ತಳ ಸಮೂಹದಲ್ಲಿ ಸತ್ಯ ಹೇಳಿ ಸಂಚಲನ ಮೂಡಿಸಿದ ಬಸವಣ್ಣ

ಬಸವಣ್ಣನವರ ಜೀವನದ ಪ್ರಸಂಗಗಳು – 3

ಬಸವಣ್ಣನವರದು ಪ್ರಯೋಗಶೀಲ ಮನಸ್ಸು. ಪತ್ರಿಯೊಂದು ಸಂಗತಿಯನ್ನು , ವ್ಯಕ್ತಿಯನ್ನು ಅವರು ಪ್ರಯೋಗಕ್ಕೆ ಒಳಪಡಿಸಿ, ನಂತರವೆ ಅದರ ಬಗೆಗೆ ಪ್ರತಿಕ್ರಿಯೆ ನೀಡುವವರು. ತಮ್ಮ ಅನುಭವಕ್ಕೆ ಬಾರದ ಯಾವ ಸಂಗತಿಗಳ ಕುರಿತು ಸುಮ್ಮನೆ ಮಾತನಾಡಿದವರಲ್ಲ. ಬಸವಣ್ಣನವರು ಬರುವುದಕ್ಕಿಂತ ಮುಂಚೆ ಬಹಳಷ್ಟು ಜನ ಪಂಡಿತರು ಪುಸ್ತಕದ ಬದನೆಕಾಯಿ ತಿನ್ನುತ್ತ ಕುಳಿತ್ತಿದ್ದರು. ವೇದ ಆಗಮ ಪುರಾಣ ಶಾಸ್ತ್ರಗಳನ್ನೆ ನೆಚ್ಚಿಕೊಂಡು ಅವುಗಳನ್ನೇ ಪ್ರಾಮಣ್ಯವೆಂದು ನಂಬಿ ಜನ ಸಾಮಾನ್ಯರ ಅನುಭವಗಳನ್ನು ಕಡೆಗಣಿಸಿದ್ದರು.ಪುಸ್ತಕದ ಅನುಭವ ವಿಚಾರ ಅದು ಸಾರ್ವತ್ರಿಕವಾದಾಗ ಪರಿಣಾಮಕಾರಿಯಾಗುತ್ತದೆ. ಯಾವುದೋ ಒಬ್ಬ ವ್ಯಕ್ತಿಗೆ ಮಾತ್ರ ಇಷ್ಟವಾಗುವ ಸಂಗತಿ ಸಾರ್ವಜನಿಕರಿಗೆ ಇಷ್ಟವಾಗುವುದಾದರು ಹೇಗೆ ? ತಂತ್ರ ಕುತಂತ್ರಗಳಿಂದ ಉಂಟಾದ ವಿಚಾಗಳಿಗೆ ಆಯುಷ್ಯ ಕಮ್ಮಿ. ಸತ್ಯ ಪ್ರಕಟವಾಗುತ್ತಲೆ ತಂತ್ರ ಕುತಂತ್ರದ ವಿಚಾರಗಳೆಲ್ಲ ತಲೆ ಕೆಳಗಾಗುತ್ತವೆ. ಬಸವಣ್ಣನವರು ಸತ್ಯ ಹೇಳಲು ಆರಂಭಿಸಿದರು. ಸುಳ್ಳು ಸೊಟ್ಟುಗಳು ತಮ್ಮ ತಮ್ಮ ಚಾಪೆ ಸುತ್ತಿಕೊಂಡು ಓಡಲು ಆರಂಭಿಸಿದವು. ಸತ್ಯದ ಹಾಗೂ ಅನುಭವದ ಮಾತಿಗೆ ಎಂಥ ಶಕ್ತಿ ಇದೆಯೆಂದರೆ ಗಾಢವಾದ ಕತ್ತಲನ್ನೂ ಸಹ ಹೆದರಿಸಿ ಹಿಮ್ಮೆಟ್ಟಿಸುವ ಬಲ ಅದಕ್ಕಿದೆ. ಸತ್ಯಕ್ಕೆ ಯಾರ ಬಲ ಬೆಂಬಲವೂ ಬೇಕಿಲ್ಲ. ಅದು ತನ್ನಷ್ಟಕ್ಕೆ ತಾನೆ ಬ¯ಶಾಲಿಯಾಗಿ ಹೊಮ್ಮಿ ಬಿಡುತ್ತದೆ.

