ಧುತ್ತರಗಾಂವ ಗ್ರಾಮದ ಚೆನ್ನಬಸವ ಶಾಸ್ತ್ರೀಗಳು

ಒಂದೊಂದು ಸಲ ನಮ್ಮ ಊಹೆ ತಪ್ಪಾಗಿ ಹೋಗುತ್ತದೆ. ಜೋತಿಷ್ಯ, ಪಂಚಾಂಗ, ದಿನ ಭವಿಷ್ಯ ಹೇಳುವವರು ಬಸವ ತತ್ವದ ಕಡೆಗೆ ವಾಲುವುದು ತುಂಬಾ ಅಪರೂಪ. ಸಂಸಾರಿಯಾಗಿದ್ದುಕೊಂಡು ಸನ್ಯಾಸ ದೀಕ್ಷೆ ಪಡೆದು ಅಪ್ಪಟ ಬಸವ ತತ್ವದ ಅಭಿಮಾನಿಯಾಗಿದ್ದವರೊಬ್ಬರ ರೋಚಕ ಸಂಗತಿಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬಯಸಿದ್ದೇನೆ.

ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಧುತ್ತರಗಾಂವ ಗ್ರಾಮದಲ್ಲಿ ಚನ್ನಬಸವಯ್ಯನವರು( ಕಿ.ಶ.1927) ಹುಟ್ಟಿದರು. ಈಗಿನ ಮಹಾರಾಷ್ಟ್ರ ಜಿಲ್ಲೆಯ ಸೊಲ್ಲಾಪುರದ ಅಂದಿನ ಸಂಸ್ಕøತ ಪಂಡಿತರಾಗಿದ್ದ ಜಗದೀಶ ಶಾಸ್ತ್ರಿಗಳು ಇವರಲ್ಲಿ ಮೂರು ವರ್ಷಕ್ಕೂ ಹೆಚ್ಚು ಕಾಲ ಅಭ್ಯಾಸ ಮಾಡಿದರು. ಜಾತಿ ಮತ ಭೇದಗಳನ್ನು ಗಣನೆಗೆ ತೆಗೆದುಕೊಳ್ಳದೆ ಬಳ್ಳಾರಿಯ ಬಿ.ಹಯಾತ್ ಸಾಹೇಬರನ್ನು ಹುಡುಕಿಕೊಂಡು ಹೋಗಿ ಜೋತಿಷ್ಯ, ಪಂಚಾಂಗವನ್ನು ಕರತಲಾಮಲಕ ಮಾಡಿಕೊಂಡು ಬಂದರು. ಜ್ಞಾನಕಾಂಕ್ಷೆಯನ್ನು ಹೊಂದಿದ್ದ ಚೆನ್ನಬಸವಯ್ಯನವರು ಇಷ್ಟಕ್ಕೆ ನಿಲ್ಲಲಿಲ್ಲ. ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಪೂಜ್ಯ ಶ್ರೀ. ಪಂ.ಪುಟ್ಟರಾಜ ಗವಾಯಿಗಳಲ್ಲಿಗೆ ಹೋಗಿ, ಐದು ವರ್ಷಕ್ಕೂ ಹೆಚ್ಚು ಕಾಲ ಅಲ್ಲಿ ನೆಲೆನಿಂತು ಸಂಗೀತವನ್ನು ಕಲಿತರು. ಇದರೊಂದಿಗೆ ಪೂಜ್ಯರ ನಾಟಕ ಕಂಪನಿಗಳಲ್ಲಿ ಅಭಿನಯಿಸಿದರು. ಜೊತೆ ಜೊತೆಗೆ ಆ ನಾಟಕ ಕಂಪನಿಯ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಿ ಕಂಪನಿಗೆ ಲಾಭವನ್ನು ತಂದುಕೊಟ್ಟರು.

