ಪೊಲೀಸ್ ಅಧಿಕಾರಿಗಳ ಖಿನ್ನತೆ ಹಾಗೂ ಆತ್ಮಹತ್ಯೆ

ಪೊಲೀಸ್ ಅಧಿಕಾರಿಗಳ ಖಿನ್ನತೆ ಹಾಗೂ ಆತ್ಮಹತ್ಯೆ

ಈ ನಡುವೆ, ಇತ್ತೀಚೆಗೆ ಏಕೋ ಏನೋ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪ್ರಕೋಪಕ್ಕೆ ಹೋಗುತ್ತಿದ್ದಾರೆ‌. ಏಕಾಗಿ ಈ ಆತ್ಮಹತ್ಯೆ ? ಯಾಕಾಗಿ ಯಾವ ಕಾರ್ಯ ಸಾಧನೆಗಾಗಿ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಬೇಕು ? ಆತ್ಮಹತ್ಯೆ ಮಾಡಿಕೊಳ್ಳುವಂತಹ ಖಿನ್ನತೆಯಾದರೂ ಏಕಾಗಿ ಬರುತ್ತಿದೆ. ಇಲಾಖೆಯು ಅದ್ಯಾವ ಹಂತದಲ್ಲಿ ಎಡವುತ್ತಿದೆ ಅಥವಾ ಪೊಲೀಸ್ ಅಧಿಕಾರಿಗಳಿಗೆ ಒತ್ತಡವನ್ನು ಮೀರುವಂಥಹ, ಒತ್ತಡವನ್ನಹ ನಿವಾರಿಸಿಕೊಳ್ಳುವ ತಂತ್ರಗಳೇನಾದರೂ ಗೊತ್ತಾಗುತ್ತಿಲ್ಲವಾ ? ಇಂಥಹ ಪ್ರಶ್ನೆಗಳು ಇಂದು ದೊತ್ತೆಂದು ನಮ್ಮೆದುರು ಬಂದು ನಿಲ್ಲುತ್ತಿವೆ‌. ಇದಕ್ಕೆ ಕಾರಣವಾದರೂ ಏನು ? ಕೊನೆಗೆ ಆತ್ಮಹತ್ಯೆಯೇ ಸಕಲಕ್ಕೂ ಉತ್ತರವೇ ?
ದೆಹಲಿಯಲ್ಲಿ ವಿಷ್ಣುದತ್ತ ವೈಷ್ಣೋಯಿ ಎಂಬ ಅಧಿಕಾರಿ, ತಿರುವನಂತಪುರದಲ್ಲೊಬ್ಬ ಅಧಿಕಾರಿ ಆತ್ಮಹತ್ಯೆ, ಅಷ್ಠೇ ಏಕೆ ನಮ್ಮ‌ ಬ್ಯಾಚ್ ಮೇಟ್ ಶೇಷಪ್ಪ ಎಂಬುವರೂ ಆತ್ಮಹತ್ಯೆ ಮಾಡಿಕೊಂಡರು, ಮುಂದುವರೆದು ಇಂದು ಹಾಸನದಲ್ಲಿಯ ಚನ್ನರಾಯ ಪಟ್ಟಣದಲ್ಲಿ ಒಬ್ಬ ಪಿಎಸ್ಐ ಶ್ರೀ ಕಿರಣ್ ಇಂದು ಕೊರಳನ್ನು ನೇಣಿಗೆ ಒಡ್ಡಿ ಈ ಲೋಕವನ್ನೇ ಬಿಟ್ಟು ತೆರಳಿದರು‌. ಇವೆಲ್ಲವೂ ಏಕಾಗಿ ನಡೆಯುತ್ತಿವೆ ? ಇದಕ್ಕೆ ಎಲ್ಲರಿಂದಲೂ ಸಿಗುವ ಕಟ್ಟ ಕಡೆಯ ಉತ್ತರ ಎಂದರೆ ಅದು ಒತ್ತಡ . ಈ ಒತ್ತಡ ಎಂಬುದು ಏಕಾಗಿ ಪೊಲೀಸ್ ಅಧಿಕಾರಿಗಳಲ್ಲಿ ಬಹಳ ಬಿರುವಾಗಿ ಬೀಳುಬಿಡುತ್ತದೆ ?

