ಎಚ್ಚರಿಸುವ ಕಾಯಕದ ಮುಕ್ತಿನಾಥಯ್ಯ

೦ ರವೀಶ್ ಚಿಕ್ಕನಾಯಕನಹಳ್ಳಿ

ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ಹುಟ್ಟುಹಾಕಿದಂತಹ ಶರಣ ಪರಂಪರೆಯಲ್ಲಿ ಕಾಯಕ – ದಾಸೋಹ ತತ್ವಗಳು ಜಗತ್ತಿನಲ್ಲಿ ಬೆವರರಿಸಿ ದುಡಿದ ದುಡಿಮೆಯ ಮಹತ್ವ ಹಾಗೂ ದುಡಿಮೆಯ ಮೌಲ್ಯಗಳನ್ನು ಹೆಚ್ಚಿಸಿದವು. ದುಡಿದುದರಲ್ಲಿಯೇ ಇರುವುದನ್ನೇ ಹಂಚಿ ತಿನ್ನುವ ಸಂಸ್ಕೃತಿಯನ್ನು ಕಲಿಸಿದವು. ಇದರಿಂದ ಸೇವಾ ಸಮರ್ಪಣಾ ಮನೋಭಾವವೂ ಸಹ ಜನರ ಮನಸ್ಸಿನಲ್ಲಿ ಬೇರೂರಲು ಪ್ರಾರಂಭವಾಯಿತು. ಪ್ರಾಮಾಣಿಕ ದುಡಿಮೆಯಲ್ಲಿ ಶ್ರದ್ದೆ, ನಿಷ್ಠೆ, ಸತ್ಯಶುದ್ದತೆಯನ್ನು ಕಂಡುಕೊಂಡ ಶರಣರು ಕಾಯಕವನ್ನೇ ಕೈಲಾಸ ಎಂದರು ಬಿಟ್ಟರು‌. ಮೇಲು ಕೀಳುಗಳ ಭಾವನೆಯನ್ನು ತೊಡೆದುಹಾಕಿ, ಮಾನವೀಯತೆಯ ತಳಹದಿಯ ಮೇಲೆ ಮನುಷ್ಯನ ಬದುಕನ್ನು ಕಟ್ಟಲು ಶುರು ಮಾಡಿದರು. ಏಕಕಾಲಕ್ಕೆ ವ್ಯಕ್ತಿಗೂ ಆ ವ್ಯಕ್ತಿಯ ಕಾಯಕಕ್ಕೂ ವೃತ್ತಿಗೌರವವನ್ನು ತಂದುಕೊಟ್ಟರು. ಇಂಥಹ ಶರಣ ಪರಂಪರೆಯಲ್ಲಿ ಒಬ್ಬ ಶ್ರೇಷ್ಠನಾದ ಶರಣ ತಾನು ಎಚ್ಚರಿಕೆ ಕೊಡುವ ಕಾಯಕ ಮಾಡುತ್ತಿದ್ದು, ಎಲೆಯ ಮರೆಯ ಕಾಯಿಯಂತೆ ಹೆಚ್ಚು ಪ್ರಚಾರಕ್ಕೆ ಬಾರದೆ ಆಧ್ಯಾತ್ಮ ಸಾಧನೆಯನ್ನು ಮಾಡಿದನು. ಆ ಶರಣ ನ ಹೆಸರು ಶರಣ ಎಚ್ಚರಿಕೆ ಕಾಯಕದ ಮುಕ್ತಿನಾಥಯ್ಯ

ಶರಣ ಎಚ್ಚರಿಕೆ ಕಾಯಕದ ಮುಕ್ತಿನಾಥಯ್ಯ ನನ್ನು ಮುತ್ತಯ್ಯ ಎಂಥಲೂ ಕರೆಯುತ್ತಾರೆ. ಈತನ ಊರು, ಕೇರಿ, ಹೆತ್ತವರಾಗಲಿ, ಎಲ್ಲಿಂದ ಕಲ್ಯಾಣಕ್ಕೆ ಬಂದವನೆಂದಾಗಲಿ ತಿಳಿದು ಬರುವುದಿಲ್ಲ, ಈತನ ಹೆಸರಿನ ಹಿಂದಿರುವ ಎಚ್ಚರಿಕೆ ಕೊಡುವ ಕಾಯಕ ವಾದ್ದರಿಂದ ಈತನ ಕಾಯಕ ಎಚ್ಚರಿಕೆ ಕೊಡುವುದು ಎಂದು ತಿಳಿಯಲಾಗಿದೆ. ಈ ಶರಣನ ವಚನಗಳಲ್ಲಿ ಬೆಳಗು ಜಾವದ ಕುರಿತಾಗಿ ಬಳಕೆಯಾದ ಪದಗಳ ಆಧಾರದಿಂದ ಈತನು ಬೆಳಗಿನ ಜಾವದಲ್ಲಿ ಎಚ್ಚರಿಕೆ ಕೊಡುವ ಕಾಯಕ ಹೊಂದಿದ್ದನೆಂದು ಖಚಿತವಾಗುತ್ತದೆ. ಜೊತೆಗೆ ಈ ಶರಣನ ವಚನಗಳಲ್ಲಿ ಬಸವಣ್ಣ, ಚನ್ನ ಬಸವಣ್ಣ, ಅಲ್ಲಮ ಪ್ರಭು, ಸಿದ್ದರಾಮ, ಮರುಳ ಶಂಕರ ದೇವರ ಹೆಸರುಗಳನ್ನು ಪ್ರಸ್ತಾಪಿಸುರುವುದರಿಂದ ಈತನು ಬಸವಣ್ಣನವರ ಸಮಕಾಲೀನನೂ ಹಾಗೂ ಕಲ್ಯಾಣದಲ್ಲಿ ಇದ್ದನೆಂಬುದು ತಿಳಿಯುತ್ತದೆ.

