ಪ್ರಾಚೀನ ಬಾಲಿ ತ್ರಿವಿಧ ತತ್ತ್ವ ಮತ್ತು ಅರ್ವಾಚೀನ ಬಸವ ದರ್ಶನ

ಪ್ರಾಚೀನ ಬಾಲಿ ತ್ರಿವಿಧ ತತ್ತ್ವ

ಮತ್ತು ಅರ್ವಾಚೀನ ಬಸವ ದರ್ಶನ

 • ರಂಜಾನ್ ದರ್ಗಾ

ಈಶಾನ್ಯ ಏಷ್ಯಾದ ಬಹುದೊಡ್ಡ ದ್ವೀಪದೇಶವಾಗಿರುವ ಇಂಡೋನೇಷ್ಯಾ ಇಂಡಿಯನ್ ಮತ್ತು ಪ್ಯಾಸಿಫಿಕ್ ಸಮುದ್ರಗಳ ಮಧ್ಯೆ ಇದೆ. ಇದು 17,500 ದ್ವೀಪಗಳನ್ನು ಒಳಗೊಂಡಿದೆ. ಆದರೆ 7000ಕ್ಕೂ ಹೆಚ್ಚಿನ ದ್ವೀಪಗಳಲ್ಲಿ ಜನವಸತಿ ಇಲ್ಲ! ಸುಮಾತ್ರಾ, ಜಾವಾ, ಬೊರ್ನಿಯೊ, ಸೆಲೆಬೆಸ್, ಬಾಲಿ ಮುಂತಾದ ಪ್ರಮುಖ ದ್ವೀಪಗಳನ್ನೊಳಗೊಂಡ ಇಂಡೋನೇಷ್ಯಾ ಭೂಮಧ್ಯರೇಖೆಗೆ ಹೊಂದಿಕೊಂಡಿದ್ದು ಭೂಕಂಪನ ಮತ್ತು ಜ್ವಾಲಾಮುಖಿ ಪರ್ವತಗಳಿಂದ ಕೂಡಿದೆ. ಒಟ್ಟು 19,10,931 ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ. ಪೂರ್ವದಿಂದ ಪಶ್ಚಿಮಕ್ಕೆ 5100 ಕಿ.ಮೀ. ಉದ್ದವಿದ್ದು, ಉತ್ತರದಿಂದ ದಕ್ಷಿಣಕ್ಕೆ 1800 ಕಿ.ಮೀ. ಅಗಲವಿದೆ.

ಇಂಡೋನೇಷ್ಯಾ ರಾಜಧಾನಿ ಜಕಾರ್ತಾ. ಇಲ್ಲಿ ಅಧ್ಯಕ್ಷೀಯ ವ್ಯವಸ್ಥೆಯ ಪ್ರಜಾಪ್ರಭುತ್ವವಿದೆ. ಈ ದೇಶದಲ್ಲಿ 700ಕ್ಕೂ ಹೆಚ್ಚು ಭಾಷೆಗಳಿವೆ. ಇಂಡೋನೇಷಿಯನ್ ಭಾಷೆಯು ಅಧಿಕೃತ ಭಾಷೆಯಾಗಿದೆ. 245 ಅನಧಿಕೃತ ಧರ್ಮಗಳಿದ್ದು ಇಸ್ಲಾಂ, ಕ್ರೈಸ್ತ, ಹಿಂದು, ಬೌದ್ಧ ಮತ್ತು ಕನ್‍ಫ್ಯೂಸಿಯನಿಸಂ ಧರ್ಮಗಳು ಅಧಿಕೃತ ಧರ್ಮಗಳಾಗಿವೆ. ದೇಶದ ಜನಸಂಖ್ಯೆ 26,71,62,000. ಪ್ರತಿಶತ 97.2 ರಷ್ಟು ಪುರುಷರು ಮತ್ತು ಪ್ರತಿಶತ 93.6ರಷ್ಟು ಮಹಿಳೆಯರು ಸಾಕ್ಷರರಾಗಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ 87.2% ಮುಸ್ಲಿಮರು, 2.9% ರೋಮನ್ ಕ್ಯಾಥೊಲಿಕ್, 1.7% ಹಿಂದುಗಳು ಮತ್ತು ಪ್ರೊಟೆಸ್ಟಂಟ್ ಕಿಶ್ಚಿಯನ್, ಬೌದ್ಧರು, ಕನ್‍ಫ್ಯೂಸಿಯನಿಸಂ ಮುಂತಾದ ಧರ್ಮಗಳಿಗೆ ಹಾಗೂ ಸ್ಥಳೀಯ ಇತರೆ ಧರ್ಮಗಳ ಒಟ್ಟು ಜನಸಂಖ್ಯೆ 8.2% ಇದೆ.


ಇಲ್ಲಿನ ಕರೆನ್ಸಿಗೆ ರುಪಯ್ಯಾ ಎಂದು ಕರೆಯುವರು. ವಿನಿಮಯದಲ್ಲಿ ಒಂದು ಅಮೆರಿಕನ್ ಡಾಲರ್‍ಗೆ 14,079.994 ಇಂಡೋನೇಷಿಯನ್ ರುಪಯ್ಯಾ ಸಿಗುವವು. ಭಾರತದ ಒಂದು ರೂಪಾಯಿಗೆ 200 ರುಪಯ್ಯಾ. ಇದರ ನೆರೆ ದೇಶಗಳಲ್ಲಿ ಮಲೇಷಿಯಾ ಮತ್ತು ಸಿಂಗಪುರ ಪ್ರಸಿದ್ಧವಾಗಿವೆ.

ಇಂಡೋನೇಷ್ಯಾಗೆ ಮೊದಲು ಡಚ್ ಈಸ್ಟ್ ಇಂಡೀಸ್ ಅಥವಾ ನೆದರ್‍ಲ್ಯಾಂಡ್ಸ್ ಈಸ್ಟ್ ಇಂಡೀಸ್ ಎಂದು ಕರೆಯುತ್ತಿದ್ದರು. 1884ರಲ್ಲಿ ಜರ್ಮನ್ ಭೂಗೋಳ ವಿಜ್ಞಾನಿಯೊಬ್ಬ ಈ ಪ್ರದೇಶಕ್ಕೆ ಭೇಟಿ ನೀಡಿದಾಗ ‘ಇಂಡೋನೇಷ್ಯಾ’ ಎಂದು ಕರೆದ. ಇಂಡೋನೇಷ್ಯಾ 1945ರಲ್ಲಿ ನೆದರ್‍ಲ್ಯಾಂಡ್ಸ್‍ನಿಂದ ಬಿಡುಗಡೆ ಹೊಂದಿತು. ಆದರೆ 1949ರ ವರೆಗೆ ಹೋರಾಟ ಮುಂದುವರಿಯಿತು. ಕೊನೆಗೆ ಇಂಡೋನೇಷ್ಯಾದ ಸಾರ್ವಭೌಮತ್ವವನ್ನು ಡಚ್ಚರು ಅಧಿಕೃತವಾಗಿ ಮಾನ್ಯ ಮಾಡಿದರು. ನ್ಯೂ ಗಿನಿಯಾ ಇಂಡೋನೇಷ್ಯಾದ ಭಾಗವೆಂದು ವಿಶ್ವಸಂಸ್ಥೆ 1969ರಲ್ಲಿ ಒಪ್ಪಿಕೊಂಡಿತು. ಪೋರ್ತುಗೀಸ್ ವಸಾಹತುವಾಗಿದ್ದ ಈಸ್ಟ್ ತಿಮೋರ್ 1976ರಲ್ಲಿ ಇಂಡೋನೇಷ್ಯಾಗೆ ಸೇರಿತು. 1999ರಲ್ಲಿ ವಿಶ್ವಸಂಸ್ಥೆ ಏರ್ಪಡಿಸಿದ ಜನಮತಗಣನೆಯಿಂದಾಗಿ ಈಸ್ಟ್ ತಿಮೋರ್ ಸ್ವತಂತ್ರವಾಗಿ 2002ರಲ್ಲಿ ಸಾರ್ವಭೌಮ ರಾಷ್ಟ್ರವಾಯಿತು. ಇಷ್ಟೆಲ್ಲ ವ್ಯತ್ಯಾಸಗಳ ನಂತರ ಇಂದಿನ ಇಂಡೋನೇಷ್ಯಾ ರೂಪುಗೊಂಡಿದೆ.

ಬಾಲಿ ದ್ವೀಪ

5780 ಚದರ ಕಿ.ಮೀ. ವಿಸ್ತೀರ್ಣವುಳ್ಳ ಬಾಲಿ ದ್ವೀಪವು ಇಂಡೋನೇಷ್ಯಾ ಗಣರಾಜ್ಯದ ಒಂದು ಪ್ರಾಂತವಾಗಿದೆ. 145 ಕಿ.ಮೀ ಉದ್ದ ಹಾಗೂ 80 ಕಿ.ಮೀ. ಗಳಷ್ಟು ಅಗಲವಿದೆ. 1512ರಲ್ಲಿ ಪೋರ್ತುಗೀಜರು ಈ ಪ್ರದೇಶಕ್ಕೆ ಬಂದಾಗ ಬಾಲಿದ್ವೀಪದ ನಕಾಶೆಯನ್ನು ತಯಾರಿಸಿದರು.


