ಕಾಳ ಬೆಳದಿಂಗಳು ಸಿರಿ ಸ್ಥಿರವಲ್ಲ

ಬಸವಣ್ಣನವರ ದೃಷ್ಟಿ ಎಂದಿಗೂ ಮೇಲ್ವರ್ಗದವರ, ಉಳ್ಳವರ, ರಾಜ ಮಹಾರಾಜರ ಪರವಾಗಿ ಇರಲಿಲ್ಲ. ಅವರ ನೋಟ ಕಾಳಜಿ ಪ್ರೀತಿ ಇದ್ದದ್ದು ತಳ ಸಮುದಾಯದ, ನಿರ್ಲಕ್ಷಿತ ಜನ ಸಾಮಾನ್ಯರ ಕಡೆಗೆ. ತಾನೊಂದು ದೇಶದ ಪ್ರಧಾನಿಯಾಗಿದ್ದರೂ ಅದರ ಪ್ರತಿಷ್ಠೆಯನ್ನು ತಮ್ಮ ತಲೆಯಲ್ಲಿ ಇಟ್ಟುಕೊಳ್ಳದೆ ಕಾಯಕ ಜೀವಿಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡು ಹೋದರು. ಅಪ್ಪಿ ತಪ್ಪಿಯೂ ಬಿಜ್ಜಳ ಮಹಾರಾಜ ನನ್ನನ್ನು ಪ್ರೀತಿಸುತ್ತಾನೆ. ನಾನು ಅವರನ್ನು ಗೌರವಿಸುತ್ತೇನೆ ಎಂದು ಹೇಳಲಿಲ್ಲ. ಬದಲಾಗಿ ವೇಳೆಯಾಳು ಆನು ಎನ್ನುವ ಮೂಲಕ ನಾನು ಅರಸ ಬಿಜ್ಜಳನಲ್ಲಿ ಜೋಳವಾಳಿಯಾನಲ್ಲ ಎಂದು ಸ್ಪಷ್ಟ ಪಡಿಸುತ್ತಾರೆ.

ರಾಜ ಪ್ರಭುತ್ವವೆಂದರೆ ಅದೇನು ಪ್ರಜಾಪ್ರಭುತ್ವದ ವ್ಯವಸ್ಥೆಯಂತ್ತಲ್ಲ. ತುರ್ತು ಪರಿಸ್ಥಿತಿಯೂ ಅಲ್ಲ. ಹತ್ತು ತುರ್ತು ಪರಿಸ್ಥಿತಿಗಳಿಗೆ ಸಮ ಒಂದು ರಾಜ ಪ್ರಭುತ್ವ. ರಾಜಶಾಹಿಯ ವಿರುದ್ಧ ಮಾತನಾಡುವುದೆಂದರೆ ಗಲ್ಲಿಗೆ ಏರಲು ಸಿದ್ಧವಾಗಿರಬೇಕೆಂದೆ ಅರ್ಥ. ಇಂಥ ಕಠಿಣ ಸಂದರ್ಭದಲ್ಲಿ ಬಸವಣ್ಣನವರು ರಾಜ ಬಿಜ್ಜಳ ವಿರುದ್ಧ ಮಾತನಾಡುವ ಸಲುಗೆಯನ್ನು ಹೊಂದಿದ್ದರು. ಬರೀ ಮಾತಲ್ಲ, ಅವರನ್ನು ಭವಿ ಬಿಜ್ಜಳ ಎಂದು ಕರೆದು ದಕ್ಕಿಸಿಕೊಂಡಿದ್ದರು. ಬಸವಣ್ಣನವರಷ್ಟೇ ಅಲ್ಲದೆ ಅಂದಿನ ಶರಣರು ಸಹ ಸಾಂದರ್ಭಿಕವಾಗಿ ಮಹಾರಾಜ ಬಿಜ್ಜಳನ ಗುಣ ನಡತೆಗಳನ್ನು ಟೀಕಿಸಿದ್ದನ್ನು ನಾವು ಕಾಣುತ್ತೇವೆ.

