ಎತ್ತಿ ಮುದ್ದಾಡುವ,ಬಿಸಾಕುವ ಹಕ್ಕು ನಿಮಗಿದೆ

ನನ್ನಪ್ಪ ವೈಭವದ ಜೀವನವನ್ನು ಎಂದೂ ಇಷ್ಟಪಟ್ಟವನಲ್ಲ. ಆದಷ್ಟು ಸರಳವಾಗಿ ಬದುಕಲು ಇಷ್ಟಪಟ್ಟವರು. ನೆಮ್ಮದಿಯ ಜೀವನಕ್ಕೆ ಏನು ಬೇಕೋ ಅದನ್ನು ಮಾತ್ರ ಯೋಚಿಸಿ ಆ ಕಡೆ ಮಾತ್ರ ಗಮನ ಹರಿಸುತ್ತಿದ್ದರು. ನನಗೂ ಅಪ್ಪನಿಗೂ ಆಗಾಗ ಕಿರಿಕಿರಿ ಆಗುತ್ತಲೇ ಇತ್ತು. ಬದುಕುವುದಕ್ಕೆ ವೈಭವ ಬೇಡ ಕನಿಷ್ಠ ಪಕ್ಷ ಎಲ್ಲರಂತಾದರೂ ಜೀವಿಸೋಣ ಎಂದರೂ ಆತ ಒಪ್ಪುತ್ತಿರಲಿಲ್ಲ.

ಇಬ್ಬರ ನಡುವೆಯೂ ಆಗಾಗ ಜಟಾಪಟಿ. ಅಪ್ಪನ ಚುಂಗು ಹಿಡಿದು ಪತ್ರಿಕೆ ಮಾಡುತ್ತ ಹೋದರೆ ತಾಪತ್ರಯ ತಪ್ಪಿದ್ದಲ್ಲ ಎಂದು ಮನವರಿಕೆ ಆಗಿ ಹೋಯ್ತು. ಡಾ.ಪಾಟೀಲ ಪುಟ್ಟಪ್ಪನವರ ಮಗನಾಗಿರುವ ಶ್ರೀ. ಅಶೋಕ ಪಾಟೀಲ ಆಗಾಗ ನನಗೆ ಹೇಳುತ್ತಲೆ ಇರುತ್ತಿದ್ದರು. ಯಾವುದಾದರೂ ಒಂದು ಕಿರಾಣಿ, ಸ್ಟೇಷನರಿ ಅಂಗಡಿಯಲ್ಲಿ ಕೆಲಸ ಮಾಡು ಎಂದಿಗೂ ಪತ್ರಿಕೆಯ ಕೆಲಸ ಮಾಡಬೇಡ ಎಂದು. ನಿಮ್ಮ ಸಂಪಾದಕರು (ಡಾ.ಪಾಟೀಲ ಪುಟ್ಟಪ್ಪ) ಹತ್ತೆಂಟು ಪತ್ರಿಕೆ ಮಾಡಿದರು. ಆದರೆ ಆರ್ಥಿಕವಾಗಿ ಏನೂ ಗಳಿಸಲಿಲ್ಲ. ಕೊನೆಗೆ ನಮ್ಮ ಜೀವನ ನಿರ್ವಹಣೆಗೂ ತತ್ವಾರ ಮಾಡಿದ್ದಾರೆ. ಹಾಗಾಗಿ ನೀನು ಏನಾದರೂ ಬೇರೆ ಆಯ್ಕೆ ಮಾಡಿಕೋ ಎಂದು ಸಲಹೆ ನೀಡುತ್ತಿದ್ದರು.

