ತೀರಾ ಭಾವುಕನಾಗಿ ಅತ್ತು ಬಿಡುತ್ತೇನೆ !

ಬಹಳ ಸಲ ನನಗೆ ನಾನೇ ನಿರ್ಧಾರ ಮಾಡಿಕೊಂಡಿದ್ದೇನೆ. ಸಾರ್ವಜನಿಕ ಸಭೆಯಲ್ಲಿ ಎಂದೂ ಕಣ್ಣೀರು ಹಾಕಬಾರದು ಎಂದು. ಆದರೆ ನನಗೆ ಅರಿವಿಲ್ಲದೆ ಗಂಟಲು ಕಟ್ಟಿ, ಕಣ್ಣೀರು ಧಾರಾಕಾರವಾಗಿ ಹರಿದು ಹೋಗುತ್ತದೆ. ಏನೇನೋ ಮಾತನಾಡಬೇಕೆಂದಿದ್ದೇನೋ ಅದೆಲ್ಲ, ಮರೆತು ಕೇವಲ ಬಸವಣ್ಣನವರ ಕೊನೆಯ ದಿನಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಹೇಳಿ ಕೇಳಿ ಬೀದರ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರಂತೂ ಮುಗಿದೆ ಹೋಯಿತು. ತೀರಾ ಭಾವುಕನಾಗಿ ಅತ್ತು ಬಿಡುತ್ತೇನೆ.ಇದು ನನ್ನ ದೌರ್ಬಲ್ಯವಾಗಿರಬಹುದು.

ಅಕಟಕಟಾ ಶಿವ ನಿನಗಿನಿತು ಕರುಣವಿಲ್ಲ
ಅಕಟಕಟಾ ಶಿವ ನಿನಗಿನಿತು ಕೃಪೆಯಿಲ್ಲ.
ಏಕೆ ಹುಟ್ಟಿಸಿದೆ ತಂದೆ ಇಹಲೋಕ ದುಃಖಿಯ
ಪರಲೋಕ ದೂರನ ಏಕೆ ಹುಟ್ಟಿಸಿದೆ ಕೂಡಲಸಂಗಮದೇವಾ
ಕೇಳಯ್ಯಾ ಎನಗಾಗಿ ಮತ್ತೊಂದು ತರುಮರನಿಲ್ಲವೆ ?

ಶಿವನೊಲಿಸ ಬಂದ ಪ್ರಸಾದ ಕಾಯವನು ಸವೆಯೆ ಬಳಸುವೆನು ಎಂದು ಹೇಳಿದ ಬಸವಣ್ಣನವರು ಕಲ್ಯಾಣ ಬಿಟ್ಟು ಹೋಗುವ ಸಂದರ್ಭದಲ್ಲಿ ತುಂಬಾ ನೊಂದಿದ್ದರೆ ? ಇಲ್ಲದೆ ಹೋದರೆ ಇಂಥ ಆರ್ತನಾದ ಮಾಡುವ ಅವಶ್ಯಕತೆ ಏನಿತ್ತು ? ಬಾರದು ಬಪ್ಪುದು, ಬಪ್ಪುದು ತಪ್ಪುದು ಎಂದು ಎಲ್ಲರೊಳಗೂ ಚೈತನ್ಯ ಶಕ್ತಿಯನ್ನು ಹರಿಸಿದ್ದ ಬಸವಣ್ಣನವರು ಒಮ್ಮಿದೊಮ್ಮೆ ಕುಸಿದು ಹೋದರೆ ? ನನ್ನನ್ನು ಹುಟ್ಟಿಸುವ ಬದಲು ತರು ಮರಗಳನ್ನಾದರೂ ಹುಟ್ಟಿಸಬಾರದಿತ್ತೆ ? ನನ್ನ ಮೇಲೆ ನಿನಗೆ ಕರುಣೆ ಇಲ್ಲವೆ ? ಎಂದು ಒಂದೆ ಸಮ ನೋಯುವ ವಚನ ಬರೆಯಲು
ಕಾರಣವೇನಿರಬೇಕು ?

ಜಂಬೂ ದ್ವೀಪ ನವಖಂಡ ಪೃಥ್ವಿಯೊಳಗೆ
ಕೇಳಿರಯ್ಯಾ ಎರಡಾಳಿನ ಭಾಷೆಯ
ಕೊಲುವೆನೆಂಬ ಭಾಷೆ ದೇವನದು.
ಗೆಲುವೆನೆಂಬ ಭಾಷೆ ಭಕ್ತನದು.

ಇಡೀ ಭೂಮಂಡಲದಲ್ಲಿ ಸ್ವತಃ ಆ ದೇವನೆ ಬಂದು ಕೊಲ್ಲುವೆನೆಂದು ಎದುರು ನಿಂತಾಗಲು ಸಹ ಆತನಿಗೆ ಸವಾಲು ಹಾಕಿ ನೀನು ಕೊಲ್ಲಲು ಬಂದರೆ ನಾನು ನಿನ್ನನ್ನು ಮೆಟ್ಟಿ ನಿಲ್ಲುತ್ತೇನೆ ಎಂದಿದ್ದ ಬಸವಣ್ಣನವರು ಸೋತು ಹೋದರೆ ? ಛಲಬೇಕು ಶರಣಂಗೆ ಹಿಡಿದುದ ಬಿಡೆನೆಂಬ. ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವಾ ಎಂಬ ಛಲವಂತಿಕೆಯ ಧೈರ್ಯ ಉಡುಗಿ ಹೋಯಿತೆ ?

ಬಹುಶಃ ಒಂದೊಂದು ಸಲ ತನ್ನ ಕನಸಿನ ಸೌಧ ತನ್ನ ಕಣ್ಣ ಮುಂದೆಯೆ ಕುಸಿದು ಹೋಗುವಾಗ ಎಂಥವರಿಗೂ ಆಘಾತವಾಗುತ್ತದೆ. ಅತೀವ ದುಃಖ ಉಮ್ಮಳಿಸಿ ಬರುತ್ತದೆ. ಯಾರಿಗೂ ಏನೂ ಹೇಳದ ಸ್ಥಿತಿ ನಿರ್ಮಾಣವಾಗುತ್ತದೆ. ಆಗ ಅಸಹಾಯಕವಾಗಿ ಮುಗಿಲ ಕಡೆ ನೋಡುವುದೊಂದೆ ಬಾಕಿ ಎಂಬಂತಾಗುತ್ತದೆ. ಇಂಥ ದುರ್ದರ ಸ್ಥಿತಿಗೆ ಬಸವಣ್ಣನವರು ಈಡಾಗಿದ್ದರು ಎಂದು ಊಹಿಸಬಹುದಾಗಿದೆ. ಮಡದಿ ಮಕ್ಕಳು ಮನೆ ಎಂದು ಕನಸು ಮನಸ್ಸಿನಲ್ಲೂ ಯೋಚಿಸದೆ, ತನ್ನ ಸ್ವಂತ ಸುಖಕ್ಕೂ ಹಾತೊರೆಯದೆ ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯಾ ಎಂದು ಎಲ್ಲರನ್ನು ತಬ್ಬಿಕೊಂಡ ಬಸವಣ್ಣನವರು ಒಂಟಿಯಾದರೆ ?

ಕಲ್ಯಾಣವೆಂಬ ಪ್ರಣತೆಯಲ್ಲಿ
ಭಕ್ತಿರಸವೆಂಬ ತೈಲವನೆರೆದು
ಆಚಾರವೆಂಬ ಬತ್ತಿಯಲಿ
ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ

ಎಂಬ ಸಿದ್ದರಾಮ ಶರಣರ ಮಾತು ಏನಾಯಿತು ? ಬಸವಣ್ಣನವರೆಂಬ ಜ್ಯೋತಿಗೆ ಅಡ್ಡಗಾಲಾಗಿ ಬಂದು ನಿಂತ ಶಕ್ತಗಳು ಯಾರು ? ಯಾಕಾಗಿ ಅವರೆಲ್ಲ ಬಸವಣ್ಣನವರ ವಿರುದ್ಧ ಹಲ್ಲು ಮಸೆದು ,ಸೆಡ್ಡು ಹೊಡೆದು ನಿಂತುಕೊಂಡರು ?
ಅಂದು ಸಂಕಲನಗೊಂಡಿದ್ದ ಶರಣರೇನಾದರೂ ಬಸವಣ್ಣನವರಿಗೆ ಇದಿರಾಗಿ ಮನ ನೋಯ್ಯುವಂತೆ ವರ್ತಿಸಿದರೆ ? ಅವರ ಮಡದಿ ನೀಲಾಂಬಿಕೆ- ಗಂಗಾಂಬಿಕೆಯರು ತೊಂದರೆ ಕೊಟ್ಟರೆ ? ಇಲ್ಲವಲ್ಲ, ಅವರೆಲ್ಲ ಬಸವಣ್ಣನವರ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು ಅಲ್ಲಲ್ಲ, ಅವರ ಹೆಜ್ಜೆಯಲ್ಲಿ ಶಿರವಿಟ್ಟು ನಡೆದು ಹೋದವರು. ಇವರಿಂದ ಇಂಥ ಅಪಚಾರವಾಗಲು ಸಾಧ್ಯವಿಲ್ಲ. ಹಾಗಾದರೆ ಅಂದು ಬೇರೆ ರಾಜ್ಯಗಳಿಂದ ಯಾರಾದರೂ ದಂಡೆತ್ತಿ ಬಂದು ಕಲ್ಯಾಣ ಪಟ್ಟಣಕ್ಕೆ ತೊಂದರೆ ಉಂಟಾಯಿತೆ ? ಯುದ್ಧವೇನಾದರೂ ಸಂಭವಿಸಿತೆ ? ಚರಿತ್ರೆಯ ಪುಟಗಳನ್ನು ಹೆಕ್ಕಿ ನೋಡಿದರೆ ಇಂಥ ಯಾವ ಸನ್ನಿವೇಶವೂ ಅಂದು ಘಟಿಸದಿರುವುದು ಗೊತ್ತಾಗುತ್ತದೆ. ಹಾಗಾದರೆ ಅವರನ್ನು ಕಾಡಿದವರು ಮನಸ್ಸಿನಲ್ಲಿಯೆ ಮಮ್ಮಲ ಮರುಗುವಂತೆ ಮಾಡಿದವರು ಯಾರು ?

ಅರಸು ವಿಚಾರ, ಸಿರಿಯು , ಶೃಂಗಾರ
ಸ್ಥಿರವಲ್ಲ ಮಾನವಾ.
ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು ನೋಡಾ
ಒಬ್ಬ ಜಂಗಮದ ಅಭಿಮಾನದಿಂದ

ಅರಸನಾಗಿರುವವನು ಪ್ರಜೆಗಳ ಏಳಿಗೆಗಿಂತ ತನ್ನ ಚಕ್ರಾಧಿಪತ್ಯದ ಬಗೆಗೆ ಹೆಚ್ಚು ಆಸಕ್ತನಾಗಿರುತ್ತಾನೆ. ತನಗೆ ಅನುಕೂ¯ವಾಗುವ ಸಮಯ, ಸಂದರ್ಭ ಹಾಗೂ ವಿಚಾರಗಳಿಗೆ ಮಾತ್ರ ಪ್ರೋತ್ಸಾಹ ನೀಡುತ್ತಾನೆ. ತನ್ನ ಅಧಿಕಾರಕ್ಕೆ ಕುತ್ತು ಬರುತ್ತದೆ ಎಂದು ಭಾವಿಸಿದನೋ ಆಗ ಆತನಿಗೆ ಯಾವುದೂ ಮುಖ್ಯವಾಗುವುದಿಲ್ಲ. ಸಿರಿ ಸಂಪತ್ತಂತೂ ಚಂಚಲ. ಅದು ಯಾರಲ್ಲಾದರೂ ಒಂದು ಸಲ