ಒಂದು ರಾಜ್ಯದ ಮುಖ್ಯನಾಗಿರುವ ರಾಜನನ್ನೂ ಟೀಕಿಸಿ ದಕ್ಕಿಸಿಕೊಳ್ಳುವ ಛಾತಿಯನ್ನು ಬಸವಣ್ಣನವರು ಅಂದಿನ ಶರಣರಿಗೆ ಒದಗಿಸಿಕೊಟ್ಟಿದ್ದರು. ಬಿಜ್ಜಳ ರಾಜನೂ ಸಹ ಶರಣರ ಸಾತ್ವಿಕ ಮನೋಭಾವದ ಟೀಕೆಗಳನ್ನು ಸಹಿಸಿಕೊಳ್ಳುವ ಸಹಿಷ್ಣುತಾ ಗುಣ ಹೊಂದಿರುವುದನ್ನು ನಾವು ನೋಡಬಹುದಾಗಿದೆ. ಇಲ್ಲದೆ ಹೋದರೆ ಕಿಲ್ಲೆ ಕಲ್ಲಾಣದಲ್ಲಿ ಬಸವಾದಿ ಶರಣರು ಅನುಭವ ಮಂಟಪ ಕಟ್ಟಿ ಅನುಭವ- ಅನುಭಾವದ ಮಾತುಗಳನ್ನು ಆಡಲು ಸಾಧ್ಯವೆ ಇರಲಿಲ್ಲ.

ವ್ಯಾಧನೊಂದು ಮೊಲನ ತಂದರೆ ಸಲುವ ಹಾಗಕ್ಕೆ ಬಿಲಿವರಯ್ಯಾ’
ನೆಲನಾಳ್ವನ ಹೆಣನೆಂದರೆ ಒಂದಡಕೆಗೆ ಕೊಂಬರಿಲ್ಲ

ಎಂಬ ಮಾತುಗಳ ಮೂಲಕ ವ್ಯಾಧ ಭೇಟೆಯಾಡಿ ತಂದ ಮೊಲಕ್ಕಿಂತಲೂ ಅರಸನ ಹೆಣವನ್ನು ಯಾರೂ ಮೂಸಿ ನೋಡುವವರಿಲ್ಲ. ಮೊಲಕ್ಕೆ ಇರುವ ಬೆಲೆ ಅರಸನಿಗೂ ಇಲ್ಲ. ಇಂದ್ರ ಚಂದ್ರ ವರುಣ ತಟ ಗಟಿತ ಮಣಿ ಮಕುಟ ಎಂದು ನೂರಾರು ಬಿರುದು ಬಾವಲಿಗಳಿಂದ ಕರೆಯಿಸಿಕೊಳ್ಳುತ್ತಿದ್ದ ಚಕ್ರಾಧಿಪತಿ ಬಿಜ್ಜಳನನ್ನು , ಬರೀ ಬಿಜ್ಜಳ ಎಂದೂ ಕರೆಯದೆ ಆತನ ಜೀವನವೂ ಮೊಲಕ್ಕಿಂತಲೂ ಕೀಳು ಎಂದು ಕರೆಯುವುದು ಸರಳ ಮಾತಲ್ಲ. ರಾಜಾ ಪ್ರತ್ಯಕ್ಷ ದೇವರು ಎನ್ನುವ ಭ್ರಮೆಯಲ್ಲಿ ಓಲಾಡುತ್ತಿರುವವ ಪೊಳ್ಳು ಪ್ರತಿಷ್ಠೆಗಳನ್ನು ಬಯಲು ಮಾಡುವುದು ಸುಲಭದ ಕೆಲಸವೇನಲ್ಲ. ಇಂಥ ಸಾಹಸದ ಕೆಲಸವನ್ನು ಬಸವಣ್ಣನವರು ಸತ್ಯವನ್ನು ಮೇಟಿಯಾಗಿಟ್ಟುಕೊಂಡು ಮಾಡಿದರು. ನೈತಿಕತೆ ಹಾಗೂ ಸತ್ಯ ಪ್ರತಿಪಾದನೆಗೆ ಬೇಕಾದ ಛಲವೊಂದಿದ್ದರೆ ಎಂಥ ರಾಜಶಾಹಿ ವ್ಯವಸ್ಥೆಯನ್ನೂ ಎದುರು ಹಾಕಿಕೊಂಡು ಜೀವಿಸಬಹುದು ಎಂಬುದನ್ನು ಬಸವಣ್ಣನವರು ನಮಗೆ ತೋರಿಸಿಕೊಟ್ಟಿದ್ದಾರೆ.

ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ
ಭಕ್ತರ ಮನೆಯ ತೊತ್ತಾಗಿಪ್ಪುದು ಕರ ಲೇಸಯ್ಯಾ
ತೌರೌ ಅಗ್ಘವಣಿ, ನೀಡೌ ಪತ್ರೆಯ, ಲಿಂಗಕ್ಕೆ ಬೋನವ
ಹಿಡಿಯೌ ಎಂಬರು.
ಕೂಡಲಸಂಗನ ಮಹಾ ಮನೆಯಲ್ಲು ಒಕ್ಕುದುನುಣ್ಣೌ ತೊತ್ತೆ ಎಂಬರು.

ಅರಸ ಅರಮನೆ ರಾಣಿ ಅಲ್ಲಿನ ಕಾವಲುಗರ ಮುಂತಾದ ಹೆಸರನ್ನು ಕೇಳುತ್ತಲೆ ನಮ್ಮ ಕಣ್ಣ ಮುಂದೆ ವೈಭವದ ಮೆರವಣಿಗೆ ಹೊರಡುತ್ತದೆ. ಸಂಭ್ರಮ, ಸಂತೋಷ ಉಕ್ಕಿ ಹರಿಯುವ ಚಿತ್ರಣ ಕಣ್ಣುಂದೆ ನಿಲ್ಲುತ್ತದೆ. ವಜ್ರ ವೈಢೂಂiÀರ್i,ಬೆಳ್ಳಿ ಬಂಗಾರ, ಸಿಂಹಾಸನ, ರಾಜನ ಒಡ್ಡೋಲಗ ಕಣ್ಣನ್ನು ಕೋರೈಸುತ್ತವೆ. ಅರಮನೆ ತುಂಬ ಸುಖ ಸೂರೆಯಾಡುವ ಚಿತ್ರಣವನ್ನು ಬಸವಣ್ಣನವರು ತಿರಸ್ಕರಿಸಿ ಇಂಥ ಇಂದ್ರನ ವೈಭೋಗದ ಅರಸನ ಮನೆಯ ಅರಸಿಯಾಗಿರಲೂ ಅವರು ಒಪ್ಪುತ್ತಿಲ್ಲ. ಅಲ್ಲಿ ಅರಸಿಯಾಗಿರುವುದೆಂದರೆ ಬಂಧನದೊಳಗೆ ಇದ್ದಂತೆ. ವೈಭವದ , ಸ್ವಾತಂತ್ರ್ಯವಿಲ್ಲದ ಬಂಧನಕ್ಕಿಂತ ಭಕ್ತರ ಮನೆಯ ಆಳಾಗಿರುವುದು ಸರಿಯೆಂದು ಹೇಳುವ ಮೂಲಕ ಶ್ರೀಮಂತಿಕೆ- ಅಧಿಕಾರಶಾಹಿಯ ವೈಭವವನ್ನು ಮೆಟ್ಟಿ ನಿಲ್ಲುವ ಮನಸ್ಥಿತಿ ಉಂಟು ಮಾಡುತ್ತಾರೆ. ಅಲ್ಲದೆ ಅರಸರಲ್ಲಿ ಸಂಗ್ರಹವಾದ ಹಣ, ವಜ್ರ, ವೈಢೂರ್ಯ, ಮುತ್ತು ,ರತ್ನ,ಬೆಳ್ಳಿ ಬಂಗಾರಕ್ಕೆ ಮೂಲಕ ಕಾರಣ ಆಯಾ ಅರಸರ ದೌರ್ಜನ್ಯದ ಸಂಕೇತ. ಯಾರೋ ಒಬ್ಬರಲ್ಲಿ ಮಾತ್ರ ಹೆಜ್ಜಿನ ಸಂಪತ್ತು ಸಂಗ್ರಹವಾಗಿದೆ ಎಂದರೆ, ಆತ ವೈಭವೊಪೇತವಾಗಿ ಬದುಕುತ್ತಿದ್ದಾನೆ ಎಂದರೆ ಅಲ್ಲಿ ಬಡವರ ಶೋಷಣೆ ನಡೆದಿದೆ. ಅವರಿಗೆ ಗೊತ್ತಾಗದಂತೆ ಅತ್ಯಾಚಾರ ನಡೆಯುತ್ತಿದೆ ಎಂದರ್ಥ. ಸಂಪತ್ತಿನ ಸಂಗ್ರಹಣೆಯಿಂದ ಸಹಜವಾಗಿ ಮನುಷ್ಯನಲ್ಲಿ ಅಹಂಕಾರ,ಸಿಟ್ಟು , ಸೆಡವು, ದಿಮ್ಮುಗಳು ತಲೆಯನ್ನು ಗರ್ರ ಎಂದು ತಿರುಗಿಸಬಲ್ಲವು. ಅವರು ಏನೇ ಹೇಳಿದರೂ, ಸಂಜ್ಞೆ ಮಾಡಿದರೂ ಅವು ಸಹಜ ನಡೆ ಆಗಿರುವುದಿಲ್ಲ. ಅವೆಲ್ಲವುಗಳ ಹಿಂದೆ ಅಹಂಕಾರ ಸೊಕ್ಕಿದ ಆನೆಯಂತೆ ಹೋಂಕರಿಸುತ್ತಿರುತ್ತದೆ.

