ಧರ್ಮದ ಹೆಸರಿನಲ್ಲಿ ಕ್ರೌರ್ಯ ಪ್ರದರ್ಶಿಸುವ ತಾಲೀಬಾನಗಳು

ಧರ್ಮದ ಹೆಸರಿನಲ್ಲಿ ಕ್ರೌರ್ಯ ಪ್ರದರ್ಶಿಸುವವರು ಎಂಥ ದುರಂತವನ್ನು ಸೃಷ್ಟಿಸಬಲ್ಲರು ಎಂಬುದಕ್ಕೆ, ತಾಲಿಬಾನಿ ಉಗ್ರರ ಕೈಯಲ್ಲಿ ಸಿಕ್ಕಿ ನಲಗುತ್ತಿರುವ ಅಫಘಾನಿಸ್ತಾನ್ ಸಾಕ್ಷಿಯಾಗಿದೆ.

ಮೂಲಭೂತವಾದಿಗಳು, ಕೋಮುವಾದಿಗಳು ಮತ್ತು ಭಯೋತ್ಪಾದಕರು ತಮ್ಮದೇ ದೇಶದ ಜನರ ಬದುಕನ್ನು ನರಕಮಯ ಮಾಡುತ್ತಾರೆ. ಬೌದ್ಧಿಕ ವಿಕಾಸಕ್ಕೆ ಅಡ್ಡಗಾಲು ಹಾಕುತ್ತಾರೆ. ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಾರೆ. ಆಗ ಅವರ ಸ್ವಾತಂತ್ರ್ಯ ಅಡುಗೆ ಮನೆಗೆ ಸೀಮಿತಗೊಳ್ಳುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮಣ್ಣುಪಾಲಾಗುತ್ತದೆ. ವೈಚಾರಿಕತೆ ಮತ್ತು ವೈಜ್ಞಾನಿಕ ಬೆಳವಣಿಗೆ ಸ್ಥಗಿತಗೊಂಡು ಪ್ರಜಾಪ್ರಭುತ್ವ ನಾಶವಾಗುತ್ತದೆ.  ಆಪ್ಘನ್ ಘಟನೆ ಜಗತ್ತಿನ ಪ್ರತಿಯೊಬ್ಬರಿಗೆ ಪಾಠವಾಗಬೇಕು.

ನಾನು 1983ನೇ ಆಗಸ್ಟ್ 13ರಂದು ಉಜ್ಬೆಕಿಸ್ತಾನದ ರಾಜಧಾನಿ ತಾಷ್ಕೆಂಟ್ ವಿಮಾನ ನಿಲ್ದಾಣದಲ್ಲಿ ಹತ್ತಾರು ಆಪ್ಘನ್ ಯುವಕರು ಕುಳಿತಿದ್ದನ್ನು ನೋಡಿ ಮಾತನಾಡಿಸಿದೆ. ಆಪ್ಘನ್ ಗಡಿಗೆ ಉಜ್ಬೆಕಿಸ್ತಾನ ಹೊಂದಿಕೊಂಡಿರುವುದರಿಂದ ಸೋವಿಯತ್ ಸರ್ಕಾರ ಆಪ್ಘನ್ ಯುವಕರಿಗಾಗಿ ನಮ್ಮ ಐಟಿಐ ತೆರನಾದ ತರಬೇತಿ ಕಾಲೇಜು ಮುಂತಾದ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿತ್ತು. ಸಹಸ್ರಾರು ಆಪ್ಘನ್ ವಿದ್ಯಾರ್ಥಿಗಳು ಇದರ ಲಾಭ ಪಡೆಯತೊಡಗಿದರು. ಆ ಯುವಕರು ಹೇಳಿದ ಪ್ರಕಾರ ಮಹಿಳೆಯರಲ್ಲಿ ಶೇಕಡಾ 2 ರಷ್ಟು ಮಾತ್ರ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಯುವಕರಿಗೆ ತಾಷ್ಕೆಂಟ್ ಶಿಕ್ಷಣ ಹೊಸ ಅವಕಾಶಗಳಿಗೆ ದಾರಿಮಾಡಿಕೊಟ್ಟಿತು.

