ಸತ್ಯಸಂಧ, ಮೌಢ್ಯವಿರೋಧಿ ಗುರು

ಸತ್ಯಸಂಧ, ಮೌಢ್ಯವಿರೋಧಿ ಗುರು

ಸತ್ಯವ ನುಡಿದರೆ ನಂಬರು ನಚ್ಚರು, ಅನೃತಕ್ಕೆ ಆಪ್ಯಾಯನವ ನೀಡುವರಯ್ಯಾ.
ಲಾಂಛನಕ್ಕೆ ಶರಣೆಂಬರು- ಆಚಾರ ತಪ್ಪಿದಡೆ ಛೀಃ ಎಂಬರಿಲ್ಲ!
ಮೂಕ ಮಾತನಾಡಿ, ಕುರುಡ ಊರ ದಾರಿಯ ತೋರಿದಂತೆ;
ಗುರು ಶಿಷ್ಯರಾಗಿಹರು ಕಾಣಾ! ಎನ್ನ ವರಗುರು ಶಿವಕುಮಾರ ಪ್ರಭುವೆ!

ಗುರು-ಶಿಷ್ಯರ ಸಂಬAಧ ಕುರಿತಂತೆ ಮಹಾದೇವ ಬಣಕಾರರು ಕನ್ನಡಿ ಹಿಡಿದಿದ್ದಾರೆ. ಈ ವಚನಕ್ಕೆ ಅಪವಾದವಾಗಿ ಇದ್ದವರು ಶ್ರೀ ತರಳಬಾಳು ಜಗದ್ಗುರು ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಮತ್ತವರ ಶಿಷ್ಯರು. ಅವರದು `ದಿಟ್ಟ ಹೆಜ್ಜೆ, ಧೀರ ಕ್ರಮ’. ಪೂಜ್ಯರು ಮೌಢ್ಯ ವಿರೋಧಿಗಳು. ಭಕ್ತವತ್ಸಲರು. ಭಕ್ತರಿಗೆ ಸದಾ ಮಾರ್ಗದರ್ಶನ ಮಾಡುತ್ತಿದ್ದವರು. ಮೂಢಾಚರಣೆಗಳನ್ನು ಕುರಿತಂತೆ ಅವರ ಜೀವನ ಚರಿತ್ರೆ `ದಿಟ್ಟ ಹೆಜ್ಜೆ ಧೀರ ಕ್ರಮ’ ಪುಸ್ತಕದಲ್ಲಿ ಸಾಕಷ್ಟು ನಿದರ್ಶನಗಳು ದೊರೆಯುತ್ತವೆ. ಅವರು ರಾಮ, ಲಕ್ಷö್ಮಣ, ರಾವಣ, ಶ್ರೀಕೃಷ್ಣ ಇಂಥವರನ್ನೂ ತರಾಟೆಗೆ ತೆಗೆದುಕೊಳ್ಳದೆ ಬಿಟ್ಟಿಲ್ಲ. `ಕೈಲಾಸ ವೈಕುಂಠಗಳ ಕತೆ, ಪರನಾರಿ ಸಹೋದರತೆಯನ್ನು ಬಿಟ್ಟು ಪರನಾರೀ ಭೋಗಪ್ರಿಯನಾದ ಶ್ರೀಕೃಷ್ಣನ ಕತೆ, ಸೀತೆಯನ್ನು ಕಳೆದುಕೊಂಡ ಶ್ರೀರಾಮನು ಸದ್ಭಕ್ತ ರಾವಣನನ್ನು ಕೊಲೆ ಮಾಡುವ ಕತೆ ಇವೆಲ್ಲವೂ ದೇವರ ಕೆಲಸವಲ್ಲ. ಲಕ್ಷö್ಮಣನು ಶೂರ್ಪನಖಿಯ ಬಗ್ಗೆ ನಡೆಸಿದ ಅನುಚಿತ ವ್ಯವಹಾರವೇ ಸೀತಾಪಹರಣಕ್ಕೆ ಮೂಲ ಕಾರಣ’ ಎಂದು ಬರೆದಿದ್ದಾರೆ. ಅವರಂಥ ಪ್ರಗತಿಪರ, ವೈಚಾರಿಕ, ವೈಜ್ಞಾನಿಕ ದೃಷ್ಟಿಕೋನದ ಬಂಡಾಯದ ಸ್ವಾಮಿಗಳನ್ನು ಕಾಣುವುದು ದುಸ್ತರ. ಅವರದು ಬಸವಣ್ಣನವರು ನಡೆದ ದಾರಿ. `ಅಜ್ಞಾನ, ಮೌಢ್ಯ, ಅವಿಚಾರಿತನಗಳ ಪೋಷಕರಾದ ಜನರೂ, ಗ್ರಂಥಗಳೂ ನಮ್ಮಲ್ಲಿರುವಾಗ ನಮ್ಮ ಜನರಲ್ಲಿ ವೈಚಾರಿಕ ಕ್ರಾಂತಿಯ ಉದಯವನ್ನು ನಿರೀಕ್ಷಿಸುವುದು ಅಸಾಧ್ಯಕೋಟಿಯ ಮಾತು’ ಎನ್ನುತ್ತಾರೆ.


