ಶರಣೆ ಕಾಲಕಣ್ಣಿಯ ಕಾಮಮ್ಮ

ರವೀಶ್ ಚಿಕ್ಕನಾಯಕನಹಳ್ಳಿ ಸಿ.ಆರ್. ಎಸ್ಪಿ. ತುಮಕೂರು

ಕಾಲಕಣ್ಣಿ ಎಂಬುದು ಕಾಮಮ್ಮನ ವೃತ್ತಿ ಸಂಬಂಧವಾದ ವಿಶೇಷಣವಾಗಿದೆ. ಆಡುನುಡಿಯಲ್ಲಿ ಕಣ್ಣಿ ಎಂಬುದು ದನ, ಕರು, ಕುರಿಗಳನ್ನು ಕಟ್ಟಿಹಾಕುಲಿಕ್ಕೆ ಬಳಸುವಂತಹ ಹಗ್ಗದಿಂದ ತಯಾರು ಮಾಡಿದ ಸಾಧನವಾಗಿದೆ. ಬಹುಷಃ ಈಕೆಯು ಇಂಥಹ ಕಣ್ಣಿಗಳನ್ನು ತಯಾರು ಮಾಡಿ ಅದನ್ನು ಮಾರಾಟಮಾಡುವಂತಹ ಕಾಯಕ ನಿಷ್ಠೆಯವಳು ಎಂದು ಕೊಳ್ಳಬಹುದಾಗಿದೆ. ಹಾಗಾಗಿಯೇ ಈಕೆಗೆ ಕಾಲಕಣ್ಣಿಯ ಕಾಮಮ್ಮ ಎಂಬ ಹೆಸರು ಬಂದಿರಬಹುದೆಂದು ಅಂದಾಜಿಸಲಾಗಿದೆ. ಈಕೆಯು ಕೊರವರ ಸಮೂದಾಯಕ್ಕೆ ಸೇರಿದ ಶರಣೆ ಆಗಿರಬಹುದೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

ಶರಣೆ ಕಾಲಕಣ್ಣಿಯ ಕಾಮಮ್ಮನ ಬಗ್ಗೆ ಇತಿಹಾಸದ ಪುಟಗಳಲ್ಲಿ ಹೆಚ್ಚಿನ ಮಾಹಿತಿಗಳು ನಮಗೆ ದೊರೆತಿರುವುದಿಲ್ಲ. ಸಕಲ ಪುರಾತನರ ವಚನಗಳು ಎಂಬ ಕಟ್ಟುಗಳಲ್ಲಿ ಮಾತ್ರವೇ ಬಸವಾದಿ ಪ್ರಮಥರ ಸಮಕಾಲೀನ ಶರಣೆಯರ ಜೊತೆಗೆ ಈಕೆಯ ಹೆಸರೂ ಸಹ ತಳುಕು ಹಾಕಿಕೊಂಡು, ಈಕೆಯ ಒಂದು ವಚನ ಮಾತ್ರವೇ ಆ ಕಟ್ಟುಗಳಲ್ಲಿ ದೊರೆತಿರುವುದರಿಂದ ಈಕೆಯ ಜೀವನದ ಕಾಲಘಟ್ಟವೂ ಸಹ 12 ನೇ ಶತಮಾನವೆಂದೂ, ಅವಳು ಕಲ್ಯಾಣ ಪಟ್ಟಣದಲ್ಲಿಯೇ ಬದುಕಿದ್ದಳೆಂದೂ ನಾವು ತಿಳಿಯಬಹುದಾಗಿದೆ. ಈಕೆಯ ಒಂದೇ ಒಂದು ವಚನವು ದೊರೆತಿದ್ದು, ಈಕೆಯು ನಿರ್ಭೀತಿ ನಿಜಲಿಂಗ ಎಂಬ ಅಂಕಿತ ನಾಮವನ್ನು ಇಟ್ಟುಕೊಂಡು ತನ್ನ ವಚನವನ್ನು ರಚಿಸಿದ್ದಾಳೆ.

ಶರಣೆ ಕಾಲಕಣ್ಣಿಯ ಕಾಮಮ್ಮಳ ವಚನ

ಎನ್ನ ಕರಣಂಗಳ ಲಿಂಗದಲ್ಲಿ ಕಟ್ಟುವೆ
ಗುರುಲಿಂಗಜಂಗಮದ ಕಾಲ ಕಟ್ಟುವೆ
ವ್ರತಭ್ರಷ್ಟರ ನಿಟ್ಟೊರಸುವೆ, ಸುಟ್ಟು ತುರುತುರನೆ ತೂರುವೆ, ನಿರ್ಭೀತ ನಿಜಲಿಂಗದಲ್ಲಿ ?

