ಸಂದರ್ಭ ಒದಗಿ ಬಂದರೆ ಎಲ್ಲರೂ ಕಳ್ಳರೆ !

ಸಂದರ್ಭ ಒದಗಿ ಬಂದರೆ ಎಲ್ಲರೂ ಕಳ್ಳರೆ !

ಹರಿಯ ನುಂಗಿತ್ತು ಮಾಯೆ,
ಅಜನ ನುಂಗಿತ್ತು ಮಾಯೆ,
ಇಂದ್ರನ ನುಂಗಿತ್ತು ಮಾಯೆ,
ಚಂದ್ರನ ನುಂಗಿತ್ತು ಮಾಯೆ,
ಮಾಯೆ ಬಲ್ಲೆನೆಂಬ ಬಲುಗೈಯರ ನುಂಗಿತ್ತು ಮಾಯೆ
ಅರಿಯೆನೆಂಬ ಅಜ್ಞಾನಿಗಳ ನುಂಗಿತ್ತು ಮಾಯೆ
ಈರೇಳು ಭುವನವನಾರಡಿಗೊಂಡಿತ್ತು ಮಾಯೆ
ಚೆನ್ನಮಲ್ಲಿಕಾರ್ಜುನಯ್ಯಾ ಎನ್ನ ಮಾಯವ ಮಾಣಿಸಾ ಕರುಣಿ.

ಹನ್ನೆರಡನೆಯ ಶತಮಾನದ ಶರಣರು ವಾಸ್ತವವಾದಿಗಳು. ಪುರಾಣದ ಭ್ರಾಮಕ ಕಲ್ಪನೆಯನ್ನು ಹೇಳಿದವರಲ್ಲ. ವೇದ ಶಾಸ್ತ್ರಗಳು ಹೇಳುವ ಒಣ ತೌಡನ್ನು ಕುಟ್ಟಿದರೂ ಅಲ್ಲ. ಜನ ಮಾನಸದಲ್ಲಿನ ತವಕ ಸಂಕಟ ತಲ್ಲಣಗಳಿಗೆ ಕಿವಿಯಾದವರು. ಪ್ರತಿಯೊಬ್ಬ ವ್ಯಕ್ತಿಯ ಒಳ ಮನಸ್ಸಿನಲ್ಲಿ ನಡೆಯುವ ತಾಕಲಾಟಗಳನ್ನು, ಬಯಕೆಗಳನ್ನು, ಆಸೆಗಳನ್ನು, ಎಲ್ಲರೆದುರು ಹೇಳಿ ಬತ್ತಲುಗೊಳಿಸಿದವರು. ಮಾಯೆ ಎಂದರೆ ಕೇವಲ ಹೆಣ್ಣ ಮಾತ್ರವಲ್ಲ ಎಂಬುದನ್ನು ಹಲವಾರು ಸಲ ಶರಣರು ಸ್ಪಷ್ಟವಾಗಿ ಹೇಳುತ್ತಾರೆ. ಹೆಣ್ಣಿಗೆ ಗಂಡು ಗಂಡಿಗೆ ಹೆಣ್ಣು ಮಾಯೆಯಾಗಿ ಕಾಡುವುದು ಸಹಜ.

ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆ ಎಂಬರು, ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆ ಎಂಬರು, ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಸೆಯೆ ಮಾಯೆ ಕಾಣಾ ಗುಹೇಶ್ವರ.

