ಡೊಹರ ಕಕ್ಕಯ್ಯ ಶರಣ

ಡೊಹರ ಕಕ್ಕಯ್ಯ

ಮಾನವೀಯತೆಯ ನೆಲೆಗಟ್ಟಿನ ಮೇಲೆ, ಆಧ್ಯಾತ್ಮಿಕದ ಅಲೆಯಲ್ಲಿ, ಸಮಷ್ಟಿಯ ಸಮಭಾವದಲ್ಲಿ, ಸಾತ್ವಿಕ ಸದ್ಗುಣಗಳ ಸೆಲೆಯಲ್ಲಿ ಸೃಷ್ಠಿಯಾದ, ನವನಿರ್ಮಾಣದ ಯುಗವೇ ಶರಣರ ಯುಗ. ಅಂತಹ ಮಾನವೀಯ ಮೌಲ್ಯಗಳನ್ನು ಹೊತ್ತು ಮೆರೆಸಿದ ಮಹಾನ್ ಶರಣರಲ್ಲಿ ಡೊಹರ ಕಕ್ಕಯ್ಯನವರೂ ಒಬ್ಬರು.

ಹನ್ನೆರಡನೇ ಶತಮಾನದ ಕರ್ನಾಟಕದ ಕಲ್ಯಾಣವು ಮಾನವ ಹಿತಸಾಧನೆಯ ಕಾರ್ಯಕ್ಷೇತ್ರವಾಗಿತ್ತು. ಬಸವಾದಿ ಶರಣರು ಮನುಕುಲೋದ್ಧಾರದ ಮಹಾಮಣಿಹದಲ್ಲಿ ತೊಡಗಿದ್ದರು. ಇದರ ಕೀರ್ತಿ ಎಲ್ಲ ಕಡೆ ಹಬ್ಬಿತು. ದೇಶದ ನಾನಾ ಕಡೆಯಿಂದ ಜನರು ಕಲ್ಯಾಣ ಪಟ್ಟಣಕ್ಕೆ ಬಂದು ಸೇರಿದರು. ಕಾಶ್ಮೀರದಿಂದ ಮಹದೇವ ಭೂಪಾಲ, ಅಫಘಾನಿಸ್ತಾನದಿಂದ ಮರುಳ ಶಂಕರದೇವ. ಸೌರಾಷ್ಟ್ರದಿಂದ ಆದಯ್ಯ, ಹಾಗೇಯೆ ಮಾಳವ ದೇಶದಿಂದ ಅಂದರೆ ಈಗಿನ ಮಧ್ಯಪ್ರದೇಶದಿಂದ ಕಕ್ಕಯ್ಯನವರು ಬಂದರು.

