ಬದುಕನ್ನೇ ಪವಾಡವನ್ನಾಗಿಸಿದ ಸಿರಿಗೆರೆಯ ಜಗದ್ಗುರು ಶಿವಕುಮಾರ ಮಹಾಸ್ವಾಮೀಜಿ

ಬದುಕನ್ನೇ ಪವಾಡವನ್ನಾಗಿಸಿದ ಸಿರಿಗೆರೆಯ ಜಗದ್ಗುರು
ಶಿವಕುಮಾರ ಮಹಾಸ್ವಾಮೀಜಿ

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಪೂಜ್ಯ ಶ್ರೀ. ಶಿವಕುಮಾರ ಸ್ವಾಮೀಜಿಗಳ ಕುರಿತು ಬರೆಯುವುದೆಂದರೆ ಹನ್ನೆಡನೆಯ ಶತಮಾನದ ಶರಣರ ಕುರಿತು ಬರೆದಂತೆಯೆ. ನ್ಯಾಯ ನಿಷ್ಠುರಿ ಶರಣ ದಾಕ್ಷಿಣ್ಯಪರನಲ್ಲ. ಲೋಕ ವಿರೋಧಿ ಶರಣನಾಗಿಗೂ ಅಂಜುವುದಿಲ್ಲ ಎಂಬ ಬಸವಣ್ಣನವರ ಮಾತಿನಂತೆಯೆ ಬದುಕಿ ಹೋದ ಶಿವಕುಮಾರ ಸ್ವಾಮೀಜಿ ನಾಡು ಕಂಡ ಅತ್ಯದ್ಭುತ ಧೀಶಕ್ತಿ ಎಂದರೆ ಅತಿಶಯೋಕ್ತಿ ಆಗಲಾರದು.

ಸಿರಿಗೆಯೆ ತರಳಬಾಳು ಜಗದ್ಗುರು ಪೀಠಕ್ಕೆ ಶಿವಕುಮಾರ ಸ್ವಾಮೀಜಿಗಳು ಬಂದಾಗ ಪ್ರಸ್ತುತ ಮಠವನ್ನು ದುಗ್ಗಾಣಿ ಮಠ ಎಂಬ ಹೀಯಾಳಿಸಿ ಕರೆಯಲಾಗುತ್ತಿತ್ತು. ಮಠ, ಸ್ವಾಮೀಜಿ, ಭಕ್ತರ ನಡುವೆ ಯಾವುದೆ ಸಾಮರಸ್ಯ ಇರಲಿಲ್ಲ. ಆರ್ಥಿಕ ಸ್ಥಿತಿಯನ್ನಂತೂ ಹೇಳುವುದೆ ಬೇಡ. ಕೆಲವರಂತೂ ಹದಗೆಟ್ಟು ಹೋದ ಮಠವನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವವರಿದ್ದರು. ಅದಾಗಲೆ ಸುತ್ತ ಮುತ್ತಲ ಮಠಗಳ ಹಲವು ಪರಂಪರೆಯ ಸ್ವಾಮೀಜಿ, ಜಗದಗುರುಗಳ ಅವಹೇಳನ ಹಾಗೂ ಅವಕೃಪೆಗೂ ಸಿರಿಗೆಯ ಮಠ ಪಾತ್ರವಾಗಿತ್ತು. ಮಠದ ಒಳ ಹೊರಗು ಅನಾರೋಗ್ಯಕರ ವಾತಾವರಣ ಇತ್ತು. ಇಲ್ಲಿ ಹೇಳಿಕೊಳ್ಳುವಂಥ ಯಾವ ಆಶಾ ಕಿರಣವೂ ಇರಲಿಲ್ಲ.

ಇದೆ ಸಂದರ್ಭದಲ್ಲಿ ಪೂಜ್ಯರ ಆಧ್ಯಾತ್ಮಿಕ ಗುರುವಾಗಿದ್ದ ಶ್ರೀ ಗುರುಶಾಂತ ದೇಶಿಕೇಂದ್ರ ಮಹಾಸ್ವಾಮೀಜಿಗಳ ದುರ್ಮಣವಾಗುತ್ತದೆ. ಮಹಾಸ್ವಾಮೀಜಿಗಳ ಅಕಾಲಿಕ ಮರಣ ಶಿವಕುಮಾರ ಸ್ವಾಮೀಜಿಯನ್ನು ಕಂಗೆಡಿಸುತ್ತದೆ. ಆಧ್ಯಾತ್ಮಿಕ ಬದುಕಿನಲ್ಲಿ ಕೈ ಹಿಡಿದು ನಡೆಸುತ್ತಿದ್ದ ಆಸರೆಯ ಕೋಲು ಒಮ್ಮಿದೊಮ್ಮೆ ಮುರಿದುಬಿದ್ದ ಆತಂಕ. ಕಣ್ಣ ಮುಂದಿನ ಬೆಳಕು ಹಠಾತ್ತನೆ ಮಾಯವಾಗಿ ಕತ್ತಲು ಆವರಿಸಿಕೊಂಡ ದುಗ್ಧ ಭಾವ. ಇನ್ನು ಮುಂದೆ ಯಾರನ್ನು ಗುರುವೆಂದು ಕರೆಯಲಿ ? ನಿಮ್ಮ ವಾತ್ಸಲ್ಯ, ದಯೆ, ಪ್ರೇಮಗಳನ್ನು ನಾನು ಯಾರಲ್ಲಿ ನೋಡಲಿ ? ಎಂಬ ನೋವಿನ ನುಡಿಗಳು.

ಈಗಾಗಲೆ ಹಾಸನ ಜಿಲ್ಲೆಯ ಎಲಹಂಕ ಪಟ್ಟಾಧಿಕಾರಿಗಳಾಗಿದ್ದ ಶ್ರೀಮಠ ಪೂಜ್ಯರೆ ಸಿರಿಗೆರೆಯ ಬೃಹನ್ಮಠದ ಆಡಳಿತವನ್ನು ನೋಡಿಕೊಂಡು ಹೋಗಲಿ ಎಂದು ಭಕ್ತರು ವಿನಂತಿಸಿದಾಗ ಸಿರಿಗೆರೆಯತ್ತ ಪೂಜ್ಯರು ಮುಖ ಮಾಡುತ್ತಾರೆ. ಸಿರಿಗೆರೆಯ ಬೃಹನ್ಮಠ ಆಗ ಪಟ್ಟಭದ್ರರ ಆಡಂಬೋಲ. ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ತೆಕ್ಕೆಗೆ ಬೃಹನ್ಮಠ ಬರಲಿದೆ ಎಂದು ಖಾತ್ರಿಯಾಗುತ್ತಲೆ ಹಲವರು ಕಿರುಕುಳ ನೀಡಲು ಬಂದರು. ಹಲವು ವೇಷತೊಟ್ಟು ವ್ಯವಸ್ಥೆಯನ್ನು ಹದಗೆಡಿಸಲು ಹೊಂಚು ಹಾಕಿದರು. ಶಿವಕುಮಾರ ಸ್ವಾಮೀಜಿಗಳು ತಮ್ಮ ವಿವೇಚನಾ ಶಕ್ತಿಯ ಮೂಲಕ ಪಟ್ಟಭದ್ರರನ್ನು ಮಟ್ಟ ಹಾಕಿದರು. ಜಡಿದು ಕೆಲರನು ಝಂಕಿಸಿ ಕೆಲವರನು ಸರಿ ದಾರಿಗೆ ತಂದರು. ಮಠದ ಭಕ್ತರನ್ನು ಪ್ರೀತಿಸಿದರು, ಗೌರವಿಸಿದರು, ಮೈದಡವಿ ಹತ್ತಿರ ಹೋದರು. ಇದಾವುದಕ್ಕೂ ಬಗ್ಗದೆ ಇದ್ದಾಗ ದೊಣ್ಣೆ ಇಟ್ಟುಕೊಂಡು ತಮ್ಮ ಅಧಿಕಾರವನ್ನು ಚಲಾಯಿಸಿದರು. ೧೯೪೦ ಬಸವ ಜಯಂತಿಯ ದಿನ ಪೂಜ್ಯ ಶಿವಕುಮಾರ ಸ್ವಾಮೀಜಿಗಳ ಪಟ್ಟಾಧಿಕಾರವೂ ನಡೆದು ಹೋಯಿತು.