ಸಂಗೀತ ಸಾಹಿತ್ಯ ನಾಟಕಕ್ಕೆ ಮನಸೋತ ಚೆನ್ನಬಸವ ಸ್ವಾಮೀಜಿಗಳು ವಯಸ್ಸಿಗೆ ತಕ್ಕಂತೆ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳನ್ನು ಹೆತ್ತರು. ಜಾಣನಾದವನು ಲೌಕಿಕ ಪಾರಮಾರ್ಥ ಎರಡನೂ ಕೂಡೆ ನಡೆಸುತಿಹನು ಎನ್ನುವಂತೆ ಸಾಂಸಾರಿಕರಾಗಿಯೂ ಪಾರಮಾರ್ಥದ ಸುಖದಲ್ಲಿ ಓಲಾಡುತ್ತಿದ್ದರು. ಜೋತಿಷ್ಯ, ಪಂಚಾಂಗ ಹೇಳುತ್ತಿದ್ದುದರಿಂದ ಸಹಜವಾಗಿ ಚೆನ್ನಬಸವಯ್ಯ ಸ್ವಾಮಿ, ಚೆನ್ನಬಸವಯ್ಯ ಶಾಸ್ತ್ರಿಗಳಾಗಿ ಕರೆಯಲ್ಪಡುತ್ತಿದ್ದರು.

ನಿಗರ್ವಿಗಳು, ವಾಗ್ಮಿಗಳು ಆಗಿದ್ದರಿಂದ ಜನರು ಸದಾ ಅವರನ್ನು ಮುತ್ತಿಕೊಂಡಿರುತ್ತಿದ್ದರು. ಪುರಾಣ ಕೀರ್ತನೆಗಳಿಗಾಗಿ ಮಹಾರಾಷ್ಟ್ರ, ಕರ್ನಾಟಕದ ಹಲವು ಜಿಲ್ಲೆ ತಾಲೂಕುಗಳಲ್ಲಿ ಹೆಸರನ್ನು ಸಂಪಾದಿಸಿದರು. ವಿದ್ವತ್ತಿನೊಂದಿಗೆ ಸಹಜವಾಗಿ ಲಕ್ಷ್ಮಿಯೂ ಬೆನ್ನತ್ತಿ ಬರುತ್ತಾಳೆ ಎಂಬುದಕ್ಕೆ ಚೆನ್ನಬಸವ ಶಾಸ್ತ್ರಿಗಳು ಸಾಕ್ಷಿಯಾದರು. ಅರವತ್ತು ಮೂರು ವರ್ಷಗಳವರೆಗೆ ಸಂಸಾರ,ಜೋತಿಷ್ಯ ಪಂಚಾಂಗ, ಪುರಾಣ, ಕೀರ್ತನೆಗಳಲ್ಲಿ ಬದುಕಿದ ಜೀವಕ್ಕೆ ಕೊನೆಗಾಲದಲ್ಲಿ ತಾವೇ ಒಂದು ಆಶ್ರಮ ಮಾಡಿದರೆ ಹೇಗೆ ? ಎಂದು ಯೋಚನೆ ಹೊಳೆದುದೆ ತಡ ಲಿಂ. ಡಾ. ಸಿದ್ಧಲಿಂಗ ಮಹಾಸ್ವಾಮೀಜಿ ತೋಂಟದಾರ್ಯ ಮಠ ಗದಗ ಅವರಿಂದ ಒಪ್ಪಿಗೆ ಪಡೆದು ಶ್ರೀ. ವೀರೇಶ್ವರ ಪುಣ್ಯಾಶ್ರಮವನ್ನು ಸ್ಥಾಪಿಸಿ ಬಿಟ್ಟರು.