ಹಾವು ತಿಂದವರ ನುಡಿಸಬಹುದು
ಗರ ಹೊಡೆದವರ ನುಡಿಸಬಹುದು.
ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ
ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರಯ್ಯಾ
ಕೂಡಲಸಂಗಮದೇವಾ

ಸಿರಿತನ ಬಂದಾಗ ಸಹಜವಾಗಿ ಮನುಷ್ಯನ ತಲೆ ದೇಹದ ಮೇಲೆ ಇರುವುದಿಲ್ಲ. ಅದು ಎಲ್ಲೆಲ್ಲೋ ಓಲಾಡುತ್ತಿರುತ್ತದೆ. ವಾಸ್ತವವನ್ನು ಮರೆಮಾಚಿ ಕಣ್ಣ ತುಂಬ ಕತ್ತಲನ್ನು ತುಂಬಿ ಬಿಡುತ್ತದೆ. ಸತ್ಯ ಉರುಲು ಹಾಕಿಕೊಂಡು ಅಸತ್ಯವೇ ಸತ್ಯವೆಂದು ಕುಣಿಯುತ್ತಿರುತ್ತದೆ. ಕುರುಡು ಕಾಂಚಾಣ ಕುಣಿಯಲು ಶುರು ಮಾಡಿತೆಂದರೆ ಕಾಲಿಗೆ ಬಿದ್ದವರನ್ನು ತಕಥೈ ಎಂದು ಕುಣಿಸಲು ತೊಡಗಿಸುತ್ತದೆ. ಹಾವಿನಿಂದ ಕಚ್ಚಿಸಿಕೊಂಡವರನ್ನೂ ಮಾತನಾಡಿಸಬಹುದು. ಮೂರ್ಛೆ ಹೋದವರನ್ನೂ ಮಾತನಾಡಿಸಬಹುದು. ಆದರೆ ಸಿರಿಗರ ಹೊಡೆದ ಯಾರನ್ನೂ ಮಾತನಾಡಿಸಲು ಸಾಧ್ಯವಿಲ್ಲ. ಶ್ರೀಮಂತಿಕೆಯ ವಿಷ ಏರಿದವರಿಗೆ ಬಡವನಾಗಲಿ, ಸತ್ಯವಾಗಲಿ, ಆತ್ಮೀಯ ಭಾವವಾಗಲಿ, ಅಂತಃಕರಣವಾಗಲಿ ಕಾಣಲು ಆಗುವುದಿಲ್ಲ. ಬಡತನದ ವ್ಯಕ್ತಿಯನ್ನು ಕಾಣುತ್ತಲೆ ಅವರು ಠೇಂಕರಸಿಬಲ್ಲರು. ಮದದ ಭಾಷೆಯನ್ನು ಬಳಸಿ ಅವರು ಜರಿಯಬಲ್ಲರು.

ಎಲೆ ಎಲೆ ಮಾನವಾ ಅಳಿಯಾಸೆ ಬೇಡವೋ
ಕಾಳ ಬೆಳದಿಂಗಳು ಸಿರಿ ಸ್ಥಿರಬಲ್ಲ
ಕೇಡಿಲ್ಲದ ಪದವಿ ಕೂಡಲಸಂಗಮದೇವಯ್ಯನ
ಮರೆಯದೆ ಪೂಜಿಸು

