ಮಾತು ಜ್ಯೋತಿರ್ಲಿಂಗವಾಗಿರಬೇಕು

ನಿತ್ಯ ಶಿವಯೋಗವೇ ಶಿವರಾತ್ರಿ
ಶಿವ ಶಿವಾ, ಶಿವ ಶಿವಾ, ಶಿವ ಶಿವಾ ಎಂದೊಮ್ಮೆ
ಶಿವನಾಗಿ ಶಿವನ ಪೂಜಿಸು ಮನವೆ.
ಹರ ಹರಾ, ಹರ ಹರಾ, ಹರ ಹರಾ ಎಂದೊಮ್ಮೆ
ಹರನಾಗಿ ಪುರಹರನ ಪೂಜಿಸು ಮನವೆ.
ಲಿಂಗವೇ ಲಿಂಗವೇ ಎಂದೊಮ್ಮೆ
ಕಪಿಲಸಿದ್ಧಮಲ್ಲಿಕಾರ್ಜುನಲಿಂಗವ ಪೂಜಿಸಿ ಲಿಂಗವಾಗು ಮನವೆ.

ಮನುಷ್ಯನಿಗೆ ನೆಮ್ಮದಿ ಬೇಕು. ಅದು ಎಲ್ಲಿ, ಹೇಗೆ ದೊರೆಯುತ್ತವೆ ಎನ್ನುವುದಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಉತ್ತರಿಸಬಹುದು. ದೊಡ್ಡ ಮನೆ, ಸುಂದರ ಪತಿ/ಪತ್ನಿ, ಮಕ್ಕಳು, ಖರ್ಚಿಗೆ ಹಣ, ವಿಲಾಸಿ ಜೀವನ, ಅಧಿಕಾರ, ಹೇಳಿದಂತೆ ಕೆಳುವ ಜನರು, ಮೆಚ್ಚುಗೆಯ ಮಾತುಗಳು ಇತ್ಯಾದಿ. ಇಂಥವುಗಳಿಂದಲೇ ನೆಮ್ಮದಿ ಸಿಗುತ್ತದೆ ಎನ್ನುವುದು ಭ್ರಮೆ. ನೆಮ್ಮದಿ ಆದರ್ಶ ಬದುಕಿನ ವಿಧಾನದಲ್ಲಿ, ಧರ್ಮದ ದಾರಿಯಲ್ಲಿ, ಪರೋಪಕಾರದಲ್ಲಿ, ನಿಷ್ಕಲ್ಮಷ ಪ್ರೀತಿಯಲ್ಲಿ, ಶರಣರು ಹೇಳುವಂತೆ ಕಾಯಕ, ದಾಸೋಹ, ಇಷ್ಟಲಿಂಗ ಪೂಜೆಯಲ್ಲಿ ಇದೆ. ಅದಕ್ಕಾಗಿಯೇ ಕಾಯಕವೇ ಕೈಲಾಸ' ಎಂದಿದ್ದಾರೆ. ಕಾಯಕ ಮಾಡಲುಕಾಯ’ ಬೇಕು. ಅದು ಕಾರಣ ಕಾಯವೇ ಕೈಲಾಸ' ಎಂದೂ ಹೇಳಿದ್ದಾರೆ. ಕಾಯಶುದ್ಧಿ ಮತ್ತು ಕಾಯಕಶುದ್ಧಿ ಆದರ್ಶ ಬದುಕಿನ ದಾರಿದೀಪಗಳು. ಎಷ್ಟೋ ಜನರು ಕಾಯಶುದ್ಧಿಯನ್ನೂ ಮಾಡಿಕೊಳ್ಳದೆ, ಕಾಯಕ ಶುದ್ಧಿಯನ್ನೂ ಉಳಿಸಿಕೊಳ್ಳದೆ ಗೋಸುಂಬೆಯಂತೆ ವರ್ತಿಸುವರು. ಅದರಿಂದಾಗಿಯೇ ಅತೃಪ್ತಿ, ಸಂಕಟ, ನೋವು, ಪರಿತಾಪ. ಹಬ್ಬ-ಹುಣ್ಣಿಮೆಗಳು ಆದರ್ಶ ಬದುಕಿಗೆ ಬೇಕಾದ ತತ್ವಗಳನ್ನು ಹೇಳುತ್ತವೆ. ಆದರೆ ಇಂದು ಹಬ್ಬ ಪ್ರಧಾನವಾಗಿ ತತ್ವ ಗೌಣವಾಗುತ್ತಿದೆ. ಶಿವರಾತ್ರಿಯನ್ನೇ ತೆಗೆದುಕೊಳ್ಳಿ. ಬಹುತೇಕ ಹಬ್ಬಗಳು ಹಗಲಿನಲ್ಲಿ ಉಂಡುಟ್ಟು ನಕ್ಕು ನಲಿಯುವಂತಹವು. ಅವುಗಳಿಗೆ ಹೊರತಾದುದು ಶಿವರಾತ್ರಿ. ಹೆಸರೇ ಹೇಳುವಂತೆ ಇದು ರಾತ್ರಿ ನಡೆಯುವ ಹಬ್ಬ. ಇಲ್ಲಿ ಉಂಡುಟ್ಟು ನಕ್ಕು ನಲಿಯಲು ಅವಕಾಶ ಇಲ್ಲ. ಬದಲಾಗಿ ಉಪವಾಸವಿದ್ದು ಭಜನೆ, ಕೀರ್ತನೆ, ಪುರಾಣ ಶ್ರವಣ ಮಾಡಬೇಕು. ನಮ್ಮ ಬಾಲ್ಯದ ದಿನಗಳಲ್ಲಿ ನಡೆಯುತ್ತಿದ್ದ ಶಿವರಾತ್ರಿಗೂ ಇಂದಿನ ಶಿವರಾತ್ರಿಗೂ ಸಾಕಷ್ಟು ಅಂತರ ಇರುವುದನ್ನು ಗುರುತಿಸಬಹುದು. ಆಗ ಜನರು ಹಗಲಿನಲ್ಲಿ ಆಹಾರ ಸ್ವೀಕರಿಸದೆ ಕಾಯಕದಲ್ಲಿ ಶಿವನನ್ನು ಕಾಣುವ ಪ್ರಯತ್ನ ಮಾಡುತ್ತಿದ್ದರು. ಸಂಜೆ ಸ್ನಾನ ಮಾಡಿ, ಮಡಿಬಟ್ಟೆ ತೊಟ್ಟು ಶಿವಭಜನೆ, ಶಿವಕೀರ್ತನೆ, ಶಿವಪುರಾಣ ಕೇಳುತ್ತಿದ್ದರು. ನಂತರ ಬೇಯಿಸದ ಸಾತ್ವಿಕ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸ್ವೀಕರಿಸುತ್ತಿದ್ದರು. ಆ ಆಹಾರದಲ್ಲಿ ವಿವಿಧ ಹಣ್ಣುಗಳು, ಹಾಲು, ಹಸಿಕಡಲೆ ಇತ್ಯಾದಿ ಸೇರಿರುತ್ತಿದ್ದವು. ಇವತ್ತು ಕಂಡ ಕಂಡ ದೇವಾಲಯ ಸುತ್ತುವುದೇ ಶಿವರಾತ್ರಿ ಆಗಿದೆ. ಹಾಲು, ಎಳನೀರು, ತುಪ್ಪ, ಬೆಣ್ಣೆ ಹೀಗೆ ವಿವಿಧ ರೀತಿಯ ಅಭಿಷೇಕಗಳು ದೇವರಿಗೆ ನಡೆಯುತ್ತವೆ. ಇದರಿಂದ ಪುಷ್ಟಿದಾಯಕ ಆಹಾರ ವ್ಯರ್ಥವಾಗುವುದೇ ಹೊರತು ಯಾವ ದೇವರಿಗೂ ತೃಪ್ತಿಯಾಗುವುದಿಲ್ಲ. ಜನರು ಇಂಥ ಆಡಂಬರದ ಆಚರಣೆಗಳನ್ನು ಬಿಟ್ಟು ವಿಚಾರ, ವಿವೇಕದ ಕಾರ್ಯಗಳನ್ನು ಮಾಡಬೇಕು. ದೇವರಿಗೆ ಮಾಡುವ ಮಜ್ಜನ, ಅಭಿಷೇಕ ಹೇಗಿರಬೇಕು ಎನ್ನುವುದನ್ನು ಮಹಾದೇವಿಯಕ್ಕನವರು ತುಂಬಾ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ.ಸಜ್ಜನೆಯಾಗಿ ಮಜ್ಜನಕ್ಕೆರೆವೆ, ಶಾಂತಳಾಗಿ ಪೂಜೆ ಮಾಡುವೆ, ಸಮರತಿಯಿಂದ ನಿಮ್ಮ ಹಾಡುವೆ, ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ’. ಶರಣರು ಸ್ಥಾವರ ದೇವರ ಪೂಜಕರಲ್ಲ್ಲ. ದೇಹವನ್ನೇ ದೇವಾಲಯ ಮಾಡಿಕೊಂಡು ಅಂಗದ ಮೇಲೆ ಇಷ್ಟಲಿಂಗ ಧರಿಸಿ ಅದನ್ನೇ ನಿಷ್ಠೆಯಿಂದ ಪೂಜೆ ಮಾಡಿದವರು.