ಅರ್ಧಮರ್ಧ ತಿಳಿದ ಪಂಡಿತವರ್ಯರು ಹೆಣ್ಣು ಹೊನ್ನು ಮಣ್ಣು ಮಾಯೆ ಎಂದರು. ಆದರೆ ಶರಣರು ಅದನ್ನು ಸಾರಾಸಗಟಾಗಿ ತಿರಸ್ಕರಿಸಿ ಮನದ ಮುಂದಣ ಆಸೆಯೆ ಮಾಯೆ ಎಂದರು. ನಿಜ ಇಂದು ನಾವೆಲ್ಲರೂ ನಮ್ಮದಲ್ಲದ, ನಮಗೆ ಸಂಬಂಧವೇ ಇರದ ವಸ್ತು, ವ್ಯಕ್ತಿಗಳಿಗಾಗಿ ಆಸೆ ಮಾಡಿ ಆ ಮಾಯೆಯ ಬಲೆಯಲ್ಲಿ ಬಿದ್ದು ಒದ್ದಾಡುತ್ತೇವೆ. ಪರವಧುವನ್ನು ಮಹಾದೇವಿ ಎಂಬೆ ಎಂಬ ಶರಣರ ನುಡಿಗಡಣ ನಮಗೆ ಕೀಲಾಗಿ ಇದ್ದರೆ ಖಂಡಿತವಾಗಿಯೂ ಹೆಣ್ಣಿನ ಬಲೆಗೆ ಗಂಡು, ಗಂಡಿನ ಬಲೆಗೆ ಹೆಣ್ಣು ಬಿದ್ದು ಒದ್ದಾಡುವ ಪ್ರಸಂಗವೇ ಇರುತ್ತಿರಲಿಲ್ಲ.

ಹೆಣ್ಣು ಹೊನ್ನು ಮಣ್ಣು ಬಿಟ್ಟು ಭೈರಾಗಿಯಾಗಿ ಇರಬೇಕೆಂದು ಶರಣರು ಎಲ್ಲಿಯೂ ಹೇಳಿಲ್ಲ. ಸಂಸಾರ ಹೇಯವೆಂದು ಹೇಳಿ ಜಗತ್ತನ್ನು ಮಿಥ್ಯೆ ಮಾಯೆ ಎಂಬ ಅವಾಸ್ತವ ಸಂಗತಿಯನ್ನು ತಿಳಿಸಲಿಲ್ಲ. ‘ಶಿವನೊಲಿಸಬಂದ ಪ್ರಸಾದ ಕಾಯವನ್ನು ಸವೆಯೆ ಬಳಸ’ಬೇಕೆಂದು ಹೇಳಿದ್ದಾರೆ. ಕೊಟ್ಟಿರುವ ಕುದುರೆಯನ್ನು ಧೀರನಾಗಿ ಏರಿ ಸವಾರಿ ಮಾಡಬೇಕೆಂದು ಶರಣರ ಮನದ ಇಚ್ಛೆಯಾಗಿತ್ತು. ವಿಜ್ಞಾನದ ಇಂದಿನ ಜಗತ್ತು ಶರಣರ ಮಾತನ್ನು ನಿರಾಕರಿಸುವುದಿಲ್ಲ. ‘ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎನ್ನುತ್ತಾರೆ. ‘ಸತಿಪತಿ ರತಿಸುಖ ಬಿಟ್ಟರೆ ಸಿರಿಯಾಳ ಚಂಗಳೆ !’ ಎಂದು ಕೇಳುವ ಮೂಲಕ ಇತಿಹಾಸದ ಉದಾಹರಣೆಯನ್ನು ನಮ್ಮ ಮುಂದಿಟ್ಟು ಸಿರಿಯಾಳ ಚಂಗಳೆ ಮದುವೆಯಾಗಿಯೂ ಭಕ್ತಿಂನ್ನು ಜಗತ್ತಿಗೆ ತೋರಿಸಿಕೊಟ್ಟವರು ಎಂದು ನಿರೂಪಿಸುತ್ತಾರೆ. “ಉಣಲೆಂದು ಬಂದ ಸುಖ ಉಂಡಲ್ಲದೆ ಹರಿಯದು. ಕಾಣಲೆಂದು ಬಂದ ಸುಖ ಕಂಡಲ್ಲದೆ ಹರಿಯದು” ಎನ್ನುತ್ತಾರೆ ಅಕ್ಕಮಹಾದೇವಿ ತಾಯಿ.

