ಗುಹೇಶ್ವರ ಲಿಂಗಕ್ಕೂ ವಿಳಾಸವಾದವರು ಸಂಗನ ಬಸವಣ್ಣ

ಗುಹೇಶ್ವರ ಲಿಂಗಕ್ಕೂ ವಿಳಾಸವಾದವರು ಸಂಗನ ಬಸವಣ್ಣ

ಬಸವಣ್ಣನವರು ಸಹ ಆರಂಭದಲ್ಲಿ ನಮ್ಮ ನಿಮ್ಮಂತೆ ಸಾಮಾನ್ಯವಾದ ಮನಸ್ಸು ಉಳ್ಳವರು. ಆ ಮನಸ್ಸು ಪರಿಪಕ್ವಗೊಳಿಸಿಕೊಂಡು ಭಕ್ತಿ ಭಂಡಾರಿಯಾದರು. ಅನುಭಾವಿಯಾದರು. ನಿಜ ಶರಣರಾದರು. ಅಂದಿನ ಎಲ್ಲಾ ಶರಣರ ಮನಸ್ಸನ್ನು ತಮ್ಮ ವಿನಿತಭಾವದ ಮೂಲಕ ಗೆದ್ದುಕೊಂಡು ಎನಗೆಯೂ ನಿನಗೆಯೂ ಗುರು ಗುಹೇಶ್ವರ ಲಿಂಗಕ್ಕೂ ವಿಳಾಸವಾದವರು ಸಂಗನ ಬಸವಣ್ಣ ಎಂದು ಅಲ್ಲಮಪ್ರಭುಗಳಿಂದ ಹರಿಸಿಕೊಂಡವರು. ಆರಂಭದಲ್ಲಿ ಅವರು ಮನಸ್ಸು ,ಬುದ್ಧಿ ,ಭಾವಗಳು ಹೊಯ್ದಾಡುತ್ತಿದ್ದವು. ಆ ಭಾವಗಳನ್ನು ಕಟ್ಟಿ ನಿಲಿಸಿದಾಗಲೆ ಅವರೊಳಗಿನ ನಿಷ್ಕಲ್ಮಶ ಭಾವ ಮಾರ್ಪೊಳೆಯಿತು.

ವಿಷಯವೆಂಬ ಹಸುರೆನ್ನ ಮುಂದೆ ತಂದು ಪಸರಿಸದಿರಯ್ಯಾ
ಪಶುವೇನ ಬಲ್ಲುದು ಹಸುರೆಂದೆಳೆಸುವುದು
ವಿಷಯ ರಹಿತನಮಾಡಿ, ಭಕ್ತಿ ರಸವ ದಣಿಯೆ ಮೇಯಿಸಿ
ಸುಬುದ್ಧಿಯೆಂಬ ಉದಕವನೆರೆದು
ನೋಡಿ ಸಲಹಯ್ಯಾ, ಕೂಡಲ ಸಂಗಮದೇವಾ

