ಸಾಹಿತ್ಯ ಬನದ ಕೋಗಿಲೆ ಕನಕ ನಾಯಕ

ದಾಸ ಸಾಹಿತ್ಯ ಬನದ ಕೋಗಿಲೆ

ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ, ಬಲ್ಲಿರಾ,  ಎಂದು ಜಾತಿ ನಿರ್ಮೂಲನಾ ಮಂತ್ರವನ್ನು ಹಾಡಿದ, ಹಿಂದುಳಿದ ವರ್ಗದಲ್ಲಿ ಹುಟ್ಟಿದ್ದರೂ ಸಹ  ದಾಸ ಸಾಹಿತ್ಯದಲ್ಲಿ  ಅಪ್ಪಟ ಬಂಗಾರವಾಗಿ,  ದಾಸ ಸಾಹಿತ್ಯ ಬನದ ಕೋಗಿಲೆಯಾಗಿದ್ದ ದಾಸವರೇಣ್ಯ, ಮಂಡಿಗೆ ಹಾಗೂ ಉಪಭೋಗಗಳ ಕರ್ತೃ ಶ್ರೀ ಭಕ್ತ ಕನಕದಾಸರ ಜಯಂತಿಯ ಶುಭಾಷಯಗಳು ಹಾಗೂ ಆ ಕನಕನಿಗೆ ನನ್ನ ಮನದಾಳದ ನಮನಗಳು

