ನಾನೇ ಬೆತ್ತಲೆ ಆಗಲು ಸಿದ್ದವಿರುವಾಗ, ಮುಖವಾಡ ಕಳಚುವ ಅವಶ್ಯಕತೆ ಇಲ್ಲ

ಕೆಲವರು ಆಗಾಗ ನನ್ನನ್ನು ಕಿಚಾಯಿಸುತ್ತಾರೆ‌. ಹಲವರು ನನ್ನ ಮೇಲೆ ಮುಗಿಬಿದ್ದು ಪ್ರಶ್ನಿಸುತ್ತಾರೆ. ಇನ್ನು ಕೆಲವರು ಕಾಲು ಕೆದರಿ ಜಗಳ ಮಾಡಲು ಬರುತ್ತಾರೇನೋ ಎಂಬ ತುರ್ತಿನಲ್ಲಿರುತ್ತಾರೆ. ಇವರೆಲ್ಲರ ಒಂದೇ ಒಂದು ಪ್ರಶ್ನೆಯೆಂದರೆ ನೀನು ಬಸವ ತತ್ವ ಹೇಳುತ್ತ, ಬರೆಯುತ್ತ,ಭಾಷಣ ಮಾಡುತ್ತ ಒಮ್ಮೆಯಾದರೂ ಬಸವಣ್ಣನವರನ್ನು ಬದುಕಿದ್ದೀಯಾ ? ಎಂದು.

ಇವರೆಲ್ಲರಿಗೂ ಒಮ್ಮೆಲೆ ,ತಕ್ಷಣ ಕೊಡಬಹುದಾದ ಉತ್ತರವೆಂದರೆ ‘ಹೌದು,ನಾನು ಬಸವ ತತ್ವವನ್ನು ಸಂಪೂರ್ಣವಾಗಿ ಬದುಕಿಲ್ಲ’ , ಈ ಮಾತು ಅರ್ಧ ಸತ್ಯ. ಬಸವಾದಿ ಶರಣರ ವಿಚಾರಗಳು ಕೇವಲ ಹೇಳಲು ಅಲ್ಲ, ಅವು ಬದುಕಲು ಎಂಬುದು ನನಗೂ ಗೊತ್ತು. ಆದರೆ ತೀರಾ ಬಗ್ಗಡಗೊಂಡ ಸಮಾಜದಲ್ಲಿ ಅವುಗಳ ಅನುಷ್ಠಾನ ತುಂಬಾ ಕಷ್ಟ. ಹೀಗಾಗಿ ನನಗೆ ಎಷ್ಟು ಸಾಧ್ಯವೋ ಅಷ್ಟನ್ನು ಮಾತ್ರ ಪರಿಪಾಲಿಸಿಕೊಂಡು ಹೊರಟಿದ್ದೇನೆ. ನಾನು ಅಪ್ಪಟ ಚಿನ್ನವಂತು ಅಲ್ಲವೆ ಅಲ್ಲ.

ಎನ್ನ ತಪ್ಪು ಅನಂತಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ ಎನ್ನುವಂತೆ ಜನ ನನ್ನನ್ನು ಸಹಿಸಿಕೊಂಡು ಹೊರಟಿದ್ದಾರೆ. ನನ್ನ ಬಗೆಗೆ ಪ್ರೀತಿ ಹೊಂದಿದ್ದಾರೆ. ಕಾಳಜಿ ತೋರಿಸುತ್ತಿದ್ದಾರೆ. ಅದು ಅವರ ದೊಡ್ಡ ಗುಣವೇ ಹೊರತು, ನನ್ನ ಯೋಗ್ಯತೆಯಂತೂ ಖಂಡಿತ ಅಲ್ಲ.