ಮೂಢತನಕ್ಕೆ ಒಳಗಾದ ಚೆನ್ನಗಿರಿ ತಾಲ್ಲೂಕಿನ ಪೆನ್ನಸಮುದ್ರದ `ಒಬ್ಬ ಮೂಢ ಸದ್ಭಕ್ತನು ಎಲೆಬಳ್ಳಿಯ ತೋಟ ಮಾಡಿಸುವ ಮುಂಚೆ ಮಾವಿನಹೊಳೆಗೆ ಹೋಗಿ ದೇವರ ಅಪ್ಪಣೆ ಕೇಳಿದ. ದೇವರು ಪೂಜಾರಿಯ ಮೈಮೇಲೆ ಬಂದು ಮಾತನಾಡುತ್ತದೆಯೆಂದು ಕಾಣುತ್ತದೆ. ಎಲೆಬಳ್ಳಿ ಹಾಕಲು ಅಪ್ಪಣೆ ಸಿಕ್ಕಿತು. ಬಳ್ಳಿ ಬಹಳ ಚೆನ್ನಾಗಿ ಬೆಳೆಯಿತು. ತೋಟದೊಳಕ್ಕೆ ಹೋಗಲು ಹೆದರಿಕೆ. ಕಾಡುಮೃಗಗಳು ಸೇರಿರಬಹುದೆಂಬ ಭಯ. ಎಲೆಯನ್ನು ಕೊಯ್ಯಿಸೋಣವೆ ಎಂದು ದೇವರ ಅಪ್ಪಣೆಯನ್ನು ಕೇಳಿದಾಗ ಕೊಯ್ಯಿಸಬೇಡವೆಂದು ಅಪ್ಪಣೆಯಾಯಿತು. ಹೀಗಾಗಿ ಎಲೆಯಿಂದ ಬರಬೇಕಾಗಿದ್ದ ಸಾವಿರಾರು ರೂ ಹಣ ಕೈಬಿಟ್ಟುಹೋಯಿತು. ನಮ್ಮ ದೇಶದಲ್ಲಿ ಇಂತಹ ಭಕ್ತರೇ ಹೆಚ್ಚು. ಇಂತಹ ದೇವರುಗಳಿಗೂ ಕೊರತೆ ಇಲ್ಲ. ಮಂಜುನಾಥನನ್ನು ಮೈಮೇಲೆ ಬರಿಸಿಕೊಳ್ಳುವವರು, ಬರಿಸಿಕೊಂಡು ಜನರನ್ನು ಹೆದರಿಸುವವರು, ಇವರಿಗೇನು ಕೊರತೆಯಿಲ್ಲ’ ಎಂದು ಬರೆಯುತ್ತಾರೆ. ಗುರುಗಳು ಎಂದೂ ಪಂಚಾAಗ, ಶಾಸ್ತç, ಶಕುನ, ಹುಣ್ಣಿಮೆ, ಅಮಾವಾಸ್ಯೆ, ನಕ್ಷತ್ರ, ತಿಥಿ, ವಾರಗಳನ್ನು ನೋಡಿದವರಲ್ಲ. ಮದುವೆ, ಗೃಹಪ್ರೇಶ, ಶಿವಗಣಾರಾಧನೆ ಇತ್ಯಾದಿ ಕಾರ್ಯಕ್ರಮಗಳಿಗೆ ಆಹ್ವಾನಿಸಲು ಬರುವ ಭಕ್ತರಿಗೆ ತಮ್ಮ ದಿನಚರಿ ನೋಡಿ ಇಂಥ ದಿವಸ ಬರುತ್ತೇವೆ ಎನ್ನುತ್ತಿದ್ದರು. ಬುದ್ಧಿ ಅಂದು ಅಮಾವಾಸ್ಯೆ, ಮೂಲಾನಕ್ಷತ್ರ, ಶನಿವಾರ ಎಂದು ಹೇಳಿದರೆ ಇನ್ನೂ ಒಳ್ಳೆಯದೇ ಆಯ್ತು. ಅಂದೇ ನಿನ್ನ ಕಾರ್ಯಕ್ರಮ ಮಾಡು ಎಂದು ಅವರಿಗೆ ಆತ್ಮಬಲ ತುಂಬುತ್ತಿದ್ದರು. ಅಮಾವಾಸ್ಯೆಯ ದಿನ ಮದುವೆ ಆದರೆ ಅಮಾವಾಸ್ಯೆಯಂತಹ ಮಕ್ಕಳೇನೂ ಹುಟ್ಟುವುದಿಲ್ಲ ಎಂದು ಅಮಾವಾಸ್ಯೆ, ಮೂಲಾನಕ್ಷತ್ರದಲ್ಲೇ ಮದುವೆ ಮಾಡಿಸಿದ ನಿದರ್ಶನಗಳಿವೆ. ಹಾಗೆ ಮದುವೆಯಾದವರು ಸುಖವಾಗಿದ್ದಾರೆ. ಅವರಿಗೆ ಹುಣ್ಣಿಮೆ ಚಂದ್ರನAತಹ ಮಕ್ಕಳಿದ್ದಾರೆ. ಅವರಂತೆ ಜನರನ್ನು ಜಾಗೃತರನ್ನಾಗಿಸುವ ಗುರುಗಳು ಅಪರೂಪ. ಬಸವತತ್ವದಲ್ಲಿ ವಿಶ್ವಾಸವಿದ್ದ ಶ್ರೀಗಳು `ಎಮ್ಮವರು ಬೆಸಗೊಂಡರೆ ಶುಭಲಗ್ನ’ ಎನ್ನುತ್ತಿದ್ದರು. ರಾಹುಕಾಲ, ಅಮೃತಗಳಿಗೆ ಎನ್ನುವ ಮಾತು ಅವರಲ್ಲಿರಲಿಲ್ಲ.

