ಡಿ.ಎಂ.ಧನ್ನೂರು ಲಿಂಗದಲ್ಲಿ ಲೀನವಾದರು

ತಾಳಿಕೋಟೆಯ ಮಿಣಜಿಗಿ ಗ್ರಾಮದವರಾದರೂ ಸಹ ತಾಳಿಕೋಟೆಯಲ್ಲಿಯೆ ವಾಸವಾಗಿದ್ದರು. ಬಸವಾದಿ ಶರಣರ ತತ್ವಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದ ಡಿ.ಎಂ.ಧನ್ನೂರು ತಮ್ಮ ಇಳಿ ವಯಸ್ಸಿನಲ್ಲಿಯೂ ಅವನ್ನು ಜನ ಮಾನಸಕ್ಕೆ ತಲುಪಿಸಬೇಕು ಎಂದು ಅರ್ಹನಿಶಿ ಪ್ರಯತ್ನಿಸಿದರು. ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಂಡರು.


ಲಿಂಗವಂತರು ಪ್ರಜ್ಞಾವಂತರಾಗದೆ ಲಿಂಗಾಯತ ಧರ್ಮ ಕಟ್ಟಲು ಸಾಧ್ಯವಿಲ್ಲವೆಂಬುದು ಅವರ ಖಚಿತ ಮಾತಾಗಿತ್ತು. ಧನ್ನೂರ ಅವರು ತುಂಬಾ ನಿಷ್ಠುರವಾಗಿ ಮಾತನಾಡುತ್ತಿದ್ದರು. ಇದಕ್ಕೆ ಕಾರಣವೇನೆಂದು ನಾನೇ ಮೊನ್ನೆ ಮೊನ್ನೆ ಅವರನ್ನು ವಿಚಾರಿಸಿದೆ, ಇದಕ್ಕೆಲ್ಲ ಕಾರಣ ಲಿಂಗಣ್ಣ ಸತ್ಯಂಪೇಟೆಯವರು ಎಂದು ಹೇಳಿದರು.

ಸುಳ್ಳು ಹೇಳುವವರೆ ಎದೆಯುಬ್ಬಿಸಿ ಹೇಳುವಾಗ ಸತ್ಯವನ್ನು ನಾವು ವಿನಯ , ಗೌರವ , ಪ್ರೀತಿಯಿಂದ ಹೇಳೋಣ ಎಂದವರು ನಂಬಿದ್ದರು. 88 ರ ಇಳಿ ವಯಸ್ಸಿನಲ್ಲಿಯೂ ಇಷ್ಟಲಿಂಗ ಪೂಜೆಯನ್ನು ಮರೆತವರಲ್ಲ.

ತನ್ನಾಶ್ರಯದ ರತಿ ಸುಖವನ್ನು
ತಾನುಂಬ ಊಟವನು ತಾ ಮಾಡಬೇಕಲ್ಲದೆ
ಮತ್ತೊಬ್ಬರ ಕೈಲಿ ಮಾಡಿಸಬಹುದೆ ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನ್ನೆತ್ತ ಬಲ್ಲರು ಕೂಡಲಸಂಗಮ ದೇವಾ

ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದರಿಂದ ಲಿಂಗೈಕ್ಯರಾಗುವ ಕೊನೆಯ ಘಳಿಗೆಯವರೆಗೆ ಯಾವ ದೇವರಿಗೂ ಊದು ಬತ್ತಿ ಹಚ್ಚಲಿಲ್ಲ, ಲೋಬಾನ ಹಾಕಲಿಲ್ಲ. ಹೂ ಪತ್ರೆ ಪುಷ್ಪ ಏರಿಸಲಿಲ್ಲ. ಬದಲಿಗೆ ಜಂಗಮ ಸೇವೆಯೆ ಲಿಂಗ ಪೂಜೆ ಎಂಬುದನ್ನು ಅರಿತು, ಶರಣರ ವಚನಗಳ ಸಾಹಿತ್ಯ ಪ್ರಸಾರಕ್ಕೆ ತಮ್ಮನ್ನು
ತೊಡಗಿಸಿಕೊಂಡರು.