ಕೆಲವರಿಗೆ ಶಿವರಾತ್ರಿ ಸಿನಿಮಾ ರಾತ್ರಿಯಾಗುವುದು. ನಿದ್ರೆ ಮಾಡಬಾರದು ಎನ್ನುವುದು ಮಾತ್ರ ಅವರಿಗೆ ಪ್ರಧಾನ. ಶಿವರಾತ್ರಿಯಂದು ಉಪವಾಸ ಇರಬೇಕು ಎಂದರೆ ಏನೂ ಆಹಾರ ಸ್ವೀಕರಿಸಬಾರದು ಎಂದು ಭಾವಿಸಿದವರೇ ಹೆಚ್ಚು. ಉಪ ಎಂದರೆ ಹತ್ತಿರ. ವಾಸ ಎಂದರೆ ಇರುವುದು. ದೇವರ ಹತ್ತಿರ ಇರುವುದು ಉಪವಾಸ. ದೇವರನ್ನು ಹುಡುಕಿಕೊಂಡು ಗುಡಿಗಳಿಗೆ ಹೋಗಬೇಕಾಗಿಲ್ಲ. `ಮಣ್ಣ ಬಿಟ್ಟು ಮಡಕೆ ಇಲ್ಲ, ತನ್ನ ಬಿಟ್ಟು ದೇವರಿಲ್ಲ’ ಎನ್ನುವಂತೆ ಮನೆಯಲ್ಲೇ ಕೂತು ವಚನಗಳನ್ನು ಓದುವ-ಹಾಡುವ, ಶರಣರ ಬದುಕಿನ ಚಿಂತನೆ ಮಾಡುವ, ಇಷ್ಟಲಿಂಗಪೂಜಿಸುವ ಕಾರ್ಯವೇ ನಿಜವಾದ ಉಪವಾಸ. ಅದೇ ಶಿವರಾತ್ರಿ. ಪೂಜೆಯನ್ನು ಹೇಗೆ ಮಾಡಿಕೊಳ್ಳಬೇಕು ಎನ್ನುವುದಕ್ಕೆ ಆರಂಭದ ಸಿದ್ಧರಾಮೇಶ್ವರರ ವಚನ ದಿಕ್ಕು ತೋರುವುದು. ಶಿವನಾಗಿ, ಹರನಾಗಿ, ಲಿಂಗಪೂಜೆ ಮಾಡುತ್ತ ಲಿಂಗವೇ ತಾನಾಗಬೇಕು. ಅಂದರೆ ಅಂಥ ತಲ್ಲೀನತೆ ಪೂಜೆಯಲ್ಲಿ ಬರಬೇಕು. ಆಡಂಭರ, ಅಭಿಷೇಕ, ಗಂಟೆ, ಜಾಗಟೆಗಳ ಅಬ್ಬರ ಇರಬಾರದು.

ಕಾಲೇ ಕಂಬಗಳಾದುವೆನ್ನ, ದೇಹವೇ ದೇಗುಲವಾಯಿತ್ತಯ್ಯಾ!
ಎನ್ನ ನಾಲಗೆಯೆ ಗಂಟೆ, ಶಿರ ಸುವರ್ಣದ ಕಳಸ-ಇದೇನಯ್ಯಾ!
ಸರವೆ ಲಿಂಗಕ್ಕೆ ಸಿಂಹಾಸನವಾಗಿದ್ದಿತ್ತಯ್ಯಾ.
ಗುಹೇಶ್ವರಾ ನಿಮ್ಮ ಪ್ರಾಣಲಿಂಗಪ್ರತಿಷ್ಠೆ, ಪಲ್ಲಟವಾಗದಂತಿದ್ದೆನಯ್ಯಾ.