ಶ್ರೀಮಂತಿಕೆ, ಅಧಿಕಾರ, ಅಂತಸ್ತು ಎನ್ನುವುದು ಯಾರಿಗೂ ಶಾಶ್ವತವಲ್ಲ. ಅದು ಕಾಳ ಬೆಳದಿಂಗಳ ಸ್ಥಿತಿಯಂತೆ. ಸಮಯ ಸರಿಯುತ್ತ ಸರಿಯುತ್ತ ಬೆಳದಿಂಗಳು ಚಲಿಸುತ್ತದೆ. ಶ್ರೀಮಂತಿಕೆ ಹೋಗಿ ಬಡತನ, ಬಡತನ ಹೋಗಿ ಶ್ರೀಮಂತಿಕೆ ಬಂದೆ ಬರುತ್ತದೆ. ಹಗಲು ರಾತ್ರಿ ಹೇಗೆ ಬದುಕನ್ನು ಸುತ್ತವರೆದಿವೆಯೋ ಹಾಗೆ ಬದಲಾಗುತ್ತಲೆ ಇರುತ್ತದೆ. ಈ ವಾಸ್ತವನ್ನು ಗುರುತಿಸಿದ ಬಸವಣ್ಣನವರು ಅರಸೊತ್ತಿಗೆ ಪೀಠದಲ್ಲಿ ಕುಳಿತು ಮದೋನ್ಮತ್ತನಾಗಿದ್ದ ಬಿಜ್ಜಳನಿಗೆ ಹೇಳಿ ಸತ್ಯದ ಅರಿವು ಮೂಡಿಸುತ್ತಾರೆ. ಮನದುಂಬಿ ಕೂಡಲ ಸಂಗಮದೇವನನ್ನು ಪ್ರೀತಿಸುವುದರಿಂದ ಕೇಡಿಲ್ಲದ ಪದವಿ ದೊರೆಯುತ್ತದೆ ಎಂದು ಖಚಿತ ಪಡಿಸುತ್ತಾರೆ.

ಆಶೆಯುಳ್ಳಾತನೊಬ್ಬರಾಧೀನದಲ್ಲಿಪ್ಪನು
ಆಶೆಯ ಮನದ ಕೊನೆಯನರಿದಾತ
ಕೈಲಾಸದಾಚೆಯಲ್ಲಿಪ್ಪನೆಂದಾತ
ನಮ್ಮ ಅಂಬಿಗರ ಚೌಡಯ್ಯ !

ಯಾರಿಗೆ ಹೆಚ್ಚು ಬಯಕೆಗಳಿವೆಯೋ ಸಹಜವಾಗಿ ಆತ ಅದರ ಪೂರೈಕೆಗಾಗಿ ಏನೆಲ್ಲ ಕಸರತ್ತುಗಳನ್ನು ಮಾಡತೊಡಗುತ್ತಾನೆ. ಸಿರಿ ಸಂಪತ್ತು ಪ್ರತಿಷ್ಠೆಗಳು ಸುಮ್ಮನೆ ನಾವಿದ್ದ ಕಡೆಗೆ ಹರಿದು ಬರುವವುಗಳಲ್ಲ. ಒಂದು ಕಠಿಣ ಪರಿಶ್ರಮದ ಮೂಲಕ ಹರಿದು ಬರಬೇಕು. ಇನ್ನೊಂದು ಅನಾಯಾಸವಾಗಿ ಯಾರದೋ ಊಳಿಗಕ್ಕೆ ನಿಲ್ಲುವ ಮೂಲಕ ಪಡೆಯಬೇಕು. ಯಾರಿಗೆ ತತಕ್ಷಣ ಅಧಿಕಾರ , ಅಂತಸ್ತು, ಶ್ರೀಮಂತಿ ಪಡೆಯಬೇಕೆಂದು ಬಯಸುವರೋ ಅವರು ಇನ್ನೊಬ್ಬರ ಅಧೀನದಲ್ಲಿದ್ದು ಕೆಲಸ ಮಾಡಬೇಕಾಗುತ್ತದೆ. ಅವರಿಗೆ ಸ್ವಾತಂತ್ರ್ಯ ಕನಸಿನ ಬುತ್ತಿ. ಯಾರು ಹಣ ಅಧಿಕಾರ ಅಂತಸ್ತುಗಳನ್ನು ಮೀರಿ ನಿಲ್ಲುವ ನಿಜತ್ವವನ್ನು ಹೊಂದುತ್ತಾನೋ ಆತ ಬರೀ ಕೈಲಾಸವಲ್ಲ. ಆ ಕೈಲಾಸ ಆಚೆ ಕಡೆಗೂ ಇರಬಲ್ಲ ಎನ್ನುವುದನ್ನು ಅಂಬಿಗರ ಚೌಡಯ್ಯನವರು ತಿಳಿಸುತ್ತಾರೆ.

