ರಕ್ತ ಸಂಬಂಧಕ್ಕಿಂತಲು ಶರಣರು ವಿಚಾರ ಸಂಬಂಧಕ್ಕೆ, ಭಕ್ತಿ ಸಂಬಂಧಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು

ರಕ್ತ ಸಂಬಂಧಕ್ಕಿಂತಲು ಶರಣರು ವಿಚಾರ ಸಂಬಂಧಕ್ಕೆ, ಭಕ್ತಿ ಸಂಬಂಧಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು

 

 

ಬಸವಣ್ಣನವರು ಹುಟ್ಟು ಹಾಕಿದ್ದ ಲಿಂಗಾಯತ ಚಳುವಳಿಯಲ್ಲಿ ಸಮಾಜದ ಎಲ್ಲಾ ಜನರು ಸೇರಿಕೊಳ್ಳಲಿ ಎಂದು ತಹತಹಿಸುತ್ತಿದ್ದರು. ಆ ಆತುರತೆ ಎಷ್ಟು ಉತ್ಸುಕದಾಗಿತ್ತೆಂದರೆ,

ಎಲವೋ ಎಲವೋ ಪಾಪ ಕರ್ಮವ ಮಾಡಿದವನೇ,
ಎಲವೋ ಬ್ರಹ್ಮೇತಿಯ ಮಾಡಿದವನೇ.
ಒಮ್ಮೆ ಶರಣೆಂದಡೆ ಪಾಪ ಕರ್ಮ ಓಡುವವು.
ಸರ್ವ ಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದವು.
ಒಬ್ಬಗೆ ಶರಣೆನ್ನು ನಮ್ಮ ಕೂಡಲ ಸಂಗಮದೇವಂಗೆ.

ಮಾಡಬಾರದ್ದು ಎಂದು ಸಮಾಜ ನಿಷೇಧಿಸಿದ್ದ ಕೆಟ್ಟ ಕೆಲಸ ಮಾಡಿದರೂ ಸಹಿತ ಆ ವ್ಯಕ್ತಿಯಲ್ಲಿ ಪಶ್ಚಾತ್ತಾಪದ ಧ್ವನಿ ಇದ್ದರೆ ಸಾಕು ಆತ ನನ್ನ ಚಳುವಳಿಯ ಭಾಗವಾಗಬಹುದು ಎಂದು ಬಸವಣ್ಣನವರು ಕರೆ ಕೊಡುತ್ತಾರೆ. ಯಾವುದೆ ಚಳುವಳಿಯ ನಾಯಕ ಮೊಟ್ಟ ಮೊದಲು ಮಾಡಬೇಕಾದದ್ದು ತನ್ನ ವಿಚಾರಗಳ ಎಳೆ ಹಿಡಿದುಕೊಂಡು ಬರುವವರಿಗೆ ಮುಕ್ತವಾದ ದ್ವಾರವನ್ನು ಒದಗಿಸಬೇಕು. ಕಟ್ಟಪ್ಪಣೆಗಳಿಂದ ತುಂಬಿದ ಚಳುವಳಿ ಉಸಿರುಗಟ್ಟಿ ಸತ್ತು ಹೋಗುತ್ತದೆ. ಚಳುವಳಿಯ ಸದಸ್ಯನಾದ ಮೇಲೆ ಆತ ಪಾಲಿಸಬೇಕಾದ ನಿಯಮಗಳ ಕುರಿತು ಎಲ್ಲರೂ ಹೇಗೂ ಅನುಭವ ಮಂಟಪದಲ್ಲಿ ಚರ್ಚೆ ಮಾಡುವುದು ಇದ್ದೆ ಇದೆಯಲ್ಲ, ಅಲ್ಲಿ ಸಹಜವಾಗಿ ಹೊರ ಮತ್ತು ಒಳಗಿನ ಮನ ಪರಿಶುದ್ಧಗೊಳ್ಳುತ್ತದೆ ಎಂಬ ಮುಂದಾಲೋಚನೆ ಬಸವಣ್ಣನವರಲ್ಲಿ ಇತ್ತು.