ದೇವರ ಪೂಜೆ ಹೇಗಿರಬೇಕು ಎಂದು ಪ್ರಭುದೇವರು ಮಾರ್ಮಿಕವಾಗಿ ಹೇಳಿದ್ದಾರೆ. ವೈದ್ಯ ಸಂಗಣ್ಣನವರು ಇನ್ನೂ ಪರಿಣಾಮಕಾರಿಯಾಗಿ ಪೂಜಾ ವಿಧಾನವನ್ನು ತಮ್ಮ ವಚನದಲ್ಲಿ ಕಟ್ಟಿಕೊಟ್ಟಿದ್ದಾರೆ.

ನಾನಾ ರೋಗಂಗಳು ಬಂದು ದೇಹವ ಹಿಡಿದಲ್ಲಿ
ಶಿವಾರ್ಚನೆಯ ಬೆರೆಕೊಳ್ಳಿ.
ಸಕಲ ಪುಷ್ಪಂಗಳಿಂದ ಪೂಜೆಯ ಮಾಡಿಕೊಳ್ಳಿ.
ಪಂಚಾಕ್ಷರಿ ಪ್ರಣಮವ ತಪ್ಪದೆ ತ್ರಿಸಂಧಿಯಲ್ಲಿ ನೆನೆಹುಗೊಳ್ಳಿ.
ಇದರಿಂದ ರುಜೆದರ್ಪಂಗಡಗು,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರ ಲಿಂಗ ಸಾಕ್ಷಿಯಾಗಿ.

ದೇವರ ಪೂಜೆ ಸಂಕಷ್ಟಗಳ ನಿವಾರಣೆಗಾಗಿ ಎನ್ನುವ ಅಭಿಪ್ರಾಯ ಇದೆ. ಕಾಯಿಲೆ ಆದಾಗ ಏನು ಮಾಡಬೇಕು ಎಂದು ವೈದ್ಯ ಸಂಗಣ್ಣನವರು ಹೇಳುವುದನ್ನು ನೋಡಿ. ರೋಗ ಬಂತೆಂದು ನರಳದೆ ಅಂಗೈಯಲ್ಲಿ ಇಷ್ಟಲಿಂಗವನ್ನಿಟ್ಟು ಪುಷ್ಟಗಳಿಂದ ಪೂಜಿಸಿ ಲಿಂಗಯ್ಯನನ್ನು ಏಕಾಗ್ರ ದೃಷ್ಟಿಯಿಂದ ನೋಡುತ್ತ `ಓಂ ನಮಃ ಶಿವಾಯ’ ಎನ್ನುವ ಷಡಾಕ್ಷರಿ ಮಂತ್ರ ಪಠಿಸಬೇಕು. ಆದರೆ ನಮ್ಮ ಜನರು ಅದರಲ್ಲೂ ಲಿಂಗಾಯತ ಧರ್ಮೀಯರು ಇಷ್ಟಲಿಂಗ ಪೂಜೆಯನ್ನು ಬಿಟ್ಟು ಗುಡಿಗಳನ್ನು ಸುತ್ತುವರು. ಇದು ಶರಣರ ದೃಷ್ಟಿಯಲ್ಲಿ ಖಂಡಿತ ಶಿವರಾತ್ರಿ ಅಲ್ಲ.

ಹೃದಯ ಕತ್ತರಿ, ತುದಿನಾಲಗೆ ಬೆಲ್ಲೇಂ ಭೋ!
ಆಡಿಹೆನು ಏಂ ಭೋ, ಹಾಡಿಹೆನು ಏಂ ಭೋ!
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿಹೆನು ಏಂ ಭೋ!
ಆನು ಎನ್ನಂತೆ, ಮನ ಮನದಂತೆ.
ಕೂಡಲಸಂಗಮದೇವ ತಾನು ತನ್ನಂತೆ.