ಮೊದಲಿಗೆ ಒಬ್ಬ ಪೊಲೀಸ್ ಅಧಿಕಾರಿಯು ಈ ಸಮಾಜದ ಆಸ್ತಿ. ಪೊಲೀಸ್ ಅಧಿಕಾರಿಯ ಪ್ರಾಮುಖ್ಯವಾದ ಕೆಲಸ ಎಂದರೆ ಆತನು ಸಮಾಜದಲ್ಲಿಯ ಜನರ ಪ್ರಾಣ, ಮಾನ, ಆಸ್ತಿಗಳ ರಕ್ಷಣೆ ಹಾಗೂ ಸಂವಿಧಾನ ಬದ್ದವಾದ ಶಾಸನಗಳನ್ನು ಈ ಸಮಾಜದಲ್ಲಿ ಜಾರಿಗೆ ತರುವಂತಹ ಪ್ರಮುಖ ಕೆಲಸ. ಒಬ್ಬ ಪೊಲೀಸ್ ಅಧಿಕಾರಿಯು ಒಂದು ಸರ್ಕಾರದ ಮುಖವಾಣಿಯೇ ಆಗಿ ಆತನು ಈ ನೆಲದ ಕಾನೂನು ಕಟ್ಟಳೆಗಳನ್ನು ಜಾರಿಗೆ ತಂದು ಜನರ ಜೀವ, ಆಸ್ತಿಗಳನ್ನು ಉಳಿಸುವಂಥಹ ಮಹತ್ಕಾರ್ಯದ ಕೆಲಸ ಮಾಡುತ್ತಿರುತ್ತಾನೆ. ಹಾಗಾಗಿ ಅಧಿಕಾರಿಯು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದರೆ, ಆತನಿಗಿಂತಲೂ ಹೆಚ್ಚು ಮುತುವರ್ಜಿಯಿಂದ ಈ ಸಮಾಜವು ಆ ಪೊಲೀಸ್ ಅಧಿಕಾರಿಯನ್ನು ಪೋಷಿಸಬೇಕಾಗುತ್ತದೆ. ಇದು ಕೇವಲ‌ ಮಾತಲ್ಲ, ಇಂದು ಇದು ಅನಿವಾರ್ಯವೂ ಆಗಿದೆ. ಎಲ್ಲರನ್ನೂ ರಕ್ಷಿಸುವ ಪೊಲೀಸ್ ಅಧಿಕಾರಿಗೇ ರಕ್ಷಣೆ ಇಲ್ಲವೆಂದರೆ ಈ ಸಮಾಜವನ್ನು ರಕ್ಷಿಸುವವರಾದರೂ ಯಾರು ಎಂಬ ಪ್ರಶ್ನೆಯು ಮನದಲ್ಲಿ ಮೂಡುತ್ತದೆ‌. ಒಬ್ಬ ಪೊಲೀಸ್ ಅಧಿಕಾರಿಯು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಂದರೆ ಅದೊಂದು ಸಂಕೀರ್ಣ ಪ್ರಕ್ರಿಯೆ. ಇದರಿಂದ ಸಮಾಜಕ್ಕೆ ಒಂದು ಅಘಾತವಾಗುವಂತಹ ಸಂದೇಶ ರವಾನೆಯಾಗುವುದರಲ್ಲಿ ಯಾವುದೇ ಸಂದೇಹಗಳು ಇರುವುದಿಲ್ಲ.‌‌