ಹಾಗಂತ ನಾನು ಅಪ್ಪಟ ಹಲಾಲಖೋರನೂ ಅಲ್ಲ. ವಚನಗಳನ್ನು ಓದಿದ್ದೇನೆ, ಸತ್ಯ ಅರಿತಿದ್ದೇನೆ. ಬಸವಾದಿ ಶರಣರ ವಿಚಾರಧಾರೆಯ ಪರೀಕ್ಷೆಯಲ್ಲಿ ನಾನು ಜೀರೋ ಅಂಕ ಪಡೆಯುತ್ತೇನೆ ಎಂಬುದು ನನಗೂ ಖಾತ್ರಿ. ಏಕೆಂದರೆ ಅಪ್ಪ ಬಸವಣ್ಣನವರು ಹೇಳಿದಂತೆ ಮನವರಿಯದ ಕಳ್ಳತನವಿಲ್ಲ ಎಂಬ ಮಾತನ್ನು ಇಂಬಿಟ್ಟುಕೊಂಡು ನಡೆದಾಗ ನನಗೆ ನಾನೇ ಅಸಹ್ಯ ಪಟ್ಟಿದ್ದೇನೆ, ತಿದ್ದಿಕೊಂಡಿದ್ದೇನೆ. ಸೂಕ್ಷ್ಮಗ್ರಾಹಿ ಗುಣಗಳು ನನಗೆ ಅರಿಯದೆ ಅಳವಟ್ಟಿವೆ. ಯಾರನ್ನೂ ಉದ್ದೇಶ ಪೂರ್ವಕವಾಗಿ ನೋಯಿಸಬೇಕೆಂಬ ಗುಣ ನನ್ನದಲ್ಲ. ಇನ್ನಾರನ್ನೋ ಟೀಕಿಸಿ ದೊಡ್ಡವನಾಗಬೇಕೆಂಬ ಉಮೇದು ನನ್ನದಲ್ಲ. ನಾನೇ ತಪ್ಪುಗಳ ಮೂಟೆಯಾಗಿರುವಾಗ ಟೀಕಿಸುವ ಹಕ್ಕು ನನಗಿಲ್ಲ. ಒಂದು ಇರುವೆಗೆ ತೊಂದರೆಯಾದರೂ ಮನ ನೋಯುತ್ತದೆ. ಅತ್ಯಾಚಾರ, ಅನ್ಯಾಯವಾದ ಮನಸ್ಸು ಪ್ರತಿಭಟಿಸಲು ಹಚ್ಚುತ್ತದೆ. ಸ್ವಾರ್ಥಕ್ಕಾಗಿ ಇನ್ನೊಬ್ಬರ ಸಮಾಧಿ ಮಾಡಲು ಮನಸ್ಸು ಇಚ್ಚಿಸುವುದಿಲ್ಲ. ದೇವರ ಧರ್ಮದ ಹೆಸರಿನ ಮೇಲೆ ನಡೆದಿರುವ ಅನ್ಯಾಯ,ಅತ್ಯಚಾರಗಳನ್ನು ಖಂಡಿಸುವ ಮನಸ್ಥಿತಿ ಉಂಟಾಗಿದೆ. ನಾನು ಇದುವರೆಗೂ ಯಾವ ದೇವರು ದಿಂಡಿರುಗಳಿಗೂ ಅಡ್ಡ ಉದ್ದ ಬಿದ್ದಿಲ್ಲ. ದೇಹಿ ಎಂದು ಆತನನ್ನು ಕೇಳಿಲ್ಲ. ಕೇಳಿದರೂ ಆತ ಕೊಡುವುದಿಲ್ಲ ಎಂಬುದು ಪಕ್ಕಾ ಖಾತ್ರಿ ಆಗಿದೆ.

ಏಕೆಂದರೆ :

ಸತ್ಯವುಳ್ಳವರಿಗೆ ನಿತ್ಯನೇಮದ ಹಂಗೇಕಯ್ಯಾ ? ಅರಿವುಳ್ಳವರಿಗೆ ಅಗ್ಗವಣಿಯ ಹಂಗೇಕಯ್ಯಾ ? ಮನಶುದ್ಧವುಳ್ಳವರಿಗೆ ಮಂತ್ರದ ಹಂಗೇಕಯ್ಯಾ ? ಭಾವಶುದ್ಧವುಳ್ಳವರಿಗೆ ಪತ್ರೆಯ ಹಂಗೇಕಯ್ಯಾ ? ನಿಮ್ಮನರಿದ ಶರಣರಿಗೆ ನಿಮ್ಮ ಹಂಗೇಕಯ್ಯಾ ? ಕೂಡಲಚೆನ್ನಸಂಗಮದೇವಾ ?