ನಮ್ಮ ಹಿಂದಿನ ಈ ಭರತ ಖಂಡದ ನೆಲೆಯ  ಪರಂಪರೆಯಲ್ಲಿ  ಜಾತಿ ಭೇದ ವೆಂಬುದು ಎಲ್ಲರಲ್ಲಿ  ಮನೆ ಮಾಡಿತ್ತು,  ಶೂದ್ರರು ತುಳಿತಕ್ಕೊಳಗಾಗಿದ್ದರು,  ಆ ಸಮಯದಲ್ಲಿ ಕಾರ್ತೀಕ ಕತ್ತಲೆಯಲ್ಲಿ ದೊಂದಿ ಬೆಳಕಾಗಿ ದಿಕ್ಕೆಟ್ಟವರಿಗೊಂದು ದಾರಿ ದೀಪವಾಗಿ ಅವತರಿಸಿ ಬಂದವರು ಜಗಜ್ಯೋತಿ ಬಸವೇಶ್ವರರು.. ಅವರ ಕಾಲದ  12 ನೇ ಶತಮಾನದಲ್ಲಿ ಶರಣ ಪರಂಪರೆ ಸಮಾಜದಲ್ಲಿ ಸಮ ಸಮಾಜವನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿತು, ನಂತರದಲ್ಲಿ ಹರಿದಾಸ ಪರಂಪರೆ ಬಹುದೊಡ್ಡ ಇತಿಹಾಸ ಹೊಂದಿದೆ. ದಾಸ ಪರಂಪರೆ ಮೊದಲಿಗೆ ಮುಳಬಾಗಿಲಿನ ಶ್ರೀಪಾದರಾಯರೊಂದಿಗೆ ಶುರುವಾದ ಪರಂಪರೆಯು ನಂತರದಲ್ಲಿ ಈ ನೆಲದ ಭಾಷೆ ಕನ್ನಡದಲ್ಲಿ, ಅದೂ ಆಡುಭಾಷೆಯಲ್ಲಿಯೇ ಹರಿ ಸಾಕ್ಷಾತ್ಕಾರ ಮಾಡಿಕೊಳ್ಳುವ ನಿಟ್ಟಿನಲ್ಲಿ ಅವರ ಶಿಷ್ಯರಾದ ವ್ಯಾಸರಾಯರು ಈ ಪರಂಪರೆಯನ್ನು ಕಟ್ಟಿಕೊಟ್ಟರು.  ನಂತರದೆ ಶ್ರೀ ವ್ಯಾಸರಾಜ ತೀರ್ಥರ ಶಿಷ್ಯರಾಗಿ ಪುರಂದರ ದಾಸರು ಹಾಗೂ ಕನಕ ದಾಸರು ಮುಂಚೂಣಿಗೆ ಬಂದು ಆಡು ಭಾಷೆಯಲ್ಲಿಯೇ, ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸಂಗೀತದ ಮೂಲಕ ಆ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಬಹುದೆಂದು ತೋರಿಸಿಕೊಟ್ಟಂತಹ ಮಹಾನ್ ಮೇರುಗಳವರು.   ಸಂಗೀತ ಪಿತಾಮಹ ಪುರಂದರದಾಸರು ಮೇಲ್ವರ್ಗದಲ್ಲಿ ಹುಟ್ಟಿದ್ದರೆ, ಕನಕದಾಸರು ಕುರುಬ ಸಮಾಜದಲ್ಲಿ ಹುಟ್ಟಿದ್ದರು.  ತಿಮ್ಮಪ್ಪ ನಾಯಕ ಎಂಬ ಹೆಸರಿನ  ದಂಡನಾಯಕನಾಗಿದ್ದು, ಅದ್ಯಾವ ಘಳಿಗೆಯಲ್ಲೋ ಹರಿ ಪ್ರೇರಣೆಯಿಂದ ಆಧ್ಯಾತ್ಮಿಕಕ್ಕೆ ಮನಸ್ಸು ಹೊರಳಿಸಿ ನಂತರ ವ್ಯಾಸರಾಯರಿಂದ ಕನಕದಾಸ ಎಂಬ ಹೆಸರು ಪಡೆದು, ಹರಿಭಕ್ತನಾಗಿ, ಈ ಸಮಾಜದ ವರ್ಗ ಸಂಘರ್ಷ, ಜಾತಿ ಸಂಘರ್ಷವನ್ನು ಕರ್ಮಠಗಳ ಸಿದ್ಧಾಂತಗಳನ್ನು ಹೆಕ್ಕಿ ಅದರಿಂದ  ನಿರುಪದ್ರವಿ ಗುಣಗಳನ್ನು ಮಾತ್ರ ಕನಕ ದಾಸರು ತಮ್ಮ  ಪರಂಪರೆಯಲ್ಲಿ ಹಾಡುಗಳು, ಸಂಗೀತದ ಮುಖೇನ ತಿಳಿಸಿದರು. ದಾಸ ಭಕ್ತಿ ಪರಂಪರೆಯ ಕಾಲದಲ್ಲಿ ಬಂದ ಕನಕದಾಸರು ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ಮನೋಭಾವದಿಂದ ದಾಸ ಸಾಹಿತ್ಯಕ್ಕೆ ವೈಚಾರಿಕ, ಸಮಾಜಮುಖಿ ನೆಲಗಟ್ಟನ್ನು ಭದ್ರಗೊಳಿಸಿದವರಲ್ಲದೆ ತುಳಿತಕ್ಕೊಳಗಾದ ಜರ್ಝರಿತರೂ ಕೂಡ ತಲೆ ಎತ್ತಿ ನಿಲ್ಲುವಂತೆ ನೋಡನೋಡಿಕೊಂಡರವರು ನಮ್ಮ ಹೆಮ್ಮೆಯ ಕನಕ ದಾಸರು.

ಸಂಸ್ಕೃತ ಎಂಬುವುದು ಕನ್ನಡ  ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿತ್ತು. ಕಾವ್ಯ ಸ್ವರೂಪಗಳು ಕೇವಲ ಸಂಸ್ಕೃತದಲ್ಲಿದ್ದು ಅದು ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಾಗಿದ್ದು ಸಾಹಿತ್ಯ ಎಂಬುದು ಜನ  ಸಾಮಾನ್ಯರ ಬಳಿ ಸುಳಿದುದೇ ಮೊದಲಿಗೆ  ಶರಣ ಸಾಹಿತ್ಯದಿಂದ  12 ನೇ ಶತಮಾನದಲ್ಲಿ ಮೊದಲ್ಗೊಂಡು ಶಿವಶರಣರ, ವಚನಕಾರರ ಮೂಲಕ ಜನ ಸಾಮಾನ್ಯರ,  ಜನ ಮನಸ್ಸನ್ನು ಹೊಕ್ಕಿತ್ತು.  13 ನೇ ಶತಮಾನದಿಂದ ದಾಸ ಸಾಹಿತ್ಯ ಮೇರು ಪರ್ವದಲ್ಲಿದ್ದು ಜನಸಾಮಾನ್ಯರ ಮನೆ-ಮನ ಮುಟ್ಟಿತ್ತು. ಅದರಲ್ಲೂ ಪುರಂದರದಾಸ-ಕನಕದಾಸರ ಕಾಲವನ್ನು ಸುವರ್ಣ ಯುಗ ಎಂದೇ ಕರೆಯಬಹುದು.  ಸಾಹಿತ್ಯವನ್ನು ದಾಸಸಾಹಿತ್ಯದ ಮೂಲಕ ಕನಕದಾಸರು ಇನ್ನಷ್ಟು ಸರಳಗೊಳಿಸಿದರು. ಹೀಗಾಗಿಯೇ ಕನಕದಾಸರು ಹೊಸಗನ್ನಡದ  ಸಾಹಿತ್ಯ ಕೋಗಿಲೆ   ದಾಸಸಾಹಿತ್ಯದ ಬನದ ಕೋಗಿಲೆ ಎಂಬ ಬಿರುದಾಂಕಿತರಾಗಿದ್ದರು.