ಹೆಣ್ಣು ಹೊನ್ನು ಮಣ್ಣು ಬಿಟ್ಟು ಬ್ರಹ್ಮಚಾರಿಗಳಾಗಬೇಕೆಂದು
ಬಣ್ಣವಿಟ್ಟು ನುಡಿವ ಅಣ್ಣಗಳ ಪರಿಯ ನೋಡಿರೋ.
ಹೆಣ್ಣ ಬಿಟ್ಟಡೆಯೂ ಹೊನ್ನ ಬಿಡರಿ. ಹೊನ್ನ ಬಿಟ್ಟಡಯೂ ಮಣ್ಣ ಬಿಡರಿ.
ಒಂದ ಬಿಟ್ಟಡೆಯೂ ಒಂದ ಬಿಡರಿ. ಬ್ರಹ್ಮಚಾರಿಗಳೆಂತಪ್ಪಿರಿ ? ಹೇಳಿರಣ್ಣಾ ?
ಹೆಣ್ಣ ಬಿಟ್ಟು ಬರಹ್ಮಚಾರಿಗಳಾಗಬೇಕೆಂದು, ಅವರೆಂತು ಹೇಳಿದರು ?
ನೀವೆಂತು ಕೇಳಿದಿರಿ ? ಹೆಣ್ಣನು ಹೆಣ್ಣೆಂದರಿವಿರಿ.
ಹೊನ್ನನು ಹೊನ್ನೆಂದರಿವಿರಿ. ಮಣ್ಣನು ಮಣ್ಣೆಂದರಿವಿರಿ.
ಬ್ರಹ್ಮಚಾರಿಗಳೆಂತಪ್ಪಿರಣ್ಣಾ ?
ಬಿಟ್ಟಡೆ, ಹೆಣ್ಣು ಹೊನ್ನು ಮಣ್ಣು ಈ ಮೂರನು ಬಿಟ್ಟು ಜ್ಞಾನದಲ್ಲಿ
ಸುಳಿಯಬಲ್ಲಡೆ, ಭವಂ ನಾಸ್ತಿ ತಪ್ಪದು.
ಹಿಡಿದಡೆ ಹೆಣ್ಣು ಮಣ್ಣು ಹೊನ್ನು ಈ ಮೂರನು ಹಿಡಿದು,
ಸದ್ಭಕ್ತಿಯಿಂದ ದಾಸೋಹವ ಮಾಡಲ್ಲಡೆ ಭವಂ ನಾಸ್ತಿ ತಪ್ಪದು.
ಅಲ್ಲಿ ಇದ್ದಡೆಯೂ ನೀರ ತಾವರೆಯಂತಿಪ್ಪರು, ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರ ನಿಮ್ಮ ಶರಣರು.

ಜಗತ್ತಿನಲ್ಲಿ ಹೆಣ್ಣು ಹೊನ್ನು ಮಣ್ಣು ಮೂರು ಇವೆ. ಇವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆ ಹೊರತು. ವಿರಕ್ತಿಯನ್ನು ಹೊಂದಿದ್ದೇವೆ ಎಂದು ಹೇಳವವರು ಒಳಗೊಳಗೆ ಅವನ್ನು ಅಪೇಕ್ಷಿಸುವುದನ್ನು ಶರಣರು ಹೀಗಳೆಯುತ್ತಾರೆ. ಹೆಣ್ಣು ಬಿಟ್ಟೆವೆಂದು ಬಣ್ಣವಿಟ್ಟು ನುಡಿಯುವ ಅಣ್ಣಗಳೆ, ಮಣ್ಣಿನಲ್ಲಿ, ಹೊನ್ನಿನಲ್ಲಿ ಆಸೆ ಇಡುತ್ತೀರಲ್ಲವೆ ? ಎಂದು ಅವರ ಒಳ ಮನಸ್ಸಿನ ಹೊಯ್ದಾಟವನ್ನು ಬಿಚ್ಚಿ ಇಡುತ್ತಾರೆ. ಹೆಣ್ಣು ಹೊನ್ನು ಮಣ್ಣು ಈ ಮೂರು ಇಟ್ಟುಕೊಂಡೆ ಜೀವನವನ್ನು ಸಾಗಿಸಬೇಕಿದೆ. ತಾವರೆ ಎಲೆ ನೀರಿನಲ್ಲಿಯೆ ಇರುತ್ತದೆ. ನೀರಿನಲ್ಲಿಯೇ ಹುಟ್ಟುತ್ತದೆ. ಆ ನೀರಿನ ನಡುವೆಯೆ ಇರುವ ತಾವರೆ ನೀರಿನ ಒಂದು ಹನಿಯನ್ನೂ ಹಚ್ಚಿಕೊಂಡಿರುವುದಿಲ್ಲ. ನೀರ ಹನಿ ಅದಕ್ಕೆ ತಗುಲಲು ಸಾಧ್ಯವೂ ಇಲ್ಲ. ಸಂಸಾರವೆಂಬ ಸಾಗರದಲ್ಲಿ ಇದ್ದರೂ ಸಹ ಬಯಕೆಗಳನ್ನು ಪೂರೈಸಿಕೊಳ್ಳಬೇಕು. ಆದರೆ ಆ ಬಯಕೆಗಳಿಗೆ ಸಮಾಜದ ಒಪ್ಪಿಗೆ ಇರಬೇಕು. ಆಕ್ಷೇಪ ಇರಬಾರದು. ಜನರ ಆಕ್ಷೇಪಕ್ಕೆ ಗುರಿಯಾದ ಬಯಕÉ ಸಮಾಜ ತಿರಸ್ಕರಿಸುತ್ತದೆ.