ನ್ಯಾಯ ನಿಷ್ಠುರಿ ಶರಣ ದಾಕ್ಷಿಣ್ಯ ಪರನಲ್ಲ, ಲೋಕವಿರೋಧಿ ಶರಣ ಆರಿಗೂ ಅಂಜಲಾರ ಎಂಬಂತೆ ಚೆನ್ನಬಸವ ಶಾಸ್ತ್ರಿಗಳು ತಾವು ನಡೆದುದೆ ದಾರಿ ಎಂಬಂತೆ ನಡೆದು ಹೋದರು. ಜನ್ಮತಃ ಜಂಗಮರಾಗಿಯೂ ಬಸವ ತತ್ವದ ಹರಕಾರರಾದ ಗದುಗಿನ ತೋಂಟದಾರ್ಯರಿಂದ ಮಾರ್ಗದರ್ಶನ ಪಡೆದರು. ಹಲವಾರು ಬಡ ವಿದ್ಯಾರ್ಥಿಗಳನ್ನು ತಮ್ಮ ವೀರೇಶ್ವರ ಆಶ್ರಮದಲ್ಲಿಟ್ಟುಕೊಂಡು ಜ್ಞಾನ ದಾಸೋಹ, ಅನ್ನ ದಾಸೋಹ ನೆರವೇರಿಸಿಕೊಂಡು ಬಂದರು. ತಮ್ಮ ಖಾಸಗಿ ಸಂಸಾರವನ್ನು ತ್ಯಜಿಸಿದ್ದರಿಂದ ಆಶ್ರಮದ ವಿದ್ಯಾರ್ಥಿಗಳನ್ನೇ ತನ್ನ ಕುಟುಂಬದ ಸದಸ್ಯರಿಗಿಂತ ಹೆಚ್ಚು ಕಾಳಜಿಗಳನ್ನಿಟ್ಟುಕೊಂಡು ಸಲಹಿದರು. ಸ್ವಾಭಿಮಾನಿಯಾಗಿದ್ದ, ವಿವೇಕಿಯಾಗಿದ್ದ, ಪಂಡಿತರಾಗಿದ್ದ ಚೆನ್ನಬಸವಶಾಸ್ತ್ರಿಗಳಿಗೆ ತುಸು ಹೆಚ್ಚೆ ಅನ್ನುವಂತೆ ಕೋಪ ಇತ್ತು. ಈ ಕೋಪಕ್ಕೆ ಅವರ ಆಶ್ರಮದಲ್ಲಿ ಉಳಿದಿದ್ದ ಕೆಲವು ವಿದ್ಯಾರ್ಥಿಗಳು ಆಶ್ರಮವನ್ನು ತೊರೆದು ಹೋದದ್ದು ಇದೆ. ಜೀವನಾನುಭಾವ, ಕಡಕೋಳ ಮಡಿವಾಳಪ್ಪ, ಶಿಶುವಿನಾಳ ಶರೀಫರ ತತ್ವ ಪದಗಳನ್ನು ಹಾಡುತ್ತಿದ್ದುದರಿಂದ ಸಹಜವಾಗಿಯೆ ಸಾಹಿತ್ಯ ಇವರ ಕೈವಶವಾಗಿ ಹೋಗಿತ್ತು.

ಅದೇಕೋ ಬಸವಣ್ಣನವರನ್ನು ಒಪ್ಪಿಕೊಂಡಿದ್ದರೂ ಸಹ ಶಾಸ್ತ್ರ, ಪುರಾಣ, ಪಂಚಾಂಗ, ಜೋತಿಷ್ಯ ಇವರ ಕೈ ಬಿಟ್ಟಿರಲಿಲ್ಲ. ಅರಿವಿಂಗೆ ಹಿರಿದು ಕಿರಿದುಂಟೆ ? ಎಂಬ ವಚನದ ಸಾಲಿನಂತೆ ತಮ್ಮ ಕೈಯಲ್ಲಿಯೆ ಕಲಿಯುತ್ತಿದ್ದ ವಿಶ್ವನಾಥ ಎಂಬ ಬಾಲಕನ ವಚನ ಅಧ್ಯಯನಕ್ಕೆ ಮಾರು ಹೋದರು. ಇಷ್ಟು ವರ್ಷಗಳ ಕಾಲ ಪಂಚಾಂಗ, ಪುರಾಣ ಜೋತಿಷ್ಯಗಳಲ್ಲಿ ಮನಸೋತ ಶಾಸ್ತ್ರಿಗಳು ಬಸವ ತತ್ವವನ್ನು ತಮ್ಮ ಶಿಷ್ಯನ ಮೂಲಕ ಕಲಿತುಕೊಂಡರು. ಮೌಢ್ಯಗಳು ಮೂಲೆ ಸೇರಿದವು. ಪುರಾಣಗಳು ಪುಂಡರಗೋಷ್ಠಿ ಎಂಬುದು ಅರ್ಥವಾಗಿ ಹೋಯಿತು. ಪಂಚಾಂಗ ಹೊಟ್ಟೆ ಹೊರೆಯುವ ತಂತ್ರಗಳೆಂಬ ಅರಿವಿಗೆ ಬಂತು. ವಯಸ್ಸಿನಲ್ಲಿ ದೊಡ್ಡವರಾದರೇನು ? ಗುರುವಾದರೇನು ಶಿಷ್ಯನಾದರೇನು ? ಜ್ಞಾನ ಯಾವ ಮೂಲೆಯಿಂದ ಬಂದರೂ ಏನಂತೆ ? ಹಿಂದೆ ಬಳ್ಳಾರಿಯಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿಯಾಗಿದ್ದ ಹಯಾತ್ ಸಾಹೇಬರನ್ನು ಹುಡುಕಿಕೊಂಡು ಹೋಗಿರಲಿಲ್ಲವೆ ?