ಏನು ಪೊಲೀಸ್ ಅಧಿಕಾರಿಗಳು ಈ ಕೃತ್ಯವನ್ನು ಮಾಡಿಕೊಳ್ಳಬಾರದೆ ಎಂದು ಪ್ರಶ್ನಿಸಿದರೆ ಅವರೂ ಸಹ ಇದರಿಂದ ಹೊರತಾಗಿಲ್ಲ. ಕಟ್ಟು ಮಸ್ತಿನ ದೇಹ, ಸದೃಢವಾದ ಬುದ್ದಿಮತ್ತೆ, ಯೋಚಿಸುವ, ಆಲಿಸುವ, ವಿಮರ್ಶಿಸುವ ಶಕ್ತಿ ಇದ್ದರೂ ಸಹ ಇವರೇಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಸಹಜ ಪ್ರಶ್ನೆಯು ಮೂಡುತ್ತದೆ. ಪೊಲೀಸ್ ಅಧಿಕಾರಿಗಳು ಮೇಲ್ನೋಟಕ್ಕೆ ಸಧೃಢರಾಗಿದ್ದರೂ, ಮಾನಸಿಕವಾಗಿ ಗಟ್ಟಿಗರಾಗಿದ್ದರೂ ಕೆಲವು ಸಮಯ ಸಂಧರ್ಭಗಳು ಅವರನ್ನೂ ಸಹ ಅಧೀರರನ್ನಾಗಿ ಮಾಡಿ ಬಿಡುತ್ತವೆ. ಒಬ್ಬ ಪೊಲೀಸ್ ಅಧಿಕಾರಿಯು ತನ್ನ ವ್ಯಾಪ್ತಿಯಲ್ಲಿ ಬಲು ಉತ್ತಮವಾಗಿಯೇ ಕೆಲಸ ಮಾಡಿ ಜನಮನ್ನಣೆಗಳಿಸಿದ್ದರೂ, ಯಾವುದೋ ಒಂದು ಪ್ರಕರಣ ಅವನನ್ನು ಅಕ್ಷರಷಃ ಬೆದರಿಸಿ ಬಿಟ್ಟಿರುತ್ತದೆ. ಇಷ್ಟು ದಿನ ಗಳಿಸಿದ ಮಾನ, ಗೌರವಗಳೆಲ್ಲವೂ ಇಂದೇ ಮಣ್ಣು ಪಾಲಾದರೆ ನಾಳೆ ಹೇಗೆ ಜನಗಳಿಗೆ ಮುಖ ತೋರಿಸುವುದು ಎಂಬ ಖಿನ್ನತೆಗೂ ಆತನು ಒಳಗಾಗಿ, ಶಾಶ್ವತವಾಗಿ ಈ ಸಮಾಜಕ್ಕೆ ಮುಖ ತೋರಿಸದೆ ಈ ಜಗತ್ತಿನಿಂದಲೇ ಮರೆಯಾಗುವ ಕೃತ್ಯಕ್ಕೆ ಕೈ ಹಾಕಿ ಬಿಡುತ್ತಾನೆ.

ಜೊತೆಗೆ ಒಬ್ಬ ಪೊಲೀಸ್ ಅಧಿಕಾರಿಯು ಕೇವಲ ತನ್ನ. ಮೇಲಿನ ಅಧಿಕಾರಿಗಳಿಗೆ ಮಾತ್ರವೇ ಉತ್ತರದಾಯಿಯಾಗಿರುವುದಿಲ್ಲ. ಆತನು ತನ್ನ ಮೇಲಾಧಿಕಾರಿಗಳಿಗೆ, ತನ್ನ ಸಿಬ್ಬಂಧಿಗಳಿಗೆ, ತಾವೇ ಟಿಪ್ಪಣಿ ಕೊಟ್ಟು ಪೋಸ್ಟ್ ಮಾಡಿಸಿಕೊಙಡಂತಹ ರಾಜಕಾರಣಿಗಳಿಗೆ, ಈ ಸಮಾಜಕ್ಕೆ, ಆತನ ಕುಟುಂಬಕ್ಕೆ, ಪತ್ರಕರ್ತರಿಗೂ ಹೀಗೆ ಸಮಾಜದ ಎಲ್ಲ ಸ್ತರದವರಿಗೂ ಸಹ ಆತನು ಉತ್ತರದಾಯಿಯೇ ಆಗಿರುತ್ತಾನೆ. ಒಬ್ಬ ಪೊಲೀಸ್ ಅಧಿಕಾರಿಯಾಗಿ ಈ ಸಮಾಜದ ಎಲ್ಲ ಸ್ತರದವರನ್ನೂ ಸಹ ಬಹಳವೇ ಚೆಂದವಾಗಿ ಇಟ್ಟುಕೊಂಡು, ನೋಡಿಕೊಂಡು, ಬಳಸಿಕೊಳ್ಳಲು ಯಾವಾಗಲೂ ಪೊಲೀಸ್ ಅಧಿಕಾರಿಯು ಪ್ರಯತ್ನಿಸುತ್ತಿರುತ್ತಾನೆ. ಇಂತಹ ಸ್ತರಗಳಲ್ಲಿ ಎಲ್ಲಿಯಾದರೂ ಬಿರುಕು ಬಂದರೆ ಅಂತಹ ದಮಯದಲ್ಲಿಯೂ ಪೊಲೀಸ್ ಅಧಿಕಾರಿಯು ಅಧೀರನಾಗುತ್ತಾನೆ. ಕೆಕವು ಕಹಿ ಸಮಯದಲ್ಲಿ ಒತ್ತಡವನ್ನು ತಾಳಲಾರದೆ ಆತನು ಖಿನ್ನತೆಗೂ ಒಳಗಾಗಿ ಇಂಥಹ ಹೀನ ಕೃತ್ಯವೆಸಗಿಕೊಂಡು ಬಿಡುತ್ತಾನೆ.