ವಿಶ್ವದಲ್ಲಿ ಅತಿ ಹೆಚ್ಚು ಮುಸ್ಲಿಮರಿರುವ ದೇಶವೆಂದರೆ ಇಂಡೋನೇಷ್ಯಾ. ಇಂಡೋನೇಷ್ಯಾದಲ್ಲಿ ಅತಿಹೆಚ್ಚು ಹಿಂದುಗಳಿರುವ ಪ್ರಾಂತವೆಂದರೆ ಬಾಲಿ. ಬಾಲಿ ಪ್ರಾಂತದ ರಾಜಧಾನಿಯ ಹೆಸರು ಡೆನ್ಪಸಾರ್. ಬಾಲಿ ದ್ವೀಪದ ಒಟ್ಟು ಜನಸಂಖ್ಯೆ ಅಂದಾಜು 45 ಲಕ್ಷ. 83.5% ಹಿಂದುಗಳು, 13.5% ಮುಸ್ಲಿಮರು, 2.5% ಕ್ರೈಸ್ತರು ಮತ್ತು 0.5% ಬೌದ್ಧರು ಈ ದ್ವೀಪದಲ್ಲಿ ವಾಸವಾಗಿದ್ದಾರೆ.

ವಿಶ್ವಪ್ರಸಿದ್ಧ ಪ್ರವಾಸಿ ಕೇಂದ್ರವಾದ ಬಾಲಿಗೆ ‘ವಿಶ್ವದ ಮುಂಜಾವು’ ಎಂದು ಕರೆಯುತ್ತಾರೆ. ಭೂಮಿಯ ಮೇಲೆ ಸೂರ್ಯನ ಮೊದಲ ಕಿರಣಗಳು ಬೀಳುವ ಪ್ರದೇಶವಿದು. ಇದಕ್ಕೆ ‘ಪ್ರೇಮದ್ವೀಪ’, ‘ಶಾಂತಿದ್ವೀಪ’, ‘ದೇವತೆಗಳ ದ್ವೀಪ’ ಮತ್ತು ‘ಹಿಂದುಗಳ ದ್ವೀಪ’ ಎಂದೂ ಕರೆಯುವರು.
ಈ ದ್ವೀಪದ ಶೇಕಡಾ 80ರಷ್ಟು ಆರ್ಥಿಕ ವ್ಯವಸ್ಥೆ ಪ್ರವಾಸೋದ್ಯಮದ ಮೇಲೆ ನಿಂತಿದೆ. ಉಳಿದ ಆರ್ಥಿಕ ವ್ಯವಸ್ಥೆ ಮುಖ್ಯವಾಗಿ ಕೃಷಿಯ ಮೇಲೆ ನಿಂತಿದೆ. ಸುತ್ತಲಿನ ಸಮುದ್ರದಲ್ಲಿ ಹವಳದ ದಿಬ್ಬಗಳಿವೆ. ಬಾಲಿಯಲ್ಲಿ 1500ಕ್ಕೂ ಹೆಚ್ಚು ದೇವಸ್ಥಾನಗಳಿವೆ. ಮನೆಗೊಂದರಂತೆ ಪುಟ್ಟ ದೇವಸ್ಥಾನಗಳೂ ಇವೆ! ಇಲ್ಲಿಯ ಜನ ಧರ್ಮಭೀರುಗಳು, ಪರಧರ್ಮಗಳನ್ನು ಗೌರವಿಸುವವರು ಮತ್ತು ಶಾಂತಿಪ್ರಿಯರು.

‘ತಮ್ಮೊಳಗೆ ಮತ್ತು ನಿಸರ್ಗದಲ್ಲಿ ಶಾಂತಿಯನ್ನು ಬಯಸುವ ಸೌಂದರ್ಯೋಪಾಸಕರ ಮನಮೋಹಕ ತಾಣವಿದು’ ಎಂದು ಪಾಶ್ಚಾತ್ಯರು ಬಾಲಿ ದ್ವೀಪವನ್ನು ಕೊಂಡಾಡಿದ್ದಾರೆ. ಬಾಲಿದ್ವೀಪ ಆಕರ್ಷಕ ಮಂದಿರಗಳಿಂದ, ನೂರಾರು ನದಿಗಳಿಂದ, ಭತ್ತದ ಗದ್ದೆಗಳಿಂದ, ಕಾಫಿ, ತೆಂಗು ಮುಂತಾದ ತೋಟಗಳಿಂದ, ಜಲಪಾತದಿಂದ, ಕಪ್ಪು ಮತ್ತು ಬಿಳಿ ಮಳಲಿನ ಆಕರ್ಷಕ ಸಮುದ್ರತೀರಗಳಿಂದ, ನಿತ್ಯ ಹರಿದ್ವರ್ಣದ ಬೆಟ್ಟದ ಸಾಲುಗಳಿಂದ ಮತ್ತು ಜ್ವಾಲಾಮುಖಿ ಪರ್ವತಗಳಿಂದ ಹಾಗೂ ಮಾನವೀಯ ಸ್ಪಂದನದಿಂದ ಕೂಡಿದ ಘನತೆಯುಳ್ಳ ಜನಸಮುದಾಯದಿಂದ ಕಂಗೊಳಿಸುತ್ತಿದೆ.

ಜಗತ್ತಿನಲ್ಲೇ ವಿಶಿಷ್ಟವಾದ ಮತ್ತು 2000 ವರ್ಷಗಳಷ್ಟು ಹಳೆಯದಾದ ಸುಬಾಕ್ ನೀರಾವರಿ ಯೋಜನೆ ಮೂಲಕ ವಿದ್ಯುತ್ತಿನ ಸಹಾಯವಿಲ್ಲದೆ ಭತ್ತದ ಗದ್ದೆಗಳಿಗೆ ನೀರುಣಿಸುವ ಸಂಕೀರ್ಣ ವ್ಯವಸ್ಥೆಯನ್ನು ಅವರು ಇಂದಿಗೂ ಹೊಂದಿದ್ದಾರೆ. ಬೆಟ್ಟದ ಇಳಿಜಾರುಗಳಲ್ಲಿ ಭತ್ತದ ಗದ್ದೆಗಳು ನಳನಳಿಸುತ್ತಿರುತ್ತವೆ.

ಬಾಲಿಯಲ್ಲಿಯೂ ಕಳೆದ ಎರಡು ಸಾವಿರ ವರ್ಷಗಳಿಂದ ವರ್ಣ ವ್ಯವಸ್ಥೆ ಇದೆ. ಆದರೆ ಅಸ್ಪøಶ್ಯತೆ ಇಲ್ಲ, ಹೊಲಗೇರಿ, ಮಾದಿಗಗೇರಿಗಳಿಲ್ಲ. ಈಗ ಅಲ್ಲಿ ಜಾತೀಯತೆಗೆ ಬೆಲೆ ಇಲ್ಲ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ವರ್ಣಗಳಿದ್ದರೂ ದೇವಸ್ಥಾನದ ಪೂಜಾರಿಗಳಲ್ಲಿ ಹೆಚ್ಚಿನವರು ಶೂದ್ರರೇ ಆಗಿದ್ದಾರೆ. ಅವರು ಪೂಜೆ ಪ್ರಾರ್ಥನೆಗಳೊಂದಿಗೆ ವೇದಪಠಣವನ್ನೂ ಮಾಡುತ್ತಾರೆ. ದೇವಸ್ಥಾನದ ವಿಧಿವಿಧಾನಗಳನ್ನು ಬಲ್ಲ ಯಾವುದೇ ವರ್ಣದವರು ಅಲ್ಲಿ ಗರ್ಭಗುಡಿಯ ಉಸ್ತುವಾರಿಯನ್ನೂ ವಹಿಸಿಕೊಳ್ಳಬಹುದು. ಬಾಲಿಯಲ್ಲಿ ಒಬ್ಬ ವ್ಯಕ್ತಿ ಎರಡು ಧರ್ಮಗಳ ಅನುಯಾಯಿಯಾಗಿ ಜೀವನ ಸಾಗಿಸಬಹುದು. ಹಿಂದೂ ಧರ್ಮವನ್ನು ಮತ್ತು ಕ್ರೈಸ್ತಧರ್ಮವನ್ನು ಏಕಕಾಲಕ್ಕೆ ಪಾಲಿಸುವವರೂ ಬಾಲಿಯಲ್ಲಿ ಇದ್ದಾರೆ!