ಮನುಷ್ಯನೂ ಒಂದು ಪ್ರಾಣಿ. ಸಹಜವಾಗಿ ಪ್ರತಿ ಮನುಷ್ಯನಲ್ಲೂ ಕ್ರೌರ್ಯ, ವಂಚನೆ,ಮೋಸ, ಸ್ವಾರ್ಥ ಅಡಗಿ ಕುಳಿತಿವೆ. ಸಮಾಜ ರೂಪಿಸಿಕೊಂಡ ವ್ಯವಸ್ಥೆ ಇಲ್ಲದೆ ಹೋಗಿದ್ದರೆ ನಾವೆಲ್ಲ ಕಾಡು ಪ್ರಾಣಿಗಳಿಗಿಂತಲೂ ಸ್ವೇಚ್ಛೆಯಿಂದ ಜೀವನ ಸಾಗಿಸುತ್ತಿದ್ದೆವು. ನಾವು ನಮಗಾಗಿ ರೂಪಿಸಿಕೊಂಡ ಕಟ್ಟು ಕಟ್ಟಳೆಗಳು ಇದ್ದರೂ ಸಹ ಮನಸ್ಸಿನಲ್ಲಿಯೆ ಮಂಡಿಗೆ ತಿನ್ನುತ್ತಿದ್ದೇವೆ. ಆಸೆಯೆಂಬ ಮಾಯೆಯ ಬಲೆಗೆ ಬಿದ್ದವರು ನಮ್ಮದಲ್ಲದ ಹೆಣ್ಣ(ಗಂಡ)ನ್ನು, ಹೊನ್ನು, ಮಣ್ಣು ಬಯಸಿ ಫಜೀತಿಗೆ ಗುರಿಯಾದ ಹಲವಾರು ಪ್ರಸಂಗಗಳನ್ನು ನಾವಿಂದು ಕಾಣುತ್ತಿದ್ದೇವೆ. ಕೆಲವರು ಬಟಾ ಬಯಲಾಗಿದ್ದಾರೆ. ಇನ್ನು ಹಲವರು ಬಟಾ ಬಯಲಾಗದೆ ಗುಟ್ಟಾಗಿ ಹೆಣ್ಣು ಮಣ್ಣು ಹೊನ್ನನ್ನು ಅನುಭವಿಸುತ್ತಿದ್ದಾರೆ.