ಎಡದ ಕೈಯಲಿ ಕತ್ತಿ,
ಬಲದ ಕೈಯಲಿ ಮಾಂಸ
ಬಾಯಲಿ ಸುರೆಯ ಗಡಿಗೆ
ಕೊರಳಲಿ ಲಿಂಗದೇವರಿರಲು ಅವರ ಲಿಂಗನೆಂಬೆ, ಸಂಗನೆಂಬೆ
ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು

ಜೀವನವನ್ನು ತನ್ನ ಚಟಗಳ ಮೂಲಕ ಹಾಳುಗೆಡವಿದ್ದಾನೆ. ಬದುಕನ್ನು ಕಣ್ಣ ಮುಂದೆಯೆ ಕ್ಷಣ ಕ್ಷಣಕ್ಕೂ ಕೊಲ್ಲುತ್ತಿದ್ದಾನೆ ಎಂಬ ವ್ಯಕ್ತಿಗೂ ಬಸವಣ್ಣನವರು ತನ್ನ ಚಳುವಳಿಗೆ ಹೀಗೆ ಬರಮಾಡಿಕೊಂಡರು. ಎಡದ ಕೈಯಲ್ಲಿ ಕತ್ತಿ ಹಿಡಿದುಕೊಂಡು ಯಾರನ್ನೋ ಇರಿಯಲು ಹೊರಟಿದ್ದಾನೆಯೋ, ಇರಲಿ ಬಿಡಿ. ಮಾಂಸ ಮಧ್ಯದ ದಾಸನಾಗಿದ್ದಾನೆಯೋ !? ಇರಲಿ ಬಿಡಿ. ಅವರು ಎಲ್ಲರಿಗೂ ಕಾಣುವಂತೆ ಕೊರಳಲ್ಲಿ ಲಿಂಗ ಧರಿಸಿದ್ದರೆ ಅಷ್ಟೆ ಸಾಕು. ಅವರನ್ನು ಸಾಕ್ಷಾತ್ ಸಂಗಮನಾಥನೆಂಬ ಭಾವನೆಯಿಂದ ಕಾಣುತ್ತೇನೆ. ಇಷ್ಟೆ ಅಲ್ಲ, ಅವರನ್ನು ಮುಖಲಿಂಗಿಗಳೆಂದು ಕರೆಯುತ್ತೇನೆ ಎನ್ನುತ್ತಾರೆ ಅಪ್ಪ ಬಸವಣ್ಣನವರು.

ಅಗ್ನಿಯ ಸಂಗದಿಂದ ಕಾನನ ಕೆಟ್ಟಂತೆ
ಜ್ಯೋತಿಯ ಸಂಗದಿಂದ ಕತ್ತಲೆ ಕೆಟ್ಟಂತೆ
ಪರುಷದ ಸಂಗದಿಂದ ಕಬ್ಬಿಣ ಕೆಟ್ಟಂತೆ
ಲಿಂಗಾನುಭಾವಿಗಳ ಸಂಗದಿಂದ ಎನ್ನ ಹುಟ್ಟು ಹೊಂದುಗಳು
ನಷ್ಟವಾಗಿ ಕೆಟ್ಟು ಹೋದವು ನೋಡಾ ಅಖಂಡೇಶ್ವರಾ