ತ್ರಿ ಹಿತ ಕರಣ

ಅವರ ಆನಂದಸಂಸ್ಕøತಿ “ತ್ರಿ ಹಿತ ಕರಣ” ಎಂಬ ತ್ರಿವಿಧ ತತ್ತ್ವದ ಮೇಲೆ ನಿಂತಿದೆ. ಪರಂಪರಾಗತವಾಗಿ ಅವರು ಈ ತತ್ತ್ವಗಳನ್ನು ಪಾಲಿಸುತ್ತ ಬಂದಿದ್ದಾರೆ. ‘ದೇವರು, ಸಮಾಜ ಮತ್ತು ನಿಸರ್ಗದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದಾಗ ಮಾತ್ರ ಮಾನವ ಆನಂದದಿಂದ ಬಾಳಬಲ್ಲ’ ಎಂಬ ತತ್ತ್ವವನ್ನು ಅವರು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡ ಕಾರಣ ಸಂತೃಪ್ತ ಜೀವನವನ್ನು ಸಾಗಿಸುತ್ತಾರೆ. ಅವರ ದೃಷ್ಟಿಯಲ್ಲಿ ದೇವರು, ಸಮಾಜ ಮತ್ತು ನಿಸರ್ಗ ಜಗನ್ನಿಯಾಮಕ ಶಕ್ತಿಯ ವಿವಿಧ ರೂಪಗಳಾಗಿದ್ದು ಆಂತರ್ಯದಲ್ಲಿ ಒಂದೇ ಆಗಿವೆ. ಇಂಥ ಚಿಂತನಾಕ್ರಮದಲ್ಲಿ ‘ತಾನು ಎಲ್ಲರವನು ಮತ್ತು ಎಲ್ಲರೂ ತನ್ನವರು’ ಎಂಬ ಭಾವ ಮೂಡುವುದು ಸಹಜವಾಗಿದೆ.

ಅವಶ್ಯಕತೆಗಳನ್ನು ಈಡೇರಿಸುವುದರ ಕಡೆಗೆ ಅವರ ಲಕ್ಷ್ಯವಿದೆ ಹೊರತಾಗಿ ದುರಾಶೆಯ ಕಡೆಗೆ ಇಲ್ಲ. ಅಲ್ಲಿನ ಬಡವರು ಇಲ್ಲಿನ ಶ್ರೀಮಂತರಿಗಿಂತಲೂ ಹೆಚ್ಚು ನೆಮ್ಮದಿಯಿಂದ ಇದ್ದಾರೆ! ಈ ಎಲ್ಲ ಕಾರಣಗಳಿಂದಾಗಿ ವಿಶ್ವಸಂಸ್ಥೆಯ ಯುನೆಸ್ಕೊ ಈ ದ್ವೀಪವನ್ನು ‘ವಿಶ್ವ ಪರಂಪರೆಯ ತಾಣ’ ಎಂದು ಗುರುತಿಸಿದೆ.


ಅವರ ನೆಮ್ಮದಿಗೆ ಕಾರಣವಾಗುವ ಮೂರು ಹಿತಗಳ ‘ತ್ರಿ ಹಿತ ಕರಣ’ಕ್ಕೂ ಬಸವದರ್ಶನಕ್ಕೂ ಬಹಳ ಸಾಮ್ಯವಿದೆ. ‘ದೇವರು, ಸಮಾಜ ಮತ್ತು ನಿಸರ್ಗ’ ಎಂಬ ನೆಮ್ಮದಿಗೆ ಕಾರಣವಾಗುವ ಮೂರು ಹಿತಕಾರಣಿಗಳು ಬಸವಣ್ಣನವರ ‘ಗುರು ಲಿಂಗ ಜಂಗಮ’ ಎಂಬ ತ್ರಿವಿಧ ದಾಸೋಹದಲ್ಲಿನ ಜಂಗಮದಾಸೋಹ ಚಿಂತನೆಯಲ್ಲೇ ಅಡಕವಾಗಿವೆ.

ಜಂಗಮಕ್ಕೆ ಅಳಿವಿಲ್ಲ. ಅದಕ್ಕೆ ಅಳಿವಿಲ್ಲದ ಕಾರಣ ಅದುವೇ ದೇವರು. ಜಂಗಮ ಎಂದರೆ ಚೈತನ್ಯ, ಜಂಗಮ ಎಂದರೆ ಚಲನಶೀಲವಾದುದು, ಜಂಗಮ ಎಂದರೆ ಸಮಾಜ. ಜಂಗಮ ಎಂದರೆ ಜೀವಜಾಲದಿಂದ ಕೂಡಿದ ನಿಸರ್ಗ. ಜಂಗಮ ಎಂದರೆ ಸೂರ್ಯ, ಚಂದ್ರ, ತಾರೆ ಮತ್ತು ಪೃಥ್ವಿ ಮುಂತಾದ ಗ್ರಹಗಳಿಂದ ಕೂಡಿದ ವಿಶ್ವ. ಜಂಗಮ ಎಂದರೆ ಶರಣತತ್ತ್ವ ಪ್ರಸಾರ ಮಾಡುವವರು. ಜಂಗಮ ಎಂದರೆ ಜಾತಿಜಂಗಮ. (ಜಾತಿಜಂಗಮ ಎಂಬುದು ಬಸವಧರ್ಮಕ್ಕೆ ವಿರುದ್ಧವಾದುದು.) ಬಸವಣ್ಣನವರ ಜಂಗಮಪ್ರಜ್ಞೆಯಲ್ಲಿ ಬಾಲಿ ಸಂಸ್ಕøತಿಯ ‘ತ್ರಿ ಹಿತ ಕರಣ’ದ ಎಲ್ಲ ಅಂಶಗಳೂ ಇವೆ.

ಲಿಂಗಾಯತ ಧರ್ಮವನ್ನು ಲಿಂಗವಂತಧರ್ಮ, ಬಸವಧರ್ಮ, ಶರಣಧರ್ಮ, ಕಾಯಕಧರ್ಮ ಮುಂತಾದ ಹೆಸರುಗಳಿಂದ ಕರೆಯಲಾಗುವುದು.

ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ ಎಂಬುವು ಅಷ್ಟಾವರಣಗಳು. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂಬುವು ಷಟ್‍ಸ್ಥಲಗಳು. ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರ ಎಂಬುವು ಪಂಚ ಆಚಾರ (ಪಂಚಾಚಾರ)ಗಳು. ಇವು ಬಸವಧರ್ಮದ ಆಧಾರಸ್ತಂಭಗಳಾಗಿವೆ.ಮನಸ್ಸನ್ನು ಸಂಸ್ಕರಿಸುವುದಕ್ಕಾಗಿ ಅಷ್ಟಾವರಣಗಳಿವೆ. ಪರಮಾತ್ಮಮುಖಿ ಮತ್ತು ಸಮಾಜಮುಖಿ ಮನಸ್ಸಿನ ಬೆಳವಣಿಗಾಗಿ ಷಟ್‍ಸ್ಥಲಗಳಿವೆ. ಹೀಗೆ ಬೆಳವಣಿಗೆ ಹೊಂದಿ ಅರಿವಿನಿಂದ ತುಂಬಿದ ಮನಸ್ಸನ್ನು ಲೋಕಹಿತದ ಕ್ರಿಯೆಗೆ ಇಳಿಸುವುದಕ್ಕಾಗಿ ಪಂಚಾಚಾರಗಳಿವೆ.

ಪಂಚಾಚಾರಗಳಲ್ಲಿನ ಲಿಂಗಾಚಾರವು ಏಕದೇವೋಪಾಸನೆಯನ್ನು ಪ್ರತಿಪಾದಿಸುತ್ತದೆ. ಸದಾಚಾರವು ಸತ್ಯಶುದ್ಧ ಕಾಯಕ ಮತ್ತು ದಾಸೋಹ ಭಾವದೊಂದಿಗೆ ಸಮಾಜಸೇವೆಯನ್ನು ಬಯಸುತ್ತದೆ. ಶಿವಾಚಾರವು ಜಾತಿ, ವರ್ಣ, ಲಿಂಗ ಮತ್ತು ವರ್ಗಭೇದಗಳನ್ನು ತಿರಸ್ಕರಿಸುತ್ತದೆ. ಗಣಾಚಾರವು ಶರಣತತ್ತ್ವ ರಕ್ಷಣೆ ಮತ್ತು ಪ್ರಸಾರದ ಪ್ರಜ್ಞೆ ಮೂಡಿಸುತ್ತದೆ. ಭೃತ್ಯಾಚಾರವು ಅಹಂಕಾರ ನಿರ್ನಾಮ ಮಾಡುತ್ತದೆ.

ತ್ರಿವಿಧ ದಾಸೋಹವೆಂದರೆ ಗುರು, ಲಿಂಗ ಮತ್ತು ಜಂಗಮದ ಸೇವೆ ಮಾಡುವುದು. ಅರಿವೆಂಬ ಗುರು, ತತ್ತ್ವವೆಂಬ ಲಿಂಗ ಮತ್ತು ಸಮಾಜವೆಂಬ ಜಂಗಮಕ್ಕೆ ದಾಸೋಹ ಭಾವದಿಂದ ಸೇವೆ ಸಲ್ಲಿಸಬೇಕಾಗುತ್ತದೆ. ಅಂದರೆ ಜ್ಞಾನಕ್ಕಾಗಿ ತತ್ತ್ವಕ್ಕಾಗಿ ಮತ್ತು ಸಮಾಜಕ್ಕಾಗಿ ತನುಮನಧನಗಳನ್ನು ಸವೆಸಬೇಕಾಗುತ್ತದೆ.