ಈ ವಚನದ ಸಾರ ಹಿಡಕೊಂಡು ಬದುಕು ದೂಡಿದ್ದೇನೆ. ಸಮಯ ವ್ಯಯ ಮಾಡದೆ ದುಡಿಮೆ ಮಾಡಿದ್ದೇನೆ. (ಕಾಯಕ ಮಾಡಿಲ್ಲ ) ದುಡಿಮೆಯ ಪೈಗೆ ಪೈಯನ್ನು ಜಮಾಯಿಸಿ ಇಟ್ಟಿದ್ದೇನೆ. ಉಳಿತಾಯವೇ ಗಳಿಕೆ ಎಂದು ತಿಳಿದಿದ್ದೇನೆ. ಹುಚ್ಚುಚ್ಚಾರ ಖರ್ಚು ಮಾಡಿಲ್ಲ. ಮನೆಯನ್ನು ಹೊರತು ಪಡಿಸಿ ಇನ್ನಾವ ಕಡೆಗೂ ಊಟ ಮಾಡಿಲ್ಲ,(ಅನಾವಶ್ಯಕವಾಗಿ) ಕುಡಿತ ,ಜೂಜು,ಮೋಜು ನನಗೆ ಗೊತ್ತಿಲ್ಲ. ಪುಸ್ತಕ ತರಿಸಿಕೊಂಡಿದ್ದೇನೆ, ಓದಿದ್ದೇನೆ. ಅವುಗಳಲ್ಲಿಯ ಮೌಲ್ಯಗಳನ್ನು ಬದುಕಿನಲ್ಲಿ ತಂದುಕೊಳ್ಳಲು ಯತ್ನಿಸಿದ್ದೇನೆ.

ಈ ಎಲ್ಲಾ ಕಾರಣಗಳಿಂದ ಬದುಕಿನ‌ ಕಲೆ ನನಗೆ ಕರಗತವಾಗಿದೆ. ಉತ್ತಮ ಅತ್ಯುತ್ತಮ ವ್ಯಕ್ತಿತ್ವ ಉಳ್ಳವರು ನನ್ನ ಪರಿಚಯಕ್ಕೆ ಬಂದಿದ್ದಾರೆ. ಅವರನ್ನು ನಾನು ಪ್ರೀತಿಸಿದ್ದೇನೆ, ನನ್ನನ್ನು ಅವರು ಪ್ರೀತಿಸುತ್ತಾರೆ. ನಾನು ಸಂಕಟ ಪಡುವ ಸಮಯದಲ್ಲಿ ಅವರ ನೆರವು,ಪ್ರೀತಿ, ಆಸರೆ ಇಲ್ಲದೆ ಹೋಗಿದ್ದರೆ ನಾನು ಉಳಿಯುತ್ತಿರಲಿಲ್ಲ. ಅವರ ಸಹಕಾರ ತುಂಬಾ ದೊಡ್ಡದು, ನಾನವರ ಮುಂದೆ ತುಂಬಾ ಅಲ್ಪ.

ಕೇವಲ ಬಸವಾ ಎಂಬ ಮೂರಕ್ಷರಗಳು ಹೃದಯದಲ್ಲಿ ನೆಲೆಗೊಂಡಡೆ ಅಭೇಧ್ಯವೂ ಭೇದ್ಯವಯ್ಯ, ಅಸಾಧ್ಯವೂ ಸಾಧ್ಯವಯ್ಯ ಎಂದು ಅರಿತುಕೊಂಡಿದ್ದೇನೆ. ಶರಣರ ವಿಚಾರಗಳನ್ನು ಕೊಲಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಎಂಬ ವಿಚಾರ ಅಳವಡಿಸಿಕೊಂಡಿದ್ದೇನೆ. ಇನ್ನುಳಿದ ಸಂಗತಿಗಳನ್ನು ಪೂರ್ಣ ಕಾರ್ಯಗತಗೊಳಿಸಲು ಯತ್ನಿಸಿದ್ದೇನೆ. ಆದರೆ ಸಾಧ್ಯವಾಗಿಲ್ಲ.

ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸಿದ್ದೇನೆ. ಸಾಧ್ಯವಾದರೆ ಸಹಾಯ ಮಾಡಲು ಪ್ರಯತ್ನಿಸಿದ್ದೇನೆ. ಆಗದಿದ್ದರೆ ಸುಮ್ಮನಿದ್ದೇನೆ. ಆದರೆ ಅವರಿಗೆ ನಾನೆಂದು‌ ಮುಳ್ಳಾಗಿಲ್ಲ.