ಹೃದಯದಲ್ಲಿ ಸದ್ಭಾವನೆಗಳು ತುಂಬಿ ಪೂಜಿಸಬೇಕು. ನಾಲಗೆಯಲ್ಲಿ ಶಿವನಾಮ ನೆಲೆಗೊಳ್ಳಬೇಕು. ಮಾತು ಜ್ಯೋತಿರ್ಲಿಂಗವಾಗಿರಬೇಕು. ಹೀಗಿಲ್ಲದೆ ಹೃದಯದಲ್ಲಿ ಹಾಲಾಹಲ ತುಂಬಿಕೊಂಡು ತುದಿನಾಲಗೆಯಲ್ಲಿ ಜೇನು ಸುರಿಸುತ್ತ್ತ ಕಾಟಾಚಾರಕ್ಕೆ ಶಿವರಾತ್ರಿಯಂದು ಪೂಜೆ ಮಾಡಿದರೆ ಸತ್ಫಲ ದೊರೆಯದು. ಸಿದ್ಧರಾಮೇಶ್ವರರು ತಮ್ಮ ಮತ್ತೊಂದು ವಚನದಲ್ಲಿ `ಮದ್ದುತಿಂದ ಮನುಜನಂತೆ ವ್ಯರ್ಥಹೋಗದಿರಾ, ಮನವೆ, ವರ್ಷದಲಾದಡೂ ಒಂದು ದಿವಸ ಶಿವರಾತ್ರಿಯ ಮಾಡು ಮನವೆ. ಕಪಿಲಸಿದ್ಧಮಲ್ಲೇಶನೆಂಬ ಇಷ್ಟಲಿಂಗಕ್ಕೆ’ ಎನ್ನುವರು. ಕೆಲವರು ಮತ್ತುಬರಿಸುವ ಪದಾರ್ಥ ತಿಂದು ವ್ಯರ್ಥ ಕಾಲ ಕಳೆಯುವರು. ಬದುಕು ಸಾರ್ಥಕವಾಗಬೇಕಾದರೆ ವರ್ಷಕ್ಕೆ ಒಂದು ದಿನವಾದರೂ ಶಿವರಾತ್ರಿ ಮಾಡಬೇಕು. ಶಿವರಾತ್ರಿ ಮಾಡುವುದು ಎಂದರೆ ಇಷ್ಟಲಿಂಗಪೂಜೆ ಮಾಡಿಕೊಳ್ಳುವುದು. ಈ ನಿಟ್ಟಿನಲ್ಲಿ ಚನ್ನಬಸವಣ್ಣನವರು ಹೇಳುವುದನ್ನು ಗಮನಿಸಿ.

ಸೋಮವಾರ ಮಂಗಳವಾರ ಶಿವರಾತ್ರಿಯೆಂದು ಮಾಡುವ ಭಕ್ತರ
ಲಿಂಗಭಕ್ತಂಗೆ ನಾನೆಂತು ಸರಿಯೆಂಬೆನಯ್ಯಾ?
ದಿನ ಶ್ರೇಷ್ಠವೋ ಲಿಂಗ ಶ್ರೇಷ್ಠವೋ?
ದಿನ ಶ್ರೇಷ್ಠವೆಂದು ಮಾಡುವ
ಪಂಚಮಹಾಪಾತಕರ ಮುಖವ ನೋಡಲಾಗದು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಇಂಥವರ ಮುಖವ ನೋಡಲಾಗದು.

ದೈವಭಕ್ತಿಗಾಗಿ ಒಬ್ಬೊಬ್ಬರು ಒಂದೊಂದು ವಾರವನ್ನು ಆಯ್ಕೆ ಆಡಿಕೊಳ್ಳುವ ಪದ್ಧತಿ ಅಂದೂ ಇತ್ತು, ಇಂದೂ ಇದೆ. ಇಂಥದನ್ನು ಚನ್ನಬಸವಣ್ಣನವರು ಒಪ್ಪುವುದಿಲ್ಲ. ವಾರ ಶ್ರೇಷ್ಠವೋ, ಲಿಂಗ ಶ್ರೇಷ್ಠವೋ ಎಂದು ಪ್ರಶ್ನಿಸಿ ಶಿವರಾತ್ರಿಯನ್ನು ಸಹ ಅಲ್ಲಗಳೆಯುವರು. ಸೋಮವಾರ, ಮಂಗಳವಾರ, ಶಿವರಾತ್ರಿ ಎಂದು ಮಾಡುವ ಭಕ್ತರು ಲಿಂಗಭಕ್ತರಿಗೆ ಸಮನಲ್ಲ ಎಂದು ಅಂಥವರನ್ನು ಪಂಚಮಹಾಪಾತಕರು, ಅವರ ಮುಖ ನೋಡಲಾಗದು ಎಂದು ಹೀಗಳೆಯುವರು. ಶರಣರ ಬದುಕಿನ ವಿಧಾನವೇ ವಿನೂತನ. ಅವರು ಪೌರಾಣಿಕ ಕತೆÉಗಳನ್ನು ನಂಬಿದವರಲ್ಲ. ಆದರೆ ಪೌರಾಣಿಕ ಕತೆಗಳನ್ನು ನಂಬುವ ಜನರು ಶರಣರ ವಿಚಾರಗಳನ್ನು ಅರಿತು ಆಚರಣೆಯಲ್ಲಿ ತರುವುದು ಅಷ್ಟಕ್ಕಷ್ಟೆ. ಶರಣರು ಅರಿವು, ಆಚಾರ, ಅನುಭಾವಕ್ಕೆ ಒತ್ತು ಕೊಟ್ಟವರೇ ಹೊರತು ಆಡಂಬರದ ಪೂಜೆಗಲ್ಲ. ಶರಣರ ಪೂಜಾವಿಧಾನ ಸಹ ಲೋಕಕ್ಕೆ ಹೊಸತು. ಈ ನಿಟ್ಟಿನಲ್ಲಿ ಜಕ್ಕಣಯ್ಯನವರ ವಚನ ಕನ್ನಡಿ ಹಿಡಿಯುವಂತಿದೆ.