ಕಕ್ಕಯ್ಯನವರು ಡೋಹರ ಪಂಗಡಕ್ಕೆ ಸೇರಿದವರು. ಚರ್ಮ ಹದ ಮಾಡುವುದು ಆತನ ವೃತ್ತಿ. ಆತ ಬಸವಣ್ಣ, ಅಲ್ಲಮಪ್ರಭುಗಳು, ಚೆನ್ನಬಸವಣ್ಣ, ಸಿದ್ಧರಾಮ, ಮೊದಲಾದ ಶರಣರ ಆಚಾರ ವಿಚಾರಗಳಿಂದ ಪ್ರಭಾವಿತನಾದ. ಆತ ಲಿಂಗದೀಕ್ಷೆಯನ್ನು ಹೊಂದಿ ತನ್ನ ಆಚಾರ ಸಂಪನ್ನತೆಯಿಂದ ವೀರ ಮಹೇಶ್ವರನೆಂಬ ಹೆಗ್ಗಳಿಕೆಗೆ ಪಾತ್ರನಾದನು. ಬಸವಣ್ಣನವರು ಕಕ್ಕಯ್ಯನ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದರು. ಕಲ್ಯಾಣ ಕ್ರಂತಿಯ ಸಮಯದಲ್ಲಿ ವೀರ ಗಣಾಚಾರಿಯಾಗಿ ಉಳವಿಯ ಕಡೆಗೆ ಹೊರಟ ಶರಣರ ರಕ್ಷಣೆಗೆ ನಿಂತವರು. ಬೆಳಗಾವಿ ಜಿಲ್ಲೆಯ ಕಕ್ಕೇರಿಯ ಸಮೀಪ ಬಿಜ್ಜಳನ ಸೈನಿಕರೊಂದಿಗೆ ಹೊರಾಡಿ ಶರಣರನ್ನು ಬೇರೆ ದಾರಿಯಿಂದ ಮುಂದೆ ಕಳಿಸಿ ವೀರ ಮರಣವನ್ನು ಅಪ್ಪಿದರು. ಇಂದಿಗೂ ಇವರ ಹೆಸರಿನಲ್ಲಿ ಕೆರೆ ಬಾವಿ ಮತ್ತು ಇವರ ಸಮಾಧಿ ಇದೆ. ಕಕ್ಕಯ್ಯನವರು “ಅಭಿನವ ಚೆನ್ನಮಲ್ಲಿಕಾರ್ಜುನ” ಎಂಬ ಅಂಕಿತದಲ್ಲಿ ರಚಿಸಿದ “ಆರು” ವಚನಗಳು ನಮಗೆ ಉಪಲಬ್ಧವಾಗಿವೆ.

ಅಪ್ಪನು ನಮ್ಮ ಮಾದಾರ ಚೆನ್ನಯ್ಯ
ಬಪ್ಪನು ನಮ್ಮ ಡೊಹರ ಕಕ್ಕಯ್ಯ
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ
ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ
ಎನ್ನನೇತಕ್ಕಿರಿಯಿರಿ ಕೂಡಲಸಂಗಮದೇವಾ||

ನನ್ನ
ಹೀಗೆ ಬಸವಣ್ಣನವರು ಡೊಹರ ಕಕ್ಕಯ್ಯನವರನ್ನು ತಂದೆಯ ಸ್ಥಾನದಲ್ಲಿ ಕಂಡವರು. ಬಸವಣ್ಣನವರು ಅವರ ಕುಲಸೀಮೆಗಳನ್ನು ನೋಡದೆ, ಅವರ ಭಕ್ತಿಭಾವ, ಶ್ರಧ್ದೆಗಳನ್ನು ನೋಡಿ ಗೌರವಿಸಿದವರು. ಬಸವಣ್ಣನವರ ಪ್ರೀತಿ ಸಂಪಾದಿಸಿದ ಕೆಲವೇ ಕೆಲವು ಶರಣರಲ್ಲಿ ಇವರು ಒಬ್ಬರು.

ಆಸೆಯಾಮಿಷವಳಿದು ಹುಸಿ ವಿಷಯಂಗಳೆಲ್ಲಾ ಹಿಂಗಿ,
ಸಂಶಯ ಸಂಬಂಧ ನಿಸ್ಸಂಬಂಧವಾಯಿತ್ತಯ್ಯಾ,
ಎನ್ನ ಮನದೊಳಗೆ ಘನಪರಿಣಾಮವ ಕಂಡು
ಮನ ಮಗ್ನವಾಯಿತ್ತಯ್ಯಾ,
ಅಭಿನವ ಮಲ್ಲಿಕಾರ್ಜುನಾ,
ಪ್ರಭುದೇವರ ಕರುಣದಿಂದಾನು ಬದುಕಿದೆನು”.

ಈ ವಚನದಲ್ಲಿ ಅವರ ಅಂತರಂಗದ ಪರಿಶುದ್ಧತೆಯನ್ನು, ಅವರ ಘನ ವ್ಯಕ್ತಿತ್ವವನ್ನು ಮತ್ತು ಅವರು ಪ್ರಭುದೇವರಿಂದ ಪ್ರಭಾವಿತರಾದ ಬಗ್ಗೆ ತಿಳಿಸುವ ಅದ್ಭುತ ವಚನ ಇದಾಗಿದೆ. ಅಂತರಂಗ ಶುದ್ಧಿಯಿಂದ ತಮ್ಮ ಮನದಲ್ಲಾದ ಘನಪರಿಣಾಮವನ್ನು ಅರಿತ ಶರಣರಿವರು.

