ಪುಣ್ಯ ಸ್ತ್ರೀ ಕೇತಲದೇವಿ

೦ ರವೀಶ್ ಚಿಕ್ಕನಾಯಕನಹಳ್ಳಿ ಸಿ.ಆರ್. ಎಸ್ಪಿ ತುಮಕೂರು

12 ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಚಿಗುರಿದ ಶರಣ ಕ್ರಾಂತಿಯು ನಮ್ಮ ಭಾರತದ ಇತಿಹಾಸದಲ್ಲಿಯೇ ಒಂದು ನಿರ್ಣಯದ ಕಾಲಘಟ್ಟವಾಗಿ ಭಾರತದ ಮುಂದಿನ ಭವಿಷ್ಯವನ್ನೇ ಬದಲಾಯಿಸುವಂತಹ ದಿಕ್ಸೂಚಿಯಾಯಿತು ಎಂದರೂ ತಪ್ಪಾಗಲಿಕ್ಕಿಲ್ಲ. ಬಸವಣ್ಣನವರು ಸ್ತ್ರೀ ಶೋಷಣೆಯ ವಿರುದ್ದ ಧ್ವನಿ ಎತ್ತಿದರು. ಕೇವಲ‌ ಅಡುಗೆ ಮನೆಯಲ್ಲಿ ಅಡುಗೆ ಮಾಡಿಕೊಂಡು, ಮಕ್ಕಳನ್ನು ಹೆರುವಂತಹ ಯಂತ್ರವೇ ಆಗಿದ್ದಂತಹ ಸ್ತ್ರೀಯರಿಗೂ ಸಮಾನತೆಯ ಹಕ್ಕನ್ನು ಸಮರ್ಪಿಸಲಾಯಿತು‌. ಇದರಿಂದ ಅಕ್ಕಮಹಾದೇವಿಯವರ ನೇತೃತ್ವದಲ್ಲಿ 37 ವಚನಕಾರ್ತಿಯರು ಬೆಳಕಿಗೆ ಬಂದರು. ಲಕ್ಕಮ್ಮ, ಸತ್ಯಕ್ಕ, ಕಾಳವ್ವೆ, ಅಕ್ಕ ನಾಗಮ್ಮ ಹೀಗೆ ಹಲವಾರು ವಚನಕಾರ್ತಿಯರು ಈ ಶರಣ ಪರಂಪರೆಯಲ್ಲಿ ಮಿನುಗುವ ನಕ್ಷತ್ರಗಳಾದರು. ವೇಶ್ಯೆಯರು ಎಂದರೆ ಮೂಗುಮುರಿಯುವ ಕಾಲಘಟ್ಟದಲ್ಲಿ ಕಲ್ಯಾಣದ 12000 ಮಂದಿ ವೇಶ್ಯೆಯರಿಗೆ ಲಿಂಗ ಪ್ರಸಾದ ಮಾಡಿ ಪನ್ನಾಂಗಿಯರನ್ನು ಲಿಂಗಾಂಗಿಗಳನ್ನಾಗಿ ಮಾಡಿದಂತಹ ಕಾಲಘಟ್ಟವದು. ಅಂತಹ ಲಿಂಗಾಂಗಿಗಳಾದ ವೇಶ್ಯೆಯರನ್ನು ಅತ್ಯಂತ ಗೌರವ ಪೂರ್ವಕವಾಗಿ ಪುಣ್ಯಸ್ತ್ರೀ ಎಂದು ಕರೆದ ಶ್ರೇಷ್ಠ ಪರಂಪರೆ ಅದಾಗಿತ್ತು‌ . ಅಂತಹ ಪುಣ್ಯಸ್ತ್ರೀ ಯವರಲ್ಲಿ ಕುಂಬಾರ ಗುಂಡಯ್ಯನ ಪತ್ನಿಯೂ, ವಚನಕಾರ್ತಿಯೂ, ಶರಣೆಯೂ ಆಗಿದ್ದವಳು ಶರಣೆ ಪುಣ್ಯಸ್ತ್ರೀ ಕೇತಲ ದೇವಿ