ಆನೆಯನೇರಿಕೊಂಡು ಹೋದಿರೇ ನೀವು
ಕುದುರೆಯನೇರಿಕೊಂಡು ಹೋದಿರೇ ನೀವು
ಕುಂಕುಮ ಕಸ್ತೂರಿಯ ಹೂಸಿಕೊಂಡು
ಹೋದಿರೇ ಅಣ್ಣಾ !
ಸತ್ಯದ ನಿಲವನರಿಯದೆ ಹೋದಿರಲ್ಲಾ
ಸದ್ಗಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಸದಮದಗಜವೇರಿ ವಿಧಿಗೆ ಗುರಿಯಾಗಿ
ನೀವು ಹೋದಿರಲ್ಲಾ !
ನಮ್ಮ ಕೂಡಲಸಂಗಮದೇವನರಿಯದೆ ನರಕಕ್ಕೆ
ಭಾಜನವಾದಿರಲ್ಲಾ !

ಆನೆಗಳು ಅಂದು ಪ್ರತಿಷ್ಠೆಯ ಸಂಕೇತ. ಕುದುರೆಗಳು ಅಂದು ಶ್ರೀಮಂತಿಕೆಯ ಸಂಕೇತ. ಆನೆ ಕುದುರೆಗಳಿವೆ ಎಂದರೆ ಅಲ್ಲಿ ಅಧಿಕಾರ ಖಂಡಿತವಾಗಿ ನೆಲೆ ನಿಂತಿದೆ ಎಂದೇ ಅರ್ಥ. ಕುಂಕುಮ ಹಾಗೂ ಕಸ್ತೂರಿಗಳು ಜಯದ ಸಂಕೇತ. ಇದೆಲ್ಲ ನಿಜ. ಆದರೆ ಇವೆಲ್ಲವೂ ನೆಮ್ಮದಿಯ ಬದುಕಿಗೆ ಪೂರಕವಾದವುಗಳಲ್ಲ. ಇವು ಶಾಶ್ವತವಾಗಿ ಒಬ್ಬ ವ್ಯಕ್ತಿಯಲ್ಲಿ ನೆಲ್ಲೆ ನಿಲ್ಲುವಂಥವೂ ಅಲ್ಲ. ಬದುಕಿನ ಸತ್ಯವನ್ನು ಅರಿತುಕೊಂಡವನು ಮಾತ್ರ ಸದ್ಗುಣದ ಫಲವನ್ನು ಬಿತ್ತಿ ಬೆಳೆಯಬಲ್ಲನೆ ಹೊರತು. ಆಸೆ ಆಮಿಷಕ್ಕೆ ಒಳಗಾದವನು, ಹುಸಿ ಪ್ರತಿಷ್ಟೆಗಳನ್ನು ನಂಬಿಕೊಂಡು ವೈಭವದ ಬದುಕನ್ನು ನಡೆಸುತ್ತಿರುವವನು ಎಂದಿಗೂ ನಿಜವಾದ ಜೀವನ ಜೀವಿಸಿರುವುದಿಲ್ಲ. ಇವರೆಲ್ಲ ಸದಮದವೆಂಬ ಆನೆಯ ಏರಿ ಹೋಗುವವರು. ಸತ್ಯವನ್ನು ಅರಿಯದವರು. ಅನಾಚಾರಕ್ಕೆ ಗುರಿಯಾಗುವವರು ಎಂದು ಮೂದಲಿಸುತ್ತಾರೆ. ಅಂದರೆ ಅಂದಿನ ಬಿಜ್ಜಳ ಅರಸರ ನಡೆಯನ್ನು ಖಂಡಿಸುತ್ತ, ಅವರಿಗೂ ಅರಿವಿನ ಜ್ಞಾನವನ್ನು ನೀಡುತ್ತಾರೆ.

0 ವಿಶ್ವಾರಾಧ್ಯ ಸತ್ಯಂಪೇಟೆ

Leave a Reply

Your email address will not be published. Required fields are marked *

error: Content is protected !!