ತನ್ನ ತಾ ಅರಿವುದು ಕಣ್ಣೋ , ಕನ್ನಡಿಯೋ ?!

ಶರಣ ಕಾಮಾಟದ ಭೀಮಣ್ಣ

ಶರಣ ಪರಂಪರೆಯಲ್ಲಿ ಶರಣರುಗಳು ತಮ್ನ ಆಧ್ಯಾತ್ಮ ವಿಚಾರಗಳನ್ನು , ಆಧ್ಯಾತ್ಮಿಕ ಸಾಧನೆಗಳನ್ನು ತಮ್ಮಗಳ ಕಾಯಕದ ಪರಿಭಾಷೆಯಲ್ಲಿಯೇ ವಚನಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಶರಣರುಗಳು ಕಾಯ – ಕಾಯಕ, ಅರಿವು – ಆಧ್ಯಾತ್ಮ, ಅಂತರಂಗ – ಬಹಿರಂಗ, ಅನುಭವ – ಅನುಭಾವಗಳನ್ನು ಕಾಯಕದೊಂದಿಗೆ ಸಂಯೋಜಿಸಿ, ಕಾಯಕ ಬೇರೆ ಅಲ್ಲ, ಅನುಭಾವ ಬೇರೆ ಅಲ್ಲ ಎಂಬುದನ್ನು ತಮ್ಮ ವಚನಗಳ ಮುಖಾಂತರ ತೋರಿಸಿದ್ದಾರೆ. ಆದ್ದರಿಂದಲೇ ಅವರ ಪರಿಭಾಷೆಯು ಕಾಯಕ ಪರಿಭಾಷೆ. ಹೀಗೆ ಕಾಯಕದೊಂದಿಗೆ ಆಧ್ಯಾತ್ಮವನ್ನು ಬೆರೆಸಿ, ಜನ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಆಧ್ಯಾತ್ಮದ ತಿರುಳನ್ನು ಈ ಜಗಕ್ಕೆ ಉಣಬಡಿಸಿ ಆತ್ಮೋಧ್ದಾರದ ಮಾರ್ಗಗಳನ್ನು ತಿಳಿಸಿದಂತಹ ಪರಂಪರೆ ಇದು. ಇಂತಹ ಪರಂಪರೆಯಲ್ಲಿ ಕಾಯಕವೇ ಮುಖ್ಯವಾಗಿ ಎಲ್ಲಾ ವರ್ಗದ, ಎಲ್ಲಾ ಜಾತಿಯವರೂ ಈ ಶರಣ ಪರಂಪರೆಯಲ್ಲಿ ಭಾಗವಹಿಸಿ ಆ ಪರಂಪರೆಯೇ ಕ್ರಾಂತಿ ರೂಪ ಪಡೆಯುವಂತೆ ಮಾಡಿ ಈ ಜಗತ್ತಿಗೆ ಮಹದುಪಕಾರ ಮಾಡಿದರು. ಅಂತಹ ಪರಂಪರೆಯಲ್ಲಿ ಶರಣ ಕಾಮಾಟದ ಭೀಮಣ್ಣ ನೂ ಸಹ ಒಬ್ಬ ಶರಣನಾಗಿ, ವಚನಕಾರನಾಗಿ ಹೊರಹೊಮ್ಮಿದ್ದಾನೆ.

ಶರಣ ಕಾಮಾಟದ ಭೀಮಣ್ಣನು ಬಸವಾದಿ ಪ್ರಮಥರ ಕಾಲಘಟ್ಟದವನು. ಇವನ ಜೀವಿತಾವಧಿಯು 1160 ಎಂದು ತಿಳಿದು ಬರುತ್ತದೆ. ಈತನ ಬಗ್ಗೆ, ಈತನ ಪೂರ್ವಾಪರದ ಬಗ್ಗೆ ಹೆಚ್ಚೇನೂ ಮಾಹಿತಿಗಳು ದೊರೆತಿಲ್ಲ. ಕಾಮಾಟದ ಭೀಮಣ್ಣ ಹಾಗೂ ಕಾಮವಟ್ಟದ ಭೀಮಣ್ಣ ಈ ಇಬ್ಬರೂ ಒಂದೇ ಎಂದು ಪರಿಗಣಿಸಿದ್ದರೂ ಸಹ ಇದರ ಬಗ್ಗೆ ಹೆಚ್ಚು ಸಂಶೋಧನೆ ನಡೆಸುವ ಅವಶ್ಯಕತೆ ಇದೆ. ಈ ಕಾಮಾಟದ ಭೀಮಣ್ಣ ನ ಕಾಯಕವು ಮನೆ, ಕಟ್ಟಡ, ಪ್ರತಿಮೆಗಳನ್ನು ಕಟ್ಟುವ ಕಾಯಕ ಮಾಡಿಕೊಂಡಿದ್ದವನು. ಈತನು ಕಟ್ಟಡ ಕಟ್ಟುವ ಕೆಲಸದಲ್ಲಿ ಬರುವ ಸಂಭಾವನೆಯಲ್ಲೇ ದಾಸೋಹ ನಡೆಸುತ್ತಿದ್ದ ಶರಣ ಶ್ರೇಷ್ಠ. ಈತನ ಒಟ್ಟು ನಾಲ್ಕು ವಚನಗಳು ನಮಗೆ ದೊರಕಿರುತ್ತವೆ. ಈತನ ವಚನಗಳ ಅಂಕಿನ ನಾಮವು ಧಾರೇಶ್ವರ ಲಿಂಗ ಎಂಬುದಾಗಿದೆ. ಈತನ ವಚನಗಳು ಬೆಡಗಿನ ವಚನದಿಂದ ಕೂಡಿದ್ದು, ಈತನ ವಚನಗಳಲ್ಲಿ ಅನುಭಾವ, ಆಧ್ಯಾತ್ಮಿಕತೆಯು ಕಂಡು ಬರುತ್ತದೆ.