ಎನಗೆ ಗುರುಸ್ಥಲವ ತೋರಿದಾತ ಸಂಗನ ಬಸವಣ್ಣನು.
ಎನಗೆ ಲಿಂಗಸ್ಥಲದ ತೋರಿದಾತ ಚನ್ನಬಸವಣ್ಣನು.
ಎನಗೆ ಜಂಗಮಸ್ಥಲವ ತೋರಿದಾತ ಸಿದ್ಧರಾಮಯ್ಯನು.
ಎನಗೆ ಪ್ರಸಾದಿಸ್ಥಲವ ತೋರಿದಾತ ಬಿಬ್ಬಬಾಚಯ್ಯನು.
ಎನಗೆ ಪ್ರಾಣಲಿಂಗಿಸ್ಥಲವ ತೋರಿದಾತ ಚಂದಯ್ಯನು.
ಎನಗೆ ಶರಣಸ್ಥಲವ ತೋರಿದಾತ ಸೊಡ್ಡಳ ಬಾಚರಸನು.
ಎನಗೆ ಐಕ್ಯಸ್ಥಲವ ತೋರಿದಾತ ಅಜಗಣ್ಣನು.
ಎನಗೆ ನಿಜಸ್ಥಲವ ತೋರಿದಾತ ಪ್ರಭುದೇವರು.
ಇಂತೀ ಸ್ಥಲಗಳ ಕಂಡು
ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು
ಬದುಕಿದೆನು ಕಾಣಾ! ಅಭಿನವ ಮಲ್ಲಿಕಾರ್ಜುನಾ”.

ಕಕ್ಕಯ್ಯನವರು ಎಲ್ಲ ಶರಣರ ಸಹಾಯದಿಂದ ಷಟ್ಥ್ಶಲ ಸಾಧಿಸಿದ ವಿವರಣೆ ಮತ್ತು ಎಳನೂರಾ ಎಪ್ಪತ್ತು ಅಮರ ಗಣಂಗಳು ಇದ್ದರು ಎಂಬುದಕ್ಕೆ ಪುಷ್ಟಿಕೊಡುವ ವಚನವಿದು. ಜೊತೆಗೆ ಶರಣರ ಮೇರು ವ್ಯಕ್ತಿತ್ವವನ್ನು ಮತ್ತು ಅವರ ಕಾರ್ಯವನ್ನು ಅರುಹುತ್ತದೆ.

“ಎನ್ನ ಕಷ್ಟ ಕುಲದಲ್ಲಿ ಹುಟ್ಟಿದೆನೆಂಬ ಕರ್ಮವ ಕಳೆದು
ಮುಟ್ಟಿ ಪಾವನವ ಮಾಡಿ
ಕೊಟ್ಟನಯ್ಯಾ ಎನ್ನ ಕರಸ್ಥಲಕ್ಕೆ ಲಿಂಗವ!
ಆ ಲಿಂಗ ಬಂದು ಸೋಂಕಲೊಡನೆ
ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ!
ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ,
ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿದ,
ಎನ್ನ ಅರುಹಿನಲ್ಲಿ ಪ್ರಸಾದವ ನೆಲೆಗೊಳಿಸಿದ!
ಇಂತೀ ತ್ರಿವಿಧ ಸ್ಥಾನವ ಶುದ್ಧವ ಮಾಡಿ
ಚತುರ್ವಿಧಸಾರಾಯಸ್ಥಲವ ಸಂಬಂಧವ ಮಾಡಿದ
ಸಂಗನ ಬಸವಣ್ಣನ ಕರುಣದಿಂದ
ಪ್ರಭುದೇವರ ಶ್ರೀಪಾದವ ಕಂಡು ಬದುಕಿದೆನು ಕಾಣಾ!
ಅಭಿನವ ಮಲ್ಲಿಕಾರ್ಜುನಾ”