ಬದುಕನ್ನು ಅರ್ಥಪೂರ್ಣವಾಗಿಸುವಲ್ಲಿ ಕಾಯಕ, ಪ್ರಸಾದ ಮತ್ತು ದಾಸೋಹಗಳ ಮಹತ್ವ ಅಧಿಕವಾಗಿದೆ. ಸತ್ಯಶುದ್ಧ ಕಾಯಕ ಮಾಡಬೇಕು. ಕಾಯಕದಿಂದ ಬಂದುದನ್ನು ದೇವರ ಪ್ರಸಾದ ಎಂದು ಭಾವಿಸಬೇಕು. ನಂತರ ಶ್ರದ್ಧೆಯಿಂದ ಸಾಧ್ಯವಾದಷ್ಟು ದಾಸೋಹ ರೂಪದಲ್ಲಿ ಸಾಮಾಜಿಕ ವಿತರಣೆ ಮಾಡಬೇಕು. ಇದುವೇ ಬಸವಧರ್ಮದ ತಿರುಳು.

“ಜೀವಜಾಲದಲ್ಲಿದೆ ಚರಾಚರವೆಲ್ಲ” ಎಂದು ಬಸವಣ್ಣನವರು ಹೇಳಿದ್ದಾರೆ. ನಾವು ಮತ್ತು ನಮ್ಮೊಳಗಿನ ದೇವರು, ನಮ್ಮ ಸಮಾಜ ಮತ್ತು ಇಡೀ ನಿಸರ್ಗ ಈ ಜೀವಜಾಲದಲ್ಲಿವೆ. ಅಂದರೆ, ‘ತ್ರಿ ಹಿತ ಕರಣ’ಕ್ಕೆ ಕಾರಣವಾಗುವ ನಮ್ಮೊಳಗಿನ ದೇವರು, ನಮ್ಮ ಮುಂದಿರುವ ಸಮಾಜ ಮತ್ತು ಇಡೀ ನಿಸರ್ಗ ಬಸವಣ್ಣನವರ ಪರಿಕಲ್ಪನೆಯ ಜೀವಜಾಲದಲ್ಲಿವೆ.

“ಇನ್ನು ಜಂಗಮವೇ ಲಿಂಗವೆಂದು ನಂಬಿದೆ” ಎಂದು ಬಸವಣ್ಣನವರು ತಿಳಿಸಿದ್ದಾರೆ. ಮಾನವರೊಳಗೆ, ಸಮಾಜದೊಳಗೆ ಮತ್ತು ನಿಸರ್ಗದೊಳಗೆ ಅವರು ದೇವರನ್ನು ಕಂಡಿದ್ದಾರೆ. ಜೀವಾತ್ಮ, ಲೋಕಾತ್ಮ ಮತ್ತು ಪರಮಾತ್ಮನ ಮಧ್ಯದ ಘನ ಸಂಬಂಧವನ್ನು ಬಸವದರ್ಶನ ಪ್ರತಿಪಾದಿಸುತ್ತದೆ. ಜೀವಾತ್ಮನು (ವ್ಯಕ್ತಿ) ಲೋಕಾತ್ಮನ (ಸಕಲ ಜೀವಾತ್ಮರ) ಜೊತೆ ಒಂದಾದಾಗ ಮಾತ್ರ ತನ್ನೊಳಗಿನ ಪರಮಾತ್ಮನ ಜೊತೆ ಐಕ್ಯಭಾವವನ್ನು ಹೊಂದಲು ಸಾಧ್ಯ. ಇದುವೆ ಲಿಂಗಾಂಗಸಾಮರಸ್ಯದ ರಹಸ್ಯ. ತ್ರಿ ಹಿತ ಕರಣದ ರಹಸ್ಯ ಕೂಡ ಇದೇ ಆಗಿದೆ. ಒಬ್ಬ ವ್ಯಕ್ತಿ ಸ್ವಾವಲಂಬಿಯಾಗಬೇಕು, ತನ್ನ ಸಮಾಜದ ಹಿತ ಕಾಪಾಡಬೇಕು ಮತ್ತು ನಿಸರ್ಗದ ರಕ್ಷಣೆ ಮಾಡಬೇಕು ಎಂಬುದೇ ಬಾಲಿಯ ‘ತ್ರಿ ಹಿತ ಕರಣ’ ತತ್ತ್ವ.

12ನೇ ಶತಮಾನದಲ್ಲೇ ಬಸವಣ್ಣನವರು ಮರಗಿಡಬಳ್ಳಿಗಳಲ್ಲಿ ಕೂಡ ಜೀವವನ್ನು ಗುರುತಿಸಿದ್ದಾರೆ. ಎಲ್ಲದರ ಅರಿವು ಮೂಡಿಸಿದ ತಮ್ಮೊಳಗಿನ ದೇವರಿಗೆ ಶರಣಾಗಿದ್ದಾರೆ. ‘ಜಂಗಮಲಿಂಗ’ ಎಂದರೆ ಸಮಾಜ ಮತ್ತು ನಿಸರ್ಗದಿಂದ ಕೂಡಿದ ದೇವರು ಎಂದು ತಿಳಿಸಿದ್ದಾರೆ. ಆ ಮೂಲಕ ಸಕಲಜೀವಾತ್ಮರಿಗೆ ಲೇಸನ್ನೇ ಬಯಸಿದ್ದಾರೆ.

ಹೀಗೆ ನಮ್ಮೊಳಗಿನ ದೇವರು, ನಮ್ಮ ಮುಂದಿರುವ ಸಮಾಜ ಹಾಗೂ ನಮ್ಮನ್ನು ಮತ್ತು ನಮ್ಮ ಸಮಾಜವನ್ನು ಸುತ್ತಿರುವ ನಿಸರ್ಗದ ಕುರಿತು ಬಸವಣ್ಣನವರು ತಿಳಿಸಿದ್ದಾರೆ. ಬಾಲಿಯ ಜನಪದರಲ್ಲಿ ಹಾಸುಹೊಕ್ಕಾಗಿರುವ ‘ತ್ರಿ ಹಿತ ಕರಣ’ ದರ್ಶನ ಕೂಡ ಇದನ್ನೇ ಹೇಳುತ್ತದೆ.

ಚೈತನ್ಯಾತ್ಮಕ ಭೌತಿಕವಾದ

ಬಸವಧರ್ಮದ್ದು ‘ವಸ್ತುಚೈತನ್ಯ ಸಿದ್ಧಾಂತ’. ಬಯಲಿನಿಂದ ಇಡೀ ವಿಶ್ವ ರೂಪುತಾಳಿದೆ. “ರೂಪಿಂಗೆ ಕೇಡುಂಟು” ಎಂದು ಅಲ್ಲಮಪ್ರಭುಗಳು ಹೇಳಿದ್ದಾರೆ. ಆದ್ದರಿಂದ ಬಯಲಿನಿಂದ ರೂಪು ತಾಳಿದ ವಿಶ್ವ ಮತ್ತೆ ಬಯಲಾಗುವುದು. ವಿಶ್ವದ ಪ್ರತಿಯೊಂದು ಕಣವೂ ಚೈತನ್ಯದಿಂದ ತುಂಬಿದೆ. ಅಂದರೆ ಚೈತನ್ಯದಿಂದ ನಿರ್ಮಾಣವಾದ ಪ್ರತಿ ಕಣ ಒಂದು ವಸ್ತುವಾಗಿದ್ದು ಅದರೊಳಗೆ ಚೈತನ್ಯವೇ ಇದೆ.