ಎಂಬ ವಚನದ ಪ್ರತಿ ಶಬ್ಧಗಳಂತೆ ಯಾವುದೆ ವ್ಯಕ್ತಿ ತನ್ನ ಸುತ್ತ ಮುತ್ತಲ ಚಟುವಟಿಕೆಗಳಿಂದ ಪರಿವರ್ತನೆಗೊಳ್ಳುತ್ತಾನೆ. ಸಂಗದಿಂದಲೆ ಶಕ್ತಿ, ಸಂಗದಿಂದಲೆ ವಿನಾಶ ಎಂಬ ಮಾತಿನಂತೆ ಸಂಗ ಬಹುದೊಡ್ಡ ಪರಿವರ್ತನೆಗೆ ಹಾಗೂ ವ್ಯಕ್ತಿಯ ವಿಘಟನೆಗೆ ಕಾರಣವಾಗುತ್ತದೆ. ಮಹಾತ್ಮಗಾಂಧಿ ನಾವು ನೀವೆಲ್ಲ ಬಲ್ಲಂತೆ ಲೋಹ ಪುರುಷ. ಆತನ ಜೊತೆಗೆ ಇದ್ದ, ದೂರದಲ್ಲಿದ್ದ ವ್ಯಕ್ತಿಗಳ ಆತನ ಮಾತು ಗುಣ ನಡತೆಗಳ ಕಂಡು ಪರಿವರ್ತನೆಗೊಂಡರು. ಆದರೆ ಹತ್ತಿರದಲ್ಲೇ ಇದ್ದ ಮಹಾತ್ಮ ಅವರ ರಕ್ತ ಹಂಚಿಕೊಂಡು ಹುಟ್ಟಿದ ಮಹಾತ್ಮನ ಮಗ ಹೀರಾಲಾಲ ಗಾಂಧೀ ದುರಾತ್ಮನಾಗಿ ಪ್ರಕಟಗೊಂಡ. ಉಣ್ಣೆ ಕೆಚ್ಚಲೊಳಿದ್ದು ಉಣ್ಣದು ನೊರೆವಾಲು ಎನ್ನುವ ಸ್ಥಿತಿ ಆತನದಾಯಿತು.

ಒಂದೊಂದು ಸಲ ವಿಸ್ಮಯ ಎನ್ನುವಂತೆ ದೀಪದ ಕೆಳಗೆ ಗಾಢವಾದ ಕತ್ತಲು ಆವರಿಸುತ್ತದೆ. ಅಲ್ಲಿ ಹುಲ್ಲು ಕಡ್ಡಿಯೂ ಬೆಳೆಯದೆ ಮರುಭೂಮಿಯಾಗಿ ಪರಿವರ್ತನೆಯಾಗುತ್ತದೆ.ಸಹಸ್ರ ಜನ ಸಂಖ್ಯೆಯನ್ನು ಪ್ರಭಾವಿಸಬಲ್ಲ ವ್ಯಕ್ತಿತ್ವ, ಸಂಬಂಧಗಳಲ್ಲಿ ಸೋತು ಹೋಗುತ್ತದೆ. ಎನಿಸು ಕಾಲ ನೀರೊಳಗಿರ್ದರೇನು ನೆನೆದು ಮೃದುವಾಗಬಲ್ಲುದೆ ? ಎನಿಸುಕಾಲ ಪೂಜಿಸಿ ಎವೆನಯ್ಯಾ ಮನದಲ್ಲಿ ದೃಢವಿಲ್ಲದನ್ನಕ್ಕ ? ಎಂಬಂತೆ ಭೋರ್ಗಲ್ಲ ಮೇಲೆ ನೀರು ಸುರಿದಂತೆ ವ್ಯರ್ಥವಾಗುತ್ತದೆ. ಹೀಗಾಗಿಯೆ ಇರಬೇಕು ಬಸವಣ್ಣನವರು ತಮ್ಮನ್ನು ಎಲ್ಲಿಯೂ ಮದುವರಸ ಮಾದಲಾಂಬಿಕೆಯ ಪುತ್ರ ಎಂದು ಹೇಳಿಕೊಂಡಿಲ್ಲ.