ಕಾಮ ಕ್ರೋಧ ಮೋಹ ಮದ ಮತ್ಸರಗಳನ್ನು ಬಿಟ್ಟು ಮನುಷ್ಯ ಇಲ್ಲವೆ ಇಲ್ಲ. ಇವುಗಳನ್ನು ತೊರೆದಾಗಲೆ ವ್ಯಕ್ತಿ ಮನುಷ್ಯತ್ವದ ಕಡೆಗೆ ವಾಲುತ್ತಾನೆ. ಅಲ್ಲಿಯವರೆಗೆ ಕೇವಲ ಮನುಷ್ಯನ ಚೋಹ ತೊಟ್ಟಿರುತ್ತಾನೆ. ನಿತ್ಯ ಕ್ಷಣ ಕ್ಷಣವೂ ಸಹ ಯಾವುದೆ ವ್ಯಕ್ತಿಯ ಕಣ್ಣಮುಂದೆ ಮನಸ್ಸನ್ನು ಚಂಚಲಗೊಳಿಸುವ ವಸ್ತುಗಳು ಸುಳಿಯುತ್ತಲೆ ಇರುತ್ತವೆ. ಈ ಹೊಯ್ದಾಟವನ್ನು ಬಸವಣ್ಣನವರೂ ಅನುಭವಿಸಿದವರೆ. ಆದ್ದರಿಂದಲೆ ಅವರು ಪದೆ ಪದೆ ವಿನೀತವಾಗಿ ತಮ್ಮ ಮನಸ್ಸಿಗೆ ತಾವೇ ಹೇಳಿಕೊಳ್ಳುತ್ತಾರೆ. ಕಾಮ ಕ್ರೋಧ ಮೋಹ ಮದ ಮತ್ಸರ ವಿಷಯವೆಂಬ ಹಸಿರು ನನ್ನ ಕಣ್ಣ ಮುಂದೆ ತಂದು ಪಸರಿಸದಿರು. ಪಶುವಿಗೆ ಸರಿ ತಪ್ಪು ಎಂಬ ಅರಿವು ಇಲ್ಲದ್ದರಿಂದ ಸಹಜವಾಗಿ ಅದು ವಿಷಯಗಳೆಂಬ ಹಸಿರ ಕಡೆಗೆ ನಡೆದು ಬಿಡುತ್ತದೆ. ಆ ಪಶುವಿಗೆ ತಾನು ಮಾಡುತ್ತಿರುವುದು ತಪ್ಪು ಎಂಬ ಪರಿಜ್ಞಾನವಿಲ್ಲ. ಆದ್ದರಿಂದ ಮೊಟ್ಟ ಮೊದಲು ಆ ಪಶುವಿಗೆ ಭಕ್ತಿಯ ರಸವನ್ನು ಮನ ತೃಪ್ತಿಯಾಗುವಂತೆ ಮೇಯಿಸು ಎಂದು ಅಲವತ್ತುಕೊಳ್ಳುತ್ತಾರೆ. ಆಗ ಸಹಜವಾಗಿ ಅದು ವಿಷಯವೆಂಬ ಹಸಿರ ನಡೆ ಹರಿದು ಹೋಗುವುದಿಲ್ಲ. ಅದಕ್ಕೆ ಒಳ್ಳೆಯ ಬುದ್ಧಿಯ ಉದವನ್ನಿತ್ತು ಸಲಹು ಎಂದು ತಮಗೆ ತಾವೇ ಹೇಳಿಕೊಳ್ಳುವ ಮೂಲಕ ಬಸವಣ್ಣನವರು ತಮ್ಮನ್ನು ತಾವು ತಿದ್ದಿಕೊಂಡಂತೆ ಹೇಳುತ್ತಲೆ ಇನ್ನೊಬ್ಬರ ಬದುಕು ತಿದ್ದಿಕೊಳ್ಳುವುದು ಹೇಗೆಂಬ ಮಾರ್ಗದರ್ಶನವನ್ನೂ ನೀಡುತ್ತಾರೆ.

ಮಾವಿನ ಕಾಯೊಳಗೆ ಒಂದು ಎಕ್ಕೆಯ ಕಾಯಿ ನಾನಯ್ಯಾ
ಆನು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ ನಾಚಿಕೆಯಿಲ್ಲದೆ
ಕೂಡಲಸಂಗನ ಶರಣರ ಮುಂದೆ ನಾನೆಂತು ಭಕ್ತನಪ್ಪೆನಯ್ಯಾ