ವಿಶ್ವವೆಂದರೆ ಕಣಗಳ ರಾಶಿ. ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು ಹೀಗೆ ಎಲ್ಲವೂ ಕಣಗಳ ರಾಶಿಯಿಂದಲೇ ಸೃಷ್ಟಿಯಾಗಿವೆ. ಆದರೆ ವಿಶ್ವವನ್ನು ಸೃಷ್ಟಿಸಿದ ಕಣಕ್ಕೂ ಸಾವಿದೆ! ಎಲ್ಲವೂ ಬಯಲಿನಿಂದ ಸೃಷ್ಟಿಯಾಗಿ ಅಸ್ತಿತ್ವದಲ್ಲಿರುತ್ತವೆ. ಕೊನೆಗೆ ತಮ್ಮ ಕಾಲಾನಂತರ ಬಯಲಾಗುತ್ತವೆ. ಹೀಗೆ ಅಣುವಿನಿಂದ ರೂಪುಗೊಂಡ ವಸ್ತುವು ತನ್ನೊಳಗೆ ಚೈತನ್ಯವನ್ನೇ ಇಟ್ಟುಕೊಂಡು ಕೊನೆಗೆ ವಿಶ್ವಚೈತನ್ಯದಲ್ಲಿ ಬಯಲಾಗುವುದು. ಆದರೆ ಚೈತನ್ಯಕ್ಕೆ ಸಾವಿಲ್ಲ. ಚೈತನ್ಯವೇ ದೇವರಾಗಿರುವುದರಿಂದ ಆ ದೇವರೇ ನಮ್ಮೊಳಗೆ, ಸಮಾಜದೊಳಗೆ ಮತ್ತು ಇಡೀ ವಿಶ್ವದೊಳಗೆ ಇರುವುದು. ಆ ಚೈತನ್ಯವೇ ಎಲ್ಲವನ್ನೂ ಒಳಗೊಂಡ ಬಯಲು ಅಥವಾ ಶೂನ್ಯ ಎನಿಸಿಕೊಳ್ಳುವುದು. ನಮ್ಮೊಳಗಿನ ದೇವರು, ನಮ್ಮ ಸಮಾಜ, ನಿಸರ್ಗ ಮತ್ತು ವಿಶ್ವ ಈ ಪ್ರಕಾರವಾಗಿ ಆಂತರ್ಯದಲ್ಲಿ ಒಂದೇ ಆಗಿರುತ್ತವೆ. ನಮ್ಮ ದೇಹವೇ ಅಂಗ; ನಮ್ಮ ಚೈತನ್ಯವೇ ಲಿಂಗ. ವಸ್ತು ಎಂಬುದೇ ಅಂಗ; ಅದರೊಳಗಿನ ಚೈತನ್ಯವೇ ಲಿಂಗ. ಇವುಗಳ ಅವಿನಾಭಾವ ಸಂಬಂಧವೇ ಲಿಂಗಾಂಗಸಾಮರಸ್ಯ. ಈ ಪ್ರಕಾರ ವಸ್ತು ಮತ್ತು ಚೈತನ್ಯದ ಕೂಡಲಸಂಗಮವೇ ಇಡೀ ವಿಶ್ವ! ಇದುವೇ ಬಸವದರ್ಶನ. ಹೀಗೆ ಚೈತನ್ಯಾತ್ಮಕ ಭೌತಿಕವಾದವೇ ಬಸವದರ್ಶನದ ಮೂಲಾಧಾರವಾಗಿದೆ. ನಾವು ನಮ್ಮೊಳಗಿನ ದೇವರ ಜೊತೆ ಐಕ್ಯಭಾವ ಹೊಂದಿದಾಗ ಲಿಂಗಾಂಗಸಾಮರಸ್ಯದ ಅನುಭಾವವಾಗುತ್ತದೆ. ಆಗ ಇಡೀ ವಿಶ್ವವೇ ವಸ್ತು ಮತ್ತು ಚೈತನ್ಯದ ಕೂಡಲಸಂಗಮ ಎಂಬುದರ ಅರಿವಾಗುತ್ತದೆ.

ಶರಣ ಸತಿ; ಲಿಂಗ ಪತಿ

“ಶರಣ ಸತಿ; ಲಿಂಗ ಪತಿ” ಎಂದು ಬಸವಣ್ಣನವರು ಹೇಳುತ್ತಾರೆ. ನಾವು ಮತ್ತು ಕಣ್ಣಿಗೆ ಕಾಣುವ ಎಲ್ಲವೂ ಸತಿ. ನಮ್ಮೊಳಗಿನ ಮತ್ತು ಕಣ್ಣಿಗೆ ಕಾಣುವ ಎಲ್ಲದರೊಳಗಿನ ಚೈತನ್ಯವೇ ಪತಿ. ವಸ್ತು ಮತ್ತು ಚೈತನ್ಯದ ಐಕ್ಯಭಾವದಿಂದಲೇ ಜಗತ್ತು ಚಲನಶೀಲವಾಗಿದೆ. ಇದನ್ನು ತಿಳಿದುಕೊಳ್ಳುವುದೇ ಅರಿವು.
ಬಸವಾದಿ ಶರಣರು ಸತ್ಯದ ಸಾಕ್ಷಾತ್ಕಾರ ಮಾಡಿಸಿ ಬದುಕನ್ನು ಸಹ್ಯಗೊಳಿಸಿದ್ದಾರೆ. ಬಾಲಿಯಲ್ಲಿ ಪರಂಪರಾಗತವಾಗಿ ಬಂದ “ತ್ರಿ ಹಿತ ಕರಣ” ತತ್ತ್ವವು ಬಸವದರ್ಶನಕ್ಕೆ ಸಮೀಪವಾದ ನೆಮ್ಮದಿಯ ಸೂತ್ರವಾಗಿದೆ.

ಬಸವಧರ್ಮವು ನಿಜವಾದ ಅರ್ಥದಲ್ಲಿ ಪರಿಪೂರ್ಣ ನಿಸರ್ಗ ಧರ್ಮವೇ ಆಗಿದೆ. ಏಕೆಂದರೆ ಇದು ನೈಸರ್ಗಿಕ ನಿಯಮಗಳ ಮೇಲೆ ನಿಂತಿದೆ ಹೊರತಾಗಿ ಸ್ವರ್ಗ ನರಕಗಳ ಮೇಲೆ ನಿಂತಿಲ್ಲ. ಕಾಯಕದ ಮೇಲೆ ನಿಂತಿದೆ ಹೊರತಾಗಿ ಕರ್ಮಸಿದ್ಧಾಂತದ ಮೇಲೆ ನಿಂತಿಲ್ಲ. ಪಡೆದದ್ದೆಲ್ಲ ದೇವರದು ಎಂಬ ಪ್ರಸಾದ ಪ್ರಜ್ಞೆಯ ಮೇಲೆ ಅದು ಅಸ್ತಿತ್ವದಲ್ಲಿದೆ. ದಾಸೋಹ ಭಾವದಿಂದ ಜಗತ್ತಿನ ಸಂರಕ್ಷಣೆ ಮಾಡುವ ಸೂತ್ರವನ್ನು ಅದು ಹೇಳಿಕೊಟ್ಟಿದೆ. ಮಾನವರು ಇದರ ಮಹತ್ವವನ್ನು ಅರಿಯದಿದ್ದಾಗ ಮತ್ತು ಅರಿತು ಪಾಲಿಸದೆ ಇದ್ದಾಗ ಸಹಜವಾಗಿಯೆ ದುಃಖಕ್ಕೆ ಈಡಾಗುವರು.

ಅನುಭಾವ ದರ್ಶನ

ಬಸವಣ್ಣನವರು ವೇದ, ವೇದಾಂತ (ಉಪನಿಷತ್) ಪುರಾಣಗಳ ಮೇಲೆ ಪ್ರಭುತ್ವವನ್ನು ಸಾಧಿಸಿದ್ದರು. ತಮ್ಮ ಕಾಲದ ಬೌದ್ಧ, ಜೈನ ಧರ್ಮಗಳನ್ನೂ ಅರಿತಿದ್ದರು. ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶಕ್ತಿವಿಶಿಷ್ಟಾದ್ವೈತ, ಸಿದ್ಧ, ನಾಥ, ಪಾಶುಪಥ, ಲಕುಳೀಶ, ಗಾಣಪತ್ಯ, ಕಾಳಾಮುಖ ಮುಂತಾದ ಮತಗಳ ಸಾರವನ್ನು ಒಟ್ಟಾಗಿಸಿ ತಮ್ಮ ಪ್ರತಿಭೆಯ ರಾಸಾಯನಿಕ ಕ್ರಿಯೆಗೆ ಅಳವಡಿಸಿ ನವನವೀನವಾದ ‘ಅನುಭಾವದರ್ಶನ’ವನ್ನು ಜಗತ್ತಿಗೆ ಕಾಣಿಕೆಯಾಗಿ ನೀಡಿದರು. ಬಸವದರ್ಶನವೆಂದರೆ ಅನುಭಾವದರ್ಶನ. ಇದುವೇ ಬಸವಾದಿ ಶರಣರು ಜಗತ್ತಿಗೆ ಕೊಟ್ಟ ಅನನ್ಯ ಕಾಣಿಕೆ.

