ಬಸವಣ್ಣನವರು ಹಾಗೂ ಹರಳಯ್ಯ ಶರಣರು

ಅನುಭವ ಮಂಟಪದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆಯುತ್ತಿರುವ ಶರಣ ಶರಣೆಯರ ವಿಚಾರ ಮಂಥನ ಚರ್ಚಾ ಗೋಷ್ಠಿ ಅಲ್ಲಿ ನಡೆಯುವ ಕಾರ್ಯ ಕಲಾಪಗಳನ್ನು ನಾಡಿನ ಉದ್ದಗಲಕ್ಕೂ ಪಸರಿಸಿರುವಾಗ ಹರಳಯ್ಯನವರಿಗೆ ಬಸವಣ್ಣನವರನ್ನು ಕಾಣಬೇಕೆಂಬ ಹಂಬಲ ಹೆಚ್ಚಾಗುತ್ತದೆ. ಅದೊಂದು ದಿನ ಅಣ್ಣನವರು ರಾಜ ಕಾರ್ಯ ನಿಮಿತ್ಯ ಮಾರ್ಗ ಮಧ್ಯ ಕಲಬುರಗಿಗೆ ಬರುತ್ತಾರೆಂಬ ಸಂಗತಿ ಹರಳಯ್ಯನವರ ಕಿವಿಗೆ ಬಿಳುತ್ತದೆ. ಆಗ ಹರಳಯ್ಯನವರು ಸುರಪುರದಿಂದ ಕಲಬುರಗಿಗೆ ಅಣ್ಣನವರನ್ನು ನೋಡಲು ಬರುತ್ತಾರೆ. ಕಲಬುರಗಿ ನಗರವೆಲ್ಲವು ಮದುವಣಗಿತ್ತಿ ಯಂತೆ ಸಿಂಗಾರಗೊಂಡಿರುವದನ್ನು ಕಂಡ ಹರಳಯ್ಯನವರು ನಿಬ್ಬೆರಗಾಗುತ್ತಾರೆ .ನಗರದ ಉದ್ದಗಲಕ್ಕೂ ಬಸವಣ್ಣನವರ ಜಯಘೋಷದ ಕೂಗು ಎಲ್ಲಡೆ ಕೇಳುತ್ತಿರುತ್ತದೆ. ಜನ ಸಾಗರದ ನಡುವೆಯು ಹರಳಯ್ಯನವರು ಬಸವಣ್ಣನವರ ಪಾದಕ್ಕೆ ನಮಸ್ಕರಿಸುತ್ತಾರೆ. ಅಷ್ಟರಲೇ ಬಸವಣ್ಣನವರು ಹರಳಯ್ಯನವರನ್ನು ಮಾತನಾಡಿಸಿ ಹರಳಯ್ಯನವರ ವಿನಯ ಮತ್ತು ಮೃದು ಮಾತು ಕೇಳುತ್ತಲೇ ನಿಮ್ಮ ಕಾಯಕವೇನು ? ಅಂದಾಗ ಹರಳಯ್ಯನವರು ಪಾದರಕ್ಷೆ ತಯಾರಿಸುವುದು ಎಂದಾಗ ಬಸವಣ್ಣನವರು ಎಂಥ ಕಾಯಕ

ಕಂಡ ಭಕ್ತರಿಗೆ ಕೈಮುಗಿಯುವಾತನೆ ಭಕ್ತ,
ಮೃದು ವಚನವೆ ಸಕಲ ಜಪಂಗಳಯ್ಯಾ,
ಮೃದು ವಚನವೆ ಸಕಲ ತಪಂಗಳಯ್ಯಾ,
ಸದುವಿನಯವೆ ಸದಾಶಿವನ ಒಲುಮೆಯಯ್ಯಾ.
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.