ಶರಣೆ ಪುಣ್ಯಸ್ತ್ರೀ ಕೇತಲ ದೇವಿಯು ಮಡಕೆ ಮಾಡುವ ಕುಂಬಾರ ಕಾಯಕದಲ್ಲಿ ನಿರತನಾಗಿದ್ದ ಗುಂಡಯ್ಯನ ಹೆಂಡತಿ. ಈಕೆಯ ಊರು ಈಗಿನ‌ ಬೀದರ ಜಿಲ್ಲೆಯ ಭಾಲ್ಕಿ ಯವಳು. ಅಂದರೆ ಕಲ್ಯಾಣದ ಆಸುಪಾಸಿನಿಂದ ಬಂದವಳು. ಈಕೆಯು ಬಸವಣ್ಣನವರ ಸಮಕಾಲೀನಳು, ಈಕೆಯು 1160 ರಲ್ಲಿ ಕಲ್ಯಾಣದಲ್ಲಿದ್ದಳು ಎನ್ನಲಾಗಿದೆ. ಈಕೆಯು ಗಂಡನಿಗೆ ಕಾಯಕದಲ್ಲಿ ಸಹಾಯ ಮಾಡುತ್ತಾ, ಅನುಭವ ಮಂಟಪದ ಅನುಭಾವ ಗೋಷ್ಠಿಗಳಲ್ಲಿಯೂ ಭಾಗವಹಿಸುತ್ತ, ನೇಮ, ವ್ರತ ನಿಷ್ಟೆ, ಲಿಂಗ ಪ್ರಸಾದನ ನಿಷ್ಠೆ ಹೊಂದಿದವಳಾಗಿದ್ದಳು. ಲಿಂಗ ನಿಷ್ಠರ ಬಗ್ಗೆ ಸಂದೇಹ ಪಡುವುದನ್ನು ಅವಳು ಖಂಡಿಸುತ್ತಾಳೆ. ಈಕೆಯು ಎರಡು ( 2 ) ವಚನಗಳನ್ನು ಬರೆದಿದ್ದು, ಎರಡಲ್ಲಿಯೂ ವ್ರತನಿಷ್ಠೆಯ ಬಗ್ಗೆ ಒತ್ತುಕೊಟ್ಟಿದ್ದಾಳೆ. ಈಕೆಯ ವಚನಗಳ ಅಂಕಿತ ನಾಮವು ಕುಂಭೇಶ್ವರ ಎಂಬುದಾಗಿದೆ.

ಈಕೆಯ ಜೀವನದಲ್ಲಿ ಒಂದು ಪವಾಡ ನಡೆಯಿತು ಎನ್ನಲಾಗಿದೆ ( ಪವಾಡಗಳನ್ನು ನಂಬುವುದೂ ಬಿಡುವುದೂ ಅವರವರ ವಿವೇಚನೆಗೆ ಬಿಟ್ಟಿದ್ದು ). ಕೇತಲದೇವಿಯು ಪ್ರತಿದಿನವೂ ತಾನು ಪೂಜಿಸುತ್ತಿದ್ದ ಲಿಂಗಕ್ಕೆ ಪಾವುಡವನ್ನು ಹೊದಿಸುವ ಕಾಯಕ ಮಾಡಿಕೊಂಡಿದ್ದಳು. ಒಮ್ಮೆ ಅವಳಿಗೆ ಆ ಶಿವನಿಗೆ ಹೊದ್ದಿಸಲು ಪಾವುಡವನ್ನು ಹುಡುಕಿದಾಗ ಅದು ಸಿಗದೆ ಕಾಣೆಯಾಗಿತ್ತು. ಅಂತಹ ಸಮಯದಲ್ಲಿ ದೈನಂದಿನ ಕಾಯಕಕ್ಕೆ ಧಕ್ಕೆ ಉಂಟಾಗಬಾರದು ಎಂದುಕೊಂಡ ಕೇತಲಾ ದೇವಿಯು ತನ್ನ ಎದೆಯ ಚರ್ಮವನ್ನೇ ಸಿಗಿದು ತಗೆದು ಅದನ್ನು ಲಿಂಗಕ್ಕೆ ಹೊದಿಸಿದಳಂತೆ. ಆಗ ಆ ಲಿಂಗರೂಪಿ ಭಗವಂತನು ಪ್ರಸನ್ನನಾಗಿ ಪ್ರತ್ಯಕ್ಷನಾಗಿ ಆಕೆಯನ್ನು ಮನಸಾರೆ ಹರಸಿ, ಪ್ರೀತಿಯಿಂದ ಸ್ವೀಕರಿಸಿದನಂತೆ. ಇದು ಒಂದು ಪವಾಡ. ಇಲ್ಲಿ ನಾವು ಪವಾಡವಾಗಿ ನೋಡುವುದಕ್ಕಿಂತ ಮುಖ್ಯವಾಗಿ ಆಕೆಯ ದೈನಂದಿನ ಕಾಯಕದ ಬದ್ದತೆಯನ್ನು ಅರ್ಥೈಸಿಕೊಳ್ಳಬೇಕಾಗಿದೆ. ಎಲ್ಲಕ್ಕಿಂತಲೂ ಮಿಗಿಲಾದುದು ಕಾಯಕ ಯೋಗ ಎಂಬುದು ಇದರಿಂದ ನಮಗೆ ತಿಳಿಯುತ್ತದೆ.