ನಾಲ್ಕು ಸಾವಿರ ವರ್ಷಗಳ ಇತಿಹಾಸವುಳ್ಳ ಬಾಲಿದ್ವೀಪ (ವಾಲಿದ್ವೀಪ)ದ ಜನರು ಕೂಡ ಸಹಸ್ರಾರು ವರ್ಷಗಳ ಹಿಂದೆಯೆ ತಮ್ಮ ಬದುಕಿನ ಅನುಭವದ ಮೂಲಕ ಇಂಥದ್ದನ್ನು ಕಂಡುಕೊಂಡಿದ್ದಾರೆ. ಇಲ್ಲಿನ ಪಾಶುಪತ, ಭೈರವ, ಶಿವಸಿದ್ಧಾಂತ, ವೈಷ್ಣವ, ಬೌದ್ಧ, ಬ್ರಹ್ಮ, ಋಷಿ, ಸೌರ ಮತ್ತು ಗಾಣಪತ್ಯ ಮತಗಳ ಅನುಯಾಯಿಗಳು ತಮ್ಮದೇ ಆದ ದೇವರುಗಳನ್ನು ಪೂಜಿಸುತ್ತಾರೆ. ಆದರೆ ಪರಮತಗಳ ಬಗ್ಗೆ ಗೌರವಭಾವ ತಾಳಿದ್ದಾರೆ. ಅಂತೆಯೆ ಅವರು ನಮಗೆ ಆದರ್ಶವಾಗುತ್ತಾರೆ. ಕಳೆದ ಎರಡು ಸಾವಿರ ವರ್ಷಗಳಿಂದ ಭಾರತೀಯ ಮತ್ತು ಚೀನಿ ಸಂಸ್ಕøತಿಯ ಪ್ರಭಾವಕ್ಕೆ ಒಳಗಾಗಿದ್ದರೂ ಎಲ್ಲವನ್ನೂ ಒಂದಾಗಿ ಕಾಣುವ ಉದಾತ್ತ ಭಾವವನ್ನು ಅವರು ಹೊಂದಿದ್ದಾರೆ. ಈ ಎಲ್ಲ ಮತಧರ್ಮಗಳೊಂದಿಗೆ ಇಸ್ಲಾಂ, ಕ್ರೈಸ್ತ ಮತ್ತು ಚೀನಿ ಮೂಲದ ಮತಧರ್ಮಗಳ ಜೊತೆಗೆ ಅವರು ಹಾರ್ದಿಕ ಸಂಬಂಧ ಹೊಂದಿದ್ದರಿಂದಲೇ ವಿಶಿಷ್ಟ ಎನಿಸಿದ್ದಾರೆ.

ಪಂಚಶೀಲ


ಇಂಡೋನೇಷ್ಯಾ ಸರ್ಕಾರ ರಾಷ್ಟ್ರೀಯ ಸಿದ್ಧಾಂತವಾದ ಪಂಚಶೀಲ ತತ್ತ್ವಗಳಲ್ಲಿ ಏಕದೇವೋಪಾಸನೆಯೂ ಸೇರಿದೆ. ಬಾಲಿಯ ಜನಸಮುದಾಯ ಎಲ್ಲವನ್ನೂ ಒಂದಾಗಿ ನೋಡುವ ಪರಂಪರೆಯನ್ನು ಹೊಂದಿರುವುದರಿಂದ ಅದಕ್ಕೆ ಪಂಚಶೀಲಗಳು ಹೊಸದೆನಿಸುವುದಿಲ್ಲ.
1 ಜಗನ್ನಿಯಾಮಕನಾದ ಒಬ್ಬನೇ ದೇವರ ಮೇಲೆ ನಂಬಿಕೆ ಇಡುವುದು.
2 ನ್ಯಾಯಬದ್ಧ ಮತ್ತು ನಾಗರಿಕ ಸಮಾಜ.
3 ಇಂಡೋನೇಷ್ಯಾ ಏಕತೆ.
4 ಚಿಂತನಮಂಥನದಿಂದ ಕೂಡಿದ ಜನಪ್ರತಿನಿಧಿಗಳ ಚರ್ಚೆಯ ಪರಿಣಾಮವಾಗಿ
ವ್ಯಕ್ತವಾಗುವ ಬುದ್ಧಿಮತ್ತೆಯ ಮೂಲಕ ಪ್ರಜಾಪ್ರಭುತ್ವದ ಅಸ್ತಿತ್ವ.
5 ಇಂಡೋನೇಷ್ಯಾದ ಸರ್ವಜನಸಮುದಾಯಗಳಿಗೆ ಸಾಮಾಜಿಕ ನ್ಯಾಯ.
ಇವು ಇಂಡೋನೇಷ್ಯಾದ ಪಂಚಶೀಲಗಳಾಗಿವೆ.


ಈ ಪಂಚಶೀಲಗಳು ಕೂಡ ಬಸವಧರ್ಮದಲ್ಲಿವೆ. ಬಸವಧರ್ಮವು ಭಾರತದಲ್ಲಿ ಜನಿಸಿದ ಮೊದಲ ಏಕದೇವೋಪಾಸನಾ ಧರ್ಮವಾಗಿದೆ. ಬಸವಧರ್ಮದ ಗುರಿಯು ನ್ಯಾಯಬದ್ಧ ನಾಗರಿಕ ಸಮಾಜದ ನಿರ್ಮಾಣವೇ ಆಗಿದೆ. ಅದು ಮಾನವ ಏಕತೆಯನ್ನು ಬಯಸುತ್ತದೆ. ಬಸವಣ್ಣನವರು ಸ್ಥಾಪಿಸಿದ ‘ಅನುಭವ ಮಂಟಪ’ವು 12ನೇ ಶತಮಾನದ ಸಮಾಜೋ ಧಾರ್ಮಿಕ ಸಂಸತ್ತೇ ಆಗಿದೆ. ಅದರಲ್ಲಿ ಸಮಾಜದ ವಿವಿಧ ಸ್ತರಗಳಿಂದ ಬಂದಂಥ 770 ಅಮರಗಣಂಗಳೆಂಬ ಜನಪ್ರತಿನಿಧಿಗಳಿದ್ದರು. ಅಲ್ಲಮಪ್ರಭು, ಬಸವಣ್ಣ, ಅಕ್ಕನಾಗಮ್ಮ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಸಿದ್ಧರಾಮ ಮತ್ತು ಮಡಿವಾಳ ಮಾಚಿದೇವರು ಸಪ್ತಗಣಾಧೀಶರು. ಇವರು ಮಂತ್ರಿಮಂಡಳದ ಸದಸ್ಯರ ಹಾಗೆ ಇದ್ದರು. ಇವರೊಳಗಿನ ಅಲ್ಲಮಪ್ರಭುಗಳು ಅನುಭವ ಮಂಟಪದ ಶೂನ್ಯಪೀಠಾಧಿಪತಿಗಳಾಗಿ ಇಂದಿನ ಸಂಸತ್ತಿನಲ್ಲಿರುವ ಲೋಕಸಭಾಧ್ಯಕ್ಷರ ಹಾಗೆ ಇದ್ದರು. ಅಮರಗಣಂಗಳ ಚಿಂತನ ಮಂಥನದಿಂದ ಕೂಡಿದ ಚರ್ಚೆಯ ಪರಿಣಮವಾಗಿ ಸರ್ವಜನಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವಂಥ ಮಾರ್ಗದರ್ಶನ ನೀಡುವ ವಚನಗಳು ಹೊರಹೊಮ್ಮಿದವು.
ಬಸವಧರ್ಮ ಏಕದೇವೋಪಾಸನೆಯ ಧರ್ಮವಾದರೂ “ದೇವನೊಬ್ಬ ನಾಮ ಹಲವು” ಎಂದು ಬಸವಣ್ಣನವರು ಹೇಳಿದ್ದಾರೆ. “ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯಾ” ಎಂದು ಅವರು ತಿಳಿಸುವ ಮೂಲಕ ಇಡೀ ಜಗತ್ತನ್ನು ಒಂದಾಗಿ ಕಂಡಿದ್ದಾರೆ.

ದೇವನೊಬ್ಬ ನಾಮ ಹಲವು


ಬಸವಧರ್ಮದ ಆಶಯಗಳಿಗೂ ಬಾಲಿಯ ಜನರ ಜೀವನವಿಧಾನಕ್ಕೂ ಬಹಳ ಸಾಮ್ಯವಿರುವುದು ಖುಷಿಯ ಸಂಗತಿಯಾಗಿದೆ. ಅವರು ವಿವಿಧ ದೇವತೆಗಳನ್ನು ಆರಾಧಿಸಿದರೂ “ದೇವನೊಬ್ಬ ನಾಮ ಹಲವು” ಎಂಬ ಭಾವ ಹೊಂದಿದ್ದಾರೆ. ಇನ್ನೂ ಆಶ್ಚರ್ಯವೆಂದರೆ ಅವರು ಪೀಠಾರಾಧನೆ ಮಾಡುತ್ತಾರೆ. ಬ್ರಹ್ಮ, ವಿಷ್ಣು, ಮಹೇಶ್ವರ ಮುಂತಾದ ದೇವತೆಗಳ ಪೀಠವನ್ನು ಪೂಜಿಸುತ್ತಾರೆ. ಆದರೆ ಆ ಪೀಠಗಳಲ್ಲಿ ದೇವತೆಗಳ ಮೂರ್ತಿಗಳಿರುವುದಿಲ್ಲ! ದೇವರು ಅಗಮ್ಯ, ಅಗೋಚರ, ಅಪ್ರತಿಮ ಮತ್ತು ಅಪ್ರಮಾಣ ಎಂದು ಬಸವಣ್ಣನವರು ಹೇಳಿದ್ದಾರೆ. ಬಾಲಿ ಜನರ ಪೀಠಾರಾಧನೆಯಲ್ಲಿ ಕೂಡ ಇದೇ ಪರಿಕಲ್ಪನೆ ಇದೆ. ವಸಂತ ಋತುವಿನಲ್ಲಿ ಇಡೀ ಬಾಲಿದ್ವೀಪದ ಜನ ಒಂದು ದಿನದ ಮೌನವನ್ನು ಆಚರಿಸುತ್ತಾರೆ. ಆ ದಿನ ವಿಮಾನ ನಿಲ್ದಾಣ ಮೊದಲು ಮಾಡಿ ಎಲ್ಲವೂ ಸ್ತಬ್ಧವಾಗಿರುತ್ತವೆ. ಮಾನವರು ಏಕಾಂತದಲ್ಲಿ ತಮ್ಮೊಳಗಿನ ದೇವರ ಜೊತೆ ಒಂದಾಗುವ ಕ್ರಮವಿದು.