ಎನ್ನುತ್ತಾರೆ. ಹರಳಯ್ಯನವರ ವಿನಯವನ್ನು ಕಂಡು ಬಸವಣ್ಣನವರು ಕಲ್ಯಾಣಕ್ಕೆ ಬನ್ನಿ ಎಂದು ಹೇಳುತ್ತಾರೆ. ಕೆಲವು ದಿನಗಳ ನಂತರ ಹರಳಯ್ಯನವರು ಸುರಪುರದಿಂದ ಕಲ್ಯಾಣಕ್ಕೆ ಪತ್ನಿ,ಪುತ್ರ ಹಾಗೂ ಬಂಧು ಬಳಗದವರೊಂದಿಗೆ ಕಲ್ಯಾಣಕ್ಕೆ ಬರುತ್ತಾರೆ. ಬಸವಣ್ಣನವರಿಂದ ಇಷ್ಟ ಲಿಂಗ ದೀಕ್ಷೆ ಪಡೆದುಕೊಂಡು ದಿನ ನಿತ್ಯ ಅನುಭವ ಮಂಟಪದಲ್ಲಿ ನಡೆಯುವ ಚರ್ಚಾ ಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ಕಾಯಕವಾದ ಪಾದರಕ್ಷೆಯನ್ನು ತಯಾರಿಸುವ ಕಾರ್ಯ ಮಾಡುತ್ತಾ ಕಲ್ಯಾಣದಲ್ಲಿ ಇರುವ ಶರಣ ಶರಣೆಯೆರಿಗೆಲ್ಲ ಪಾದರಕ್ಷೆಯನ್ನು ತಯಾರಿಸುವ ಕಾರ್ಖಾನೆಯನ್ನು ತೆಗೆದು ತಮ್ಮ ಕಾಯಕವನ್ನು ಮಾಡುತ್ತಾ ಇದರ ಜೊತೆಗೆ ಹಲವು ಗ್ರಾಮಗಳಿಗೆ ಹೋಗಿ ತತ್ವ ಪ್ರಸಾರ ಕಾರ್ಯವನ್ನು ಮಾಡಿ ಮತ್ತೆ ಕಲ್ಯಾಣಕ್ಕೆ ಬಂದು ತಮ್ಮ ದೈನಂದಿನ ಕಾರ್ಯಗಳನ್ನು ಮಾಡುತ್ತಲೇ ಇರುತ್ತಾರೆ. ಈಗಿರುವಾಗ ಬಸವಣ್ಣನವರನ್ನು ಕಾಣಬೇಕೆಂಬ ಹಂಬಲ ದಿಂದ ರಾಜ ಬೀದಿಯಲ್ಲಿ ನಿಂತಿರುವಾಗ ಆಗ ಅಣ್ಣನವರು ರಾಜ ಬೀದಿಯಲ್ಲಿ ಬರುವುದನ್ನು ಕಂಡು ನನ್ನಪ್ಪ ಬಸವೇಶ ಶರಣು ಎಂದು ಕೈ ಮುಗಿಯುತ್ತಾರೆ . ಆಗ ಬಸವಣ್ಣನವರು ಹರಳಯ್ಯನವರ ಹತ್ತಿರ ಬಂದವರೆ ಪ್ರತಿಯಾಗಿ ಕೈಮುಗಿದು ಶಿವಭಕ್ತ ಹರಳಯ್ಯನವರಿಗೆ ಶರಣು ಶರಣಾರ್ಥಿ ಎನ್ನುತ್ತಾರೆ . ಆಗ ಹರಳಯ್ಯನವರು ದಿಗ್ಘಭ್ರಾಂತರಾಗುತ್ತಾರೆ.ನಾನು ಒಮ್ಮೆ ಶರಣು ಎಂದರೆ ಅಪ್ಪ ಬಸವಣ್ಣನವರು ಪ್ರತಿಯಾಗಿ ಶರಣು ಶರಣಾರ್ಥಿ ಎಂದರಲ್ಲಾ !ಎಂದು ದುಃಖಿಸುತ್ತಾ ನಾನು ಒಮ್ಮೆ ಶರಣು ಎಂದರೆ ಅವರು ಶರಣು ಶರಣಾರ್ಥಿ ಎಂಬ ಬಾರದ ಹೊರೆಯನ್ನು ಹೇಗೆ ತೀರಿಸಲಿ ಎಂದು ಪತ್ನಿ ಕಲ್ಯಾಣಮ್ಮಳ ಸಲಹೆ ಕೇಳುತ್ತಾರೆ. ಆಗ ಕಲ್ಯಾಣಮ್ಮನವರು ನಾವು ಹೇಗಿದ್ದರೂ ಪಾದರಕ್ಷೆಗಳನ್ನು ಮಾಡುತ್ತೇವೆ. ಅಣ್ಣನವರಿಗೆ ಪಾದರಕ್ಷೆಗಳನ್ನೆ ಉಡುಗೊರೆಯನ್ನಾಗಿ ಯಾಕೆ ನಿಡಬಾರದು ? ಎಂದಾಗ ಹರಳಯ್ಯನವರಿಗೆ ಆನಂದವಾಗುತ್ತದೆ. ಹರಳಯ್ಯನವರು ಎಂಥ ಒಳ್ಳೆಯ ಸಲಹೆ ಕೊಟ್ಟೆ ಕಲ್ಯಾಣಿ ಎನ್ನುತ್ತಾರೆ. ಮುಂದೊಂದು ದಿನ ಹರಳಯ್ಯನವರು ತಮ್ಮ ಕಾಯಕ ಮಾಡುವ ರೆಂಪಿಗೆಯಿಂದ ತಮ್ಮ ಬಲತೊಡೆಯ ಚರ್ಮವನ್ನು ಕೊಯ್ದು ಕಲ್ಯಾಣಮ್ಮನೂ ಕೂಡ ತನ್ನ ಎಡತೊಡೆಯ ಚರ್ಮವನ್ನು ಕೊಯ್ದು ಕೊಡುತ್ತಾಳೆ. ಎರಡು ಚರ್ಮಗಳನ್ನು ಹದಗೊಳಿಸಿ ಸುಂದರವಾದ ಪಾದರಕ್ಷೆಗಳನ್ನು ತಯಾರಿಸಿ ಆನಂದದಿಂದ ಕಣ್ಣಿರು ಸುರಿಸುತ್ತಾರೆ. ದಂಪತಿಗಳಿಬ್ಬರು ಸೇರಿ ತಾವು ತಯಾರಿಸಿದ ಪಾದರಕ್ಷೆಗಳನ್ನು ರೇಶ್ಮೆ ವಸ್ತ್ರದಲ್ಲಿಟ್ಟುಕೊಂಡು ಅಣ್ಣನವರ ಅರಿವಿನ ಮನೆಗೆ ಬರುತ್ತಾರೆ.ಆಗ ಅಲ್ಲೆ ಇದ್ದ ಅಣ್ಣನವರ ಆಪ್ತ ಕಾರ್ಯದರ್ಶಿಯಾದ ಹಡಪದ ಹಪ್ಪಣನವರು ಅಣ್ಣನವರಿಗೆ ಹರಳಯ್ಯ ದಂಪತಿಗಳು ನಿಮ್ಮನ್ನು ನೋಡಲು ಬಂದಿರುವರು ಎಂದಾಗ ಅಣ್ಣನವರು ಹೊರಗೆ ಬಂದು ದಂಪತಿಗಳಿಗೆ ನಮಸ್ಕರಿಸಿ ಕೈಹಿಡಿದು ಮನೆಯ ಒಳಗೆ ಕರೆದುಕೊಂಡು ಹೋಗುತ್ತಾರೆ. ಅಣ್ಣನವರು ತಮ್ಮ ಮಡದಿಯರಾದ ಗಂಗಾಬಿಕೆ ಮತ್ತು ನೀಲಾಂಬಿಕೆಯರನ್ನು ಕರೆದು ನೋಡಿ ಯಾರು ಬಂದಿದ್ದಾರೆ ? ಶಿವ ಭಕ್ತ ಹರಳಯ್ಯ ದಂಪತಿಗಳು ಆಗಮಿಸಿದ್ದಾರೆ ಎಂದಾಗ ಗಂಗಾಂಬಿಕೆ ಮತ್ತು ನೀಲಾಂಬಿಕೆ ಶರಣ ಹರಳಯ್ಯ ದಂಪತಿಗಳಿಗೆ ನಮಸ್ಕರಿಸಿ ಅವರನ್ನು ಸತ್ಕರಿಸುತ್ತಾರೆ. ಅಣ್ಣನವರು ಉಪಚರಿಸಿದ ಪರಿನೋಡಿ ಹರಳಯ್ಯ ದಂಪತಿಗಳಿಗೆ ಕಣ್ಣುತುಂಬಿ ನೀರು ಧಾರಾಕಾರವಾಗಿ ಹರಿಯುತ್ತದೆ. ಅದನ್ನು ಕಂಡ ಅಣ್ಣನವರು ಹರಳಯ್ಯನವರೇ ಏಕೆ ಕಣ್ಣಿನಲ್ಲಿ ನೀರು ? ಎಂದಾಗ ಹರಳಯ್ಯನವರು ನಮ್ಮಂತಹ ಹೀನ ಕುಲದವರನ್ನು ಅಪ್ಪಿಕೊಂಡು ಇಷ್ಟೊಂದು ಗೌರವಿಸುವುದೆ ಇದನೇನಾದರು ನಿಮ್ಮವರು ನೋಡಿ ನಿಮ್ಮ ಮೇಲೆ ಕೋಪಿಸಿಕೊಂಡರೆ ಆಗ ಅಣ್ಣನವರು

ಆರು ಮುನಿದು ನಮ್ಮನೇನ ಮಾಡುವರು
ಊರು ಮುನಿದು ನಮ್ಮನೆಂತು ಮಾಡುವರು
ನಮ್ಮ ಕುನ್ನಿಗೆ ಕೂಸ ಕೊಡಬೇಡ.
ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ.
ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ,
ನಮಗೆ ನಮ್ಮ ಕೂಡಲಸಂಗನುಳ್ಳನ್ನಕ್ಕ

ಎನ್ನುತ್ತಾ ಮೇಲು,ಕೀಳು ಎಂಬುವುದನ್ನು ಸ್ವಾರ್ಥಸಾಧಕರು ಮಾಡಿಕೊಂಡಿದ್ದಾರೆ. ಹರಳಯ್ಯನವರೆ ನೀವು ಕೀಳು ಎಂದು ನಿಮ್ಮ ಕನಸಿನಲ್ಲಿಯು ಭಾವಿಸಬಾರದು ಎಂದು ಅಣ್ಣನವರು ಹೇಳುತ್ತಾರೆ. ಕೀಳು,ಮೇಲೆಂಬ ಕೆಟ್ಟ ಆಚಾರವನ್ನು ಕಿತ್ತುಹಾಕಿದ್ದಿರಿ. ಅಜ್ಞಾನದಿಂದ ಬಳಲುತ್ತಿದ್ದ ನಮ್ಮಂಥವರಿಗೆ ಜ್ಙಾನದ ಮಾರ್ಗ ತೋರಿಸಿದ್ದಿರಿ. ನಿವು ನಿಮ್ಮಗಾಗಿ ನಾವು ಮೆಟ್ಟಿಕೊಳ್ಳಲು ಈ ಪಾದರಕ್ಷೆಗಳನ್ನು ಮಾಡಿದ್ದೆವೇ ಸ್ವೀಕರಿಸಿಕೊಂಡು ನಮ್ಮನ್ನು ಸಂತೋಷಗೊಳಿಸಬೇಕೆಂದು ಬೇಡಿಕೊಳ್ಳುತ್ತೇವೆ ಎಂದಾಗ ಅಣ್ಣನವರು ರೇಶ್ಮೆ ವಸ್ತ್ರದಲ್ಲಿದ ಪಾದರಕ್ಷೆಗಳನ್ನು ನೊಡಿ ಒಮ್ಮೆ ವಿಚಲಿತರಾಗುತ್ತಾರೆ. ತೊಡೆಯ ಚರ್ಮವನ್ನೆ ಪಾದರಕ್ಷೆಯಲ್ಲಿಟ್ಟು ಹೊಲಿದಿದ್ದಾರೆ ! ಎಂಥ ವಿಚಿತ್ರ ಎಂಥ ವೈವಿಧ್ಯತೆ? ಅಣ್ಣನವರು ಹರಳಯ್ಯನವರು ದೈನ್ಯತಾ ಭಾವದಿಂದ ನಿಂತದನ್ನು ಕಂಡು ತಮ್ಮನೇ ತಾವು ಶುದ್ಧಿ,ಅಂತಕರಣಪೂರ್ವಕವಾಗಿ ಅರ್ಪಿಸಿಕೊಂಡ ಹರಳಯ್ಯನವರನ್ನು ಅಪ್ಪಿಕೊಂಡು ನಂತರ ಪಾದರಕ್ಷೆಗಳನ್ನು ಕೈಯಲ್ಲಿ ಹಿಡಿದುಕೊಂಡು ಶರಣ ಹರಳಯ್ಯನವರೆ ಈ ದಿವ್ಯ ಪಾದರಕ್ಷೆಗಳನ್ನು ಕಾಲಲ್ಲಿ ಮೆಟ್ಟಿಕೊಳ್ಳಲು ಯೋಗ್ಯವಲ್ಲ . ನನ್ನ ಶಿರದ ಮೇಲೆ ಇಟ್ಟುಕೊಳ್ಳಲು ಯೋಗ್ಯವಾದವು ಎಂದು ಹರಳಯ್ಯನವರನ್ನು ನಮಸ್ಕರಿಸುತ್ತಾರೆ. ಮುಂದೊಂದು ದಿನ ಅಣ್ಣನವರು ಸಮಗಾರ ಓಣಿಗೆ ಬರುತ್ತಾರೆ ಎಂಬ ಸುದ್ದಿ ಕೇಳಿ ಸಮಗಾರ ಓಣಿಯಲ್ಲಿ ಎಲ್ಲಾ ಮನೆಗಳ ಮುಂದೆ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು. ಅಂಗಳದಲ್ಲಿ ರಂಗೋಲಿ ಹಾಕಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿತು. ಸಮಗಾರ ಓಣಿಯು ಯಾವಾಗಲು ಕಡಿ,ಬಡಿ,ಎನ್ನುತ್ತಿದದ್ದು ಇಂದು ಓಣಿಯ ತುಂಬೆಲ್ಲ ಶಿವನ ಕಲ್ಯಾಣ ಭುವನ ಕಲ್ಯಾಣ ಅನುಭವ ಕಲ್ಯಾಣ ಎಂಬ ಮಂಗಳ ಗೀತೆಗಳನ್ನು ಹೆಣ್ಣು ಮಕ್ಕಳು ಹಾಡುಗಳು ಕೇಳಿ ಬರುತ್ತದೆ. ಹರಳಯ್ಯ ಕಲ್ಯಾಣಮ್ಮ ದಂಪತಿಗಳು ಬಂಧು ಬಾಂದವರು ಸೇರಿ ಅಣ್ಣನವರ ಸ್ವಾಗತಕೋರಲು ನಿಂತಿರುತ್ತಾರೆ. ಅಷ್ಟರಲ್ಲಿಯೆ ಜಯ ಘೋಷದೊಂದಿಗೆ ಅಣ್ಣನವರು ಸಮಗಾರ ಓಣಿಯನ್ನು ಪ್ರವೇಶಿಸಿದವರೆ ಹರಳಯ್ಯನವರ ಮನೆಗೆ ಬಂದವರೆ ಹರಳಯ್ಯನವರನ್ನು ಕಂಡು ಕಲ್ಯಾಣದಲ್ಲಿ ಯಾವುದನ್ನು ಮಾಡಬೇಕೆಂದಿದ್ದೆನೋ ಏನನ್ನು ನೋಡಬೇಕೆಂದಿದ್ದೆನೋ ಅದನ್ನಿಲ್ಲಿ ನೋಡಿದೆ ಹರಳಯ್ಯನವರೆ ನಿಮ್ಮಿಂದ ನಿಮ್ಮಂಥ ಶರಣರನ್ನು ಪಡೆದ ಧರೆಯು ಪಾವನವಾಯಿತ್ತು. ನಾವು ಬಂದದ್ದಕ್ಕೆ ಸಾರ್ಥಕವಾಯಿತು ಎನ್ನುತ್ತಾರೆ. ಹರಳಯ್ಯನವರು ಅಣ್ಣನವರನ್ನು ಕರೆದುಕೊಂಡು ಆಸನದ ಮೇಲೆ ಕೂರಿಸಿ ಮಾಡಿದ ಅಂಬಲಿಯನ್ನು ಉಣಲು ಕೊಟ್ಟು ಜೊತೆ ಬಂದ ಶರಣರಿಗೂ ಅಂಬಲಿ ನೀಡಿ ಎಲ್ಲರೂ ಅಂಬಲಿ ಸವೆಯುತ್ತಾರೆ. ಹರಳಯ್ಯನವರಿಗೆ ಸಗ್ಗದ ಸಭೆಯೊಳಗಿನ ಸಂತಸದ ಸುಗ್ಗಿ ,ಸಮಗಾರ ಓಣಿಗೆ ಇಳಿದು ಬಂದಂತಾಗುತ್ತದೆ.

೦ ಸಾಯಿಕುಮಾರ ಇಜೇರಿ

ಕಾಯಕ ನಿಲಯ, ಶಹಾಪುರ ಯಾದಗಿರಿ ( ಜಿಲ್ಲೆ )

2 thoughts on “ಬಸವಣ್ಣನವರು ಹಾಗೂ ಹರಳಯ್ಯ ಶರಣರು

  1. ಚಿತ್ರ ಕಾಣುವಂತಹ ಬರಹ ಸಾಯಿಗೆ ಜಯವಾಗಲಿ

  2. ಸರ್, ಸುಂದರ ನಿರೂಪಣೆ, ಶರಣ ಹರಳಯ್ಯ ನವರ ವಚನಗಳನ್ನು ನಾನು ಓದಿಲ್ಲ, ಇದ್ದರೆ ತಿಳಿಸಿ.
    ಶರಣು ಶರಣಾರ್ಥಿ.🙏🙏

Leave a Reply

Your email address will not be published. Required fields are marked *

error: Content is protected !!