ನ್ಯಾಯ ನಿಷ್ಠುರಿ ದಾಕ್ಷಿಣ್ಯಪರನಲ್ಲ
ಲೋಕವಿರೋಧಿ ಶರಣನಾರಿಗೂ

ಅಂಜುವುದಿಲ್ಲ ಎಂಬ ಮಾತನ್ನು ತಮ್ಮ ಬದುಕಿನ ಉದ್ದಕ್ಕೂ ನಡೆಸಿಕೊಂಡು ಬಂದರು. ಚಿತ್ರದುರ್ಗದ ಮುರುಘಾ ಮಠದಲ್ಲಿ ಬಸವ ತತ್ವ ವಿಶ್ವ ವಿದ್ಯಾಲಯ ಮಾಡಿದಾಗ ಅದರ ಮುಖ್ಯಸ್ಥರಾಗಿ ಕೆಲಸವ ಮಾಡಿದರು. ಸಮಾಜಕ್ಕೆ ಮಠಾಧೀಶರಾಗಿ ನಿಯುಕ್ತಿಗೊಳ್ಳುವ ಪೂರ್ವದ ತರಬೇತಿಯನ್ನು ಡಿ.ಎಂ. ಧನ್ನೂರ ತಾತ್ವಿಕವಾಗಿ, ಸೈದ್ಧಾಂತಿಕವಾಗಿ ನೀಡಿದರು.

ಡಿ.ಎಂ. ಧನ್ನೂರು ನನ್ನ ಕುಟುಂಬದ ಒಬ್ಬ ಉತ್ತಮ ಬಂಧುಗಳು. ಹಲವು ವರ್ಷಗಳಿಂದ ನಡೆಯುತ್ತಿದ್ದ ಬಸವ ತತ್ವ ಸಮಾವೇಶಕ್ಕೆ ತಾಳಿಕೋಟೆಯಿಂದ ಹತ್ತಾರು ಜನ ಆಸಕ್ತರನ್ನು ಕರೆದುಕೊಂಡು ಸತ್ಯಂಪೇಟೆಗೆ ಬರುತ್ತಿದ್ದರು. ಸತ್ಯಂಪೇಟೆಯ ಆ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ಅನುಭಾವಿಗಳ ಮಾತು ಸರಿ ಕಾಣದೆ ಹೋದರೆ ಅದೇ ವೇದಿಕೆಯಲ್ಲಿಯೆ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು.

ಒಂದು ಸಲ ಸಮಾರಂಭದಲ್ಲಿ ಒಬ್ಬ ಮಠಾಧೀಶರು ಲಿಂಗಾಯತ ಧರ್ಮಕ್ಕೆ ದ್ರೋಹ ಬಗೆಯುತ್ತಿದ್ದ ಒಬ್ಬ ವ್ಯಕ್ತಿಯನ್ನು ಗುಂಡು ಹಾರಿಸಿಕೊಲ್ಲಿರಿ ಎಂದು ಕರೆಕೊಟ್ಟರು. ಅಲ್ಲದೆ ಅವರ ಕುಟುಂಬದ ಆರ್ಥಿಕ ಹೊಣೆಯನ್ನೂ ನಾನು ಹೊರುವೆ ಎಂದು ಉದ್ವೇಗದಿಂದ ಹೇಳಿದರು. ತಕ್ಷಣವೇ ಎದ್ದು ನಿಂತ ಡಿ.ಎಂ.ಧನ್ನೂರ ಅವರು ಆ ಸ್ವಾಮೀಜಿಗೆ ಮರು ಸವಾಲು ಹಾಕಿದರು.