ಅಣ್ಣ ತಮ್ಮ ಹೆತ್ತಯ್ಯ ಗೋತ್ರವಾದಡೇನು
ಲಿಂಗ ಸಾಹಿತ್ಯವಿಲ್ಲದವರ ಎನ್ನವರೆನ್ನೆನಯ್ಯಾ
ನಂಟು ಭಕ್ತಿ ನಾಯಕ ನರಕ, ಕೂಡಲಸಂಗಮದೇವಾ

ಯಾರು ಲಿಂಗ ಸಾಹಿತ್ಯದ ಹತ್ತಿರ ಬರುತ್ತಾರೊ ಅವರು ಖಂಡಿತ ಬದಲಾವಣೆಗೆ ಒಳಗಾಗುತ್ತಾರೆ. ಲಿಂಗಸಾಹಿತ್ಯದ ಬಗೆಗೆ ಅಸಡ್ಡೆಯಾಗಿರುವ ರಕ್ತ ಸಂಬಂಧಿಗಳು ಪರಿವರ್ತನೆಗೆ ತಮ್ಮ ಮನಸ್ಸನ್ನು ಒಡ್ಡಿಕೊಳ್ಳಲಾರರು. ಸಂಬಂಧಿಗಳು ಎಂಬ ಅಸಡ್ಡೆ ಅವರನ್ನು ಕಾಡುವುದರಿಂದ ವಿಷಯಗಳನ್ನು ಮುಕ್ತವಾಗಿ ಸ್ವೀಕರಿಸಲು ಅವರ ಮನಸ್ಸು ಒಪ್ಪಲಾರದು. ಇದನ್ನು ಅರಿತುಕೊಂಡಿದ್ದ ಬಸವಣ್ಣನವರು, ಇವನಾರವ ಇವನಾರವ ಇವನಾರವನೆನ್ನದೆ ಎಲ್ಲರನ್ನು ಕರೆದು ಕೊನೆಗೆ ರಕ್ತ ಸಂಬಂಧಿಗಳು ಬಂಧು ಬಾಂಧವರು ಸಿರಿ ಸಂಪತ್ತು ಇದ್ದಾಗ ಬಂದುಂಡು ಹೋಗುವ ಪೈಕಿ ಎಂದವರಿಗೆ ಖಾತ್ರಿಯಾಗಿತ್ತು.

ಒಡೆಯರು ಬಂದರೆ ಗುಡಿ ತೋರಣವ ಕಟ್ಟಿ
ನೆಂಟರು ಬಂದರೆ ಸಮಯವಿಲ್ಲೆನ್ನಿ
ಅಂದೇಕೆ ಬಾರರು ನೀರಿಂಗೆ ನೇಣಿಂಗೆ
ಹೊರಗಾದಂದು, ಸಮಯಾಚಾರಕ್ಕೆ ಒಳಗಾದಂದು.
ಪರುಷ ಮುಟ್ಟಲು ಕಬ್ಬುನ ಸುವರ್ಣವಾಯಿತ್ತು.
ಬಳಿಕ ಬಂಧುಗಳುಂಟೆ ಕೂಡಲಸಂಗಮದೇವಾ.

ಬಸವಣ್ಣನವರ ಒಡೆಯರು ಎಂದಿಗೂ ರಕ್ತ ಸಂಬಂಧಿಗಳು ಅಲ್ಲವೇ ಅಲ್ಲ. ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಕಿನ್ನರಿಯ ಬೊಮ್ಮಯ್ಯ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ಬಹುರೂಪಿ ಚೌಡಯ್ಯ ಮೊದಲಾದವರೆ ಅವರ ಸಂಬಂಧಿಗಳಾಗಿದ್ದರು. ಈ ಶರಣರನ್ನೆ ಬಸವಣ್ಣನವರು ಅಪ್ಪ ಬೊಪ್ಪ ಎಂದು ಮೈದುಂಬಿ ಕರೆದು ಹರ್ಷಿಸಿದರು. ಈ ಕಾಯಕ ಜೀವಿಗಳಿಗೆ ತಮ್ಮ ಒಡಲಿನ ಕಳವಳ, ತಳಮಳವನ್ನು ತೋರಿಸಿ ಏನೇನೋ ಬೇಡಿಕೊಂಡರು, ಹಾಡಿದರು ಇವರೆಲ್ಲ ನೆರೆದು ಭಕ್ತಿ ಬಿಕ್ಷವನಿಕ್ಕಿದರು ಬಸವಣ್ಣನವರ ಪಾತ್ರೆ ತುಂಬಿತ್ತು.