ಶೇಖರಗೊಂಡಿತ್ತೆಂದರೆ ಆತನ ತಲೆ ಬುಜದ ಮೇಲೆ ಇಡಲು ಸಾಧ್ಯವಿಲ್ಲ. ಅದು ತನಗೆ ಹೇಗೆ ಬೇಕೋ ಹಾಗೆ ಕುಣಿಸಲು ಶುರು ಮಾಡುತ್ತದೆ. ಸಿರಿಯೆಂಬುದು ಸಂತೆಯ ಸುದ್ದಿ ಮಂದಿ ಇದ್ದಂತೆ. ನಿತ್ಯವೂ ಬಜಾರ ಸಂತೆಯಾಗಿರಲಾರದು. ಸಂತೆಯ ಸಮಯ ಅತ್ಯಲ್ಪ, ಅದು ಮುಗಿದಾಕ್ಷಣವೇ ಆ ಸ್ಥಳ ಯಾರು ಇಲ್ಲದೆ ಬೀಕೋ ಎನ್ನಬೇಕಾಗುತ್ತದೆ. ಶೃಂಗಾರವೂ ಸಹ ವಯಸ್ಸು ಆಗುತ್ತ ಹೋದಂತೆ ಕರಗುತ್ತ ಹೋಗುತ್ತದೆ. ಇದು ಪ್ರಕೃತಿ ಗುಣವೂ ಹೌದು.
ಬಸವಣ್ಣನವರು ಈ ಮೇಲಿನ ವಚನದಲ್ಲಿ ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು ನೋಡಾ. ಒಬ್ಬ ಜಂಗಮದಭಿಮಾನದಿಂದ ಎಂದು ಖಚಿತವಾಗಿ ಹೇಳಿ ಬಿಡುತ್ತಾರೆ. ಹಾಗಾದರೆ ಭಕ್ತಿ ರಸದಿಂದ ತುಂಬಿ ಬೆಳಕು ನೀಡುತ್ತಿದ್ದ ಕಲ್ಯಾಣದ ಪ್ರಣತೆ ಒಮ್ಮಿದೊಮ್ಮೆ ಕತ್ತಲಾಗಲು ಕಾರಣ ಯಾರು ? ಒಬ್ಬ ಜಂಗಮದಭಿಮಾನ ಎಂದು ಇಲ್ಲಿ ಬಳಸಿರುವುದರಿಂದ ನಾವು ಹೆಚ್ಚು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿದೆ. ಜಂಗಮ ಎಂಬ ಪದದ ಕುರಿತು ನಾವು ನೀವೆಲ್ಲ ಬಲ್ಲಂತೆ ಸಮಾಜಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡ ವ್ಯಕ್ತಿ ಜಂಗಮನಾಗಿದ್ದ. ಆದರೆ ಜಂಗಮದ ಅಭಿಮಾನಿಯೆಂದು ಇಲ್ಲಿ ಹೇಳಿಕೊಂಡಿದ್ದಾರೆ. ಜಂಗಮದಭಿಮಾನಿಗಳು ಅದು ಹೇಗೆ ಕಲ್ಯಾಣ ಹಾಳಾಗಲು ಕಾರಣರಾಗುತ್ತಾರೆ ? ಎಂಬ ಜಿಜ್ಞಾಸೆ ನನ್ನಲ್ಲಿ ಮೂಡುತ್ತದೆ.

ನೋವು ಇದ್ದ ಹಲ್ಲಿನ ಕಡೆಗೆ ನಾಲಿಗೆ ತೂರಿ ತೂರಿ ಹೋಗುವಂತೆ ನೊಂದವರ ಕಂಬನಿಯನ್ನು ಒರೆಸಲು, ಅವರನ್ನು ತಬ್ಬಿಕೊಳ್ಳಲು ಧಾವಂತ ತೋರುತ್ತಿದ್ದ ಬಸವಣ್ಣನವರು ಕೊನೆಗೆ ಬರ್ಬರ ಮಾನಸಿಕ ಯಾತನೆ ಗುರಿಯಾದರೆ ? ಹಾಗಾದರೆ ಅವರನ್ನು ಗುರಿ ಪಡಿಸಿದ ಆ ಶಕ್ತಿಗಳು ಯಾರು ? ಅವರು ಇಂದು ಯಾವ ಯಾವ ಮುಖವಾಡ ಇಟ್ಟು ಮೆರೆಯುತ್ತಿದ್ದಾರೆ ? ಇಂಥ ಊಸರವಳ್ಳಿಗಳಿಂದ ಇಂದಿನ ಲಿಂಗಾಯತರು ಅದು ಹೇಗೆ ಎಚ್ಚರಿಕೆ ವಹಿಸಿಕೊಳ್ಳಬೇಕು ? ಎಂಬ ನೂರಾರು ಪ್ರಶ್ನೆಗಳು ತೂರಿ ಬರುತ್ತವೆ.