ಸಿರಿಗೆರೆಯ ಪಟ್ಟ ಪೂಜ್ಯರಿಗೆ ಹೂವಿನ ಹಾಸಿಗೆ ಆಗಿರಲಿಲ್ಲ. ಸವಾಲು ಕೇವಲ ಒಂದೆರಡಲ್ಲ, ಸವಾಲುಗಳ ಸರಮಾಲೆ, ಶಕುನಿಗಳ ತಂತ್ರಗಳ ಭೇದಿಸಿದರು. ಪಿಸುಣರ ಕಿವಿ ಹಿಂಡಿದರು. ತಮ್ಮ ಕಾಲಿಗೆ ಚಕ್ರ ಕಟ್ಟಿಕೊಂಡು ಊರಿಂದೂರಿಗೆ ಪ್ರಯಾಣ ಬೆಳೆಸಿದರು. ಆಗಲೂ ಸಹ ಕೆಲವು ಮಠ ಮಾನ್ಯಗಳು ಗುರು , ಜಗದ್ಗುರು, ಜಂಗಮ ಎಂಬ ಪದಗಳು ತಮ್ಮ ವಂಶಸ್ಥರಿಗೆ ಮಾತ್ರವೆ ಬರೆದಿಟ್ಟವುಗಳು ಎಂದು ಬೀಗುತ್ತಿದ್ದವು. ಮುತ್ತೂಗದೂರಿನ ಬುಡಕಟ್ಟು ಜನಾಂಗದಿಂದ ಬಂದ ಈ ಶಿವಕುಮಾರ ಯಾವ ಲೆಕ್ಕ ? ಎಂದು ಅಸಡ್ಡೆಯಿಂದ ಕಂಡವು. ಇಂಥ ಕುಹಕಿಗಳನ್ನು ಹಾಗೂ ಮಠದ ಹುಂಬ ಶಿಷ್ಯರಿಗೂ ಒಂದೇ ಸಲಕ್ಕೆ ಏಟು ಎದುರೇಟುಕೊಟ್ಟರು. ಕರ್ನಾಟಕದ ಸಮಸ್ತ ಲಿಂಗಾಯತರಿಗೂ ಸಿರಿಗೆಯ ಬೃಹನ್ಮಠವೇ ಮೂಲ ಮಠ ಎಂಬ ಮೊಂಡುವಾದವನ್ನು ಮಾಡಿ ಎಲ್ಲ ಕುಹಕಿಗಳನ್ನು ಸದೆ ಬಡಿದರು.

ಮಠ ಪೀಠಗಳ ಸ್ವಾಮೀಜಿಗಳು ಮಠದಲ್ಲಿ ಕುಳಿತು ಬರೀ ಆಶೀರ್ವಾದ ಮಾಡುವುದಲ್ಲ. ಜನ ಸಾಮಾನ್ಯನ ನೋವು-ಬವಣೆ ಮತ್ತು ಅಸಹಾಯಕತೆಗಳಿಗೆ ಸ್ಪಂದಿಸುವುದು ಎಂದು ಒತ್ತಿ ಹೇಳಿದರು. ಯಾರ ಕುಹಕದ ನಿಂದನೆ ಮಾತುಗಳನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಆನೆ ನಡೆದು ಹೋಗುವಾಗ ಶ್ವಾಸ ಬೊಗಳುವುದು ಸಹಜ. ಅವು ಆನೆಗೆ ಏನನ್ನೂ ಮಾಡಲು ಮಾಡಲಾರವು ಎಂದು ಮುನ್ನಡೆದು ಹೋದರು. ಬೊಗಳು ನಾಯಿಗಳು ತಮ್ಮ ಚೀರಾಟ ನಿಲ್ಲಿಸಿದವು. ಒಡಲೊಳಗೆ ಕಿಚ್ಚು ಇಟ್ಟುಕೊಂಡು ಬೇಯುತ್ತಿದ್ದವರು ಉರಿದು ಹೋದರು. ಎಲ್ಲರ ನಿರ್ಲಕ್ಷö್ಯಕ್ಕೆ ತುತ್ತಾಗಿದ್ದ ಬೃಹನ್ಮಠ ಕೆಲವೇ ವರ್ಷಗಳಲ್ಲಿ ಶಿವಕುಮಾರ ಸ್ವಾಮೀಜಿಗಳ ಧೀಶಕ್ತಿಯ ಕಾರಣಕ್ಕೆ ತಲೆ ಎತ್ತಿ ನಿಲ್ಲುವಂತಾಯಿತು.