ನೆಂಟರು ಬರುವುದು ಆರೋಗ್ಯವಾಗಿದ್ದಾಗ, ಸೌಖ್ಯವಾಗಿದ್ದಾಗ, ಆರ್ಥಿಕವಾಗಿ ಬಲಿಷ್ಠನಾಗಿದ್ದಾಗ. ಹಿಂದೆ ಸ್ವತಃ ಬಸವಣ್ಣನವರೆ ವಿಪ್ರತ್ವದ ಸಂಕೇತವಾದ ಬ್ರಾಹ್ಮಣ್ಯವನ್ನು ಕಿತ್ತೆಸೆದು ಹೊರ ಬಂದಾಗ ಅವರೊಂದಿಗೆ ಯಾರೂ ಇರಲಿಲ್ಲ. ಬಸವಣ್ಣನವರು ಕಲಚೂರಿ ಚಕ್ರವರ್ತಿಯಲ್ಲಿ ಪ್ರಧಾನಿಯಾದಾಗ ಮಾತ್ರ ಅವರೆಲ್ಲ ಈಗ ಹತ್ತಿರವಾಗುತ್ತಿದ್ದಾರೆ. ಆದ್ದರಿಂದಲೆ ಬಸವಣ್ಣನವರು ನೆಂಟರು ಬಂದರೆ ಸಮಯವಿಲ್ಲೆನ್ನಿ ಎಂದು ಹೇಳಿದರು.

ಶಿವಶರಣೆ ಅಕ್ಕನವರ ಒಂದು ವಚನವೂ ಸಹ ಬಸವಣ್ಣನವರ ಮಾತನ್ನು ಪುಷ್ಠಿಕರಿಸುತ್ತದೆ.

ತನ್ನಾಚಾರಕ್ಕೆ ಬಂದವರು ತನ್ನವರೆಂದು ಭಾವಿಸಬೇಕಲ್ಲದೆ
ತನ್ನಾಚಾರಕ್ಕೆ ಹೊರಗಾದವರು ಅಣ್ಣ ತಮ್ಮನೆಂದು ತಾಯಿತಂದೆ ಎಂದು
ಹೊನ್ನು ಮಣ್ಣು ಹೆಣ್ಣಿನವರೆಂದು ಅಂಗೀಕರಿಸಿದಡೆ
ಅವರಂಗಣವ ಕೂಡಿದಡೆ, ಅವರೊಂದಾಗಿ ನುಡಿದಡೆ
ಭಕ್ತರು ಸತ್ಯರಿಗೆ ಮುನ್ನವೆ ಹೊರಗು
ಆಚಾರವೆ ಪ್ರಾಣವಾದ ರಾಮೇಶ್ವರ ಲಿಂಗವು ಅವರನೊಳಗಿಟ್ಟುಕೊಳ್ಳ

ಎಂದು ಖಚಿತ ಮಾತುಗಳಲ್ಲಿ ಹೇಳಿದ್ದನ್ನು ನಾವಿಲ್ಲಿ ನೋಡಬಹುದಾಗಿದೆ. ರಕ್ತ ಸಂಬಂಧಕ್ಕಿಂತಲು ಶರಣರು ವಿಚಾರ ಸಂಬಂಧಕ್ಕೆ, ಭಕ್ತಿ ಸಂಬಂಧಕ್ಕೆ ಹೆಚ್ಚು ಒತ್ತು ಕೊಟ್ಟಿದ್ದನ್ನು ನಾವಿಲ್ಲಿ ಕಾಣಬಹುದಾಗಿದೆ.

0 ವಿಶ್ವಾರಾಧ್ಯ ಸತ್ಯಂಪೇಟೆ

Leave a Reply

Your email address will not be published. Required fields are marked *

error: Content is protected !!