ಲಿಂಗೈಕ್ಯವಾಗಿರುವ ಮತ್ತೆರಡು ಬಸವ ಕುಡಿಗಳು

ಅಣ್ಣ ತಮ್ಮ ಹೆತ್ತಮ್ಮ
ಗೋತ್ರದವರಾದಡೇನು
ಲಿಂಗಸಾಹಿತ್ಯವಿಲ್ಲದವರ ಎನ್ನವರೆನ್ನೆ !

ಎಂಬ ವಚನದ ಸಾಲು ಸದಾ ನನ್ನನ್ನು ಕಾಡುತ್ತದೆ. ನಂಟು ಭಕ್ತಿ ನಾಯಕ ನರಕ ಎಂಬ ಸಾಲು ಕ್ಷಣ ಕ್ಷಣಕ್ಕೂ ನೆನಪಾಗುತ್ತಿರುತ್ತದೆ. ಅಪ್ಪ ಲಿಂಗಣ್ಣ ಸತ್ಯಂಪೇಟೆ ನಮಗೆ ಕಲಿಸಿಕೊಟ್ಟದ್ದು, ರಕ್ತ ಸಂಬಂಧಿಗಳಿಗಿಂತ ಮುಖ್ಯವಾಗಿ ವಿಚಾರ ಸಂಬಂಧ ಬಹಳ ದೊಡ್ಡದು ಎಂದು. ಹೀಗಾಗಿಯೆ ಇಡಿ ಕನ್ನಡ ನಾಡನ್ನು ದಾಟಿ ನಮ್ಮ ಕುಟುಂಬಕ್ಕೆ ಬಹುದೊಡ್ಡದಾದ ಬಸವ ಹೃದಯಿಗಳ ಬಳಗ ಇದೆ.


ಯಾವುದೋ ಒಂದು ಹಲ್ಲಿಗೆ ನೋವಾದರೆ ಸದಾ ನಾಲಿಗೆ ಆ ಕಡೆಯೆ ಹೋಗುತ್ತದೆ ಎಂಬಂತೆ ಬಸವ ತತ್ವದ ಕೊಂಡಿಗಳು ಎಲ್ಲಿಯಾದರೂ ಕಳಚಿ ಬೀಳುತ್ತಿದ್ದರೆ ಹೃದಯ ಆದ್ರ್ರವಾಗುತ್ತದೆ. ಮನಸ್ಸು ಮಿಡಿಯುತ್ತದೆ. ಕಣ್ಣೀರು ತನ್ನಷ್ಟಕ್ಕೆ ತಾನು ಹರಿದು ಹೋಗುತ್ತದೆ. ಇದು ನನ್ನ ದೌರ್ಬಲ್ಯವು ಇರಬಹುದೇನು. ನನಗಂತೂ ಅರ್ಥವಾಗಿಲ್ಲ.

ಕಳೆದ ಐದು ವರ್ಷಗಳ ಹಿಂದೆ ಲಿಂಗೈಕ್ಯವಾದ ಸಿದ್ರಾಮಪ್ಪ ಬಾಲಪ್ಪಗೋಳ್ ಎಂಬ ಹಿರಿಯ ಚೇತನ ನೆನಪಾದಾಗೊಮ್ಮೆ ಕರುಳಿನಲ್ಲಿ ಅದ್ಯಾರೋ ಕತ್ತರಿ ಆಡಿಸಿದ ಭಾವ ಉಂಟಾಗುತ್ತದೆ. ಬಸವ ತತ್ವದ ಪ್ರಸಾರಕ್ಕೆ ಅಪ್ಪನ ಹೆಗಲಿಗೆ ಹೆಗಲು ಕೊಟ್ಟು ದುಡಿದವರಲ್ಲಿ ಬಾಲಪ್ಪಗೋಳ್ ಶರಣರು ಒಬ್ಬರು.

ವೃತ್ತಿಯಿಂದ ಸರಕಾರಿ ನೌಕರರಾಗಿದ್ದರೂ ಪ್ರವೃತ್ತಿಯಿಂದ ಶರಣರ ನಡೆ ನುಡಿಗಳನ್ನು ಅಳವಡಿಸಿಕೊಂಡಿದ್ದರು. ವಚನ ಸಾಹಿತ್ಯದ ಓದು ಅವರನ್ನು ಸ್ಥಾವರಗೊಳಿಸದೆ, ಜಂಗಮದ ಕಡೆಗೆ ತಿರುಗಿಸಿತ್ತು. ಕಚೇರಿಯ ಕೆಲಸ ಮುಗಿಯುತ್ತಲೆ ಅಥವಾ ರಜೆಯ ಸಂದರ್ಭದಲ್ಲಿ ಸೋಮಣ್ಣ ನಡಕಟ್ಟಿ, ಮಲ್ಲಣ್ಣ ನಾಗರಾಳ, ವಿಶ್ವನಾಥ ಡೋಣೂರ, ಶರಣಬಸವ ಕಲ್ಲಾ ಮುಂತಾದವರ ಜೊತೆಗೆ ಕೂಡಿಕೊಂಡು ಯಾವುದಾದರೂ ಹಳ್ಳಿಗೆ ಹೋಗಿ ಬಸವನ ಬೆಳಕನ್ನು ಹಚ್ಚಿ ಬರುತ್ತಿದ್ದರು.