`ಶ್ರೀಕೃಷ್ಣ ಸಾಕ್ಷಾತ್ ದೇವರು. ಆದರೆ ಈ ದೇವರನ್ನು ಒಬ್ಬ ಬೇಡನು ಬಾಣದಿಂದ ಕೊಂದ. ತನ್ನನ್ನು ತಾನು ಕಾಪಾಡಿಕೊಳ್ಳಲಾರದ ಈ ಭಗವಂತ ಜನರನ್ನೇನು ಕಾಪಾಡಬಲ್ಲನು? ಇದೇ ಶ್ರೀಕೃಷ್ಣ ಪರಮಾತ್ಮನು ಚಿಕ್ಕಂದಿನಲ್ಲಿ ಬೆಣ್ಣೆ ಕದ್ದ; ಯೌವನದಲ್ಲಿ ನಾರಿಯರ ಸೀರೆ ಕದ್ದ. ಇದೆಲ್ಲವೂ ದೇವರ ಕೆಲಸವೇ? ಇಂತಹ ದೇವರು ಯುಗಯುಗಕ್ಕೂ ಹುಟ್ಟುತ್ತಾ ಬಂದಲ್ಲಿ ಸಮಾಜದ ನೀತಿಯ ಮಟ್ಟವೇನಾದೀತು? ಆಗ ಹುಟ್ಟಿದ. ಈಗಲಂತೂ ಧರ್ಮವೆಂಬುದೇ ಇಲ್ಲ. ಅಧರ್ಮದ ತುಟ್ಟತುದಿಯನ್ನು ಮುಟ್ಟಿದ್ದೇವೆ. ಸತ್ಪುರುಷರ ಸುಳಿವೇ ಇಲ್ಲ. ಎಲ್ಲೆಲ್ಲೂ ದುಷ್ಟರ ಹಾವಳಿಯೇ ಹಾವಳಿ. ಇಂತಹ ಕಾಲದಲ್ಲಿ ಏಕೆ ಅವತರಿಸಿ ಬರಲಿಲ್ಲ? ಧರ್ಮವೆಂದರೆ ನರನಿಗೆ ಹರನನ್ನು ತೋರಿಸುವ ಮಾರ್ಗ. ಧರ್ಮವನ್ನು ಗಳಿಸಿಕೊಳ್ಳಬೇಕಾದವವನು ನರನೇ ವಿನಃ ಹರನಲ್ಲ. ಹೀಗಿರುವಾಗ ದೇವರು ಮತ್ತೇಕೆ ಅವತರಿಸುತ್ತಾನೆ?’ ಹೀಗೆ ಕೇಳುವ ಮಠಾಧೀಶರು ಇಂದಿನ ದಿನಮಾನಗಳಲ್ಲಂತೂ ತುಂಬಾ ವಿರಳ. “ದೊಡ್ಡವರು ನಡೆದ ದಾರಿಯೇ ದಾರಿ ಎಂದು ಈ ಸಮಾಜದ ಹಿರಿಯರೆನಿಸಿಕೊಂಡಿರುವ ಈ ದಡ್ಡರು ನಡೆದ ದಾರಿಯಲ್ಲೇ ಎಲ್ಲರೂ ನಡೆದು ತಾವೂ ದಡ್ಡರಾಗುತ್ತಿದ್ದಾರೆ’ ಎಂದು ಮನನೊಂದು ನುಡಿದಿದ್ದಾರೆ. `ನಮ್ಮಲ್ಲಿ ಅಕ್ಷರಸ್ಥರ ಸಂಖ್ಯೆ ಕಡಿಮೆ. ಅಕ್ಷರಸ್ಥರಲ್ಲೂ ವಿಚಾರವಂತರು ತೀರಾ ಕಡಿಮೆ. ಇಂತಹ ಈ ವೈಚಾರಿಕ, ವೈಜ್ಞಾನಿಕ ಯುಗದಲ್ಲೂ `ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ…’ ಎಂಬ ಗೀತೆಯ ಮಾತನ್ನು ಅರ್ಥ ಮಾಡಿಕೊಳ್ಳುವ ಜನರೇ ಇಲ್ಲ… ಸಾವಿರಾರು ವರ್ಷಗಳಿಂದ ಮೈಯುಂಡುಕೊAಡ ಮೌಢ್ಯವು ದೂರವಾಗುವುದು ಸುಲಭವಿಲ್ಲ. ದೊಡ್ಡವರ ಮಾತು ಎಂದು ತಲೆಯ ಮೇಲೆ ಹೊತ್ತು ಸಾಗಿದ್ದಾರೆ. `ದೊಡ್ಡವರು ಎರಡು ಮಾತನಾಡಿಯಾರೇ?’ ಎಂಬ ವಿಚಾರವೇ ಜನರಿಗೆ ಹುಟ್ಟುವುದಿಲ್ಲ” ಎಂದು ಹೇಳುತ್ತಲೇ ಜನರನ್ನು ಪ್ರಜ್ಞಾವಂತರನ್ನಾಗಿಸುತ್ತಿದ್ದರು. ನಮ್ಮ ವಿಚಾರಗಳು ಜ್ಯೋತಿಯಂತೆ ಸದಾ ಬೆಳಕು ಕೊಡಬೇಕು ಎನ್ನುವುದು ಅವರ ನಿತ್ಯ ಜಪವಾಗಿತ್ತು.