ಬಸವಣ್ಣನವರ ಭಾವವೇನೂ ಎಕ್ಕೆಯ ಕಾಯಿಯಂತ್ತಾಗಿರಲಿಲ್ಲ. ಅದು ಪರಿಪಕ್ವಗೊಂಡ ಮಾವಿನ ಫಲವಾಗಿತ್ತು. ಆದರೆ ಅದನ್ನು ಹೇಳಿಕೊಂಡಿದ್ದರೆ ಆಗ ಉಂಟಾಗುವ ಅರ್ಥ ಮತ್ತು ಪರಿಣಾಮ ತುಂಬಾ ಭಿನ್ನವಾಗಿತ್ತು. ಆ ಮಾತುಗಳು ಶರಣ ಸಮೂಹದಲ್ಲಿ ತೀವ್ರ ತರಾಟೆಗೆ ಗುರಿಯಾಗುತ್ತಿತ್ತು. ಯಾವುದೆ ಸಂಘಟನೆಯ ನಾಯಕನಾದವನು ಮೊಟ್ಟ ಮೊದಲು ತನ್ನನ್ನು ತಾನು ಆ ಚಳುವಳಿಯಲ್ಲಿ ಒಬ್ಬನಾಗಿ ಗುರುತಿಸಿಕೊಂಡು, ಆ ಚಳುವಳಿ ಸಮೂಹದೊಂದಿಗೆ ಹೆಜ್ಜೆ ಹಾಕಿದಾಗಲೆ ಅದಕ್ಕೊಂದು ಶಕ್ತಿ ಬರುತ್ತದೆ. ಇಲ್ಲದಿದ್ದರೆ ಆ ಚಳುವಳಿ ಆರಂಭದಲ್ಲಿಯೆ ಕುಸಿದು ಬೀಳುತ್ತದೆ. ಇದನ್ನು ಅರಿತ್ತಿದ್ದ ಮಹಾತ್ಮ ಗಾಂಧೀಜಿಯವರು ಸಹ ತಮ್ಮನ್ನು ತಾವು ಎಂದೂ ಮಹಾತ್ಮ ಎಂದು ಕರೆಯಿಸಿಕೊಳ್ಳಲು ಇಷ್ಟಪಟ್ಟಿರಲಿಲ್ಲ. ಉಣ್ಣುವುದಕ್ಕೆ ಉಡುವುದಕ್ಕೆ ವಾಸಿಸುವುದಕ್ಕೆ ಸಾಕಷ್ಟು ಸಂಪತ್ತು ತೊಪ್ಪೆ ತೊಪ್ಪೆಯಾಗಿ ಕಾಲಡಿ ಬಿದ್ದಿದ್ದರೂ ಅವರು ಆ ಕಡೆ ಹೊರಳಿ ನೋಡಲಿಲ್ಲ. ಸರಳ ಹಾಗೂ ಸಹಜತೆಯಲ್ಲಿಯೆ ಶಕ್ತಿ ಇದೆ ಎಂಬುದನ್ನವರು ಕಂಡುಕೊಂಡಿದ್ದರು. ಅವರಿಗೆ ರಾಜಕಾರಣದ ಮಾತುಗಳಿಗಿಂತಲೂ ತಾವು ಸಾಕಿಕೊಂಡಿದ್ದ ಆಡಿಗೆ ಆಹಾರ ನೀಡುವುದು ಮುಖ್ಯವೆಂದು ಬಗೆದಿದ್ದರು. ಸಾಮಾನ್ಯ ಘಟನೆಗಳಿಗೆ ಸ್ಪಂದಿಸಿ, ಮಹತ್ತಾದುದನ್ನು ಪಡೆಯಲು ಅವರು ಅಹರ್ನಿಶಿ ಶ್ರಮಿಸಿದರು.

ಮಹಾತ್ಮ ಬುದ್ಧ ರಾಜನಾಗಿರುವಾಗ ಹೆಚ್ಚು ಪ್ರಭಾವಶಾಲಿಯಾಗಿರಲಿಲ್ಲ. ಶ್ರೀಸಾಮಾನ್ಯರೊಳಗೆ ಸಾಮಾನ್ಯನಾಗಿ ಬೆರೆತು ಅವರೊಂದಿಗೆ ಒಂದಾದಾಗಲೆ ಒಂದು ಶಕ್ತಿಯಾಗಿದ್ದರು. ಬಸವಣ್ಣನರು ತಾವು ಕುಳಿತ ಪ್ರಧಾನಿ ಪಟ್ಟಕ್ಕಿಂತ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಹೊಲೆಯರ ನಾಗಿದೇವ, ಕಾಳವ್ವೆ, ಸಂಕವ್ವೆ, ಕದಿರೆಯ ರೆಮ್ಮವ್ವೆ , ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ ಮೊದಲಾದವರೊಂದಿಗೆ ಅಕ್ಕ, ಚಿಕ್ಕಪ್ಪ,ದೊಡ್ಡಪ್ಪ, ಅಕ್ಕನೆಂದೆ ಕರೆದು ಅವರ ಕಣ್ಣರಿಕೆಗೆ, ಪ್ರೀತಿ ವಾತ್ಸಲ್ಯಕ್ಕೆ ಕಾರಣವಾಗಲು ಸಾಧ್ಯವಾಯಿತು. ಅಂದು ಕಲ್ಯಾಣದಲ್ಲಿ ಬಂದಿಳಿದಿದ್ದ ಶರಣ ಸಂದೋಹದಲ್ಲಿ ನಾನು ನಾಚಿಕೆಯಿಲ್ಲದೆ ಭಕ್ತನೆಂದು ಹೇಗೆ ಕರೆಯಿಸಿಕೊಳ್ಳಲಿ ? ಆ ಶರಣ ಸಮೂಹದಲ್ಲಿ ನಾನೆಂತು ಭಕ್ತ ? ಎಂದು ಹೇಳುತ್ತ, ತಮ್ಮ ಮನದ ಅವಲೋಕನದ ಜೊತೆ ಜೊತೆಗೆ ಮತ್ತೊಬ್ಬ ಮಗದೊಬ್ಬ ಶರಣರ ಆತ್ಮಾವಲೋಕನಕ್ಕೂ ಬಸವಣ್ಣನವರು ಅಡಿಪಾಯ ಹಾಕುತ್ತಾರೆ.