ಅದೆ ರೀತಿ ತಮ್ಮ ಮಠದಲ್ಲಿಯ ತಮ್ಮ ಶಿಷ್ಯ ವಿಶ್ವನಾಥ ಎಂಬ ಬಾಲಕನನ್ನು ತಮ್ಮ ಆಶ್ರಮಕ್ಕೆ ಉತ್ತರಾಧಿಕಾರಿಯೆಂದು ಘೋಷಿಸಿದರು. ಮುಂದೆ ತನ್ನ ರಕ್ತ ಸಂಬಂಧಿಗಳ್ಯಾರು ಮಠದಲ್ಲಿ ಪಾರುಪತ್ಯ ನಡೆಸದಂತೆ ಮರಣ ಶಾಸನ ಬರೆಯಿಸಿದರು. ತಾವು ದುಡಿದು ಗಳಿಸಿದ ಆಸ್ತಿಯನ್ನು ನಿರಾಯಾಸವಾಗಿ ವಿಶ್ವನಾಥ ಎಂಬ ಶಿಷ್ಯನ ಹೆಸರಿಗೆ ಬರೆದು ಹೋದರು. ಶರಣರ ವಚನಗಳ ಪ್ರಭಾವಕ್ಕೆ ಒಳಗಾದ ಚೆನ್ನಬಸವಯ್ಯ ಶಾಸ್ತ್ರಿಗಳು ಹಿಂದೆ ಅರಿಯದೆ ಗುಡಿ ಕಟ್ಟಿಬಿಟ್ಟೆನಲ್ಲ ಎಂದು ಹಳಹಳಿಸಿದರು. ನನ್ನ ತರುವಾಯ ಯಾವುದೆ ಕಾರಣಕ್ಕೂ ನನಗೂ ಸ್ಮರಣೆಗಾಗಿ ಯಾವುದೆ ಸ್ಥಾವರಗಳನ್ನು ನಿರ್ಮಿಸಬಾರದೆಂದು ತಿಳಿಸಿದರು. ನಿಮ್ಮ ಸಮಾಧಾನಕ್ಕೆ ಬೇಕಾದರೆ ನನ್ನ ಶರೀರ ಇಟ್ಟ ಜಾಗದಲ್ಲಿ ಬೇಕಾದರೆ ಒಂದು ಮರವನ್ನು ನೆಡಬಹುದು ಎಂದು ಹೇಳುವ ಉದಾತ್ತ ಭಾವವನ್ನು ರೂಢಿಸಿಕೊಂಡು ಹೋದರು.

ಅಂದು ಈ ಚೆನ್ನಬಸವ ಶಾಸ್ತ್ರೀಗಳು ತಮ್ಮಲ್ಲಿಟ್ಟುಕೊಂಡು ಓದಿಸಿ, ಕಲಿಸಿ, ವಿದ್ವತ್ತು ತುಂಬಿ ಬೆಳಸಿದ ವಿಶ್ವನಾಥ ಬೇರೆ ಇನ್ನಾರೂ ಅಲ್ಲ. ಅವರು ಆಳಂದ ತಾಲೂಕಿನ ಧುತ್ತರಗಾಂವ ಗ್ರಾಮದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿಗಳು. ಈಗಾಗಲೇ ಬುದ್ಧ ಬಸವ ಅಂಬೇಡ್ಕರ್, ಪುಲೆ ದಂಪತಿಗಳು, ಸಾಹು ಮಹಾರಾಜ ಮುಂತಾದ ದಾರ್ಶನಿಕರ, ವಿಭೂತಿ ಪುರುಷರ ವಿಚಾರಗಳನ್ನು ತಮ್ಮ ಎದೆಯಲ್ಲಿಟ್ಟುಕೊಂಡು ಜನ ಮಾನಸಕ್ಕೆ ತಿಳಿಸಲು ಹೊರಟ ನಿಜ ಜಂಗಮರಾಗಿದ್ದಾರೆ.

ಜಾತಿ ಜಂಗಮರಾಗಿಯೂ ನೀತಿ ಜಂಗಮಕ್ಕೆ ಅಂಟಿಕೊಳ್ಳುವವರು ತೀರಾ ಅಪರೂಪ.