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ, ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ, ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ, ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ, ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ

ಎಂಬ ವಚನವನ್ನು ನಂಬಿ ಜ್ಞಾನ ನೀಡಲು ಹೋದರೆ ( ಬರವಣಿಗೆಯ ಮೂಲಕ) ಕಣ್ಕಪ್ಪಡಿಗಳು ನನ್ನ ಮೇಲೆ ಮುಗಿಬಿದ್ದಿವೆ. ಸತ್ಯ ಹೇಳಲು ಹೋಗಿ ಅಮಂಗಳವಾಗಿದ್ದೇನೆ. ಯಾರಿಗೂ ಕೇಡಾಗುವುದು ಬೇಡವೆಂದು ಬಗೆದು ಆ ಸಮಸ್ಯೆ ಬಗೆಹರಿಸಲು ಯತ್ನಿಸಿ ನಾನೇ ಅವರು ಹೆಣೆದ ಜೇಡ ಬಲೆಯಲ್ಲಿ ಸಿಗಹಾಕಿಕೊಂಡಿದ್ದೇನೆ, ಮಾನಸಿಕವಾಗಿ ನೊಂದಿದ್ದೇನೆ. ಆದರೂ ಹುಚ್ಚುಖೋಡಿ ಮನಸ್ಸು ಬಸವಣ್ಣನವರ ವಚನಗಳನ್ನು ಬದುಕಲು ಪದೆ ಪದೆ ಯತ್ನಿಸುತ್ತಿದೆ.

ಕೆಲವರು ನಾವು ನಡೆಸುವ ಬಸವ ಬೆಳಕು ಕಾರ್ಯಕ್ರಮ ಕೆಡಿಸುವ ಮಾತನಾಡಿದ್ದಾರೆ. ನನ್ನ ಒಳ ಹೊರಗೆ ಒಂದಿಲ್ಲದ ಮುಖವಾಡ ಕಳಚುವ ಮಾತನಾಡಿದ್ದಾರೆ. ಈ ಮೂಲಕ ಆಗಾಗ ಬ್ಲಾಕ್ ಮೇಲ್ ಮಾಡಿತ್ತಿದ್ದಾರೆ. ಆ ಎಲ್ಲಾ ಬಂಧುಗಳಿಗೆ ನಾನು ಹೇಳುವುದಿಷ್ಟೆ. ನಾನೇ ಬತ್ತಲೆಯಾಗಿ ನಿಲ್ಲಲು ಸಿದ್ದವಾಗಿರುವಾಗ, ನಿಮಗೆ ಆ ಜರೂರೆ ಇರಲಾರದು.

ನಾನು ಶರಣರ ವಿಚಾರಗಳ ಸಂದರ್ಭದಲ್ಲಿ ಶೇಕಡಾ ನೂರಕ್ಕೆ ನೂರು ನಪಾಸಾಗುತ್ತೇನೆ. ಇದು ಸತ್ಯ. ಆದರೆ ನಾನು ಕಟ್ಟಿರುವ ಪರೀಕ್ಷೆ ಬಸವಾದಿ ಶರಣರದು ಎಂಬುದನ್ನು ನಾನು ಹೆಮ್ಮೆಯಿಂದ ಹೇಳುತ್ತೇನೆ. ಶರಣರ ಪರಿಕ್ಷೆಯನ್ನಾದರೂ ಕಟ್ಟುವ ಯೋಗ್ಯತೆ ಬೆಳೆಸಿಕೊಂಡಿದ್ದೇನಲ್ಲ ಎಂದು ಸಮಾಧಾನ ಪಡುತ್ತೇನೆ.

ಮತ್ತೆ ಮತ್ತೆ ಬಸವಣ್ಣನವರ ಪರೀಕ್ಷೆ ಕಟ್ಟಿ ಎಂದು ನನ್ನ ಸುತ್ತ ಮುತ್ತಲ ಜನರನ್ನು ಹುರಿದುಂಬಿಸುತ್ತೇನೆ.‌

ವಿಶ್ವಾರಾಧ್ಯ ಸತ್ಯಂಪೇಟೆ

13 thoughts on “ನಾನೇ ಬೆತ್ತಲೆ ಆಗಲು ಸಿದ್ದವಿರುವಾಗ, ಮುಖವಾಡ ಕಳಚುವ ಅವಶ್ಯಕತೆ ಇಲ್ಲ

 1. ಮನದಾಳದ ಮಾತು ಕೆಲವರು ಮುಟ್ಟಿ ಕೊಂಡು ನೋಡಕಳ್ಳುವಂತಿದೆ.!!