ಗುರುಗಳು ಸತ್ಕಾರ್ಯಗಳಲ್ಲಿ ದೇವರು ಇದ್ದಾನೆ ಎನ್ನುತ್ತಿದ್ದರು. ಶರಣರ `ಕಾಯಕವೇ ಕೈಲಾಸ’ ಎನ್ನುವ ತತ್ವವನ್ನು ಮತ್ತೆ ಮತ್ತೆ ಭಕ್ತರಿಗೆ ಹೇಳಿ ಅವರು ಕಾಯಕಶೀಲರಾಗುವಂತೆ ಪ್ರಚೋದಿಸುತ್ತಿದ್ದರು. ಬೆದ್ದಲು ಸೀಮೆಯ ಭಕ್ತರನ್ನು ಅಡಕೆ ತೋಟಗಳಿರುವ ಭಕ್ತರ ಊರಿಗೆ ಕರೆದುಕೊಂಡು ಹೋಗಿ ಅವರ ತೋಟಗಳನ್ನು ತೋರಿಸುತ್ತಿದ್ದರಂತೆ. ಹಾಗೆ ತೋರಿಸುವ ಉದ್ದೇಶ ನೀವೂ ಅವರಂತೆ ತೋಟ ಮಾಡಿ ಉತ್ತಮ ಜೀವನ ನಡೆಸಬೇಕು ಎಂದು ಅರಿವು ಮೂಡಿಸುವ ಸದಾಶಯ. ಹಾಗಾಗಿ ಅವರ ಅನೇಕ ಶಿಷ್ಯರು ಇವತ್ತು ನಾವು ಅಡಕೆ ತೋಟ ಮಾಡಲು, ಆರ್ಥಿಕವಾಗಿ ಮುಂದುವರಿಯಲು ಆ ಗುರುಗಳ ಕೃಪಾಶೀರ್ವಾದವೇ ಕಾರಣ ಎಂದು ಭಕ್ತಿಯಿಂದ ಸ್ಮರಿಸಿಕೊಳ್ಳುವರು. ಅವರು ಭಕ್ತರಿಗೆ ದುಡಿಮೆಯ ಜೊತೆಗೆ ವಚನ ಧರ್ಮದ ಆಶಯದಂತೆ ನಡೆಯಬೇಕು ಎನ್ನುತ್ತಿದ್ದರು. ಅದಕ್ಕಾಗಿ ಅವರ ಕಾರ್ಯಕ್ರಮಗಳು ಪ್ರಾರಂಭವಾಗುತ್ತಿದ್ದುದೇ ವಚನಗೀತೆಗಳ ಮುಖಾಂತರ. ಪ್ರತಿಯೊಬ್ಬರೂ ಇಷ್ಟಲಿಂಗ ಧರಿಸಿ ಪೂಜಿಸಬೇಕು ಎಂದು ಸಾಮೂಹಿಕ ಇಷ್ಟಲಿಂಗದೀಕ್ಷೆಯನ್ನು ಏರ್ಪಡಿಸುತ್ತಿದ್ದರು. ಶಿವಾನುಭವ ಸಮ್ಮೇಳನ ನಡೆಸುತ್ತಿದ್ದರು. ಶಿವಾನುಭವ ಪ್ರವಾಸದಲ್ಲಿ ವಚನ ಪ್ರಾರ್ಥನೆ, ಸಾಮೂಹಿಕ ಇಷ್ಟಲಿಂಗ ಪೂಜೆಗೆ ಅವಕಾಶ ಕಲ್ಪಿಸುತ್ತಿದ್ದರು. ಶರಣರ ವಿಚಾರಗಳನ್ನು ಪ್ರತಿಪಾದಿಸುವ ನಾಟಕಗಳನ್ನೇ ಆಡಿಸುತ್ತಿದ್ದರು. ಅವರ ಮಾತು, ಮನಸ್ಸು, ಕೃತಿ ಎಲ್ಲವೂ ವಚನಮಯ. ಜಾತ್ರೆ, ಹುಣ್ಣಿಮೆಗಳು ಸಹ ವಚನಮಯವಾಗಿರುತ್ತಿದ್ದವು.

