ಬಸವ ಪುರಸ್ಕಾರಕ್ಕೊಂದು ಗರಿ ತಂದ : ಡಾ.ಬಸವಲಿಂಗ ಪಟ್ಟದ್ದೇವರು

ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರಿಗೆ ಇಂದು ಕರ್ನಾಟಕ ಸರಕಾರ ಬಸವ ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಡಾ.ಚೆನ್ನಬಸವ ಪಟ್ಟದ್ದೇವರ ಗರಡಿಯಲ್ಲಿ ಉತ್ತಮವಾದ ಮಠಾಧೀಶರೊಬ್ಬರು ತಯಾರಾದುದನ್ನು ನಾವು ನೋಡುತ್ತಿದ್ದೇವೆ. ಬಸವಾದಿ ಶರಣರ ತತ್ವಗಳನ್ನು ಜನ ಮಾನಸಕ್ಕೆ ತಲುಪಿಸಬೇಕೆಂಬ ನಿಟ್ಟಿನಲ್ಲಿ ಡಾ.ಬಸವಲಿಂಗ ಪಟ್ಟದ್ದೇವರ ಪರಿಶ್ರಮ ಶ್ಲಾಘನೀಯ.

ಆರ್ಥಿಕವಾಗಿ ಅಷ್ಟೇನು ಚೆನ್ನಾಗಿ ಇರದ ಹಿರೇಮಠಕ್ಕೆ ಬಂದ ಪಟ್ಟದ್ದೇವರು ನೋಡ ನೋಡುತ್ತಿರುವಂತೆ ಬೆಳೆಸಿದ್ದಾರೆ. ರಾಜಕಾರಣಿಯೊಬ್ಬರ ಕಿರುಕುಳಕ್ಕೆ ತುತ್ತಾಗಿಯೂ ಫಿನಿಕ್ಸ್ ಹಕ್ಕಿಯಂತೆ ಮತ್ತೆ ಎದ್ದು ನಿಂತದ್ದು ಎಲ್ಲರೂ ಬೆರಗು ಪಡುವಂಥದ್ದು. ಶಾಲೆ ಕಾಲೇಜು ಶಿಕ್ಷಣ ಕಟ್ಟಡ ಇತ್ಯಾದಿಗಳ ನಡುವೆಯೂ ಬಸವ ತತ್ವವನ್ನು ಮರೆತಿಲ್ಲ. ನೆರೆಯ ಆಂದ್ರ, ತೆಲಂಗಾಣ, ಮಹಾರಾಷ್ಟ್ರದ ತುಂಬೆಲ್ಲ ವಚನ ದುಂದುಬಿಯನ್ನು ಮೊಳಗಿಸಿದ್ದಾರೆ. ತೆಲುಗು, ಮರಾಠಿಯಲ್ಲಿ ವಚನ ಸಾಹಿತ್ಯವನ್ನು ಮುದ್ರಿಸಿ ಜನರು ಇರುವಲ್ಲಿಗೆ ಹೋಗಿ ತತ್ವ ಮುಟ್ಟಿಸಿ ಬಂದಿದ್ದಾರೆ.

ಡಾ. ಬಸವಲಿಂಗ ಪಟ್ಡದ್ದೇವರ ಸರಳ ಹಾಗೂ ಸಜ್ಜನ ನಡವಳಿಗಳನ್ನು ನೋಡಿ ಮಹಾರಾಷ್ಟ್ರದ ಪಂಚಾಚಾರ್ಯ ಪರಂಪರೆಯ ಮಠಾಧೀಶನೆ ಬದಲಾಗಿ, ಬಸವ ತತ್ವವನ್ನು ಅಪ್ಪಿ , ಒಪ್ಪಿಕೊಂಡ ಸೂಜಿಗವನ್ನು ಕಾಣುತ್ತೇವೆ.