ಒಬ್ಬ ಪೊಲೀಸ್ ಅಧಿಕಾರಿಗೆ ಮೊದಲಿಗೆ ಬುನಾದಿ ತರಬೇತಿ ನೀಡುವ ಸಮಯದಲ್ಲಿಯೇ ಈ ಒತ್ತಡಗಳನ್ನು ನಿವಾರಿಸಿಕೊಳ್ಳುವ ಬಗೆಗೆ, ಖಿನ್ನತೆಯನ್ನು ಮೆಟ್ಟಿನಿಲ್ಲುವ ಬಗೆಗೆಲ್ಲಾ ತರಬೇತಿಯನ್ನು ನೀಡಿರುತ್ತಾರೆ. ಆದರೆ ತರಬೇತಿಯ ನಂತರ ನಾವುಗಳು ಮೈದಾನಕ್ಕೆ ಬಂದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಾಗ ಬರುವ ಅಡೆತಡೆಗಳು, ರಾಜಕೀಯ ಒತ್ತಡಗಳು, ದೂಷಣೆಗಳು, ಬ್ಲಾಕ್ ಮೇಲ್ ಗಳು ಹೂಗೆ ಹಲವೆಲ್ಲಾ ಅಂಶಗಳು ಪೊಲೀಸ್ ಅಧಿಕಾರಿಯ ಮನದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತವೆ. ಕೆಲವು ಹಿರಿಯ ಅಧಿಕಾರಿಗಳೂ, ಕೆಲವು ರಾಜಕಾರಣಿಗಳೂ, ಕೆಲವು ಕೃತ್ಯಗಳ ಹಿತಾಸಕ್ತಿತ ವ್ಯಕ್ತಿಗಳೂ ಸಹ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ತಂದು ಮಾನಸಿಕವಾಗಿ ಕುಬ್ಜರನ್ನಾಗಿಸಿ ಇಂಥಹ ವಿಪ್ಲವಗಳಿಗೆ ಸಾಕ್ಷೀಭೂತರಾಗುತ್ತಾರೆ. ಬೆನ್ನಿನ ಮೇಲೆ ಹೊಡೆದು ಕೆಲಸ ಮಾಡಿಸುವುದಕ್ಕಿಂತ ಬೆನ್ನು ತಟ್ಟಿ ಕೆಲಸ ಮಾಡಿಸುವಂತಹ ಮೇಲಾಧಿಕಾರಿಗಳೂ, ಏನಾದರೂ ಆಗಲಿ ನಾವಿದ್ದೇವೆ ಎಂದು ಸ್ಪೂರ್ತಿ ತುಂಬುವ ಗೆಳೆಯರೂ, ಎಲ್ಲಾ ಕಷ್ಠ – ಸುಖಗಳನ್ನು ಸಮನಾಗಿ ಹಂಚಿಕೊಳ್ಳುತ್ತೇವೆ ಹೆದರ ಬೇಡ ಎಂಬ ವಿಶ್ವಾಸ ತುಂಬುವ ಬಂಧು ಬಳಗದವರ ಮಾತುಗಳು ಎಲ್ಲಾ ಪೊಲೀಸ್ ಅಧಿಕಾರಿಗಳಿಗೂ ಅವಶ್ಯಕವಾಗಿರುತ್ತದೆ. ಎಲ್ಲಕ್ಕೂ ಮಿಗಿಲಾಗಿ ನಾವು ಪೊಲೀಸ್ ಅಧಿಕಾರಿಗಳೂ ಸಹ ಸಂವಿಧಾನ, ಕಾನೂನುಬದ್ದವಾಗಿಯೇ ಶಿಸ್ತಿನಿಂದಲೇ ಕೆಲಸ ಮಾಡುವ ಅನಿವಾರ್ಯತೆಯೂ ಇಂದು ಇದೆ. ನಾವುಗಳು ನಮ್ಮ ಮನದ ಆಸೆಯಂತೆ ಆಸೆಗಳ ಬೆನ್ನಟ್ಟಿ ಹೋದಾಗಲೂ ಸಹ ಇಂಥಹ ಘಟನೆಗಳು ಜರುಗಲು ಕಾರಣವಾಗುತ್ತದೆ.

ಇಂಥಹ ಘಟನೆಗಳು ನಡೆಯಬಾರದು ಎಂದು ಕೊಂಡರೆ ಮೊದಲಿಗೆ ನಾವುಗಳು ಸರಿ ಇರಲೇ ಬೇಕು. ಹೇಗೆಂದರೆ

ಪೊಲೀಸ್ ಅಧಿಕಾರಿಗಳು ಕಾನೂನು ಚೌಕಟ್ಟಿನೊಳಗೆ ಕೆಲಸ ಮಾಡುವುದು.

