ಹಸಿದವರಿಗೆ ಅನ್ನ, ಅಕ್ಷರ ನೀಡಿದ ಶರಣ ದಾಸೋಹಿ

ಹೊನ್ನು ಹೆಣ್ಣು ಮಣ್ಣು ಬಿಡಿಸದ ಗುರುವಿನ ಉಪದೇಶವನೊಲ್ಲೆ,
ರೋಷ ಹರುಷವ ಕೆಡಿಸದ ಲಿಂಗವ ಪೂಜಿಸೆ,
ತಾಮಸಭ್ರಮೆಯನಳಿಯದ ಜಂಗಮಕ್ಕೆ ದಾಸೋಹವ ಮಾಡೆ,
ಪರಮಾನಂದವಲ್ಲದ ಪಾದೋದಕವ ಕೊಳ್ಳೆ,
ಪರಿಣಾಮವಲ್ಲದ ಪ್ರಸಾದವನುಣ್ಣೆ,
ಆನೆಂಬುದನಳಿಯದ ಈಶ್ವರೀಯ ವರದ ಮಹಾಲಿಂಗನನೇನೆಂದೆಂಬೆ!
ಶರಣ ಅಪ್ಪಿದೇವಯ್ಯ

ಶರಣರ ಆಶಯಕ್ಕೆ ತಕ್ಕಂತೆ ಬಾಳಿ ಬದುಕಿ ಹೋದ ಶಿವಕುಮಾರ ಸ್ವಾಮಿ ನಮ್ಮ ನಡುವೆಯೇ ಇದ್ದ ಅತ್ಯದ್ಭುತ ಚೇತನ. ಶರಣರು ಲೋಕದಂತೆ ಬಾರರು, ಲೋಕದಂತೆ ಇಪ್ಪರು ನೋಡಯ್ಯ ಎಂಬಂತೆ ಅನುದಿನವೂ ಲಿಂಗಪೂಜೆ ದಾಸೋಹವನ್ನೇ ನೆನೆದು ಜೀವಿಸಿದರು.

ಜಾತಿ ಜಂಜಡಗಳ ಬೇಲಿಯನ್ನು ಕಿತ್ತೆಸೆದು ಹಸಿವಿಗೆ ಅನ್ನವಿಕ್ಕಿ ನಿಜ ದಾಸೋಹಿಯಾದರು. ಬಸವಣ್ಣನವರ ವಿಚಾರಗಳನ್ನು ಕೇವಲ ಮಾತನಾಡಲಿಲ್ಲ. ಅವನ್ನು ಚಾಲ್ತಿಗೆ ತಂದರು. ಬಸವನೆಂದರೆ ಶಕ್ತಿ , ಬಸವನೆಂದರೆ ಕರ್ಮಠತನದಿಂದ ವಿಮೋಚನೆ ಎಂಬುದು ಗೊತ್ತು. ಆದ್ದರಿಂದಲೇ ಸದಾ ಬಸವನ ಸ್ಮರಣೆ ಮರೆಯಬಾರದೆಂದು ಬಸವನ ಸ್ಮರಣೆಯಲ್ಲಿ ಕಾಲ ಕಳೆಯ ಬಯಸಿದರು. ಬಸವಣ್ಣನವರ ಕುರಿತು ಎಲ್ಲಾದರೂ ನಾಟಕ ನಡೆಯುತ್ತದೆ ಎಂದರೆ ಸಾಕು, ಎದ್ದು ನಡೆದು ಬಿಡುವವರು. ಸರಳತೆ, ಸಂಪನ್ನ ಗುಣ, ಸದ್ವಿವೇಕ ಎಲ್ಲವೂ ಶರಣರ ವಿಚಾರ ಧಾರೆಯೆ ಮೈವೆತ್ತು ನಿಂತಂತೆ.

ಬರೀ ಬಚ್ಚ ಬರಿಯ ಶಿವಣ್ಣ ಶಿವಕುಮಾರ ಸ್ವಾಮಿಯಾಗಲು ಬಸವಣ್ಣನವರ ಚಿಂತನೆಯಿಂದ ಮಾತ್ರ ಸಾಧ್ಯ ಎಂಬುದನ್ನು ಖಚಿತ ಪಡಿಸಿದವರು.ಆದರೂ ವೈದಿಕರ, ಜೇಡಬಲೆಯನ್ನು ಸಂಪೂರ್ಣ ಕತ್ತರಿಸಿ ನಿಲ್ಲಲಾಗಲಿಲ್ಲ. ಬಹುಶಃ ಶಿವಕುಮಾರ ಸ್ವಾಮೀಜಿಗಳ ಇತಿ ಮಿತಿಯೋ ಅಥವಾ ನಮ್ಮ ದಾಸೋಹ ತತ್ವದ ನಡುವೆ ಅದೊಂದು ಉಸಿರಾಡಲಿ ಎಂಬ ನಿರ್ಲಕ್ಷ್ಯಭಾವವೋ ಏನೋ !?