ಹೆಣ್ಣಾಗಲಿ-ಗಂಡಾಗಲಿ ಅವರ ಮನಸ್ಸಿನೊಳಗೆ ಆಸೆ ಇರುವುದು ಸಹಜ. ನಟ್ಟ ನಡುರಾತ್ರಿ ಮಹಿಳೆಯೊಬ್ಬಳು ತಿರುಗಾಡುವಂತಹ ಮುಕ್ತ ವಾತಾವರಣ ಬಯಸಿದ್ದ ಮಹಾತ್ಮ ಗಾಂಧೀಜಿಯೂ ಸಹ ಮನಸ್ಸಿನಲ್ಲಿ ವ್ಯಭಿಚಾರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಮಹಾತ್ಮ ಬುದ್ಧ ಸಂಸಾರವನ್ನು ಅನುಭವಿಸಿ ನಂತರ ಆಸೆಯೆ ದುಃಖಕ್ಕೆ ಮೂಲ ಎಂದು ಅದರಿಂದ ಹೊರ ಬಂದರು. ಭರತ ಬಾಹುಬಲಿ ಸಹೋದರರು ಹೊನ್ನಿನ ಹಿಂದೆ ಬಿದ್ದು ಸತ್ಯ ಅರ್ಥವಾದಾಗ ಬಾಹುಬಲಿ ದಿಗಂಬರವಾಗಿ ನಿಲ್ಲುತ್ತಾರೆ. ಅಕ್ಕಮಹಾದೇವಿ ತಾಯಿ ಕಾಮವೇ ನೀನು ನಿಲ್ಲು ನಿಲ್ಲು. ಕ್ರೋಧವೇ ನೀನು ನಿಲ್ಲು ನಿಲ್ಲು. ಮೋಹವೇ ನೀನು ನಿಲ್ಲು ನಿಲ್ಲು ಎಂದು ಹೊರಡುತ್ತಾಳೆ. ಕಾಮ ಕ್ರೋಧ ಮೋಹ ಮದ ಮತ್ಸರಗಳ ಆರ್ಭಟವೆ ಅಂಥದ್ದು. ಬಸವಣ್ಣನವರಂತೂ ಪಶುವೇನ ಬಲ್ಲುದು ಹಸಿರೆಂದೆಳೆಸುವುದು. ಸುಬುದ್ಧಿಯೆಂಬ ಉದಕವನೆರೆದು ಸಲಹು. ತುಡುಗುಣಿ ಎಂದು ಹಿಡಿದು ಒಡೆಯ ನಿಮ್ಮ ಬಯ್ಯದ ಮುನ್ನ ಕಾಪಾಡು ಎಂದು ಅಲವತ್ತುಕೊಳ್ಳುತ್ತಾರೆ. ಎನ್ನಲ್ಲಿಯೂ ಡಂಬು ಡಳಹುಗಳಿವೆ ಎಂದು ಸಾರ್ವಜನಿಕವಾಗಿಯೆ ಹೇಳಿಕೊಂಡಿದ್ದಾರೆ. ಮನಸ್ಸು ಚಂಚಲಗೊಳಿಸುವ ವಸ್ತು ಎದುರಿಗೆ ಇದ್ದರೂ ಯಾರ ಮನಸ್ಸು ಚಂಚಲತೆಗೆ ಒಳಗಾಗುವುದಿಲ್ಲವೋ ಅವರೇ ಧೀರರು ಎಂದು ಹೇಳಿದ್ದಾರೆ. ಆದರೆ ಆ ಧೀರರು ಇಂದು ಯಾರಾದರೂ ಇದ್ದಾರೆಯೆ ?

ಬಹುತೇಕ ಎಲ್ಲರೂ ಅವಕಾಶವಾದಿಗಳೆ ಆಗಿದ್ದೇವೆ. ಸಮಯ ಸಂದರ್ಭ ಒದಗಿ ಬಂದರೆ ಎಲ್ಲರೂ ಕಳ್ಳರೆ. ಮನವರಿಯದ ಕಳ್ಳತನವಿಲ್ಲ ಎನ್ನುವಂತೆ ನಮಗೆ ನಾವೇ ಕೇಳಿಕೊಳ್ಳಬೇಕು.

ಲಂಚ ವಂಚನೆಗೆ ಕೈಯಾನದ ಭಾಷೆ.
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದಡೆ
ನಾನು ಕೈ ಮುಟ್ಟಿ ಎತ್ತಿದೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ಅದೇನು ಕಾಣವೆಂದರೆ, ನೀವಿಕ್ಕಿದ ಭಿಕ್ಷೆದಲ್ಲಿಪ್ಪೆನಾಗಿ
ಇಂತಲ್ಲದೆ ನಾನು ಅಳಿ ಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದಡೆ ನೀನಾಗಲೆ
ಎನ್ನ ನರಕದಲ್ಲಿ ಅದ್ದಿ ನೀನೆದ್ದು ಹೋಗಾ ಶಂಭು ಜಕ್ಕೇಶ್ವರಾ