ಈ ಸಲಹೆ ನನಗೂ ವಾಸ್ತವ ಸತ್ಯವೆಂದು ಅನಿಸುತ್ತಲೇ ಇತ್ತು. ಆದರೆ ಬರವಣಿಗೆ ಬಿಟ್ಟು ನನಗೇನೂ ಗೊತ್ತಿರಲಿಲ್ಲ. ಬಹಳಷ್ಟು ಸಲ ಆಲೋಚಿಸಿ, ಅನಿವಾರ್ಯವಾಗಿ ಅಪ್ಪ ಇನ್ನು ಬದುಕಿದ್ದಾಗಲೆ ಆತನೊಂದಿಗೆ ತಗಾದಿ ಮಾಡಿ ಹೊರಬಂದೆ. ಆಗ ನನ್ನ ಕೈ ಹಿಡಿದವರು ಗೌರಿ ಲಂಕೇಶ್. ಗೌರಿ ಪತ್ರಿಕೆಗೆ ವಾರ ವಾರವೂ ಜೀವದ ಹಂಗು ತೊರೆದು ಬರೆದೆ. ಪುಸ್ತಕ ಪ್ರಕಟಿಸಿದೆ. ಅಷ್ಟಿಷ್ಟು ಬದುಕುವುದಕ್ಕೆ ದುಡ್ಡು ಬಂತು. ನನಗೆ ಯಾವ ಚಟವೂ ಇಲ್ಲದ್ದರಿಂದ , ಅಪ್ಪ ಹೇಳಿದ ಉಳಿತಾಯವೇ ಗಳಿಕೆ ಎಂದು ನಂಬಿದ್ದರಿಂದ ಬದುಕು ಸಲೀಸಾಯಿತು. ಉಣ್ಣುವುದಕ್ಕೆ ಉಡುವುದಕ್ಕೆ ಯಾವ ತೊಂದರೆಯೂ ಇಲ್ಲದಾಯಿತು.

ಅಪ್ಪನ ಆಸರೆ ಇಲ್ಲದೆ ಬದುಕಲು, ಆತ ಇರುವಾಗಲೆ ಛಲದಿಂದ ಜೀವನ ನಿರ್ವಹಿಸಬಹುದು ಎಂಬುದು ಕಂಡುಕೊಂಡೆ. ಜೀವನ ನಿರ್ವಹಿಸಿ ಉಳಿದ ಅಷ್ಟಿಷ್ಟು ಹಣವನ್ನು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿದೆ. ನನ್ನ ಮಾತು, ಕಾಳಜಿ, ಪ್ರಾಮಾಣಿಕ ವ್ಯವಹಾರ ಜ್ಞಾನ ,ಕೈ ಹಿಡಿದು ನಡೆಸಿತು. ನನಗೆ ಪರಿಚಯ ಇರುವ ಲೇಖಕರೆಲ್ಲರ ಪುಸ್ತಕವನ್ನು ತರಿಸಿ ಓದುಗರಿಗೆ ಕೊಟ್ಟೆ. ಕಮೀಶನ್ ಬಂತು. ಈ ನಡುವೆ ತಿಂಗಳಿಗೆ ಒಂದು ಸಲ ಪ್ರಕಟವಾಗುವ ಅಗ್ನಿ ಅಂಕುರ ಪತ್ರಿಕೆ ಆರಂಭಿಸಿದೆ.

ನಾನೇ ಸ್ವತಃ ಬರೆದು ಪ್ರಕಟಿಸಿದ ಅಗ್ನಿ ಅಂಕುರದ ಬರಹಗಳನ್ನು ನೋಡಿ ಅಪ್ಪ ಬೆರಗಾದ. ಕೆಲವು ಸಲ ಇಲ್ಲಿನ ಬರಹಗಳು ತುಂಬಾ ಖಾರ ಆಗಿವೆ. ಹೀಗೆಲ್ಲ ಪ್ರಕಟಿಸಬಾರದು, ಇದು ಸರಿಯಲ್ಲ ಎಂದು ಅವರಿವರ ಮೂಲಕ ಹೇಳಿಸಿದರೂ ನಾನು ಕಿವಿಯ‌ ಮೇಲೆ ಹಾಕಿಕೊಳ್ಳಲಿಲ್ಲ. ಜೀವದ ಹಂಗು ತೊರೆದು ಪ್ರಾಮಾಣಿಕ ಬರವಣಿಗೆ ಮಾಡಿದೆ. ಆಗ ನನ್ನೊಂದಿಗೆ ಸಾಥ್ ಕೊಟ್ಟಾತ, ನನ್ನ ಸಹೋದರ ಸಾಯಿಕುಮಾರ ಇಜೇರಿ. ಅದೆ ಸಂದರ್ಭದಲ್ಲಿ ಚುನಾವಣೆಗಳು ಬಂದವು. ಜಾಹೀರಾತು ಪತ್ರಿಕೆಗೆ ಬಂತು. ಆ ದುಡ್ಡಿಗೆ ಚಲನೆ ಒದಗಿಸಿದೆ.