ಕನಕದಾಸರು (1508 – 1606) ಸಾಮಾನ್ಯ ಕುರುಬ ಜನಾಂಗದಲ್ಲಿ ಹುಟ್ಟಿದರೂ ತಮ್ಮ ಸ್ವಸಾಮರ್ಥ್ಯ ಮತ್ತು ಪ್ರತಿಭೆಯಿಂದಲೇ ಹಿರಿಮೆಗಳಿಸಿದರು. ಕನಕರು ಕೆಳಸ್ತರದಿಂದ ಬಂದಾಗಲಿಂದ ಕೆಳಜಾತಿಯ ನೋವು, ನಲಿವು ಅವರ ಅರಿವು ಕನಕರ ಸಾಹಿತ್ಯದಲ್ಲಿ ಮಾರ್ದನಿಸಲು ಶುರು ಮಾಡಿತು.  ತಮ್ಮ ಸಮಕಾಲೀನ ದಾಸರಂತೆ ಹರಿಯನ್ನು ಹೊಗಳದೆ ” ಆರು ಬದುಕಿದರಯ್ಯಾ ಹರಿ ನಿನ್ನ ನಂಬಿ ಎಂಬ ವಾಸ್ತವದಲ್ಲಿಯ  ವೈಚಾರಿಕ ನೆಲೆಯಲ್ಲಿ ಹರಿಯನ್ನು ಪ್ರಶ್ನಿಸಿ, ತಮ್ಮ ವಿಶಿಷ್ಠ ವೈಚಾರಿಕ ದೃಷ್ಟಿಯಿಂದ ಬದುಕಿನ ನೈಜ್ಯ ಚಿತ್ರಣವನ್ನು ನೀಡಿ, ಮುಂದಿನ  ಪೀಳಿಗೆಗೆ ಸಾಹಿತ್ಯ ಹರಿಸಿದರು. ಈ ಕಾರಣವೇ ಕನಕನಿಗೆ ದಾಸರ ದಾಸ ಎಂದೆನಿಸಿಕೊಳ್ಳಲು ಸಾಧ್ಯವಾಗಿಸಿತು.