ಇದಕ್ಕೂ ಮುಂಚೆ 1981ರಲ್ಲಿ ನಾನು ಮೈಸೂರಿನಲ್ಲಿ ಇದ್ದಾಗ, ಅಲ್ಲಿನ ರೀಜನಲ್ ಕಾಲೇಜಿನಲ್ಲಿ ನಡೆದ ಅಂತರ್ರಾಷ್ಟ್ರೀಯ ಶೈಕ್ಷಣಿಕ ಕಮ್ಮಟದಲ್ಲಿ ಭಾಗವಹಿಸಲು ಬಂದಿದ್ದ ಇಬ್ಬರು ಆಪ್ಘನ್ ಉಪನ್ಯಾಸಕರು ನನ್ನನ್ನು ಹುಡುಕಿಕೊಂಡು ಬಂದರು. ಅವರು ಆಶ್ಚರ್ಯಕರ ಬುಡಕಟ್ಟು ಸಂಪ್ರದಾಯದ ಕುರಿತು ಹೇಳಿದರು. ಆಪ್ಘನ್ನರು ಮುಸ್ಲಿಮರಾದರೂ ಇಂಥ ಅನೇಕ ಸಂಪ್ರದಾಯಗಳನ್ನು ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಅಲ್ಲಿ ಕ್ರಾಂತಿ ಆಗುವವರೆಗೂ ಯುವತಿಯರನ್ನು ಸಂತೆಯಲ್ಲಿ ಕುರಿಗಳ ಹಾಗೆ ಮಾರಾಟ ಮಾಡಲಾಗುತ್ತಿತ್ತು. ಯುವತಿಯ ಮನೆಯವರು ಮದುವೆ ವಯಸ್ಸಿನ ತಮ್ಮ ಹೆಣ್ಣು ಮಕ್ಕಳನ್ನು ಮಾರಾಟದ ಕಟ್ಟೆಯ ಮೇಲೆ ಮುಸುಕು ಹಾಕಿ ನಿಲ್ಲಿಸುತ್ತಿದ್ದರು. ಅವರ ವಯಸ್ಸು, ಸೌಂದರ್ಯ ಮತ್ತು ಆರೋಗ್ಯ ಮುಂತಾದವುಗಳ ಹಿನ್ನಲೆಯಲ್ಲಿ ಆ ಯುವತಿಯರ ಬೆಲೆ ನಿಗದಿಯಾಗುತ್ತಿತ್ತು. ಶ್ರೀಮಂತ ಮುದುಕರು ಹೆಚ್ಚಿನ ಹಣ ಕೊಟ್ಟು ಸುಂದರ ಯುವತಿಯರನ್ನು ಕೊಳ್ಳುತ್ತಿದ್ದರು. ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ಈ ಹಳಸಲು ಸಂಪ್ರದಾಯ ಹಾಗೇ ಮುಂದುವರಿದಿತ್ತು.