ಹಣ ದುಡಿಸುವ ಕಲೆ ನನಗಾಗಲೆ ಕರಗತವಾದ್ದರಿಂದ ಸಹಜವಾಗಿಯೆ ಅದು ತನ್ನಷ್ಟಕ್ಕೆ ತಾನು ಬೆಳೆಯತ್ತ ಹೋಗುತ್ತಿತ್ತು. ಅಪ್ಪನ ತೆಕ್ಕೆಗೆ ಬಿದ್ದು, ಆತನ ಕಾಲಿಗೆ ಗುಂಡಾಗಿ ಕಾಡುತ್ತಿದ್ದ ನಾನು ನಾಲ್ಕಾರು ವರ್ಷಗಳಲ್ಲೇ ಹಗುರವಾದ ಬೆಂಡಾದೆ. ಆತನ ಕಣ್ಣ ಮುಂದೆಯೆ ಓದಿದೆ, ಬರೆದೆ, ನಾಲ್ಕು ಕಾಸು ಕೈಯಲ್ಲಿಟ್ಟುಕೊಂಡು ಓಡಾಡುವಂತಾಯಿತು. ಆಗ ನನಗೆ ಪರಿಚಯವಿರು ಬ್ಯಾಂಕ್ ಒಂದರ ಸಹಾಯದಿಂದ ಸ್ಯಾಂಟ್ರೋ ಜಿಂಗ್ ಎಂಬ ಕಾರೊಂದನ್ನು ತಂದು ಮನೆಯ ಮುಂದೆ ನಿಲ್ಲಿಸಿದೆ.

ಅಪ್ಪ ನನ್ನ ಬೆಳವಣಿಗೆ (?) ಕಂಡು ಖುಷಿಯಾಗುತ್ತಾನೆ ಎಂದು ತಿಳಿದುಕೊಂಡಿದ್ದೆ. ಆದರೆ ಆತ ನನ್ನ ಮೇಲೆ ಸಿಟ್ಟಾಗಿದ್ದ. ಸರಳವಾಗಿ ಬದುಕಲು ಕಾರಿನ ಅವಶ್ಯಕತೆ ಇಲ್ಲ ಎಂದು ಬೈಯ್ದ. ಈ ಹಣದಲ್ಲಿ ಎಷ್ಟು ಪುಸ್ತಕ ಪ್ರಕಟಿಸಬಹುದು ! ಗೊತ್ತಾ ? ಎಂದು ಮೂದಲಿಸಿದ. ಕಾರು ವೃಥಾ ಖರ್ಚಿನ ಬಾಬ್ತು ಎಂಬುದು ಆತನ ಲೆಕ್ಕಾಚಾರ. ಹನಿ ಹನಿಗೂಡಿದರೆ ಹಳ್ಳ ಹಾಗೂ ಶರಣರ ,ಮನ ಶುದ್ಧ ಇಲ್ಲದವಂಗೆ ದ್ರವ್ಯದ ಬಡತನವಲ್ಲದೆ, ಚಿತ್ತ ಶುದ್ಧದಲ್ಲಿ ಕಾಯಕ ಮಾಡುವ ಶರಣಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ಎಂಬ ಮಾತು ಸತ್ಯವಾಯಿತು.

ಓದು ಬರಹ, ಪುಸ್ತಕ ಪ್ರಕಟಣೆ, ಬಸವ ತತ್ವ ಪ್ರಸಾರ ನನ್ನ ಬೈಗು ಬೆಳಗಾಯಿತು. ಇವೆಲ್ಲವುಗಳಲ್ಲಿ ಪ್ರಾಮಾಣಿಕವಾಗಿ, ಮನಪೂರ್ವಕವಾಗಿ 20 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡುತ್ತ ಬಂದೆ. ಹಲವಾರು ರೀತಿಯಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಪರಿಚಯಕ್ಕೆ ಬಂದರು. ಸಹಾಯ ಸಹಕಾರ ಮಾಡುತ್ತ ಬಂದರು. ಕೆಲವರಂತೂ ನಾನು ಇಷ್ಟ ಪಡದಿದ್ದರೂ ನನ್ನ ಅಕೌಂಟ್ ಪಡೆದು ಹಣ ಹಾಕಿ ಪ್ರೋತ್ಸಾಹಿಸಿದ್ದಾರೆ. ಸದಾಕಾಲ ನನ್ನನ್ನು ಕೈ ಹಿಡಿದು ನಡೆಸುವ ಶಕ್ತಿ ತುಂಬುತ್ತಿದ್ದಾರೆ. ನಾಡಿನ ಹಲವಾರು ಮಠಾಧೀಶರು ನನಗೆ ಅತ್ಯಂತ ಆತ್ಮೀಯರು. ಅವರ ಹಾರೈಕೆಯಲ್ಲಿ ಮುನ್ನಡೆದಿರುವೆ.ನಾನು ಬಯಸದೆಯೂ ಹಲವು ಪುರಸ್ಕಾರಗಳು ಹುಡುಕಿಕೊಂಡು ಬಂದವು. ನಾಡಿನ ಹೆಸರಾಂತ ಚಿಂತಕರು, ಬರಹಗಾರರು, ರಾಜಕಾರಣಿಗಳು,  ಪೊಲೀಸ್ ಅಧಿಕಾರಿಗಳು ನನ್ನ ಬಗೆಗೆ ಕಾಳಜಿ ಉಳ್ಳವರಾದರು.