ಶಿಲ್ಪಕಲೆ, ಚಿತ್ರಕಲೆ, ಚರ್ಮಕಲೆ, ಲೋಹಕಲೆ, ನೃತ್ಯ ಮತ್ತು ಸಂಗೀತ ಮುಂತಾದ ಸೃಜನಶೀಲತೆಗೆÉ ಬಾಲಿದ್ವೀಪ ಹೆಸರಾಗಿದೆ. 10 ರಾಜಮನೆತನಗಳು ಬಾಲಿದ್ವೀಪವನ್ನು ಆಳಿವೆ. ಈ ರಾಜಮನೆತನಗಳು ಸ್ವತಂತ್ರವಾಗಿದ್ದವು. ಡಚ್ಚರು ಬಾಲಿದ್ವೀಪದ ಮೇಲೆ 1906ರಲ್ಲಿ ದಾಳಿ ಮಾಡಿದ ಸಂದರ್ಭದಲ್ಲಿ ರಾಜಮನೆತನಗಳ ಸಹಸ್ರಾರು ಸದಸ್ಯರು ಮತ್ತು ಅನುಯಾಯಿಗಳು ಮರ್ಯಾದೆಗಾಗಿ ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ 200 ಮಂದಿ ಬಾಲಿದ್ವೀಪ ನಿವಾಸಿಗಳು ಕೂಡ ಆತ್ಮಹತ್ಯೆ ಮಾಡಿಕೊಂಡರು!


ಡಚ್ಚರು 1906ರಲ್ಲಿ ಈ ದ್ವೀಪವನ್ನು ತಮ್ಮ ವಸಾಹತುವನ್ನಾಗಿ ಮಾಡಿಕೊಂಡರೂ ಬಾಲಿ ಜನರ ಧರ್ಮ ಮತ್ತು ಸಂಸ್ಕøತಿಯ ಮೇಲೆ ಹಿಡಿತ ಸಾಧಿಸಲಿಕ್ಕಾಗಲಿಲ್ಲ. ಬಾಲಿದ್ವೀಪ ವಸಾಹತು ಆಗುವ ಮೊದಲೇ ರಾಜಮನೆತನಗಳ ಮಹಾ ಒಕ್ಕೂಟವನ್ನು ರಚಿಸಲಾಗಿತ್ತು. ಆದರೆ ಈಗ ಆ ರಾಜಮನೆತನಗಳಿಗೆ ಇಂಡೋನೇಷ್ಯಾ ಸರ್ಕಾರದಿಂದ ಶಾಸನಬದ್ಧ ಮಾನ್ಯತೆ ಇಲ್ಲ.
1942ರಲ್ಲಿ; ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬಾಲಿಯನ್ನು ಜಪಾನ್ ಸ್ವಾಧೀನಪಡಿಸಿಕೊಂಡಿತು. 1945ರಲ್ಲಿ ಬ್ರಿಟಿಷ್ ಸೈನ್ಯ ಜಪಾನಿಯರಿಂದ ಬಾಲಿಯನ್ನು ಬಿಡುಗಡೆಗೊಳಿಸಿತು. ಸುಕರ್ಣೋ ನೇತೃತ್ವದ ಇಂಡೋನೇಷ್ಯಾ ಗಣರಾಜ್ಯಕ್ಕೆ ಪ್ರತಿಸ್ಪರ್ಧಿಯಾಗಿ ಡಚ್ಚರು 1946ರಲ್ಲಿ ‘ಈಸ್ಟ್ ಇಂಡೋನೇಷ್ಯಾ ರಾಜ್ಯ’ ಸ್ಥಾಪನೆ ಮಾಡಿದರು. ಬಾಲಿಯಲ್ಲಿ 13 ಆಡಳಿತ ಜಿಲ್ಲೆಗಳನ್ನು ರಚಿಸಿದರು.


1949ರಲ್ಲಿ ಡಚ್ಚರು ಇಂಡೋನೇಷ್ಯಾದ ಸಾರ್ವಭೌಮತ್ವವನ್ನು ಮಾನ್ಯ ಮಾಡಿದ ನಂತರ ಬಾಲಿಯನ್ನೂ ಸೇರಿಸಿ ಇಂಡೋನೇಷ್ಯಾ ಸಂಯುಕ್ತ ರಾಜ್ಯಗಳ ಗಣರಾಜ್ಯ ಸ್ಥಾಪಿಸಲಾಯಿತು. 1958ರಲ್ಲಿ ಬಾಲಿಯನ್ನು ಪ್ರಾಂತ ಎಂದು ಘೋಷಿಸಿ ರಾಜ್ಯಪಾಲರನ್ನು ನೇಮಿಸಲಾಯಿತು. (ಇಂಡೋನೇಷ್ಯಾದಲ್ಲಿ ಅಧ್ಯಕ್ಷೀಯ ಮಾದರಿಯ ಆಡಳಿತವಿರುವುದರಿಂದ ರಾಜ್ಯಪಾಲರು ಇರುತ್ತಾರೆ ಹೊರತಾಗಿ ಮುಖ್ಯಮಂತ್ರಿಗಳಿರುವುದಿಲ್ಲ.)

5 ಲಕ್ಷ ಜನರ ಕೊಲೆ

ರಂಜಾನ ದರ್ಗಾ


1950ರಿಂದ 1960ರ ಆರಂಭದವರೆಗೆ ಇಂಡೋನೇಷ್ಯಾ ರಾಷ್ಟೀಯ ಪಕ್ಷ ಮತ್ತು ಇಂಡೋನೇಷ್ಯಾ ಕಮ್ಯುನಿಸ್ಟ್ ಪಕ್ಷದ ಮಧ್ಯೆ ಹೋರಾಟ ನಡೆಯಿತು. ಅದು ನಿಜವಾದ ಅರ್ಥದಲ್ಲಿ ಜಮೀನುದಾರರು ಮತ್ತು ಗೇಣಿದಾರರ ಮಧ್ಯದ ಹೋರಾಟವಾಗಿತ್ತು. ಈ ಹೋರಾಟದ ಸಂದರ್ಭದಲ್ಲಿ ರಾಜಧಾನಿ ಜಕಾರ್ತಾದಲ್ಲಿ ಕಮ್ಯುನಿಸ್ಟರು ಕ್ಷಿಪ್ರಕ್ರಾಂತಿಗೆ ಪ್ರಯತ್ನಿಸಿದರು. ಆಗ ಜನರಲ್ ಸುಹಾರ್ತೋ ನೇತೃತ್ವದ ಸೈನ್ಯ ಇಂಡೋನೇಷ್ಯಾದಲ್ಲಿ 5 ಲಕ್ಷ ಜನ ಗೇಣಿದಾರರು, ಕಮ್ಯುನಿಸ್ಟ್ ಪಕ್ಷದ ಸದಸ್ಯರು ಮತ್ತು ಕಮ್ಯುನಿಸ್ಟ್ ನಾಯಕರ ಕೊಲೆ ಮಾಡಿತು. ಸತ್ತವರಲ್ಲಿ ಬಾಲಿದ್ವೀಪದ 80 ಸಾವಿರ ನಾಗರಿಕರೂ ಸೇರಿದ್ದಾರೆ.


