ಕೊರೊನಾ ರೋಗಕ್ಕೂ ದೇವರೆ ಹೊಣೆಯೆ ?

ದೇವರ ಅಪ್ಪಣೆ ಇಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡದು ಎಂಬುದೊಂದು ಸನಾತನ ಪರಂಪರೆಯ ಮಾತು. ಈ ಮಾತನ್ನು ನಮ್ಮ ಒಳಿತು ಕೆಡುಗಳಿಗೂ ಅನ್ವಯವಾಗುತ್ತದೆ. ಕೊರೊನಾ ರೋಗ- ಇತ್ತೀಚೆಗೆ ಬಂದಿರುವ ಮಿಡತೆಗಳ ಹಾಳವಳಿ,ಚಂಡಮಾರುತ, ಭೂಕಂಪ, ಬಿರುಗಾಳಿಗೆ ಕಾರಣ ದೇವರು ಎಂದು ನಾವು ಒಪ್ಪಿಕೊಳ್ಳಬೇಕಾಗುತ್ತದೆ.

ಇಂದಿನ ಕಲುಷಿತ ಗಾಳಿಗೆ, ನೀರೇ ಇಲ್ಲದ ಭೂಮಿಗೆ ಬರುಡಾಗುತ್ತಿರುವ ಮನಸ್ಥಿತಿಗೆ ಕಾರಣ ನಾವು ಅಲ್ಲವೇ ಅಲ್ಲ. ಸುಳ್ಳುಗಳ ಸರಮಾಲೆಯನ್ನು ಪೋಣಿಸಿ ನಮ್ಮನ್ನಾಳುವ ರಾಜಕಾರಣಿಗಳು, ಸೊಂಬೇರಿ ಶಾಸಕರು, ಮದವೇರಿದ ಮಂತ್ರಿಗಳು, ಉಲಕೋಚಿ ಧಾರ್ಮಿಕ ನಾಯಕರ ನಡಾವಳಿಗೂ ಆ ದೇವರೆ ಕಾರಣ ಎನ್ನಬೇಕಾಗುತ್ತದೆ.

ಕೊರೊನಾ ಎಂಬ ವೈರಸ್ ಭೀತಿಯಿಂದ ಒಮ್ಮಿದೊಮ್ಮೆ ವಿಶ್ವಕ್ಕ ವಿಶ್ವವೇ ಲಾಕ್ ಡೌನಗೊಂಡಿತು. ಆಗ ಕೂಲಿ ಕಾರ್ಮಿಕರು, ನಿರಾಶ್ರಿತರು ತುಂಬಾ ಹೈರಾಣಾದರು. ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು, ರೈಲುಗಳು, ಬಸ್ ಮುಂತಾದ ಸಾರಿಗೆ ವ್ಯವಸ್ಥೆ ನಿಂತು ಹೋಯಿತು. ವಿಶ್ವದ ಅರ್ಥ ವ್ಯವಸ್ಥೆ ಪಾತಾಳ ಸೇರಿತು. ಬಡವರು ಇನ್ನಷ್ಟು ಬಡವರಾದರು. ಊಟಕ್ಕೆ ಗತಿಯಿಲ್ಲದೆ ದಾರಿಯಲ್ಲಿ ಸತ್ತ ನಾಯಿಯ ಮಾಂಸವನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಯತ್ನ ನಡೆಯಿತು. ದಾರಿ ನಡೆದು ನಡೆದು ಊರು ಮುಟ್ಟಲಾಗದೆ ದಾರಿಯಲ್ಲೇ ಸತ್ತ ಕೂಲಿ ಕಾರ್ಮಿಕರ ಗೋಳಿಗೂ ದೇವರೆ ಕಾರಣವೆ ? ಹಗಲು ರಾತ್ರಿಯೆನ್ನದೆ ನಡೆದಾಗ ಮಹಿಳೆಯರ ಮೇಲೆ ಅತ್ಯಾಚಾರವಾದವು. ಪ್ರಜೆಗಳನ್ನು ಕಾವಲಿದ್ದು ಕಾಯಬೇಕಾದ ಪೊಲೀಸರು ಅಲ್ಲಲ್ಲಿ ರಾಕ್ಷಸರಂತೆ ಅವರ ಮೇಲೆ ಎರಗಿ ಪೈಶಾಚಿಕ ಕೃತ್ಯ ನಡೆಸಿದರು.