ಜನರ ಬಡತನ ಅಜ್ಞಾನಕ್ಕೆ ಮೂಲ ಕಾರಣ ಶಿಕ್ಷಣ ಎಂಬುದನ್ನು ಮನಂಗಂಡಿದ್ದ ಶ್ರೀಗಳು ತಾವು ಹೋದ ಹೋದಲ್ಲೆಲ್ಲ ಶಾಲಾ ಕಾಲೇಜುಗಳನ್ನು ತೆರೆದರು. ಒಕ್ಕಲುತನ, ವ್ಯವಹಾರ ಹಾಗೂ ಸರಕಾರಿ ನೌಕರಿಗಳಲ್ಲಿ ತೊಡಗುವಂತೆ ಶ್ರೀಮಠದ ಶಿಷ್ಯರನ್ನು ಹುರಿದುಂಬಿಸಿದರು. ಸರಕಾರವೇ ಶಾಲೆ ತೆಗೆಯಲು ಸಾಧ್ಯವಾಗದ ಊರುಗಳಲ್ಲೂ ಬರೀ ಶಾಲೆಯಲ್ಲ, ಅಲ್ಲಿ ಆ ವಿದ್ಯಾರ್ಥಿಗಳಿಗೆ ವಸತಿ ನಿಲಯವನ್ನೂ ಮಾಡಿ ಶಿಕ್ಷಣದ ಬಾಗಿಲನ್ನು ಎಲ್ಲರಿಗೂ ತೆರೆದು ಸ್ವಾಗತಿಸಿದರು. ಗುರುವರ್ಗಕ್ಕೆ ನೀವು ಮಾಡಬೇಕಿರುವುದು ನಿಮ್ಮ ಪ್ರಚಾರವನ್ನಲ್ಲ ; ಜನತೆಯ ಸೇವೆಯನ್ನು ಎಂದು ಮನಗಾಣಿಸಿದರು. ಮುತ್ತಿಗಿಂತಲೂ ಹೊತ್ತು ಬೆಲೆಯುಳ್ಳದ್ದು ಎಂಬುದನ್ನು ಅರಿತಿದ್ದರಿಂದ ಹೊತ್ತು ಹೋಗದ ಮುನ್ನ, ಮೃತ್ಯು ಮುಟ್ಟದ ಮುನ್ನವೆ ಸಾಕಷ್ಟು ಜನಪರವಾದ ಕೆಲಸಗಳನ್ನು ಮಾಡಿದರು. ೧೯೭೪ ಬೆಂಗಳೂರಿನ ತರಳಬಾಳು ಹುಣ್ಣಿಮೆಯ ಮಹೋತ್ಸವಕ್ಕೆ ಅಂದಿನ ಮುಖ್ಯ ಮಂತ್ರಿ ಶ್ರೀ. ದೇವರಾಜ ಅರಸ ಬರಬೇಕಾಗಿತ್ತು. ಅವರು ಸಕಾಲಕ್ಕೆ ಕಾರ್ಯಕ್ರಮಕ್ಕೆ ಬರಲಿಲ್ಲ. ಆದರೆ ಆ ಸಭೆಯನ್ನು ಪೂಜ್ಯರು ಮುಖ್ಯ ಮಂತ್ರಿಗಳಿಗೆ ಕಾಯದೆ ನಿಗದಿತ ಸಮಯಕ್ಕೆ ಉದ್ಘಾಟಿಸಿ ಸಮಯದ ಮಹತ್ವವನ್ನು ಆ ಮುಖ್ಯ ಮಂತ್ರಿಗಳಿಗೂ ತಿಳಿಸಿದರು. “ನೀವು ನಾಡಿನ ಮುಖ್ಯ ಮಂತ್ರಿಗಳು ನೀವೇ ಕಾಲವನ್ನು ಪಾಲಿಸದಿದ್ದರೆ ಹೇಗೆ ? ನಿಮ್ಮ ಅಧೀನದಲ್ಲಿರುವ ಅಧಿಕಾರಿಗಳು, ಮಂತ್ರಿಗಳು, ಶಾಸಕರು ಹೇಗೆ ವರ್ತಿಸುತ್ತಾರೆ ?!’’ ಎಂಬುದು ನಿಮ್ಮ ತಲೆಯಲ್ಲಿ ಇರಲಿ ಎಂದು ಸಾರ್ವಜನಿಕವಾಗಿ ಎಚ್ಚರಿಸಿ ಎಲ್ಲರನ್ನು ದಂಗು ಬಡಿಸಿದರು.