ನಂತರ 1965-66ರಲ್ಲಿ ನಡೆದ ದಂಗೆಯಲ್ಲಿ ಸುಕರ್ಣೋರನ್ನು ಅಧ್ಯಕ್ಷ ಪದವಿಯಿಂದ ಇಳಿಸುವಲ್ಲಿ ಯಶಸ್ವಿಯಾದ ಜನರಲ್ ಸುಹಾರ್ತೋ ಅಧಿಕಾರದ ಚುಕ್ಕಾಣಿ ಹಿಡಿದ.
1963ರಲ್ಲಿ ಬಾಲಿಯ ಜ್ವಾಲಾಮುಖಿ ಪರ್ವತ ಅಗುಂಗ್ ಸ್ಫೋಟಗೊಂಡಾಗ ಸಹಸ್ರಾರು ಜನರು ಜೀವ ಕಳೆದುಕೊಂಡರು. ಆರ್ಥಿಕ ವ್ಯವಸ್ಥೆ ಹದಗೆಟ್ಟಿತು. ಬಾಲಿಯ ಅನೇಕ ಜನರು ಇಂಡೋನೇಷ್ಯಾದ ವಿವಿಧ ಭಾಗಗಳಿಗೆ ವಲಸೆ ಹೋದರು. ಬಾತುರ್ ಕೂಡ ಜ್ವಾಲಾಮುಖಿ ಪರ್ವತವೇ ಆಗಿದೆ. ಜ್ವಾಲಾಮುಖಿ ಪರ್ವತಗಳಿಂದಾಗಿ ಬಾಲಿದ್ವೀಪದ ಭೂಮಿ ಫಲವತ್ತಾಗಿದ್ದು ಪ್ರಕೃತಿಯ ವೈಚಿತ್ರ್ಯ.

ಪರಂಪರೆಯ ಜೊತೆ ಜೊತೆಗೆ


ಭೂಲೋಕದ ಸ್ವರ್ಗ ಎನಿಸಿಕೊಂಡ ಬಾಲಿ ದ್ವೀಪದಲ್ಲಿ ಇಷ್ಟೊಂದು ಪ್ರವಾಸೋದ್ಯಮ ಬೆಳೆದರೂ ಸ್ಥಳೀಯ ಜನರು ತಮ್ಮ ಪರಂಪರೆಯನ್ನು ಉಳಿಸಿಕೊಂಡಿದ್ದಾರೆ. ಶಾಂತಿ ಮತ್ತು ಸಮಾಧಾನದಿಂದ ಕೂಡಿದ ಸರ್ವಧರ್ಮ ಸಮಭಾವವು ಅವರ ಬದುಕಿನ ಭಾಗವಾಗಿದೆ. ಅವರು ಶಾಂತಚಿತ್ತರೂ ಸ್ವಾಭಿಮಾನಿಗಳೂ ಆಗಿದ್ದಾರೆ. ಬಾಲಿ ದ್ವೀಪ ಪ್ರವಾಸೋದ್ಯಮದ ಮೇಲೆ ಬದುಕಿದ್ದು ಅಲ್ಲಿನ ಜನ ಜಗತ್ತಿನ ನೂರೆಂಟು ದೇಶಗಳ ಐಷಾರಾಮಿ ಪ್ರವಾಸಿಗರ ಜೀವನ ಕ್ರಮವನ್ನು ನಿತ್ಯ ನೋಡುತ್ತಿದ್ದರೂ ಕೊಳ್ಳುಬಾಕ ಸಂಸ್ಕøತಿ ಮತ್ತು ವಸ್ತುಮೋಹದಿಂದ ದೂರ ಇದ್ದಾರೆ. ಅವರು ಪ್ರವಾಸಿಗರನ್ನು ಅತಿಥಿಗಳಂತೆ ಕಾಣುತ್ತಾರೆ. ಜನನಿಬಿಡ ಪ್ರದೇಶಗಳಲ್ಲಿ ಕೂಡ ಪ್ರವಾಸಿಗರಿಗೆ ತಮ್ಮಿಂದ ಯಾವುದೇ ತೊಂದರೆಯಾಗದಂತೆ ಅವರು ಎಚ್ಚರಿಕೆ ವಹಿಸಿ ಸಮಾಧಾನದಿಂದ ನಡೆದುಕೊಳ್ಳುತ್ತಾರೆ. ಬಾಲಿಯ ಪ್ರವಾಸ ಕೇವಲ ಆನಂದಕ್ಕಾಗಿ ಅಲ್ಲ. ಅನುಭವ ಮತ್ತು ಅನುಭಾವಕ್ಕಾಗಿ.


ಬಾಲಿ ಪ್ರವಾಸಕ್ಕೆ ಹೋಗುವವರು ಹೊಸತನದಿಂದ ಕೂಡಿದ ವಿಶ್ವಮಾನ್ಯವಾದ ಅರ್ವಾಚೀನ (ಅಂದರೆ ನವೀನವಾದ, ಕೇವಲ 800 ವರ್ಷಗಳಷ್ಟು ಹಿಂದಿನ) ಬಸವದರ್ಶನವನ್ನು ಬಾಲಿಯ ಜನಸಮುದಾಯಕ್ಕೆ ತಲುಪಿಸುವುದು ಮತ್ತು ಅವರಿಂದ ಪ್ರಾಚೀನ (ಅಂದರೆ ಸಹಸ್ರಾರು ವರ್ಷಗಳಷ್ಟು ಹಿಂದಿನ) “ತ್ರಿ ಹಿತ ಕರಣ” ಕಲಿಯುವುದು ಅವಶ್ಯವಾಗಿದೆ.


ರಂಜಾನ್ ದರ್ಗಾ


“ವಚನ”, ಸಿದ್ಧಾರೂಢ ಕಾಲನಿ ,ಮದಿಹಾಳ, ಧಾರವಾಡ- 580006
ಮೊಬೈಲ್: 8660173149

5 thoughts on “ಪ್ರಾಚೀನ ಬಾಲಿ ತ್ರಿವಿಧ ತತ್ತ್ವ ಮತ್ತು ಅರ್ವಾಚೀನ ಬಸವ ದರ್ಶನ

 1. ಬಾಲಿ ದ್ವೀಪ ಅಲ್ಲಿಯ ಜನರ ತತ್ವ ನಿಷ್ಠತೆ, ನಿರಾಕಾರ ದೇವರ ಪೀಠಾರಾಧನೆ, ಅಂತರಂಗದ ಮೌನ ಸಾಧನೆ ಪ್ರಕೃತಿದತ್ತ ಜೀವನ ಅದ್ಭುತವಾಗಿದೆ… ಅದನ್ನು ವಿವರಿಸಿದ ರಂಜಾನ್ ದರ್ಗಾ ಶರಣರಿಗೆ ಅನಂತ ಶರಣು ಶರಣಾರ್ಥಿಗಳು…. ಬಸವ ಮಾರ್ಗ ನಮ್ಮ ಜ್ಞಾನದಾಹವನ್ನು ಪ್ರತಿನಿತ್ಯವೂ ತಣಿಸುವ ಬೆಟ್ಟಗಳ ನಡುವಿನಿಂದ ಹಾಯ್ದು ಬರುವ ನೀರಿನ ಝರಿ ಗಳಂತೆ… ನಮ್ಮಲ್ಲಿ ತತ್ವನಿಷ್ಠತೆ, ತತ್ವಕ್ಕೆ ಬದ್ಧವಾದ ನಿಷ್ಠುರತೆ, ನಮ್ಮೊಳಗಿನ ಹೊಸ ಚಿಂತನೆಗೆ, ಅಂತರಾವಲೋಕನ ಮಾಡಿಕೊಂಡು ಮುನ್ನಡೆಯುವಲ್ಲಿ ಅತ್ಯಂತ ಸಹಾಯಕಾರಿಯಾಗಿದೆ…. ಇಂತಹ ಜ್ಞಾನವನ್ನು ನಿತ್ಯವೂ ಬಡಿಸುವ ವಿಶ್ವರಾಧ್ಯ ಅಣ್ಣನವರಿಗೆ ಅನಂತ ಶರಣು ಶರಣಾರ್ಥಿಗಳು

  1. ಸಹೋದರ ಮಹಾಂತೇಶ್

   ನಿಮ್ಮಂತೆ ಬರಹವನ್ನು ಓದಿ ಜ್ಞಾನ ವಿಸ್ತರಿಸಿಕೊಳ್ಳುವವರು ಇರುವುದರಿಂದಲೇ ಬಸವಮಾರ್ಗ ಇದೀಗ ೯ ಲಕ್ಷ ಮೂವ್ವತ್ತು ಸಾವಿರಕ್ಕೂ ಹೆಚ್ಚು ಜನ ಈಗಾಗಲೇ ಓದಿದ್ದಾರೆ.

   ನನಗೆ ಸಂಪೂರ್ಣ ತೃಪ್ತಿ ಇದೆ. ನನ್ನ ಬದುಕು ಬಸವಣ್ಣನವರ ಪಾದಗಳಿಗೆ ಅರ್ಪಿತ.

 2. ಎಂತಹ ಅದ್ಭುತ ಲೇಖನ ಸರ್ ಇದು..ಇದೊಂದು ಹೊಸ ಆಯಾಮ..ಅನ್ವೇಷಣೆ ಮಾತು ಸಮನ್ವಯದ ಸತ್ಯಶೋಧ…ಶರನೆಂಬೆ ಸರ್..

 3. This interesting and exhilarating travelogue which takes the reader on a virtual tour of the Bali island, a heaven on earth, giving an insight into its historical and cultural background is a fitting thesis for conferring a doctorate on the writer.

Leave a Reply

Your email address will not be published. Required fields are marked *

error: Content is protected !!