ಓದಿ ಬರೆದು ವಿದ್ಯಾವಂತರೆಂಬ ಪೋಷಾಕು ಹಾಕಿರುವ ಬಹುತೇಕ ಮಾಧ್ಯಮಗಳ ಜನ ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರರಾಗಲಿಲ್ಲ. ಜಾತಿ- ಧರ್ಮದ ಸಂಕೋಲೆಯಲ್ಲಿ ಸಿಲುಕಿ ಕೊರೊನಾ ರೋಗಕ್ಕೂ ಧರ್ಮಕ್ಕೂ ತಳುಕು ಹಾಕಿದರು. ಬೆಕ್ಕಿಗೆ ಚೆಲ್ಲಾಟವಾದರೆ ಇಲಿಗೆ ಪ್ರಾಣ ಸಂಕಟವೆನ್ನುವಂತೆ ನಿರಾಶ್ರಿಯ ಗೋಳು ಒಂದು ಕಡೆಯಾದರೆ ಅಧಿಕಾರಿಗಳು- ರಾಜಕಾರಣಿಗಳು ಅವರ ಹೆಸರಿನ ಮೇಲೆ ಗೋಲ್ ಮಾಲ್ ಮಾಡಿದರು.

ದೇವಸ್ಥಾನ ಚರ್ಚ ಮಸೀದಿಗಳು ಲಾಕ್ ಡೌನಗೊಂಡವು. ನಿತ್ಯ ದೇವರ ಮುಂದೆ ದೀಪ ಮುಡಿಸದೆ ಹೋದರೆ ಏನೇನೋ ಅನಾಹುತಗಳಾಗುತ್ತವೆ ಎಂದು ಬೊಬ್ಬೆ ಹೊಡೆದಿದ್ದ ಪುರೋಹಿತರ ಮಾತು ಯಾರೊಬ್ಬರೂ ಗಮನಿಸಲಿಲ್ಲ. ಜಾತ್ರೆಗಳು- ಉತ್ಸವಗಳು ನಡೆಯದೆ ನಿಂತು ಹೋದವು. ಮಸೀದಿಯ ಪ್ರಾರ್ಥನೆಗಳಿಲ್ಲದೆ, ಚರ್ಚಗಳಲ್ಲಿ ದೀಪ ಮುಡಿಸದೆಯೂ ನಿತ್ಯದ ಬದುಕು ಸಾಗಿಯೆ ಹೋಯ್ತು. ಇದೆಲ್ಲವೂ ದೇವರೆ ಮಾಡಿದ್ದು ಎಂದು ಒಪ್ಪಿಕೊಳ್ಳಬೇಕೆ ?

ಜನರಿಗೆ ಸಂಕಟವನ್ನುಂಟು ಮಾಡಿ, ಬದುಕುವುದೆ ಕಷ್ಟ ಎಂಬ ದುರ್ದರ ಸ್ಥಿತಿಗೆ ದೂಡಿ ದೇವರು ಆಟ ಆಡುತ್ತಿದ್ದಾನೆಯೆ ? ದೇವರು ಆಡಿಸಿದಂತೆ ಆಡುವುದೆ ನಿಜವಾಗಿದ್ದರೆ ಮನುಷ್ಯನ ಕರ್ತೃತ್ವ ಶಕ್ತಿಗೇನು ಬೆಲೆ ಇಲ್ಲವೆ ? ದೇವರೆ ಎಲ್ಲವನ್ನು ಮಾಡುವವನಾಗಿದ್ದರೆ ಮನುಷ್ಯ ಕೊರೊನಾ ಹಿಮ್ಮೆಟ್ಟಿಸಲು ಇಷ್ಟೊಂದು ಒದ್ದಾಡ ಮಾಡಬೇಕಾದ ಅವಶ್ಯಕತೆಯಾದರೂ ಏನಿತ್ತು ? ದೇವರಿಗೆ ಯಾವುದೆ ಪ್ರತಿರೋಧ ಒಡ್ಡದೆ ಸುಮ್ಮನೆ ಕುಳಿತುಕೊಂಡಿದ್ದರೆ ಎಲ್ಲವೂ ಆತ ಸರಿ ಪಡಿಸುತ್ತಿದ್ದನೆ ?
ಲಾಕ್ ಡೌನ ಸಮಯದಲ್ಲಿ ತನ್ನ ಮುಂದಿನ ದೀಪವನ್ನು ತಾನೆ ಹಚ್ಚಿಕೊಳ್ಳದ ದೇವರು ನಮ್ಮ ಬದುಕಿನ ಗಾಡಾಂಧಕಾರವನ್ನು ಕಳೆಯಬಲ್ಲನೆ ? ನಿಜವಾಗಿಯೂ ದೇವರು ಇದ್ದಿದ್ದರೆ ಈ ವಿಶ್ವದಲ್ಲಿ ಸಾವು ನೋವುಗಳನ್ನು ಏಕೆ ತುಂಬಿದ ? ಅನ್ಯಾಯ ಅಸತ್ಯ, ಬನಾವಟಿ ಮಾಡುವ ಜನರೆ ಆರಾಮವಾಗಿ ಇದ್ದಾರೆ. ಮೈ ಬಗ್ಗಿಸಿ ದುಡಿಯುವ ವರ್ಗ ಯಾವ ಸೌಲಭ್ಯಗಳೂ ಇಲ್ಲದೆ ಒದ್ದಾಡುತ್ತಿವೆಯಲ್ಲ ! ಇದಕ್ಕೆಲ್ಲ ದೇವರೆ ಕಾರಣವೆಂದಾದರೆ ಆ ದೇವರಿಗೆ ತಲೆ ಸರಿ ಇದೆಯೆ ? ಎಂದು ಕೇಳಬೇಡವೆ ?