ರಾಜಕೀಯಕ್ಕೆ ಮನಸ್ಸನ್ನು ಇಳಿಬಿಟ್ಟು, ನಾವುಗಳು ಇನ್ನೊಬ್ಬರ ದಾಸರಾಗದೆ ಕಾನೂನು ರೀತ್ಯ ಕೆಲಸ ಮಾಡಬೇಕು.

ಒತ್ತಡ ತಡೆದುಕೊಳ್ಳುವ ಬಗ್ಗೆ ಕೇವಲ ಅಕಾಡೆಮಿಗಳಲ್ಲದೆ ಕನಿಷ್ಠ ತಿಂಗಳಿಗೊಂದು ಬಾರಿಯಾದರೂ ಪೊಲೀಸ್ ಅಧಿಕಾರಿಗೆ ಒತ್ತಡವನ್ನು ನಿವಾರಿಸಿಕೊಳ್ಳುವಂತಹ ತರಬೇತಿ ನೀಡಬೇಕು‌.

ಹಿರಿಯ ಅಧಿಕಾರಿಗಳು ಕಿರಿಯವರಿಗೆ ಸ್ಫೂರ್ತಿಯ ಸೆಲೆಯಾಗಿ, ಬೆನ್ನಿಗೆ ಹೊಡೆಯದೆ, ಬೆನ್ನು ತಟ್ಟಿ ಕೆಲಸ ಮಾಡಿಸಬೇಕು.

ಪೊಲೀಸ್ ಅಧಿಕಾರಿಗಳಿಗೆ ಸರಿಯಾದ ಸಮಯಕ್ಕೆ ಕೇಳಿದಾಗ ರಜೆಯಂಥಹ ಸೌಲಭ್ಯಗಳನ್ನು ನೀಡಬೇಕು.

ಈ ಸಮಾಜವೂ ಸಹ ಪೊಲೀಸ್ ಅಧಿಕಾರಿಗಳು ಸಹ ಈ ಸಮಾಜದ ಅಂಗ ಎಂದು ಅವರನ್ನೂ ಸಹ ಗೌರವಿಸಬೇಕು.

ಪೊಲೀಸ್ ಅಧಿಕಾರಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿಕೊಳ್ಳುವಂತಹ ಹವ್ಯಾಸ ಬೆಳೆಸಿಕೊಳ್ಳಬೇಕು.

ಎಲ್ಲಕ್ಕೂ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಎಂಬ ನಗ್ನ ಸತ್ಯವನ್ನು ಅರಿಯಲೇ ಬೇಕು.

ಹೀಗೆ ಇನ್ನೂ ಹಲವಾರು ಅಂಶಗಳು ಇವೆ. ಹಾಗಾಗಿ ಪೊಲೀಸ್ ಅಧಿಕಾರಿಗಳು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವಂಥಹ ಹೀನ ಕೃತ್ಯಕ್ಕೆ ಕೈ ಹಾಕ ಬಾರದು, ಹಾಗೆಯೇ ಹಿರಿಯ ಅಧಿಕಾರಿಗಳೂ ಸಹ ಕಿರಿಯರಿಗೆ ನೈತಿಕ ಧೈರ್ಯ, ಸ್ಥೈರ್ಯ ತುಂಬುವಂತಹ ಮಾನಸಿಕ ಪ್ರೌಢಿಮೆಯನ್ನು ಮೆರೆದು ಈ ಸಮಾಜದ ರಕ್ಷಕರ ರಕ್ಷಣೆ ಮಾಡಬೇಕು, ಇಲಾಖೆಯಲ್ಲಿ ಏಳು ಬೀಳುಗಳಿವೆ, ಎಲ್ಲಾ ಏಳು ಬೀಳುಗಳನ್ನು ಸಮಚಿತ್ತದಲ್ಲಿ ಕೊಂಡೋಯ್ದಾಗ ಮಾತ್ರವೇ ಅವನೊಬ್ಬ ಉತ್ತಮ ಅಧಿಕಾರಿಯಾಗಲು ಸಾಧ್ಯ.‌

ಆತ್ಮ ಹತ್ಯೆ ಎಂಬುದೊಂದು ಪಾಪದ ಕಾರ್ಯ ಎಂಬ ಕನಿಷ್ಠ ಜ್ಞಾನ ಎಲ್ಲರಿಗೂ ಇರಬೇಕು

✍️ ರವೀ ಚಿಕ್ಕನಾಯಕನ ಹಳ್ಳಿ

Leave a Reply

Your email address will not be published. Required fields are marked *

error: Content is protected !!