದ್ದರೆ ಅದು ಸ್ವಾಗತಾರ್ಹವೇ. ಕೋಪವೇ ನಾವಾಗಬಾರದು. ನಮ್ಮೆದುರು ಕೋಪೋದ್ರಿಕ್ತರಾಗಿ ಆಡಬಾರದ ಮಾತುಗಳನ್ನು ಆಡುವವರನ್ನು ಕಂಡಾಗ ಅವರಿಗಿಂತ ನಾನೇನು ಕಡಿಮೆ ಎಂದುಕೊಳ್ಳದೆ ಸ್ವಲ್ಪಕಾಲ ಮೌನವಾಗಿರುವುದು ಕ್ಷೇಮ. ಒಬ್ಬ ಬುದ್ಧನನ್ನು ಕೆಟ್ಟಪದಗಳಿಂದ ಬೈಯುತ್ತಿದ್ದಾಗ ಬುದ್ಧ ತಣ್ಣಗಿದ್ದುದನ್ನು ನೆನಪಿಸಿಕೊಳ್ಳಿ. ಮನುಷ್ಯ ಭಾವನಾಜೀವಿ. ಭಾವನೆಗಳನ್ನು ಬಿಟ್ಟು ಬಾಳಲು ಸಾಧ್ಯವಿಲ್ಲ. ಆದರೆ ಯಾವ ಭಾವನೆಗಳಿಂದ ವ್ಯಕ್ತಿಯ ಮತ್ತು ಸಮಾಜದ ಹಿತ, ಅಹಿತ ಆಗುತ್ತದೆ ಎನ್ನುವ ಎಚ್ಚರ ಇರಬೇಕು. ಕೋಪ ವ್ಯಕ್ತಿಯಲ್ಲಿ ಸ್ಥಿರವಾಗಿದ್ದಾಗ ಅನರ್ಥ ತಪ್ಪಿದ್ದಲ್ಲ. ಹಾಗಾಗಿ `ಕೋಪಿ ಮಜ್ಜನಕ್ಕೆರೆದಡೆ ರಕ್ತದ ಧಾರೆ’ ಎನ್ನುವರು ಬಸವಣ್ಣನವರು. ಸಂದರ್ಭಕ್ಕೆ ಅನುಗುಣವಾಗಿ ಕೋಪ, ತಾಳ್ಮೆ, ಮೌನ, ಪ್ರೀತಿ ಈ ಎಲ್ಲ ಭಾವನೆಗಳೂ ಇರಬೇಕಾಗುತ್ತದೆ. ಯಾವ ಸಂದರ್ಭದಲ್ಲಿ ಆ ಅಸ್ತçಗಳನ್ನು ಬಳಸಬೇಕೆಂಬ ವಿವೇಕ ಇದ್ದಾಗ ಕಟ್ಟುವ ಕ್ರಿಯೆಗೆ ಅವು ಸಹಕಾರಿ ಆಗುವವು.
ಕೆಲವರ ಸ್ವಭಾವವನ್ನು ಬದಲಾಯಿಸುವುದು ಆಗದ ಕೆಲಸ. ಅವರು ಮಹಾಕೋಪಿಷ್ಠರು ಎಂದು ನೀವೂ ಅವರಂತಾದರೆ ಎರಡು ಕೋಣಗಳು ಗುದ್ದಾಡಿದಂತೆ ಆಗಬಹುದು. `ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು’ ಎನ್ನುವಂತೆ ಕೋಪ ಮೊದಲು ಕೋಪಿಷ್ಟನನ್ನೇ ಸುಟ್ಟು ನಂತರ ಇತರರನ್ನು ಸುಡಲು ಮುಂದಾಗುವುದು. ಹಾಗಾಗಿ ಕೋಪದ ಬಗ್ಗೆ ಅರಿವಿರಬೇಕು. ಊಟಕ್ಕೆ ಉಪ್ಪಿನ ಕಾಯಂತೆ ಕೋಪ ಇರಬೇಕು. ಅತಿರೇಕಕ್ಕೆ ಹೋಗಬಾರದು. ಸದ್ಗುಣಗಳಿಗೆ ಒತ್ತು ಕೊಡುತ್ತ ಬಂದರೆ ವ್ಯಕ್ತಿ ಸಬಲನಾಗುವನು. ದುರ್ಗುಣಗಳಿಗೆ ಒತ್ತು ಕೊಡುತ್ತಿದ್ದರೆ ಆ ವ್ಯಕ್ತಿ ದುರ್ಬಲನೂ, ಅವಿವೇಕಿಯೂ ಆಗುವನು. ಮನುಷ್ಯನಲ್ಲಿ ಭಯ, ಹತಾಶೆ, ತಪ್ಪಿತಸ್ಥ ಮನೋಭಾವ, ಹೊಟ್ಟೆಕಿಚ್ಚು, ದ್ವೇಷ, ಕೋಪ, ಆಪಾದನೆ, ಚಿಂತೆ, ನಿರಾಸೆ, ಕಿರಿಕಿರಿ ಇಂಥ ಭಾವನೆಗಳಿದ್ದರೆ ಅವೇ ಅವನ ವೈರಿಗಳಾಗುವವು. ಇವುಗಳಿಗೆ ವಿರುದ್ಧವಾದ ಗುಣಗಳೂ ಮಾನವನಲ್ಲಿವೆ. ಅವುಗಳೆಂದರೆ ಪ್ರೀತಿ, ಕೃತಜ್ಞತೆ, ಆನಂದ, ತಲ್ಲೀನತೆ, ಆಶ್ಚರ್ಯ, ಉತ್ಸಾಹ, ಭರವಸೆ, ತೃಪ್ತಿ. ಇವೇ ಆಪ್ತಮಿತ್ರರು. ಹಾಗೆ ನೋಡಿದರೆ ವೈರಿಗಳು, ಮಿತ್ರರು ಹೊರಗಿಲ್ಲ. ಇಬ್ಬರೂ ಮಾನವನೊಳಗೇ ಇದ್ದಾರೆ. ಅವರನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ವಿವೇಕ ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. ಇವರಲ್ಲಿ ಯಾರನ್ನು ಎಷ್ಟು ಹಚ್ಚಿಕೊಳ್ಳಬೇಕು, ಹಚ್ಚಿಕೊಳ್ಳಬಾರದು ಎಂದು ಯೋಚಿಸಿ ಹೆಜ್ಜೆ ಹಾಕಬೇಕು. ಜೀವನ ಎಂದರೆ ಸಿಹಿ, ಕಹಿಗಳ ಸಮ್ಮಿಶ್ರಣ. ಅವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಆಲೋಚನೆಗಳು ಪವಿತ್ರವಾದರೆ ಬದುಕೇ ಪವಿತ್ರವಾಗುವುದು. ಆಹಾರದಲ್ಲಿ ಬರೀ ಉಪ್ಪು, ಖಾರ, ಹುಳಿ ಜಾಸ್ತಿ ಆದರೆ ಊಟ ಮಾಡಲು ಆಗುವುದಿಲ್ಲ. ಅವು ಒಂದು ಮಿತಿಯಲ್ಲಿರಬೇಕು. ಹಾಗೆಯೇ ಕೋಪ ಇತ್ಯಾದಿ ಭಾವನೆಗಳಿಗೂ ಒಂದು ಮಿತಿ ಇರಬೇಕು. ಅತಿಯಾದರೆ ಅಪಾಯ ತಪ್ಪಿದ್ದಲ್ಲ.

`ಮನಸ್ಸಿನಂತೆ ಮಹಾದೇವ’. `ಹ್ಯಾಂಗೆ ಮನ ಹಾಂಗೆ ಘನ’ ಎನ್ನುವರು ಬಸವಣ್ಣನವರು. ಮನದಲ್ಲಿ ಯಾವಾಗಲೂ ಪ್ರೀತಿ, ಸದ್ಭಾವನೆ, ಸದ್ವಿಚಾರಗಳು ತುಂಬಿಕೊಳ್ಳುವAತಾಗಬೇಕು. ಆದರೆ ಕೆಲವರ ಸ್ವಭಾವ ಗಮನಿಸಿದಾಗ ಡಾ. ಜಿ ಎಸ್ ಶಿವರುದ್ರಪ್ಪನವರ `ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ. ಎಷ್ಟು ಕಷ್ಟವೊ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ!’ ಎನ್ನುವ ಕವನ ನೆನಪಾಗುವುದು. ಅಹಂ ಕೂಡ ಕೋಪದಷ್ಟೇ ಅಪಾಯಕಾರಿ. ಅಹಂಕಾರದಿAದ ವರ್ತಿಸುತ್ತಿದ್ದರೆ ಸಂಬAಧಗಳು ಹದಗೆಡುವವು. ಒಬ್ಬ ಒಳ್ಳೆಯ ಕಾರ್ಯ ಮಾಡುತ್ತಿದ್ದರೆ ಪ್ರೋತ್ಸಾಹಿಸಬೇಕು. ಬದಲಾಗಿ ಹೊಟ್ಟೆಕಿಚ್ಚುಪಟ್ಟರೆ? ಇದರ ಬದಲು ಮನುಷ್ಯನಲ್ಲಿರುವ ಸದ್ಗುಣಗಳನ್ನು ಮೆಚ್ಚಬೇಕು. ದಸರಯ್ಯ ಮತ್ತು ವೀರಮ್ಮ ಶರಣದಂಪತಿಗಳು. ದಯಾಮೂರ್ತಿಗಳು. ದಸರಯ್ಯ ಗಿಡಗಳಿಂದ ಹೂ ಬಿಡಿಸಿದಾಗ ಅಲ್ಲಿ ಕಣ್ಣೀರು ಕಾಣುವುದು, ಮತ್ತೊಂದು ಹೂ ಬಿಡಿಸಿದಾಗ ಆ ಗಿಡ ನೋವಿನಿಂದ ಹಾಂ ಎಂದAತಾಗುವುದು. ಅವತ್ತಿನಿಂದ ಅವರು ಗಿಡದಿಂದ ಹೂ ಬಿಡಿಸದೆ ಕೆಳಗೆ ಬಿದ್ದ ಹೂಗಳನ್ನು ಆರಿಸಿಕೊಂಡು ಪೂಜೆಗೆ ಬಳಸುತ್ತಿದ್ದರಂತೆ. ದೇವರಿಗೆ ಅವರು ಹೇಳುವುದು: ಹೂ ಗಿಡದಲ್ಲಿ ಇರುವವರೆಗೆ ನಿನ್ನ ಸಂಪತ್ತು, ಗಿಡದಿಂದ ಬಿದ್ದಾಗ ನನಗೆ ಸೇರಿದ್ದು. ದಸರಯ್ಯ ಕೋಪಿಷ್ಟನಾಗಲು ಏನು ಮಾಡಬೇಕೆಂದು ಯೋಚಿಸಿ ಕಳವಿನಿಂದಲೇ ಕೈ ಮುರಿಸಿಕೊಂಡಿದ್ದ ಕಳ್ಳನಿಗೆ ಆ ಜವಾಬ್ದಾರಿ ವಹಿಸುವರು. ಆತ ತನ್ನ ಮೋಟು ಕೈನಿಂದ ದಸರಯ್ಯನಿಗೆ ಎಷ್ಟೇ ಗುದ್ದಿದರೂ ಆತ ಸಿಟ್ಟಾಗದೆ ಕಳ್ಳನ ಮೋಟು ಕೈ ಹಿಡಿದು ಅಯ್ಯೋ ನಿನ್ನ ಕೈಗೆ ನೋವಾಗಿರಬೇಕು ಎಂದು ಆರೈಕೆ ಮಾಡುತ್ತಿದ್ದನಂತೆ. ನಿನ್ನಂಥ ಸಾತ್ವಿಕನಿಗೆ ಹೊಡೆದು ಆತ್ಮವನ್ನೇ ನಾಶ ಮಾಡಿಕೊಂಡೆೆ. ನನ್ನನ್ನು ಕ್ಷಮಿಸು ಎನ್ನುವನು. ದಸರಯ್ಯನಂತೆ ಶಾಂತಸ್ವಭಾವದವರೂ ನಮ್ಮ ನಡುವೆ ಇದ್ದಾರೆ. ಅವರು ನಮಗೆ ಆದರ್ಶವಾಗಬೇಕು.
`ಭಕ್ತರ ಕಂಡಡೆ ಬೋಳಪ್ಪಿರಯ್ಯಾ, ಸವಣರ ಕಂಡಡೆ ಬತ್ತಲೆಯಪ್ಪಿರಯ್ಯಾ, ಹಾರುವರ ಕಂಡಡೆ ಹರಿನಾಮವೆಂಬಿರಯ್ಯಾ, ಅವರವರ ಕಂಡಡೆ ಅವರವರಂತೆ ಸೂಳೆಗೆ ಹುಟ್ಟಿದವರ ತೋರದಿರಯ್ಯಾ. ಕೂಡಲಸಂಗಯ್ಯನ ಪೂಜಿಸಿ, ಅನ್ಯದೈವಂಗಳಿಗೆರಗಿ ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯಾ’. ಬಸವಣ್ಣನವರಲ್ಲಿ ಸಹ ಎಂತ ಕೋಪ ಇತ್ತೆಂದು ಅವರ ಇಂತಹ ಹಲವು ವಚನಗಳಿಂದ ತಿಳಿದುಬರುವುದು. ಆದರೆ ಅವರ ಕೋಪ ಸಾತ್ವಿಕವಾದುದು. ಪರಿವರ್ತನೆಗೆ ಪ್ರೇರಣೆ ನೀಡುವಂತಹುದು. ಈ ನೆಲೆಯಲ್ಲಿ `ಕೋಪ ಮಾತಿನಲ್ಲಿರಲಿ; ಹೃದಯದಲ್ಲಿ ಬೇಡ. ಮಾತಿನಲ್ಲಿ ಪ್ರೀತಿ ಇಲ್ಲದಿದ್ದರೂ ಹೃದಯದಲ್ಲಿ ಅದೇ ತುಂಬಿರಲಿ’ ಎನ್ನುವ ನುಡಿಗಳತ್ತ ಗಮನವಿರಲಿ. ಸಂಘಟನೆಯಲ್ಲಿರುವವರಿಗೆ ಬಸವಣ್ಣನವರಿಗಿದ್ದಂತೆ ಸಾತ್ವಿಕ ಕೋಪ ಅಗತ್ಯ ಮತ್ತು ಅನಿವಾರ್ಯ. ಅಲ್ಲಿಯೂ ಮಾನವೀಯತೆ ಮರೆಯಬಾರದು. ದ್ವೇಷ ಹೆಡೆಯಾಡದಿರಬೇಕು. ಆಗ ಅಸಾಧ್ಯವೂ ಸಾಧ್ಯವಾಗುವುದರಲ್ಲಿ ಅನುಮಾನವಿಲ್ಲ.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೇಹಳ್ಳಿ-೫೭೭೫೧೫
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಸೆಲ್: ೯೪೪೮೩೯೫೫೯೪

Leave a Reply

Your email address will not be published. Required fields are marked *

error: Content is protected !!