ಹಲವಾರು ಪ್ರದೇಶಗಳಲ್ಲಿ ಮಹೇಶ್ವರ ಜಾತ್ರೆ ಈಗಲೂ ನಡೆಯುತ್ತಿದೆ. ಆ ಜಾತ್ರೆಯನ್ನು ಊರ ಹೊರಗೆ ಮಾಡುವರು. ಅಲ್ಲಿಗೆ ಮಹಿಳೆಯರು, ಹಿಂದುಳಿದ ಜನರು ಹೋಗುವಂತಿಲ್ಲ. ಲಿಂಗವAತ ಪುರುಷರು ಮಾತ್ರ ಅದರಲ್ಲಿ ಭಾಗವಹಿಸುತ್ತಿದ್ದರು. ಅಂಥ ಸಂಪ್ರದಾಯ ಮುರಿದವರು ನಮ್ಮ ಗುರುಗಳು. ತರೀಕೆರೆ ತಾಲ್ಲೂಕಿನ ಕುಡ್ಲೂರು, ಅನುವನಹಳ್ಳಿಯಲ್ಲಿ ನಡೆಯುತ್ತಿದ್ದ ಮಹೇಶ್ವರನ ಜಾತ್ರೆಗೆ ಅಕ್ಕನ ಬಳಗದವರನ್ನು ಕರೆದುಕೊಂಡು ಹೋಗಿ ವಚನಗಳನ್ನು ಹಾಡಿಸುತ್ತಿದ್ದರು. ತಮ್ಮೆದುರೇ ಇಷ್ಟಲಿಂಗÀಪೂಜೆ ಮತ್ತು ಪ್ರಸಾದ ಸ್ವೀಕಾರಕ್ಕೆ ಅವಕಾಶ ಕಲ್ಪಿಸುತ್ತಿದ್ದರು. ಈ ಹೆಣ್ಣುಮಕ್ಕಳಿಗೆ ಖಂಡಿತ ತೊಂದರೆ ಆಗುತ್ತದೆ. ಅವರಿಗೆ ಮದುವೆ ಆಗುವುದಿಲ್ಲ. ಮದುವೆ ಆದರೂ ಮಕ್ಕಳಾಗುವುದಿಲ್ಲ ಎಂದೆಲ್ಲ ಅಪಪ್ರಚಾರ ಮಾಡುತ್ತಿದ್ದರೂ ಗುರುಗಳು ಅದಕ್ಕೆ ಸೊಪ್ಪು ಹಾಕದೆ ಅಕ್ಕನ ಬಳಗದ ಸದಸ್ಯೆಯರಿಗೆ ನಿಮ್ಮ ಹಿಂದೆ ನಾವಿದ್ದೇವೆ, ಬಸವಣ್ಣನ ಕೃಪೆ ಇದೆ ಎಂದು ಆತ್ಮವಿಶ್ವಾಸ ಬೆಳೆಸುತ್ತಿದ್ದರು. ಮಹೇಶ್ವರ ಜಾತ್ರೆಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಯಾವ ತೊಂದರೆಯೂ ಆಗಿಲ್ಲ. ಅವರೆಲ್ಲ ಉದ್ಯೋಗಸ್ಥರಾಗಿ, ಮದುವೆಯಾಗಿ, ಮಕ್ಕಳು, ಮೊಮ್ಮಕ್ಕಳನ್ನು ಪಡೆದು ಸುಖವಾಗಿದ್ದಾರೆ. ದಸರಾ ಹಬ್ಬವನ್ನು ಬಹುತೇಕ ಮಠಾಧೀಶರು ವೈಭವದಿಂದ ಆಚರಿಸುತ್ತಿದ್ದಂತೆ ಸಿರಿಗೆರೆ ಮಠದಿಂದಲೂ ಆಚರಿಸಲಾಗುತ್ತಿತ್ತು. ಆಗ ಸ್ವಾತಂತ್ರö್ಯಹೋರಾಟಗಾರ, ಅಪ್ಪಟ ಗಾಂಧೀವಾದಿ, ಬಸವತತ್ವಪ್ರೇಮಿ ಎಸ್ ಆರ್ ಮಲ್ಲಪ್ಪನವರು (ಸಿರುಮ) ಮಠಗಳು ದಸರಾಹಬ್ಬ ಆಚರಿಸಬಾರದು. ರಾಜರು ವೈರಿಗಳ ದಮನದ ಹಿನ್ನೆಲೆಯಲ್ಲಿ ಇಂಥ ಹಬ್ಬ ಆಚರಿಸುತ್ತ ಬಂದಿದ್ದಾರೆ. ನಿಮಗೆ ವೈರಿಗಳು ಯಾರಿದ್ದಾರೆ? ನೀವು ಬಸವಣ್ಣ, ಮರುಳಸಿದ್ಧರ ತತ್ವಾದರ್ಶಗಳ ಹಬ್ಬ ಆಚರಿಸಬೇಕು ಎಂದು `ತರಳಬಾಳು ಹುಣ್ಣಿಮೆ’ ಆಚರಿಸುವಂತೆ ಸೂಚಿಸಿದರು. ಪೂಜ್ಯರು ದಸರಾ ಹಬ್ಬದ ಬದಲಾಗಿ `ತರಳಬಾಳು ಹುಣ್ಣಿಮೆ’ಯನ್ನು ಜಾರಿಯಲ್ಲಿ ತಂದರು. ಅದು ಭಾವೈಕ್ಯತೆಯ ಸಂಕೇತವಾಗಿ ನಾಡಹಬ್ಬ ಎನ್ನುವ ಪ್ರಖ್ಯಾತಿ ಪಡೆದದ್ದು ಅವಿಸ್ಮರಣೀಯ.

ಒಬ್ಬನಿಗೆ ಬೆಟ್ಟದ ಬಳಿ ಹೋಗಲು ಆಗದಿದ್ದಾಗ ಬೆಟ್ಟವೇ ಆ ವ್ಯಕ್ತಿಯಿದ್ದೆಡೆಗೆ ಬಂತು ಎನ್ನುವಂತೆ ಎಲ್ಲೆಲ್ಲೋ ಇರುವ ಭಕ್ತರು ಶ್ರೀಮಠಕ್ಕೆ ಬರುವುದು, ಬಂದರೂ ಗುರುಗಳ ದರ್ಶನ ಪಡೆಯುವುದು ಸುಲಭವಿರಲಿಲ್ಲ. ಹಾಗಾಗಿ ಪೂಜ್ಯರು ಸರ್ವಶರಣ ಸಮ್ಮೇಳನ, ಶಿವಾನುಭವ ಪ್ರವಾಸ, ತರಳಬಾಳು ಹುಣ್ಣಿಮೆಯ ನೆಪದಲ್ಲಿ ಭಕ್ತರಿದ್ದಲ್ಲಿಗೇ ಹೋಗಿ ಅವರ ಅರಿವಿನ ಕ್ಷಿತಿಜವನ್ನು ಹೆಚ್ಚಿಸುವ ಕಾರ್ಯ ಮಾಡುತ್ತ ಬಂದದ್ದು ಶ್ರೀಮಠದ ಇತಿಹಾಸದಲ್ಲಿ ಒಂದು ಮೈಲುಗಲ್ಲು ಎಂದೇ ಹೇಳಬಹುದು. ಜನರಲ್ಲಿರುವ ಧಾರ್ಮಿಕ, ಸಾಮಾಜಿಕ ಕಂದಾಚಾರಗಳ ನಿವಾರಣೆಗಾಗಿ ಸಾಮೂಹಿಕ ಮದುವೆಗಳನ್ನು ಮೊಟ್ಟಮೊದಲಿಗೆ ಜಾರಿಗೆ ತಂದ ಪೂಜ್ಯರು ವಿಧವಾ ವಿವಾಹದ ಮೂಲಕ ಮಹಿಳೆಯರ ಬದುಕಿಗೆ ಬೆಳಕು ಕರುಣಿಸಿದರು. ಗಂಡ ಸತ್ತಾಕ್ಷಣ ಹೆಂಡತಿ ಹೂ ಮುಡಿಯಬಾರದು, ಕುಂಕುಮ ಇಡಬಾರದು, ಬಳೆ ತೊಡಬಾರದು, ಆರತಿ ಎತ್ತಬಾರದು ಎನ್ನುವುದೆಲ್ಲ ಅವಿಚಾರದ ಪ್ರತೀಕ ಎಂದು ಅಂಥ ಮಹಿಳೆಯರಿಗೆ ಆ ಎಲ್ಲ ಅವಕಾಶಗಳನ್ನು ಕಲ್ಪಿಸಿಕೊಡುವಂತೆ ಸಮಾಜಬಾಂಧವರಿಗೆ ತಿಳಿಹೇಳುತ್ತಿದ್ದರು. ಮೂಢಾಚರಣೆಗಳನ್ನು ಕಟುವಾಗಿ ವಿರೋಧಿಸುತ್ತಿದ್ದರು.