ಶರಣೆ ಸತ್ಯಕ್ಕಳ ಮಾತು ನಮಗೆ ಆದರ್ಶವಾದಾಗ ಸಹಜವಾಗಿ ಬೇರೆಯವರ ಹೊನ್ನು ಕೈ ಎತ್ತಿ ಮುಟ್ಟಲು ಸಾಧ್ಯವಾಗುವುದಿಲ್ಲ. ಸರಕಾರದಲ್ಲಿರುವ ಅಧಿಕಾರಿಗಳಿಗೆ – ರಾಜಕಾರಣಿಗಳಿಗೆ -ಮಠಾಧೀಶರು ಸಾರ್ವಜನಿಕವಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಈ ರೀತಿಯ ಪ್ರತಿಜ್ಞೆ ಮಾಡಿ ಅದರಂತೆ ನಡೆಯುವ ನೀತಿಗಳನ್ನು ರೂಪಿಸಿದರೆ ಸಾರ್ವಜನಿಕ ಬದುಕು ಆದರ್ಶಪ್ರಾಯವಾಗುವುದರಲ್ಲಿ ಅನುಮಾನವಿಲ್ಲ. ಪರಧನ ಪರಸ್ತ್ರೀ ಪರರ ಭೂಮಿ ನನ್ನದಲ್ಲ ಎಂಬ ಪರಿಕಲ್ಪನೆ ಜನರಲ್ಲಿ ಮೂಡಿದರೆ ಕಾನೂನು ಕಟ್ಟಳೆಗಳ ಅವಶ್ಯಕತೆ ಇರುವುದಿಲ್ಲ. ಹನ್ನೆರಡನೆಯ ಶತಮಾನದ ಶರಣರ ವಚನಗಳು ಮನುಷ್ಯರ ಬದುಕಿನ ಕೀಲುಗಳಾಗಿ ಇದ್ದರೆ ಸಹಜವಾಗಿ ಆ ಬಂಡಿ ಒಗ್ಗಾಲಿ ಆಗಲಾರದು. ವಾಟ ಮುರಿಯಲಾರದು. ಎತ್ತ ನೊಗ ಒಗೆದು ಅಸಹಾಯ ಕತೆಯಿಂದ ನಿಲ್ಲಲಾರವು. ಮೌಲ್ಯಗಳನ್ನು ಗಾಳಿಗೆ ತೂರಿ ಅಪಮೌಲ್ಯವೇ ನಮ್ಮ ಹೆದ್ದಾರಿ ಎಂದು ಹೊರಟಾಗ ಸಹಜವಾಗಿ ವ್ಯಕ್ತಿತ್ವ ಕುಸಿದು ಪಾತಾಳಕ್ಕೆ ಬೀಳುತ್ತದೆ.

ಹರಿವ ಹಾವಿಂಗಂಜೆ, ಉರಿಯ ನಾಲಗೆಗಂಜೆ
ಸುರಗಿಯ ಮೊನೆಗಂಜೆ, ಒಂದಕ್ಕಂಜುವೆ
ಒಂದಕ್ಕಳುಕುವೆ. ಪರಸ್ತ್ರೀ ಎಂಬ ಜೂಬಿಂಗಂಜುವೆ
ಮುನ್ನಂಜದ ರಾವಳನೇ ವಿಧಿಯಾದ
ಅಂಜುವೆನಯ್ಯಾ, ಕೂಡಲಸಂಗಮದೇವಾ

ವಿಷ ತುಂಬಿರುವ ಹಾವಿಗೆ, ಬೆಂಕಿಯ ಕೆನ್ನಾಲಿಗೆಗೆ, ಸುರಗಿಯ ಚೂಪಾದ ಮೊನೆಗೂ ಅಂಜದ ಬಸವಣ್ಣನವರು ಪರಸ್ತ್ರೀಗೆ ಅಂಜುತ್ತೇನೆ ಎನ್ನುತ್ತಾರೆ. ಒಂದು ವೇಳೆ ಪರಸ್ತ್ರೀ ಎಂಬ ಜೂಜಿಂಗೆ ಅಂಜದಿದ್ದರೆ ರಾವಳನ ಗತಿ ಏನಾಯಿತು ? ಎಂಬುದನ್ನು ನಮಗೆ ತಿಳಿಸುತ್ತಾರೆ.