ಈತನ ಒಟ್ಟು 11 ವಚನಗಳು ಲಭ್ಯವಾಗಿರುತ್ತವೆ. ಈತನ ವಚನಗಳಲ್ಲಿಯ ಅಂಕಿತ ನಾಮವು ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಕುರುಂಗೇಶ್ವರ ಲಿಂಗ ಎಂಬುದಾಗಿದೆ. ಈತನು ಬೆಳಗಿನ ಜಾವದಲ್ಲಿ ಕಲ್ಯಾಣದ ಜನರನ್ನು ಎಚ್ಚರಿಸುವ ಹಾಗೂ ಮಹಾಮನೆ ಹಾಗೂ ಅನುಭವ ಮಂಟಪದ ಬಳಿ ಪಹರೆ ಕಾಯುತ್ತಾ, ಎಚ್ಚರಿಸುವ ಕಾಯಕ ಹೊಂದಿದ್ದನೆಂದು ತಿಳಿದು ಬರುತ್ತದೆ.

ಶರಣ ಎಚ್ಚರಿಕೆ ಕಾಯಕದ ಮುಕ್ತಿನಾಥಯ್ಯ ಇವರ ವಚನಗಳು

ಅಂಗವಿಕಾರ ಸಾಕೇಳಿ, ಬಹುವಿಡಂಗದ ಪ್ರಕೃತಿಯ ಮರದೇಳಿ. ನಿಮ್ಮ ಭಕ್ತಿಮುಕ್ತಿಯ ಲಿಂಗದ ಕೂಟವ ನೆನೆದೇಳಿ. ನಿಮ್ಮ ಗುರುವಾಜ್ಞೆಯ ನಿಮ್ಮ ವಿರಕ್ತಿ ಅರಿವಿನ ಸಾವಧಾನವನರಿದೇಳಿ. ಸಾರಿದೆ ! ಎವೆ ಹಳಚಿದಡಿಲ್ಲ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲಡೆ.