ಇಂದಿಗೂ ಮಠದಲ್ಲಿ ಅನಾಥ ಮಕ್ಕಳ ದೇಕರೇಖಿಯನ್ನು ಮಾಡುತ್ತಾರೆ. ನೊಂದವರ ನೋವಿಗೆ ಸ್ಪಂದಿಸುವ ಗುಣ ರೂಢಿಸಿಕೊಂಡಿದ್ದಾರೆ. ಡಾ.ಬಸವಲಿಂಗ ಪಟ್ಟದ್ದೇವರು ಅದ್ಭುತ ಭಾಷಣಕಾರರೇನು ಅಲ್ಲ. ಆದರೆ ಅವರ ಮಾತುಗಳ ತುಂಬೆಲ್ಲ ವಚನದ ಹೊಳೆ ಹರಿಯುತ್ತದೆ. ಶರಣರ ಆಶಯದ ಜೇನು ಸ್ಪುರಿಸುತ್ತದೆ. ಸ್ವತಃ ಲೇಖಕರಾಗಿಯೂ ಹಲವು ಮಹತ್ವದ ಕೃತಿಗಳನ್ನು ಬರೆದಿದ್ದಾರೆ. ಚೆನ್ನಬಸವ ಪಟ್ಟದ್ದೇವರ ಸ್ಮರಣೋತ್ಸವವನ್ನು ಕಲ್ಯಾಣ ನಾಡಿನ ಶರಣ ಪರಿಷತ್ತು ಹಮ್ಮಿಕೊಳ್ಳುವ ಸಮ್ಮೇಳನವನ್ನು ಆಯೋಜಿಸಿ ಡಾ. ಮೂಡ್ನಾಕೊಡು ಚಿನ್ನಸ್ವಾಮಿ ಅವರನ್ನು ಸಮ್ಮೇಳನಾಧ್ಯರನ್ನಾಗಿಸಿದ ಕೀರ್ತಿ ಪಟ್ಟದ್ದೇವರಿಗೆ ಸಲ್ಲುತ್ತದೆ.

ತಮ್ಮ ಇಳಿ ವಯಸ್ಸಿನಲ್ಲೂ ಬಸವ ತತ್ವಕ್ಕೆ ಹಂಬಲಿಸುತ್ತಾರೆ. ತೀರಾ ಇತ್ತೀಚೆಗೆ ರೂಪುಗೊಂಡ ಮಠಾಧೀಶರ ಒಕ್ಕೂಟಕ್ಕೂ ಅಧ್ಯಕ್ಷರಾಗಿದ್ದಾರೆ. ಸದು ವಿನಯ, ಸದ್ಭಾವ,ಸದಾಚಾರಗಳನ್ನು ಮೈಗೂಡಿಸಿಕೊಂಡಿರುವ ಪಡ್ಟದ್ದೇವರು ತುಂಬಿದುದು ತುಳುಕದು ನೋಡಾ ಎಂಬಂತೆ ಇದ್ದಾರೆ.

ಆರು ಮುನಿದು ನಮ್ಮನೇನ ಮಾಡುವರು ? ಊರು ಮುನಿದು ನಮ್ಮನ್ನೆಂತು ಮಾಡುವುದು ? ಎಂದು ತಮ್ಮಷ್ಟಕ್ಕೆ ತಾವೇ ಬಸವಮಾರ್ಗ ದಲ್ಲಿ ನಡೆದು ಹೋಗುತ್ತಿರುವ ಡಾ.ಬಸವಲಿಂಗ ಪಟ್ಡದ್ದೇವರಿಗೆ ಕರ್ನಾಟಕ ಸರಕಾರ ರಾಷ್ಟ್ರೀಯ ಬಸವ ಪುರಸ್ಕಾರ ನೀಡಿ ಗೌರವಿಸಿ ತನ್ನ ಗೌರವವನ್ನು ಇಮ್ಮಡಿಗೊಳಿಸಿಕೊಂಡಿದೆ.

ಈ ಸಂದರ್ಭದಲ್ಲಿ ಬಸವಮಾರ್ಗ ಡಾ. ಬಸವಲಿಂಗ ಪಟ್ಡದ್ದೇವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.

೦ ವಿಶ್ವಾರಾಧ್ಯ ಸತ್ಯಂಪೇಟೆ

2 thoughts on “ಬಸವ ಪುರಸ್ಕಾರಕ್ಕೊಂದು ಗರಿ ತಂದ : ಡಾ.ಬಸವಲಿಂಗ ಪಟ್ಟದ್ದೇವರು

  1. ಸಮಂಜಸ ಆಯ್ಕೆ. ಶರಣು ಶರಣಾರ್ಥಿ. ಜೈ ಬಸವೇಶ್ವರ.

  2. ನಿಜವಾಗಿಯೂ ಬಹು ಸೂಕ್ತ ಆಯ್ಕೆ.
    ಬಸವ ಪುರಸ್ಕಾರದ ಗೌರವ ಇಮ್ಮಡಿಗೊಂಡಿದೆ.
    ಶರಣಾರ್ಥಿ.

Leave a Reply

Your email address will not be published. Required fields are marked *

error: Content is protected !!