ಅಂದಣವನೇರಿದ ಸೊಣಗನಂತೆ ಕಂಡಡೆ ಬಿಡದು ಮುನ್ನಿನ ಸ್ವಭಾವವನು
ಸುಡು ಸುಡು ಮನವಿದು ವಿಷಯಕ್ಕೆ ಹರಿವುದು
ಮೃಢ ನಿಮ್ಮನನುದಿನ ನೆನೆಯಲೀಯದು
ಎನ್ನೊಡೆಯ ಕೂಡಲಸಂಗಮದೇವಾ
ನಿಮ್ಮ ಚರಣವ ನೆನೆವಂತೆ ಕರುಣಿಸು
ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ

ನನ್ನನ್ನೇನೋ ನೀವೆಲ್ಲರು ಸೇರಿ ಪಲ್ಲಕ್ಕಿಯಲ್ಲಿ ಕೂಡಿಸಿದ್ದೀರಿ. ಆದರೆ ಅಂದಣವನೇರಿದ ಸೊಣಗ ಮೊದಲು ಕಲಿತ ಸ್ವಭಾವದಿಂದ ಹಿಂದೆ ಸರಿಯುವುದು ಕಷ್ಟ. ಹಾಗಾಗಿ ತಾನು ಕುಳಿತದ್ದು ಪಲ್ಲಕ್ಕಿ ಎಂಬುದನ್ನು ಮರೆತು ಠಣನೆ ಜಿಗಿದು ಮೂಲ ಸ್ವಭಾವದಂತೆ ವರ್ತಿಸುತ್ತದೆ. ವಿಷಯ ಸುಖಕ್ಕೆ ಮೈ ಮನ ಚಾಚುವಂತೆ ಮಾಡುತ್ತದೆ. ನಿಮ್ಮನ್ನು (ಆತ್ಮ ಸಾಕ್ಷಿಯನ್ನು ) ಮರೆತು ಇನ್ನೇನನ್ನೋ ನೆನೆಯುತ್ತದೆ. ವಿಕಾರವಾಗಿ ವರ್ತಿಸುವ ಮನಸ್ಸನ್ನು ನಿಮ್ಮ ಜ್ಞಾನದಲ್ಲಿ ಇರುವಂತೆ ನೋಡಿಕೋ. ನಾನು ದೇಹಿ ಎಂದು ಸೇರಗೊಡ್ಡಿ ಬೇಡುವೆ. ಅದನ್ನು ಕಾಪಾಡುವುದು , ಒಳ್ಳೆಯ ಸ್ವಭಾವವನ್ನು ಕಲಿಯುವಂತೆ ನೋಡಿಕೊಳ್ಳುವುದು ನಿಮ್ಮ ಧರ್ಮ ಎಂದು ಹೇಳುವ ಮೂಲಕವೂ ಬಸವಣ್ಣನವರು ತಮ್ಮನ್ನು ತಾವು ತಿದ್ದಿಕೊಳ್ಳುವಂತೆ, ಅನ್ಯರ ಆತ್ಮವಾಲೋಕನಕ್ಕೂ ಹಚ್ಚುತ್ತಾರೆ.

ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯಾ
ಬಡವನೆಂದೆನ್ನ ಕಾಡದಿರಯ್ಯಾ
ಎನಗೆ ಒಡೆಯರುಂಟು ಕೂಡಲಸಂಗಮನ ಶರಣರು.

ಬಸವಣ್ಣವರಿಗೆ ಹೆಚ್ಚು ಕಾಳಜಿ ಪ್ರೀತಿ ಇದ್ದದ್ದು ಅವರ ಒಡನಾಡಿ ಶರಣರೊಂದಿಗೆ. ಶರಣರನ್ನು ಬಿಟ್ಟು ಒಂದು ಕ್ಷಣವನ್ನೂ ಅವರು ಕ್ರಮಿಸಲು ಬಯಸುತ್ತಿರಲಿಲ್ಲ. ಶರಣರು ಬಸವಣ್ಣನವರ ಜೀವ ಜೀವಾಳವಾಗಿದ್ದರು. ಆದರೂ ಅವರ ಮನ ಎಲ್ಲೋ ಒಂದು ಕಡೆ ಅಹಂಕಾರದ ಮೂಟೆಯಾಗುತ್ತಿತ್ತು. ಆಗವರು ತಕ್ಷಣವೆ ಹೆಜ್ಜೆ ಹೆಜ್ಜೆಗೆ ನನ್ನ ಮನಸ್ಸನ್ನು ಪರೀಕ್ಷಿಸದಿರು. ನನ್ನೊಂದಿಗೆ ಯಾರು ಇಲ್ಲೆಂಬ ಭಾವ ಬೇಡವೆ ಬೇಡ. ಎನಗೆ ಸಾಕಷ್ಟು ಜನ ಒಡೆಯರುಂಟು. ಅವರೆಲ್ಲ ಕೂಡಲ ಸಂಗನ ಶರಣರಾಗಿದ್ದಾರೆ ಎನ್ನುತ್ತಲೆ ತಮ್ಮೊಳಗೆ ಸುಳಿಯಬಹುದಾಗಿದ್ದ ಅಹಂಕಾರವನ್ನು ತೊಡೆದು ಹಾಕುತ್ತಾರೆ.

ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ
ಒರೆಗೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯಾ
ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ
ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹು
ಕೂಡಲಸಂಗಮದೇವಾ.

ಯಾವುದೆ ಲೋಹ ಅಸಲಿ ಆಗಬೇಕಾದರೆ ಅದರೊಳಗೆ ಅಡಗಿದ್ದ ಕಸವನ್ನು ತೆಗೆದು ಹಾಕಬೇಕಾಗುತ್ತದೆ. ಕಸವಿದ್ದಾಗ ಆ ಲೋಹಕ್ಕೆ ಅಷ್ಟು ಬೆಲೆ ಬರಲಾರದು. ನಿಷ್ಕಲಶವಾದ ಲೋಹಕ್ಕೆ ಬೆಲೆ ಇದೆ. ಅಂದಂತೆ ನಿಷ್ಕಪಟ, ನಿರ್ಮಲ, ಸುಕೋಮಲವಾದ ಮನಸ್ಸಿಗೆ ಎಲ್ಲಿಯಾದರೂ ಬೆಲೆ ಇದ್ದೆ ಇದೆ. ಆದ್ದರಿಂದಲೆ ಬಸವಣ್ಣನವರು ಇಂಥ ಉದಾತ್ತ ಮನಸ್ಸನ್ನು ತಮ್ಮದಾಗಿಸಿಕೊಳ್ಳಲು ಕ್ಷಣ ಪ್ರತಿ ಕ್ಷಣವೂ ತಹತಹಿಸುವುದನ್ನು ನಾವಿಲ್ಲಿ ಕಾಣುತ್ತೇವೆ. ನನ್ನೊಳಗಿರುವ ಕಾಳಿಕೆಯನ್ನು ಕರಗಿಸುವ ಮೂಲಕ, ಪುಟವಿಟ್ಟು ನೋಡುವ ಮೂಲಕ, ಕಡಿಹಕ್ಕೆ ಬಡಿಯಕ್ಕೆ ಅದನ್ನು ಒಡ್ಡುವ ಮೂಲಕ ಪರಿಶುದ್ಧಗೊಳಿಸಿ ಶರಣರು ಉಟ್ಟುಕೊಳ್ಳಬಹುದಾದ ಪಾದಕ್ಕೆ ಆಭರಣವನ್ನಾಗಿ ಮಾಡು ಎಂದು ವಿನೀತವಾಗಿ ಬೇಡುತ್ತ ತಮ್ಮೊಳಗಿನ ಕಸವನ್ನು ಬಸವಣ್ಣನವರು ಕಿತ್ತಿ ಬಿಸಾಕಿ ಮುನ್ನಡೆದುದನ್ನು ನಾವಿಲ್ಲಿ ಕಾಣುತ್ತೇವೆ.

0 ವಿಶ್ವಾರಾಧ್ಯ ಸತ್ಯಂಪೇಟೆ

Leave a Reply

Your email address will not be published. Required fields are marked *

error: Content is protected !!