ಕಾಯವು ಪಂಚೇಂದ್ರಿಯಗಳ ಮುಖಾಂತರ ತನ್ನ ಅಭೀಷ್ಠೆಗಳನ್ನು ಪೂರೈಸಿಕೊಳ್ಳಲು ಸದಾ ಹಾತೊರೆತುತ್ತಿರುತ್ತದೆ. ಗಾಣಕ್ಕೆ ಕಟ್ಟಿದ ಎತ್ತಿನ ರೀತಿಯಲ್ಲಿ ಮನಸ್ಸು ಯಾವಾಗಲೂ ಆ ಕಾಮನೆಗಳ ಸುತ್ತಲೇ ಸುತ್ತುತ್ತಲೇ ಇರುತ್ತದೆ. ಹೀಗೆ ಮಾನವನು ದೈಹಿಕವಾಗಿ, ಮಾನಸಿಕವಾಗಿ, ಐಹಿಕವಾಗಿ ಈ ಕಾಮನೆಗಳಿಗೆ ದಾಸನಾದಂತೆಲ್ಲಾ ಈತನಲ್ಲಿ ವಿಕಾರತ್ವ ಬೆಳೆಯುತ್ತದೆ. ಆ ಮನಸ್ಸು ಮತ್ತೆ ಎಚ್ಚರಗೊಳ್ಳದಿದ್ದರೆ ಹಾಗೆಯೇ ವಿಕಾರತ್ವದಲ್ಲಿಯೇ ಮುಳಿಗಿಬಿಡುತ್ತದೆ. ಹಾಗಾಗಿ ಈ ವಚನದಲ್ಲಿ ಅಂಗವಿಕಾರ ಸಾಕೇಳಿ, ನಿಮ್ಮ ಸತ್ಯ ಚಿತ್ತ ಶುದ್ದ ಭಕ್ತಿಯಿಂದ ಲಿಂಗವನ್ನು ಹಾಗೂ ಆ ಲಿಂಗದ ಕೂಟವಾದ ಕಾಯಕ, ಅರಿವು, ಆತ್ಮೋಧ್ದಾರ, ದಾಸೋಹಗಳೆಂಬ ಕೂಟವನ್ನು ನೆನೆದೇಳಿ, ಗುರು ಕಾರುಣ್ಯದಿಂದ ನಿಮ್ಮ ಅರಿವಿನ ಭಕ್ತಿಯನ್ನು ಎಚ್ಚರಿಸುತ್ತಿದ್ದೇನೆ, ಇದರಲ್ಲಿ ಮಿಂದು ಮನದ ವಿಕಾರತೆಯನ್ನು ದೂರವಿಟ್ಟು ಬಿಡಿ, ಹೀಗಾದಲ್ಲಿ ಮಾತ್ರವೇ ನಮ್ಮ ಕರುಂಗೇಶ್ವರ ಲಿಂಗನಲ್ಲಿ ಕೂಡಬಹುದು, ಏಳಿ ಎದ್ದೇಳಿ, ಅಂಗವಿಕಾರ ಸಾಕೇಳಿ ಎಂದು ಎಚ್ಚರಿಕೆ ಕೊಡುತ್ತಾನೆ.


ದುಃಸ್ವಪ್ನವ ಕಾಣದಿರಿ, ದುರ್ವಿಕಾರದಲ್ಲಿ ಕೂಡದಿರಿ, ಮನೋವಿಕಾರದಲ್ಲಿ ಹರಿದಾಡದಿರಿ,
ಪಂಚಾಕ್ಷರಿಯ ಜಪಿಸಿ ಷಡಕ್ಷರಿಯ ಸಂಬಂಧಿಸಿಕೊಳ್ಳಿ, ಮೂಲಮಂತ್ರವನಾತ್ಮಂಗೆ ವೇಧಿಸಿಕೊಳ್ಳಿ. ಮರೆಯದಿರಿ ಗುರುವಾಜ್ಞೆಯ,
ತೊರೆಯದಿರಿ ಶಿವಪೂಜೆಯ, ಅರಿದು ಮರೆಯದಿರಿ ಚರಸೇವೆಯ.ಇಂತೀ ತ್ರಿಗುಣವ ನೆರೆ ನಂಬಿ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲಡೆ.

ಪಂಚೇಂದ್ರಿಯಗಳು ಬಯಸಿದೆಡೆಗೆ ಮನಸ್ಸನ್ನು ಬಿಡಲೊಪ್ಪಬೇಡಿ, ಮನೋ ನಿಗ್ರಹ ಮಾಡಿಕೊಂಡು ಅರಿವಿನ ಮಾರ್ಗದತ್ತ ನಡೆದು, ಷಡಕ್ಷರಿ ಮಂತ್ರವನ್ನು ಜಪಿಸುತ್ತಾ, ಗುರು, ಲಿಂಗ, ಜಂಗಮ, ದಾಸೋಹಗಳ ಸೇವೆಯಲ್ಲಿ ತೊಡಗಿಕೊಳ್ಳಿ, ಇವುಗಳನ್ನು ಬಿಟ್ಟು ದುರ್ವಿಚಾರ ಮಾಡುತ್ತಾ, ದುಸ್ವಪ್ನಗಳನ್ನು ಕಾಣುತ್ತಾ, ಮನಸ್ಸನ್ನು ವಿಕಾರಗೊಳಿಸಿಕೊಂಡು ದುರ್ಮಾರ್ಗದತ್ತ ಸಾಗಿದರೆ ಕೊನೆಗೆ ದುರ್ಗತಿಯೇ ಉಂಟಾಗುತ್ತದೆ, ಇದರ ಬಗ್ಗೆ ಜೋಕೆಯಿಂದಿರಿ ಎಂದು ಈ ವಚನದಲ್ಲಿ ಎಚ್ಚರಿಕೆಯನ್ನು ಕೊಡುತ್ತಾನೆ.