  1. ಸಹೋದರ ಅಮರೇಶ್

   ಹೊರಗಿನವರ ಟೀಕೆಗಿಂತ ಒಳಗಿನವರ ಹೊಟ್ಟೆ ಕಿಚ್ಚು ನನ್ನನ್ನು ಬೇಯಿಸುತ್ತಿದೆ.

 2. ಶರಣ ಸಂಸ್ಕೃತಿಗೆ ಪಕ್ಕಾ ಒಗ್ಗುವ ತಮ್ಮ ನಮ್ರತಾ ಮನೋಭಾವಕ್ಕೆ ಶರಣು ಶರಣಾರ್ಥಿಗಳು. ಅರಿವಿಗೆ ಕೊನೆಯಿಲ್ಲ, ಕಾಯಕಕ್ಕೆ ಮಿಗಿಲಿಲ್ಲ, ದಾಸೋಹಕ್ಕೆ ಮೀರಿದ ಸದ್ಭಾವವೇ ಇಲ್ಲ. ತಮ್ಮ ಬದುಕು ಅನುಕರಣೀಯ.

  1. ಪ್ರೊ.ಚಂದ್ರಕಾಂತ ಅವರಿಗೆ
   ಶರಣುಗಳು.

   ನಾನೂ ಇನ್ನೂ ಬೆತ್ತಲಾಗಬೇಕು. ಬಸವಾದಿ ಶರಣರ ಕಡೆ ಮುಖ ಮಾಡಿ ಜೀವಿಸಬೇಕೆಂಬ ಹಂಬಲ ಸಾಕಷ್ಟು. ಆದರೆ ನಾನೇ ಕಟ್ಟಿಕೊಂಡ ಗುಂಡುಗಳು ನನ್ನನ್ನು ಮುಳುಗಿಸುತ್ತಿವೆ. ಶರಣರ ವಿಚಾರಗಳ ಬೆಂಡು ನನ್ನ ತೇಲಿಸುತ್ತಿವೆ.

 3. ಶರಣರೆ ಬಹಳ ನೊಂದಿದ್ದೀರಿ ಎಂದು ತಿಳಿದಿದ್ದೇನೆ ಊರ ಮುಂದಿರುವ ಹೋಲದ ನಿಮ್ಮ ಜನ ಎನೋನೊ ಅಂತಾರೆ ಎಂದು ನೀವು ನಿಮ್ಮ ಕಾಯಕದಲ್ಲಿ ಬದಲಾವಣೆ ತರಬೇಡಿ ನಿಷ್ಕಲಷ್ಮ ಕರ್ಮ ಮಾಡಿ ನೂಂದಕೂಳ್ಳಬೆಡಿ

 4. ತಾವು ಯಾವ ಬೆತ್ತಲೆ ಬಗ್ಗೆ ಹೇಳುತ್ತಿರುವಿರಿ?
  ಅಕ್ಕ ಕಂಡುಕೊಂಡದ್ದೊ ? ಅಣ್ಣದೊ ಅಥವಾ ಅಲ್ಲಮನ ಬಯಲ ಬೆತ್ತಲೆಯೊ? ತಾವು ಬೆತ್ತಲೆಯಾಗಲು ಇನ್ನೂ ತಮ್ಮಲ್ಲಿ ಮುಚ್ಚಿಟ್ಟುಕೊಂಡಿರುವ ಅರ್ನಘ್ಯ ಮುತ್ತು ರತ್ನಗಳು ಯಾವುವು?