ನಾಮಧಾರಿ ಗುರುಗಳು, ಮಠಾಧೀಶರನ್ನು ನಿರ್ಭೀತರಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅವರು ೧೯೩೭-೩೮ರಲ್ಲಿ ದಿನಚರಿ ಬರೆಯುವ ಪದ್ಧತಿ ಇಟ್ಟುಕೊಂಡಿದ್ದರು. ಆ ದಿನಚರಿಗಳನ್ನು ಸಂಗ್ರಹಿಸಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು `ಆತ್ಮನಿವೇದನೆ’ ಎನ್ನುವ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಮಠಾಧೀಶರ ವಿಚಾರವನ್ನು ಒಬ್ಬ ಬಂಡಾಯ ಸಾಹಿತಿಯಂತೆ ದಾಖಲಿಸಿದ್ದಾರೆ. `ಜಗತ್ತೆಲ್ಲಾ ವಿಷಯಾಭಿಮುಖವಾಗಿದೆ. ಯಾರಿಗೆ ಯಾವುದು ಅವಶ್ಯವಿಲ್ಲವೋ ಅದೆಲ್ಲಾ ಈಗ ಅವರಿಗೆ ಅವಶ್ಯಕವಾಗಿದೆ. ಒಬ್ಬರಿಗೂ ತಮ್ಮ ಜವಾಬ್ದಾರಿಯು ಜ್ಞಾಪಕದಲ್ಲೇ ಇಲ್ಲ. ಈಗಿನ ಸನ್ಯಾಸಿಗಳಿಂದ ಜಗತ್ತಿಗೆ ಭಯಂಕರವಾದ ಹಾನಿಯಾಗಿದೆ. ಸನ್ಯಾಸಿಗಳು ಕೆಡಲು ಭಕ್ತರಲ್ಲಿರುವ ಅಜ್ಞಾನವೇ ಕಾರಣ. ಅಜ್ಞಾನವಿದ್ದಲ್ಲಿ ಸತ್ಯಕ್ಕೆ ಬೆಲೆಯಿಲ್ಲ, ಕಂದಾಚಾರಕ್ಕೆ ಬೆಲೆಯಿರುವವರೆಗೆ ಜಗತ್ತಿಗೆ ಸುಖವಿಲ್ಲ. ನಿರಕ್ಷರಕುಕ್ಷಿಗಳೂ ವಿಷಯಕೂಪದಲ್ಲಿ ಬೆಳೆದವರೂ ಮತ್ತು ವಿಷಯದಲ್ಲೇ ತೊಳಲಿ ಬಳಲಿದವರೂ ಗುರುಗಳಾದರೆ ಯಾವ ಜಗತ್ತು ಉದ್ಧಾರವಾಗುತ್ತದೆ? ಗುರುಗಳಾಗುವುದೆಂದರೆ ನಾಟಕದಲ್ಲಿ ವೇಷ ಹಾಕಿಕೊಂಡು ಪಾರ್ಟು ಮಾಡುವುದೆಂದು ಜನರು ಭಾವಿಸಿರುವಂತೆ ತೋರುತ್ತದೆ. ಶಿವ ಶಿವ! ದನ ಕಾಯುವವರೆಲ್ಲಾ, ಸುಳ್ಳು ಹೇಳುವವರೆಲ್ಲಾ, ವಿಧವಾಪ್ರಿಯಿರೆಲ್ಲಾ ನಿನ್ನ ಹೆಸರಿನಿಂದ ದೇಶದಲ್ಲಿ ಮೆರೆಯುತ್ತಾರಲ್ಲ. ಅಯ್ಯೋ ಮೂಢ ಭಕ್ತರೇ! ನಿಮ್ಮ ಭಕ್ತಿಗೆ ಸರಿಯಾದ ಗುರುಗಳನ್ನು ಪಡೆದಿರುವಿರಿ. ಅಯ್ಯೋ ನಿರ್ದಯಿ ಗುರುವರ್ಗವೇ! ನಿಮಗಾದರೂ ಪಾಪವನ್ನು ಮಾಡಿ ಜಗತ್ತನ್ನು ಹಾಳು ಮಾಡುತ್ತಿರುವಿರಲ್ಲಾ ದಯ ಬೇಡವೇ? ಶಿವ ಶಿವ! ಜಗತ್ತಿನ ಸೂತ್ರವೆಲ್ಲಾ ವ್ಯಭಿಚಾರಿಗಳ ಕೈಯಲ್ಲಿದೆ. ವ್ಯಭಿಚಾರಿಗಳು ಗುರುಗಳೆಂದು ಹೇಳಿಕೊಳ್ಳಲು ನಾಚಿಕೊಳ್ಳುವುದಿಲ್ಲವಲ್ಲಾ!’ ಪೂಜ್ಯರಲ್ಲಿ ಮುಚ್ಚುಮರೆ ಇರಲಿಲ್ಲ. ಅವರನ್ನು ಯಾರು ಯಾವಾಗ ಎಲ್ಲಿ ಬೇಕಾದರೂ ಕಾಣಬಹುದಿತ್ತು. ಕ್ಷೌರ ಮಾಡಿಸಿಕೊಳ್ಳುವಾಗ, ಸ್ನಾನ ಮಾಡುವಾಗ, ಪ್ರಸಾದ ಸ್ವೀಕರಿಸುವಾಗ, ಅವರ ಮಲಗುವ ಕೋಣೆಯಲ್ಲಿ ಸಹ ಭಕ್ತರು ಹೋಗಿ ತಮ್ಮ ಅಹವಾಲು ಹೇಳಿಕೊಳ್ಳುವ ಸ್ವಾತಂತ್ರö್ಯವಿತ್ತು. ಹಾಗಾಗಿ ಅವರು ಇಂದಿಗೂ ಭಕ್ತರ ಮನದಲ್ಲಿ ಸ್ಥಿರವಾಗಿ ನೆಲೆಗೊಂಡಿದ್ದಾರೆ. ಮಹಾದೇವ ಬಣಕಾರರು ಹೇಳುವಂತೆ ಅವರು ಮನುಕುಲಕೆ ಶರಣತತ್ವಾಮೃತವನುಣಿಸಿ ಮರೆವ ಕಳೆದು ಅರಿವನಿತ್ತ ಮಹಾಂತ. ಪಾಮರರನ್ನು ಪಾವನವ ಮಾಡಿದ ಗುರು. ಭಕ್ತರ ಹೃದಯ ಸಿಂಹಾಸನದಲ್ಲಿ ನೆಲೆಗೊಂಡವರು. ನೆನೆದವರ ಮನದಲ್ಲಿ ಇರುವವರು. ಸದ್ಧರ್ಮ ಜ್ಯೋತಿಯನ್ನು ಬೆಳಗಿಸಿದವರು. ಶ್ರೀಗಳೇ ಹೇಳುವಂತೆ `ಸತ್ಯ, ಬ್ರಹ್ಮಚರ್ಯ, ಪರೋಪಕಾರ ಈ ಮೂರು ಪರಮೇಶ್ವರನಲ್ಲಿಗೆ ಕರೆದುಕೊಂಡು ಹೋಗಲು ಸಾಧನಗಳು. ಸತ್ಯವೇ ರಥ, ಬ್ರಹ್ಮಚರ್ಯವೇ ಸಾರಥಿ, ಪರೋಪಕಾರವೇ ಅಶ್ವ. ಬ್ರಹ್ಮಚರ್ಯವಿಲ್ಲದವನು ಎಷ್ಟು ಮಾತ್ರಕ್ಕೂ ಸತ್ಯವನ್ನು ಕಾಪಾಡಲಾರನು, ಸತ್ಯವನ್ನು ಕಾಪಾಡಲಸಮರ್ಥನಾದವನು ಎಂದೆAದಿಗೂ ಪರೋಪಕಾರವನ್ನು ಮಾಡಲಾರನು. ಈ ಮೂರೂ ಇಲ್ಲದವನೆಂದಿಗೂ ಈ ಜಗತ್ತಿನಲ್ಲಿ ಸುಖಿಸಲಾರನು’ ಇದು ಶ್ರೀಗಳವರ ಬದುಕಿನ ಸಿದ್ಧಾಂತವಾಗಿತ್ತು.

(೨೪-೯-೨೦೨೧ ರಂದು ಸಿರಿಗೆರೆಯಲ್ಲಿ ಪೂಜ್ಯರ ೨೯ನೆಯ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದ್ದು ತನ್ನಿಮಿತ್ತವಾಗಿ ಅವರ ಸ್ಮರಣೆ ಮಾಡಿಕೊಳ್ಳಲಾಗಿದೆ.)

 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೇಹಳ್ಳಿ-೫೭೭೫೧೫
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಸೆಲ್: ೯೪೪೮೩೯೫೫೯೪

Leave a Reply

Your email address will not be published. Required fields are marked *

error: Content is protected !!