ಜ್ಞಾನದ ಬಲದಿಂದ ಅಜ್ಞಾನದ ಕೇಡು ಎಂಬುದು ಅವರಿಗೆ ಪಕ್ಕಾಖಾತ್ರಿ ಆದ್ದರಿಂದಲೆ ಅಣ್ಣನ ಬಳಗ, ಅಕ್ಕನ ಬಳಗ, ಕಲಾ ಸಂಘಗಳನ್ನು ಕಟ್ಟಿ ನಾಡಿನ ತುಂಬೆಲ್ಲ ಬಸವ ಪರಿಸರವನ್ನು ನಿರ್ಮಿಸಿದರು. ಶರಣರ ಕುರಿತು ತಾವೇ ಸ್ವತಃ ನಾಟಕಗಳನ್ನು ರಚಿಸಿ ಆಡಿಸಿದರು. ತಮ್ಮ ಸುತ್ತ ಮುತ್ತೆಲ್ಲ ಸದಾ ವಚನ ಝೇಂಕಾರ ಮೊಳಗುವಂತೆ ನೋಡಿಕೊಂಡರು. ಶಿವಾನುಭಾವ ಪ್ರವಾಸಗಳನ್ನು ಏರ್ಪಡಿಸಿ ಮಠದ ಭಕ್ತರಲ್ಲಿ ದೇಶ ನೋಡುವ ಉತ್ಸಾಹವನ್ನು ತುಂಬಿದರು. ದೇಶ ನೋಡುತ್ತಲೆ ತಮ್ಮ ಅನುಭಾವದ ಮಾತುಗಳಿಗೆ ಒಳಗಾಗುವಂತೆ ನೋಡಿಕೊಂಡರು. ತರಳಬಾಳು ಹುಣ್ಣಿಮೆ ಎಂಬ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನ ಜಾಗೃತಿಯನ್ನುಂಟು ಮಾಡಿದರು.

ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ತಲೆಯಷ್ಟೇ ಬೋಳಾಗಿರಲಿಲ್ಲ, ಅವರ ಮನವೂ ಕೂಡ ಬೋಳಾಗಿತ್ತು. ಅವರ ಬದುಕಿನ ಯಾವ ಘಟನೆಗಳು ಏಕಾಂತವಲ್ಲ, ಅವೆಲ್ಲ ಲೋಕಾಂತವಾದಾಗಲೇ ಅವರಿಗೆ ಸಮಾಧಾನ. ಸಕಲ ಜೀವಾತ್ಮರಿಗೆ ಲೇಸ ಬಯಸುವ ಗುಣವನ್ನು ಇಂಬಿಟ್ಟುಕೊಂಡಿದ್ದರಿಂದ ಸಹಜವಾಗಿ ಯಾರೂ ಬೇಕಾದರೂ, ಯಾವಾಗ ಬೇಕಾದರೂ ಆಗ ಅವರನ್ನು ಮಾತನಾಡಿಸುವ ಮುಕ್ತ ಅವಕಾಶವನ್ನವರು ಒದಗಿಸಿಕೊಟ್ಟಿದ್ದರು. ಆದರೆ ಅವರೆಂದೂ ಕೆಲವು ಮಠಾಧೀಶರಂತೆ ಅಧಿಕಾರಸ್ಥ ರಾಜಕಾರಣಿಗಳ ಬಾಗಿಲು ಕಾಯುವ ದಾಸರಾಗಲಿಲ್ಲ. ಮಠದ ಸ್ವಾಮೀಜಿ ಸರಕಾರ ನಡೆಸುವ ರಾಜಕಾರಣಿಗಳಿಗೆ ಸಲಹೆ ನೀಡಬೇಕೆ ಹೊರತು, ಆತನ ಮರ್ಜಿ ಕಾಯುವುದಲ್ಲ ಎಂಬುದನ್ನು ಅರಿತುಕೊಂಡಿದ್ದರು. ಮಠಗಳು ಮೂಢನಂಬಿಕೆಯ ಕೂಪವಾಗಬಾರದು. ಕಂದಾಚಾರಗಳ ಆಡಂಬೋಲವಾಗಬಾರದು. ಅಲ್ಲಿ ವಚನಗಳ , ಶರಣರ ವ್ಯಕ್ತಿತ್ವದ ಬೆಳಕಿನ ಹೊಳೆ ಸದಾ ಪ್ರವಹಿಸುತ್ತಲೆ ಇರಬೇಕೆಂಬುದು ಅವರ ಅಭಿಲಾಷೆಯಾಗಿತ್ತು.

ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳು ಹೆಜ್ಜೆ ಇಟ್ಟ ಹೊಲಗಳೆಲ್ಲ ಬರುಡು, ಹಾಗೂ ಅವರು ಕೈ ಇಟ್ಟ ತಲೆಗಳೆಲ್ಲ ಬೋಳು ಎಂಬ ಮಾತು ಅತಿಶಯೋಕ್ತಿ ಅಲ್ಲ. ಗುರುಗಳು ತಿರುಗಾಡಿ ಬಂದ ನೆಲದಲ್ಲೆಲ್ಲ ಶಾಲಾ ಕಾಲೇಜುಗಳು ತಲೆ ಎತ್ತಿ ನಿಂತಿವೆ. ಅಲ್ಲಿ ವಿದ್ಯೆಯ ದೇವತೆ ನೆಲೆ ನಿಂತಿದ್ದಾಳೆ. ಆದ್ದರಿಂದಲೆ ಸಿರಿಗೆರೆಯ ಭಕ್ತರು ದೇಶ ವಿದೇಶದ ತುಂಬೆಲ್ಲ ವ್ಯಾಪಿಸಲು ಸಾಧ್ಯವಾಗಿದೆ. ತಮ್ಮ ಬದುಕನ್ನು ಆರೋಗ್ಯ ಪೂರ್ಣ ಚಿಂತನೆಗಳ ಮೂಲಕ ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಜಗದ್ಗುರುಗಳು ತಮ್ಮ ಪ್ರೀತಿಗೆ, ವಿಶ್ವಾಸಕ್ಕೆ ಕಾರಣರಾದ ಯಾವ ವ್ಯಕ್ತಿಗಳ ತಲೆಯ ಮೇಲೆ ಕೈ ಇಟ್ಟಿದ್ದಾರೋ ಅವರೆಲ್ಲರು ಸಮಾಜವನ್ನು ಮುನ್ನಡೆಸಿಕೊಂಡು ಹೋಗುವ ಪ್ರಮುಖ ಗುರುಗಳಾಗಿದ್ದಾರೆ. ಅವರಲ್ಲಿ ಪ್ರಮುಖವಾಗಿ ತರಳಬಾಳು ಬೃಹನ್ಮಠದ ಇಂದಿನ ಜಗದ್ಗುರುಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಸಿರಿಗೆರೆಯ ಶಾಖಾ ಮಠದ ಸಾಣೆಹಳ್ಳಿಯ ಪೂಜ್ಯ ಶ್ರೀ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು.

ಪೂಜ್ಯ ಶಿವಕುಮಾರ ಸ್ವಾಮೀಜಿಗಳು ಪವಾಡಗಳನ್ನು ಮಾಡಲಿಲ್ಲ. ಆದರೆ ತಮ್ಮ ಬದುಕನ್ನೇ ಒಂದು ಪವಾಡವೆಂಬಂತೆ ನಡೆದು ಹೋದರು. ಕಾವಿ ಜನಗಳ ವಿಷಯ ಲಂಪಟತನವನ್ನೂ ಖಂಡಿಸದೆ ಬಿಡಲಿಲ್ಲ. ಗುರು ಜಗದ್ಗುರು ಎಂಬ ಪದಗಳೇ ಕ್ಲೀಷೆಯಾಗುವ ಸಂದರ್ಭದಲ್ಲಿ ಸಿರಿಗೆಯ ಜಗದ್ಗುರು ಪೀಠಕ್ಕೆ ತನ್ನದೆ ಆದ ಘನತೆ ಗೌರವ ದಕ್ಕುವಂತೆ ಸದಾ ಕಾರ್ಯಶೀಲರಾದರು. ಯಾವ ಮಠದ ಭಕ್ತರು ಜಾಣರು, ಪ್ರಾಜ್ಞರು, ವಿವೇಕಿಗಳು, ವಿಚಾರವಂತರು, ವೈಜ್ಞಾನಿಕ ಮನೋಭಾವ ಉಳ್ಳವರು ಆಗುತ್ತಾರೋ ಆ ಮಠ ಖಂಡಿತವಾಗಿಯೂ ಬೆಳೆಯುತ್ತದೆ ಎಂಬುದನ್ನು ಸಂಪೂರ್ಣ ಮನಗಂಡಿದ್ದರಿಂದ ಮಠದ ಭಕ್ತರನ್ನು ಅಪ್ಪಿಕೊಂಡು ಒಪ್ಪಿಕೊಂಡು ಜಾಣರಾಗುವಂತೆ ಬೆಳೆಸಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ. ಆಶೀರ್ವಾದ, ಕಾಣಿಕೆ, ಪಾದ ಪೂಜೆ ಎಂಬ ಗಿಮಿಕ್‌ಗಳಲ್ಲಿ ಮುಳುಗಿ ಹೋಗದೆ ಭಕ್ತರಿಗೆ ನಿಜವಾದ ಗುರು ಜಗದ್ಗುರುವಾದರು. ಪೀಠವು ಎಂದಿಗೂ ಶಾಶ್ವತವಲ್ಲ. ಸೇವೆಗೆ ಅದೊಂದು ಸಾಧನ ಎಂಬುದನ್ನು ಅವರು ಒತ್ತಿ ಒತ್ತಿ ಹೇಳುತ್ತಿದ್ದರು.