ನಾಲ್ಕು ಜಾವಕ್ಕೆ ಒಂದು ಜಾವ ಹಸಿವು ತೃಷೆ ಮಿಕ್ಕಾದ ವಿಷಯದೆಣಿಕೆಗೆ ಸಂದಿತ್ತು. ಮತ್ತೊಂದು ಜಾವ ನಿದ್ರೆ, ಸ್ವಪ್ನ, ಕಳವಳ ನಾನಾ ಅವಸ್ಥೆ ಬಿಟ್ಟಿತ್ತು. ಮತ್ತೊಂದು ಜಾವ
ಅಂಗನೆಯರ ಕುಚ, ಅಧರಚುಂಬನ
ಮಿಕ್ಕಾದ ಬಹುವಿಧ ಅಂಗವಿಕಾರದಲ್ಲಿ ಸತ್ತಿತ್ತು.
ಇನ್ನೊಂದು ಜಾವವಿದೆ:‌ ನೀವು ನೀವು ಬಂದ ಬಟ್ಟೆಯ ತಿಳಿದು‌ ಮುಂದಳ ಆಗು ಚೇಗೆಯನರಿದು, ನಿತ್ಯನೇಮವ ವಿಸ್ತರಿಸಿಕೊಂಡು‌ ನಿಮ್ಮ ಶಿವಾರ್ಚನೆ, ಪೂಜೆ, ಪ್ರಣವದ ಪ್ರಮಥಾಳಿ, ಭಾವದ ಬಲಿಕೆ, ವಿರಕ್ತಿಯ ಬಿಡುಗಡೆ, ಸದ್ಭಕ್ತಿಯ ಮುಕ್ತಿ,
ಇಂತೀ ಕೃತ್ಯದ ಕಟ್ಟ ತಪ್ಪದಿರಿ.
ಅರುಣೋದಯಕ್ಕೆ ಒಡಲಾಗದ ಮುನ್ನವೆ
ಖಗವಿಹಂಗಾದಿಗಳ ಪಶುಮೃಗನರಕುಲ ದುಲುಹಿಂಗೆ ಮುನ್ನವೆಧ್ಯಾನಾರೂಢರಾಗಿ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರ ಲಿಂಗವ ಕೊಡಬಲ್ಲಡೆ.

ಸಂಸಾರದ ಜಂಜಡದಲ್ಲಿ ಸಿಲುಕಿದ ವ್ಯಕ್ತಿ ದಿನ ಇಪ್ಪತ್ತನಾಲ್ಕೂ ಘಂಟೆಯೂ ತನ್ನ ಅಗತ್ಯಗಳನ್ನು, ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದರಲ್ಲಿಯೇ ಸಾಗಿರುತ್ತಾನೆ, ಅದರಲ್ಲಿ ಅಲಗಪ ಸಮಯವನ್ನಾದರೂ ಶಿವಾರ್ಚನೆ, ಭಕ್ತಿಯ ಪೂಜೆ, ಹಾಗೂ ಆಧ್ಯಾತ್ಮ ಚಿಂತನೆಗೆ ಮೀಸಲಿಡಬೇಕು, ಹಾಗದಲ್ಲಿ ಮಾತ್ರವೇ ಆ ವ್ಯಕ್ತಿಯು ಭವಬಂಧನದಿಂದ ಹೊರಗಡೆ ಸ್ವತಂತ್ರ್ಯವಾಗಿ ವಿಹರಿಸುವನು ಎಂಬ ಸೂಕ್ತ ಎಚ್ಚರಿಕೆಯನ್ನು ನೀಡುತ್ತಾನೆ.

ಎಚ್ಚರಿಕೆ ಕಾಯಕದ ಮುಕ್ತಿನಾಥಯ್ಯ ನು ಒಬ್ಬ ಶ್ರೇಷ್ಟ ವಚನಕಾರ, ಪಂಡಿತ, ದಿವ್ಯಜ್ಞಾನಿಯೂ ಹೌದು, ಈ ಎಲ್ಲ ದೃಷ್ಟಿಕೋನದಿಂದ ನೋಡಿದರೂ ಸಹ ಈತನು ಎಲ್ಲಾ ವಚನಗಳಲ್ಲಿಯೂ ಆಧ್ಯಾತ್ಮದ ಬಗ್ಗೆ ಎಚ್ಚರಿಕೆ ಕೊಟ್ಟಿರುವುದು ಸ್ವಷ್ಠವಾಗುತ್ತದೆ. ಹಾಗಾಗಿ ಎಚ್ಚರಿಕೆ ಕೊಡಬೇಕಾದಲ್ಲಿ ಅವನಲ್ಲಿ ಜ್ಞಾನ ತುಂಬಿದೆ ಎಂದು ನಮಗೆ ಅರ್ಥವಾಗುತ್ತದೆ.

✍️ ರವೀ ಚಿಕ್ಕನಾಯಕನ ಹಳ್ಳಿ

Leave a Reply

Your email address will not be published. Required fields are marked *

error: Content is protected !!