ಶರಣೆ ಕಾಮಮ್ಮಳು ತನ್ನ ವಚನದಲ್ಲಿ ವ್ರತ ಭ್ರಷ್ಠತೆಯನ್ನು ಕುರಿತು ಕಟು ವಿರೋಧವನ್ನು ವ್ಯಕ್ತ ಪಡಿಸುತ್ತಾಳೆ. ಈಕೆಯ ವಚನದಲ್ಲಿ ವ್ರತ ಭ್ರಷ್ಠರ ನಿಟ್ಟೊರುಸುವೆ, ಸುಟ್ಟು ತುರತುರನೆ ತೂರುವೆ ಎನ್ನುವಲ್ಲಿ ಆಕೆಯ ವ್ರತ ಭ್ರಷ್ಠರ ವಿರುದ್ದದ ತೀಕ್ಷ್ಣತೆಯ ಕೋಪವನ್ನು ಪ್ರಕಟಿಸುತ್ತಾಳೆ. ಇದು ಅವಳ ವಚನದ ಕೊನೆಯ ಎರಡು ಸಾಲಾದರೆ ಮೊದಲನೆಯ ಸಾಲಿನಲ್ಲಿ ತನ್ನ ಕಾಯಕ ಸಂಬಂಧಿತವಾಗಿ ಕಣ್ಣಿಯ ಬಗ್ಗೆಯೇ ಹೇಳುತ್ತಾಳೆ. ಚಂಚಲವಾದ ನಮ್ಮ ಇಂದ್ರಿಯಗಳನ್ನು ಲಿಂಗದ ಮೂಲಕ ಕಟ್ಟುವ, ಬಂಧಿಸುವ ಅವಳ ಪರಿಕಲ್ಪನೆಯು ಬಲು ಅದ್ಬುತವಾದದ್ದು. ಆಕೆಯ ಪ್ರಕಾರ ನಮ್ಮ ಪಂಚೇಂದ್ರೀಯಗಳು ತುಗುಡು ( ಕಳ್ಳ ) ದನಗಳು ಇದ್ದ ಹಾಗೆ ಎಂದು ಹೇಳುತ್ತಾ, ಆ ತುಗುಡು ದನಗಳನ್ನು ನಿರ್ಭಯ ನಿಜಲಿಂಗನಲ್ಲಿ ವ್ರತ ಭ್ರಷ್ಠಾಚಾರಿಯಾಗದೆ ಅವುಗಳನ್ನು ಕಟ್ಟಿ ಹಾಕಬೇಕು, ಅಂದರೆ ಆ ಪಂಚೇಂದ್ರಿಯಗಳನ್ನು ಬಂಧಿಸುವುದಾದರೂ ಹೇಗೆ ? ಅಂದರೆ ನಮ್ಮ ಪಂಚೇಂದ್ರಿಯಗಳನ್ನು ಗುರು – ಲಿಂಗ – ಜಂಗಮ ಎಂಬ ಕಣಿಗಳಿಂದ ಪಂಚೇಂದ್ರಿಯಗಳನ್ನು ನಿರ್ಭಂಧಿಸಿ ಜೀವನದ ಅನುಭಾವವನ್ನು ಗಳಿಸಬೇಕು ಎಂದು ತನ್ನ ವಚನದಲ್ಲಿ ನಿರ್ಭಿಡೆಯಿಂದ ಹೇಳುತ್ತಾಳೆ.‌

ಹೀಗೆ ಶರಣೆ ಕಾಲಕಣ್ಣಿಯ ಕಾಮಮ್ಮಳು ಕಾಯಕ ಪ್ರಜ್ಣೆ ಯೊಂದಿಗೆ, ಗುರು, ಲಿಂಗ, ಜಂಗಮ, ದಾಸೋಹಗಳಿಂದ ನಮ್ಮ ಪಂಚೇಂದ್ರಿಯಗಳನ್ನು ನಿರ್ಭಂದಿಸಿಕೊಂಡು ತನ್ನ ಜೀವನವನ್ನು ಸಾಕ್ಷಾತ್ಕಾರಗೊಳಿಸಿಕೊಂಡ ಒಬ್ಬ ಧೀರೋಧ್ದಾತ ಶರಣೆ ಎಂಬುದರಲ್ಲಿ ಸಂಶಯವಿಲ್ಲ.

✍️ ರವೀ ಚಿಕ್ಕನಾಯಕನ ಹಳ್ಳಿ Cr.Sp.Tumkur

Leave a Reply

Your email address will not be published. Required fields are marked *

error: Content is protected !!