ಬೇರೆ ನಾಟಕಗಳನ್ನು ಅಭಿನಯಿಸಲು ಬೇಕಾದಷ್ಟು ಅವಕಾಶಗಳು ಇವೆ. ಆದರೆ ಶರಣರ ನಾಟಕಗಳನ್ನು ಅಭಿನಯಿಸುವವರು ಯಾರು ? ಆದ್ದರಿಂದ ನಮ್ಮ ಸಂಘದವರು ಶರಣರ ತತ್ವಗಳನ್ನು ಬಿಂಬಿಸುವ ನಾಟಕಗಳನ್ನೇ ಆಡಬೇಕು ಎಂಬುದವರ ಮನದ ಅಭಿಪ್ಸೆಯಾಗಿತ್ತು. ಇದನ್ನು ಅರಿತುಕೊಂಡ ಪೂಜ್ಯ ಶ್ರೀ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ಮಾಡುತ್ತಿದ್ದಾರೆ. ಹೊಟ್ಟೆ ಇದ್ದವರು ಉಣ್ಣಬೇಕು. ನೆತ್ತಿಯಿದ್ದವರು ಓದಬೇಕು. ರಟ್ಟೆಯಿದ್ದವರು ದುಡಿಯಬೇಕು. ಆಗ ವ್ಯಕ್ತಿ ಕಲ್ಯಾಣ, ದೇಶ ಕಲ್ಯಾಣ ತನ್ನಿಂದ ತಾನೇ ಆಗುತ್ತದೆ ಎಂಬ ಗುರುಗಳ ಮಾತುಗಳನ್ನು ಇಂಬಿಟ್ಟುಕೊAಡು ಇಂದಿನ ಜಗದ್ಗುರು ಪೂಜ್ಯ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದುಡಿಯುತ್ತಿದ್ದಾರೆ.

ಗುರುಗಳ ಸಂಕಲ್ಪ ಶಕ್ತಿಗೆ ತಮ್ಮ ದುಡಿಮೆಯ ಮೂಲಕ ನ್ಯಾಯ ಒದಗಿಸುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ.

೦ ವಿಶ್ವಾರಾಧ್ಯ ಸತ್ಯಂಪೇಟೆ

One thought on “ಬದುಕನ್ನೇ ಪವಾಡವನ್ನಾಗಿಸಿದ ಸಿರಿಗೆರೆಯ ಜಗದ್ಗುರು ಶಿವಕುಮಾರ ಮಹಾಸ್ವಾಮೀಜಿ

  1. ಲಿಂಗೈಕೆ ಗುರುಗಳ ಬಗ್ಗೆ ಬಹಳ ಅರ್ಥಪೂರ್ಣ ಮತ್ತು ಪ್ರಸ್ತುತ ಸಂದರ್ಭಕ್ಕೆ ಸರಿಯಾಗಿ ಬರೆದಿದ್ದೀರಿ ನಿಮಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ ಶರಣು ಶರಣಾರ್ಥಿಗಳು

Leave a Reply

Your email address will not be published. Required fields are marked *

error: Content is protected !!