`ಒಬ್ಬ ಶಿವಶರಣನು ಶಿವರಾತ್ರಿಯಲ್ಲಿ ನಿತ್ಯ ಶಿವಯೋಗವ ಮಾಡುವುದ ಕಂಡೆನಯ್ಯ. ಅದು ಹೇಗೆಂದಡೆ ಅರುಹೆಂಬ ಸಮ್ಮಾರ್ಜನೆಯ ಮಾಡಿ, ಕುರುಹೆಂಬ ಗದ್ದುಗೆಯ ನೆಲೆಯಂಗೊಳಿಸಿ, ಸುಜ್ಞಾನವೆಂಬ ರಂಗವಾಲಿಯ ತುಂಬಿ, ಚಂದ್ರಸೂರ್ಯಾದಿಗಳೆಂಬ ದೀವಿಗೆಯ ಮುಟ್ಟಿಸಿ, ಮಹಲಿಂಗವೆಂಬ ಮೂರ್ತಿಯಂ ನೆಲೆಯಂಗೊಳಿಸಿ, ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವಂ ನೀಡಿ, ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ, ನಿರ್ಮಳವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರೆಯನೇರಿಸಿ, ನಿರ್ದ್ವಂದ್ವವೆಂಬ ಧೂಪವ ತೋರಿ, ಒಬ್ಬ ಮೂರ್ತಿ ನವರತ್ನದ ಹರಿವಾಣದಲ್ಲಿ ಪಂಚಾರ್ತಿಯ ಮೇಲೆ ಏಕಾರ್ತಿಯನಿಟ್ಟು, ಪಂಚದೀಪಂಗಳ ರಚಿಸಿ, ಆ ಲಿಂಗಕ್ಕೆ ಓಂ ನಮೋ ಓಂ ನಮೋ ಎಂದು ಬೆಳಗುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ’.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೇಹಳ್ಳಿ-577515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಸೆಲ್: 9448395594

2 thoughts on “ಮಾತು ಜ್ಯೋತಿರ್ಲಿಂಗವಾಗಿರಬೇಕು

  1. ಗುಡಿಗುಂಡಾರಗಳಲ್ಲಿರುವುದೇಜೋತಿಲಿಂರ್ಗವಲ್ಲ ಯಾವ ಮಾತು ಕೇಳಿದರೆ ಮನದ ಮೆಲೆ ಪರಿಣಾಮ ಬೀರಿ ಬದಲಾವಣೆಗೆ ಕಾರಣ ವಾಗುತ್ತದೋ ಅದು ಮಾತಲ್ಲ ಅದೇ ಜೋತಿರ್ಲಿಂಗ. ಇಂದುನಾವು ಮಾತನಾಡುವಮತ್ತು ಮಾತುಕೇಳುವದನ್ನು ಬಿಟ್ಟು ಗುಡಿ ಗುಡಿ ಸುತ್ತುತ್ತಿದ್ದೆವೆ.ಇದು ನಮ್ಮದೌರ್ಬಲ್ಯವೂಹೌದು ಬೌದ್ದಿಕ ದಿವಾಳಿತನವು ಆಗಿದೆ ಲೇಖನದ ಮೂಲಕ ಎಚ್ಚರಿಸಿದ ಪೂಜ್ಯರಿಗೆ ಶರಣು ಶರಣಾರ್ಥಿಗಳು.

Leave a Reply

Your email address will not be published. Required fields are marked *

error: Content is protected !!