 5. ಸತ್ಯಕ್ಕೆ ಹತ್ತಿರವಾದ ನುಡಿಗಳು. ನಮ್ಮೊಳಗೇ ನಾವು ಇಣುಕಿ ನೋಡಿಕೊಂಡಾಗ, ಸಾಕ್ಷಿ ಪ್ರಜ್ಞೆ ಜಾಗ್ರತವಾಗಿ, ಜನ ಏನೇ ಅಂದುಕೊಂಡರೂ ಕಿಂಚಿತ್ತಾದರೂ ಬಸವಾದಿ ಶರಣರ ಸಲ್ಲಲಿತ ಸನ್ಮಾರ್ಗದಲ್ಲಿ ನಡೆಯುತ್ತಿರುವೆವು ಎಂಬ ಭರವಸೆ. ತಮ್ಮ ಉತ್ತಮ ಅನುಭಾವದ ನುಡಿ ಲೇಖನಕ್ಕೆ, ನಮ್ಮ ಶರಣಾರ್ಥಿಗಳು. 🙏🙏🙏🙏👍

 6. ಅಂತರಂಗದಲ್ಲಿ ಅಡಗಿ ಕುಳಿತಿದ್ದ ನೋವಿನ ನುಡಿಗಳನ್ನು ಹೊರ ಹಾಕಿದ್ದೀರಾ. ತತ್ವ ನಿಷ್ಠರಿಗೆ ಇವೆಲ್ಲ ಸಹಜ. ಆದರೆಎಚ್ಚರದಿಂದಿರುವುದು ಒಳಿತು. ಶರಣು ಶರಣಾರ್ಥಿಗಳು.

 7. ಬುದ್ಧ ಬಸವ ಗಾಂಧೀಜಿಯವರಿಗೂ ಬಯ್ದವರುಂಟು, ಇನ್ನೂ ಬಯ್ಯುವವರುಂಟು. ಅವರ ಫೋಟೋ ಇಟ್ಟು ಪೂಜಿಸಿ ವಂದಿಸಿ ಹೊಗಳುವವರೂ ಉಂಟು.
  ಹೊಗಳಿಕೆಗೆ ಉಬ್ಬಬೇಕಾಗಿಲ್ಲ, ತೆಗಳಿಕೆಗೆ ಕುಗ್ಗಬೇಕಾಗಿಲ್ಲ.
  ಗುರಿ ಉನ್ನತವಾಗಿ ಉದಾತ್ತವಾಗಿದ್ದು, ಮಾರ್ಗವೂ ಉತ್ತಮವಾಗಿದ್ದು ಎಚ್ಚೆತ್ತು ನಡೆದರೆ ಅವರವರ ಹೊಟ್ಟೆಕಿಚ್ಚು ಅವರುಂಡ ಆಹಾರ ಜೀರ್ಣಿಸಲಿ.

 8. ತುಂಬಾ ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಮನಸಿನಾಳದ ನೋವುಗಳನ್ನು ಸಂಕೋಚವಿಲ್ಲದೆ ಹೇಳಿಕೊಂಡಿದ್ದೀರಿ. ಶರಣರ ವಚನಗಳಂತೆ ಬದುಕು ಸಾಗಿಸಲು ಯಾರಿಗೂ ಶೇ ೧೦೦ ಸಾಧ್ಯವಾಗುವುದಿಲ್ಲ; ನಿಜ. ಆದರೆ ಕೊನೆಪಕ್ಷ ಆ ದಿಕ್ಕಿನಲ್ಲಿ ಸಾಗಲು ನಾವು ಸಣ್ಣಪುಟ್ಟ ಹೆಜ್ಜೆಗಳನ್ನಾದರೂ ಇಡುವ ಪ್ರಯತ್ನ ಮಾಡಬೇಕು. ಆ ಸಂಬಂಧವಾಗಿ ನಿಮ್ಮ ದಿಟ್ಟತನ, ನೇರವಂತಿಕೆ ಮೆಚ್ಚುವಂತಾದ್ದೇ.

 9. ಬಸವಣ್ಣನವರನ್ನು ನಂಬಿದವರು ಯಾರೂ ಕೆಟ್ಟಿಲ್ಲ ಕೆಟ್ಟವರಾರು ಬಸವಣ್ಣನನ್ನು ನಂಬುವುದಿಲ್ಲ. ಹಾಗೆ ಶರಣರಿಗೆ ವಿರೋಧಗಳು
  ಹೊಸದಲ್ಲ . ಅಣ್ಣಾ ನಿಮ್ಮ ವಿಚಾರಗಳು ಸ್ಪಷ್ಟವಾಗಿವೆ .

Leave a Reply

Your email address will not be published. Required fields are marked *

error: Content is protected !!