ಜಂಗಮಕ್ಕೆ ಮಾತಾಪಿತರಿಲ್ಲ,
ಜಂಗಮಕ್ಕೆ ಜಾತಿ ಬಂಧುಗಳಿಲ್ಲ
ಜಂಗಮಕ್ಕೆ ನಾಮ ರೂಪುಗಳಿಲ್ಲ.
ಜಂಗಮಕ್ಕೆ ಸೀಮೆ ಸಂಗಗಳಿಲ್ಲ
ಜಂಗಮಕ್ಕೆ ಕುಲಗೋತ್ರಗಳಿಲ್ಲ
ಜಂಗಮಕ್ಕೆ ಮಲಮಾಯೆಗಳಿಲ್ಲ
ನೋಡಾ ಅಖಂಡೇಶ್ವರಾ

ಎಂಬಂತೆ ಸಮಾಜವೇ ಜಂಗಮ ಎಂದು ಹೊರಟಿರುವ ಶ್ರೀ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿಯನ್ನು ನಮಗಾಗಿ ಸಿದ್ಧಮಾಡಿಟ್ಟು ಹೋದ ಚೆನ್ನಬಸವಶಾಸ್ತ್ರಿಗಳನ್ನು ನಾವು ಮರೆಯಬಹುದೆ ?

0 ವಿಶ್ವಾರಾಧ್ಯ ಸತ್ಯಂಪೇಟೆ

4 thoughts on “ಧುತ್ತರಗಾಂವ ಗ್ರಾಮದ ಚೆನ್ನಬಸವ ಶಾಸ್ತ್ರೀಗಳು

 1. ಬಸವಾದಿ ಶರಣರ ಅನುಯಾಯಿಗಳ ಸಂಖ್ಯೆ
  ಹೀಗೆ ಬೆಳೆಯುತ್ತ ಸಾಗಲಿ ಶರಣರೆ…
  ಸುಂದರ ಲೇಖನ. ಧನ್ಯವಾದಗಳು

 2. ಆಳಂದ ತಾಲೂಕಿನ ದುತ್ತರಗಾಂವ ನೋಡಲು ಕುಗ್ರಾಮ ಆದರೆ ಅಲ್ಲಿ ಕಂಬಾರ ಕಾಯಕದ ವೀರೇಶ್ವರ ಶರಣರು ಬಾಳಿ ಬೆಳಗಿ ವಿಭೂತಿಯ ರೂಪದಲ್ಲಿ ನೆಲೆನಿಂತ ಪುಣ್ಯ ಭೂಮಿ. ಅಂತ ಭಕ್ತಿಯ ನೆಲದಲ್ಲಿ ಮೊಳಕೆ ಒಡೆದು ಸಸಿಯಾಗಿ ಅನೇಕ ಕಡೆ ಟಿಸಿಲೊಡೆದು ಕೊನೆಗೆ ಶರಣ ಮಾರ್ಗವೇ ಶ್ರೇಷ್ಠವೆಂದು ಅರಿತು ಇಂದಿನ ಜಾತಿ ಜಂಗಮರಿಗೆ ಮಠಾಧೀಶರಿಗೆ ಸ್ವಾಮಿಗಳಿಗೆ ಅತ್ಯಂತ ಮಾದರಿ ವ್ಯಕ್ತಿಯಾಗಿ ನಿಲ್ಲುವ ಗುರುಗಳೆಂದರೆ ಚನ್ನಬಸವ ಶಾಸ್ತ್ರಿಗಳು.