ಪುಣ್ಯಸ್ತ್ರೀ ಕೇತಲದೇವಿಯ ವಚನಗಳು

ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು. ಅದೆಂತೆಂದಡೆ:
ಬಿಕ್ಷಲಿಂಗಾರ್ಪಿತಂ ಗತ್ವಾ | ಭಕ್ತಸ್ಯ ಮಂದಿರಂ ತಥಾ | ಜಾತಿ ಜನ್ಮ ರಜೋಚ್ಫಿಷ್ಟಂ | ಪ್ರೇತಸ್ಯ ವಿವರ್ಜಿತಃ | ಇಂತೆಂದುದಾಗಿ, ಕಾಣದುದನೆ ಚರಿಸದೆ, ಕಂಡುದನು ನುಡಿಯದೆ.
ಕಾಣದುದನು ಕಂಡುದನು ಒಂದೆಸಮವೆಂದು ಅರಿಯಬಲ್ಲರೆ ಕುಂಭೇಶ್ವರ ಲಿಂಗವೆಂಬೆನು.

ಈ ವಚನದಲ್ಲಿ ಈಕೆಯ ಲಿಂಗ ನಿಷ್ಠೆಯು ಎದ್ದು ಕಾಣುತ್ತದೆ. ಲಿಂಗಾಚಾರಿಗಳು ಲಿಂಗವಂತರ ಮನೆಯ ಅಂಗಳಕ್ಕೆ ಹೋಗುವಾಗ ಯಾವುದೇ ರೀತಿಯ ಸಂದೇಹಿಸಬಾರದು ಹಾಗೇಯೇ ಸಂದೇಹವನ್ನೂ ಪಡಬಾರದು ಇದರರ್ಥ ಒಟ್ಟು ಶಿವಭಕ್ತರನ್ನು ಯಾರೂ ಸಂದೇಹ ಪಡಬಾರದು ಎಂಬುದೇ ಆಗಿದೆ. ಈಕೆಯ ವಚನದಲ್ಲಿ ಧರ್ಮಾಸಕ್ತಿ, ವ್ರತನಿಷ್ಠೆ ಹಾಗೂ ಅಚಲವಾದ ಭಕ್ತಿ ಎದ್ದು ಕಾಣುತ್ತದೆ. ಇದರಲ್ಲಿ ಕಾಣುದದನ್ನು ನಾವು ಸ್ಮರಿಸದೆ, ಕಣ್ಣಿಗೆ ಕಾಣುವ ಸತ್ಯವನ್ನು ನುಡಿಯದಿದ್ದರೆ ಆ ಕುಂಭೇಶ್ವರನಾದರೂ ಒಲಿಯುವನೇ ? ಎಂದು ಸತ್ಯ, ನಿಷ್ಠೆಯ ಬಗ್ಗೆ ಈ ವಚನದಲ್ಲಿ ಹೇಳುತ್ತಾಳೆ. ಈಕೆಯು ತನ್ನ ವಚನದಲ್ಲಿ ಸಂಸ್ಕೃತ ಪದಗಳನ್ನೂ ಉಪಯೋಗಿಸಿದ್ದುದನ್ನು ನೋಡಿದರೆ ಈಕೆಯು ಸ್ಥಿತಿವಂತರ ಮನೆಯಿಂದಲೇ ಬಂದಿರಬಹುದು ಎಂದು ಅಂಬೋಣವಾಗಿದೆ.