ಆದರೆ ಹನ್ನೆರಡನೆಯ ಶತಮಾನದಲ್ಲಿ ಜನ ಸಾಮಾನ್ಯರ ಅನುಭವಕ್ಕೆ ಬೆಲೆ ಇರಲಿಲ್ಲ. ಬ್ರಾಹ್ಮಣ,ಕ್ಷತ್ರಿಯ,ವೈಶ್ಯರನ್ನು ಹೊರತು ಪಡಿಸಿ ಉಳಿದ ಜನಾಂಗದವರನ್ನು ಮನುಷ್ಯರೆಂದೆ ಪರಿಗಣಿಸಿರಲಿಲ್ಲ. ಈ ಮೂರು ಜನ ವರ್ಗದವರ ದೇಕರೇಖಿಯನ್ನು ಮಾಡುವುದೆ ಅವರ ಕರ್ತವ್ಯವೆಂದು ನಂಬಿಸಿಕೊಂಡು ಬರಲಾಗಿತ್ತು. ರಾಜ್ಯವನ್ನು ಆಳ್ವಿಕೆ ನಡೆಸುವ ದೊರೆಯೂ ಸಹ ಬ್ರಾಹ್ಮಣರ ಮಾತು ಕೇಳದೆ ಒಂದು ಹೆಜ್ಜೆಯನ್ನು ಸಹ ಹಿಂದೆ ಮುಂದೆ ಇಡುತ್ತಿರಲಿಲ್ಲ. ಕ್ಷತ್ರಿಯ ರಾಜ್ಯವನ್ನು ಆಳಿದರೆ, ಪುರೋಹಿತರು ಆ ರಾಜನನ್ನೇ ಆಳುತ್ತಿದ್ದರು. ಅಕ್ಷರಶಃ ರಾಜನನ್ನು ಹಲವಾರು ಸಲ ಪೋತರಾಜನಂತೆ ನಡೆಸಿಕೊಂಡ ಸಾಕಷ್ಟು ಉದಾಹರಣೆಗಳು ಚರಿತ್ರೆಯಲ್ಲಿ ಕಾಣುತ್ತೇವೆ. ಇನ್ನು ವೈಶ್ಯ ತನ್ನ ವ್ಯವಹಾರ ವಹಿವಾಟುಗಳನ್ನು ತಾನು ಮಾಡಿಕೊಂಡು ತನ್ನಷ್ಟಕ್ಕೆ ತಾನು ಇದ್ದ. ಈತನ ಜೀವನ ಸಹ ಪುರೋಹಿತ ಹೇಳಿದಂತೆ ನಡೆಯಬೇಕಾದ ಮನೋಸ್ಥಿತಿಗೆ ಒಳಗಾಗಿದ್ದ.

ಇಂಥ ದಟ್ಟ ದರಿದ್ರ ಸಾಮಾಜಿಕ ಸ್ಥಿತಿಯಲ್ಲಿ ಬಸವಣ್ಣನವರು ಸತ್ಯದ ಕೂರಲಗನು ಹಿಡಿದುಕೊಂಡು ಕೇರಿ ಕೇರಿಗಳಿಗೆ ಹೋದರು. ಅಲ್ಲೆಲ್ಲ ಸತ್ಯವನ್ನು ಅರುಹಿದರು. ತಮ್ಮನ್ನು ತಾವೇ ಹಳಿದುಕೊಂಡು ಜೀವನ ಮಾಡುತ್ತಿದ್ದವರಿಗೆ ಶಕ್ತಿಯನ್ನು ತುಂಬಿದರು. ನೀವು ಮನುಷ್ಯರೇ ಆಗಿದ್ದೀರಿ ಎಂಬ ಸಂಗತಿಯನ್ನು ಮನದಟ್ಟಾಗುವಂತೆ ಮೈದಡವಿ ಎಚ್ಚರಿಸಿದರು. ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ತಾನು ಅವರ ಬಗೆಗೆ ಕಾಳಜಿ ಉಳ್ಳ ಆಪ್ತ ಎಂಬುದನ್ನು ಖಾತ್ರಿ ಮಾಡಿಸಿದರು. ಇಷ್ಟಾಗಿಯೂ ನಾನು ದೊಡ್ಡವನು, ನೀವು ಚಿಕ್ಕವರು. ನಾನು ಹೇಳುತ್ತೇನೆ ನೀವು ಕೇಳಬೇಕು ಎಂದು ಫರ್ಮಾನು ಹೊರಡಿಸಲಿಲ್ಲ. ನನಗಿಂತಲೂ ನಿಮ್ಮ ಅನುಭವವೆ ಶ್ರೇಷ್ಠ ಎಂದರು. ಮಾವಿನ ಕಾಯಿಯೊಳಗೊಂದು ಎಕ್ಕೆಯ ಕಾಯಿ ನಾನು ಎಂದರು. ಆಗ ಅವರೆಲ್ಲರಿಗೂ ಅರ್ಥವಾಗುವಂಥ, ಪರಿಣಾಮಕಾರಿಯಾದ ವಚನವೊಂದನ್ನು ಹೇಳಿದರು.

ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ
ಜ್ಯೋತಿಯ ಬಲದಿಂದ ತಮಂಧದ ಕೇಡ ನೋಡಯ್ಯಾ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ
ಪರುಷದ ಬಲದಿಂದ ಅವಲೋಹದ ಕೇಡ ನೋಡಯ್ಯಾ
ಕೂಡಲಸಂಗನ ಶರಣರ ಅನುಭಾವದ ಬಲದಿಂದ
ಎನ್ನ ಭವದ ಕೇಡ ನೋಡಯ್ಯಾ

ಯಾರಲ್ಲಿ ಜ್ಞಾನ ಸಂಕಲನಗೊಳ್ಳತೊಡಗುತ್ತದೋ ಸಹಜವಾಗಿ ಅಲ್ಲಿ ಅಜ್ಞಾನ ಓಡಿ ಹೋಗಲು ಆರಂಭಿಸುತ್ತದೆ. ಬೆಳಕು ಇರುವ ಕಡೆ ಕತ್ತಲೆ ಇರಲು ಸಾಧ್ಯವಿಲ್ಲ. ಎಷ್ಟೇ ಬಲಿಷ್ಠವಾದ ಕತ್ತಲಲ್ಲೂ ಮಿಣುಕು ದೀಪ ತನ್ನ ಅಸ್ತಿತ್ವವನ್ನು ಸಾರುತ್ತದೆ. ಸತ್ಯ ಹೇಳುತ್ತ ಹೋಗಿ ಅಸತ್ಯ ಬೆತ್ತಲೆಯಾಗಿ ನಿಲ್ಲುತ್ತದೆ. ಒಳ್ಳೆಯ ಲೋಹದ ಜೊತೆಗೂಡಿದರೆ ಕೆಟ್ಟ ಲೋಹಕ್ಕೂ ಬೆಲೆ ಬರುತ್ತದೆ. ನಿಮ್ಮೆಲ್ಲರ ಸಂಗದಿಂದ ನಾನು ಸಹ ಹಲವಾರು ಸಂಗತಿಗಳನ್ನು ತಿಳಿದುಕೊಂಡೆ. ನಿತ್ಯವು ದುಡಿಯುವ, ನಿಷ್ಪøಹವಾಗಿ ಬದುಕುವ, ಯಾರಿಗೂ ಕೇಡು ಬಗೆಯದ ನೀವೇ ಶರಣರು. ನಿಮ್ಮ ಅನುಭಾವ ಯಾವುದಕ್ಕೂ ಯಾರಿಗೂ ಹೋಲಿಕೆ ಮಾಡುವಂಥದ್ದಲ್ಲ. ನನ್ನ ಹಲವಾರು ತಪ್ಪು ತಿಳುವಳಿಕೆಗಳು ನಿಮ್ಮ ಸಂಗದಿಂದ ಕೆಟ್ಟವು ಎಂದು ಮನಬಿಚ್ಚಿ ಮಾತನಾಡುತ್ತಾರೆ. ಅವರೊಳಗೆ ಬಸವಣ್ಣನವರು, ಬಸವಣ್ಣನವರೊಳಗೆ ಅವರೆಲ್ಲ ಸೇರಿಕೊಳ್ಳಲು ಸಾಧ್ಯವಾಗುತ್ತದೆ.

0 ವಿಶ್ವಾರಾಧ್ಯ ಸತ್ಯಂಪೇಟೆ

One thought on “ತಳ ಸಮೂಹದಲ್ಲಿ ಸತ್ಯ ಹೇಳಿ ಸಂಚಲನ ಮೂಡಿಸಿದ ಬಸವಣ್ಣ

  1. ಬಹಳ ಉತ್ತಮ ಲೇಖನ.ಬಸವಣ್ಣನವರು ಕೆಳಗೆ ಬಿದ್ದವರನು ಉಧ್ಧರಿಸಿ”ಅವರಲಿ ಆತ್ಮವಿಶ್ವಾಸ ತುಂಬಿ ಅವರನ್ನೂ ಶರಣರನ್ನಾಗಿ ಮಾಡಿದ್ದು ಸಾಮಾನ್ಶವೇ?ಅಷ್ಟೇ ಅಲ್ಲದೇ ಅವರೂ ಅನುಭಾವಿಗಳಾಗಿ ವಚನಗಳನ್ನು ಬರೆದರು.ಜ್ಞಾನದ ಬಲದಿಂದ ಏನೆಲ್ಲ ಪರಿವರ್ತನೆಯಾಯಿತು.ನೋಡಿರಿ.

Leave a Reply

Your email address will not be published. Required fields are marked *

error: Content is protected !!