  ನಾನು ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಒಮ್ಮೆ ಅಳಂದ ತಾಲೂಕಿನ ನರೋಣ ಗ್ರಾಮಕ್ಕೆ ಹೋಗಿದ್ದೆ. ಅಲ್ಲಿಯ ಸದ್ಭಕ್ತರು ದಸರೆಯ ಸಮಯದಲ್ಲಿ ಚನಬಸವ ಶಾಸ್ತ್ರೀಯವರಿಂದ ಪುರಾಣವನ್ನು ಹಮ್ಮಿಕೊಂಡಿದ್ದರು. ನಾನು ಚಿಕ್ಕವನಿರುವಾಗಲೇ ನಮ್ಮ ಅಜ್ಜ ನವರಿಂದ ಸ್ವಲ್ಪ ಭಕ್ತಿಯ ಸಂಸ್ಕಾರವನ್ನು ಪಡೆದಿದೆ ನನಗೆ ಯಾವಾಗಲೂ ಶರಣರ ಚರಿತ್ರೆಯನ್ನು ಕೇಳುವುದೆಂದರೆ ಪ್ರಾಣ. ಚನ್ನಬಸವ ಶಾಸ್ತ್ರಿಗಳು ತಮಿಳುನಾಡಿನ ಪುರಾತನರ ಬಗ್ಗೆ ಅದ್ಭುತವಾದ ಪ್ರವಚನ ನೀಡುತ್ತಿದ್ದರು. ತಿರುನೀಲಕಂಠರ ಕಥೆಯನ್ನು ಅತ್ಯಂತ ಸ್ವಾರಸ್ಯವಾಗಿ ಹೇಳಿದರು. ಅದರಂತೆ ಬಸವಾದಿ ಶರಣರ ವಚನಗಳನ್ನು ಕೂಡ ಅದ್ಭುತವಾಗಿ ಬಿಡಿಸಿ ಅದರ ತಾತ್ಪರ್ಯ ವನ್ನು ನಮಗೆ ಉಣಬಡಿಸುತ್ತಿದ್ದರು. ಅದೇ ಸಮಯದಲ್ಲಿ ಮಾತಾಜಿಯವರ ಪ್ರಭಾವ ಬೀರಿರುವುದರಿಂದ ಚನ್ನಬಸವ ಶಾಸ್ತ್ರಿಗಳ ಪ್ರವಚನ ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸಿತು.
  ಚನ್ನಬಸವ ಶಾಸ್ತ್ರಿಗಳಿಗೆ ನಂತರ ತಿಳಿದುಕೊಂಡೆ, ಅವರೊಬ್ಬ ಸಂಸಾರಸ್ಥರಾಗಿದ್ದು ಸದಾ ಶಿವ ಭಕ್ತಿಯಲ್ಲಿ ಕಾಲಕಳೆಯುವ ಶಿವಯೋಗಿ ಎಂಬುದು. ಅವರ ಸಮನಾಗಿ ಅಂದು ಪ್ರವಚನ ಮಾಡುವವರನ್ನು ಕಂಡೆ ಇಲ್ಲವೆಂದರೆ ಅತಿಶಯೋಕ್ತಿ ಆಗದು. ಚನಬಸವ ಶಾಸ್ತ್ರಿಗಳಲ್ಲಿ ಅಪಾರವಾದ ವಿದ್ವತ್ ಇತ್ತು ಅವರ ಹೃದಯದಲ್ಲಿ ಪ್ರೀತಿ ಮತ್ತು ಭಕ್ತಿ ಎರಡು ಸಮ್ಮಿಳಿತವಾಗಿದ್ದವು ಆ ಸಮಯದಲ್ಲಿ ಕೋರಣೇಶ್ವರ ಸ್ವಾಮಿಗಳು ಚಿಕ್ಕವರಿದ್ದರು. ಹೆಚ್ಚು ಕಡಿಮೆ ನಮ್ಮ ವಯಸ್ಸು ಸದಾ ಗುರುಗಳ ಸೇವೆಯನ್ನು ಭಕ್ತಿಯಿಂದ ಆಚರಿಸುವ ಸಾಧಕರಾಗಿದ್ದರು. ಚನ್ನಬಸವ ಶಾಸ್ತ್ರಿಗಳು ಮನೆಮಾರು ಬಿಟ್ಟು ಹೆಂಡತಿ-ಮಕ್ಕಳನ್ನು ತೊರೆದು ಸುತ್ತಲಿನ ಬಂದು ಬಳಗದ ಗೋಡೆಯನ್ನು ತೊಡೆದುಹಾಕಿ ವಿರಕ್ತರಾದರು. ದುತ್ತರಗಾಂವ ಗ್ರಾಮದಲ್ಲಿ ಮಠವನ್ನು ಕಟ್ಟಿಕೊಂಡು ಜೀವನದ ಕೊನೆಯ ಘಟ್ಟದಲ್ಲಿ ವೀರಶೈವ ಆಚಾರವನ್ನು ಸಂಪೂರ್ಣವಾಗಿ ಬಿಟ್ಟು ಪಂಚಾಂಗವನ್ನು ಬದಿಗೊತ್ತಿ ಬಸವತತ್ವದ ನಿಜಾಚರಣೆಯನ್ನು ಆಚರಿಸುತ್ತಾ ಲಿಂಗೈಕ್ಯರಾದ ಮಹಾಮಹಿಮರು. ಚನ್ನಬಸವ ಶಾಸ್ತ್ರಿಗಳು ಚನ್ನಬಸವ ಶಿವಯೋಗಿಗಳಾದರು. ಅವರು ವಿರಕ್ತರಾದ ಮೇಲೆ ರಕ್ತಸಂಬಂಧಿಗಳನ್ನು ಹತ್ತಿರ ಸುಳಿಯಗೊಡಲಿಲ್ಲ ಇಂದಿನ ಮಠಾಧೀಶರಿಗೆ ಇವರೇಕೆ ಮಾದರಿ ಆಗುತ್ತಿಲ್ಲ? ಇಂದಿನ ಪಂಚಾಂಗದ ಸ್ವಾಮಿಗಳಿಗೆ ಇವರೇಕೆ ಅರ್ಥವಾಗುತ್ತಿಲ್ಲ? ಇಂದಿನ ಸ್ವಾಮಿಗಳೇಕೆ ಇವರ ಮಾರ್ಗವನ್ನು ಅನುಸರಿಸಬಾರದು? ಎಲ್ಲ ಪ್ರಶ್ನೆಗಳು ಶರಣ ಮಾರ್ಗದ ಅನುಯಾಯಿಗಳಿಗೆ ಕಾಡುತ್ತಲೇ ಇರುತ್ತವೆ. ಬೆಳ್ಳಿಚುಕ್ಕಿ ಮೂಡಿದೆ ಬೆಳಗಾಗುವ ಸಮಯ ಬಂದಿದೆ ವಚನದ ಮುಂಗೋಳಿ ಕೂಗಿದೆ. ಮತ್ತೆ ಬಸವ ಭಾಸ್ಕರ ತತ್ವ ಸೂರ್ಯನಾಗಿ ಬೆಳಗುತ್ತಾನೆ ಎಂಬ ಮಹದಾಸೆಯ ವಾಗಿದೆ.