ಹದ ಮಣ್ಣಲ್ಲದೆ ಮಡಕೆಯಾಗಲಾರದು.
ವ್ರತಹೀನನ ಬೆರೆಯಲಾಗದು.
ಬೆರೆದಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ, ಕುಂಭೇಶ್ವರಾ.

ಮಡಿಕೆ ಮಾಡುವ ಕುಂಬಾರ ವೃತ್ತಿಯ ಹಿನ್ನಲೆಯಿಂದ ಬಂದ ಈಕೆಯು ತನ್ನ ವಚನದಲ್ಲಿ ಹದವಾದ ಮಣ್ಣು, ಕುಂಭೇಶ್ವರ ಎಂಬ ಪದಗಳನ್ನು ಉಪಯೋಗಿಸಿರುವುದನ್ನು ನಾವು ಮನಗಾಣಬಹುದು‌. ಮಡಕೆ ಮಾಡಲು ಮಣ್ಣು ಹದವಾಗಿ ನಾದು ಕಲಸಿರಬೇಕು, ಈ ರೀತಿ ಹದವಾದ ಮಣ್ಣಿನಿಂದ ಮಾಡಿದ ಮಡಿಕೆಯು ಬಹಳಕಾಲ ಉಪಯೋಗಕ್ಜೆ ಬರುತ್ತದೆ ಹಾಗೂ ಪ್ರಯೋಜನಕಾರಿಯೂ ಆಗಿರುತ್ತದೆ. ಅಂತೆಯೇ ವ್ರತಶ್ರೇಷ್ಟರೂ ಸಹ ಹದ ಮಣ್ಣಿನಿಂದ ಮಾಡಿ ಸರಿಯಾಗಿ ಬೇಯಿಸಿದ ಮಡಕೆ ಇದ್ದಹಾಗೆ, ಅವರಿಂದ ಈ ಭವಬಂಧನಗಳನ್ಬು ಹರಿದುಕೊಳ್ಳುವ ಸಹಾಯವಾದರೂ ಆಗುತ್ತದೆ. ಆದರೆ ವಚನ ಭ್ರಷ್ಠರು, ವ್ರತ ಭ್ರಷ್ಠರುಗಳು ಸರಿಯಾಗಿ ಹದವಿಲ್ಲದ ಮಣ್ಣಿನಿಂದ ಮಾಡಿದ ಮಡಕೆಗಳು ಇದ್ದ ಹಾಗೆ‌. ಅವರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂಬುದಾಗಿ, ಇದರಿಂದ ನರಕ ಎಂಬುದು ಕಟ್ಟಿಟ್ಟ ಬುತ್ತಿ ಎಂದು ತಿಳಿಸುತ್ತಾಳೆ.

ಹೀಗೆ ಶರಣೆ ಕೇತಲಾ ದೇವಿಯು ತನ್ನ ಜೀವನವನ್ನು ವ್ರತನಿಷ್ಠೆ, ಲಿಂಗನಿಷ್ಠೆಗೆ ಮುಡುಪಾಗಿಟ್ಟು, ತನ್ನ ಜೀವನವನ್ನು ಸಾರ್ಥಕಗೊಳಿಸಿ ಕೊಂಡಿದ್ದಾಳೆ‌.

✍️ ರವೀ ಚಿಕ್ಕನಾಯಕನ‌ಹಳ್ಳಿ cr.s.p Tumkur

One thought on “ಪುಣ್ಯ ಸ್ತ್ರೀ ಕೇತಲದೇವಿ

  1. ಕೇತಲದೇವಿಬಗ್ಗೆ ಚನ್ನಾಗಿ ಬರೆದಿದ್ದಿರಿ ಸರ್ ಏಕನಿಷ್ಟೆಯೇಅವರ ಮೂಲಸೆಲೆಯಾಗಿತ್ತು. ಧನ್ಯವಾದಗಳು.

Leave a Reply

Your email address will not be published. Required fields are marked *

error: Content is protected !!