ನಾವು ಹೇಳಿ ಕೇಳಿ ಸಂಸಾರಿಗಳು. ನಮ್ಮ ಹಿಂದೆ ಹೆಂಡತಿ ಮಕ್ಕಳು ಕುಟುಂಬ ಇದೆ. ನಿಮಗಂತೂ ಯಾರೂ ಇಲ್ಲ. ಹಾಗಾಗಿ ಆ ಕೆಲಸ ನೀವೇ ಮಾಡಿ, ಎಂದು ಹೇಳಿದ್ದಲ್ಲದೆ ಇಂಥ ಉದ್ರೇಕಕಾರಿ ಮಾತುಗಳನ್ನು ಇಂಥ ಬಸವವಾದ ವೇದಿಕೆಯಲ್ಲಿ ಹೇಳಿದ್ದು ಅಕ್ಷಮ್ಯ ಅಪರಾಧವೆಂದು ಹೇಳಿದಾಗ ಇಡೀ ಸಭೆ ಕಿವಿಗಡಚಿಕ್ಕುವಂತೆ ಚಪ್ಪಾಳೆ ಹೊಡೆಯಿತು.

ಮೂರ್ನಾಲ್ಕು ಸಲ ಇಳಕಲ್ಲಿನ ಪೂಜ್ಯ ಶ್ರೀ.ಲಿಂ.ಮಹಾಂತ ಸ್ವಾಮೀಜಿಗಳು ಲಿಂಗಸೂಗೂರಿನ ತಮ್ಮ ಶಾಖಾ ಮಠದಿಂದ ಸತ್ಯಂಪೇಟೆಯವರೆಗೆ ಬಸವ ತತ್ವ ಪಾದಯಾತ್ರೆಯನ್ನು ಹಮ್ಮಿಕೊಂಡು ಸಮಾವೇಶಕ್ಕೆ ಬರುತ್ತಿದ್ದರು. ಆಗ ಅವರೊಂದಿಗೆ ಧನ್ನೂರು ಗುರುಗಳು ಖಾಯಂ ಆಗಿ ಇರುತ್ತಿದ್ದರು. ಲಿಂಗಸೂಗೂರಿಂದ ಸತ್ಯಂಪೇಟೆಗೆ 90 ಕಿ.ಮಿ.ದೂರ. ದಾರಿಯಲ್ಲಿ ಬರೀ ಪಾದಯಾತ್ರೆ ಮಾಡುತ್ತ ಬರುತ್ತಿರಲಿಲ್ಲ. ಹಾದಿಯಲ್ಲಿ ಬರುವ ಹಳ್ಳಿ ಹಳ್ಳಿಗರಿಗೆ ಬಸವ ತತ್ವದ ಪರಿಚಯ ಮಾಡಿ, ಅವರಲ್ಲಿರುವ ಕೆಟ್ಟ ಚಟಗಳನ್ನು ಮಹಾಂತ ಸ್ವಾಮೀಜಿಗಳ ಜೋಳಿಗೆಗೆ ಹಾಕಿಸುವಲ್ಲಿ ಯಶಸ್ವಿಯಾಗುತ್ತಿದ್ದರು.

ಕಳೆದೆರಡು ವರ್ಷಗಳ ಹಿಂದೆ ನಡೆದ ಲಿಂಗಾಯತರ ಸಮಾವೇಶಗಳು, ನಿರ್ಭಯವಾದ ವಚನ ಸಾಹಿತ್ಯದ ಪ್ರಸಾರ ಅವರಿಗೆ ಅತ್ಯಂತ ಖುಷಿಕೊಟ್ಟ ಸಂದರ್ಭವಾಗಿತ್ತು. ಬಸವ ತತ್ವದ ಒಬ್ಬಾನೊಬ್ಬ ವ್ಯಕ್ತಿಯ ಬಗೆಗೂ ಅವರು ಕಾಳಜಿವಹಿಸಿ ಮಾತನಾಡುತ್ತಿದ್ದರು. ನೀವೆಲ್ಲ ಬಸವಣ್ಣನವರ ಬೀಜಗಳು , ಯಾವುದಕ್ಕೂ ಹೆದರದೆ ತತ್ವ ಪ್ರಸಾರ ಮಾಡಿ ಸುಳ್ಳು ಸೊಟ್ಟು ಖೊಟ್ಟಿ ಬೀಜಗಳೆಲ್ಲ ಉದುರಿ ಹೋಗುತ್ತವೆ ಎಂದು ಕಠೋರವಾಗಿ ಅನುಭವದ ಮಾತುಗಳನ್ನು ಹೇಳುತ್ತಿದ್ದರು.