 3. ನನಗೆ ಜೋತಿಷ್ಯ ಕಲಿಸಿಕೊಟ್ಟ ಗುರುಗಳ ಕುರಿತು ಬರೆದ ಬರೆಹ ಓದಿ ಸಂತೋಷವಾಯಿತು. ಧನ್ಯವಾದಗಳು ಲೇಖಕರಿಗೆ.
  ಉದಾತ್ತ ಚಿಂತನೆಯ ಮನುಕುಲದ ಹಿತ ಬಯಸುವ ಸಮತೆಯ ಸಾಮರಸ್ಯ ಸಾರುತಿಹ ಪರಮ ಪೂಜ್ಯ ವಿಶ್ವನಾಥ ಗುರುಗಳಿಗೆ ಪ್ರಣಾಮಗಳು.

 4. ವಾವ್…
  ಗುರುವಿನ ಒಡಲಲ್ಲಿದ್ದ ಶಿಷ್ಯನಿಂದಲೇ ಬಸವತತ್ವ ಅರಿತು, ಶಿಷ್ಯನ ಮುಟ್ಟಿ ಗುರುವಾದ ಸಂಗತಿಯು “ಗುರುಮುಟ್ಟಿ ಗುರುವಾಗು” ಎಂಬುದಕ್ಕಿಂತ ಪ್ರಖರವಾದುದ್ದು.

  ರಕ್ತಸಂಬಂಧಗಳಲ್ಲಿ ಉತ್ತರಾಧಿಕಾರತ್ವವನ್ನು ವಹಿಸದಿರುವಿದು ಬಹಳ ಶ್ಲಾಗನೀಯವಾದದ್ದು.

  ಇಂಥ ಮಠಾಧಿಪತಿಗಳೇ ಮುಂದಿನ ಶರಣ ತತ್ವ ಪ್ರಸಾರಕ್ಕೆ ಲಗ್ಗೆ ಇಟ್ಟ ಧೀಮಂತ ವಾರಸುದಾರರು…

  ಅವರ ಇಂಥ ನೈಜತತ್ವ ಅನುಯಾಯಿತ್ವಕ್ಕೆ ಕೋಟಿ ಕೋಟಿ ಶರಣಾರ್ಥಿಗಳು…

Leave a Reply

Your email address will not be published. Required fields are marked *

error: Content is protected !!