ಕೇಡ ನುಡಿಯದ, ಕೇಡ ನಡೆಯದ ಬದುಕು. ಸಂಪೂರ್ಣ ಶರಣ ತತ್ವ ಮೈವೆತ್ತು ಬಂದಂತೆ. ಬಾಗಿದ ದೇಹ, ಮುಗಿದ ಕೈ. ಮನಸ್ಸು ಮಾಗಿದಂತೆ ದೇಹವೂ ಸಹಕರಿಸಿತು. ದೇಹಕ್ಕೆ ವಯಸ್ಸಾದರೂ ಇಷ್ಟಲಿಂಗ ಪೂಜೆಯ ಮರೆವು ಉಂಟಾಗಲೇ ಇಲ್ಲ. ಲಿಂಗಧ್ಯಾನವೇ ಜಂಗಮ(ಸಮಾಜ) ಧ್ಯಾನ ಎಂಬ ವಿವೇಕ. ಜಂಗಮದೊಳಗೆ ದೇವನಿದ್ದಾನೆ ಎಂಬ ಖಚಿತತೆ.

ಎಲ್ಲರೂ ನಡೆವೆಣ ನುಡಿವೆಣಗಳಾಗಿದ್ದಾಗ ನಡೆದಾಡುವ ಶರಣರಾಗಿದ್ದಿರಿ. ಹನ್ನರಡನೆಯ ಶತಮಾನದ ಚರಿತ್ರೆ ನಮ್ಮ ಕಣ್ಮುಂದೆಯೆ ನಡೆದಾಡಿ ಹೋಯ್ತು. ಎಂಥ ಅಚ್ಚರಿಯ ಬದುಕು ನಿಮ್ಮದು ?

ಅದೇಕೋ ಗೊತ್ತಿಲ್ಲ ! ನನ್ನಂಥವರಿಗೆ ಈಗಲೂ ಸೋಜಿಗ. ಹಲವು ಪಟ್ಟಭದ್ರ ಶಕ್ತಿಗಳು, ಸನಾತನಿಗಳು ನಿಮ್ಮ ಸುತ್ತ ಮುತ್ತಲೆ ಪೇರಿ ಹೊಡೆದವು. ನಿಮ್ಮನ್ನು ಮುಂದಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಂಡವು. ತಾವು ಕೊನೆಗೆ ಕರಗಿ ಕರಗಿ ಪಂಚಭೂತಗಳಲ್ಲಿ ಲೀನವಾದಾಗ ವಚನಗಳು ನಿಶ್ಚಲವಾಗಿ ನಿಲ್ಲುವಂತೆ ಆರ್ಭಟಿಸಿವು. ತಮಟೆ ಸದ್ದಿನೊಂದಿಗೆ ಓಡಾಡಿದವು. ಈ ಗುಂಗಿ ಹುಳುಗಳು ರಮರಾಡಿ ಎಬ್ಬಿಸಿದವು. ಇದಕ್ಕೆ ಕಾರಣ ತಾವು ಪ್ರೋತ್ಸಾಹಿಸಿದ ಸಂಸ್ಕೃತ ಪಾಠಶಾಲೆಗಳು. ತಾವು ನಂಬಿಕೊಂಡ ವಚನಗಳ ಪಾಠ ಶಾಲೆ ತೆರೆದಿದ್ದರೆ ಇಡೀ ರಾಜ್ಯದ ವಿವೇಕದ ಕಣ್ಣನ್ನು ತೆರೆಯಲು ಸಾಧ್ಯವಿತ್ತು. ಆದರೆ ಆ ಕಾಲಘಟದ ಅನಿವಾರ್ಯಕ್ಕಾಗಿ ಅದನ್ನು ತಾವು ಮುಂದುವರೆಸಿರಬಹುದು. ಇದು ನಮಗೆ ಮುಳುವಾಗಲಿದೆ ಎಂಬುದು ತಮಗೆ ಅರ್ಥವಾಗದಿರುವುದು ದುರಂತ.

ಒಂದೆರಡು ಕಪ್ಪು ಚುಕ್ಕೆಗಳ ನಡುವೆಯೂ ಅತ್ಯದ್ಭುತ ಶರಣ ಬೆಳಕು ಎಂಬುದರಲ್ಲಿ ಎರಡು ಮಾತಿಲ್ಲ. ನೀವು ನಡೆದ ದಾರಿ ಅದು ಬರೀ ದಾರಿಯಲ್ಲ ಅದು ನಮಗೆಲ್ಲ ರಾಜಮಾರ್ಗ. ಅರಿವಿನ ದಾರಿ.

ಹಸಿದವರಿಗೆ ಮೊದಲು ಅನ್ನ ನಂತರ ಅಕ್ಷರ ಎಂಬ ಅರಿವು ಮೂಡಿಸಿ ಮರೆಯಾದ ಅಲ್ಲಲ್ಲ, ನಮ್ಮೆಲ್ಲರೊಳಗೆ ಬೆರೆತು ಹೋದ ಧೀಶಕ್ತಿ ತಾವು. ತಮ್ಮೊಳಗಿನ ಶರಣ ಚೇತನಕ್ಕೆ ನೂರು ಶರಣು. ನಿಮ್ಮ ನೆ‌ನಹಾದಾಗಲೇ ಉದಯ. ನಿಮ್ಮ ಮರಹಾದಾಗಲೇ ಅಸ್ತಮಾನ. ನಿಮ್ಮ ನೆನಹವೇ ಜೀವನ.

೦ ವಿಶ್ವಾರಾಧ್ಯ ಸತ್ಯಂಪೇಟೆ

Leave a Reply

Your email address will not be published. Required fields are marked *

error: Content is protected !!