ತೀರಾ ಇತ್ತೀಚೆಗೆ ನಾಲ್ಕಾರು ಪುಸ್ತಕಗಳನ್ನು ಪ್ರಕಟಿಸಿದರು. ಅವೆಲ್ಲವೂ ಶರಣ ಸಾಹಿತ್ಯದ ಜಾಗೃತ ಪುಸ್ತಕಗಳಾಗಿವೆ . ಪಾದೋದಕ ಪ್ರಸಾದ, ಲಿಂಗಾಯತರು ಹಿಂದುಗಳೆ ?, ಈಶ ಲಾಂಛನ ಧರಿಸಿದ ಬಳಿಕ ವೇಷ ಲಾಂಛನ ಧರಿಸಲೇಕಯ್ಯಾ ? ಎಂಬ ವಚನಗಳ ಆಧಾರಿತ ಪುಸ್ತಕ ಹಲವಾರು ಮಾಹಿತಿಗಳನ್ನು ಒಳಗೊಂಡುದಾಗಿದೆ.

ಸಾವು ಎಂಬುದು ಎಷ್ಟು ಕ್ರೂರ ಎಂದರೆ ಅದು ಯಾರನ್ನೂ ಬಿಟ್ಟಿಲ್ಲ. ಎಂಥೆಂಥವರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ಒಸಕಿ ಹಾಕಿಕೊಂಡು ಬಿಟ್ಟಿದೆ. ಧನ್ನೂರು ಅವರು ನಮ್ಮೊಂದಿಗೆ ಇನ್ನು ದೈಹಿಕವಾಗಿ ಕಾಣಸಿಗುವುದಿಲ್ಲ. ಅವರ ಶರೀರ ಪಂಚಭೂತಗಳಲ್ಲಿ ಲೀನವಾಗಿದೆ. ಆದರೆ ಅವರು ಬಿತ್ತಿದ ಬಸವ ತತ್ವದ ಬೀಜಗಳು ಮೊಳಕೆ ಒಡೆಯುವುದಂತೂ ಖಚಿತ.

0 ವಿಶ್ವಾರಾಧ್ಯ ಸತ್ಯಂಪೇಟೆ

2 thoughts on “ಡಿ.ಎಂ.ಧನ್ನೂರು ಲಿಂಗದಲ್ಲಿ ಲೀನವಾದರು

  1. ಡಿಎಂ ಧನ್ನೂರು ಶರಣರ ಬಗ್ಗೆ ಅತ್ಯುತ್ತಮ ಮಾಹಿತಿಯನ್ನು ಈ ಲೇಖನ ಮಾಲೆಯಲ್ಲಿ ಪ್ರಕಟಿಸಿದ್ದೀರಿ. ಅವರ ಬಸವ ತತ್ವ ನಿಷ್ಠೆ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ಅವರ ಆತ್ಮಕ್ಕೆ ಗುರು ಬಸವಾದಿ ಶರಣರು ಶಾಂತಿ ನೀಡಲಿ. ನಿಮ್ಮ ಮನೆತನದ ಲೇಖನಗಳಿಗೆ ಗುರು ಬಸವಾದಿ ಶರಣರ ಆಶೀರ್ವಾದ ಸದಾ ಇರಲಿ.

Leave a Reply

Your email address will not be published. Required fields are marked *

error: Content is protected !!