ಜನ ಸಾಮಾನ್ಯರ ಹಣೆ ಬರಹ ಹೇಗಾದರೂ ಆಗಲಿ ನಿತ್ಯ ಆ ದೇವರಿಗೆ ಪೂಜೆ ಮಾಡುತ್ತಿದ್ದ, ನಮಾಜು ನೆರವೇರಿಸುತ್ತಿದ್ದ, ಕ್ಯಾಂಡಲ್ ದೀಪ ಹೊತ್ತಿಸುತ್ತಿದ್ದ ಪೂಜಾರಿ, ಮುಲ್ಲಾ, ಪಾದ್ರಿಯೂ ಹೊಟ್ಟೆಗೆ ಹಿಟ್ಟಿಲ್ಲದೆ ಸರಕಾರದತ್ತ ಮುಖ ಮಾಡಿ ನಿಂತರು ಏಕೆ ? ಇಷ್ಟು ವರ್ಷಗಳ ವರೆಗೆ ದೇವರಿಗೆ ಸಲ್ಲಿಸಿದ ಸೇವೆಗೆ ಪ್ರತಿಫಲವೇ ಇಲ್ಲವೆಂದಾದ ಮೇಲೆ ಇನ್ನುಳಿದವರ ಹಣೆ ಬರಹವೇನು ?
ತಿಂಗಳೆರಡು ತಿಂಗಳು ಆಜಾನ ಕೂಗಲಿಲ್ಲ, ಮಂತ್ರ ಪಠಿಸಲಿಲ್ಲ. ಚರ್ಚನಲ್ಲಿ ದೀಪ ಹೊತ್ತಿಸಲಿಲ್ಲ. ಜನ ಸಾಮಾನ್ಯರ ಮೇಲೆ ಇದರಿಂದ ಏನಾದರೂ ಕೆಟ್ಟ ಪರಿಣಾಮ ಉಂಟಾಯಿತೆ ? ಇಲ್ಲವಲ್ಲ ! ಜನರು ಧಾರ್ಮಿಕ ಸ್ಥಳಗಳಿಗೆ ಹೋಗದೆಯೂ ಚೆನ್ನಾಗಿ ಇದ್ದರಲ್ಲ


0 ವಿಶ್ವಾರಾಧ್ಯ ಸತ್ಯಂಪೇಟೆ

2 thoughts on “ಕೊರೊನಾ ರೋಗಕ್ಕೂ ದೇವರೆ ಹೊಣೆಯೆ ?

  1. Devaru ,dharmada hesarinalli janaranu sulige maduvvarige nastavad mele Tanna karmake devarannu shapisuvudu manushyana sahana Guna… Kayaka aritu nadedsre agu hogugalige nave hone embudu artavagutte….idu Ela managaligu artagali …nammanu nau aritukolluva uttama Baraha Idu… Sir

  2. अगर भगवान है, तो फिक्र क्यो!
    अगर नही है, तो जिक्र क्यो!

Leave a Reply

Your email address will not be published. Required fields are marked *

error: Content is protected !!