ಮನೆ ಕಟ್ಟಬೇಕೆಂದು ನಿರ್ಧರಿಸಿದೆ. ಕಾರ್ಪೂರೇಷನ್ ಬ್ಯಾಂಕ್ ನ ಮ್ಯಾನೇಜರ್ ಶ್ರೀ ವೀರೇಶ್ ವಕೀಲ (ಕುಂಬಾರ) ಮಾರ್ಗದರ್ಶಿಯಾದರು. ಸಾಲ ಸಲೀಸಾಗಿ ( ಅಪ್ಪ ಕಟ್ಟಿಸಿದ ಮನೆ ಅಡವಿಟ್ಟು) ಮಂಜೂರು ಮಾಡಿದರು. ಮನೆಯಲ್ಲಿ ಮಡದಿ ಶರಾವತಿಗೆ ಅವರ ತಂದೆ ತಾಯಿಗಳು ಹಾಕಿದ ಒಡವೆಗಳಿದ್ದವು. ಅವನ್ನು ಮಾರಿದೆ. ಮನೆ ಪೂರ್ಣಗೊಂಡು ಸಂತೋಷದಿಂದ ಇದ್ದೇನೆ. ಮನೆಯಲ್ಲಿ ನಾನು ಜೀವಿಸಿದ್ದಲ್ಲದೆ ಬಾಡಿಗೆಗೂ ಕೊಟ್ಟಿರುವೆ. ಬ್ಯಾಂಕ್ ನಲ್ಲಿ ಮಾಡಿದ ಸಾಲದ ಕಂತುಗಳನ್ನು ಅದು ಸರಾಗವಾಗಿ ಭರಿಸುತ್ತಿದೆ. ನನಗಾವ ಕೊರತೆ ಈಗ ಕಾಡುತ್ತಿಲ್ಲ.

ಇವೆಲ್ಲ ಆರ್ಥಿಕ ಬೆಳವಣಿಗೆಯ ನಡುವೆಯೂ ನನ್ನ ಜೀವ ಜೀವಾಳವಾದ ಬಸವ ತತ್ವ ಪ್ರಸಾರ ಕೈ ಬಿಟ್ಟಿಲ್ಲ. ತತ್ವವನ್ನು ಜೀವಾಳವಾಗಿಟ್ಟುಕೊಂಡೇ ಮುನ್ನಡೆದಿರುವೆ. ನಾನು ಈ ಹಿಂದೆ ತೆಗೆದುಕೊಂಡ ಸ್ಯಾಂಟ್ರೋ ಜಿಂಗ್ ವಾಹನಕ್ಕೆ ಇದೀಗ ೧೧ ವರ್ಷಗಳು. ಅದನ್ನು ಬದಲಿಸದೆ ಗತ್ಯಂತರವಿಲ್ಲ. ಏನು ಮಾಡುವುದು ಎಂದು ಆಲೋಚಿಸುತ್ತಿರುವಾಗಲೆ ಅಪ್ಪ ಗಳಿಸಿದ್ದ ಹೊಲದಲ್ಲಿ ರೈಲ್ವೆಹಳಿಗಳು ಹಾದು ಹೋದವು. ನನ್ನ ಸಹೋದರರ ಜೊತೆಗೆ ನನಗೂ ಹತ್ತು ಲಕ್ಷಕ್ಕೂ ಹೆಚ್ಚು ಹಣ ಬಂತು. ಈ ಹಣಕ್ಕೆ ಇನ್ನಷ್ಟು ಕೂಡಿಸಿ, ಬ್ಯಾಂಕ್ ಲೋನ್ ಮಾಡಿ ಕೀಯಾ ಎಂಬ ಕಾರೊಂದನ್ನು ತಂದಿದ್ದೇನೆ.