ಲಿಂಗಾಯತರು ಸಂಪ್ರದಾಯವಾದಿಗಳ ಕಪಿಮುಷ್ಠಿಯಿಂದ ಹೊರಬರಬೇಕಾದರೆ ಅವರಿಗೆ ನಾವೇ ಮುಂದೆ ನಿಂತು ನಿಜಾಚರಣೆ ಕಲಿಸಬೇಕು ಎಂದು ಸಂಕಲ್ಪಿಸಿದ್ದರು. ಹೀಗಾಗಿ ಮದುವೆ, ಶಾಲು ಹೊದಿಸುವ, ತೊಟ್ಟಿಲಲ್ಲಿ ಹಾಕುವ, ಲಿಂಗೈಕ್ಯದ ದಿನಾಚರಣೆ ಆಚರಿಸುವ ಅಥವಾ ಲಿಂಗೈಕ್ಯದ ಸಂಸ್ಕಾರಗಳನ್ನು ಹೇಳಿಕೊಡಲು ಮುಂದಡಿ ಇಟ್ಟು ಚಲಿಸುತ್ತಿದ್ದರು.

ಲಿಂಗೈಕ್ಯ ವಿಶ್ವನಾಥರೆಡ್ಡಿ ಮುದ್ನಾಳರದು ಆಗ ಭರಾಟೆಯ ರಾಜಕೀಯ ಜೀವನ. ಇಂಥ ಸಂಬರ್ಧದಲ್ಲಿ ಆ ವೇಗದ ಓಟಗಾರರನ್ನು ಅಗ್ನಿ ಅಂಕುರ ಎಂಬ ನಮ್ಮ ಪಾಕ್ಷಿಕ ಪತ್ರಿಕೆಯ ಮೂಲಕ ತಡೆದು ಹೈರಾಣ ಮಾಡಿಬಿಟ್ಟರು. ಈ ವರದಿ ಕೋರ್ಟ ಕಟಕಟೆಗೂ ಬಂತು. ಆಗಲೂ ಹೆದರದೆ ಬಾಲಪ್ಪಗೊಳ್ ಬಸವ ತತ್ವವನ್ನು ಮೆರೆದರು.

ವಿಶ್ವಾರಾಧ್ಯ ಇನ್ನೊಂದು ಆರು ತಿಂಗಳು ತಡಿ. ಆ ಮೇಲೆ ನಿನ್ನ ಜೊತೆಗೂಡಿ ಇಡೀ ರಾಜ್ಯವನ್ನು ಸುತ್ತುತ್ತೇನೆ. ಎಲ್ಲಾ ಕಡೆ ಬಸವ ತತ್ವದ ಜಯಭೇರಿ ಬಾರಿಸಿ ಬರೋಣ ಎಂದು ಹೇಳಿ ನಾಲ್ಕೆಂಟು ದಿನ ಕೂಡ ಆಗಿರಲಿಲ್ಲ. ಹುಮನಾಬಾದನ ತಾಲೂಕಾ ಪಂಚಾಯತಿ ಅಧಿಕಾರಿಯಾಗಿ ಕೆಲಸ ಮಾಡುತ್ತಲೆ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಲಿಂಗೈಕ್ಯರಾದರು.

ಸಿದ್ರಾಮಪ್ಪ ಬಾಲಪ್ಪಗೋಳ್‍ರು ಅಪ್ಪ ಇದ್ದಾಗ ಇಲ್ಲದಿರುವಾಗಲೂ ನಾವು ನಡೆಸುವ ಬಸವ ಬೆಳಕು, ಮನೆಯಲ್ಲಿ ಮಹಾಮನೆ ಸಭೆಗೆ ತಪ್ಪದೆ ಹಾಜರಾಗಿ ನನಗೆ ಹುರುಪು ತುಂಬಿದವರು.