    ಕನಕದಾಸರು ಕನ್ನಡದ ಪ್ರಮುಖ ಸಂತ ಕವಿಗಳಲ್ಲಿ ಒಬ್ಬರು. ಅವರು ಮೇಲು ಜಾತಿ ಮತ್ತು  ವರ್ಗದವರು ಒಡ್ಡಿದ ಅಗ್ನಿಪರೀಕ್ಷೆಯಲ್ಲಿ ಪಾಡುಪಟ್ಟು, ತನ್ನ ಭಕ್ತಿ-ಪ್ರತಿಭೆಗಳನ್ನು ತೋರಿಸಬೇಕಾಯಿತು. ಅವರು ಅನುಭವಿಸಿದ ತಲ್ಲಣಗಳು ಮತ್ತು ಇಕ್ಕಟ್ಟುಗಳು ಅವರ ಕೃತಿಗಳಲ್ಲಿ ಹಲವು ಬಗೆಗಳಲ್ಲಿ ಮೂಡಿಬಂದಿವೆ. ಕನಕದಾಸರು ಕೀರ್ತನೆಗಳು ಮತ್ತು ಕಾವ್ಯಗಳು ಎರಡನ್ನೂ ರಚಿಸಿದ ಕೆಲವೇ ಕೆಲವು ಹರಿದಾಸರಲ್ಲಿ ಒಬ್ಬರೆಂಬ ಸಂಗತಿಯನ್ನು ಗಮನಿಸಬೇಕು. ಆ ಕಾಲದ ಸಾಹಿತ್ಯ ಸಂದರ್ಭದಲ್ಲಿ ಕನಕದಾಸರಿಗೆ ವಿಶಿಷ್ಟವಾದ ಹಿನ್ನೆಲೆಯಿತ್ತು.  ಅವರ ತವರು ನೆಲವಾದ ಕಾಗಿನೆಲೆಯಲ್ಲಿ ಇಂದಿಗೂ ಇರುವ ಆದಿಕೇಶವನ ಗುಡಿಯ ದೇವತೆಯಾದ ಕೇಶವನು ಅವರ ಆರಾಧ್ಯದೈವವಾಗಿದ್ದು ಅವೆರ ಅಂಕಿತವಾದ ಕಾಗಿನೆಲೆಯಾದಿಕೇಶವರಾಯ ಎನ್ನುವುದು ಅಲ್ಲಿಂದಲೇ ಬಂದಿದೆ. ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಮಾಡಿದ ನಿರಂತರವಾದ ತಿರುಗಾಟಗಳು ಮತ್ತು ಮತಾಂಧರಾದ ಧಾರ್ಮಿಕ ಮುಖಂಡರೊಂದಿಗಿನ ಅವರ ಮುಖಾಮುಖಿಗಳು ಸಾಹಸ-ವಿಷಾದಗಳೀಂದ ಕೂಡಿವೆ. ಅವರ ಯಾತನೆಗಳು, ಭಾವಗೀತೆಯಂತಹ ಕೀರ್ತನೆಗಳಲ್ಲಿ ಬಹಳ ಸಮರ್ಥವಾದ ಅಭಿವ್ಯಕ್ತಿಯನ್ನು ಪಡೆದಿವೆ. ಕನಕದಾಸರ ಹಿರಿಯರೂ ಸಮಕಾಲೀನರೂ ಆದ ವ್ಯಾಸರಾಯರು, ಪುರಂದರದಾಸರು ಮುಂತಾದವರು ಅವರ ಭಕ್ತಿ ಮತ್ತು ಪ್ರತಿಭೆಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. ಆದರೆ, ಮತಾಂಧರಾದ ಮೇಲುಜಾತಿಗಳವರು ಅವರ ಯೋಗ್ಯತೆಯನ್ನು ಪ್ರಶ್ನಿಸಿದರು. ಅವರು ಶ್ರೀವೈಷ್ಣವ ಸಿದ್ಧಾಂತವನ್ನು ಇಷ್ಟಪಟ್ಟಿದ್ದರೆಂಬ ಊಹಾಪೋಹಗಳಿವೆ. ಅದೇನೇ ಇರಲಿ, ದ್ವೈತ ತಾತ್ವಿಕತೆಯ ಮೂಲ ನೆಲೆಗಳಿಗೆ ಕೊಂಚವಾದರೂ ನಿಷ್ಠೆಯನ್ನು ತೋರಿಸುವುದು ಅವರಿಗೆ ಅನಿವಾರ್ಯವಾಗಿತ್ತು. ಆದ್ದರಿಂದಲೇ, ಅವರ ಅನೇಕ ಕೀರ್ತನೆಗಳು ಆ ಧರ್ಮದ ಚೌಕಟ್ಟನಲ್ಲಿ ರಚಿತವಾಗಿವೆ. ಆದರೆ, ಅವರು ಅಂತರಂಗದ ಭಾವನೆಗಳಿಗೆ ಕಟ್ಟುಪಾಡಿಲ್ಲದೆ, ನುಡಿಗೊಡುವ ಅನೇಕ ಕೀರ್ತನೆಗಳನ್ನು ಹಾಡಿಕೊಂಡಿದ್ದಾರೆ. ಅವರ ಅತ್ಯದ್ಬುತವಾದ ರಚನೆಗಳು

*ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮಕುಲದ ನೆಲೆಯೇನಾದರೂ ಬಲ್ಲಿರಾ, ಕುಲದ ಕುಲವೆನ್ನುತಿಹರು ಕುಲವನ್ಯಾವುದು ಸತ್ಯ ಸಖ್ಯವುಳ್ಳ ಜನರಿಗೆ, ಆತ್ಮ ಯಾವ ಕುಲ ಜೀವ ಯಾವ ಕುಲ ತತ್ವೇಂದ್ರೀಯ ಕುಲ ಪೇಳಿರಯ್ಯ, ಆಳುವರಸನ ಓಡ್ಡೋಲಗ ಮೃಷ್ಠಾನಕ್ಕಿಂತ ಬಡವನಾ ಮನೆಯ ರಬ್ಬಳಿಕೆ ಲೇಸು, ಗಿಳಿಯ ಮರಿಯನು ತಂದು ಪಂಜರದೊಳಗೆ ಪೋಷಿಸಿ, ನೀ ಮಾಯೆಯೊಳಗೋ, ಮಾಯೆ ನಿನ್ನೊಳಗೋ, ನಮ್ಮಮ್ಮ ಶಾರದೆ, ಉಮಾಮಹೇಶ್ವರಿ,  ಏನೂ ಇಲ್ಲದ ಎರಡು ದಿನದ ಸಂಸಾರ,  ಹೀಗೆ ಸಾಮಾಜಿಕ ಕಳಿಕಳಿಯ ಕ್ರಾಂತಿಕಾರಕ ಆಡು ಮಾತುಗಳನ್ನೇ ಸಾಹಿತ್ಯವನ್ನಾಗಿ ಮಾರ್ಪಡಿಸಿ, ಅದಕ್ಕೊಂದು ಸಂಗೀತವನ್ನಳವಡಿಸಿ, ಕಾಲಿಗೆ ಗೆಜ್ಜೆ, ಕೈಯ್ಯಲ್ಲಿ ತಂಬೂರಿ ಹಿಡಿದ ಕನಕದಾಸರು ಈ ಕನ್ನಡ ದಾಸ ಸಾಹಿತ್ಯ ಬನದ ಕೋಗಿಲೇಯೇ ಆಗಿದ್ದು ನಮ್ನ ಸಂಸ್ಕೃತಿಯನ್ನು ಮೇಲಸ್ತರಕ್ಕೆ ತಂದ ಪುಣ್ಯಾತ್ಮರೂ ಹೌದು.

ಇಂತಹ ಕ್ರಾಂತಿಕಾರಕ ಆಡು ಮಾತುಗಳನ್ನೇ ಸಾಹಿತ್ಯ ರೂಪದಲ್ಲಿ ತಂದಂತಹ ದಾಸವರೇಣ್ಯರು ನಮ್ಮ ಕನಕದಾಸರು,  ನಂತರದಲ್ಲಿ ಹರಿನಾಮ ಚರಿತ, ಮೋಹನ ತರಂಗಿಣಿ ಮುಂತಾದ ಕೃತಿಗಳನ್ನು ರಚಿಸಿದರು, ಸರಿ ಸುಮಾರು 98 ವರ್ಷಗಳ ಕಾಲ ಜೀವಿಸಿ ಕಾಗಿನೆಲೆಯಾದಿಕೇಶವನಲ್ಲಿ ಲೀನಗೊಂಡ ದಾಸರ ದಾಸ, ಶ್ರೇಷ್ಠ ದಾಸ, ನಾವೆಲ್ಲರೂ ಆ ದಾಸನ ದಾಸರು, ಅಂತಹ ಶ್ರೇಷ್ಠರು ನಮ್ಮ  ಕನಕ ದಾಸರು

ಕನಕ ದಾಸರ ಜಯಂತಿಯ ಶುಭಾಷಯಗಳು

✍️ ರವೀ ಚಿಕ್ಕನಾಯಕನ ಹಳ್ಳಿ

Leave a Reply

Your email address will not be published. Required fields are marked *

error: Content is protected !!