ಶರಣ ಕಾಮಾಟದ ಭೀಮಣ್ಣನವರ ವಚನಗಳು

ಮೂರು ಕೋಲ ಬ್ರಹ್ಮಂಗೆ ಅಳದು ಕೊಟ್ಟೆ;
ನಾಲ್ಕು ಕೋಲ ವಿಷ್ಣುವಿಂಗೆ ಆಳದು ಕೊಟ್ಟೆ;
ಐದು ಕೋಲ ರುದ್ರಂಗೆ ಅಳದು ಕೊಟ್ಟೆ;
ಆರು ಕೋಲ ಈಶ್ವರಂಗೆ ಅಳದು ಕೊಟ್ಟೆ;
ಒಂದು ಕೋಲ ಸದಾಶಿವಂಗೆ ಅಳದು ಕೊಟ್ಟೆ.
ಇಂತೀ ಐವರು ಕೋಲಿನ ಒಳಗು ಹೊರಗಿನಲ್ಲಿ
ಅಳಲುತ್ತ ಬಳಲುತ್ತ ಒಳಗಾದರು. ಇಂತೀ ಒಳ ಹೊರಗ ಸೋಧಿಸಿಕೊಂಡು ಅಳಿವು ಉಳಿವಿನ ವಿವರವನರಿಯಬೇಕು, ಧಾರೇಶ್ವರ ಲಿಂಗವನರಿವುದಕ್ಕೆ

ತನ್ನ ಕಣ್ಣಿನಿಂದ ಕನ್ನಡಿಯ ನೋಡಿ
ತನ್ನ ತಾನೆ ಅರಿವುದು ಕಣ್ಣೋ ಕನ್ನಡಿಯೋ?
ಕನ್ನಡಿಯೆಂದಡೆ ಅಂಧಕಂಗೆ ಪ್ರತಿರೂಪಿಲ್ಲ.
ಇದು ಕಾರಣದಲ್ಲಿ ಅವರರಿವ ತಾನರಿದು ತನ್ನರಿವ ಅವರರಿದು ಉಭಯದರಿವು ಒಡಗೂಡುವನ್ನಕ್ಕ ಹಿಂದಣ ಕುರುಹು ಮುಂದಣ ಲಕ್ಷ್ಯವ ವಿಚಾರಿಸಿ ಮರೆಯಬೇಕು ಧಾರೇಶ್ವರಲಿಂಗನ ಕೂಡಬಲ್ಲಡೆ.

ಈ ಮೇಲ್ಕಂಡ ವಚನಗಳಲ್ಲಿ‌ *ನಾವು ನಿರಂಗಿಗಳೆಂದು ಕರೆದುಕೊಳ್ಳುವವರನ್ನು ಏಕ ವಚನದಲ್ಲಿ ವಿಡಂಬಿಸಿದ ಈ ವಚನಕಾರನು ದೇಹಕ್ಕೆ ಬಲು ಮಾನ್ಯತೆ ಕೊಟ್ಟಿದ್ದಾನೆ. ದೇವರು ಕರುಣಿಸಿದ ಈ ದೇಹವನ್ನು ಸದ್ಬಳಕೆ ಮಾಡಿಕೊಳ್ಳುವ ಧ್ವನಿಯನ್ನು ವ್ಯಕ್ತ ಪಡಿಸಿದ್ದಾನೆ.‌ ಸರ್ವಸಂಗ ಪರಿತ್ಯಾಗವ ಮಾಡಿದವರನ್ನು ವಂಗ್ಯವಾಡಿದ್ದಾನೆ. ಈತನ ವಚನಗಳಲ್ಲಿ ತರ್ಕ ಬದ್ದವಾದ ವಾದವನ್ನು ಮಂಡಿಸಿದ್ದಾನೆ. ಹಾಗಾಗಿಯೇ *ಹಿಂದಣ ಕುರುಹು, ಮುಂದಣ ಲಕ್ಷ್ಯವ ತಿಳಿಯಬಹುದೆಂದು ಅರುಹಿದ್ದಾನೆ.

✍️ ರವೀ ಚಿಕ್ಕನಾಯಕನ ಹಳ್ಳಿ

Leave a Reply

Your email address will not be published. Required fields are marked *

error: Content is protected !!