ಮಗುವಿನಂಥ ಮುಗ್ಧ ಮನಸ್ಸು ಹೊಂದಿದ್ದ, ಆಗಾಗ ಸಿಡಿ ಗುಂಡಿನಂತೆ ರಬಸವಾಗಿ ಹೊರಬರುತ್ತಿದ್ದ, ನೋಂದವರ ನೋವ ಬಲ್ಲವರಾಗಿದ್ದ ಬಸವಣ್ಣನವರು ಕಲ್ಯಾಣ ಬಿಟ್ಟು ಹೋಗಲು ಕಾರಣರಾದವರು ಯಾರು ? ಮತ್ತು ಏಕೆ ? ಎಂಬ ಸತ್ಯ ಅರಿಯಲು ಇಂದಿಗೂ ಸಾಧ್ಯವಾಗಿಲ್ಲವಲ್ಲ ! ಎಂದು ನೆನೆದು ಗದ್ಗದಿತನಾಗುತ್ತೇನೆ. ಅತ್ತು ಬಿಡುತ್ತೇನೆ, ಇದು ನನ್ನ ದೌರ್ಬಲ್ಯ !

0 ವಿಶ್ವಾರಾಧ್ಯ ಸತ್ಯಂಪೇಟೆ

5 thoughts on “ತೀರಾ ಭಾವುಕನಾಗಿ ಅತ್ತು ಬಿಡುತ್ತೇನೆ !

  1. ಶರಣು,ಶರಣಾರ್ಥಿಗಳು,
    ಬಸವಣ್ಣನವರು ಕಲ್ಯಾಣ ತೊರೆದು ಹೋಗುವ ಸಂದರ್ಭದಲ್ಲಿ ಅವರ ನೋವು ಯಾವ ಪರಿಯಾಗಿತ್ತು ಎಂದು ಯೋಚಿಸಿದರೂ ದುಃಖದ ಕಟ್ಟೆ ಒಡೆಯುವದು,ತಾವು ಭಾವುಕರಾಗುವದು,ಕಲ್ಯಾಣದ ಪರಿಸರದಲ್ಲಿ ತಾವು ಇದ್ದಿರಬಹುದೆನೋ ಎಂಬ ಭಾವಗಳು ನಮ್ಮಲ್ಲಿ ಪದೇಪದೇ ಹುಟ್ಟಿಕೊಳ್ಳುತ್ತವೆ. ನಮ್ಮ ಜನಗಳಿಗೆ ಇನ್ನೂ ಯಾವಾಗ ಅರ್ಥವಾಗುವದು…!! ತಿಳಯದಾಗಿದೆ.

  2. ತಮ್ಮ ಶರಣಭಾವದ ತಳಮಳ ಅರ್ಥವಾಗುತ್ತದೆ ಸಹೋದರ. ನಿಜ, ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳಲ್ಲಿ ಅಪ್ಪ ಬಸವಾದಿ ಶರಣರು ವಚನಗಳ ಉಳಿವಿಗಾಗಿ ತಳಮಳಿಸಿ, ದಿಕ್ಕೆಟ್ಟು ವಚನಗಳ ಉಳಿಸಿ, ಅವರುಗಳು ಉಸಿರು ಬಿಟ್ಟಂಥ ಆ ಭೀಕರ ಕ್ಷಣಗಳ ನೆನಪೇ ನನಗೆ ಇಂದಿಗೂ ಒಂದು ರಣಭೀಕರವಾದ ಹಿಂಸೆ.