ಅಬ್ಬಾ ಈ ಬಾಲಪ್ಪಗೋಳ್ ರು ನಮ್ಮಿಂದ ಅಗಲಿ ಐದು ವರ್ಷವಾಯಿತೆ ? ಎಂದು ನನಗೆ ಈಗಲೂ ಅಚ್ಚರಿಯಾಗುತ್ತದೆ. ಇಲ್ಲ ಇಲ್ಲ ಬಾಲಪ್ಪಗೋಳ್ ನನ್ನೊಳಗೆ ಇನ್ನೂ ಜೀವಂತವಾಗಿದ್ದಾರೆ. ಇನ್ನೂ ಬೆಳೆಯುತ್ತಲೆ ಇದ್ದಾರೆ.

ಈರಣ್ಣಗೌಡ ಪಾಟೀಲ ಅನ್ವಾರ

ಶಹಾಪುರ ತಾಲೂಕಿನ ಅನ್ವಾರ ಗ್ರಾಮದ ಈರಣ್ಣಗೌಡ ಪಾಟೀಲರು ಸಹ ನಿನ್ನೆ ದಿನ 5-8-2020 ರಂದು ಹಠಾತ್ತನೆ ಲಿಂಗೈಕ್ಯರಾದರು. ತುಂಬಾ ಆರೋಗ್ಯಕರವಾದ ಮನಸ್ಸು ಇತ್ತು. ಇಳಿ ವಯಸ್ಸಿನಲ್ಲಿಯೂ ಏನಾದರೂ ಹೊಸದನ್ನು ಕೇಳಬೇಕು ಎಂಬ ಬಯಕೆ ಇತ್ತು. ತೀರಾ ಇತ್ತೀಚೆಗೆ ಬಸವ ತತ್ವದ ಕಡೆಗೆ ಮುಖ ಮಾಡಿ ಕುಳಿತಿದ್ದರು.

ಪ್ರತಿ ತಿಂಗಳು ಶಹಾಪುರದಲ್ಲಿ ಬಸವಮಾರ್ಗ ಪ್ರತಿಷ್ಠಾನದಿಂದ ಏರ್ಪಡಿಸುವ ಬಸವ ಬೆಳಕು ಸಭೆಗೆ ತಪ್ಪದೆ ಭಾಗವಹಿಸುತ್ತಿದ್ದರು. ಆ ನಂತರ ಹತ್ತೆಂಟು ಜನ ಕುಳಿತುಕೊಂಡು ಆ ಸಭೆಯ ಅನುಭಾವಗಳ ಕುರಿತು ಚರ್ಚಿಸುತ್ತಿದ್ದರೆಂದು ಕೇಳಿ ಸಂತೋಷ ಪಟ್ಟಿದ್ದೆ.

ತಮ್ಮ ಕಣ್ಣ ಮುಂದೆಯೆ ತಮ್ಮ ಮಕ್ಕಳು ತಮಗಿಂತಲೂ ಹೆಚ್ಚು ಹೆಚ್ಚು ಸಮಾಜ ಮುಖಿಯಾಗಿ ಕೆಲಸದಲ್ಲಿ ತೊಡಗಿಸಿಕೊಂಡದ್ದು ನೋಡಿ ಖುಷಿಗೊಂಡಿದ್ದರು. ಈರಣ್ಣಗೌಡರ ಮಕ್ಕಳು ಸೊಸೆಯಂದಿರು ಬಸವ ತತ್ವವನ್ನು ಅಪ್ಪಿಕೊಂಡು ನಡೆಯುವ ಸಂದರ್ಭದಲ್ಲಿಯೆ ಆಕಸ್ಮಿಕವಾದ ಸಾವಿನ ದವಡೆ ಸಿಕ್ಕು ನಮ್ಮನ್ನು ಅಗಲಿ ಹೋಗಿದ್ದಾರೆ. ಈ ಅಗಲಿಕೆ ನನಗಂತೂ ತೀವ್ರವಾದ ನೋವನ್ನು ಉಂಟು ಮಾಡಿದೆ. ಆ ಸಾವಿಗೆ ಕನಿಷ್ಠ ಒಳ್ಳೆಯವರು ಯಾರು ? ಕೆಟ್ಟವರು ಯಾರು ಎಂಬುದು ತಿಳಿದಿಲ್ಲವೆ ? ಅಥವಾ ಅದಕ್ಕೆ ಹೃದಯವಾದರೂ ಇದೆಯೋ ?

0 ವಿಶ್ವಾರಾಧ್ಯ ಸತ್ಯಂಪೇಟೆ

Leave a Reply

Your email address will not be published. Required fields are marked *

error: Content is protected !!