1999 ರಲ್ಲಿ ನೆದರ್ ಲ್ಯಾಂಡ್ಸ್ ನ ಆಮಸ್ಟರ್ ಡ್ಯಾಂ ನಲ್ಲಿ ನಡೆದ 15 ದಿನಗಳ ಅಂತರ್ರಾಷ್ಟ್ರೀಯ ವಿಚಾರಸಂಕಿರಣ ಹಾಗೂ ರಾಜಧಾನಿ ಹೇಗ್ ನಲ್ಲಿ ನಡೆದ “ಹೇಗ್ ಪೀಸ್ ಅಪೀಲ್” ಎಂಬ ಬೃಹತ್ ಅಂತರ್ರಾಷ್ಟ್ರೀಯ ಸೆಮಿನಾರ್ ನಲ್ಲಿ ಭಾಗವಹಿಸಿದ್ದೆ. ಅದರಲ್ಲಿ ನೂರು ದೇಶಗಳ ಎಂಟು ಸಾವಿರ ಪ್ರತಿನಿಧಿಗಳಿದ್ದರು. ನಮ್ಮ ತಂಡದಲ್ಲಿ ಆಪ್ಘನ್ ಯುವತಿಯೂ ಇದ್ದಳು. ಉಗ್ರರ ಕಟ್ಟಾಜ್ಞೆಗಳಿಂದಾಗಿ ಹೆಣ್ಣುಮಕಳ ಬದುಕು ಎಷ್ಟೊಂದು ನರಕವಾಗಿದೆ ಎಂಬುದನ್ನು ಅವಳು ವಿಷಾದದಿಂದ ಹೇಳುತ್ತಿದ್ದಳು‌.
1987ರಿಂದ 1992 ರ ವರೆಗೆ ಅಫಘಾನಿಸ್ತಾನದ ಅಧ್ಯಕ್ಷರಾಗಿದ್ದ ನಜೀಬುಲ್ಲಾ ಕ್ರಾಂತಿಕಾರಿ ಸುಧಾರಣೆಗಳನ್ನು ತಂದರು. ಅಫಘಾನಿಸ್ಥಾನದ ಕೃಷಿಭೂಮಿ ಜಮೀನುದಾರರು ಮತ್ತು ಮುಲ್ಲಾಗಳ ಹಿಡಿತದಲ್ಲಿತ್ತು. ‘ಈ ಭೂಮಿ ತಮಗೆ ದೇವರು ಕೊಟ್ಟಿದ್ದು’ ಎಂದು ಅವರು ಗೇಣಿದಾರರಿಗೆ ಸುಳ್ಳು ಹೇಳಿದ್ದರು. ಹೀಗಾಗಿ ಗೇಣಿದಾರರು ಭೂಮಿಯ ಮೇಲೆ ಹಕ್ಕು ಸ್ಥಾಪಿಸುವ ಗೋಜಿಗೆ ಹೋಗಲಿಲ್ಲ. “ಉಳುವವನೆ ಭೂಮಿಯ ಒಡೆಯ” ಎಂದು ಸರ್ಕಾರ ಘೋಷಿಸಿದರೂ ಗೇಣಿದಾರರು ಭೂಮಿಯನ್ನು ಪಡೆಯಲು ಮನಸ್ಸು ಮಾಡಲಿಲ್ಲ. ಇಂಥ ಸ್ಥಿತಿಯಲ್ಲಿ ಅಧ್ಯಕ್ಷ ನಜೀಬುಲ್ಲಾ ಒಂದು ಐಡಿಯಾ ಮಾಡಿದರು. ಹಳ್ಳಿಗೊಂದು ಕಪ್ಪುಬಿಳಿಪು ಟಿ.ವಿ. ಕೂಡಿಸಿದರು. ತಮ್ಮ ಪಕ್ಷದಲ್ಲಿನ ಹಿರಿಯರಿಗೆ ಮುಲ್ಲಾಗಳ ಹಾಗೆ ಸ್ಟಡಿಯೊದಲ್ಲಿ ಕೂಡಿಸಿ, ಅವರಿಂದ ಕುರಾನ್ ಓದಿಸಿದರು. “ಉಳುವವನೇ ಭೂಮಿಯ ಒಡೆಯ” ಎಂಬ ಸತ್ಯವನ್ನು ಮನಗಾಣುವಂತೆ ಮಾಡಿದರು. ಆಗ ಗೇಣಿದಾರರು ತಮ್ಮ ಹಕ್ಕು ಚಲಾಯಿಸತೊಡಗಿದರು.
1992ರಲ್ಲಿ ಮುಜಾಹಿದೀನ್ ಉಗ್ರರ ಕೈ ಮೇಲಾಗಿ ನಜೀಬುಲ್ಲಾ ಅಧ್ಯಕ್ಷ ಪದವಿಯಿಂದ ಇಳಿಯಬೇಕಾಯಿತು. ಮುಂದೆ ಈ ಉಗ್ರರು 1996 ನೇ ಸೆಪ್ಟೆಂಬರ್ 27 ರಂದು ಗಲ್ಲಿಗೇರಿಸಿದರು.

ಜಗತ್ತು ತಾಲಿಬಾನಿ ಉಗ್ರರ ಕೃತ್ಯವನ್ನು ಖಂಡಿಸಬೇಕು. ಇಲ್ಲದಿದ್ದರೆ ಈ ‘ಸಾಂಕ್ರಾಮಿಕ ರೋಗ’ ವಿವಿಧ ಧರ್ಮಗಳ ಹೆಸರಲ್ಲಿ ಜಗತ್ತಿನ ತುಂಬ ಹಬ್ಬಬಹುದು.

-ರಂಜಾನ್ ದರ್ಗಾ

Leave a Reply

Your email address will not be published. Required fields are marked *

error: Content is protected !!