  3. ಶರಣು ಶರಣಾರ್ಥಿ ಅಣ್ಣಾ..ನಿರಾಭಿಮಾಣಿಗಳ ಮದ್ಯೆ ಎಚ್ಚರಿಸುವ ಕಾಯಕಕ್ಕೆ ಅಪ್ಪ ಬಸವಣ್ಣ ನಿಮಗೆ ಅದೇಶಿಸಿದಂತಿದೆ, ನಿಮ್ಮ ಕಾಯಕವನ್ನ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೀರಿ, ನಿಮಗೆ ಇನ್ನಸ್ಟು ಬಲ ವೃದ್ಧಿಯಾಗಲಿ ಎಂದು ಆಶಿಸುವೆ..

  4. ಬಸವಣ್ಣನೆಂಬದೇ ಲೋಕಚುಂಬಕ ಶಕ್ತಿ.ಎಂತಹ ಜಡ ಮನಸ್ಸುಗಳನ್ನೂ ಚುಂಬಕ ಶಕ್ತಿಯಿಂದ ಪರಿವರ್ತನೆಗೊಳಿಸಿದವರು ಬಸವಣ್ಣನವರು. ತಮ್ಮ ತುಂಬು ಕುಟುಂಬದ ಪರಿಕಲ್ಪನೆಯನ್ನೇ ಲೋಕ ಕುಟುಂಬ ಕಟ್ಟುವುದಕ್ಕೆ ಬಳಸಿಕೊಂಡ ಸರಳವಂತರು. ಸಹಿಸಿಕೊಳ್ಳುವವರಿಗೆ ಎದುರಿಸುವ ಶಕ್ತಿ ಇರುವ ಕಾರಣ,ಸಹಿಸಿಕೊಳ್ಳುವ ಮತ್ತು ಎದುರಿಸುವ ಶಕ್ತಿ ಬಸವಣ್ಣನವರಿಗೆ ಏಕಕಾಲಕ್ಕೆ ಸಹಜವಾಗಿಯೇ ದಕ್ಕಿದ್ದರೂ,ಕಟ್ಟಿದ ಕಲ್ಯಾಣ ತೊರೆದು ಹೊರಟವನಿಗೆ ಕೆಟ್ಟ ಕಲ್ಯಾಣ ನೋಡಿ ದುಃಖದ ಕಟ್ಟೆ ಒಡೆದಿದ್ದು ಸ್ವಾಭಾವಿಕ. ಬಸವಣ್ಣನವರು ಮಹಾತ್ಮ ನಾದರೂ ಒಬ್ಬ ಮನುಷ್ಯರಾಗಿದ್ದರು.
    ಒಳ್ಳೆಯವರಿಗೆ ಬಹು ಬೇಗ ಕೆಟ್ಟದ್ದು ಮಾಡಬಹುದಂತೆ. ಬಸವಣ್ಣನವರಿಗೂ ಹೀಗಾಗಿದೆ.ಭಾವುಕತೆ ವೈಚಾರಿಕತೆಯನ್ನು ಕೊಂದು ಹಾಕುತ್ತದೆ. ಹಾಗೇ ಬಸವಣ್ಣರು ಆ ಸಂದರ್ಭಕ್ಕೆ ಭಾವುಕರಾಗಿ ಕಲ್ಯಾಣ ತೊರೆಯುವ ನಿರ್ಧಾರ ಮಾಡಿರಬಹುದು. ಆದರೆ ಇವರ ಗರಡಿಯಲ್ಲಿ ಪಳಗಿದ ನೀಲಾಂಬಿಕೆ ಭಾವುಕಗಳಾಗದೇ ವೈಚಾರಿಕ ನೆಲೆಯಲ್ಲಿ ಉಳಿದದ್ದು ಕಂಡು ಬರುತ್ತದೆ. ಬಸವಣ್ಣನವರ ಕೊನೆಯ ದಿನಗಳು ನಮ್ಮನ್ನು ಭಾವುಕಗೊಳಿಸುವುದರಲ್ಲಿ ಆಶ್ಚರ್ಯವೇನಿಲ್ಲ.

Leave a Reply

Your email address will not be published. Required fields are marked *

error: Content is protected !!