ಕೆಳಸ್ಥರದಲ್ಲಿ ಹುಟ್ಟಿದ ಡೊಹರ ಕಕ್ಕಯ್ಯನವರು ಆ ನೋವಿನ ಅನುಭವವನ್ನು ಕಳೆದು, ತಮ್ಮಲ್ಲಿದ್ದ ಜಡತ್ವವನ್ನು ಲಿಂಗ ಸ್ಪರ್ಷದಿಂದ ಕಳೆದು, ಗುರು, ಜಂಗಮ, ಪ್ರಸಾದ ತತ್ವಗಳನ್ನು ಅರಿವಿನ ಅನುಸಂಧಾನದ ಅದ್ಭುತ ವಚನ. ಬಸವಣ್ಣ ಮತ್ತು ಅಲ್ಲಮ ಪ್ರಭುಗಳ ಕರುಣೆಯಿಂದ ಬದುಕಿದೆನು ಎಂಬ ಸಮರ್ಪಣಾ ಭಾವವನ್ನು ಇಲ್ಲಿ ಕಾಣುತ್ತೆವೆ.

ನೆನೆಯಲರಿಯೆ ನಿರ್ಧರಿಸಲರಿಯೆ ಮನವಿಲ್ಲವಾಗಿ.
ಭಾವಿಸಲರಿಯೆ ಬೆರಸಲರಿಯೆ ಭಾವ ನಿರ್ಭಾವವಾಯಿತ್ತಾಗಿ.
ಧ್ಯಾನ ಮೌನವನರಿಯೆ ಧ್ಯಾನಾತೀತ ತಾನೆಯಾಯಿತ್ತಾಗಿ.
ಜ್ಞಾತೃ ಜ್ಞಾನ ಜ್ಞೇಯಂಗಳೆಲ್ಲವ ಮೀರಿ
ಅಭಿನವ ಮಲ್ಲಿಕಾರ್ಜುನನಲ್ಲಿ ಪರಮ ಸುಖಿಯಾಗಿರ್ದೆ.

ಈ ವಚನದಲ್ಲಿ ಧ್ಯಾನ ಮೌನಗಳನ್ನು ಮೀರಿದ, ಜ್ಞಾತೃ (ಅರಿಯುವವನು)೨. ಜ್ಞಾನ ೩ (ಅರಿವು). ಜ್ಞೇಯ (ಅರಿಯಲ್ಪಡುವುದು) ಅರಿವನ್ನು ಮೀರಿದ ಅನುಭಾವ ಅವರಿಗಾಗಿತ್ತು. ಅವರ ನಿರ್ಭಾವ ಸ್ಥಿತಿಯನ್ನು ಅರಹುವ, ಪರಮ ಸುಖವ ಪಡೆದ ಪರಮಾನಂದದ ವಚನ ಇದಾಗಿದೆ.

ಹೀಗೆ ಬಸವಾದಿ ಶರಣರ ಕಾಲದಲ್ಲಿ ಅದ್ಭುತ ಮುತ್ತು ರತ್ನಗಳೆ ನಮಗೆ ದೊರೆಯುತ್ತವೆ. ಅವರ ಆಧ್ಯಾತ್ಮದ ಉನ್ನತ ಸ್ಥಿತಿಯನ್ನು ಅವರ ವಚನಗಳ ಮೂಲಕ ನೋಡಿದಾಗ ನಮ್ಮಲ್ಲೂ ಭಕ್ತಿ ಭಾವ ಸ್ಫೂರಿಸದೆ ಇರದು. ಇಂತಹ ಶರಣರು ನಮಗೆ ಸದಾ ದಾರಿ ದಿವಿಗೆ.