0 ವಿಶ್ವಾರಾಧ್ಯ ಸತ್ಯಂಪೇಟೆ

4 thoughts on “ಸಂದರ್ಭ ಒದಗಿ ಬಂದರೆ ಎಲ್ಲರೂ ಕಳ್ಳರೆ !

  1. ಸತ್ಯ ಅಣ್ಣಾ..ಮನವರಿಯದ ಕಳ್ಳತನವಿಲ್ಲ.. ಹರಿಯುವ ಮನವನ್ನು ನಿಲ್ಲಿಸಿ ವಿವೇಕದಿಂದ ನಡೆದಾಗ ಸಮಾಜದಿಂದ ತಿರಸ್ಕರಿಸಿದ್ದು ವೈ ಸನ್ನಿವೇಶಗಳು ಜೀವನದಲ್ಲಿ ನಡೆಯುವುದಿಲ್ಲ..ಸಂಬಂಧಗಳ , ಪರಿಚಯವಾಗುವ ವರನ್ನು ಅಣ್ಣಾ, ಅಕ್ಕಾ,ಅವ್ವ,ತಂಗಿ, ಎಂದು ಊರ್ಧ್ವ ಭಾವ ಬೆಳೆಸಿಕೊಳ್ಳುತ್ತಾ ಹೋದಂತೆ ಆದರ್ಶ ವ್ಯಕ್ತಿತ್ವ ನಿಮ್ಮದಾಗುತ್ತದೆ.

  2. ಶರಣರೇ,
    ಪ್ರಸ್ತುತ ಸಂದರ್ಭಕ್ಕೆ ಹೋಲುವ ಒಂದು ವಚನ ” ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ ‘ ಹೆಚ್ಚು ಪ್ರಸ್ತುತ.

  3. ಸತ್ಯ ಸರ್.. ವಚನಗಳನ್ನು ನಮಗೆ ನಾವೇ ಕೊಟ್ಟುಕೊಂಡ ‘ವಚನ’ ಗಳೆಂಬಂತೆ ವಚನಬದ್ದರಾಗಿ ನಡೆದರೆ ವಂಚನೆಗಳೂ, ಆತ್ಮವಂಚನೆಗಳೂ ಇರುವುದೇ ಇಲ್ಲ.

  4. ಸಮಾಜಕ್ಕೊಂದು ದಾರಿ ತೋರಿಸುವ ಲೇಖನ.
    ಲಿಂಗಾಯತದಲ್ಲಿ ಪ್ರತಿ ಸಮಸ್ಸೆಗೆ ಉತ್ತರವಿದೆ ಎಂಬ ಸಂದೇಶ. ಅದಕ್ಕಾಗಿ ನಮ್ಮ ಶರಣರು ಭ್ರಹ್ಮಚರ್ಯ್ ಬೋದಿಸಲಿಲ್ಲ. ಜಂಗಮರಿಗೂ ಹಾಕಲಿಲ್ಲ ಆ ಕಟ್ಟಳೆ.
    ಉನ್ನತ ಸ್ಥಾನದಲ್ಲಿದ್ದುಕೊಂಡು ಸಮಾಜಕ್ಕೆ ಕಣ್ಮಣಿಯಾಗ ಬೇಕಾದ ನಾಯಕರು ನೈತಿಕತೆ ಮರೆತರೆ, ಇಡೀ ಸಮಾಜ ಅದರ ಫಲ ಉಣ್ಣ ಬೇಕಾಗುತ್ತದೆ. ಅದಕ್ಕೆ ಉಧಾಹರಣೆ ಜನ ಗೋಕಾಕದಲ್ಲಿ ಬೀದಿಗೆ ಬಂದದ್ದು. ಅವರಿಗೆ ಅವರ ನಾಯಕನ ನೈತಿಕತೆ ಮುಖ್ಯವಲ್ಲ ಅವನೀಡುವ ಭಿಕ್ಷೆ ಮುಖ್ಯ.ದಿಕ್ಕಾರವಿರಲಿ .

Leave a Reply

Your email address will not be published. Required fields are marked *

error: Content is protected !!