ಹೊಸ ಕಾರು ಖರೀದಿ ಮಾಡಿದ ಸಂದರ್ಭದಲ್ಲಿ ಇವೆಲ್ಲ ನೆನಪಾದವು. ನನ್ನ ಬೆಳವಣಿಗೆ ಕಂಡು ಖುಷಿ ಪಡುವವರಲ್ಲಿ ನನ್ನ ಕಾಕ ವಿಶ್ವಾರಾಧ್ಯ ಸತ್ಯಂಪೇಟೆ, ಮಲ್ಲಿಕಾರ್ಜುನ ಸತ್ಯಂಪೇಟೆ ಪ್ರಮುಖರು. ನನ್ನ ಸಹೋದರ ಶಿವರಂಜನ್, ವಿಜಯ ಹಾಗೂ ಸಂತೋಷನ ಸಂಭ್ರಮಕ್ಕಂತೂ ಪಾರವೇ ಇಲ್ಲ.

ಬರೀ ನೋವೇ ಹಂಚಿಕೊಳ್ಳುತ್ತಿದ್ದ ನಾನು, ಹೊಸ ಕಾರು ಮನೆಗೆ ತಂದ ನೆನಪಿಗಾಗಿ ಇದೆಲ್ಲ ಬರೆದೆ. ಇದು ತಪ್ಪಾಗಿದ್ದರೆ ದಯವಿಟ್ಟು ತಿದ್ದಿ ಬುದ್ದಿ ಹೇಳಿ. ಕೈ ಹಿಡಿದು ನಡೆಸುವವರು ನೀವು. ನಿಮ್ಮ ಕಣ್ಣ ರೆಪ್ಪೆಯ ಕೆಳಗೆ ಬದುಕುವವನು ನಾನು. ನಿಮ್ಮ ಒಂದೆ ಒಂದು ಮಾತು ನನ್ನನ್ನು ತುಳಿಯಲೂ ಬಹುದು, ಮೇಲೆತ್ತಲೂ ಬಹುದು. ನಾನು ನಿಮ್ಮ ಕೈಗೂಸು. ಎತ್ತಿ ಮುದ್ದಾಡುವ ಬಿಸಾಕುವ ಹಕ್ಕು ನಿಮಗಿದೆ.

ಹಿಂದೆ ಸ್ಯಾಂಟ್ರೋ ಕಾರು ಹೇಗೆ ಬಸವ ತತ್ವಕ್ಕೆ ಮಾತ್ರ ಬಳಕೆ ಆಯಿತೋ ಹಾಗೆಯೇ ಈ ಕಾರು ಸಹ ನಾನು ಮಾಡಬಯಸಿರುವ ಬಸವ ತತ್ವ ಪ್ರಸಾರಕ್ಕೆ ಇನ್ನಷ್ಟು ಚಲನೆ ನೀಡಲಿದೆ ಎಂದು ಮಾತ್ರ ಹೇಳಬಯಸುವೆ. ಕೆಲವರು ಕಾರ್ ತೆಗೆದುಕೊಳ್ಳಲು ಹಣ ಎಲ್ಲಿಂದ ಬಂತು ? ಎಂದು ಹಿಂದೆ ಮುಂದೆ ಆಡುವವರಿಗೆ, ಹಾಗೂ ನನ್ನ ಓದುಗ ಒಡೆಯರಿಗೆ ಅಫಡವೆಟ್ ನೀಡಲು ಬಯಸಿ ಇದನ್ನೆಲ್ಲ ಬರೆದಿರುವೆ.

ವಿಶ್ವಾರಾಧ್ಯ ಸತ್ಯಂಪೇಟೆ

One thought on “ಎತ್ತಿ ಮುದ್ದಾಡುವ,ಬಿಸಾಕುವ ಹಕ್ಕು ನಿಮಗಿದೆ

  1. ಅಭಿನಂದನೆಗಳು ಸರ್. ಬಸವ ತತ್ವ ಮುಂದುವರಿಯಲಿ.

Leave a Reply

Your email address will not be published. Required fields are marked *

error: Content is protected !!