೦ ಸವಿತಾ ಮಟ್ಟೂರ ಇಳಕಲ್ಲ

4 thoughts on “ಡೊಹರ ಕಕ್ಕಯ್ಯ ಶರಣ

  1. ಶರಣರ ವಚನಗಳನ್ನು ರಕ್ಷಣೆ ಮಾಡುತ್ತಾ ಹುತಾತ್ಮ ರಾದ ಹಿರಿಯ ಶರಣರಾದ ಡೋಹರ ಕಕ್ಕಯ್ಯನವರ ಕುರಿತು ಬರೆದ ಚಂದದ ಲೇಖನ. ಅಭಿನಂದನೆಗಳು.

    1. ಕಲ್ಯಾಣ ಅದರ ಹೆಸರಿಗೆ ತಕ್ಕಂತೆ ಮಾನವ ಜನಾಂಗದ ಕಲ್ಯಾಣಕ್ಕೆ ಔಷದ ಕಂಡು ಹಿಡಿಯುವ ಪ್ರಯೋಗಾಲಯವಾಗಿತ್ತು ಮತ್ತು ಅದರಲ್ಲಿ ಯಶಸ್ಸನ್ನೂ ಕಂಡಿತು.ಹೌದು ಕಾಲಾನಂತರದಲ್ಲಿ ವಿವಿದ ಕಾರಣಗಳಿಂದ ಅದರ ಪೂರ್ಣ ಸ್ವರೂಪವನ್ನು ಅರಿಯುವಲ್ಲಿ ಪಡೆಯುವಲ್ಲಿ ನಾವುಗಳು ವಂಚಿತರಾಗಿದ್ದೇವೆ.ಆದರೆ ಒಂದು ಆಶಾಕಿರಣವೆಂದರೆ ಈಗ ಉಳಿದು ಬಂದಿರುವ ಕಿಡಿಯನ್ಪ್ರನೆ ಜ್ವಲಿಸುವಂತೆ ಗಾಳಿ ಊದಿದರೆ ಸಾಕು ಬೇಕಾಷ್ಟಾಗುತ್ತದೆ.ಆತ್ಮೀಯರುಗಳು ವಿಚಾರ ಮಾಡ ಬೇಕು.ಈಗಲೂ ಅನುಭವ ಮಂಟಪದಂತ ಛಾವಣಿಯನ್ನು ನಿರ್ಮಿಸಿ ಏಳನೂರಿಪ್ಪತ್ತು ಆರಿಸಿದ ಸದಸ್ಯರಿಂದ ಮತ್ತೆ ಪ್ರಯೋಗವನ್ನು ಶುರು ಮಾಡಬಾರದೇಕೆ?.ದ್ವಾರ ಪಾಲಕನಾಗಲು ನಾನು ಸಿದ್ದನಿದ್ದೇನೆ.ಇತಿ ಶರಣು ಶರಣಾರ್ಥಿ.

      1. ಡೊಹರ ಕಕ್ಕಯ್ಯನವರು ಬೆಳಗಾಂವ ಜಿಲ್ಲಾ ಕಕ್ಕೆರಿಯಲ್ಲಿ ಸಮಾಧಿ ಇದೆ ಅನ್ನೊದು ಸರಿ ಆದರೆ ಯಾತಗಿರಿ ಜಿಲ್ಲಾ ಸುರಪುರ ತಾಲೂಕಿನ ಕಕ್ಕೇರಿಯಲ್ಲಿ ಇವರ ಒಂದು ಗುಡಿ&ಬಾವಿ ಇದೆ ಸರ್ … ಇದರ ವಿವರಣೆ ಇಲ್ವಲ್ಲಾ ಸರ್

  2. ಮತ್ತೊಮ್ಮೆ ಅನುಭವ ಮಂಟಪ ರಚನೆಯಾಗ ಬೇಕು,

Leave a Reply

Your email address will not be published. Required fields are marked *

error: Content is protected !!